ಉಳ್ಳವರ ‘ವಂದೇ ಭಾರತ್’ ವರ್ಸಸ್ ನತದೃಷ್ಟರ ಅಸಲೀ ಭಾರತದ ಗೋಳು!
ರಾಷ್ಟ್ರೀಯ

ಉಳ್ಳವರ ‘ವಂದೇ ಭಾರತ್’ ವರ್ಸಸ್ ನತದೃಷ್ಟರ ಅಸಲೀ ಭಾರತದ ಗೋಳು!

ಒಂದು ಕಡೆ ‘ವಂದೇ ಭಾರತ್’ ಹೆಸರಿನಲ್ಲಿ ವಿದೇಶಕ್ಕೆ ಹೋದವರನ್ನು ಕರೆತರಲು ಸರ್ಕಾರ ಧಾವಂತ ತೋರುತ್ತಿದ್ದರೆ, ಮತ್ತೊಂದು ಕಡೆ ದೇಶದ ಬೀದಿಗಳಲ್ಲಿ ಹಸಿದ ಹೊಟ್ಟೆಯಲ್ಲಿ, ನಿತ್ರಾಣ ಕಾಲುಗಳನ್ನು ಬೀಸುತ್ತಾ ವಲಸೆ ಕಾರ್ಮಿಕರು ಹೆದ್ದಾರಿಗಳಿಗೆ ತಮ್ಮ ರಕ್ತ ಸಮರ್ಪಿಸುತ್ತಾ ಸಾಗುತ್ತಿದ್ದರು. ಆ ನತದೃಷ್ಟರ ಪಾಲಿಗೆ ಯಾವ ಸರ್ಕಾರವೂ ಬರಲೇ ಇಲ್ಲ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಒಂದು ಕಡೆ ದೇಶ ತೊರೆದು ಹೋಗಿದ್ದ ಭಾರತೀಯರನ್ನು ವಾಪಸು ಕರೆ ತರಲು ಐತಿಹಾಸಿಕ ಏರ್ ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಬಿರುಸುಗೊಂಡಿದ್ದರೆ, ಮತ್ತೊಂದು ಕಡೆ ದೇಶ ಕಟ್ಟಲು ದುಡಿದ ಕಾರ್ಮಿಕರು ನೂರಾರು ಕಿ.ಮೀ ದಾರಿಯನ್ನು ಬರಿಗಾಲಲ್ಲಿ ಸವೆಸುತ್ತಿದ್ದಾರೆ. ಒಂದು ಕಡೆ ಸ್ವಾವಲಂಬಿ ಭಾರತ್ ಅಭಿಯಾನಕ್ಕಾಗಿ 20 ಲಕ್ಷ ಕೋಟಿ ಪ್ಯಾಕೇಜ್ ಘೊಷಣೆಯಾಗಿದ್ದರೆ, ಮತ್ತೊಂದು ಕಡೆ ಮಹಲುಗಳಿಗೆ ಇಟ್ಟಿಗೆ ಹೊತ್ತವರು ಹೆದ್ದಾರಿಯ ಹೆಣಗಳಾಗಿ ಅಂತ್ಯಕಾಣುತ್ತಿದ್ದಾರೆ.

ಇದು ಸದ್ಯದ ವಿಶ್ವಗುರು ಭಾರತದ ಚಿತ್ರಣ. ಆಳುವ ಮಂದಿಯ ಕಾಳಜಿ ಮತ್ತು ನಿಷ್ಕಾಳಜಿಯ, ಆದರ ಮತ್ತು ಅವಜ್ಞೆಯ ಸ್ಪಷ್ಟತೆ ನೀಡುವ ಪ್ರಸ್ತುತತೆ. ಅಂತಿಮವಾಗಿ ಸರ್ಕಾರ ಯಾರಿಗಾಗಿ ಕೆಲಸ ಮಾಡುತ್ತಿದೆ. ಯಾರ ಹಿತ ಕಾಯುತ್ತಿದೆ ಮತ್ತು ಬಡವರು, ದುರ್ಬಲರ ಬಗ್ಗೆ ಸರ್ಕಾರದ ಆದ್ಯತೆ ಎಷ್ಟಿದೆ ಎಂಬುದಕ್ಕೆ ‘ವಂದೇ ಭಾರತ್’ ಮತ್ತು ‘ಸ್ವಾವಲಂಬಿ ಭಾರತ್’ ಗಳೆರಡೂ ಕೈಗನ್ನಡಿ. ಆ ಎರಡೂ ‘ಭಾರತ’ದಲ್ಲೂ ವಲಸೆ ಕಾರ್ಮಿಕರಿಗೆ, ವಸತಿ-ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದವರಿಗೆ ಸ್ಥಾನವಿಲ್ಲ.

ಇಂತಹ ಕರಾಳ, ಕಟು ವಾಸ್ತವದ ನಡುವೆಯೇ ವಲಸೆ ಕಾರ್ಮಿಕರ ಅಮಾನುಷ ಸಾವುಗಳು, ಸಂಕಷ್ಟಗಳು ಮುಂದುವರಿದಿವೆ. ಕಳೆದ ವಾರ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದು ನಡೆದು ಸುಸ್ತಾಗಿ ರೈಲು ಹಳಿಗಳ ಮೇಲೆ ಕೂತಲ್ಲೇ ನಿದ್ದೆಗೆ ಜಾರಿದ್ದ 16 ಮಂದಿ ವಲಸೆ ಕಾರ್ಮಿಕರ ಮೇಲೆ ರೈಲು ಹಾದು ಬರ್ಬರವಾಗಿ ಸಾವು ಕಂಡ ಬೆನ್ನಲ್ಲೇ, ಇದೀಗ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 14 ಮಂದಿ ವಲಸೆ ಕಾರ್ಮಿಕರು ಸಾವು ಕಂಡಿದ್ದಾರೆ.

ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಗುರುವಾರ ಬೆಳಗಿನ ಜಾವ ನಡೆದ ಘಟನೆಯಲ್ಲಿ ಬಸ್ ಹಾಯ್ದು 6 ಮಂದಿ ವಲಸೆ ಕಾರ್ಮಿಕರು ಸಾವುಕಂಡಿದ್ದಾರೆ. ಬಿಹಾರ ಮೂಲದ ಅವರೆಲ್ಲರೂ ಪಂಜಾಬಿನಿಂದ ಕಾಲುನಡಿಗೆಯಲ್ಲಿ ತಮ್ಮ ಮೂಲ ನೆಲೆಗಳತ್ತ ಹೊರಟಿದ್ದರು. ಮತ್ತೊಂದು ಘಟನೆಯಲ್ಲಿ, ಮಧ್ಯಪ್ರದೇಶದ ಗುನಾ ಬಳಿ ಲಾರಿ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 8 ಮಂದಿ ವಲಸೆ ಕಾರ್ಮಿಕರು ಸಾವು ಕಂಡಿದ್ದು, 50-60 ಮಂದಿ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ಕಾರ್ಮಿಕರೆಲ್ಲ ಬಹುತೇಕ ಉತ್ತರಪ್ರದೇಶದ ಉನ್ನಾವ್ ಮೂಲದವರಾಗಿದ್ದು, ಲಾರಿಯಲ್ಲಿ ತಮ್ಮ ಊರಿಗೆ ವಾಪಸು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮಾರ್ಚ್ 24ರಂದು ದಿಢೀರ್ ಲಾಕ್ ಡೌನ್ ಘೋಷಣೆಯ ಬಳಿಕ ಉದ್ಯೋಗ ಮತ್ತು ನೆಲೆ ಎರಡನ್ನೂ ಕಳೆದುಕೊಂಡ ಕಾರ್ಮಿಕರು, ತಮ್ಮ ತಮ್ಮ ಮೂಲ ನೆಲೆಗಳತ್ತ ಮುಖಮಾಡಿದ್ದರು. ಆದರೆ, ಕೆಳಸ್ತರರ ಬದುಕಿನ ಬಗ್ಗೆ, ಬಡವರು, ಕೂಲಿಕಾರರು, ದಿನಗೂಲಿಗಳ ಬದುಕಿನ ಬಗ್ಗೆ ಅರಿವಿಲ್ಲದ ತೀರ್ಮಾನದಿಂದಾಗಿ ಈ ಸಮುದಾಯ ದಿಢೀರ್ ಅತಂತ್ರಗೊಂಡಿತ್ತು. ದುಡಿಮೆ ಇಲ್ಲದೆ, ವಾಸಕ್ಕೆ ನೆಲೆಯೂ ಇಲ್ಲದೆ ಇದ್ದಲ್ಲಿ ಇರಲಾಗದ ಅವರು, ತಮ್ಮ ದೂರದ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಕೂಡ ಇರಲಿಲ್ಲ. ಹಾಗಾಗಿ ಅಕ್ಷರಶಃ ಅವರು ಬೀದಿಪಾಲಾಗಿದ್ದರು. ಆದರೆ ಹಸಿವು ಮತ್ತು ಸೋಂಕಿನ ಭೀತಿ ಅವರನ್ನು ಕಾಲ್ನಡಿಗೆಯಲ್ಲೇ ಮೂಲ ನೆಲೆಗಳತ್ತ ಮುಖಮಾಡುವಂತೆ ಮಾಡಿದ್ದವು. ಹಾಗಾಗಿ 50 ದಿನಗಳಲ್ಲಿ ದೇಶಾದ್ಯಂತ ಸುಮಾರು 400 ಮಂದಿ ಕಾರ್ಮಿಕರು ಅಪಘಾತ, ಹಸಿವು, ದಾಳಿ, ಹಲ್ಲೆ, ವೈದ್ಯಕೀಯ ನೆರವು ಸಿಗದೆ ಸಾವು ಕಂಡಿದ್ದಾರೆ. ಈ ಎಲ್ಲವೂ ಕರೋನಾ ಹೊರತುಪಡಿಸಿದ ಸಾವುಗಳು ಎಂಬುದು ಸರ್ಕಾರವೇ ನೇರ ಹೊಣೆ ಎಂಬುದನ್ನು ಹೇಳುತ್ತಿದೆ.

ಆದರೆ, 40 ದಿನಗಳ ಲಾಕ್ ಡೌನ್ ಭಾಗಶಃ ತೆರವು ಬಳಿಕವೂ ಈ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿಕೊಡದ ಸರ್ಕಾರಗಳು ಕರ್ನಾಟಕದಲ್ಲಿ ಮಾಡಿದಂತೆ, ಅವರಿಗೆ ಸಾರಿಗೆ ಸೌಲಭ್ಯ ನಿರಾಕರಿಸಿ ಕೂಡಿ ಹಾಕುವ ಯತ್ನ ಮಾಡಿದವು, ಇಲ್ಲವೇ ಇತರೆ ಕೆಲವು ರಾಜ್ಯಗಳಲ್ಲಿ ಮಾಡಿದಂತೆ ದುಪ್ಪಟ್ಟು ಪ್ರಯಾಣ ದರ ವಸೂಲಿ ಹಸಿವು ಮತ್ತು ಹಣವಿಲ್ಲದೆ ಜೀವ ಬಿಡುತ್ತಿರುವವರನ್ನು ಸುಲಿಗೆ ಮಾಡಿದವು. ಬರಿಗೈಯಲ್ಲಿ ಹೊತ್ತಿನ ಊಟವೂ ಇರದೆ ಬರಿ ನೀರು ಕುಡಿದು ದಿನಗಟ್ಟಲೆ ಬರಿಗಾಲಿನಲ್ಲಿ ಹಾದಿ ಸವೆಸುತ್ತಿದ್ದ ಕಡುಬಡವರಿಂದ ದುಪ್ಪಟ್ಟು ಪ್ರಯಾಣ ವೆಚ್ಚ ವಸೂಲಿ ಮಾಡಿ ದಂಧೆಗಿಳಿದ ಸರ್ಕಾರಗಳು, ಇಡೀ ಜಗತ್ತಿನಲ್ಲೇ ಹಿಂದೆಂದು ಕಂಡುಕೇಳರಿಯದ ಮಟ್ಟಿನ ಅಮಾನುಷ ಕ್ರೌರ್ಯ ಮೆರೆದವು. ಸರ್ಕಾರದ ಇಂತಹ ಕೌರ್ಯದ ಫಲವಾಗಿಯೇ ಔರಂಗಾಬಾದ್, ಗುನಾ, ಮುಜಫರ್ ನಗರಗಳಲ್ಲಿ ಸಾಲುಸಾಲಾಗಿ ಬಡವರ ರಕ್ತ ಹರಿಯಿತು. ರೈಲು ಕಂಬಿಗಳು, ಹೆದ್ದಾರಿಯ ಟಾರುಗಳು ನೆತ್ತರಿನಲ್ಲಿ ತೋಯ್ದುಹೋದವು.

ಆದಾಗ್ಯೂ ಕನಿಷ್ಟ ಉಚಿತವಾಗಿ ಕಾರ್ಮಿಕರನ್ನು ಅವರ ನೆಲೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರಗಳಾಗಲೀ, ನಾನು ಭಾರತೀಯರ ಚೌಕಿದಾರ ಎಂದು ಹೇಳಿ ಮತಪಡೆದು ಗೆದ್ದ ಪ್ರಧಾನಿ ಮೋದಿಯವರಾಗಲೀ ಕನಿಷ್ಟ ಯೋಚನೆಯನ್ನು ಕೂಡ ಮಾಡಲಿಲ್ಲ. ಇಡೀ ದೇಶದಲ್ಲಿ ಯಾವುಯಾವುದಕ್ಕೋ ಕಾರ್ಯಪಡೆಗಳನ್ನು, ಸಲಹಾ ಸಮಿತಿಗಳನ್ನು ರಚಿಸುವ ಸರ್ಕಾರಗಳು, ಈ ವಿಷಯದಲ್ಲಿ ಕನಿಷ್ಟ ರಾಜ್ಯಕ್ಕೊಂದು ಕಾರ್ಯಪಡೆ ರಚಿಸಿ ವಲಸೆ ಕಾರ್ಮಿಕರ ಸಂಕಷ್ಟ ಪರಿಹಾರಕ್ಕೆ ಮನಸ್ಸು ಮಾಡಲಿಲ್ಲ. ಬದಲಾಗಿ ತಮಗೆ ರೈಲು ಮತ್ತು ಬಸ್ ವ್ಯವಸ್ಥೆ ಮಾಡಿ(ಸ್ವತಃ ದುಡ್ಡು ಕೊಟ್ಟು ಹೋಗುವುದಾಗಿ) ಎಂದು ಬೀದಿಗಳಿದ ಕಾರ್ಮಿಕರ ಮೇಲೆ ಪೊಲೀಸ್ ಬಲ ಪ್ರಯೋಗಿಸಿ ಬಗ್ಗುಬಡಿಯಲಾಯಿತು.

ಆಡುವಾಗ ಕ್ರಿಕೆಟಿಗನೊಬ್ಬನ ಕೈಗೆ ತರಚಿದ ಗಾಯವಾದದ್ದಕ್ಕೂ ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ ಐತಿಹಾಸಿಕ ಮಾನವೀಯ ಸ್ಪಂದನೆಯ ದಾಖಲೆ ಹೊಂದಿರುವ ಪ್ರಧಾನಿ ಮೋದಿಯವರಿಗೆ ಹೀಗೆ ದೇಶದ ಬಡವರು, ನಿರ್ಗತಿಕರು, ಕೂಲಿಕಾರರು ಹಾದಿಬೀದಿ ಶವವಾಗುತ್ತಿದ್ದರೂ ಸೌಜನ್ಯಕ್ಕೂ ಒಂದು ಸಂತಾಪದ ಮಾತು ಹೊರಡಲಿಲ್ಲ. ಈಗಲೂ ಇದೇ ಕಾರ್ಮಿಕರನ್ನು ಜೀತಕ್ಕಿಟ್ಟುಕೊಳ್ಳುವ ಹುನ್ನಾರದಲ್ಲಿ ಸರಣಿಯಂತೆ ವಿವಿಧ ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದು ಕಾರ್ಮಿಕ ಹಿತ ಕಾಯುವ ಕಾನೂನುಗಳನ್ನು ರದ್ದು ಮಾಡುತ್ತಿದ್ದರೂ ದೇಶದ ಪ್ರಧಾನಿಯಾಗಲೀ, ಕೇಂದ್ರದ ಸಂಬಂಧಪಟ್ಟ ಸಚಿವರಾಗಲೀ ಆ ಬಗ್ಗೆ ಮಾತನಾಡುತ್ತಿಲ್ಲ. ಜಾಣಕುರುಡು ವರಸೆಯ ಮೂಲಕ ಪರೋಕ್ಷವಾಗಿ ಅಸಾಯಕರ ರಕ್ತ ಹೀರುವ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತಿದ್ದಾರೆ.

ಈ ನಡುವೆ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟಿನ ಮುಂದೆ ಕೇಂದ್ರ ಸರ್ಕಾರ, ದೇಶದ ಉದ್ದಗಲಕ್ಕೆ ಯಾವ ಕಾರ್ಮಿಕರೂ ಬೀದಿಪಾಲಾಗಿಲ್ಲ. ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಎಲ್ಲರಿಗೂ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂಬ ಹಸೀ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿತು!

ಈ ನಡುವೆ, ವಿದೇಶಗಳಿಗೆ ದುಡಿಯಲು, ವಿದ್ಯಾಭ್ಯಾಸಕ್ಕೆ, ಪ್ರವಾಸಕ್ಕೆ, ಮೋಜುಮಸ್ತಿಗೆ ಹೋದವರನ್ನು ಕರೆಸಿಕೊಳ್ಳಲು ಸರ್ಕಾರ ಎಷ್ಟು ಕಾಳಜಿ ತೋರಿತೆಂದರೆ, ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ಅದಕ್ಕಾಗಿಯೇ ವಿಶೇಷ ಕಾರ್ಯಪಡೆ ರಚಿಸಿ ಜಗತ್ತಿನ ಮೂಲೆಮೂಲೆಯಲ್ಲಿರುವ ಬೇರೆ ಬೇರೆ ದೇಶಗಳ ಸರ್ಕಾರಗಳೊಂದಿಗೆ, ಅಲ್ಲಿನ ಧೂತವಾಸಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಯಾ ದೇಶದಲ್ಲಿ ಸಿಲುಕಿರುವವರ ಮಾಹಿತಿ ಪಡೆದು ಅವರಿಗೆ ಕರೆತರಲು ಜಗತ್ತಿನಲ್ಲಿಯೇ ಅತಿದೊಡ್ಡ ಸ್ಥಳಾಂತರ ಕಾರ್ಯಾಚರಣೆಗೆ ಚಾಲನೆ ನೀಡಿತು. ಆ ಕಾರ್ಯಾಚರಣೆಗೆ ವಂದೇ ಭಾರತ್ ಎಂಬ ಆಕರ್ಶಕ ಹೆಸರನ್ನೂ ಇಟ್ಟಿದ್ದಲ್ಲದೆ, ಆ ಕಾರ್ಯಾಚರಣೆಯ ಮೊದಲ ವಿಮಾನದಲ್ಲಿ ಭಾರತಕ್ಕೆ ಬಂದಿಳಿದವರಿಗೆ ಅಭೂತಪೂರ್ವ ಸ್ವಾಗತ ಕೋರಿ ಸಂಭ್ರಮಿಸಲಾಯಿತು.

ಅದೇ ಹೊತ್ತಿಗೆ ದೇಶದ ಬೀದಿಗಳಲ್ಲಿ ಹಸಿದ ಹೊಟ್ಟೆಯಲ್ಲಿ, ನಿತ್ರಾಣ ಕಾಲುಗಳನ್ನು ಬೀಸುತ್ತಾ ವಲಸೆ ಕಾರ್ಮಿಕರು ಹೆದ್ದಾರಿಗಳಿಗೆ ತಮ್ಮ ರಕ್ತ ಸಮರ್ಪಿಸುತ್ತಾ ಸಾಗುತ್ತಿದ್ದರು. ಯಾವ ಅಧಿಕಾರಸ್ಥರ ಎದೆಯಲ್ಲೂ ಅವರ ಸಂಕಟದ ಬಗ್ಗೆ ಹನಿ ಕನಿಕರವೂ ಹನಿಯಲ್ಲಿಲ್ಲ. ಸಂವಿಧಾನಬದ್ಧ ಬದುಕುವ ಹಕ್ಕು, ಉದ್ಯೊಗದ ಹಕ್ಕುಗಳು ಅವರ ಪಾಲಿಗೆ ಕೇವಲ ಘೋಷಣೆಯಾಗಿ ಉಳಿದುಹೋದವು. ವಾಸ್ತವವಾಗಿ ಈ ಜನರ ಪಾಲಿಗೆ ವರವಾಗಿ ಬರಬೇಕಿದ್ದ ವಂದೇ ಭಾರತ್, ಇಂಡಿಯಾದ ಉಳ್ಳವರ ರಕ್ಷಣೆಗೆ ಮಾತ್ರ ಮೀಸಲಾಯಿತು. ಅಸಲೀ ಭಾರತದ ನತದೃಷ್ಟರ ಪಾಲಿಗೆ ಪೊಲೀಸರ ಲಾಠಿ ಏಟುಗಳೇ ಸರ್ಕಾರದ ಆಶೀರ್ವಾದವಾದವು.

Click here Support Free Press and Independent Journalism

Pratidhvani
www.pratidhvani.com