ಹಣ ಮೂಲ ತಿಳಿಸದ, ವ್ಯಯದ ಗುರಿ ವಿವರಿಸದ ಅಸ್ಪಷ್ಟ 20 ಲಕ್ಷ ಕೋಟಿ ರೂ. ಪ್ಯಾಕೇಜ್
ರಾಷ್ಟ್ರೀಯ

ಹಣ ಮೂಲ ತಿಳಿಸದ, ವ್ಯಯದ ಗುರಿ ವಿವರಿಸದ ಅಸ್ಪಷ್ಟ 20 ಲಕ್ಷ ಕೋಟಿ ರೂ. ಪ್ಯಾಕೇಜ್

ನಿರ್ಮಲಾ ಸೀತಾರಾಮನ್ ಘೋಷಿಸಿದ್ದ 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜಿನ 11.76ರಷ್ಟು ಹೆಚ್ಚಿನ ಮೊತ್ತದ ಪ್ಯಾಕೇಜ್ ಅನ್ನು ಅಂದರೆ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಅಂದರೆ ಈ ಬೃಹತ್ ಮೊತ್ತ ಹೊಂದಿಸುವುದಕ್ಕೆ ಮೊದಲಿಗಿಂತ 11.76ರಷ್ಟು ಹೆಚ್ಚಿನ ಕಸರತ್ತು ನಡೆಸಬೇಕು. ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಹಣ ಹೊಂದಿಸುವುದು ಇನ್ನೂ ಕಷ್ಟವಾಗಲಿದೆ.

ಯದುನಂದನ

ಕರೋನಾ ಎಂಬ ಕಂಡುಕೇಳರಿಯದ ಕಡುಕಷ್ಟದ ವಿರುದ್ಧ ಹೋರಾಡಲು, ಲಾಕ್ಡೌನ್ ಸೃಷ್ಟಿಸಿರುವ ದುರ್ದಿನಗಳಲ್ಲಿ ದೈನೇಸಿ ಸ್ಥಿತಿ ತಲುಪಿರುವವರಿಗೆ ತುಸು ಸಹಾಯ ಮಾಡಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆಳುವ ಸರ್ಕಾರ ಇಡೀ ಪ್ರಪಂಚದಲ್ಲೇ ತಾನು ಘೋಷಿಸಿರುವ ಪ್ಯಾಕೇಜ್ ಬಲುದೊಡ್ಡದೆಂದು ತನ್ನ ಭುಜವನ್ನು ತಾನೇ ತಟ್ಟಿಕೊಳ್ಳುತ್ತಿದೆ. ದೇಶದ ಜಿಡಿಪಿಯ ಶೇಕಡಾ 10ರಷ್ಟು ಹಣವನ್ನು 'ಸದ್ಯದ ಪರಿಸ್ಥಿತಿ' ನಿರ್ವಹಣೆಗೆ ಕೊಡಲಾಗುತ್ತಿದೆ ಎಂದು ಹೇಳಿದೆ.

ಘೋಷಿಸಿದವರೇ ಇದನ್ನು 'ಬೃಹತ್' ಎಂದು ಬಣ್ಣಿಸಿ ಬಿಟ್ಟಿದ್ದಾರೆ. ಮಾಧ್ಯಮಗಳಿಂದ 'ಬೃಹತ್ ಭಜನೆ' ಮುಂದುವರೆದಿದೆ. 136 ಕೋಟಿ ಜನರುಳ್ಳ ದೇಶಕ್ಕೆ 20 ಲಕ್ಷ‌ ಕೋಟಿ ರೂಪಾಯಿಗಳ ಪ್ಯಾಕೇಜ್ ಎಂಬುದು ಬೃಹತ್ ಆಗೇ ಕಾಣುತ್ತದೆ. ಅದೇ ರೀತಿ 20 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಹೇಗೆ ಹೊಂದಿಸಿಕೊಳ್ಳುತ್ತದೆ? ಎಲ್ಲಿಂದ ತರುತ್ತದೆ? ಎಂಬುದು ಕೂಡ ಬೃಹತ್ ಪ್ರಶ್ನೆಗಳೇ ಆಗಿವೆ.

ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದರು. ಅಷ್ಟು ಮಾತ್ರದ ಹಣ ಹೊಂದಿಸುವುದಕ್ಕೇ ಹೆಣಗಾಡಿದ್ದರು. ಅದು ಅವರ ಮಾಹಿತಿಗಳಲ್ಲೇ ಅಡಕವಾಗಿತ್ತು. ಆರೋಗ್ಯ ಮತ್ತು ತುರ್ತು ಸೇವಾನಿರತರಿಗೆ ತಲಾ 50 ಮತ್ತು 20 ಲಕ್ಷದವರೆಗೆ ಜೀವವಿಮೆ ನೀಡಿದ್ದು ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಹಣದಿಂದ. ರೈತರಿಗೆ ಹಣ ನೀಡಿದ್ದು ಕಿಸಾನ್ ಸಮ್ಮಾನ್ ಯೋಜನೆಯಿಂದ. ಹಿರಿಯ ನಾಗರಿಕರು, ಅಂಗವಿಕಲರು ಮತ್ತು ವಿಧವೆಯರಿಗೆ ಹೇಗೂ ನೀಡುತ್ತಿದ್ದ ಹಣವನ್ನು ಪ್ಯಾಕೇಜಿನ ಭಾಗವಾಗಿಸಿದರು. ಅಷ್ಟೇಯಲ್ಲ ಬಹಳ ಸ್ಪಷ್ಟವಾಗಿ 1.7 ಲಕ್ಷ ಕೋಟಿ ಹಣವನ್ನು ಹೊಂದಿಸಲು ಮಿನರಲ್ ಫಂಡ್, ಪ್ರಾವಿಡೆಂಟ್ ಫಂಡ್ ಮತ್ತು ಕಟ್ಟಡ ಕಾರ್ಮಿಕರ ಫಂಡ್ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದರು.

ನಿರ್ಮಲಾ ಸೀತಾರಾಮನ್ ಘೋಷಿಸಿದ್ದ 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜಿನ 11.76ರಷ್ಟು ಹೆಚ್ಚಿನ ಮೊತ್ತದ ಪ್ಯಾಕೇಜ್ ಅನ್ನು ಅಂದರೆ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಅಂದರೆ ಈ ಬೃಹತ್ ಮೊತ್ತ ಹೊಂದಿಸುವುದಕ್ಕೆ ಮೊದಲಿಗಿಂತ 11.76ರಷ್ಟು ಹೆಚ್ಚಿನ ಕಸರತ್ತು ನಡೆಸಬೇಕು. ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಯಾಗಿದೆ. ನಿರಂತರವಾಗಿ ರೂಪಾಯಿ ಅಪಮೌಲ್ಯಗೊಳ್ಳುತ್ತಿದೆ. ಇಂಧನ ದರಗಳು ಏರುಮುಖವಾಗಿವೆ. ಇಂಥ ಪರಿಸ್ಥಿತಿಯಲ್ಲಿ ಹಣ ಹೊಂದಿಸುವುದು ಇನ್ನೂ ಕಷ್ಟವಾಗಲಿದೆ.

ಕೆಲವು ಸುಲಭದ ದಾರಿಗಳು ಕೂಡ ಇವೆ; ಶ್ರೀಮಂತರಿಗೆ ವಿಶೇಷವಾದ ಕರೋನಾ ತೆರಿಗೆ ವಿಧಿಸಬಹುದು. ಕಾರ್ಪೊರೇಟ್ ತೆರಿಗೆಗಳನ್ನು ಹೆಚ್ಚಿಸಬಹುದು‌ ಆದರೆ ಈ ಕ್ರಮಗಳನ್ನು ಕಾರ್ಪೊರೇಟ್ ಕಂಪನಿಗಳ ಪರ ಇರುವ ನರೇಂದ್ರ ಮೋದಿ ಅವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇದಲ್ಲದೆ ಇಷ್ಟು ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನವನ್ನು ಕಡಿಮೆ ಬೆಲೆಗೆ ಕೊಂಡುತಂದು ಬಡ ಭಾರತೀಯರಿಗೆ ದುಪ್ಪಟ್ಟು ದುಡ್ಡಿಗೆ ಮಾರಿರುವ ಹಣವನ್ನು ಬಳಸಿಕೊಳ್ಳಬಹುದು ಎಂಬ ಇನ್ನೊಂದು ಮಾತಿದೆ. ಆದರೆ ಇದು ಕೂಡ ಲಾಭದ ಹಣವನ್ನು ಹೊಸ ಬಂಡವಾಳ ಮಾಡುವ, ಎಂದಿಗೂ ಅದನ್ನು ಕಾರಣಕರ್ತರಿಗೆ ಹಂಚದ ಅಪ್ಪಟ ಗುಜರಾತಿಗಳ ಗುಣಲಕ್ಷಣಗಳೆಲ್ಲವೂ ಮೇಳೈಸಿರುವ ಮೋದಿಯಿಂದ ಆಗದ ಕೆಲಸ ಎಂದೇ ಹೇಳಲಾಗುತ್ತಿದೆ.

ಕರೋನಾ ವಿರುದ್ಧ ಹೋರಾಡಲೆಂದು ದೇಶವಾಸಿಗಳು ನೀಡಿರುವ ಅಪಾರ ಪ್ರಮಾಣದ 'ಪಿಎಂ ಕೇರ್ ಫಂಡ್' ಇದೆ. ಅದನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಇದೆ. ಪಾರದರ್ಶಕ ಎಂಬ ಪದದೇ ಅರ್ಥವೇ ಗೊತ್ತಿಲ್ಲದ ನರೇಂದ್ರ ಮೋದಿ ಮತ್ತು ಅವರ ಸರ್ಕಾರ 'ಪಿಎಂ ಕೇರ್ ಫಂಡ್'ಗೆ ಎಷ್ಟು ದೇಣಿಗೆ ಬಂದಿದೆ? ಅದನ್ನು ಯಾವ್ಯಾವ ಬಾಬ್ತಿಗೆ ಖರ್ಚು ಮಾಡಲಾಗುತ್ತಿದೆ? ಎಂಬುದನ್ನು ಹೇಳುವುದಿಲ್ಲ. ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ಹಣ 'ಪಿಎಂ ಕೇರ್ ಫಂಡ್'ಗೆ ಬಂದಿರುವ ಸಾಧ್ಯತೆಗಳೂ ಇಲ್ಲ. ಹಾಗಾದರೆ ಉಳಿದ ಹಣವನ್ನು ಹೊಂದಿಸುವುದು‌ ಹೇಗೆ?

ಇವೆಲ್ಲವುಗಳ ಹೊರತು ಉಳಿದಿರುವ ಮಾರ್ಗ ಸಾಲ ಮಾಡುವುದು. ಸಂಕಷ್ಟದಲ್ಲಿ ಸಾಲ ಮಾಡುವುದು ಶತಶತಮಾನಗಳ ಸಂಪ್ರದಾಯ. ಅದನ್ನು ತಪ್ಪು ಎಂದು ವ್ಯಾಖ್ಯಾನಿಸಲಾಗದು. ಆದರೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ, ಕರೋನಾ ಕಷ್ಟದ ವೇಳೆ, ಮುಂದೆ ಎಂದಿನಂತೆ ಆರ್ಥಿಕ ಚಟುವಟಿಕೆಗಳು ನಡೆಯಲಿವೆ. ಆಮದು-ರಫ್ತುಗಳೆಲ್ಲವೂ ಸುಗಮವಾಗಿ ಸಾಗಲಿವೆ ಎಂಬ ಯಾವ ಗ್ಯಾರಂಟಿಯೂ ಇಲ್ಲದ ಸಂದರ್ಭದಲ್ಲಿ ಸಾಲ ಮಾಡುವುದು ಅಪಾಯವನ್ನು ಆಹ್ವಾನಿಸಿದಂತೆ. ನರೇಂದ್ರ ಮೋದಿ ದೇಶವನ್ನು ಅಂಥ ಅಪಾಯದೆಡೆಗೆ ತಳ್ಳುತ್ತಿದ್ದಾರೆ.

ಕರೋನಾದ ವಿರುದ್ಧ ಹೋರಾಡಲು ಭಾರತವು ಬ್ರಿಕ್ಸ್‌ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ದೇಶಗಳ ಹೊಸ ಅಭಿವೃದ್ಧಿ ಬ್ಯಾಂಕ್ (NDB)ನಿಂದ 1 ಬಿಲಿಯನ್ ಹಣವನ್ನು ಕಡ ತರುತ್ತಿದೆ. ವಿಪತ್ತಿನ ಸಮಯದಲ್ಲಿ ತನ್ನ ಸದಸ್ಯ ರಾಷ್ಟ್ರಗಳನ್ನು ಬೆಂಬಲಿಸಬೇಕೆಂದು ಭಾರತಕ್ಕೆ ಸಾಲ ನೀಡಲು ಏಪ್ರಿಲ್ 30ರಂದು ಎನ್ ಡಿಬಿಯ ನಿರ್ದೇಶಕ ಮಂಡಳಿ ಸಭೆ ನಿರ್ಧರಿಸಿದೆ. ಆದರೆ ಉಳಿದ ಹಣವನ್ನು ಕೇಂದ್ರ ಸರ್ಕಾರ ಹೇಗೆ ಹೊಂದಿಸಲಿದೆ? ಏಕೆಂದರೆ ಕರೋನಾ ಇಡೀ ಜಗತ್ತನ್ನು ಜಗ್ಗಾಡುತ್ತಿದೆ. ಜಗತ್ತಿನ ಆರ್ಥಿಕ ಸ್ಥಿತಿಯೇ ದುಸ್ಥಿತಿಯಲ್ಲಿದೆ. ಇಡೀ ಜಗತ್ತಿನಲ್ಲಿ ಸಾಲದ ಬೇಡಿಕೆ ದುಪ್ಪಟ್ಟಾಗಿದೆ. ಸಾಲ ಹುಟ್ಟುವುದಾದರೂ ಎಲ್ಲಿಂದ? ಎಂಬುದು ಕೂಡ ಗಮನಾರ್ಹವಾದ ವಿಷಯ.

ಇರಲಿ, 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್‌ ಸಂಪೂರ್ಣವಾಗಿ ಲಿಕ್ವಿಡಿಟಿ (ನಗದು) ರೂಪದಲ್ಲಿ ಇರುವುದಿಲ್ಲ. ಈ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್‌ ಹಿಂದಿನ 1.7 ಲಕ್ಷ ಕೋಟಿಗಳ ಪ್ಯಾಕೇಜ್‌ ಅನ್ನು ಒಳಗೊಂಡಿರುತ್ತದೆ. ನೇರವಾಗಿ ಹಣ ಕೊಡುವುದು ಮಾತ್ರವಲ್ಲದೆ ಹಲವಾರು ರೀತಿಯ ಪರೋಕ್ಷವಾದ ವಿತ್ತೀಯ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೂ ಅವೆಲ್ಲವುಗಳಿಗೂ ರಿಯಾಯಿತಿ, ವಿನಾಯಿತಿ, ಪರಿಹಾರ, ಪ್ರೋತ್ಸಾಹ ಕೊಟ್ಟಷ್ಟು ಒಟ್ಟಾರೆ ಬಜೆಟ್ ಮೇಲೆ ಅದರ ಪರಿಣಾಮ-ದುಷ್ಪರಿಣಾಮಗಳು ಬಿದ್ದೇ ಬೀರುತ್ತವೆ. ಪ್ಯಾಕೇಜ್ ಎಂಬುದು ಆದಾಯ-ಖರ್ಚುಗಳನ್ನು ಹೇಳುವ ಬಜೆಟ್ ಅಲ್ಲ ನಿಜ. ಆದರೆ 20 ಲಕ್ಷ ಕೋಟಿ ರೂಪಾಯಿಗಳ ಈ ಬೃಹತ್ ಪ್ಯಾಕೇಜ್ ಹಣ ಮೂಲ ತಿಳಿಸದ, ವ್ಯಯದ ಗುರಿಯನ್ನು ನಿಖರವಾಗಿ ವಿವರಿಸದ ಅಸ್ಪಷ್ಟತೆಯಿಂದ ಕೂಡಿದೆ ಎಂಬುದೂ ಅಷ್ಟೇ ನಿಜ.

Click here Support Free Press and Independent Journalism

Pratidhvani
www.pratidhvani.com