ಅರ್ನಬ್‌ ಗೋಸ್ವಾಮಿ ಪ್ರಕರಣದ ವಿಚಾರಣೆ; ಸುಪ್ರೀಂ ಕೋರ್ಟ್‌ ತಾರತಮ್ಯಕ್ಕೆ ಟ್ವಿಟ್ಟಿಗರ  ಅಸಮಾಧಾನ!
ರಾಷ್ಟ್ರೀಯ

ಅರ್ನಬ್‌ ಗೋಸ್ವಾಮಿ ಪ್ರಕರಣದ ವಿಚಾರಣೆ; ಸುಪ್ರೀಂ ಕೋರ್ಟ್‌ ತಾರತಮ್ಯಕ್ಕೆ ಟ್ವಿಟ್ಟಿಗರ ಅಸಮಾಧಾನ!

ಕಾಂಗ್ರೆಸ್‌ ನಾಯಕಿ ಅವಹೇಳನ, ವಲಸೆ ಕಾರ್ಮಿಕರ ವಿಚಾರದಲ್ಲಿ ಕೋಮು ದ್ವೇಷ ಹರಡುವ ಮೂಲಕ ಬಂಧನ ಭೀತಿ ಎದುರಿಸುತ್ತಿರುವ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅದರಿಂದ ತಪ್ಪಿಸಿಕೊಳ್ಳಲು ನೂರಾರು ದಾರಿ ಹುಡುಕುತ್ತಿದ್ದಾರೆ. ವಿಚಾರಣೆ ನಡೆಸಿದ ಅಧಿಕಾರಿಗಳಲ್ಲಿ ಕೋವಿಡ್-19‌ ಇದೆ ಎಂದು ಅರ್ನಬ್‌ ಪರ ವಕೀಲರು ಸುಪ್ರೀಂ ಕೋರ್ಟ್‌ ಗೆ ತಿಳಿಸಿದ್ದಾರೆ. ಆ ಮೂಲಕವಾದರೂ ʼಸೇಫ್‌ʼ ಆಗಲು ಅರ್ನಬ್‌ ಶತ ಪ್ರಯತ್ನದಲ್ಲಿ ತೊಡಗಿದ್ದಾರೆ. 

ಮೊಹಮ್ಮದ್‌ ಇರ್ಷಾದ್‌

ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ನೀಡಿರುವ ಹೇಳಿಕೆ ವಿಚಾರವಾಗಿ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿಗಳಿಬ್ಬರಲ್ಲಿ ಕರೋನಾ ಸೋಂಕು ಪತ್ತೆಯಾಗಿರುವುದು ತಿಳಿದುಬಂದಿದೆ. ಹಾಗಂತ ಅರ್ನಬ್‌ ಗೋಸ್ವಾಮಿ ವಕೀಲ ಹರೀಶ್‌ ಸಾಳ್ವೆಯೇ ಸುಪ್ರೀಂ ಕೋರ್ಟ್‌ ಗೆ ತಿಳಿಸಿದ್ದಾರೆ. ಆ ಮೂಲಕವಾದರೂ ʼಸೇಫ್‌ʼ ಆಗಲು ಅರ್ನಬ್‌ ಶತ ಪ್ರಯತ್ನದಲ್ಲಿ ತೊಡಗಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದು ಹಾಗೂ ಮಧ್ಯಂತರ ರಕ್ಷಣೆ ಒದಗಿಸುತ್ತಿರುವ ವಿಚಾರದಲ್ಲಿ ತಾರತಮ್ಯ ನಡೆಸುತ್ತಿದೆ ಅನ್ನೋದಾಗಿ ಟ್ವಿಟ್ಟಿಗರು ಗರಂ ಆಗಿದ್ದಾರೆ.

ಪ್ರಕರಣ ಸಂಬಂಧ ಅರ್ನಬ್‌ ಗೋಸ್ವಾಮಿಯನ್ನ ಮಹಾರಾಷ್ಟ್ರ ಪೊಲೀಸರು ಎಪ್ರಿಲ್‌ 28 ರಂದು 12 ಗಂಟೆಗೂ ಅಧಿಕ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಹಾಜರಿದ್ದ ಇಬ್ಬರು ಅಧಿಕಾರಿಗಳಲ್ಲಿ ಕೋವಿಡ್-19‌ ದೃಢಪಟ್ಟಿವೆ ಎಂದು ಸುಪ್ರೀಂ ಕೋರ್ಟ್‌ ವಿಚಾರಣೆ ಸಂದರ್ಭ ಹರೀಶ್‌ ಸಾಳ್ವೆ ತಿಳಿಸಿದ್ದಾರೆ. ಮಾತ್ರವಲ್ಲದೇ ಬಾಂದ್ರಾ ವಲಸೆ ಕಾರ್ಮಿಕರ ವಿಚಾರ ಸಂಬಂಧಪಟ್ಟಹಾಗೆ ಕೋಮುದ್ವೇಷ ಹರಡುವ ಕೆಲಸಕ್ಕೆ ಮುಂದಾಗಿದ್ದನ್ನ ಖಂಡಿಸಿ ದಾಖಲಾದ ಇನ್ನೊಂದು ಪ್ರಕರಣದ ಎಫ್‌ಐಆರ್‌ ಮಾನ್ಯತೆ ಕುರಿತು ಹರೀಶ್ ಸಾಳ್ವೆ ಪ್ರಶ್ನಿಸಿದ್ದಾರೆ.

ಇನ್ನು ಪಾಲ್ಘಾರ್‌ ಸಾಧುಗಳ ಗುಂಪು ಹತ್ಯೆಯನ್ನ CBI ಗೆ ನೀಡಿದರೆ ನಮ್ಮದೇನೂ ತಕರಾರಿಲ್ಲ ಎಂದು ಸುಪ್ರೀಂ ಕೋರ್ಟ್‌ ಗೆ ತಿಳಿಸಿದ್ದಾರೆ. ಆದರೆ ಇದಕ್ಕೆ ಮಹಾರಾಷ್ಟ್ರ ಸರಕಾರ ಪರ ವಕೀಲ ಕಪಿಲ್‌ ಸಿಬಲ್‌ ಆಕ್ಷೇಪಿಸಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರ ಪೊಲೀಸರ 12 ಗಂಟೆಗಳ ವಿಚಾರಣೆಯನ್ನ ಪ್ರಶ್ನಿಸಿರುವ ಹರೀಶ್ ಸಾಳ್ವೆ ಅದನ್ನ ವೀಡಿಯೋ ಕಾನ್ಫರೆನ್ಸ್‌ ಮೂಲಕವೇ ಮಾಡಬಹುದಿತ್ತಲ್ಲ? ಎಂದು ವಾದಿಸಿದ್ದಾರೆ.

ಪಾಲ್ಘಾರ್‌ ಘಟನೆ ನಡೆದ ತನ್ನ ʼಪ್ರೈಮ್‌ ಡಿಬೇಟ್‌ʼನಲ್ಲಿ ಮಹಾರಾಷ್ಟ್ರ ಸರಕಾರವನ್ನ ಪ್ರಶ್ನಿಸುತ್ತಲೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನ ಎಳೆತಂದು ಅವಹೇಳನಕಾರಿ ಭಾಷೆಯಲ್ಲಿ ನಿಂದಿಸಿದ ಆರೋಪ ಅರ್ನಬ್‌ ಮೇಲಿದೆ. ಇದರಿಂದ ಆಕ್ರೋಶಿತರಾಗಿದ್ದ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಸೇರಿ ಕರ್ನಾಟಕ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶ ಜಮ್ಮು&ಕಾಶ್ಮೀರ ರಾಜ್ಯಗಳಲ್ಲಿ ದೂರು ದಾಖಲಿಸಿದ್ದರು. ಆನಂತರ ಎಲ್ಲಾ ಪ್ರಕರಣಗಳನ್ನ ಒಟ್ಟುಗೂಡಿಸಿದ್ದ ನ್ಯಾಯಾಲಯವು ವಿಚಾರಣೆಗಾಗಿ ಮುಂಬೈಗೆ ಹಸ್ತಾಂತರಿಸಿತ್ತು. ಆರಂಭದಲ್ಲಿಯೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಬಂಧನ ತಡೆಗೆ ಮೂರು ವಾರಗಳ ಕಾಲ ತಡೆ ತರುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಬಾಂದ್ರಾ ವಲಸೆ ಕಾರ್ಮಿಕರ ವಿಚಾರದಲ್ಲಿ ಅವರು ಸ್ಥಳೀಯ ಮಸೀದಿಯಲ್ಲಿ ತಂಗಿದ್ದರು ಎಂದು ಅರ್ನಬ್‌ ಪಾಲ್ಘಾರ್‌ ಘಟನೆ ಬಳಿಕ ಮತ್ತೊಂದು ಬಾರಿ ಮಹಾರಾಷ್ಟ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಸ್ಥಳೀಯ ಮುಸ್ಲಿಂ ಮುಖಂಡರೊಬ್ಬರು ಇದರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ವಿರುದ್ಧ ದಾಖಲಾದ FIR ರದ್ಧತಿಯನ್ನ ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ತೀರ್ಪಿಗಾಗಿ ಕಾಯ್ದಿರಿಸಿದೆ. ಮಾತ್ರವಲ್ಲದೇ ಮಹಾರಾಷ್ಟ್ರ ಪೊಲೀಸರು ತನ್ನ ವಿರುದ್ಧ ದುರುದ್ದೇಶವನ್ನ ಹೊಂದಿದ್ದಾರೆ ಎಂದು ತನ್ನ ಅರ್ಜಿಯಲ್ಲಿ ಅರ್ನಬ್‌ ಗೋಸ್ವಾಮಿ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್‌ ನಾಯಕಿ ಅವಹೇಳನ ಹಾಗೂ ಬಾಂದ್ರಾ ಘಟನೆ ನಂತರವೂ ತನ್ನ ಪ್ರೈಂ ಟೈಮ್‌ ನಲ್ಲಿ ಮಹಾರಾಷ್ಟ್ರ ಸರಕಾರ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದ ಅರ್ನಬ್‌ ಅಲ್ಲೂ ತನ್ನ ನಾಲಗೆ ಹರಿಯಬಿಟ್ಟಿದ್ದರು. ಇದನ್ನೇ ಮುಂದಿಟ್ಟುಕೊಂಡ ಮಹಾರಾಷ್ಟ್ರದ ʼಮಹಾವಿಕಾಸ ಅಘಾಡಿʼ ಸರಕಾರವು ರಾಜ್ಯದ ಪೊಲೀಸರ ಮುಖಾಂತರ “ತನಿಖೆಗೆ ಅಡ್ಡಿಪಡಿಸುತ್ತಿರುವುದಾಗಿ” ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿತ್ತು.. ವಿಚಾರಣೆಗೆ ಹಾಜರಾಗಬೇಕಾದ ಸಮಯದಲ್ಲೂ ಅರ್ನಬ್‌ ಗೋಸ್ವಾಮಿ ತನ್ನ ರಿಪಬ್ಲಿಕ್‌ ಟಿವಿಯ ತಂಡ ಕಟ್ಟಿಕೊಂಡು ಹೋಗಿ ಅನಗತ್ಯ ತೊಂದರೆ ಸೃಷ್ಟಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಿತ್ತು. ಇದರಿಂದ ಕಂಗಾಲಾದ ಅರ್ನಬ್‌ ಗೋಸ್ವಾಮಿ ಬಂಧನದಿಂದ ತಪ್ಪಿಸಿಕೊಳ್ಳಲು ಒಂದಿಲ್ಲೊಂದು ಪ್ರಯತ್ನ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಅರ್ನಬ್‌ ಗೋಸ್ವಾಮಿ ಮೇಲೆ ಈ ಬಾರಿ ಹೆಚ್ಚಿನ ಹಿಡಿತವನ್ನ ಸಾಧಿಸಿ ಆ ಮೂಲಕ ಕಾನೂನು ಹೋರಾಟದಲ್ಲಿ ಜಯ ಸಾಧಿಸುವ ಕನಸನ್ನ ಮಹಾರಾಷ್ಟ್ರದ ʼಮಹಾವಿಕಾಸ ಅಘಾಡಿʼ (ಶಿವಸೇನಾ-ಕಾಂಗ್ರೆಸ್-ಎನ್ ಸಿಪಿ) ಸರಕಾರವು ಹೊಂದಿದ್ದರೆ, ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಹಿರಿಯ ವಕೀಲ ಹರೀಶ್‌ ಸಾಳ್ವೆ ಮುಖಾಂತರ ನಡೆಸುತ್ತಿದ್ದಾರೆ. ಒಂದರ್ಥದಲ್ಲಿ ಇದು ಸುಪ್ರೀಂ ಕೋರ್ಟ್‌ ಒಳಗಣ ನಡೆಯುವ ಹಿರಿಯ ವಕೀಲರುಗಳಾದ ಕಪಿಲ್‌ ಸಿಬಲ್‌ ಹಾಗೂ ಹರೀಶ್‌ ಸಾಳ್ವೆ ನಡುವಿನ ಯುದ್ಧದಂತೆಯೂ ಭಾಸವಾಗುತ್ತಿರುವುದು ಸುಳ್ಳಲ್ಲ.

ಆದರೆ ಇದರ ಬೆನ್ನಿಗೇ ಸುಪ್ರೀಂ ಕೋರ್ಟ್‌ ಗೋಸ್ವಾಮಿಗೆ ನೀಡುತ್ತಿರುವ ʼಮಧ್ಯಂತರ ರಕ್ಷಣೆʼ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆರಂಭವಾಗಿದ್ದು, ಅರ್ನಬ್‌ ಗೋಸ್ವಾಮಿ ಪ್ರಕರಣದ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್‌ ಸಫೂರಾ ಝರ್ಗಾರ್‌ ಪ್ರಕರಣವನ್ನೂ ತನಿಖೆಗೆ ಕೈಗೆತ್ತಿಕೊಳ್ಳಲಿ ಎಂದು ಟ್ವೀಟಿಸಿದ್ದಾರೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್‌ ಮುಂದೆ ಅರ್ನಬ್‌ ಪರ ವಕೀಲ ಹರೀಶ್‌ ಸಾಳ್ವೆ “ಪ್ರಕರಣವನ್ನ ಸಿಬಿಐಗೆ ನೀಡಿದರೆ ಸಮಸ್ಯೆ ಇಲ್ಲ” ಎಂದಿರೋದನ್ನ ಉಲ್ಲೇಖಿಸಿ ಹಲವು ಟ್ವೀಟ್‌ಗಳು ಕಾಣಸಿಗುತ್ತಿವೆ.

ಮಾತ್ರವಲ್ಲದೇ ಕೋವಿಡ್-19‌ ದೃಢಪಟ್ಟ ಪೊಲೀಸರಿಂದ ವಿಚಾರಣೆಗೊಳಪಟ್ಟ ಅರ್ನಬ್‌ ಗೋಸ್ವಾಮಿ ಈಗಲೂ ಪ್ರೈಂ ಟೈಮ್‌ ಡಿಬೇಟ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ʼಕ್ವಾರೆಂಟೈನ್‌ ಮಾಡಿಕೊಳ್ಳಲಿʼ ಎಂದು ಹ್ಯಾಷ್‌ ಟ್ಯಾಗ್‌ ಮೂಲಕ ಟ್ವಿಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಒಟ್ಟಿನಲ್ಲಿ ದೇಶದ ಅತ್ಯಂತ ಪಾವಿತ್ರ್ಯತೆಯ, ಅತ್ಯಂತ ನಂಬುಗೆಯ ಹಾಗೂ ಕಾನೂನು ಮತ್ತು ಸಂವಿಧಾನ ಎತ್ತಿ ಹಿಡಿಯಬಲ್ಲ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನಂಬಿಕೆ ಕಳೆದುಕೊಳ್ಳುತ್ತಿರುವುದಕ್ಕೆ ಈ ಪ್ರಕರಣವೂ ಸಾಕ್ಷಿಯಾಗದಿರಲಿ ಅನ್ನೋದೆ ಪ್ರಜ್ಞಾವಂತರ ವಿಜ್ಞಾಪನೆ.

Click here Support Free Press and Independent Journalism

Pratidhvani
www.pratidhvani.com