ರಾಜ್‌ಘಾಟ್‌ ನಲ್ಲಿ ವಲಸೆ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಏಕಾಂಗಿ ಪ್ರತಿಭಟನೆ ನಡೆಸಿದ ವ್ಯಕ್ತಿ
ರಾಷ್ಟ್ರೀಯ

ರಾಜ್‌ಘಾಟ್‌ ನಲ್ಲಿ ವಲಸೆ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಏಕಾಂಗಿ ಪ್ರತಿಭಟನೆ ನಡೆಸಿದ ವ್ಯಕ್ತಿ

ವಲಸೆ ಕಾರ್ಮಿಕರ ಸ್ಥಿತಿಗೆ ಮಮ್ಮಲ ಮರುಗಿದ ಸಮಾಜ ಸೇವಕ ಪ್ರವೀಣ್ ಕಾಶಿ ಎಂಬುವವರು ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್‌ನಲ್ಲಿ ಉಪವಾಸದ ಕುಳಿತಿದ್ದಾರೆ. ಅವರು ಸರ್ಕಾರದ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಇವರ ಉಪವಾಸ ಸತ್ಯಾಗ್ರಹದ ಸುದ್ದಿ ಯೂ ಟ್ಯೂಬ್‌ನಲ್ಲಿ ಪ್ರಕಟಗೊಂಡ ಕೂಡಲೇ ಪೋಲೀಸರು ಇವರ ಬಳಿ ತೆರಳಿ ಪ್ರತಿಭಟನೆ ನಡೆಸಲು ಅವಕಾಶ ಇಲ್ಲವೆಂದು ಇವರನ್ನು ಎತ್ತಿಕೊಂಡು ಬೇರೆಡೆ ಸಾಗಿಸಿದರು. 

ಕೋವರ್ ಕೊಲ್ಲಿ ಇಂದ್ರೇಶ್

ಇಡೀ ವಿಶ್ವವೇ ಕರೋನಾ ಸೋಂಕಿನ ಭೀತಿಗೆ ತತ್ತರಿಸಿದ್ದು ದೈನಂದಿನ ಜನಜೀವನವೇ ಸ್ತಬ್ದವಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಇಡೀ ದೇಶಾದ್ಯಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದಿಢೀರನೆ ಲಾಕ್‌ ಡೌನ್‌ ಘೋಷಿಸಿದರು. ಈ ರೀತಿ ದಿಢೀರ್‌ ಘೋಷಣೆಯಿಂದ ಪ್ರತಿಯೊಬ್ಬರೂ ತಾವು ಇದ್ದ ಸ್ಥಳದಲ್ಲೇ ಇರಬೇಕಾಯಿತು. ಇದರಿಂದಾಗಿ ಅತ್ಯಂತ ತೊಂದರೆಗೆ ಸಿಲುಕಿಕೊಂಡವರೆಂದರೆವಲಸೆ ಕಾರ್ಮಿಕರು. ಮೂರು ಹೊತ್ತಿನ ಊಟಕ್ಕಾಗಿಯೇ ಕುಟುಂಬ ಸಹಿತ ಸಾವಿರಾರು ಕಿಲೋಮೀಟರ್‌ ದೂರ ಪ್ರಯಾಣಿಸುವ ಈ ಬಡಪಾಯಿ ಕೂಲಿ ಕಾರ್ಮಿಕರದ್ದು ಅತಂತ್ರ ಬದುಕು. ಪ್ರತಿದಿನದ ಊಟಕ್ಕಾಗಿ ಇವರು ಹೋರಾಟ ಮಾಡಬೇಕಾಗಿದೆ.

ದೇಶದಲ್ಲಿ ಛತ್ತೀಸ್‌ಘಡ, ಬಿಹಾರ, ಜಾರ್ಖಂಡ್‌ , ಒಡಿಶಾ ಹಾಗೂ ಪಶ್ಚಿಮ ಬಂಗಾಳದಿಂದ ಹೆಚ್ಚು ಜನ ವಲಸೆ ಕಾರ್ಮಿಕರು ದಕ್ಷಿಣದ ಮಹಾನಗರಗಳಿಗೆ ಮತ್ತು ರಾಷ್ಟ್ರ ರಾಜಧಾನಿಗೆ ವಲಸೆ ಹೋಗುತ್ತಾರೆ. ಮಹಾನಗರಗಳಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಚಟುವಟಿಕೆಯೇ ಇವರ ಬದುಕಿನ ಮತ್ತು ಉದ್ಯೋಗದ ಆಧಾರವಾಗಿದೆ. ಪುಟ್ಟ ಮಕ್ಕಳನ್ನೂ ಕಟ್ಟಿಕೊಂಡು ಇವರು ಕೋಳಿ ಗೂಡಿನಂತ ಶೆಡ್‌ ಗಳಲ್ಲಿ ಬದುಕುತಿದ್ದಾರೆ. ಬದುಕಿಗಾಗಿ ಇವರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನೂ ತ್ಯಾಗ ಮಾಡಬೇಕಾಗಿದೆ. ಇವರದ್ದು ಅಸಂಘಟಿತ ವಲಯವಾದ್ದರಿಂದ ಎಷ್ಟು ವರ್ಷ ದುಡಿದರೂ ಇವರಿಗೆ ಸಿಗಬೇಕಾದ ಸವಲತ್ತು ಕನಿಷ್ಟ ಪಿಎಫ್‌ ಕೂಡ ಸಿಗುತ್ತಿಲ್ಲ. ವಾಸಿಸಲೇ ಆಗದಂತಹ ಶೆಡ್‌ಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿರುವ ಇವರಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿಕೊಡಲು ಇವರಿಂದ ದುಡಿಸಿಕೊಳ್ಳುತ್ತಿರುವ ಮಾಲಿಕ ವರ್ಗ ಎಂದಿಗೂ ಗಮನ ಹರಿಸಿಲ್ಲ.

ಸರ್ಕಾರ ಇದ್ದಕ್ಕಿದ್ದಂತೆ ಲಾಕ್‌ ಡೌನ್‌ ಘೋಷಿಸಿದ ನಂತರ ಇವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಸರ್ಕಾರವೇನೋ ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಡಿ, ಅವರಿಗೆ ಪೂರ್ಣ ಸಂಬಳ ಕೊಡಿ ಎಂದು ಸೂಚನೆ ಕೊಟ್ಟಿದೆ. ಆದರೆ ಇದನ್ನು ಪಾಲಿಸುವವರಾದರೂ ಯಾರು? ಇಂದು ಕಟ್ಟಡ ನಿರ್ಮಾಣದ ಸಿಮೆಂಟ್‌, ಕಬ್ಬಿಣ ಇನ್ನಿತರ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ನಿರ್ಮಾಣ ಕಾಮಗಾರಿಯೂ ಸ್ಥಗಿತಗೊಂಡಿದೆ. ಹೀಗಿರುವಾಗ ಇವರಿಗೆ ಕಟ್ಟಡ ನಿರ್ಮಾಣ ಉದ್ಯಮಿಗಳು ಕೆಲಸ ಕೊಡುವುದು ಸಾಧ್ಯವೇ? ಲಾಕ್‌ ಡೌನ್‌ ಘೋಷಣೆಯ ನಂತರ ಈ ವಲಸೆ ಕಾರ್ಮಿಕರದ್ದು ಬೆಂಕಿಗೆ ಬಿದ್ದ ಅನುಭವ. ಇವರಿಗೆ ಉಳಿದುಕೊಳ್ಳಲು ವ್ಯವಸ್ಥೆಯೇ ಇಲ್ಲ. ಮುಂಬೈ ಮಹಾನಗರದಲ್ಲಿ ಒಂದೇ ಜೋಪಡಿಯಲ್ಲಿ 10-12 ಜನ ಉಳಿದುಕೊಂಡಿದ್ದಾರೆ. ಇವರ ಬಳಿ ಪಡಿತರ ಚೀಟಿ ಇಲ್ಲದುದ್ದರಿಂದ ಪಡಿತರವೂ ಸಿಗುತ್ತಿಲ್ಲ. ಅವರಿವರು ದಾನ ನೀಡಿದ ಪಡಿತರ ಎಷ್ಟು ದಿನ ಬಂದೀತು? ಆಹಾರ ಸರಬರಾಜು ಮಾಡುವವರು ಎಷ್ಟು ದಿನ ಕೊಟ್ಟಾರು? ಒಂದು ಬಾರಿ ಈ ಊರನ್ನು ತೊರೆದು ತವರಿಗೆ ಹೋಗುವ ತವಕ ಇವರಿಗೆ. ಆದರೆ ತಲುಪುವ ಬಗೆ ಹೇಗೆ?

ರೈಲು ಹಳಿಗಳ ಮೇಲೆ ನೂರಾರು ಕಿಲೋಮೀಟರ್‌ ನಡೆದು, ಸೈಕಲ್‌ ಮೇಲೆ ನೂರಾರು ಕಿಲೋಮೀಟರ್‌ ಕ್ರಮಿಸಿ ಊರು ತಲುಪಿಕೊಂಡವರಿದ್ದಾರೆ. ಆದರೆ ಊರು ತಲುಪುವದಕ್ಕೂ 10 ಕಿಲೋಮೀಟರ್‌ ಇದೆ ಎನ್ನುವಾಗ ಕುಸಿದು ಬಿದ್ದು ಮೃತಪಟ್ಟ ಬಾಲಕಿ, ನಡೆಯುವಾಗಲೇ ಕುಸಿದು ಬಿದ್ದು ಮೃತರಾದವರು, ತಿಂಡಿ ತಿನ್ನಲು ಕಟ್ಟೆ ಮೇಲೆ ಕೂತಿದ್ದಾಗ ಕಾರು ಢಿಕ್ಕಿ ಹೊಡೆದು ಮೊನ್ನೆ ಮೃತರಾದ ಇಬ್ಬರು ಕಾರ್ಮಿಕರು , ರೈಲು ಹಳಿಯ ಮೇಲೆ ಮಲಗಿ ,ಕಟ್ಟಿಕೊಂಡು ಬಂದಿದ್ದ ರೊಟ್ಟಿಯನ್ನೂ ತಿನ್ನದೆ ಮೃತರಾದ 16 ಜನ ವಲಸೆ ಕಾರ್ಮಿಕರ ಕರುಣಾಜನಕ ಕಥೆಗಳು ಎಂತಹವರಿಗಾದರೂ ಕರುಳು ಹಿಂಡುತ್ತವೆ.

ವಲಸೆ ಕಾರ್ಮಿಕರ ಸ್ಥಿತಿಗೆ ಮಮ್ಮಲ ಮರುಗಿದ ಸಮಾಜ ಸೇವಕ ಪ್ರವೀಣ್ ಕಾಶಿ ಎಂಬುವವರು ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್‌ನಲ್ಲಿ ಉಪವಾಸದ ಕುಳಿತಿದ್ದಾರೆ. ಅವರು ಸರ್ಕಾರದ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಕಾರ್ಮಿಕರಿಗೆ ಮುಖ ಗವುಸುಗಳು ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸುವುದು. ಕರೋನಾ ವೈರಸ್ ಹರಡುವುದನ್ನು ತಡೆಯಲು ಕಾರ್ಮಿಕರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಒದಗಿಸುವುದು; ಅವರಿಗೆ ಪಡಿತರ ಮತ್ತು ಆಹಾರವನ್ನು ಒದಗಿಸುವುದು; ಕೆಲಸ ಇಲ್ಲದಿರುವ ವಲಸೆ ಕಾರ್ಮಿಕರಿಗೆ ಭತ್ಯೆಯಾಗಿ ದಿನಕ್ಕೆ 250 ರೂ.ಪರಿಹಾರ ನೀಡಬೇಕೆಂಬುದು ಇವರ ಹಕ್ಕೊತ್ತಾಯವಾಗಿದೆ.

ತಮ್ಮ ಅಮರಣಾಂತ ಉಪವಾಸ ಸತ್ಯಾಗ್ರಹದ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಪ್ರವೀಣ್ ಕಾಶಿ ಅವರು, ಕಾಶಿಯನ್ನು ಭೇಟಿಯಾಗಲು ಹೋದಾಗ, ದೆಹಲಿಯ ಯಮುನಾ ಸೇತುವೆ, ವಿಕಾಸ್ ಮಾರ್ಗದಲ್ಲಿ ನಿಲ್ಲಿಸಲ್ಪಟ್ಟ ನೂರಾರು ವಲಸೆ ಕಾರ್ಮಿಕರನ್ನು ಸಹ ನಾವು ನೋಡಿದೆವು. ಅವರು ಮನೆಗೆ ಹೋಗಲು ಅವರ ಹತಾಶೆ ಮತ್ತು ಅವರ ಅನಿಶ್ಚಿತ ಭವಿಷ್ಯದ ಬಗ್ಗೆ ಅವರ ಭಯ ಮತ್ತು ಆತಂಕಗಳ ಬಗ್ಗೆ ಮಾತನಾಡಿದರು. ಕಾರ್ಮಿಕರು ಏಕೆ ತಮ್ಮ ಹುಟ್ಟೂರಿಗೆ ತೆರಳುತಿದ್ದಾರೆ ಎಂಬುದನ್ನು ಸರ್ಕಾರ ಮನದಟ್ಟು ಮಾಡಿಕೊಳ್ಳಬೇಕು ಎಂದ ಅವರು ಸರ್ಕಾರ ಕಾರ್ಮಿಕರಿಗೆ ಸೂಕ್ತ ವಸತಿ, ಊಟ ನೀಡಿದ್ದರೆ ಅವರು ಕದ್ದು ಮುಚ್ಚಿ , ಅವಿತುಕೊಂಡು ಸಾವಿರಾರು ಕಿಲೋಮೀಟರ್‌ ವಲಸೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹೇಳಿದರು. ಅವರಿಗೆ ಆರೋಗ್ಯ ಸೌಲಭ್ಯವೂ ಇಲ್ಲ ಎಂದು ಹೇಳಿದ ಕಾಶೀ ಅವರು ಇಂದು ಲಕ್ಷಾಂತರ ಕಾರ್ಮಿಕರು ಖಾಲಿ ಹೊಟ್ಟೆಯಲ್ಲಿ ನಡೆದುಕೊಂಡೇ ತವರು ತಲುಪುವ ದುಸ್ಸಾಹಸ ಮಾಡುತಿದ್ದಾರೆ.

ಅಧಿಕಾರದಲ್ಲಿರುವವರಿಗೆ ಇವರ ಕೂಗು ಏತಕ್ಕೆ ತಲುಪುತ್ತಿಲ್ಲ ? ದೇಶದಲ್ಲಿ ಎಲ್ಲರಿಗೂ ಆಹಾರ ಇದ್ದೇ ಇದೆ. ಇದರ ಕೊರತೆಯೇನೂ ಇಲ್ಲ, ಹೀಗಿರುವಾಗ ಇವರು ಮಾತ್ರ ಏಕೆ ಹಸಿದುಕೊಂಡಿದ್ದಾರೆ ಎಂದು ಸರ್ಕಾರ ಗಮನಿಸಬೇಕಿದೆ ಎಂದು ಅವರು ಹೇಳಿದರು. ಇವರ ಉಪವಾಸ ಸತ್ಯಾಗ್ರಹದ ಸುದ್ದಿ ಯೂ ಟ್ಯೂಬ್‌ ನಲ್ಲಿ ಪ್ರಕಟಗೊಂಡ ಕೂಡಲೇ ಪೋಲೀಸರು ಇವರ ಬಳಿ ತೆರಳಿ ಪ್ರತಿಭಟನೆ ನಡೆಸಲು ಅವಕಾಶ ಇಲ್ಲವೆಂದು ಇವರನ್ನು ಎತ್ತಿಕೊಂಡು ಬೇರೆಡೆ ಸಾಗಿಸಿದರು.

ಆದರೆ ವಲಸೆ ಕಾರ್ಮಿಕರ ಸದ್ಯದ ಪರಿಸ್ತಿತಿಗೆ ಸರ್ಕಾರ ಸ್ಪಂದಿಸಿ ಅವರಿಗೆ ಸೂಕ್ತ ಊಟ, ಭತ್ಯೆ ನೀಡುವವರೆಗೂ ತಮ್ಮ ಹೋರಾಟ ಅವಿರತ ಎಂದು ಕಾಶಿ ಸ್ಪಷ್ಟಪಡಿಸಿದ್ದು ಪುನಃ ಅದೇ ಸ್ಥಳದಲ್ಲೇ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತಿದ್ದಾರೆ. ಇವರ ಗಾಂಧಿ ಮಾರ್ಗದ ಸತ್ಯಾಗ್ರಹಕ್ಕೆ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂಬುದೇ ಲಕ್ಷಾಂತರ ವಲಸೆ ಕಾರ್ಮಿಕರ ಒಡಲಾಳದ ಕೂಗು

Click here Support Free Press and Independent Journalism

Pratidhvani
www.pratidhvani.com