20 ಲಕ್ಷ ಕೋಟಿ ಪ್ಯಾಕೇಜ್: ಅಂಕಿ-ಸಂಖ್ಯೆ ಗಿಮಿಕ್ ಮಾಡಿ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ!
ರಾಷ್ಟ್ರೀಯ

20 ಲಕ್ಷ ಕೋಟಿ ಪ್ಯಾಕೇಜ್: ಅಂಕಿ-ಸಂಖ್ಯೆ ಗಿಮಿಕ್ ಮಾಡಿ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಅವರಿಗೆ ಜನತೆಯನ್ನು ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಾರಿಕೆಯಲ್ಲಿ ಬೃಹತ್ ಪರಿಣತಿ ಬಂದಿದೆ. ಇಡೀ ದೇಶಕ್ಕೆ ದೇಶವೇ 20 ಲಕ್ಷ ಕೋಟಿ ಪ್ಯಾಕೇಜು ಕುರಿತು ಚರ್ಚಿಸುವಂತೆ, ಯೋಚಿಸುವಂತೆ, ಕನಸು ಕಾಣುವಂತೆ ಮಾಡಿರುವುದರಲ್ಲಿ ಮೋದಿಯ ಮಹಾನ್ ಪರಿಣತಿ ಅಡಗಿದೆ.

ರೇಣುಕಾ ಪ್ರಸಾದ್ ಹಾಡ್ಯ

ಕರೋನಾ ಸೋಂಕು ತಡೆಯುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಪ್ರಾರಂಭವಾದ ನಂತರ ಪ್ರಧಾನಿ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿಬಿಟ್ಟರು. ಮೋದಿ ಹೇಳಿದ್ದು 20 ಲಕ್ಷ ಕೋಟಿ ಪ್ಯಾಕೇಜ್ ಮಾತ್ರ. ಆದರೆ, ಆ ಪ್ಯಾಕೇಜ್ ಏನು? ಎತ್ತ? ಯಾರಿಗೆ ಎಷ್ಟು ಎಂಬುದನ್ನು ಹೇಳುವ ಹೊಣೆಗಾರಿಕೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಗಲಿಗೆ ಹಾಕಿ ಬಿಟ್ಟು, ಜನತೆಯನ್ನು ಗೊಂದಲದಲ್ಲಿ ದೂಡಿಬಿಟ್ಟರು.

ಮೋದಿ ಘೋಷಣೆ ಮಾಡಿದ ಬೃಹತ್ 20 ಲಕ್ಷ ಕೋಟಿ ಪ್ಯಾಕೇಜಿನಿಂದ ದೇಶದ ಜನತೆಯಷ್ಟೇ ಅಲ್ಲಾ, ಖುದ್ಧು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಗೊಂದಲಕ್ಕೆ ಬಿದ್ದಿದ್ದರು. ಘೋಷಿಸಿದ್ದ ಪ್ಯಾಕೇಜನ್ನು 20 ಲಕ್ಷ ಎಂದು ಟ್ವೀಟಿಸಿ, ‘ಟೈಫೋ ಎರರ್’ ಆಗಿದೆ ಎಂದು ಮರು ಟ್ವಿಟೀಸಿ ಟ್ವಿಟ್ಟರಿಗರನ್ನು ರಂಜಿಸಿದ್ದರು. ಕೆಲವು ಟ್ವಿಟ್ಟರಿಗರರು ನಿರ್ಮಲಾ ಸೀತಾರಾಮನ್ ಅವರು ಮೊದಲು 20 ಲಕ್ಷ ಪ್ಯಾಕೇಜು ಎಂದು ಉದ್ದೇಶಪೂರ್ವಕವಾಗಿಯೇ ‘ಸರ್ಕ್ಯಾಸ್ಟಿಕ್ಕಾಗಿ’ ಟ್ವೀಟ್ ಮಾಡಿದ್ದರೆಂದು ಕಿಚಾಯಿದ್ದರು.

ಅದೇನೇ ಇರಲಿ, ಪ್ರಧಾನಿ ಮೋದಿ ಅವರಿಗೆ ಜನತೆಯನ್ನು ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಾರಿಕೆಯಲ್ಲಿ ಬೃಹತ್ ಪರಿಣತಿ ಬಂದಿದೆ. ಇಡೀ ದೇಶಕ್ಕೆ ದೇಶವೇ 20 ಲಕ್ಷ ಕೋಟಿ ಪ್ಯಾಕೇಜು ಕುರಿತು ಚರ್ಚಿಸುವಂತೆ, ಯೋಚಿಸುವಂತೆ, ಕನಸು ಕಾಣುವಂತೆ ಮಾಡಿರುವುದರಲ್ಲಿ ಮೋದಿಯ ಮಹಾನ್ ಪರಿಣತಿ ಅಡಗಿದೆ.

ಜನತೆ ಮತ್ತು ನಮ್ಮ ಮಾಧ್ಯಮಗಳು ಮೋದಿಯ ಕಣ್ಕಟ್ಟು ಕತೆಗಳಿಗೆ ಅದೆಷ್ಟು ಬೇಗ ಪಿಗ್ಗಿ ಬೀಳುತ್ತಾರೆ ಎಂದರೆ- ಇದೇ ನರೇಂದ್ರ ಮೋದಿ 105 ದಿನಗಳ ಹಿಂದೆ ರಾಷ್ಟ್ರಪತಿಗಳ ಮೂಲಕ ತಮ್ಮ ಸರ್ಕಾರವು 100 ಲಕ್ಷ ಕೋಟಿ ರುಪಾಯಿಗಳನ್ನು ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಲು ಖರ್ಚು ಮಾಡಲಿದೆ ಎಂದು ಹೇಳಿಸಿದ್ದನ್ನು ಮರೆತುಬಿಟ್ಟಿವೆ. ಆ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಮೋದಿ ಸರ್ಕಾರ ತಲಾ 20 ಲಕ್ಷ ಕೋಟಿ ರುಪಾಯಿಗಳಂತೆ 100 ಲಕ್ಷ ಕೋಟಿ ರುಪಾಯಿಗಳನ್ನು ವೆಚ್ಚ ಮಾಡಬೇಕಿದೆ. ಅಂದಹಾಗೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅಂದರೆ, 2020-21ನೇ ಸಾಲಿನಲ್ಲಿ 20 ಲಕ್ಷ ಕೋಟಿ ರುಪಾಯಿಗಳನ್ನು ಮೂಲಭೂತ ಸೌಲಭ್ಯಗಳ ಸೃಷ್ಟಿಗೆ ವಿನಿಯೋಗಿಸಬೇಕಿದೆ.

ಮೋದಿ ಘೋಷಿಸಿ ನೂರಾ ಐದು ದಿನಗಳಲ್ಲೇ ಇಡೀ ದೇಶವು 100 ಲಕ್ಷ ಕೋಟಿ ರುಪಾಯಿಗಳ ಬೃಹತ್ ಮೊತ್ತದ ಯೋಜನೆಯನ್ನು ಮರೆತೇ ಬಿಟ್ಟಿದೆ. ಮೋದಿ ಸರ್ಕಾರ ಈ ಮೊದಲ 105 ದಿನಗಳಲ್ಲಿ 20 ಲಕ್ಷ ಕೋಟಿ ರುಪಾಯಿಗಳ ಪೈಕಿ ಎಷ್ಟು ಲಕ್ಷ ಕೋಟಿ ರುಪಾಯಿಗಳನ್ನು ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಲು ವಿನಿಯೋಗಿಸಿದೆ ಎಂಬುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಮಾಧ್ಯಮಗಳೆಲ್ಲವೂ 20 ಲಕ್ಷ ಪ್ಯಾಕೇಜಿನ ಬಗ್ಗೆ ಲೆಕ್ಕಾಚಾರ ಹಾಕುತ್ತಾ ಸ್ವರ್ಗಸದೃಶ ಕಲ್ಪನಾಲೋಕ ಸೃಷ್ಟಿಸಲು ಯತ್ನಿಸುತ್ತಿವೆ.

ವಾಸ್ತವವಾಗಿ ಮೋದಿ ಘೋಷಿಸಿದ ಪ್ಯಾಕೇಜು ಪೂರ್ಣಹೊಸದಲ್ಲ ಮತ್ತು ಈ ಹಿಂದೆ ಘೋಷಿಸಿದ 6.5 ಲಕ್ಷ ಕೋಟಿ ವಿತ್ತೀಯ ಪ್ರೋತ್ಸಾಹ, ಸಾಲದ ಪ್ರೋತ್ಸಾಹ ಮತ್ತು ನಗದು ಪ್ರೋತ್ಸಾಹವನ್ನು ಒಳಗೊಂಡಿದೆ ಎಂಬುದನ್ನು ಯಾವ ಮಾಧ್ಯಮಗಳೂ ಜನರಿಗೆ ತಿಳಿ ಹೇಳುತ್ತಿಲ್ಲ.

ಅಷ್ಟಕ್ಕೂ ಮೋದಿ ಘೋಷಿಸಿದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿನ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಕಂತಿನಲ್ಲಿ ಸುಮಾರು 5.5 ಲಕ್ಷ ಕೋಟಿ ರುಪಾಯಿಗಳ ಲೆಕ್ಕವನ್ನು ವಿವರಿಸಿದ್ದಾರೆ. ಈ ಪೈಕಿ 3 ಲಕ್ಷ ಕೋಟಿ ರುಪಾಯಿಗಳು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗ್ಯಾರಂಟಿ ರಹಿತವಾಗಿ ಸಾಲ ನೀಡುವುದಾಗಿದೆ. ಅಂದರೆ, ಮೋದಿ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿಲ್ಲ, ನಗದು ನೀಡುತ್ತಿಲ್ಲ, ಕೇವಲ ಗ್ಯಾರಂಟಿ ರಹಿತ ಸಾಲ ನೀಡುತ್ತಿದೆ. ಇದೂ 3 ಲಕ್ಷ ಕೋಟಿ ರುಪಾಯಿಯ ಪ್ಯಾಕೇಜು!

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗ್ಯಾರಂಟಿ ರಹಿತವಾಗಿ ಸಾಲ ನೀಡುವುದು ಇದೇ ಹೊಸದೇನಲ್ಲ. ಮೋದಿ ಸರ್ಕಾರವೂ ಸೃಷ್ಟಿಸಿದ್ದೇನಲ್ಲ. ಯುಪಿಎ ಸರ್ಕಾರವು 2010ರಿಂದಲೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗ್ಯಾರಂಟಿ ರಹಿತವಾಗಿ ಸಾಲವನ್ನು ವಿತರಿಸುತ್ತಾ ಬಂದಿತ್ತು. 2010ರಲ್ಲಿ 11,560 ಕೋಟಿ ರುಪಾಯಿಗಳನ್ನು ಗ್ಯಾರಂಟಿ ರಹಿತ ಸಾಲವಾಗಿ ನೀಡಿತ್ತು. 2014ರಲ್ಲಿ 70026 ಕೋಟಿಗಳಷ್ಟು ಗ್ಯಾರಂಟಿ ರಹಿತ ಸಾಲ ನೀಡಲಾಗಿತ್ತು. ಮೋದಿ ಸರ್ಕಾರವು 2019ರಲ್ಲಿ 1,75,961 ಕೋಟಿ ಸಾಲ ನೀಡಿದೆ. ಗ್ಯಾರಂಟಿ ರಹಿತ ಸಾಲ ಎಂದರೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬ್ಯಾಂಕುಗಳು ಯಾವುದೇ ಕೊಲಾಟರಲ್ ಗ್ಯಾರಂಟಿ ಇಲ್ಲದೇ ಸಾಲ ನೀಡುತ್ತವೆ. ಆದರೆ, ಕೇಂದ್ರ ಸರ್ಕಾರವು ಗ್ಯಾರಂಟಿ ನೀಡುತ್ತದೆ. ಈಗ ನೋಡಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 3 ಲಕ್ಷ ಕೋಟಿ ರುಪಾಯಿ ಸಾಲ ನೀಡಲಾಗುತ್ತದೆ. ಈ ಸಾಲಕ್ಕೆ ಕೇಂದ್ರ ಸರ್ಕಾರ ಗ್ಯಾರಂಟಿ ನೀಡುತ್ತದೆ. ತಾನು ಗ್ಯಾರಂಟಿ ನೀಡುವ 3 ಲಕ್ಷ ರುಪಾಯಿಯನ್ನು ಪ್ರದಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿನಲ್ಲಿ ಸೇರಿಸಿದ್ದಾರೆ.

ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಮಾಡಿರುವ ಸಣ್ಣ ಬದಲಾವಣೆ ಎಂದರೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಒಟ್ಟಾರೆ ಹೂಡಿಕೆ ಮೊತ್ತವನ್ನು ಹಿಗ್ಗಿಸಿದೆ.

ಮೋದಿ ಸರ್ಕಾರದ ಲೆಕ್ಕಾಚಾರವನ್ನು ನೀವು ಮೆಚ್ಚಲೇ ಬೇಕು. ಟಿಡಿಎಸ್ (ಟ್ಯಾಕ್ಸ್ ಡಿಡಕ್ಷನ್ ಅಟ್ ಸೋರ್ಸ್- ಮೂಲದಲ್ಲೇ ತೆರಿಗೆ ಕಡಿತ) ಕಡಿತದ ಪ್ರಮಾಣವನ್ನು ಶೇ.25ರಷ್ಟು ತಗ್ಗಿಸಿದೆ. ಅಂದರೆ, ಇದನ್ನು ತನ್ನ ಪ್ಯಾಕೇಜಿಗೆ ಸೇರಿಸಿಕೊಂಡಿದೆ. ಟಿಡಿಎಸ್ ಕಡಿತ ಮಾಡಿದ್ದರೆ, ಆದಾಯ ವಿವರ ಸಲ್ಲಿಕೆ ಮಾಡಿದ ನಂತರ ಆದಾಯ ತೆರಿಗೆ ಇಲಾಖೆಯು ತೆರಿಗೆ ಇದ್ದರೆ ಕಡಿತ ಮಾಡಿ ಬಾಕಿಯನ್ನು ತಾನಾಗಿಯೇ ವಾಪಸ್ ನೀಡುತ್ತದೆ. ಆದರೆ, ಮೋದಿ ಸರ್ಕಾರಕ್ಕೆ ಇದೂ ಒಂದು ಪ್ಯಾಕೇಜ್.

ಕಾರ್ಮಿಕರು ತಮ್ಮ ಇಪಿಎಫ್ (ಕಾರ್ಮಿಕರ ಭವಿಷ್ಯ ನಿಧಿ) ಖಾತೆಯಲ್ಲಿರುವ ಹಣವನ್ನು ಮೂರು ತಿಂಗಳ ವೇತನಕ್ಕೆ ಸರಿಸಮನಾಗಿ ಅಥವಾ ಖಾತೆಯಲ್ಲಿರುವ ಹಣದ ಪೈಕಿ ಶೇ.50ರಷ್ಟನ್ನು ವಾಪಸ್ ಪಡೆಯಬಹುದು. ಇದನ್ನು ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸಿದೆ. ಕೆಲಸ ಕಳೆದುಕೊಂಡ ಅಥವಾ, ಸಂಬಳ ಕಡಿತ ಆದವರಿಗೆ ಈ ಹೊತ್ತಿನಲ್ಲಿ ಇದರಿಂದ ಅನುಕೂಲವಾಗುತ್ತದೆ. ನಿಜಾ, ಆದರೆ, ಕಾರ್ಮಿಕರು, ವೇತನದಾರರು, ತಮ್ಮ ಇಪಿಎಫ್ ಖಾತೆಯಿಂದ ತಮ್ಮದೇ ದುಡ್ಡು ಪಡೆದುಕೊಂಡರೆ, ಅದನ್ನೂ ಮೋದಿ ಅವರು ತಮ್ಮ ಪ್ಯಾಕೇಜಿಗೆ ಸೇರಿಸಿಕೊಳ್ಳುವುದು ಎಷ್ಟು ಸರಿ?

ಮೋದಿ ಸರ್ಕಾರವು 15,000 ರುಪಾಯಿಗಿಂತ ಕಡಮೆ ವೇತನ ಪಡೆಯುತ್ತಿರುವ ಸಂಘಟಿತ ವಲಯದ ಕಾರ್ಮಿಕರಿಗೆ ಶೇ.12ರಷ್ಟು ಮೊತ್ತವನ್ನು ಭವಿಷ್ಯ ನಿಧಿ ಖಾತೆಗೆ ತಾನೇ ಕಾರ್ಮಿಕರ ಪಾಲು ಮತ್ತು ಉದ್ಯಮದ ಪಾಲನ್ನು ಪಾವತಿಸುವುದಾಗಿ ಘೋಷಿಸಿದೆ. ಈಗಾಗಲೇ ಈ ಯೋಜನೆ ಚಾಲ್ತಿಯಲ್ಲಿದೆ. ಇದಕ್ಕಾಗಿ ಸಾವಿರಾರು ಕೋಟಿ ವಿನಿಯೋಗಿಸುತ್ತಿರುವುದಾಗಿ ಮೋದಿ ಸರ್ಕಾರ ಹೇಳಿಕೊಂಡಿದೆ.

ಆದರೆ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿ ಬರುವ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯು 2020 ಮೇ 8 ರಂದು ಹೊರಡಿಸಿರುವ ತುಟ್ಟಿಭತ್ಯೆ ಪರಿಷ್ಕರಣೆ ಆದೇಶದಂತೆ (ಸಂಖ್ಯೆ:ನಂ.1 ವಿಡಿಎ(2)2020-ಎಲ್ಎಸ್. ಅಧಿಸೂಚನೆ ಸಂಖ್ಯೆ:ಎಸ್.ಒ 2413 (ಇ)) ಬಹುತೇಕ ಸಂಘಟಿತ ವಲಯಗಳಲ್ಲಿ ದುಡಿಯುವತ್ತಿರುವ ಕಾರ್ಮಿಕರ ವೇತನವು 15,000 ರುಪಾಯಿ ದಾಟಿ ಬಿಟ್ಟಿದೆ. ಅಂದರೆ, ಮೋದಿ ಸರ್ಕಾರ ಹೇಳುವುದೇನೆಂದರೆ- ಯಾರ ವೇತನವು 15,000 ರುಪಾಯಿಗಿಂತ ಕಡಮೆ ಇದೆಯೋ ಅಂತಹ ವೇತನದಾರರ ಇಪಿಎಫ್ ಮೊತ್ತವನ್ನು ತಾನು ಭರಿಸುವುದಾಗಿ ಹೇಳುತ್ತಿದೆ. ಈ ಉದ್ದೇಶಕ್ಕಾಗಿ ಸುಮಾರು 6000 ಕೋಟಿ ರುಪಾಯಿ ವಿನಿಯೋಗಿಸುತ್ತಿರುವುದಾಗಿಯೂ ಹೇಳುತ್ತಿದೆ. ಇದರಲ್ಲೇನೋ ಹಾದಿ ತಪ್ಪಿಸುವ ಕರಾಮತ್ತು ಇರುವಂತಿದೆ. ಮೋದಿ ಸರ್ಕಾರಕ್ಕೆ ನಿಜಕ್ಕೂ ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ, ಯಾವ ವೇತನದಾರರಿಗೆ 20,000 ಮತ್ತು ಅದಕ್ಕಿಂತ ಕಡಮೆ ವೇತನ ಬರುತ್ತಿದೆಯೋ ಅವರೆಲ್ಲರ ಇಪಿಎಫ್ ಅನ್ನು ಭರಿಸಲಿ. ಆಗ ನಿಜಕ್ಕೂ ಕಡಮೆ ವೇತನ ಪಡೆಯುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ.

ಇದರ ಜತೆಗೆ ವೇತನದಾರರು ಕಾರ್ಮಿಕರು ಕಡ್ಡಾಯವಾಗಿ ಪಾವತಿಸಬೇಕಾದ ಇಪಿಎಫ್ ಪ್ರಮಾಣವನ್ನು ಕೆಲವು ತಿಂಗಳ ಮಟ್ಟಿಗೆ ಶೇ.12ರಿಂದ ಶೇ.10ಕ್ಕೆ ತಗ್ಗಿಸಿದೆ. ಇದರಿಂದ ಕಾರ್ಮಿಕರ ಕೈಯಲ್ಲಿ ಹೆಚ್ಚಿನ ಹಣ ಉಳಿತಾಯವಾಗುತ್ತದೆಂತೆ! ಮೋದಿ ಸರ್ಕಾರ ಹೇಗೆ ಯಾಮಾರಿಸುತ್ತದೆ ನೋಡಿ. ಒಬ್ಬ ವೇತನದಾರ 30,000 ರುಪಾಯಿ ವೇತನ ಪಡೆಯುತ್ತಾನೆ. ಈ ಪೈಕಿ ಮೂಲ ವೇತನ ಮತ್ತು ಡಿಎ ಸೇರಿ ಸುಮಾರು 20,000 ರುಪಾಯಿ ಇದೆ ಎಂದಾದರೆ, ಆತನ ವೇತನದಿಂದ ಕಡ್ಡಾಯವಾಗಿ ಕಡಿತ ಮಾಡುವ ಇಪಿಎಫ್ ಶೇ.12 ರಂತ 2400 ರುಪಾಯಿ. ಈ ಪೈಕಿ ಶೇ.10ರಷ್ಟು ಮಾತ್ರ ಕಡಿತ ಮಾಡಿದರೆ 2000 ರುಪಾಯಿ ಆಗುತ್ತದೆ. ಕಾರ್ಮಿಕನಿಗೆ 400 ರುಪಾಯಿ ಉಳಿತಾಯವಾಗುತ್ತದೆ. ಮೂರು ತಿಂಗಳಲ್ಲಿ 1200 ರುಪಾಯಿ ಉಳಿತಾಯವಾಗುತ್ತದೆ. ಅದು ಸರ್ಕಾರ ಕೊಡುವ ದುಡ್ಡಲ್ಲ. ಕಾರ್ಮಿಕನ ಭವಿಷ್ಯ ನಿಧಿಯ ದುಡ್ಡು. ತನ್ನ ಭವಿಷ್ಯ ನಿಧಿಯನ್ನು ಈಗಲೇ ವೆಚ್ಚ ಮಾಡುವುದು ಸೂಕ್ತವೂ ಅಲ್ಲ. ಇಷ್ಟಾದರೂ ಈ ದುಡ್ಡನ್ನು ಮೋದಿ ಸರ್ಕಾರ ತನ್ನ ಪ್ಯಾಕೇಜಿನಲ್ಲಿ ಸೇರಿಸುತ್ತದೆ.

ನಿರ್ಮಲಾ ಸೀತಾರಾಮನ್ ಅವರು 41 ಕೋಟಿ ಜನರ ಜನ್ ಧನ್ ಖಾತೆಗೆ 56,606 ಕೋಟಿ ರುಪಾಯಿ ನಗದು ಪಾವತಿಸಲಾಗಿದೆ ಎಂದು ಹೇಳಿದ್ದಾರೆ. ಈ ಮೊತ್ತವು ಹೊಸದಾಗಿ ನೀಡಿದ್ದಲ್ಲ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೀಡುವ ಸಬ್ಸಿಡಿಯನ್ನು ನಗದು ಮೂಲಕ ನೇರವಾಗಿ ಖಾತೆಗೆ ಪಾವತಿಸುವ ಮೊತ್ತ ಇದು. ಇದು ಪ್ಯಾಕೇಜಿಗೆ ಸೇರಿದೆ.

ಮೋದಿ ಘೋಷಿಸಿದ ಪ್ಯಾಕೇಜಿನಲ್ಲಿ ಇಂತಹವೇ ಹಲವು ಲೆಕ್ಕಾಚಾರದ ಗಿಮಿಕ್ಕುಗಳಿವೆ. ನಿರ್ಮಲಾ ಸೀತಾರಾಮನ್ ಈಗಿನ್ನು 20 ಲಕ್ಷ ಕೋಟಿ ಪೈಕಿ 5.5 ಲಕ್ಷ ಕೋಟಿಯ ವಿವರ ನೀಡಿದ್ದಾರೆ. ಮುಂದೆ ನೀಡುವ ವಿವರಗಳಲ್ಲಿ ಅದೇನೇನು ಗಿಮಿಕ್ಕುಗಳಿರುತ್ತವೋ?! ಕಾದುನೋಡಬೇಕಿದೆ!

Click here Support Free Press and Independent Journalism

Pratidhvani
www.pratidhvani.com