ಹಿಮಾಚಲ ಪ್ರದೇಶ: 6 ಪತ್ರಕರ್ತರ ಮೇಲೆ 10 ಕ್ಕೂ ಹೆಚ್ಚು ಪ್ರಕರಣ ದಾಖಲು
ರಾಷ್ಟ್ರೀಯ

ಹಿಮಾಚಲ ಪ್ರದೇಶ: 6 ಪತ್ರಕರ್ತರ ಮೇಲೆ 10 ಕ್ಕೂ ಹೆಚ್ಚು ಪ್ರಕರಣ ದಾಖಲು

ಅಂತರಾಜ್ಯ ಯಾತ್ರಿಕರನ್ನು ಕ್ವಾರಂಟೈನ್‌ ಮಾಡುವ ಪ್ರದೇಶದಲ್ಲಿ ಸಾಕಷ್ಟು ಮುತುವರ್ಜಿ ವಹಿಸದಿರುವುದು, ಹಸಿವಿನಲ್ಲಿರುವ ವಲಸೆ ಕಾರ್ಮಿಕರಿಗೆ ಸರಿಯಾಗಿ ಆಹಾರ ಸಾಮಾಗ್ರಿಗಳನ್ನು ವಿತರಿಸದಿರುವುದನ್ನು ವರದಿ ಮಾಡಿದಕ್ಕಾಗಿ ಹಾಗೂ ಈ ಕುರಿತಾಗಿರುವ ಪತ್ರಿಕಾ ವರದಿಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದುಕ್ಕಾಗಿ ಪತ್ರಕರ್ತರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ

ಫೈಝ್

ಫೈಝ್

ಹಿಮಾಚಲ ಪ್ರದೇಶದ ಪೋಲಿಸರು ಆರು ಪತ್ರಕರ್ತರ ಮೇಲೆ ಸುಮಾರು 10 ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಉದ್ಯಮ ರಂಗ, ಜನ ಸಾಮಾನ್ಯರು ಹಾಗೂ ವಲಸೆ ಕಾರ್ಮಿಕರು ಲಾಕ್‌ಡೌನ್‌ ಸಂಧರ್ಭದಲ್ಲಿ ಎದುರಿಸುವ ವಿವಿಧ ಸಂಕಷ್ಟಗಳ ಕುರಿತು ವರದಿ ತಯಾರಿಸಿ ಪ್ರಸಾರ ಮಾಡಿದ ಕಾರಣಕ್ಕಾಗಿ ಪತ್ರಕರ್ತರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ನ್ಯೂಸ್‌ಲಾಂಡ್ರಿಯ ವರದಿ ಪ್ರಕಾರ ಅಂತರಾಜ್ಯ ಯಾತ್ರಿಕರನ್ನು ಕ್ವಾರಂಟೈನ್‌ ಮಾಡುವ ಪ್ರದೇಶದಲ್ಲಿ ಸಾಕಷ್ಟು ಮುತುವರ್ಜಿ ವಹಿಸದಿರುವುದು, ಹಸಿವಿನಲ್ಲಿರುವ ವಲಸೆ ಕಾರ್ಮಿಕರಿಗೆ ಸರಿಯಾಗಿ ಆಹಾರ ಸಾಮಾಗ್ರಿಗಳನ್ನು ವಿತರಿಸದಿರುವುದನ್ನು ವರದಿ ಮಾಡಿದಕ್ಕಾಗಿ ಹಾಗೂ ಈ ಕುರಿತಾಗಿರುವ ಪತ್ರಿಕಾ ವರದಿಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದುಕ್ಕಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ, ಪ್ರಕರಣ ದಾಖಲಿಸುವ ಸ್ಥಳೀಯ ರಾಜಕಾರಣಿಗಳೊಂದಿಗೆ ಪತ್ರಕರ್ತರು ವಾಗ್ವಾದಕ್ಕಿಳಿದಿರುವುದನ್ನೂ ಉಲ್ಲೇಖಿಸಲಾಗಿದೆ.

ಮಂಡಿ ಜಿಲ್ಲೆಯಲ್ಲಿ ಹಿರಿಯ ಪತ್ರಕರ್ತ ಅಶ್ವಾನಿ ಸೈನಿ ಮೇಲೆ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಸೈನಿ ʼದೈನಿಕ್‌ ಜಾಗರಣ್‌ʼ ಮತ್ತು ʼಪಂಜಾಬ್‌ ಕೇಸರಿʼಯಲ್ಲಿ ಈ ಹಿಂದೆ ಪತ್ರಕರ್ತರಾಗಿ ದುಡಿದಿದ್ದರು. ಸದ್ಯ ʼಮಂಡಿ ಲೈವ್‌ʼ ಎನ್ನುವ ಫೇಸ್‌ಬುಕ್‌ ಪೇಜಿಗಾಗಿ ವೀಡಿಯೋ ವರದಿಗಳನ್ನು ತಯಾರಿಸುತ್ತಿದ್ದಾರೆ. ಹಾಗೂ ಜಾಗರಣ್‌ ಗೆ ಫ್ರೀ ಲ್ಯಾನ್ಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರಜ್ವಾನೂ ಗ್ರಾಮದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳನ್ನು ನೀಡುವಲ್ಲಿ ಹೇಗೆ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸೈನಿ ವರದಿ ತಯಾರಿಸಿದ್ದರು. ಅವರು ಚಿತ್ರೀಕರಿಸದ್ದ ವೀಡಿಯೋದಲ್ಲಿ ಕೆಲವು ಕಾರ್ಮಿಕರು ತಮಗೆ ಎರಡನೇ ಸುತ್ತಿನ ಆಹಾರ ಸಾಮಾಗ್ರಿಗಳು ದೊರೆತಿಲ್ಲ ಎಂದು ಆರೋಪಿಸಿದ್ದರು. ಈ ವರದಿ ತಯಾರಿಸಿದಕ್ಕಾಗಿ ಸೈನಿ ಅವರ ಮೇಲೆ IPC ಸೆಕ್ಷನ್‌ 88 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯ 54 ನೇ ಸೆಕ್ಷನ್‌ ಪ್ರಕಾರ ಸುಳ್ಳು ಸುದ್ದಿ ವರದಿ ಮಾಡಿರುವುದೆಂದು ಪ್ರಕರಣ ದಾಖಲಾಗಿದೆ.

ಸೈನಿ ಅವರನ್ನು ಸುಳ್ಳು ಸುದ್ದಿ ಪ್ರಕರಣದಡಿಯಲ್ಲಿ ಆರೋಪಿಯನ್ನಾಗಿಸಿದ ಸುಂದರ್‌ ನಗರ್‌ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ರಾಹುಲ್‌ ಚೌಹಾನ್‌ ʼತಾನು ಈ ಪ್ರಕರಣದ ವಿಚಾರಣೆ ಮಾಡಿದ್ದು ಸೈನಿ ಓರ್ವ ಪತ್ರಕರ್ತರೇ ಅಲ್ಲವೆಂದು, ಅವರು ಸರ್ಕಾರಿ ಮಾನ್ಯತೆ ಪಡೆದಿಲ್ಲʼ ಎಂದಿದ್ದಾರೆ. ಓರ್ವ ಪತ್ರಕರ್ತರೋ ಅಲ್ಲವೋ ಎಂದು ನಿರೂಪಿಸುವ ಅಧಿಕಾರ ಯಾರ ಬಳಿಯಿದೆಯೆಂದು ಕೇಳಿದ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಿಲ್ಲ.

ಇಷ್ಟು ಮಾತ್ರವಲ್ಲದೆ ಲಾಕ್‌ಡೌನ್‌ ಬಳಿಕವೂ ಸುಂದರ್‌ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಟ್ಟಿಗೆ ಕಾರ್ಖಾನೆಯ ಕುರಿತು ವರದಿ ಮಾಡಿರುವುದಕ್ಕೆ ಪ್ರತ್ಯೇಕ ಮೂರು FIR ಗಳನ್ನು ಸೈನಿ ಮೇಲೆ ಹಾಕಲಾಗಿದೆ. ಇಟ್ಟಿಗೆ ಕಾರ್ಖಾನೆ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ IPC ಸೆಕ್ಷನ್‌ 451, 504, 506 ಹಾಗೂ 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ FIR ದಾಖಲಿಸುವ ಮೊದಲು ಸೈನಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರಿಕಾ ಸ್ವಾತಂತ್ರ್ಯದ ಕತ್ತು ಹಿಸುಕುತ್ತಿದ್ದಾರೆಂದು ಚೌಹಾನ್‌ ಮೇಲೆ ಆರೋಪಿಸಿ ಪತ್ರ ಬರೆದಿದ್ದರು.

ಸೈನಿ ಅವರ ಮೇಲೆ ಐದನೇ FIR ನ್ನು ಮೋಟಾರು ವೆಹಿಕಲ್‌ ಕಾಯ್ದೆಯಡಿಯಲ್ಲಿ ಹಾಗೂ IPC 188 ಸೆಕ್ಷನ್‌ನಡಿಯಲ್ಲಿ ಎಪ್ರಿಲ್‌ 14 ರಂದು ಮತ್ತೆ ಹಾಕಲಾಯಿತು. ವರದಿ ಮಾಡಲು ತೆರಳುತ್ತಿದ್ದಾಗ ಕರ್ಫ್ಯೂ ಉಲ್ಲಂಘನೆಯಾಗಿದೆಯೆಂದು ಸೈನಿ ಅವರ ಕಾರನ್ನು ಪೋಲಿಸರು ಮುಟ್ಟುಗೋಲು ಹಾಕಿದ್ದಾರೆ. ಲಾಕ್‌ಡೌನ್‌ ನಿಯಮಗಳಲ್ಲಿ ಪತ್ರಕರ್ತರಿಗೆ ಓಡಾಡುವ ಸ್ವಾತಂತ್ರ್ಯವನ್ನು ನೀಡಿದಾಗ್ಯೂ ವಾಹನವನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಸೈನಿ ಹೇಳಿದ್ದಾರೆ.

ಲಾಕ್‌ಡೌನ್‌ ವೇಳೆ ವಿಶೇಷ ವರದಿ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡವರಲ್ಲಿ ಓಂ ಶರ್ಮ ಇನ್ನೋರ್ವರು. ಮಾರ್ಚ್‌ 29 ರ ಸಂಜೆ ಫೆಸ್ಬುಕ್‌ ಲೈವ್‌ ಬಂದ ಶರ್ಮ ಸೋಲಾನ್‌ ಜಿಲ್ಲೆಯ ಬದ್ದಿ ಪಟ್ಟಣದ ರಸ್ತೆ ಬದಿಯಲ್ಲಿ ಎರಡು ದಿನಗಳಿಂದ ಸರಿಯಾಗಿ ಆಹಾರ ದೊರಕದಿರುವುದರಿಂದ ಪ್ರತಿಭಟನಾ ನಿರತರಾಗಿದ್ದ ಕಾರ್ಮಿಕರನ್ನು ತೋರಿಸಿದ್ದರು. ಶರ್ಮ ಲೈವ್‌ ಹಾಕಿದ ಬೆನ್ನಿಗೆ ಪೋಲಿಸರೊಂದಿಗೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಬಿಜೆಪಿ ಕೌನ್ಸಿಲರ್‌ ಪ್ರತಿಭಟನಾ ನಿರತ ಕಾರ್ಮಿಕರಿಗೆ ಆಹಾರ ನೀಡಿದ್ದೇವೆ, ಎರಡನೇ ಸುತ್ತಿನ ಆಹಾರ ದೊರಕದ ಕಾರಣ ಪ್ರತಿಭಟಿಸುತ್ತಿದ್ದಾರೆಂದು ಹೇಳಿದ್ದರು. ಅದಾಗ್ಯೂ ತಿನ್ನಲು ನಮ್ಮಲ್ಲಿ ಆಹಾರ ಸಾಮಾಗ್ರಿಗಳಿದ್ದರೆ ನಾವು ರಸ್ತೆಗೆ ಬರುವ ಪ್ರಮೇಯ ಯಾಕೆ ಬರುತ್ತಿತ್ತು ಎಂದು ಕಾರ್ಮಿಕರು ಪ್ರಶ್ನಿಸಿದ್ದಾರೆ.

ಇದಾದ ಬೆನ್ನಿಗೆ ಸೋಲಾನ್‌ ಜಿಲ್ಲೆಯ ಬದ್ದಿ ಪ್ರದೇಶದ ಪೋಲೀಸ್‌ ಠಾಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ Sensational ಹಾಗೂ ಸುಳ್ಳು ಸುದ್ದಿ ಪ್ರಸಾರ ಎಂದು ವಿಪತ್ತು ನಿರ್ವಹಣಾ ಕಾಯ್ದೆಯ 54 ನೇ ಸೆಕ್ಷನ್‌ ಹಾಗೂ IPCಯ 4 ಸೆಕ್ಷನ್ ಅಡಿಯಲ್ಲಿ ಓಂ ಶರ್ಮರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಪ್ರಿಲ್‌ 26 ರಂದು ತನ್ನ ಫೇಸ್‌ಬುಕ್‌ ಪೇಜಿನಲ್ಲಿ ʼಅಮರ್‌ ಉಜಾಲʼ ಪತ್ರಿಕೆಯ ವರದಿಯನ್ನು ಹಂಚಿಕೊಂಡದ್ದಕ್ಕಾಗಿ ಇನ್ನೊಂದು ಪ್ರಕರಣವನ್ನು ಶರ್ಮರ ಮೇಲೆ ದಾಖಲಿಸಲಾಗಿದೆ. ಅದರ ಮರುದಿನ ಸೋಲನ್‌ ಆಡಳಿತವನ್ನು ಟೀಕಿಸಿದಕ್ಕಾಗಿ ಭಾರತೀಯ ದಂಡ ಸಂಹಿತೆಯ 188 ಸೆಕ್ಷನ್‌ ಹಾಗೂ IT ಕಾಯ್ದೆಯ 66 ನೇ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಷಯದಲ್ಲಿ ವಿಶೇಷ ಆಸ್ಥೆ ಇರುವಂತೆ ವರ್ತಿಸಿದ ಸ್ಥಳೀಯ SP, ಓಂ ಶರ್ಮರ ಮೇಲೆ ಪ್ರಕರಣ ದಾಖಲಿಸಿರುವದನ್ನು ಪತ್ರಕರ್ತರು ಹಾಗೂ ಸ್ಥಳೀಯ ಪೋಲಿಸ್‌ ಅಧಿಕಾರಿಗಳನ್ನೊಳಗೊಂಡ ವಾಟ್ಸಾಪ್‌ ಗ್ರೂಪಿನಲ್ಲಿ ತಾನೇ ಖುದ್ದು ಷೇರ್‌ ಮಾಡಿದ್ದಾರೆ.

ಶರ್ಮರಂತೆಯೇ ʼನ್ಯೂಸ್‌ 18 ಹಿಮಾಚಲ್ʼ‌ ವಾಹಿನಿಯ ವರದಿಗಾರ ಜಗತ್‌ ಬೈನ್ಸ್‌ ಲಾಕ್‌ಡೌನ್‌ ಸ್ಥಿತಿಗತಿಗಳನ್ನು ಪ್ರಶ್ನಿಸಿದಕ್ಕಾಗಿ ತನ್ನ ಮೇಲೆ ಪೋಲಿಸರಿಂದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಲಸೆ ಕಾರ್ಮಿಕರಿಗೆ ಸರಿಯಾಗಿ ಪಡಿತರ ಸಾಮಾಗ್ರಿಗಳು ತಲುಪದಿರುವುದನ್ನು ವರದಿ ಮಾಡಿ ಚಿತ್ರೀಕರಿಸಿದಕ್ಕೆ ಗಾಳಿಸುದ್ದಿಯನ್ನು ಹರಡುತ್ತಿದ್ದಾರೆ ಎಂದು ಮಾರ್ಚ್‌ 30 ರಂದು FIR ಹಾಕಲಾಗಿದೆ. ಅಲ್ಲದೆ ಅವರ ಸಂಚಾರ ಪಾಸ್‌ ಕೂಡ ತಡೆಹಿಡಿಯಲಾಗಿತ್ತು.

ಸಲ್ಲೇವಾಲ್‌ ಗ್ರಾಮದಲ್ಲಿ ಸ್ಥಳೀಯ ಸರ್ಕಾರಿ ಸರಬರಾಜುದಾರ ವಲಸೆ ಕಾರ್ಮಿಕರಿಗೆ ರೇಷನ್‌ ನೀಡಲು ನಿರಾಕರಿಸುವ ವರದಿ ಮಾಡಿರುವದಕ್ಕೆ ಹಾಗೂ ಸೀಲ್‌ ಮಾಡಲಾಗಿದ್ದ ಬದ್ದಿ ಜಿಲ್ಲೆಯ ಗಡಿಯಲ್ಲಿ ಅನುಮಾನಾಸ್ಪದವಾಗಿ ವಾಹನಗಳು ಸಂಚರಿಸುವುದನ್ನು ವರದಿ ಮಾಡಿದ ಕಾರಣಕ್ಕೆ ಎಪ್ರಿಲ್‌ 23 ಮತ್ತು 25 ರಂದು ಇನ್ನೂ ಎರಡು ಪ್ರಕರಣಗಳನ್ನು ಜಗತ್‌ ಬೈನ್ಸ್‌ ಮೇಲೆ ಹಾಕಲಾಗಿದೆ.

ಹಸಿವಿನಲ್ಲಿರುವ ವಲಸೆ ಕಾರ್ಮಿಕರ ಕುರಿತು ವರದಿಯನ್ನು ಮಾಡಿರುವುದಕ್ಕೆ ʼದೈನಿಕ್‌ ಭಾಸ್ಕರ್‌ʼನ ಗೌರಿ ಶಂಕರ್‌ ಮೇಲೆಯು ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತ ವಿಶಾಲ್‌ ಆನಂದ್‌ ಮೇಲೆಯೂ ಮೊಕದ್ದಮೆ ಹೂಡಲಾಗಿದೆ. ಅಂತರಾಜ್ಯ ಪ್ರಯಾಣಿಕರ ಕ್ವಾರಂಟೈನ್‌ನಲ್ಲಿ ಇರುವ ಸಡಿಲತೆಯನ್ನು ವರದಿ ಮಾಡಿದುದಕ್ಕಾಗಿ ʼಪಂಜಾಬ್‌ ಕೇಸರಿʼಯ ಮನಾಲಿ ಪ್ರಾಂತ್ಯದ ಕರೆಸ್ಪಾಂಡೆಂಟ್‌ ಸೋಮ್‌ದಿವ್‌ ಶರ್ಮ ಅವರ ಮೇಲೆಯೂ ಪ್ರಕರಣ ದಾಕಲಾಗಿದೆ.

Click here Support Free Press and Independent Journalism

Pratidhvani
www.pratidhvani.com