₹20 ಲಕ್ಷ ಕೋಟಿ ಪ್ಯಾಕೇಜ್: ಎಷ್ಟು ಸುಳ್ಳು? ಎಷ್ಟು ಸತ್ಯ?
ರಾಷ್ಟ್ರೀಯ

₹20 ಲಕ್ಷ ಕೋಟಿ ಪ್ಯಾಕೇಜ್: ಎಷ್ಟು ಸುಳ್ಳು? ಎಷ್ಟು ಸತ್ಯ?

ಮೋದಿ ಘೋಷಿಸಿದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿನ ವಿವರಗಳನ್ನು ತಕ್ಷಣವೇ ನೀಡವುದಿಲ್ಲ. ಮೋದಿ ಏನೋ ಅದ್ಭುತ ಮಾಡಿದ್ದಾರೆ ಎಂಬುದನ್ನು ಜನರು ತಿಳಿಯಬೇಕು. ಅದು ‘ಸುಳ್ಳಾದರೂ ಸರಿ’ಯೇ ಅದನ್ನು ಜನರು ನಂಬಬೇಕು.

ರೇಣುಕಾ ಪ್ರಸಾದ್ ಹಾಡ್ಯ

ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ಮತ್ತು ಪ್ರಧಾನಿ ಆದ ನಂತರ ಘೋಷಿಸಿದ ‘ಅಂಗೈಯಲ್ಲಿ ಅರಮನೆ’ ತೋರಿಸುವಂತಹ ಭರವಸೆಗಳು ಇದುವರೆಗೆ ಈಡೇರಿದ ಉದಾಹರಣೆಗಳಿಲ್ಲ. ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ದೇಶದ ಎಲ್ಲಾ ಜನರ ಖಾತೆಗೆ 15 ಲಕ್ಷ ರುಪಾಯಿ ಹಾಕುವುದಾಗಲಿ, ಅಪನಗದೀಕರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಸರಿದಾರಿಗೆ ಬರುತ್ತದೆ ಎಂಬುದಾಗಲೀ, ಜಿಎಸ್‌ಟಿ ಜಾರಿಯಿಂದಾಗಿ ದೇಶದ ತೆರಿಗೆ ಸಂಗ್ರಹ ಬೃಹತ್ ಪ್ರಮಾಣದಲ್ಲಿ ಹೆಚ್ಚಳವಾಗಿ ದೇಶ ಸಮೃದ್ಧವಾಗುತ್ತದೆ ಎಂಬುದಾಗಲೀ- ಯಾವುದೂ ಈಡೇರಿಲ್ಲ.

ಕರೋನಾ ಸೋಂಕು ಹರಡುವ ಮುನ್ನವೇ ನಮ್ಮ ದೇಶದ ಆರ್ಥಿಕತೆಗೆ ‘ಹಿಂಜರಿತ’ದ ಸೋಂಕು ತಗುಲಿತ್ತು. ಜಿಡಿಪಿ ಶೇ.5ಕ್ಕಿಂತ ಕೆಳಮಟ್ಟಕ್ಕೆ ಇಳಿದಿತ್ತು. ನಮ್ಮದೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹ ಜಿಡಿಪಿ ಅಭಿವೃದ್ಧಿ ಶೇ.5ರ ಆಜುಬಾಜಿನಲ್ಲಿರುತ್ತದೆ ಎಂದು ಮುನ್ನಂದಾಜು ಮಾಡಿತ್ತು. ವಿಶ್ವಬ್ಯಾಂಕ್, ಐಎಂಎಫ್ ಮತ್ತು ಇತರ ರೇಟಿಂಗ್ ಏಜೆನ್ಸಿಗಳು ಅದಕ್ಕಿಂತಲೂ ಕಡಮೆ ಪ್ರಮಾಣದ ಮುನ್ನಂದಾಜು ಮಾಡಿದ್ದವು. ಇಂತಹ ಸಮಯದಲ್ಲಿ ಕರೋನಾ ಸೋಂಕು ಹರಡಿದ್ದರಿಂದಾಗಿ ಮೋದಿ ಆಡಳಿತದಿಂದಾಗಿ ದೇಶದ ಹದಗೆಟ್ಟ ಆರ್ಥಿಕತೆಯ ಬಗೆಗಿನ ಚರ್ಚೆಯು ಹಿನ್ನೆಲೆಗೆ ಸರಿದು, ಕರೋನಾ ಸೋಂಕು ಪರಿಣಾಮ ಘೋಷಿಸಿದ ಲಾಕ್‌ಡೌನ್‌ ಕಾರಣದಿಂದಾಗುತ್ತಿರುವ ಆರ್ಥಿಕ ಹಿಂಜರಿತದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ.

ಮೋದಿ ಸರ್ಕಾರವು ಲಾಕ್‌ಡೌನ್‌ ಅನ್ನು ಎಷ್ಟು ನಿರ್ದಯವಾಗಿ, ಅಮಾನವೀಯವಾಗಿ ನಿರ್ವಹಿಸಿದೆ ಎಂಬುದನ್ನು ತಮ್ಮ ಗೂಡು ಸೇರಿಕೊಳ್ಳಲು ಇನ್ನೂ ರಸ್ತೆಯ ಮೇಲೆ ಬರಿಗಾಲಲ್ಲೇ ತೆರಳುತ್ತಿರುವ ಲಕ್ಷಾಂತರ ಮಂದಿ ‘ನಿರ್ಗತಿಕರಾಗಿರುವ’ ವಲಸೆ ಕಾರ್ಮಿಕರ ಸ್ಥಿತಿಗತಿಗಳೇ ಸಾರಿ ಹೇಳುತ್ತಿವೆ.

ಇಂತಿಪ್ಪ ಮೋದಿ ಮೇ 12ರಂದು ಎಂದಿನಂತೆ ಪ್ರೈಮ್ ಟೈಮ್ ನಲ್ಲಿ 20 ಲಕ್ಷ ಕೋಟಿ ರುಪಾಯಿಗಳ ಪ್ಯಾಕೇಜು ಘೋಷಣೆ ಮಾಡಿದ್ದಾರೆ. ಅದು ಎಷ್ಟು? ಏನು? ಎತ್ತಾ? ಎಂಬುದನ್ನು ಮಾತ್ರ ಹೇಳಿಲ್ಲ. ಅದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರೈಮ್ ಟೈಮ್ ನಲ್ಲಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ನಿಂದಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅಕ್ಷರಷಃ ಅಪ್ರಸ್ತುತವಾಗಿದೆ. ಏಕೆಂದರೆ ನಮ್ಮ 2020-21 ಸಾಲಿನ ಬಜೆಟ್ ಗಾತ್ರವೇ 30.42 ಲಕ್ಷ ಕೋಟಿ. ಮೋದಿ ಸರ್ಕಾರ ಘೋಷಿಸಿರುವ ಪ್ಯಾಕೇಜಿನ ಗಾತ್ರವೇ 20 ಲಕ್ಷ ಕೋಟಿ ರುಪಾಯಿ. ಯಾಕೆ ಅಪ್ರಸ್ತುತ ಎಂದರೆ, 30.42 ಲಕ್ಷ ಕೋಟಿ ಬಜೆಟ್ ಮಂಡಿಸಿರುವ ನರೇಂದ್ರಮೋದಿ ಸರ್ಕಾರವು ಪ್ರಸಕ್ತ ವರ್ಷದಲ್ಲಿ ಪಡೆಯಲಿರುವ ಸಾಲದ ಮೊತ್ತವೇ 12 ಲಕ್ಷ ಕೋಟಿ ರುಪಾಯಿ. ಅಂದರೆ, 12 ಲಕ್ಷ ಕೋಟಿಯನ್ನು ಬಜೆಟ್ ಮೊತ್ತದಿಂದ ಕಳೆದರೆ ಉಳಿಯುವುದು 20.42 ಲಕ್ಷ ಕೋಟಿ. ಹಾಗೆಯೇ ಪ್ಯಾಕೇಜು ಗಾತ್ರವೂ 20 ಲಕ್ಷ ಕೋಟಿ

ಮೋದಿ ಇಷ್ಟೊಂದು ದುಡ್ಡು ಎಲ್ಲಿಂದ ತರ್ತಾರೆ?

ಮೋದಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜು ಬೃಹತ್ ಮೊತ್ತದ್ದು. ನಮ್ಮ ಜಿಡಿಪಿಯ ಶೇ.10ರಷ್ಟು! ಹೊರಗಿನಿಂದ ಪಡೆಯುವ ಸಾಲವನ್ನು ಹೊರತುಪಡಿಸಿದರೆ, ನಮ್ಮ ಬಜೆಟ್ ಗಾತ್ರದಷ್ಟು. ಈ ಬೃಹತ್ ಪ್ರಮಾಣದ ಹಣವನ್ನು ಮೋದಿ ಎಲ್ಲಿಂದ ತರ್ತಾರೆ? ವಾಸ್ತವವಾಗಿ ಮೋದಿ ಸರ್ಕಾರ 20 ಲಕ್ಷ ಕೋಟಿಯನ್ನು ಹೊಸದಾಗಿ ಕೊಡುತ್ತಿಲ್ಲ ಮತ್ತು ಎಲ್ಲಿಂದಲೂ ತರುತ್ತಿಲ್ಲ. ಹಳೆ ಲೆಕ್ಕಗಳನ್ನು ಹೊಂದಾಣಿಕೆ ಮಾಡುತ್ತದೆ. ಯುಪಿಎ ಸರ್ಕಾರದ ಡಜನ್ನುಗಟ್ಟಲೆ ಯೋಜನೆಗಳನ್ನು ಹೊಸ ಹೆಸರಿಟ್ಟು ತನ್ನದೆಂದು ಘೋಷಿಸಿಕೊಂಡಿಲ್ಲವೇ? ಅದೇ ರೀತಿ ಹಳೆಯ ಪ್ಯಾಕೇಜುಗಳನ್ನು ಈ 20 ಲಕ್ಷ ಕೋಟಿ ಪ್ಯಾಕೇಜಿಗೆ ಸೇರಿಸುತ್ತದೆ.

ಕರೋನಾ ಸೋಂಕು ಹರಡಿದ ನಂತರ ಮೋದಿ ಸರ್ಕಾರ ಘೋಷಿಸಿದ ಪ್ಯಾಕೇಜು 1.70 ಲಕ್ಷ ಕೋಟಿ ರುಪಾಯಿಗಳು ನಂತರ ಕಂತಿನಲ್ಲಿ ಘೋಷಿಸಿದ 30 ಸಾವಿರ ಪ್ಯಾಕೇಜು ಸೇರಿ 2 ಲಕ್ಷ ರುಪಾಯಿಗಳು. ಇದರ ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿರುವ TLTRO 1 ಲಕ್ಷ ಕೋಟಿ ಮತ್ತು LTRO 1 ಲಕ್ಷ ಕೋಟಿ, LTRO (NBFC) 50,000 ಕೋಟಿ, CRR (ನಗದು ಮೀಸಲು ಪ್ರಮಾಣ) ಕಡಿತ 1.50 ಲಕ್ಷ ಕೋಟಿ ರುಪಾಯಿ. ಅಂದರೆ ಒಟ್ಟು 6.5 ಲಕ್ಷ ಕೋಟಿ ರುಪಾಯಿ.

ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜು ಲೆಕ್ಕದಲ್ಲಿ ಈ 6.5 ಲಕ್ಷ ಕೋಟಿ ರುಪಾಯಿಗಳೂ ಸೇರಿವೆ. ಅಂದಹಾಗೆ, ಈ ಪ್ಯಾಕೇಜಿನಲ್ಲಿ ನಿಮಗೆ ಏನಾದರೂ ಅನುಕೂಲ ಆಗಿದೆಯೇ? ನಿಮಗೇನಾದರೂ ಹಣ ಸಿಕ್ಕಿದೆಯೇ?

ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿಗೆ ಮೇಲಿನ 6.5 ಲಕ್ಷ ಕೋಟಿ ರುಪಾಯಿ ವಜಾ ಹಾಕಿದರೆ, ಉಳಿಯುವುದು ಬರೀ 13.50 ಲಕ್ಷ ಕೋಟಿ ರುಪಾಯಿ. ಮೋದಿ ಸರ್ಕಾರ ಇಷ್ಟು ಮೊತ್ತವನ್ನು ಎಲ್ಲಿಂದ ತರುತ್ತದೆ ಎಂಬುದು ಪ್ರಶ್ನೆ ಅಲ್ಲ. ತರುವ ಸಾಲವನ್ನು ಹೇಗೆ ವಿನಿಯೋಗಿಸುತ್ತದೆ ಎಂಬುದು ಪ್ರಶ್ನೆ.

ಇಡೀ ದೇಶದ ಬಡಜನರ ಖರೀದಿಸುವ ಶಕ್ತಿ ಕುಸಿದ ಸಂದರ್ಭದಲ್ಲಿ ಈ ಜನರ ನೆರವಿಗೆ ಬರುವ ಬದಲು ಮೋದಿ ಸರ್ಕಾರ ಕಾರ್ಪೊರೆಟ್ ವಲಯಕ್ಕೆ 1.40 ಲಕ್ಷ ಕೋಟಿ ರುಪಾಯಿಗಳಷ್ಟು ವಾರ್ಷಿಕ ತೆರಿಗೆ ಕಡಿತದ ಉಡುಗೊರೆ ನೀಡಿತ್ತು. ಮೋದಿ ಸರ್ಕಾರಕ್ಕೆ ಯಾವಾಗ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಕ್ಕೆ ಇದು ಜ್ವಲಂತ ಉದಾಹರಣೆ.

ಮೋದಿ ಘೋಷಿಸಿದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿನ ವಿವರಗಳನ್ನು ತಕ್ಷಣವೇ ನೀಡವುದಿಲ್ಲ. ಇಡೀ ದೇಶದ ಜನರಿಗೆ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ ಎಂಬುದು ಮನದಟ್ಟಾಗಬೇಕು. ಮೋದಿ ಏನೋ ಅದ್ಭುತ ಮಾಡಿದ್ದಾರೆ ಎಂಬುದನ್ನು ಜನರು ತಿಳಿಯಬೇಕು. ಅದು ‘ಸುಳ್ಳಾದರೂ ಸರಿ’ಯೇ ಅದನ್ನು ಜನರು ನಂಬಬೇಕು. ಅದಾದ ನಂತರ ವಿವರಗಳು ಹೊರ ಬರುತ್ತವೆ. ಆ ವಿವರಗಳಲ್ಲಿಯೇ ಈಗಾಗಲೇ ಘೋಷಿಸಿರುವ 6.5 ಲಕ್ಷ ಕೋಟಿ ರುಪಾಯಿಗಳೂ ಸೇರಿಕೊಳ್ಳುತ್ತವೆ.

ಮೇಲೆ ಉಲ್ಲೇಖಿಸಿರುವ 6.5 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ವಿತ್ತೀಯ ಉತ್ತೇಜನ, ಸಾಲದ ಉತ್ತೇಜನದ ಕೊಡುಗೆಯೇ 4.5 ಲಕ್ಷ ಕೋಟಿ ರುಪಾಯಿಗಳಷ್ಟಿದೆ. ಇದು ಸಾಲದ ರೂಪದ ಕೊಡುಗೆಯೇ ಹೊರತು ಉಚಿತ ಕೊಡುಗೆ ಅಲ್ಲ. ಮೋದಿ ಸರ್ಕಾರ ಎಷ್ಟು ಜಾಣತನದಿಂದ ಕ್ರೆಡಿಟ್ ಪಡೆಯುತ್ತಿದೆ ಎಂದರೆ, ಕಾರ್ಮಿಕರು ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತದಲ್ಲಿ ಮೂರು ತಿಂಗಳ ವೇತನದಷ್ಟು ಅಥವಾ ಸಂಗ್ರಹವಾಗಿರುವ ಮೊತ್ತದಲ್ಲಿನ ಶೇ.50ರಷ್ಟು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈ ರೀತಿ ಕಾರ್ಮಿಕರು ತಮ್ಮ ಖಾತೆಯಿಂದ ತಮ್ಮದೇ ಹಣವನ್ನು ಪಡೆಯುತ್ತಾರೆ ಈ ರೀತಿ ಪಡೆದ ಮೊತ್ತವನ್ನೂ ತಾನೇ ತನ್ನ ಬೊಕ್ಕಸದಿಂದ ಕೊಟ್ಟಂತೆ ಬಿಂಬಿಸಿಕೊಳ್ಳುತ್ತಿದೆ.

ಮೋದಿ ತಮ್ಮ ಪ್ರೈಮ್ ಟೈಮ್ ಭಾಷಣದಲ್ಲಿ ಕಾರ್ಮಿಕರು, ಭೂಮಿ, ನಗದು ಮತ್ತು ಕಾನೂನು (ಲೇಬರ್, ಲ್ಯಾಂಡ್, ಲಿಕ್ವಿಡಿಟಿ ಮತ್ತು ಲಾ) ಈ ನಾಲ್ಕಂಶಗಳನ್ನು ಪ್ರಸ್ತಾಪಿಸಿದ್ದಾರೆ. ಮೋದಿ ಪ್ರತಿನಿಧಿಸುವ ಪಕ್ಷದ ಆಡಳಿತ ಇರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಕಾರ್ಮಿಕ ಸ್ನೇಹಿ ಕಾನೂನುಗಳನ್ನು ಉದ್ಯಮಿಸ್ನೇಹಿ ಕಾನೂನುಗಳಾಗಿ ಪರಿವರ್ತಿಸಲಾಗಿದೆ. ಕಾರ್ಮಿಕರು 8 ಗಂಟೆ ಬದಲಿಗೆ 12 ಗಂಟೆಗಳ ಕಾಲ ಅಷ್ಟೇ ವೇತನಕ್ಕೆ ದುಡಿಯಬೇಕಾಗುತ್ತದೆ. ಅಂದರೆ, ಶೇ.50ರಷ್ಟು ಹೆಚ್ಚು ಶ್ರಮ ಉದ್ಯಮಕ್ಕೆ ವರ್ಗಾವಣೆ ಆಗುತ್ತದೆ. ಮುಂಬರುವ ದಿನಗಳಲ್ಲಿ ಕಾರ್ಮಿಕರ ವೇತನದ ವೆಚ್ಚವು ಶೇ.50ರಷ್ಟು ತಗ್ಗುತ್ತದೆ. ಉದ್ಯಮಿಗಳ ಪಾಲಿಗೆ ಇದೂ ಒಂದು ಪ್ಯಾಕೇಜೇ ಹೌದು.

ರೈತರ ಭೂಮಿಯನ್ನು ಉದ್ಯಮಿಗಳು ಮನಸೋಇಚ್ಛೆ ಖರೀದಿಸುವುದಕ್ಕೆ ಅನುವು ಮಾಡಿಕೊಡುವ ಭೂಸುಧಾರಣಾ ಕಾಯ್ದೆಯನ್ನು ಜಾರಿ ಮಾಡಲು ವಿರೋಧ ಪಕ್ಷಗಳು ಅವಕಾಶ ನೀಡಿರಲಿಲ್ಲ. ರೈತರ ವಿರೋಧ ಕಟ್ಟಿಕೊಳ್ಳಬಾರದೆಂಬ ಕಾರಣಕ್ಕೆ ಮೋದಿ ಸರ್ಕಾರ ಸುಮ್ಮನಾಗಿತ್ತು. ಈಗ ‘ಭಾರಿ ಬಹುಮತ’ದೊಂದಿಗೆ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ ಮತ್ತೆ ರೈತರಿಗೆ ಮಾರಕವಾಗಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿ ಮಾಡಬಹುದು. ಅಂದರೆ, ಉದ್ಯಮಿಗಳಿಗೆ ಕಡಮೆ ವೆಚ್ಚದಲ್ಲಿ ಭೂಮಿ ಲಭ್ಯವಾಗುವಂತೆ ನೋಡಿಕೊಳ್ಳುವುದು.

ನಗದು ಹರಿವು ಈ ಹೊತ್ತಿನಲ್ಲೂ ಸಮರ್ಪಕವಾಗಿಯೇ ಇದೆ. ಆದರೆ, ಭಾರತದ ಬ್ಯಾಂಕುಗಳು ನರೇಂದ್ರಮೋದಿ ಆಡಳಿತದ ಬಗ್ಗೆ ವಿಶ್ವಾಸ ಕಳೆದುಕೊಂಡಂತಿದೆ. ಬ್ಯಾಂಕುಗಳು ತಮ್ಮಲ್ಲಿರುವ ನಗದನ್ನು ಸಾಲವಾಗಿ ನೀಡುವಂತೆ ಆರ್‌ಬಿಐ ಒತ್ತಡ ಹೇರುತ್ತಿದೆ. ಜತೆಗೆ ರಿವರ್ಸ್ ರೆಪೋದರವನ್ನು (ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಹಣಕ್ಕೆ ನೀಡುವ ಬಡ್ಡಿದರ) ಶೇ.3.75ಕ್ಕೆ ತಗ್ಗಿಸಿದೆ. ಇಷ್ಟಾದರೂ ಬ್ಯಾಂಕುಗಳು ಜನರಿಗೆ ಸಾಲ ನೀಡುವ ಬದಲು ರಿಸರ್ವ್ ಬ್ಯಾಂಕ್ ನಲ್ಲಿಯೇ ತಮ್ಮ ಹಣವನ್ನು ಇಡುತ್ತಿವೆ. ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ ಮೇ 5ರಂದು ಬ್ಯಾಂಕುಗಳು ಇಟ್ಟಿದ್ದ ಮೊತ್ತವೇ 5.41 ಲಕ್ಷ ರುಪಾಯಿಗಳಷ್ಟಿತ್ತು.

ಹಾಲಿ ಕಾನೂನುಗಳನ್ನು ಮೋದಿ ಸರ್ಕಾರ ಉದ್ಯಮಿ ಸ್ನೇಹಿ ಕಾನೂನುಗಳಾಗಿ ಪರಿವರ್ತಿಸಲಿದೆ. ಈ ಕಾರಣಕ್ಕಾಗಿಯೇ ಮೋದಿ 20 ಲಕ್ಷ ಪ್ಯಾಕೇಜು ಘೋಷಣೆ ಮಾಡುತ್ತಲೇ ಎಲ್ಲಾ ಉದ್ಯಮಿಗಳು ಮತ್ತು ಉದ್ಯಮಿಗಳ ಸಂಘಟನೆಗಳು ಬಾರಿ ಚಪ್ಪಾಳೆಯೊಂದಿಗೆ ಮೋದಿ ಪ್ಯಾಕೇಜನನ್ನು ಸ್ವಾಗತಿಸಿವೆ.

ಮೋದಿ ಸರ್ಕಾರ ಏನು ಮಾಡಬೇಕು? ಭಾರತ- ಚೀನಾ ವ್ಯಾಪಾರ ವಹಿವಾಟಿನಲ್ಲಿ ಭಾರತವು ತನ್ನ ರಫ್ತು ಪ್ರಮಾಣಕ್ಕಿಂತಲೂ 60 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಎಲೆಕ್ಟ್ರಾನಿಕ್ ಮತ್ತಿತರ ಪರಿಕರಗಳೇ ಹೆಚ್ಚು. ಇದನ್ನು ದೇಶೀಯವಾಗಿ ಉತ್ಪಾದಿಸಿ, ಕನಿಷ್ಠ ಶೇ.50ರಷ್ಟು ಆಮದು ತಗ್ಗಿಸಿದರೆ, 30 ಬಿಲಿಯನ್ ಡಾಲರ್ ಉಳಿಯುತ್ತದೆ. ಜಗತ್ತಿನಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೂ ವಾರ್ಷಿಕ 21 ಬಿಲಿಯನ್ ಡಾಲರ್ ಗಳಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಹೆಚ್ಚು ಕಲ್ಲಿದಲು ಉತ್ಪಾದಿಸಿದರೆ 20 ಬಿಲಿಯನ್ ಡಾಲರ್ ಉಳಿತಾಯ ಮಾಡಬಹುದು. ಬೃಹತ್ ಪ್ರಮಾಣದ ಚಿನ್ನ ಇದ್ದರೂ ಭಾರತ ಚಿನ್ನ ಆಮದು ಮಾಡಿಕೊಳ್ಳುತ್ತಲೇ ಇದೆ. ಭಾರತ ತನ್ನಲ್ಲಿರುವ ಚಿನ್ನವನ್ನು ನಗದೀಕರಿಸಿಕೊಂಡರೆ ಕನಿಷ್ಠ 50 ಬಿಲಿಯನ್ ಡಾಲರ್ ಗಳಿಸಬಹುದು. ಅಂದರೆ, ಈ ಮೂರೇ ವಲಯದಿಂದ ಕನಿಷ್ಠ 100 ಬಿಲಿಯನ್ ಡಾಲರ್ (7.50 ಲಕ್ಷ ಕೋಟಿ ರುಪಾಯಿ) ಉಳಿತಾಯ ಮಾಡಬಹುದು. ಮೋದಿ ಸರ್ಕಾರ ಮಾಡುತ್ತದಾ ಎಂಬುದು ಮುಖ್ಯ ಪ್ರಶ್ನೆ. ಏಕೆಂದರೆ ಇಲ್ಲಿ, ಮೋದಿ ಆಪ್ತ ಉದ್ಯಮಿಗಳ ಹಿತಾಸಕ್ತಿ ಆಡಗಿದೆ! ಮೋದಿ ಸರ್ಕಾರ ಎಂದೂ ತನ್ನ ಆಪ್ತ ಉದ್ಯಮಿಗಳ ಹಿತಾಸಕ್ತಿಗಳ ವಿರುದ್ಧ ನಡೆದ ಉದಾಹರಣೆಗಳಿಲ್ಲ!!

Click here Support Free Press and Independent Journalism

Pratidhvani
www.pratidhvani.com