ಪರಿಸರ ನಿರಾಕ್ಷೇಪಣಾ ಪತ್ರವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ವೈಜಾಗ್‌ನ LG Polymers
ರಾಷ್ಟ್ರೀಯ

ಪರಿಸರ ನಿರಾಕ್ಷೇಪಣಾ ಪತ್ರವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ವೈಜಾಗ್‌ನ LG Polymers

RTI ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಪಡೆದಿರುವಂತಹ ದಾಖಲೆಗಳಲ್ಲಿ, LG Polymers ಸಂಸ್ಥೆಯು ಪರಿಸರ ಹಾನಿಗೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳನ್ನು ಹೊಂದದಿರುವುದು ಸ್ಪಷ್ಟವಾಗಿದೆ. ಪರಿಸರ ನಿರಕ್ಷೇಪಣಾ ಪತ್ರವನ್ನು ಪಡೆಯದೇ, ಯಾವುದೇ ರಾಸಾಯನಿಕ ಫ್ಯಾಕ್ಟರಿಗಳು ಕಾರ್ಯ ನಿರ್ವಹಿಸುವುದು ಕಾನೂನಿನ ಅಡಿಯಲ್ಲಿ ಅಪರಾಧ. ಆದರೂ, LG Polymers ನಂತಹ ಯಾವುದೇ ಅಧಿಕೃತ ದಾಖಲೆ ಹೊಂದಿರದೇ ಇರುವುದು ಸಂಶಯವನ್ನು ಉಂಟುಮಾಡಿದೆ.

ಲಾಯ್ಡ್‌ ಡಾಯಸ್

ಲಾಯ್ಡ್‌ ಡಾಯಸ್

ಮೇ 7, 2020ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ವಿಷಾನಿಲ ಸೋರಿಕೆ ದುರಂತ ನಿಜಕ್ಕೂ ದೇಶವನ್ನೇ ಕಂಗಾಲಾಗಿಸಿತು. ಮೂವರು ಅಮಾಯಕ ಮಕ್ಕಳನ್ನು ಒಳಗೊಂಡಂತೆ ಒಟ್ಟು 11 ಜನರನ್ನು ಬಲಿ ಪಡೆದಂತಹ ಈ ದುರಂತ, ಒಮ್ಮೆಗೆ ಇಡೀ ದೇಶ ವಿಶಾಖಪಟ್ಟಣಂ ಕಡೆಗೆ ನೋಡುವಂತೆ ಮಾಡಿತು. ಅಂದಿನ ಭಯಾನಕ ಚಿತ್ರಣ ಎಂದಿಗೂ ಕಣ್ಣಿಂದ ಅಳಿಸಲಾಗದಂತಹವು.

ಒಂದು ಬಾರಿಗೆ ಭೋಪಾಲ್‌ನಲ್ಲಿ ನಡೆದಂತಹ ವಿಷಾನಿಲ ಸೋರಿಕೆ ಪ್ರಕರಣ ಭಾರತೀಯರ ಕಣ್ಣ ಮುಂದೆ ಹಾದು ಹೋದದ್ದು ಸುಳ್ಳಲ್ಲ. ಅಲ್ಲಲ್ಲಿ ಪ್ರಜ್ಞೆ ತಪ್ಪಿ ಬಿದ್ದಂತಹ ಜನರನ್ನು ನೋಡಿ ಒಮ್ಮೆಗೆ ಸಾವಿನ ಭಯ ಅಲ್ಲಿದ್ದ ಎಲ್ಲರಿಗೂ ಕಾಡಲು ಶುರುವಾಗಿತ್ತು.

ಇಂತಹ ಒಂದು ದುರ್ಘಟನೆಗೆ ಕಾರಣ ಸರಿಯಾಗಿ ನಿರ್ವಹಿಸಲ್ಪಡದ ಕೈಗಾರಿಕಾ ಘಟಕ. ದೇಶದಲ್ಲಿ, ಒಂದು ಕೈಗಾರಿಕಾ ಘಟಕವನ್ನು ತೆರೆಯಬೇಕಾದಲ್ಲಿ ಹಲವಾರು ರೀತಿಯ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ. ಪರಿಸರ ಖಾತೆ ಸಚಿವಾಲಯ ಸೇರಿದಂತೆ ಹಲವು ಇಲಾಖೆಗಳ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆದರೆ, LG Polymers ಸಂಸ್ಥೆಯ ಕಡತಗಳನ್ನು ಗಮನಿಸುತ್ತಾ ಹೋದರೆ, ಈ ಸಂಸ್ಥೆಯು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಪರಿಸರ ನಿರಕ್ಷೇಪಣಾ ಪತ್ರ (Environmental Clearance) ನ್ನು ಪಡೆಯದಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು, ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದಿರುವಂತಹ ದಾಖಲೆಗಳಲ್ಲಿ, LG Polymers ಸಂಸ್ಥೆಯು ಪರಿಸರ ಹಾನಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ದಾಖಲೆಗಳನ್ನು ಹೊಂದದಿರುವುದು ಸ್ಪಷ್ಟವಾಗಿದೆ. ಇಂತಹ ಒಂದು ಸಂಸ್ಥೆಯು ಇಷ್ಟರವರೆಗೆ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯವಾಯಿತು ಎನ್ನುವುದು ನಿಜವಾಗಿಯೂ ಈಗ ಎದ್ದಿರುವ ಪ್ರಶ್ನೆ.

ಪರಿಸರ ನಿರಕ್ಷೇಪಣಾ ಪತ್ರವನ್ನು ಪಡೆಯದೇ, ಯಾವುದೇ ರಾಸಾಯನಿಕ ಫ್ಯಾಕ್ಟರಿಗಳು ಕಾರ್ಯ ನಿರ್ವಹಿಸುವುದು ಕಾನೂನಿನ ಅಡಿಯಲ್ಲಿ ಅಪರಾಧ. ಆದರೂ, LG Polymersನಂತಹ ಒಂದು ಕಂಪೆನಿ ಈ ಸಂಬಂಧ ಯಾವುದೇ ಅಧಿಕೃತ ದಾಖಲೆ ಹೊಂದಿರದೇ ಇರುವುದು ಸಂಶಯವನ್ನು ಉಂಟುಮಾಡಿದೆ. ಸರ್ಕಾರದಿಂದಲೇ ಈ ಕಂಪೆನಿಯನ್ನು ಕಾಪಾಡುವಂತಹ ಪ್ರಯತ್ನ ಈವರೆಗೆ ನಡೆಸಲಾಗುತ್ತಿತ್ತು ಎಂಬ ಅಂಶ ಬಹಿರಂಗಗೊಂಡಿದೆ.

LG Polymers ನೀಡಿರುವ ಅಫಡವಿಟ್‌ನಲ್ಲಿ ತಮ್ಮಲ್ಲಿ ರಾಜ್ಯ ಪರಿಸರ ಹಾನಿ ಮೌಲ್ಯಮಾಪನ ಪ್ರಾಧಿಕಾರ ನೀಡುವ ಅಧಿಕೃತವಾದ ಪ್ರಮಾಣಪತ್ರವನ್ನು ನಾವು ಹೊಂದಿಲ್ಲ ಎಂದು ಹೇಳಿದೆ. Environment clearance ನಮಗೆ ಸಿಕ್ಕಿಲ್ಲವಾದರೂ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತವಾದ ಅನುಮತಿಯನ್ನು ಪಡೆದುಕೊಂಡು ನಮ್ಮ ಕೈಗಾರಿಕಾ ಘಟಕವು ಕಾರ್ಯ ನಿರ್ವಹಿಸುತ್ತಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಈ ಅಂಶವು ಬಹಿರಂಗಗೊಂಡ ಮೇಲೆ ನಿಜಕ್ಕೂ ಎಲ್ಲರಲ್ಲೂ ಮೂಡುವ ಸಾಮಾನ್ಯ ಪ್ರಶ್ನೆಯೆಂದರೆ, ಅಧಿಕೃತವಾಗಿ ಪ್ರಮಾಣಪತ್ರವನ್ನು ಪಡೆಯಲಾಗದ ಕಂಪೆನಿಯೊಂದು ಇಷ್ಟು ದಿನ ಹೇಗೆ ಕಾರ್ಯ ನಿರ್ವಹಿಸಿತು? 11 ಜನರ ಜೀವವನ್ನು ಬಲಿ ತೆಗೆದುಕೊಂಡ ಕಂಪೆನಿಯ ವಿರುದ್ದ ಈ ಮೊದಲೇ ಏಕೆ ಕ್ರಮ ಕೈಗೊಂಡಿಲ್ಲ? ಎಂಬುದು.

ಇನ್ನು ಇಲ್ಲಿ ಎಲೆಕ್ಟೋರಲ್‌ ಬಾಂಡ್‌ಗಳ ಕೈವಾಡವೂ ಇರಬಹುದು ಎಂಬ ಶಂಕೆಯನ್ನು ಸಾಕೆತ್‌ ಗೋಖಲೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅವರು ಶಂಕೆ ನಿಜವಾದಲ್ಲಿ, ಇಂತಹ ಇನ್ನೆಷ್ಟು ಕಂಪೆನಿಗಳು ಭಾರತದಲ್ಲಿ ಸರಿಯಾದ ಅನುಮತಿಯಿಲ್ಲದೇ ಕಾರ್ಯನಿರ್ವಹಿಸುತ್ತಿವೆಯೋ ಎಂಬ ಪ್ರಶ್ನೆ ಕೂಡಾ ಹುಟ್ಟಿಕೊಳ್ಳಲಿದೆ.

Click here Support Free Press and Independent Journalism

Pratidhvani
www.pratidhvani.com