ದೈಹಿಕ ಸ್ಪರ್ಶದಿಂದ ಅಂತರ ಕಾಯ್ದುಕೊಂಡವರ ನಡುವೆ ಎದ್ದು ಕಾಣುತ್ತಿದೆ ತಳಮಳ!
ರಾಷ್ಟ್ರೀಯ

ದೈಹಿಕ ಸ್ಪರ್ಶದಿಂದ ಅಂತರ ಕಾಯ್ದುಕೊಂಡವರ ನಡುವೆ ಎದ್ದು ಕಾಣುತ್ತಿದೆ ತಳಮಳ!

ಕೈ ಕುಲುಕುವುದು, ಆಲಿಂಗಿಸುವುದು ಹಾಗೂ ದೈಹಿಕ ಸ್ಪರ್ಶಗಳು ಯಾವುದೂ ಅಸ್ಪೃಶ್ಯವೆಂದು ಎನಿಸುವುದಾಗಲೀ, ಇಲ್ಲವೇ ಅದು ವಿದೇಶಿ ಸಂಸ್ಕೃತಿ ಎಂದು ಭಾವಿಸಿಕೊಳ್ಳುವ ಮುನ್ನ ಅದರ ಹಿಂದಿನ ವಾಸ್ತವಿಕತೆಗಳನ್ನೂ, ವೈಜ್ಞಾನಿಕ ಕಾರಣಗಳನ್ನೂ ತಿಳಿಯಬೇಕಿದೆ. ಆದರೆ ಕರೋನಾ ಅಥವಾ ಇನ್ನಿತರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಾತ್ರ ಇಂತಹದ್ದರಲ್ಲಿ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ.

ಮೊಹಮ್ಮದ್‌ ಇರ್ಷಾದ್‌

ಬಹುಶಃ ಎರಡು ತಿಂಗಳಾಗುತ್ತಾ ಬಂತು. ಯಾರೊಬ್ಬರೂ ಕೈ ಕುಲುಕುವುದಾಗಲೀ, ಆಲಿಂಗಿಸುವುದಾಗಲೀ ಇಲ್ಲವೇ ದೈಹಿಕ ಸ್ಪರ್ಶವನ್ನಾಗಲೀ ಬಯಸುತ್ತಿಲ್ಲ. ತಾಯಿ-ಮಗುವನ್ನು, ಸ್ನೇಹಿತ-ಸ್ನೇಹಿತೆಯನ್ನು, ಪತಿ-ಪತ್ನಿಯನ್ನ ಹೀಗೆ ಹಲವು ಮಂದಿ ಪರಸ್ಪರ ಎದುರುಗೊಳ್ಳುವಾಗ ಕೇವಲ ಕೈ ಸನ್ನೆ ಇಲ್ಲವೇ ಅಂತರ ಕಾಯ್ದುಕೊಂಡು ಆಡುವ ಮಾತುಗಳಿಗಷ್ಟೇ ಸೀಮಿತವಾಗಿದೆ ಇವರ ಸಂಬಂಧ ಅನ್ನೋದು. ಅದರಲ್ಲೂ ಕರೋನಾ ಪೀಡಿತ ದೇಶಗಳಲ್ಲಂತೂ ಈ ರೀತಿಯ ಆಲಿಂಗನ, ಕೈ ಕುಲುವಿಕೆ ಇಂತಹ ಯಾವುದೇ ಸ್ಪರ್ಶವಿಲ್ಲದೇ ಎರಡು ತಿಂಗಳುಗಳೇ ಕಳೆದವು. ಅದರಲ್ಲೂ ಪಾಶ್ಚಿಮಾತ್ಯ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಗೌರವ ಹಾಗೂ ಪ್ರೀತಿಯ ಸಂಕೇತವಾಗಿ ಆಲಿಂಗನ ಮಾಡುವುದು ಸಾಮಾನ್ಯ. ಆದರೆ ಇದೀಗ ಒಂದಿಷ್ಟು ಅಂತರ ಕಾಯ್ದುಕೊಳ್ಳುವವರೇ ಜಾಸ್ತಿ.

ಕರೋನಾ ಆರಂಭದಲ್ಲಿ ʼಕೈ ಕುಲುಕದಿರಿʼ ಎಂದಾಗ ಕೆಲವರಂತೂ ತಮ್ಮ ಧರ್ಮಗಳು ಶತಮಾನಗಳ ಹಿಂದೆಯೇ ಇದನ್ನ ಕಲಿಸಿದೆ ಎಂದು ಹೆಮ್ಮೆ ಪಟ್ಟುಕೊಂಡವು. ಆದರೆ ವಾಸ್ತವದಲ್ಲಿ ಸೋಂಕು ಬಾಧಿತವಲ್ಲದ ಸಮಯದಲ್ಲಿ ಕೈ ಕುಲುವಿಕೆ, ಆಲಿಂಗನ ಹಾಗೂ ಇನ್ನಿತರ ದೈಹಿಕ ಸ್ಪರ್ಶ ಅನ್ನೋದು ವ್ಯಕ್ತಿಯೊಬ್ಬನಲ್ಲಿ ಸಾಕಷ್ಟು ಬದಲಾವಣೆ ತರುವುದಾಗಿ ವಿಜ್ಞಾನ ಲೋಕ ತಿಳಿಸುತ್ತದೆ.

ಉದಾಹರಣೆಗೆ, ಮಗುವಿಗೆ ತಾಯಿಯ ಆಲಿಂಗನ ಅನ್ನೋದು ಕಡ್ಡಾಯವಾಗಿ ಬೇಕಾಗುತ್ತದೆ. ಯಾಕೆಂದರೆ ತನ್ನನ್ನ ಆರೈಕೆ ಮಾಡೋರ ಆಲಿಂಗನ ಅಥವಾ ದೈಹಿಕ ಸ್ಪರ್ಶದಿಂದ ಮಗುವೊಂದು ವೇಗವಾಗಿ ತನ್ನಲ್ಲಿ ಬೆಳವಣಿಗೆ ಅಥವಾ ತಿಳುವಳಿಕೆ ಕಾಣಲು ಸಾಧ್ಯ ಎಂದು ವಿಜ್ಞಾನ ತಿಳಿಸುತ್ತದೆ. ಕಾರಣ, ಈ ರೀತಿಯ ಆಲಿಂಗನ ಇಲ್ಲವೇ ಸ್ಪರ್ಶದ ನಡುವೆ ಒಂದು ರೀತಿಯ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ಅಲ್ಲದೇ ಇಬ್ಬರ ನಡುವಿನ ನಂಬಿಕೆ, ಗೌರವ ಹೆಚ್ಚಿಸುತ್ತದೆ ಮಾತ್ರವಲ್ಲದೇ ಒತ್ತಡಗಳನ್ನೂ ಕಡಿಮೆ ಮಾಡುವುದಾಗಿ ಅಧ್ಯಯನಗಳು ತಿಳಿಸುತ್ತವೆ.

ಅದರಲ್ಲೂ ತಾಯಿ ಮತ್ತು ಮಗು ನಡುವಿನ ಆಲಿಂಗನದ ಮಧ್ಯೆ cortisol ಅನ್ನೋ ಮಾನಸಿಕ ಒತ್ತಡ ಹೆಚ್ಚಿಸಬಲ್ಲ ಹಾರ್ಮೋನ್‌ಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದು ಅಧ್ಯಯನಗಳು ತಿಳಿಸುತ್ತವೆ. ಅಲ್ಲದೇ ಇದಕ್ಕೇ ಪೂರಕವಾಗಿ ಅಮೆರಿಕಾದಲ್ಲಿ ಇತ್ತೀಚಿನ ಕರೋನಾ ಅವಧಿಯಲ್ಲಿ ನಡೆದ ಸಂಶೋಧನೆಯೊಂದು ಅಂತಹದ್ದೇ ವರದಿಯನ್ನ ಮುಂದಿಡುತ್ತವೆ. ಕರೋನಾ ಭಯದಿಂದ ತಾಯಿ ಮಗುವಿನಿಂದ ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದು, ಪರಿಣಾಮ ಪ್ರೀ-ಸ್ಕೂಲ್‌ ಮಕ್ಕಳ ವರ್ತನೆಯಲ್ಲಿ ತೀವ್ರ ಬದಲಾವಣೆ ಆಗಿರುವುದನ್ನ ಅಮೆರಿಕಾದ ಅಧ್ಯಯನವೊಂದು ತಿಳಿಸಿದೆ. ಇಂತಹ ಮಕ್ಕಳು ತನ್ನ ಆರೈಕೆ ಮಾಡುವವರ ಆಲಿಂಗನ ಇಲ್ಲವೇ ದೈಹಿಕ ಸ್ಪರ್ಶ ಇಲ್ಲದೇ ಇರುವುದರಿಂದ ಮುಂಗೋಪಿಯಂತೆ ವರ್ತಿಸುತ್ತಿರುವುದಾಗಿ ಅಧ್ಯಯನ ತಿಳಿಸುತ್ತದೆ.

ಇದು ಮಾತ್ರವಲ್ಲದೇ ವಯಸ್ಕರಲ್ಲೂ ಆಲಿಂಗನ ಅನ್ನೋದು ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಅದರಲ್ಲೂ ಈ ಕರೋನಾ ಅವಧಿಯಲ್ಲಿ ದೈಹಿಕ ಸ್ಪರ್ಶದ ಅರ್ಥಾತ್‌ ಆಲಿಂಗನದ ಕೊರತೆ ಎದ್ದು ಕಾಣುತ್ತವೆ. ಕಾರಣ, ಕರೋನಾದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ ಸಂದರ್ಭದಲ್ಲಿ ಆತನ ಹತ್ತಿರದ ಕುಟುಂಬಿಕರು ಉದಾಹರಣೆ ಪತಿ ಇಲ್ಲವೇ ಪತ್ನಿ, ತಂದೆ-ತಾಯಿ, ಮಕ್ಕಳು, ಸಹೋದರ-ಸಹೋದರಿಯರು ಹೀಗೆ ಇಡೀ ಕುಟುಂಬವೇ ದುಃಖಭರಿತವಾಗುತ್ತವೆ. ಅಂತಹ ಸಂದರ್ಭದಲ್ಲಿ ಅವರಿಗೆ ಮೂರನೇ ವ್ಯಕ್ತಿಯ ಸಾಂತ್ವನ ಅನ್ನೋದು ಪ್ರಮುಖವಾಗುತ್ತದೆ. ಅದರಲ್ಲೂ ಆಲಿಂಗಿಸಿ ಅಥವಾ ಅವರ ಕೈ ಇಲ್ಲವೇ ತೋಳುಗಳನ್ನ ಬಳಸಿ ಸಾಂತ್ವನ ನೀಡಿದಾಗ ಆಗುವ ಸಮಾಧಾನ ಎಲ್ಲೋ ಅಂತರ ಕಾಯ್ದುಕೊಂಡು ಇಲ್ಲವೇ ಕೈ ಮುಗಿದುಕೊಂಡು ಮಾಡುವ ಸಾಂತ್ವನಕ್ಕೂ ಅಜಗಜಾಂತರ ವ್ಯತ್ಯಾಸ ಕಾಣಬಹುದು.

ಅಲ್ಲದೇ ಒಳ್ಳೆಯ ಸ್ಪರ್ಶದಿಂದ Serotonin ಅನ್ನೋ ಹಾರ್ಮೋನ್‌ ಅಧಿಕವಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿ, cortisol ಅನ್ನೋ ಒತ್ತಡದ ಹಾರ್ಮೋನ್‌ಗಳನ್ನ ಕಡಿಮೆ ಮಾಡುತ್ತವೆ. ಮಾತ್ರವಲ್ಲದೇ ʼlove Harmone’ ಎಂದೇ ಕರೆಯಲ್ಪಡುವ Oxytocin ಹಾರ್ಮೋನ್‌ ಕೂಡಾ ವೃದ್ಧಿಸುವುದಾಗಿ ಅಧ್ಯಯನ ವರದಿಗಳು ತಿಳಿಸುತ್ತವೆ. ವಿಶೇಷವಾಗಿ ಮಕ್ಕಳಲ್ಲಿ ಆಲಿಂಗನ ನಡೆಸಿ ಮುದ್ದಿಸಿದಾಗ ಹೆಚ್ಚು ಸಂತುಷ್ಟವಾಗುವ ಅವರು ಸುಲಭವಾಗಿ ಅರ್ಥೈಸುವಿಕೆ, ಬೆಳವಣಿಗೆ ಮತ್ತು ನಿಯಂತ್ರಣದಲ್ಲಿ ಇರಲು ಸಾಧ್ಯವಾಗುತ್ತದೆ.

ಇದು ಕೇವಲ ಮನುಷ್ಯ ಮನುಷ್ಯರ ನಡುವಿನ ದೈಹಿಕ ಸ್ಪರ್ಶಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಸಾಕು ಪ್ರಾಣಿಗಳಲ್ಲೂ ಮಾಡುವ ದೈಹಿಕ ಸ್ಪರ್ಶದಿಂದಲೂ ಇದೇ ರೀತಿಯ ಅನುಭವವಾಗುತ್ತದೆ. ಇನ್ನು ಸಾಕುಪ್ರಾಣಿಗಳಲ್ಲೂ ಅಷ್ಟೇ ಅವುಗಳು ತೋರಿಸುವ ಪ್ರತಿಕ್ರಿಯೆಯೂ ಭಿನ್ನವಾಗಿರುತ್ತದೆ. ಆದ್ದರಿಂದ ಕೈ ಕುಲುಕುವುದು, ಆಲಿಂಗಿಸುವುದು ಹಾಗೂ ದೈಹಿಕ ಸ್ಪರ್ಶಗಳು ಯಾವುದೂ ಅಸ್ಪೃಶ್ಯವೆಂದು ಎನಿಸುವುದಾಗಲೀ, ಇಲ್ಲವೇ ಅದು ವಿದೇಶಿ ಸಂಸ್ಕೃತಿ ಎಂದು ಭಾವಿಸಿಕೊಳ್ಳುವ ಮುನ್ನ ಅದರ ಹಿಂದಿನ ವಾಸ್ತವಿಕತೆಗಳನ್ನೂ, ವೈಜ್ಞಾನಿಕ ಕಾರಣಗಳನ್ನೂ ಕಾಣಬಹುದು. ಆದರೆ ಕರೋನಾ ಅಥವಾ ಇನ್ನಿತರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಾತ್ರ ಇಂತಹದ್ದರಲ್ಲಿ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಆದರೆ ಸೋಂಕು, ವೈರಸ್‌ ಇದ್ಯಾವುದೂ ಗೊತ್ತಿರದ ಮಗು ಅಥವಾ ಮಕ್ಕಳ ಮೇಲೆ ಅಂತರ ಕಾಯ್ದುಕೊಳ್ಳುವ ವರ್ತನೆ ಸಾಕಷ್ಟು ಪರಿಣಾಮ ಬೀರುವುದನ್ನು ಆಲಿಂಗನ ಹಾಗೂ ದೈಹಿಕ ಸ್ಪರ್ಶದಿಂದಾಗುವ ಬದಲಾವಣೆಯನ್ನ ತಿಳಿಸಿ ಹೇಳುತ್ತವೆ.

Click here Support Free Press and Independent Journalism

Pratidhvani
www.pratidhvani.com