ರೈಲು ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕರೂ ವಲಸೆ ಕಾರ್ಮಿಕರ ಸಾವಿಗೆ ಕಡಿವಾಣ ಬೀಳಲಿಲ್ಲ ಯಾಕೆ..?
ರಾಷ್ಟ್ರೀಯ

ರೈಲು ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕರೂ ವಲಸೆ ಕಾರ್ಮಿಕರ ಸಾವಿಗೆ ಕಡಿವಾಣ ಬೀಳಲಿಲ್ಲ ಯಾಕೆ..?

ಕೇಂದ್ರ ಸರಕಾರ ವಲಸೆ ಕಾರ್ಮಿಕರ ಬವಣೆ ತಪ್ಪಿಸುವ ಸಲುವಾಗಿ ಮತ್ತು ತವರು ರಾಜ್ಯಕ್ಕೆ ಸುರಕ್ಷಿತವಾಗಿ ತಲುಪುವಂತಾಗಲು ವಿಶೇಷ ʼಶ್ರಮಿಕ್‌ʼ ರೈಲಿನ ವ್ಯವಸ್ಥೆಯನ್ನ ಮಾಡಿದೆ. ಆದರೆ ಊರಿಗೆ ತೆರಳಬೇಕಿದ್ದ ವಲಸೆ ಕಾರ್ಮಿಕರು ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಉತ್ತರ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ 1500 ಕಿಲೋ ಮೀಟರ್‌ ಕ್ರಮಿಸಿ ತೆರಳಿದ್ದ ಕಾರ್ಮಿಕನೊಬ್ಬ ಊರು ಸೇರುತ್ತಲೇ ಸಾವೀಗೀಡಾಗಿದ್ದಾರೆ. 

ಕೃಷ್ಣಮಣಿ

ಕರೋನಾ ಸಂಕಷ್ಟದಲ್ಲಿ ಸಿಲುಕಿ ಬಳಲಿ ಬೆಂಡಾಗಿದ್ದು, ಕಾರ್ಮಿಕ ವರ್ಗ ಎಂಬುದರಲ್ಲಿ ಎರಡು ಮಾತಿಲ್ಲ. ಜೀವನ ಕಟ್ಟಿಕೊಳ್ಳುವ ಹುಮ್ಮಸ್ಸಿನಿಂದ ಸಾವಿರಾರು ಕಿಲೋ ಮೀಟರ್‌ ದೂರದ ಪಟ್ಟಣ ಸೇರಿದ್ದ ಅದೆಷ್ಟೋ ಬಡ ಜೀವಗಳು ಕರೋನಾ ಲಾಕ್‌ಡೌನ್‌ ವೇಳೆ ಕಣ್ಣೀರು ಸುರಿಸಿವೆ. ತಿನ್ನಲು ಅನ್ನವಿಲ್ಲದೆ ಪರಿತಪಿಸಿವೆ. ಕೆಲಸದ ಭರವಸೆಯಲ್ಲಿ ಕರೆದುಕೊಂಡು ಹಳ್ಳಿಗಳಿಂದ ಕರೆದುಕೊಂಡು ಬಂದಿದ್ದ ಗುತ್ತಿಗೆದಾರ ಬಿಟ್ಟು ಓಡಿಹೋದ ಬಳಿಕ ಜೀವನ ಮಾಡುವುದು ಸಾಧ್ಯವಾಗದೆ, ಹೆತ್ತ ಕಂದಮ್ಮಗಳ ಹಸಿವಿನ ಬಾಧೆ ತೀರಿಸಲಾಗದೆ ಒದ್ದಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಮಾತ್ರ ಮಾತಿನಲ್ಲೇ ಕೋಟಿಯ ಕೋಟೆ ಕಟ್ಟುವ ಮೂಲಕ ಜನರನ್ನು ಮೋಸಗೊಳಿಸುವುದನ್ನು ಕರಗತ ಮಾಡಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರಿಗಾಗಿ ಎಂದು ಶ್ರಮಿಕ್‌ ರೈಲನ್ನೇ ಬಿಟ್ಟಿದ್ದಾರೆ. ದೇಶದ ಅಭಿವೃದ್ಧಿಗಾಗಿ ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿ ಕೋವಿಡ್‌ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಆದರೆ ದೇಶದ ಜನರು ಕೋವಿಡ್‌-19 ಗೂ ಮೊದಲೇ ಬೇರೆ ಬೇರೆ ಕಾರಣಗಳಿಗಾಗಿ ಬಲಿಯಾಗುತ್ತಿರುವುದನ್ನು ತಡೆಯಲು ಸಾಧ್ಯವಾಗ್ತಿಲ್ಲ ಎನ್ನುವುದೇ ದುರಂತದ ವಿಚಾರ.

ಮಹಾರಾಷ್ಟ್ರ ಎಂಬ ಮಹಾನಗರಿಯಲ್ಲಿ ಕೋಟ್ಯಂತರ ಜನರು ತುಂಬಿತುಳುಕುತ್ತಿದ್ದಾರೆ. ಅಲ್ಲಿನ ಜನವ್ಯವಸ್ಥೆ ಆ ಪರಿಸರಕ್ಕೆ ಒಗ್ಗಿಕೊಂಡಿದೆ. ಹೊಟ್ಟೆಗೆ ಊಟ, ಮಲಗೋಕೆ ಜಾಗ, ತಿಂಗಳಿಗೊಮ್ಮೆ ಸಂಬಳ ಸಿಕ್ಕೇ ಸಿಗುತ್ತದೆ ಎನ್ನುವ ದೇಶದ ನಗರಗಳಲ್ಲಿ ಮುಂಬೈ ಮಹಾನಗರಕ್ಕೆ ಮೊದಲ ಸ್ಥಾನ. ಹಾಗಾಗಿ ದೇಶದ ಮೂಲೇ ಮೂಲೆಯಿಂದಲೂ ಜನರು ಮುಂಬೈ ಪಟ್ಟಣದಲ್ಲಿ ಜೀವನ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಕನಿಷ್ಠ ಜೀವನ ನಡೆಸಿದರೂ ಗರಿಷ್ಠ ಆದಾಯ ಎಂಬುದೇ ಮುಂಬೈ ನಗರಕ್ಕೆ ಜನರು ಲಗ್ಗೆ ಇಡುವುದಕ್ಕೆ ಪ್ರಮುಖ ಕಾರಣ. ಇದೀಗ ಅದೇ ಮುಂಬೈ ಯಾರೀಗೂ ಬೇಡವಾದ ಕರೋನಾ ಸೋಂಕಿನ ಸ್ವರ್ಗ ಎಂದರೆ ತಪ್ಪಲ್ಲ. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ. ದಿನನಿತ್ಯ ನೂರಾರು ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಸೋಂಕಿನ ಅಂಕಿಸಂಖ್ಯೆಯಂತೂ ಊಹೆಗೂ ನಿಲುಕದೆ ಮುನ್ನುಗ್ಗುತ್ತಿದೆ. ಇದೀಗ ವಲಸೆ ಹೋಗಿ ಜೀವನ ರೂಪಿಸಿಕೊಂಡ ಲಕ್ಷಾಂತರ ಜನರು ಹುಟ್ಟೂರುಗಳತ್ತ ಹೊರಡುತ್ತಿದ್ದಾರೆ, ಹೊರಡಲು ಸಿದ್ಧರಾಗ್ತಿದ್ದಾರೆ. ಹಾಗಾಗಿ ದುರಂತಗಳು ಸಂಭವಿಸುತ್ತಲೇ ಇವೆ.

ಬಲಸೆ ಕಾರ್ಮಿಕರು ಲಾಕ್‌ಡೌನ್‌ ವೇಳೆಯಲ್ಲಿ ವಿನಾಯ್ತಿ ಸಿಕ್ಕರೂ ಸಾಯುತ್ತಲೇ ಇದ್ದಾರೆ. ಮುಂಬೈನಿಂದ ಉತ್ತರಪ್ರದೇಶಕ್ಕೆ 1500 ಕಿಲೋ ಮೀಟರ್‌ ದೂರು ಕಾಲ್ನಡಿಗೆಯಲ್ಲಿ ತೆರಳಿದ ವ್ಯಕ್ತಿಯೊಬ್ಬರು ಸ್ಮಶಾಣ ಸೇರಿದ್ದಾರೆ. 1500 ಕಿಲೋ ಮೀಟರ್‌ ಕ್ರಮಿಸಿ ಮನೆ ತಲುಪಿದ ಬಳಿಕ ನಿತ್ರಾಣಗೊಂಡು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 65 ವರ್ಷದ ನತದೃಷ್ಟ ವಯೋವೃದ್ಧ ರಾಮ್‌ ಕೃಪಾಲ್‌ ಜೀವನ ಪ್ರಯಾಣ ಕಾಲ್ನಡಿಗೆಯಲ್ಲಿ ಕೊನೆಯಾಗಿದೆ. ಖಲಿಲಾಬಾದ್‌ ನಿವಾಸಿಯಾಗಿದ್ದ ರಾಮ್‌ ಕೃಪಾಲ್‌, ಮುಂಬೈನಲ್ಲಿ ದಿನಗೂಲಿ ನೌಕರಾಗಿ ಕೆಲಸ ಮಾಡುತ್ತಿದ್ದ, ಸಾವು ನೋವುಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಹುಟ್ಟೂರು ಸೇರಿಕೊಳ್ಳುವ ತವಕದಲ್ಲಿ ಕಾಲ್ನಡಿಗೆಯಲ್ಲೇ ಕ್ರಮಿಸಿ ಊರು ಸೇರಿದ್ದ. ಅದಾದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದ್ರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ರಾಮ್‌ ಕೃಪಾಲ್‌ ಉಸಿರು ನಿಂತಿತ್ತು ಎಂದು ಜಿಲ್ಲಾಧಿಕಾರಿ ರವೀಶ್‌ ಕುಮಾರ್‌ ಗುಪ್ತಾ ಮಾಹಿತಿ ನೀಡಿದ್ದಾರೆ. ಇದೀಗ ಕೋವಿಡ್‌ 19 ಟೆಸ್ಟ್‌ಗೆ ಗಂಟಲ ದ್ರವ ಕಳುಹಿಸಲಾಗಿದ್ದು, ಪೋಸ್ಟ್‌ ಮಾಟಂ ಕೂಡ ನಡೆಸಲಾಗಿದೆ.

ಕೇಂದ್ರ ಸರ್ಕಾರ ದೇಶದ ಒಳಗಿನ ಕಾರ್ಮಿಕರನ್ನು ಕರೆದುಕೊಂಡು ಹೋಗುವುದಕ್ಕೆ ಶ್ರಮಿಕ್‌ ರೈಲು ಆರಂಭಿಸಿದೆ. ಆದರೆ ದಿನನಿತ್ಯ ನೂರಾರು ಜನರು ಕಾಲ್ನಡಿಗೆಯಲ್ಲಿ ಸಾಗುವ ವರದಿಗಳು ಬರುತ್ತಲೇ ಇದೆ. ಅಲ್ಲಲ್ಲಿ ಜನರು ಸಾವನ್ನಪ್ಪುತ್ತಲೇ ಇದ್ದಾರೆ. ಸಾಕಷ್ಟು ದೂರ ಕ್ರಮಿಸಿದಾಗ ದೇಹದ ನೀರಿನ ಅಂಶ ಏರುಪೇರಾದರೆ ಸಾವು ಸಂಭವಿಸುತ್ತೆ ಎನ್ನುತ್ತಾರೆ ವೈದ್ಯರು. ರೈಲುಗಳ ಸಂಚಾರವೂ ಆರಂಭವಾಗಿದೆ. ಆದರೆ ಜನರು ಯಾಕೆ ಸಾವನ್ನಪ್ಪುತ್ತಿದ್ದಾರೆ ಎನ್ನುವುದು ಅರ್ಥವಾಗದ ವಿಷಯ ಎನ್ನಬಹುದು. ಆದರೆ ನಮ್ಮ ಸರ್ಕಾರ ಮಾಡಿರುವ ಕಾನೂನು ರೂಪಿಸಿರುವ ವ್ಯವಸ್ಥೆ ತಳಮಟ್ಟದ ಕಾರ್ಮಿಕನ ಕೈ ಹಿಡಿಯುವಲ್ಲಿ ವಿಫಲವಾಗಿದೆ. ನೀವು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ ಅಥವಾ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಬೇಕು ಎಂದರೆ ಆನ್‌ಲೈನ್‌ನಲ್ಲಿ ಪಾಸ್‌ ಬುಕ್‌ ಮಾಡಬೇಕು. ಶ್ರಮಿಕ್‌ ರೈಲಿನಲ್ಲಿ ತೆರಳಲು ಆನ್‌ಲೈನ್‌ನಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಬೇಕು. ಕೂಲಿ ಕಾರ್ಮಿಕರಲ್ಲಿ ಅದೆಷ್ಟು ಇಂಟರ್‌ನೆಟ್‌ ಸೇವೆ ಬಳಸುತ್ತಿದ್ದಾರೆ..? ಅದೆಷ್ಟು ಜನರು ಉತ್ತಮ ಅಂಡ್ರ್ಯಾಡ್‌ ಫೋನ್‌ ಬಳಕೆ ಮಾಡುತ್ತಿದ್ದಾರೆ ಎನ್ನುವ ಕನಿಷ್ಠ ಜ್ಞಾನ ಸರ್ಕಾರಕ್ಕೆ ಇದ್ದಂತಿಲ್ಲ.

ಆಂಡ್ರ್ಯಾಯ್ಡ್‌ ಫೋನ್‌ ಇದ್ದರೂ ಮೊಬೈಲ್‌ ಆಪ್‌ಗಳಲ್ಲಿ ಮಾಹಿತಿ ತುಂಬುವುದಿರಬಹುದು, ಅದರಲ್ಲಿ ಕೇಳುವ ಮಾಹಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೂ ಇರಬಹುದು ಸಾಮಾನ್ಯ ಕಾರ್ಮಿಕನಿಗೆ ಅರ್ಥವಾಗದ ಕಬ್ಬಿಣದ ಕಡಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ರಾಜ್ಯ ಸರ್ಕಾರಗಳು ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್‌ ಪಡೆಯಲು ಆಟೋ ಡ್ರೈವರ್‌ ಸೇರಿದಂತೆ ಲಕ್ಷಾಂತರ ಮಂದಿ ಅಲೆದಾಡುತ್ತಿದ್ದಾರೆ. ಹೇಗೆ ಪರಿಹಾರ ಪಡೆಯಬೇಕು ಎನ್ನುವುದು ಅರ್ಥವಾಗ್ತಿಲ್ಲ. ಸರ್ಕಾರ ಕೇವಲ ಯೋಜನೆಯೊಂದನ್ನು ಘೋಷಣೆ ಮಾಡಿದಾಗ ಆಗುವ ದೊಡ್ಡ ಸಮಸ್ಯೆ ಅದನ್ನು ಸಾಮಾನ್ಯ ಸಂತ್ರಸ್ತನಿಗೆ ತಲುಪಿಸುವುದು. ಇದೀಗ ಕರೋನಾ ಸಂಕಷ್ಟ ಕಾಲದಲ್ಲಿ ಅನಿವಾರ್ಯವಾಗಿ ಆನ್‌ಲೈನ್‌ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ ಎನ್ನಬಹುದು. ಆದರೆ ತಲುಪಬೇಕಾದ ಜನರನ್ನು ಸರ್ಕಾರದ ಯೋಜನೆ ತಲುಪುವುದಿಲ್ಲ ಎನ್ನುವುದೂ ಕೂಡ ಅಷ್ಟೇ ಸತ್ಯ. ಇಲ್ಲದಿದ್ದರೆ ಕರ್ನಾಟಕದಲ್ಲಿ ಓರ್ವ ಮಹಿಳೆ, ಮಹಾರಾಷ್ಟ್ರದಲ್ಲಿ ಗೂಡ್ಸ್‌ ರೈಲಿಗೆ ಸಿಲುಕಿ 16 ಮಂದಿ ಬಡ ಕಾರ್ಮಿಕರು, ದೆಹಲಿಯಲ್ಲಿ ಕೂಲಿ ಕಾರ್ಮಿಕ ಕಾಲ್ನಡಿಗೆಯಲ್ಲಿ ನಡೆದು ಸಾವನ್ನಪ್ಪುವ ದುಸ್ಥಿತಿ ಬರುತ್ತಿರಲಿಲ್ಲ.

Click here Support Free Press and Independent Journalism

Pratidhvani
www.pratidhvani.com