ಕೋವಿಡ್-19 ಲಸಿಕೆಯಿಂದ ವೈರಸ್‌ನ ಸಂಪೂರ್ಣ ನಿರ್ಮೂಲನೆ ಕಷ್ಟಸಾಧ್ಯ
ರಾಷ್ಟ್ರೀಯ

ಕೋವಿಡ್-19 ಲಸಿಕೆಯಿಂದ ವೈರಸ್‌ನ ಸಂಪೂರ್ಣ ನಿರ್ಮೂಲನೆ ಕಷ್ಟಸಾಧ್ಯ

ಕರೋನಾ ಸೋಂಕು ಬೇರೆ ಸೋಂಕಿನ ರೀತಿ ಮೆರೆದು ಮರೆಯಾಗುವುದಿಲ್ಲ. ಈ ಸಾಂಕ್ರಾಮಿಕ ವೈರಾಣು ನಮ್ಮ ಜೊತೆಗೆ ಮುಂದುವರಿಯಲಿದೆ. ಈ ವೈರಸ್ ಕೂಡ ಹೆಚ್ಐವಿ ವೈರಸ್ ರೀತಿ ನಮ್ಮ ಜೊತೆಗೆ ಸಾಗಲಿದೆ ಎಂದು WHO ಸಂದೇಶ ನೀಡಿದೆ.

ಕೃಷ್ಣಮಣಿ

ಕರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಮೇ 14-05-2020ರ ಬೆಳಗ್ಗೆ ತನಕ ಪ್ರಪಂಚದಲ್ಲಿ 44,29,744 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 2,98,174 ಜನರನ್ನು ಕರೋನಾ ಸೋಂಕನ್ನು ಎದುರಿಸಲಾಗದೆ ಸಾವನ್ನಪ್ಪಿದ್ದಾರೆ. ಆದರೆ 16,59,791 ಜನರು ಕರೋನಾ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದರೂ ಇನ್ನೂ ಕೂಡ ಸಂಪೂರ್ಣವಾಗಿ ಈ ಹಿಂದಿನ ರೀತಿ ಕಾರ್ಯಚಟುವಟಿಯಲ್ಲಿ ಭಾಗಿಯಾದ ವರದಿಗಳು ಬಂದಿಲ್ಲ. ಇನ್ನೊಂದು ಸಂಕಷ್ಟದ ವಿಚಾರದ ಎಂದರೆ ಕರೋನಾ ಸೋಂಕು ಮತ್ತೆ ಮತ್ತೆ ಉಲ್ಬಣ ಆಗುತ್ತಿದೆ. ಅದೇ ರೀತಿ ಭಾರತದಲ್ಲೂ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಜನರೂ ಹಾಗೂ ಆಡಳಿತ ನಡೆಸುತ್ತಿರುವವರು ಸೋತಿದ್ದಾಗಿದೆ. ಇಲ್ಲೀವರೆಗಿಗೆ ಲೆಕ್ಕಾಚಾರದಂತೆ ಭಾರತದಲ್ಲಿ ಸೋಂಕಿತರ ಸಂಖ್ಯೆ 78,055 ಇದ್ದು, ಸಾವಿನ ಸಂಖ್ಯೆ 2,551 ಆಗಿದೆ. ಇನ್ನೂ ಚೇತರಿಕೆ ಆಗಿ ಆಸ್ಪತ್ರೆಯಿಂದ ಬಿಡುಗಡೆ ಆದವರು 26,400 ಮಾತ್ರ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ವಿಶ್ವಕ್ಕೆ ಕಳುಹಿಸಿರುವ ಸಂದೇಶ ಜಗತ್ತಿಗೆ ಧಿಗಿಲು ಮೂಡಿಸುವಂತಿದೆ.

ಈ ಕರೋನಾ ಸೋಂಕು ಬೇರೆ ಸೋಂಕಿನ ರೀತಿ ಮೆರೆದು ಮರೆಯಾಗುವುದಿಲ್ಲ. ಈ ಸಾಂಕ್ರಾಮಿಕ ವೈರಾಣು ನಮ್ಮ ಜೊತೆಗೆ ಮುಂದುವರಿಯಲಿದೆ. ಈ ವೈರಸ್‌ ಕೂಡ ಹೆಚ್‌ಐವಿ ವೈರಸ್‌ ರೀತಿ ನಮ್ಮ ಜೊತೆಗೆ ಸಾಗಲಿದೆ. ಇದನ್ನು ಯಾವಾಗ ಅಂತ್ಯ ಮಾಡುತ್ತೇವೆ ಎನ್ನುವುದನ್ನು ಊಹೆ ಮಾಡುವುದು ಕಷ್ಟ ಸಾಧ್ಯ ಎನ್ನುವ ಮೂಲಕ ವಿಶ್ವಕ್ಕೆ ಬಹುದೊಡ್ಡ ಎಚ್ಚರಿಕೆಯನ್ನು ಕಳುಹಿಸಿದೆ ವಿಶ್ವ ಆರೋಗ್ಯ ಸಂಸ್ಥೆ. ಇಂದು ಜಿನಿವಾದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೈಕಲ್‌ ರೆಯಾನ್‌, ಈ ವೈರಾಣು ಅಂತ್ಯ ಮಾಡುತ್ತೇವೆ ಎನ್ನುವ ಊಹೆಯನ್ನು ಮಾಡಲು ಸಾಧ್ಯವಿಲ್ಲ. ಸರ್ವರ ಹಿತದೃಷ್ಠಿಯಿಂದ ವಿಶ್ವಾಸದ ಮೂಲಕ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮುಂದಿನ ಮನುಕುಲಕ್ಕೆ ಸಹಕಾರಿ ಆಗಬಹುದಾದ ಏನಾದರೂ ಸಾಧಿಸಬಹುದು ಎಂದು ನಂಬುತ್ತೇನೆ ಎಂದಿದ್ದಾರೆ. ತುಂಬಾ ದೀರ್ಘಕಾಲದ ಬಳಿಕ ನಾವು ಇದಕ್ಕೊಂಡು ಪರಿಹಾರ ಹುಡುಕಲೂಬಹುದು. ಆದರೆ ಅದಕ್ಕೆ ಭಾರೀ ಪ್ರಯತ್ನದ ಅವಶ್ಯಕತೆಯಿದೆ. ರಾಜಕೀಯ, ಆರ್ಥಿಕ, ತಾಂತ್ರಿಕ ಹಾಗೂ ಸಮುದಾಯದ ಬೆಂಬಲ ಸಿಕ್ಕರೆ, ಮುಂದೊಂದು ದಿನ ನಾವು ಕರೋನಾ ವಿರುದ್ಧ ಗೆಲ್ಲಬಹುದು ಎನ್ನುವ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

WHOನ ಕರೋನಾ ವೈರಸ್‌ ತಾಂತ್ರಿಕ ಮುಖ್ಯಸ್ಥ ಡಾ. ಮರಿಯಾ ವ್ಯಾನ್‌ ಕೆರ್ಖೋವ್‌ ಮಾತನಾಡಿ, ಕರೋನಾ ಸೋಂಕಿಂದ ಜನರು ನಿರಾಸೆ ಅನುಭವಿಸುವ ಹಂತದಲ್ಲಿದ್ದೇವೆ. ಆದರೂ ನಾವು ಸಕಾರಾತ್ಮಕ ಮನಸ್ಥಿತಿ ಹಾಗೂ ಗೆಲ್ಲುವ ನಂಬಿಕೆ ಮೇಲೆ ಮುನ್ನಡೆಯಬೇಕಿದೆ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರಾಸ್‌ ಅಧಾನೋಮ್‌ ಘೆಬ್ರಯಾಸೆಸ್‌ ಮಾತನಾಡಿ, ಕರೋನಾ ಸೋಂಕನ್ನು ನಿವಾರಿಸುವ ಹಾದಿ ನಮ್ಮ ಕೈಯ್ಯಲ್ಲೇ ಇದೆ. ಇದನ್ನು ಅಂತ್ಯ ಮಾಡುವುದಕ್ಕೆ ಎಲ್ಲರೂ ಜೊತೆಗೂಡಿ ಹೋರಾಡಬೇಕು. ಹಾಗಾದರೆ ಮಾತ್ರ ನಾವು ಸಾಂಕ್ರಾಮಿಕ ವೈರಾಣು ಕರೋನಾ ತಡೆಯುವ ವಿಶ್ವಾಸ ಮೂಡಲಿದೆ ಎಂದಿದ್ದಾರೆ. ಇನ್ನೂ ಕರೋನಾ ವೈರಾಣು ವಿರುದ್ಧ ಈಗಾಗಲೇ ಸಾವಿರಾರು ವಿಜ್ಞಾನಿಗಳು ಅಧ್ಯಯನಗಳನ್ನು ನಡೆಸಿದ್ದಾರೆ. ನೂರಾರು ಔಷಧಿ ಕಂಪನಿಗಳು ಈಗಾಗಲೇ ಮಾನವರ ಮೇಲೆ ಲಸಿಕೆಯನ್ನು ಪ್ರಯೋಗ ಮಾಡುತ್ತಿದ್ದಾರೆ. ಆದರೆ ಆ ಲಸಿಕೆಯಿಂದ ಕರೋನಾ ವೈರಾಣುವನ್ನು ನಿರ್ನಾಮ ಮಾಡುತ್ತೇವೆ ಅಥವಾ ನಿಲ್ಲಿಸುತ್ತೇವೆ ಎನ್ನುವುದಕ್ಕೆ ಯಾವುದೇ ಆಧಾರ ಸಿಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಧ್ಯಮ ವಕ್ತಾರೆ ಮಾರ್ಗರೇಟ್‌ ಹ್ಯಾರಿಸ್‌ ಹೇಳಿದ್ದಾರೆ.

ಲಸಿಕೆ ವಿಚಾರದಲ್ಲಿ ಸಕಾರಾತ್ಮಕ ಅಂಶಗಳು ಹೊರ ಬರುತ್ತಿವೆ. ಆದರೆ ಶೇಕಡ 100 ರಷ್ಟು ಯಶಸ್ಸು ಸಾಧಿಸಿದ್ದೇವೆ ಎಂದು ಹೇಳುವುದಕ್ಕೆ ಸಾಕಷ್ಟು ಸಮಯ ಹಾಗೂ ದೀರ್ಘ ಕಾಲದ ಸಂಶೋಧನೆ ಅಗತ್ಯ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದ್ದಾರೆ. ಇದೀಗ ಕರೋನಾ ವಿರುದ್ಧ ಬಳಕೆ ಮಾಡುತ್ತಿರುವ ರೋಗನಿರೋಧಕ ಶಕ್ತಿ ಹೆಚ್ಚಳದ ರಾಮ್‌ಡೆಸಿವಿರ್‌ (Remdesivir) ಕರೋನಾದಿಂದ ಹೊರಬರಲು ಸಹಕಾರಿಯಾಗಿದೆ ಎಂದಿರುವ ಮಾರ್ಗರೇಟ್‌ ಔಷಧಿ ಹೆಸರನ್ನು ಹೇಳಿಲ್ಲ. 100ಕ್ಕೂ ಹೆಚ್ಚು ಲಸಿಕೆಗಳ ಅಧ್ಯಯನ ನಡೆಯುತ್ತಿದೆ. ಅದು ಮಾರುಕಟ್ಟೆಗೆ ಬರುವುದಕ್ಕೆ ಸುಮಾರು 12 ತಿಂಗಳು ಕಾಲಾವಕಾಶ ಬೇಕಿದೆ ಎಂದಿದ್ದಾರೆ.

ಒಟ್ಟಾರೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಸ್ವತಃ ಕರೋನಾ ಸೋಂಕನ್ನು ಸಂಪೂರ್ಣವಾಗಿ ನಿಲ್ಲಿಸಲು ಅಸಾಧ್ಯ ಹಾಗೂ ಔಷಧಿ ಪತ್ತೆಯಾದರೂ ನಾವು ಕರೋನಾ ಸೋಂಕಿನ ರೂವಾರಿ ಕೋವಿಡ್‌ 19 ಅಂತ್ಯ ಮಾಡುತ್ತೇವೆ ಎನ್ನುವ ಭರವಸೆ ಇಲ್ಲ ಎಂದಾಗಿದೆ. ಇನ್ನೂ ಎಲ್ಲಾ ದೇಶಗಳು ಆರ್ಥಿಕ ಹರಿವು ನಿಲ್ಲಿಸಿ ಸಂಕಷ್ಟಕ್ಕೆ ಸಿಲುಕಿ ಆಗಿದೆ. ಅನಿವಾರ್ಯವಾಗಿ ಎಲ್ಲಾ ವ್ಯವಹಾರಗಳನ್ನು ನಡೆಸಲು ಮುಂದಾಗುತ್ತಿವೆ. ಯಾವುದೇ ಒಂದು ವೈರಾಣು ಇಂತಿಷ್ಟು ಕಾಲದವರೆಗೂ ವಿಜೃಂಭಿಸಿ ತನ್ನ ಅಂತ್ಯವನ್ನು ಕಾಣುತ್ತದೆ. ಆದರೆ ಈ ಕರೋನಾ ವೈರಾಣು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತೆ ತುಂಬಾ ಬುದ್ಧಿವಂತ ಹಾಗೂ ವಿಚಿತ್ರ ವೈರಾಣು ಎನ್ನಲಾಗಿದೆ. ಎಲ್ಲಾ ಸಾಂಕ್ರಾಮಿಕ ರೋಗದಂತೆ ಇದೂ ಕೂಡ ಮಾನವನ ಜೊತೆ ಸದಾ ಕಾಲ ಇರುತ್ತೆ, ಆದರೆ ಒಬ್ಬರಿಂದ ಒಬ್ಬರಿಗೆ ಬಹಳ ವೇಗವಾಗಿ ಹರಡುತ್ತದೆ. ಹಾಗಾಗಿ, ಉಳಿದೆಲ್ಲಾ ಸಾಂಕ್ರಾಮಿಕ ರೋಗಗಳೊಂದಿಗೆ ಬದುಕಲು ಕಲಿತಂತೆ ಇದರೊಂದಿಗೂ ಬದುಕಲು ಕಲಿಯುವುದು ಅನಿವಾರ್ಯ.

Click here Support Free Press and Independent Journalism

Pratidhvani
www.pratidhvani.com