FIR ಬಳಿಕ ವರಸೆ ಬದಲಾಯಿಸಿದ ಝೀ ನ್ಯೂಸ್‌ನ ಸುಧೀರ್ ಚೌಧರಿ
ರಾಷ್ಟ್ರೀಯ

FIR ಬಳಿಕ ವರಸೆ ಬದಲಾಯಿಸಿದ ಝೀ ನ್ಯೂಸ್‌ನ ಸುಧೀರ್ ಚೌಧರಿ

ಇಸ್ಲಾಮಿನ ಕುರಿತು ನಕರಾತ್ಮಕವಾಗಿ ವರದಿ ಮಾಡಿ ಪ್ರಕರಣ ದಾಖಲಿಸಿಕೊಂಡ ಬೆನ್ನಿಗೆ ಝೀ ನ್ಯೂಸ್, ಇಸ್ಲಾಮ್ ಮತ್ತು ಜಿಹಾದಿನ ಕುರಿತು ಸಕರಾತ್ಮಕ ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿರುವುದು ಅಚ್ಚರಿ ಮೂಡಿಸಿದೆ. ಕಾರ್ಯಕ್ರಮದಲ್ಲಿ ಜಿಹಾದಿನ ಕುರಿತು ವಿವರಣೆ ನೀಡಿದ ಚೌಧರಿ, ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಜಿಹಾದ್ ಪದದ ಕುರಿತು ನಮ್ಮ ಮುಂದೆ ತಪ್ಪಾದ ರೀತಿಯಲ್ಲಿ ವ್ಯಾಖ್ಯಾನಿಸಲಾಗಿತ್ತು ಎಂದಿದ್ದಾರೆ.

ಫೈಝ್

ಫೈಝ್

ಮಾರ್ಚ್ 11 ರಂದು ಝೀ ನ್ಯೂಸ್ ಹಿಂದಿ ಅವತರಣಿಕೆ ʼಜಿಹಾದ್ ಚಾರ್ಟ್ʼ ಎನ್ನುವ ಕಾರ್ಯಕ್ರಮದಲ್ಲಿ ಮುಸ್ಲಿಮರ ಮೇಲೆ ಅಪನಂಬಿಕೆ ಹುಟ್ಟಿಸುವಂತಹ ವರದಿಯನ್ನು ಪ್ರಸಾರ ಮಾಡಿತ್ತು. ಈ ಕುರಿತು ಕೇರಳದ AIYF ನ ರಾಜ್ಯ ಜತೆ ಕಾರ್ಯದರ್ಶಿ ಅಡ್ವಕೇಟ್ ಪಿ. ಗವಾಸ್ ನೀಡಿದ ದೂರಿನನ್ವಯ ಕೇರಳ ಪೋಲಿಸ್ IPC ಸೆಕ್ಷನ್ 295 A ಪ್ರಕಾರ ಝೀ ನ್ಯೂಸ್ ಸುದ್ದಿ ಸಂಪಾದಕ ಸುಧೀರ್ ಚೌಧರಿ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದರು.

ಸುಧೀರ್ ಚೌಧರಿ ಮೇಲೆ ಮುಸ್ಲಿಮರ ಮೇಲೆ ಧ್ವೇಷ ಹರಡಲು ಆಧಾರ ರಹಿತ ಸುಳ್ಳು ಮಾಹಿತಿಗಳ ವರದಿಯನ್ನು ತಯಾರಿಸಿ ಪ್ರಸಾರ ಮಾಡಿದ್ದಾರೆ ಎಂಬ ಆರೋಪವಿದೆ. ಒಂದು ಸಮುದಾಯದ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ಸುಳ್ಳು ವರದಿ ಪ್ರಸಾರ ಮಾಡಿ ಸಮುದಾಯದ ಭಾವನೆಗೆ ನೋವುಂಟು ಮಾಡಿರುವುದನ್ನು ಕೇರಳ ಪೋಲೀಸ್ ಗಂಭೀರವಾಗಿ ಪರಿಗಣಿಸಿದೆ. ಝೀ ನ್ಯೂಸ್ ಜಿಹಾದ್ ಫ್ಲೋ ಚಾರ್ಟ್ ಕಾರ್ಯಕ್ರಮದಲ್ಲಿ ಬಳಸಿಕೊಂಡ ಚಾರ್ಟ್ ಫೇಸ್ಬುಕ್ ಪೇಜೊಂದರಿಂದ ಕಳ್ಳತನ ಮಾಡಿರುವುದು ಎಂದು ನ್ಯೂಸ್ ಲಾಂಡ್ರಿಯ ಮೇಘಾನಂದ್ ಟ್ವೀಟರಲ್ಲಿ ಆರೋಪಿಸಿದ್ದಾರೆ.

ಝೀ ನ್ಯೂಸ್ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡಿ ಇಕ್ಕಟ್ಟಿಗೆ ಸಿಲುಕುವುದು ಇದೇ ಮೊದಲ ಬಾರಿಯೇನಲ್ಲ. ಕನ್ನಯ್ಯ ಕುಮಾರ್ ವಿದ್ಯಾರ್ಥಿ ನಾಯಕನಾಗಿದ್ದಾಗ JNU ನಲ್ಲಿ ಮಾಡಿದ ಹೋರಾಟದಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದಾರೆಂದು ಝೀ ನ್ಯೂಸ್ ತಿರುಚಿದ ವೀಡಿಯೋವೊಂದನ್ನು ಬಿತ್ತರಿಸಿತ್ತು. ಕನ್ನಯ್ಯರ ಮೇಲೆ ಪೋಲಿಸರು ಚಾರ್ಜ್ ಶೀಟ್ ಹಾಕುವಾಗ ಚಾನೆಲ್ ಪ್ರಸಾರ ಮಾಡಿದ್ದ ವೀಡಿಯೋ ತುಣುಕನ್ನು ಆಧಾರವೆಂದು ಸೇರಿಸಿಕೊಂಡಿತ್ತು. ಬಳಿಕ ವೀಡಿಯೋದ ಸತ್ಯಾಸತ್ಯತೆ ಬಯಲಾಗಿ ಝೀ ನ್ಯೂಸ್ ತನ್ನ ಘನತೆ ಕಳೆದುಕೊಂಡಿತ್ತು. ಅಲ್ಲದೆ ಝೀ ನ್ಯೂಸಿನ ವರದಿಯನ್ನು ನಂಬಿ ಅದನ್ನು ಆಧಾರವೆಂದು ಪರಿಗಣಿಸಿದ ಪೋಲಿಸರೂ ಇರುಸು ಮುರಿಸಿಗೊಳಗಾಗಿದ್ದರು.

ಕನ್ನಯ್ಯ ಕುಮಾರಿನ ಕುರಿತು ಪ್ರಸಾರ ಮಾಡಿದ್ದ ವೀಡಿಯೋ ತಿರುಚಿದ್ದಾಗಿತ್ತೆಂದು ಆರೋಪ ಮಾಡಿ ಝೀ ನ್ಯೂಸ್ ಸಂಸ್ಥೆಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತ ವಿಶ್ವ ದೀಪಕ್ ಎಂಬವರು ರಾಜಿನಾಮೆ ನೀಡಿ ಹೊರ ಬಂದಿದ್ದರ ಕುರಿತು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿತ್ತು.

2000 ದ ಹೊಸ ನೋಟಿನಲ್ಲಿ ನ್ಯಾನೋ ಚಿಪ್ ಇದೆಯೆಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದ ಝೀ ನ್ಯೂಸ್ ಕರ್ನಾಟಕದಲ್ಲಿ ಪಬ್ಲಿಕ್ ಟಿ.ವಿ ಘನತೆ ಕಳೆದುಕೊಂಡಂತೆ ದೇಶೀಯ ಮಟ್ಟದಲ್ಲಿ ತನ್ನ ಘನತೆಯನ್ನು ಕಳೆದುಕೊಂಡಿತ್ತು. ಇನ್ನು, ಉದ್ಯಮಿ ನವೀನ್ ಝಿಂದಾಲ್ ಬಳಿ 100 ಕೋಟಿ ರುಪಾಯಿಗಳನ್ನು ಝೀ ನ್ಯೂಸ್ ಸಿಬ್ಬಂದಿಗಳು ಕೇಳಿ ಬ್ಲಾಕ್ಮೇಲ್ ಮಾಡುವ ಕುಟುಕು ಕಾರ್ಯಚರಣೆ ಮಾಡಿದ ವೀಡಿಯೋವೊಂದನ್ನು ಝಿಂದಾಲ್ ಬಹಿರಂಗಪಡಿಸಿದ್ದರು. ಅದರಲ್ಲಿ ಝೀ ನ್ಯೂಸ್ ಸಿಬ್ಬಂದಿಗಳು ಉದ್ಯಮಿಯನ್ನು ಬ್ಲಾಕ್ಮೇಲ್ ಮಾಡುವುದು ಚಿತ್ರಿತವಾಗಿದೆ.

ಹೊಸದಿಲ್ಲಿಯಲ್ಲಿ 2016ರ ಮಾರ್ಚ್ 3ರಂದು ನಡೆದಿದ್ದ ವಾರ್ಷಿಕ ‘ಶಂಕರ್ ಶಾದ್ ಮುಷಾಯಿರ’ ಕಾರ್ಯಕ್ರಮದಲ್ಲಿ ಪ್ರೊ. ಗೌಹರ್ ರಝಾ ಅವರು ನಡೆಸಿಕೊಟ್ಟ ಕಾವ್ಯ ವಾಚನ ಕಾರ್ಯಕ್ರಮಕ್ಕೆ ‘ಅಫ್ಜಲ್ ಪ್ರೇಮಿ ಗ್ಯಾಂಗ್ ಕಾ ಮುಷಾಯಿರ’ ಎಂದು ಹೆಸರಿಟ್ಟು ರಝಾ ಅವರನ್ನು ಅಫ್ಜಲ್ ಗುರುವಿನೊಂದಿಗೆ ಎಳೆದು ತಂದ ಪ್ರಕರಣಕ್ಕೆ ಸಂಬಂಧಿಸಿ, ಒಂದು ಲಕ್ಷ ದಂಡವನ್ನು ಕಟ್ಟಿ ಕವಿ ರಝಾ ಅವರ ಬಳಿ ಕ್ಷಮೆ ಕೋರುವಂತೆ ʼನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿʼ (NBSA) ಝೀ ನ್ಯೂಸ್ ಚಾನೆಲಿಗೆ ಸೂಚಿಸಿರುವ ಕುರಿತು ದಿ ವೈರ್ ವರದಿ ಮಾಡಿತ್ತು.

ಇದಲ್ಲದೆ ಸಂಸದೆ ಮೊಹುವಾ ಮೊಯಿತ್ರ ವಿರುಧ್ಧ ಕೃತಿಚೌರ್ಯದ ಆರೋಪವನ್ನು ಮಾಡಿ ಮಾನನಷ್ಟ ಪ್ರಕರಣವನ್ನೂ ಎದುರಿಸಿದ್ದ ಝೀ ನ್ಯೂಸ್ 2018ರಲ್ಲಿ ಮೋದಿ ಅಬುಧಾಬಿ ಪ್ರವಾಸ ಮಾಡಿದಾಗ ಅಭುದಾಬಿ ರಾಜಕುಮಾರ ʼಜೈ ಶ್ರೀರಾಮ್ʼ ಹೇಳಿದ್ದಾರೆಂದು ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು. ವಾಸ್ತವವಾಗಿ ಅದು ಅಬುಧಾಬಿ ರಾಜಕುಮಾರನದ್ದಾಗಿರದೆ, ಅರಬ್ ಕಮ್ಯುನಿಸ್ಟ್ ಹಾಗೂ ಅರಬ್ ವ್ಯವಹಾರಗಳ ವಿಶ್ಲೇಷಣಕಾರ ಸವೂದ್ ಅಲ್ ಖಾಸ್ಸಿಮಿಯವರ ಹಳೆಯ ಒಂದು ವೀಡಿಯೋದ ತುಣುಕಾಗಿತ್ತು. ಮೋದಿಗೆ ಪ್ರಚಾರ ಕೊಡುವ ಸಲುವಾಗಿ ಈ ವೀಡಿಯೋವನ್ನು ದುರುಪಯೋಗ ಪಡಿಸಲಾಗಿತ್ತೆಂದು ಔಟ್‌ಲುಕ್ ವರದಿ ಮಾಡಿತ್ತು.

ವಿಶ್ವಮಟ್ಟದಲ್ಲಿ ಭಾರತದ ಮಾಧ್ಯಮಗಳ ಮಾನ ಹರಾಜು ಹಾಕಿಯೂ, ತನ್ನ ಚಾಳಿಯನ್ನು ಮುಂದುವರೆಸುತ್ತಲೇ ಬಂದಿದ್ದ ಝೀ ನ್ಯೂಸ್ 2014 ರಲ್ಲಿ ಪ್ರೈಮ್ ಟೈಮಿನಲ್ಲಿ ನರೇಂದ್ರ ಮೋದಿ ಪರವಾಗಿ ಕವರೇಜ್ ಮಾಡಿ TRP ಹೆಚ್ಚಿಸಿಕೊಂಡಿತ್ತು. ಆದರೆ ಈಗ, ಕೋಮು ವಿಭಜನೆ, ಸುಳ್ಳು ಸುದ್ದಿಗಳಿಗೆ ಪ್ರಕರಣ ಹಾಕಿಸಿಕೊಂಡು ಝೀ ನ್ಯೂಸ್ ಸುದ್ದಿಯಲ್ಲಿದೆ.

ಜಿಹಾದ್ ಫ್ಲೋ ಚಾರ್ಟ್ ಕಾರ್ಯಕ್ರಮ ಮಾಡಿರುವುದಕ್ಕೆ ಕೇರಳ ಪೋಲಿಸರು ಪ್ರಕರಣ ದಾಖಲಿಸಿದಾಗ, ʼಅರಗಿಸಿಕೊಳ್ಳಲಾಗದ ಸತ್ಯವನ್ನು ಹೇಳಿದುದಕ್ಕಾಗಿ ನನಗೆ ದೊರೆತ ಪುಲಿಟ್ಝರ್ ಪ್ರಶಸ್ತಿʼ ಎಂದು ತನ್ನ ಟ್ವಿಟರ್ ಅಕೌಂಟಲ್ಲಿ ಬರೆದುಕೊಂಡಿದ್ದ ಚೌಧರಿ ಕೆಲವೇ ದಿನಗಳಲ್ಲಿ ಜಿಹಾದ್ ಪದದ ಕುರಿತು ನಮ್ಮ ಮುಂದೆ ತಪ್ಪಾದ ರೀತಿಯಲ್ಲಿ ವ್ಯಾಖ್ಯಾನಿಸಲಾಗಿತ್ತು ಎಂದು ಹೇಳಿ, ಜಿಹಾದಿನ ಬಗ್ಗೆ ತಾವು ಮೊದಲು ಪ್ರಸಾರ ಮಾಡಿದ್ದ ಕಾರ್ಯಕ್ರಮಕ್ಕೆ ತದ್ವಿರುದ್ದವಾಗಿ ಕಾರ್ಯಕ್ರಮ ಪ್ರಸಾರ ಮಾಡಿದ್ದಾರೆ.

ಇಸ್ಲಾಮಿನ ಕುರಿತು ನಕರಾತ್ಮಕವಾಗಿ ವರದಿ ಮಾಡಿ ಪ್ರಕರಣ ದಾಖಲಿಸಿಕೊಂಡ ಬೆನ್ನಿಗೆ ಝೀ ನ್ಯೂಸ್, ಇಸ್ಲಾಮ್ ಮತ್ತು ಜಿಹಾದಿನ ಕುರಿತು ಸಕರಾತ್ಮಕ ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿರುವುದು ಅಚ್ಚರಿ ಮೂಡಿಸಿದೆ. ಕಾರ್ಯಕ್ರಮದಲ್ಲಿ ಜಿಹಾದಿನ ಕುರಿತು ವಿವರಣೆ ನೀಡಿದ ಚೌಧರಿ, ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಜಿಹಾದ್ ಪದದ ಕುರಿತು ನಮ್ಮ ಮುಂದೆ ತಪ್ಪಾದ ರೀತಿಯಲ್ಲಿ ವ್ಯಾಖ್ಯಾನಿಸಲಾಗಿತ್ತು. ಉಗ್ರಗಾಮಿಗಳು ಭಯೋತ್ಪಾದನಾ ಕೃತ್ಯ ಮಾಡಿ ತಮ್ಮನ್ನು ಜಿಹಾದಿಗಳೆಂದು ಕರೆಸಿಕೊಳ್ಳುತ್ತಾರೆ. ಆದರೆ ಅದು ಜಿಹಾದ್ ಅಲ್ಲವೆಂದು ಹೇಳಿದ್ದಾರೆ. ಕಾರ್ಯಕ್ರಮದುದ್ದಕ್ಕೂ ಯಾವುದೇ ನಿಂದನಾತ್ಮಕ ಹೇಳಿಕೆಯನ್ನು ನೀಡದ ಚೌಧರಿ ಮೊದಲು ತಾನು ಪರೋಕ್ಷವಾಗಿ ಹಿಯಾಳಿಸಿದ್ದ ಧರ್ಮದ ಕುರಿತು ಗೌರವವಯುತವಾಗಿ ಮಾತನಾಡಿದ್ದಾರೆ,

ಕಾರ್ಯಕ್ರಮದ ತುಣುಕನ್ನು ಝೀ ನ್ಯೂಸ್ ತನ್ನ ಅಧಿಕೃತ ಯೂ ಟ್ಯೂಬ್ ಚಾನೆಲಲ್ಲಿ ಷೇರ್ ಮಾಡಿಕೊಂಡಿದೆ. ಒಟ್ಟಿನಲ್ಲಿ ಇಸ್ಲಾಮೊಫೊಬಿಯವನ್ನು ಹರಡುವ ಆರೋಪವಿರುವ ಝೀ ನ್ಯೂಸ್ ಸುದ್ದಿ ಸಂಪಾದಕ ಸುಧೀರ್ ಚೌಧರಿ 295 a ಸೆಕ್ಷನ್ನಡಿಯಲ್ಲಿ ಪ್ರಕರಣ ದಾಖಲಾದ ಬಳಿಕ ತನ್ನ ನಿಲುವನ್ನು ಬದಲಿಸಿಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತದೆ.

Click here Support Free Press and Independent Journalism

Pratidhvani
www.pratidhvani.com