20 ಲಕ್ಷ ಕೋಟಿ ಸ್ವಾವಲಂಬಿ ಭಾರತ ಪ್ಯಾಕೇಜ್ ನಿಜವಾಗುವುದೆ?
ರಾಷ್ಟ್ರೀಯ

20 ಲಕ್ಷ ಕೋಟಿ ಸ್ವಾವಲಂಬಿ ಭಾರತ ಪ್ಯಾಕೇಜ್ ನಿಜವಾಗುವುದೆ?

ಈ ಸ್ವಾವಲಂಬಿ ಭಾರತಕ್ಕೆ ಚೈತನ್ಯ ತುಂಬುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ಪ್ಯಾಕೇಜ್ ಬಳಕೆಯಾಗಲಿದೆ ಎಂದ ಅವರು, ಪ್ಯಾಕೇಜಿನ ಹೆಚ್ಚಿನ ವಿವರಗಳನ್ನು ಹಣಕಾಸು ಸಚಿವರು ನೀಡಲಿದ್ದಾರೆ. ಹಾಗೆಯೇ ಮೇ 17ರ ಬಳಿಕ ಲಾಕ್ ಡೌನ್ ಸ್ವರೂಪ ಭಿನ್ನವಾಗಿರಲಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಸ್ವಾವಲಂಬಿ ಭಾರತ, ಸ್ವದೇಶಿ ಭಾರತದ ಘೋಷಣೆಯ ಮೇಲೆ ಬರೋಬ್ಬರಿ 20 ಲಕ್ಷ ಕೋಟಿ ಬೃಹತ್ ಕರೋನಾ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಕರೋನಾ ಮಹಾಮಾರಿ ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ದೇಶವ್ಯಾಪಿ ಲಾಕ್ ಡೌನ್ ನ 50ನೇ ದೇಶವನ್ನುದ್ದೇಶಿಸಿ ಎಂದಿನಂತೆ ತಮ್ಮ 8 ಪಿಎಂ ಭಾಷಣ ಮಾಡಿದ ಮೋದಿಯವರು, ಪ್ರಮುಖವಾಗಿ ಹೇಳಿದ್ದು ಮೇ17ರ ಬಳಿಕವೂ ಲಾಕ್ ಡೌನ್ ಮುಂದುವರಿಯಲಿದೆ. ಕರೋನಾ ವೈರಸ್ಸಿನೊಂದಿಗೆ ಬದುಕುವುದು ಅನಿವಾರ್ಯ ಮತ್ತು ಲಾಕ್ ಡೌನ್ ನಿಂದಾಗಿ ಬರ್ಬರವಾಗಿರುವ ದೇಶದ ಜನರ ಬದುಕಿಗೆ ಆಸರೆಯಾಗಿ ಯಾರೂ ನಿರೀಕ್ಷಿಸದೇ ಇದ್ದ ಪ್ರಮಾಣದ ಬೃಹತ್ ಸ್ವಾವಲಂಬಿ ಭಾರತ ಪ್ಯಾಕೇಜ್ ನೀಡಲಾಗುವುದು ಎಂದು.

ಕರೋನಾ ವೈರಾಣು ಜಗತ್ತನ್ನೇ ನಾಶಮಾಡಿದೆ. ಆದರೆ ನಾವು ಸೋಲುಪ್ಪಿಕೊಳ್ಳಲಾರೆವು. ನಮ್ಮ ಹೋರಾಟ ಮುಂದುವರಿಯಲಿದೆ ಎಂಬ ಮಾತಿನ ಮೂಲಕ ಲಾಕ್ ಡೌನ್ ಅವಧಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ತಮ್ಮ ಐದನೇ ಭಾಷಣ ಆರಂಭಿಸಿದ ಪ್ರಧಾನಿ, ಈ ವಿಪತ್ತನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ ಎಂದರು. ಪಿಪಿಇ ಮತ್ತು ಮಾಸ್ಕ್ ತಯಾರಿಕೆಯಲ್ಲಿ ಈ ಲಾಕ್ ಡೌನ್ ಅವಧಿಯಲ್ಲಿ ದೇಶ ಸಾಧಿಸಿದ ಸ್ವಾವಲಂಬನೆಯನ್ನು ಪ್ರಸ್ತಾಪಿಸಿದ ಅವರು, ಇದೇ ಉಮೇದಿನಲ್ಲಿ ಇಡೀ ಜಗತ್ತು ಇಂದು ಭಾರತದ ಕಡೆ ಭರವಸೆಯಿಂದ ನೋಡುತ್ತಿದೆ. ಭಾರತದ ಕುರಿತ ಜಗತ್ತಿನ ದೃಷ್ಟಿಕೋನ ಬದಲಾಗಿದೆ. ಸ್ವಾವಲಂಬಿ ಭಾರತ ಜಗತ್ತಿನ ನಾಯಕನಾಗಿ ಹೊರಹೊಮ್ಮಲಿದೆ. 21ನೇ ಶತಮಾನ ಭಾರತದ ಶತಮಾನವಾಗಲಿದೆ ಎಂದರು.

ಇಡೀ ಜಗತ್ತಿನ ಆರ್ಥಿಕತೆಯನ್ನು ನೆಲಕಚ್ಚಿಸಿರುವ ಜಾಗತಿಕ ಮಹಾಮಾರಿಯನ್ನು ಭಾರತ ಗೆದ್ದು ಜಗತ್ತಿಗೇ ಮಾದರಿಯಾಗಿ ನಿಲ್ಲಲಿದೆ. ಆ ಮೂಲಕ ಈ ಅವಕಾಶವನ್ನು ಬಳಸಿಕೊಂಡು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದೂ ಪ್ರಧಾನಿ ಮೋದಿ ಹೇಳಿದರು. ಜೊತೆಗೆ ಕರೋನಾ ಸಂಕಷ್ಟದಿಂದ ದೇಶದ ಜನತೆಯನ್ನು ಪಾರುಮಾಡಲು 20 ಲಕ್ಷ ಕೋಟಿ ಬೃಹತ್ ಮೊತ್ತದ ಸ್ವಾವಲಂಬಿ ಭಾರತ ಪ್ಯಾಕೇಜ್ ಘೋಷಿಸಿದರು. ದೇಶದ ಒಟ್ಟಾರೆ ಜಿಡಿಪಿಯ ಶೇ.10ರಷ್ಟು ಪ್ರಮಾಣದ ಭಾರೀ ಮೊತ್ತದ ಈ ಪ್ಯಾಕೇಜ್, ದೇಶದ ಬಡವರು, ರೈತರು, ಕಾರ್ಮಿಕರು, ವ್ಯಾಪಾರಿಗಳು, ಮಧ್ಯಮವರ್ಗ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ, ಗೃಹ ಉದ್ಯಮ, ಕೃಷಿಕರು ಸೇರಿದ ದೇಶದ ಬಹುತೇಕ ಎಲ್ಲ ದುಡಿಯುವ ಮತ್ತು ಶ್ರಮಿಕ ವರ್ಗಗಳ ಕೈಸೇರಲಿದೆ ಎಂದು ಮೋದಿ ಹೇಳಿದ್ದಾರೆ.

ಅದೇ ಹೊತ್ತಿಗೆ, ಈ ಸ್ವಾವಲಂಬಿ ಭಾರತದ ಆಧಾರಸ್ತಂಭಗಳಾವು ಎಂಬುದನ್ನು ಪ್ರಸ್ತಾಪಿಸಿದ ಅವರು, ದೇಶದ ಅರ್ಥವ್ಯವಸ್ಥೆ, ಮೂಲ ಸೌಕರ್ಯ, ತಾಂತ್ರಿಕತೆ ಆಧಾರಿತ ವ್ಯವಸ್ಥೆ, ಜನಸಂಖ್ಯೆ ಮತ್ತು ಭಾರೀ ಬೇಡಿಕೆಯ ಬೃಹತ್ ಮಾರುಕಟ್ಟೆ ಎಂಬ ಆಧಾರಸ್ತಂಭಗಳ ಮೇಲೆ ಸ್ವಾವಲಂಬಿ ಭಾರತ ಎದ್ದು ನಿಲ್ಲಲಿದೆ ಎಂದಿದ್ದಾರೆ. ಈ ಸ್ವಾವಲಂಬಿ ಭಾರತಕ್ಕೆ ಚೈತನ್ಯ ತುಂಬುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ಪ್ಯಾಕೇಜ್ ಬಳಕೆಯಾಗಲಿದೆ ಎಂದ ಅವರು, ಪ್ಯಾಕೇಜಿನ ಹೆಚ್ಚಿನ ವಿವರಗಳನ್ನು ಹಣಕಾಸು ಸಚಿವರು ನೀಡಲಿದ್ದಾರೆ. ಹಾಗೆಯೇ ಮೇ 17ರ ಬಳಿಕ ಲಾಕ್ ಡೌನ್ ಸ್ವರೂಪ ಭಿನ್ನವಾಗಿರಲಿದೆ. ಆ ಹೊಸ ಮಾರ್ಗಸೂಚಿಗಳನ್ನು ಕೂಡ ಮೇ 18ಕ್ಕೆ ಮುನ್ನ ನೀಡಲಾಗುವುದು ಎಂದೂ ಹೇಳಿದ್ದಾರೆ.

ಜೊತೆಗೆ ದೇಶಿ ಉತ್ಪನ್ನ ಖರೀದಿಸಿ, ದೇಶಿ ಉತ್ಪನ್ನ ಬಳಸಿ ಮತ್ತು ಪ್ರೋತ್ಸಾಹಿಸಿ ಎಂದೂ ದೇಶದ ಜನತೆಗೆ ಕರೆ ನೀಡಿದ್ದಾರೆ. ಅದು ಕೂಡ ಸ್ವಾವಲಂಬಿ ಭಾರತ ಕಟ್ಟುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದು ಅವರು ಹೇಳಿದ್ದಾರೆ.

ಇದಿಷ್ಟು ಪ್ರಧಾನಿ ಮೋದಿಯವರ ಭಾಷಣದ ಪ್ರಮುಖಾಂಶಗಳು.

ಆದರೆ, ಇಡೀ ಭಾಷಣದಲ್ಲಿ ಬಳಕೆಯಾದ ಪದಗಳು ಮತ್ತು ಪರಿಕಲ್ಪನೆಗಳು ಪರಸ್ಪರ ವಿರೋಧಾಭಾಸ ಮತ್ತು ವಾಸ್ತವಾಂಶಕ್ಕೆ ಹೋಲಿಸಿದರೆ ನಂಬಲಾಗದ ಅಂಕಿಅಂಶಗಳನ್ನು ಹೊಂದಿರುವುದು ಸಹಜವಾಗೇ ಸಾಕಷ್ಟು ಅನುಮಾನ ಮತ್ತು ಅಪನಂಬಿಕೆಗಳಿಗೆ ಎಡೆ ಮಾಡಿದೆ. ಪ್ರಮುಖವಾಗಿ ಕರೋನಾ ಪೂರ್ವದ ದೇಶದ ಆರ್ಥಿಕತೆ ಮತ್ತು ಕರೋನಾ ನಂತರ ದೇಶದ ಹಣಕಾಸು ಸ್ಥಿತಿ ಮತ್ತು ಒಟ್ಟಾರೆ ಆರ್ಥಿಕತೆ ತಲುಪಿರುವ ಅಧಃಪತನದ ಹಿನ್ನೆಲೆಯಲ್ಲಿ ನೋಡಿದರೆ, ಮೋದಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ಬೃಹತ್ ಪ್ಯಾಕೇಜಿಗೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಮತ್ತು ಎಲ್ಲಿಂದ ಎಂಬ ಪ್ರಶ್ನೆ ಮೂಡದೇ ಇರದು. ಜೊತೆಗೆ ಒಂದು ಕಡೆ ಸ್ವದೇಶಿ, ಸ್ವಾವಲಂಬಿ ಎನ್ನುತ್ತಾ ಮತ್ತೊಂದು ಕಡೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಅಗ್ರರಾಷ್ಟ್ರವಾಗಲಿದೆ. ಜಾಗತಿಕ ನಾಯಕನಾಗಿ ದೇಶದ ಹೊರಹೊಮ್ಮಲಿದೆ ಎಂದಿರುವುದು ವಿಚಿತ್ರ ವಾದವಾಗಿ ಕಾಣಿಸುತ್ತಿದೆ.

ಪ್ರಮುಖವಾಗಿ ದೇಶದ ಸದ್ಯದ ಜಿಡಿಪಿ ಬೆಳವಣಿಗೆ ದರ ಮತ್ತು ಭವಿಷ್ಯದ ಅಂದಾಜುಗಳ ಪ್ರಕಾರ, ಆರ್ಥಿಕತೆ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳ ಬದಲಾಗಿ, ಇನ್ನಷ್ಟು ಕುಸಿತ ಕಾಣುವ, ಜಿಡಿಪಿ ದರ ನಕಾರಾತ್ಮಕ ಬೆಳವಣಿಗೆ ಕಾಣುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಜಾಗತಿಕ ಸಮೀಕ್ಷೆಗಳೇ ಹೇಳುತ್ತಿವೆ. ಮೂಡಿಯಂತಹ ಸಂಸ್ಥೆ ಕೂಡ ಜಿಡಿಪಿ ದರ ಶೂನ್ಯಕ್ಕೆ ತಲುಪಲಿದೆ ಎಂದಿದೆ. ಸದ್ಯಕ್ಕೆ ಕರೋನಾ ನಿಯಂತ್ರಣಕ್ಕೆ ಬಂದು ಇಡೀ ದೇಶದ ಆರ್ಥಿಕ ಚಟುವಟಿಕೆಗಳು ಯಥಾಸ್ಥಿತಿಗೆ ಮರಳಬಹುದು ಎಂಬ ಹಿನ್ನೆಲೆಯಲ್ಲೇ ಸದ್ಯದ ಜಿಡಿಪಿ ಲೆಕ್ಕಾಚಾರಗಳಿವೆ. ಆದರೆ, ವಾಸ್ತವವಾಗಿ ದೇಶದ ಕರೋನಾ ಸೋಂಕಿನ ಏರಿಕೆ ಪ್ರಮಾಣ ಮತ್ತು ದ್ವಿಗುಣಗೊಳ್ಳುತ್ತಿರುವ ವೇಗ ನೋಡಿದರೆ, ಇನ್ನೂ ಕೆಲವು ತಿಂಗಳು ದೇಶಕ್ಕೆ ಸೋಂಕಿನಿಂದ ಮುಕ್ತಿ ಇಲ್ಲ ಮತ್ತು ಆರ್ಥಿಕ ಚಟುವಟಿಕೆಗಳು ಅಂದುಕೊಂಡಷ್ಟು ಬೇಗ ಯಥಾಸ್ಥಿತಿಗೆ ಬರಲಾರವು ಎನಿಸುತ್ತಿದೆ. ಅಂದರೆ; ಆರ್ಥಿಕತೆ ಕುರಿತ ಸದ್ಯದ ಲೆಕ್ಕಾಚಾರಗಳು ಚಿತ್ರಿಸಿರುವ ಪರಿಸ್ಥಿತಿಗಿಂತಲೂ ಭೀಕರ ವಾಸ್ತವ ಮುಂದೆ ಕಾದಿದೆ.

ಜೊತೆಗೆ ದೇಶದ ಖಜಾನೆಯ ಸದ್ಯದ ಸ್ಥಿತಿ ಹೇಗಿದೆ ಎಂದರೆ, ವಿವಿಧ ಬಾಬ್ತುಗಳಲ್ಲಿ; ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಒಟ್ಟು 2 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಬಾಕಿ ಉಳಿಸಿಕೊಂಡಿದೆ. ಜೊತೆಗೆ ರಾಜ್ಯಗಳಿಗೆ ಪಾವತಿ ಮಾಡಬೇಕಿರುವ ಜಿಎಸ್ ಟಿ ತೆರಿಗೆಯ ಪಾಲು ಹಣದ ಬೃಹತ್ ಮೊತ್ತವನ್ನು ಕೂಡ ಬಾಕಿ ಉಳಿಸಿಕೊಂಡಿದೆ. ಆ ಪೈಕಿ ಕರ್ನಾಟಕಕ್ಕೆ ಕೊಡಬೇಕಿರುವ ಸುಮಾರು 16 ಸಾವಿರ ಕೋಟಿ ಬಾಕಿ ಕೂಡ ಸೇರಿದೆ. ಈ ಅನುದಾನವನ್ನು ರಾಜ್ಯಗಳಿಗೆ ನೀಡಲು ಕೂಡ ಕೇಂದ್ರ ಸರ್ಕಾರ ಕಂತುಗಳಲ್ಲಿ ಹಣ ಪಾವತಿ ಮಾಡುತ್ತಿದೆ. ಈ ನಡುವೆ ಸುಮಾರು 12 ಲಕ್ಷ ಕೋಟಿಯಷ್ಟು ಬೃಹತ್ ಮೊತ್ತವನ್ನು ಆರ್ ಬಿಐನಿಂದ ಸಾಲ ಪಡೆಯಲು ಮುಂದಾಗಿದೆ.

ಇಂತಹ ಹೊತ್ತಲ್ಲಿ, ಸರ್ಕಾರದ ಬೊಕ್ಕಸ ಖಾಲಿಯಾಗದಂತೆ ನೋಡಿಕೊಳ್ಳುವ ಪ್ರಯತ್ನವಾಗಿ ಮೂರ್ನಾಲ್ಕು ದಿನಗಳ ಹಿಂದಷ್ಟೇ ಸಂಕಷ್ಟದ ನಡುವೆಯೂ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ದೇಶದ ಉದ್ದಗಲಕ್ಕೆ ತಮ್ಮ ಮೂಲ ನೆಲೆಗಳಿಗೆ ವಾಪಸ್ಸಾಗುತ್ತಿರುವ ಲಕ್ಷಾಂತರ ಮಂದಿ ಕಾರ್ಮಿಕರಿಗೆ ಕೂಡ ಉಚಿವ ಸಾರಿಗೆ ವ್ಯವಸ್ಥೆ ಮಾಡಲಾಗದ ಹೀನಾಯ ಪರಿಸ್ಥಿತಿಯಲ್ಲಿರುವ ಸರ್ಕಾರ, ಅವರಿಂದ ಕೂಡ ದುಪ್ಪಟ್ಟು ರೈಲ್ವೆ ಪ್ರಯಾಣ ದರ ವಸೂಲಿ ಮಾಡುವಂತಹ ಅಮಾನವೀಯತೆ ಪ್ರದರ್ಶಿಸಿದೆ. ಜನಧನ್ ಖಾತೆಗಳಿಗೆ ಐದು ನೂರು ರೂ. ಹಾಕುವ ಲಾಕ್ ಡೌನ್ ನ ಮೊದಲ ಪ್ಯಾಕೇಜಿನ ಹಣ ಇನ್ನೂ ಹಲವರ ಖಾತೆಗೆ ತಲುಪಿಲ್ಲ. ಪ್ರಧಾನಮಂತ್ರಿ ಸ್ವಸ್ಥ ಭಿಮಾ ಯೋಜನೆಯ ಫಲಾನುಭವಿಗಳ ಪ್ರೀಮಿಯಂ ಪಾವತಿಸಲು ಕೂಡ ಸರ್ಕಾರ ಸಿದ್ಧವಿಲ್ಲ. ಹಾಗಾಗಿ ಸ್ವತಃ ಫಲಾನುಭವಿಗಳೇ ಕಂತು ಕಟ್ಟಬೇಕು ಎಂಬ ಸಂದೇಶಗಳು ಬಂದಿವೆ.

ದೇಶದ ಆರ್ಥಿಕ ಸ್ಥಿತಿ ಇಷ್ಟು ಆಘಾತಕಾರಿ ಸ್ಥಿತಿಯಲ್ಲಿರುವಾಗ ಏಕಾಏಕಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆಯ ಮೋದಿಯವರ ಮಾತು ಸಾಕಷ್ಟು ಟೀಕೆ- ಕುಹಕಗಳಿಗೆ ಗುರಿಯಾಗಿದೆ.

ಅಲ್ಲದೆ, 20 ಲಕ್ಷ ಕೋಟಿ ಎಂಬುದು ಭಾರತದ ಸದ್ಯದ ಆರ್ಥಿಕತೆಯ ಹಿನ್ನೆಲೆಯಲ್ಲಿ ಎಷ್ಟು ಬೃಹತ್ ಮೊತ್ತವೆಂದರೆ, ದೇಶದಲ್ಲಿ ಕಳೆದ ಮಾರ್ಚ್ ಅಂತ್ಯದ ಹೊತ್ತಿಗೆ ಚಲಾವಣೆಯಲ್ಲಿದ್ದ ಒಟ್ಟು ಹಣದ ಮೊತ್ತವೇ 24 ಲಕ್ಷ ಕೋಟಿ! ಅಂದರೆ ಸರಿಸುಮಾರು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದಷ್ಟೇ ಮೊತ್ತದ ಪ್ಯಾಕೇಜ್ ಇದು. ಹಾಗಾಗಿ ಇಷ್ಟು ಬೃಹತ್ ಹಣವನ್ನು ಆರ್ಥಿಕತೆಗೆ ಸುರಿಯಲು ಸರ್ಕಾರ ಎಲ್ಲಿಂದ ಮತ್ತು ಹೇಗೆ ಹಣ ಹೊಂದಿಸುತ್ತದೆ ಮತ್ತು ಅಷ್ಟು ಹಣ ಒಟ್ಟಾರೆ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವೇನು ಎಂಬುದು ಕುತೂಹಲ ಹುಟ್ಟಿಸಿದೆ. ಜೊತೆಗೆ ಈ ಬಾರಿಯ ಬಜೆಟ್ ಅಂದಾಜಿನ ಪ್ರಕಾರ ದೇಶದ ಒಟ್ಟು ಆದಾಯದಷ್ಟೇ ಇದೆ ಈ ಪ್ಯಾಕೇಜ್!

ಅದೇ ಹೊತ್ತಿಗೆ, ಮೋದಿಯವರು ಸುಮಾರು 300ಕ್ಕೂ ಹೆಚ್ಚು ಮಂದಿ ಲಾಕ್ ಡೌನ್ ನಿಂದಾಗಿ ಜೀವ ಕಳೆದುಕೊಂಡ ಬಗ್ಗೆಯಾಗಲೀ, ವಲಸೆ ಕಾರ್ಮಿಕರು ರೈಲು ಹಳಿಯ ಮೇಲೆ ಪ್ರಾಣಬಿಟ್ಟ ಬಗ್ಗೆಯಾಗಲೀ, ರಾಜ್ಯ ಸರ್ಕಾರಗಳು ಅವರಿಗೆ ತಮ್ಮ ಮನೆಗಳಿಗೆ ತೆರಳಲು ಬಿಡದೆ ಜೀತದಾಳುಗಳಂತೆ ಬಂಧಿಸಿಟ್ಟು ಸಾವುನೋವುಗಳಿಗೆ ಕಾರಣವಾದ ಬಗ್ಗೆಯಾಗಲೀ ಪ್ರಧಾನಮಂತ್ರಿಗಳು ಪ್ರಸ್ತಾಪವನ್ನೇ ಮಾಡಲಿಲ್ಲ. ಜೊತೆಗೆ, ಮುಖ್ಯವಾಗಿ ದೇಶದಲ್ಲಿ ಕರೋನಾ ಪರಿಸ್ಥಿತಿ ಈಗ ಯಾವ ಸ್ವರೂಪದಲ್ಲಿದೆ. ಮುಂದಿನ ದಿನಗಳಲ್ಲಿ ಸೋಂಕು ಯಾವ ಮಟ್ಟಕ್ಕೆ ಅಪಾಯಕಾರಿಯಾಗಬಹುದು ಎಂಬ ಬಗ್ಗೆ ಸರ್ಕಾರದ ಅಂದಾಜು ಏನು? ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಹೇಗೆ ಸಜ್ಜುಗೊಳಿಸಲಾಗಿದೆ ಎಂಬುದೂ ಸೇರಿದಂತೆ ದೇಶದ ಜನತೆಯಲ್ಲಿ ವಿಶ್ವಾಸ ಹುಟ್ಟಿಸುವ ಮಾಹಿತಿ ಮತ್ತು ಭರವಸೆಯನ್ನು ತುಂಬುವಲ್ಲಿಯೂ ಅವರು ಗಮನ ಹರಿಸಲಿಲ್ಲ ಎಂಬ ಟೀಕೆಗಳೂ ಕೇಳಿಬರುತ್ತಿವೆ.

ಆ ಹಿನ್ನೆಲೆಯಲ್ಲಿ ಎಂದಿನಂತೆಯೇ ಈ ಬಾರಿಯ ಭಾಷಣವೂ ಸ್ಪಷ್ಟ ಮಾಹಿತಿ, ಅಂಕಿಅಂಶಗಳ ಬದಲಿಗೆ, ಕೇವಲ ದೊಡ್ಡ ದೊಡ್ಡ ಘೋಷಣೆಯ ಮೋದಿಯವರ ವರ್ಚಸ್ಸು ವೃದ್ಧಿಯ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮಾತಿನ ಮೋಡಿಯೇ ಅಥವಾ ನಿಜಕ್ಕೂ ಸ್ವಾವಲಂಬಿ ಭಾರತದ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನವೇ ಎಂಬುದನ್ನು ಒಂದೆರಡು ದಿನದಲ್ಲಿ ಹೊರಬೀಳಲಿರುವ ಪ್ಯಾಕೇಜಿನ ವಿವರಗಳು ಹೇಳಲಿವೆ.

Click here Support Free Press and Independent Journalism

Pratidhvani
www.pratidhvani.com