ದಂಪತಿಗಳಿಗೆ Air India ಟಿಕೆಟ್, ಮಕ್ಕಳಿಗೆ ʼNo Chanceʼ; ಇದು ಕೇಂದ್ರ ಸರಕಾರದ ಎಡವಟ್ಟು ನಿರ್ಧಾರ!
ರಾಷ್ಟ್ರೀಯ

ದಂಪತಿಗಳಿಗೆ Air India ಟಿಕೆಟ್, ಮಕ್ಕಳಿಗೆ ʼNo Chanceʼ; ಇದು ಕೇಂದ್ರ ಸರಕಾರದ ಎಡವಟ್ಟು ನಿರ್ಧಾರ!

ಕರೋನಾ ಅಟ್ಟಹಾಸಕ್ಕೆ ಅಮೆರಿಕಾದಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಅಂತವರೆಲ್ಲರೂ ವಾಪಾಸ್‌ ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ. ಆದರೆ ಕೇಂದ್ರ ಸರಕಾರದ ಎಡವಟ್ಟು ನಿರ್ಧಾರದಿಂದ ಹಲವು ದಂಪತಿಗಳು ವಿಮಾನ ಟಿಕೆಟ್‌ ಕಾಯ್ದಿರಿಸಿದರೂ, ಅಮೆರಿಕನ್‌ ಪೌರತ್ವ ಹೊಂದಿದ ಅವರ ಮಕ್ಕಳಿಗೆ ಟಿಕೆಟ್‌ ನೀಡಲು AIR INDIA ನಿರಾಕರಿಸಿದೆ. ಪರಿಣಾಮ ಸಾವಿರಾರು ಮಂದಿ ಅಮೆರಿಕಾದಲ್ಲಿಯೇ ಉಳಿಯುವಂತಾಗಿದೆ. 

ಮೊಹಮ್ಮದ್‌ ಇರ್ಷಾದ್‌

ಕರೋನಾ ಸೋಂಕಿಗೆ ಮುಂದುವರಿದ ರಾಷ್ಟ್ರಗಳು ತುತ್ತಾಗಿದ್ದು, ಆ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಎನ್ನುವಂತದ್ದು ಭಾರತದ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾರಣ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಜೊತೆ ನಡೆಯಬೇಕಿರುವ ಈ ಸಂವಹನಕ್ಕೆ ಧನಾತ್ಮಕ ಫಲಿತಾಂಶ ಬಂದಲ್ಲಿ ಮಾತ್ರ ಸುಲಭವಾಗಿ ವಿದೇಶಿಗಳಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನ ತವರು ದೇಶಕ್ಕೆ ವಾಪಾಸ್‌ ಕರೆಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಗಲ್ಫ್‌ ರಾಷ್ಟ್ರಗಳಲ್ಲಿರುವ ಭಾರತೀಯರನ್ನ ಈಗಾಗಲೇ ಭಾರತಕ್ಕೆ ವಾಪಾಸ್‌ ಕರೆಸಿಕೊಳ್ಳಲಾಗಿದೆ. ಆದರೆ ಅಮೆರಿಕಾದಲ್ಲಿ ಸದ್ಯ ನೆಲೆಸಿರುವ ಅನಿವಾಸಿ ಭಾರತೀಯರು ಸಂಕಷ್ಟವನ್ನ ಎದುರಿಸುವಂತಾಗಿದೆ. ಕಾರಣ, ಕರೋನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡ ಅನಿವಾಸಿ ಭಾರತೀಯರು ಇತ್ತ ತವರಿಗೂ ಬರಲಾಗದೇ, ಅತ್ತ ಅಮೆರಿಕಾದಲ್ಲಿ ಉಳಿದುಕೊಳ್ಳಲು ಆಗದೇ ಸಂಕಟ ಪಡುತ್ತಿದ್ದಾರೆ.

ಕೆಲಸ ಕಳೆದುಕೊಂಡ H-1B ವೀಸಾ ಹೊಂದಿರುವ ವಿದೇಶಿ ಪ್ರಜೆಗಳು ಕೆಲಸ ಕಳೆದುಕೊಂಡ 60 ದಿನಗಳೊಳಗಾಗಿ ತವರು ದೇಶಕ್ಕೆ ವಾಪಾಸ್‌ ಆಗಬೇಕೆನ್ನುವ ನಿಯಮವಿದೆ. ಆದರೆ ಕರೋನಾದಿಂದಾಗಿ ಈ ಅವಧಿಯನ್ನ 180 ದಿನಗಳವರೆಗೆ ಮುಂದೂಡುವ ವಿಚಾರವನ್ನ ಕೆಲವು ದಿನಗಳ ಹಿಂದಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಿಳಿಸಿದ್ದರು.‌ ಆದರೆ ಶ್ವೇತ ಭವನ ಇಂತಹ ಯಾವುದೇ ಆದೇಶವನ್ನ ನೀಡದಿರುವುದು ಅನಿವಾಸಿ ಭಾರತೀಯರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಅತ್ತ ಅಮೆರಿಕಾದಲ್ಲಿ ಕರೋನಾ ಆರ್ಭಟವೂ ಜೋರಾಗಿದ್ದು, ದಿನವೊಂದಕ್ಕೆ ಸಾವಿರಾರು ಮಂದಿ ಸಾವನ್ನಪ್ಪುತ್ತಲೇ ಇದ್ದಾರೆ. ಈ ಮಧ್ಯೆ ಅಲ್ಲಿರುವ ಭಾರತೀಯರು ಭಾರತ ಸರಕಾರದ ಸಹಾಯ ನಿರೀಕ್ಷೆಯಲ್ಲಿದ್ದಾರೆ. ಈ ರೀತಿಯ ಸಂಕಷ್ಟಕ್ಕೆ ಒಳಗಾದ ನೂರಾರು ಕುಟುಂಬಗಳು ಅಲ್ಲಿವೆ.

ಇನ್ನೊಂದೆಡೆ ಅಮೆರಿಕಾ ಸರಕಾರವು H-1B ಹಾಗೂ ಗ್ರೀನ್‌ ಕಾರ್ಡ್‌ (ಅಮೆರಿಕಾದಲ್ಲಿ ಜನಿಸಿದ ಅನಿವಾಸಿ ಭಾರತೀಯರ ಮಕ್ಕಳಿಗೆ ಸಿಗುವ ವೀಸಾ) ಹೊಂದಿರುವ ಯಾರನ್ನೂ ಅಮೆರಿಕಾ ಬಿಟ್ಟು ತೆರಳಲು ಅವಕಾಶ ನೀಡುತ್ತಿಲ್ಲ. ಕಾರಣ, ಅಮೆರಿಕಾದಲ್ಲಿ ಕರೋನಾ ಸಂಖ್ಯೆ ಅಧಿಕವಿದ್ದು, ಆದ್ದರಿಂದ ಜಾಗತಿಕ ಪಯಣವನ್ನ ಅಮೆರಿಕಾ ನಿರ್ಬಂಧಿಸಿದೆ.

ಕಳೆದ ತಿಂಗಳು ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನ ವೀಸಾ-ರಹಿತ ಪಯಣಕ್ಕೆ ಅವಕಾಶ ನೀಡುವ ಬಗ್ಗೆಯೂ ಭಾರತ ಸರಕಾರ ತಿಳಿಸಿತ್ತು. ಆದರೆ ಇದೀಗ ಎಲ್ಲವೂ ಅಯೋಮಯವಾಗಿದ್ದು ಇಂಡೋ-ಅಮೆರಿಕನ್ನರು ಅದೇನಾಗುತ್ತೋ ಅನ್ನೋ ಆತಂಕದಲ್ಲಿದ್ದಾರೆ. ನ್ಯೂಜೆರ್ಸಿಯಲ್ಲಿ ನೆಲೆಸಿರುವ ಕುಟುಂಬವೊಂದು ಇಂತಹದ್ದೇ ಸಂದಿಗ್ಧತೆಯಲ್ಲಿ ಸಿಲುಕಿದೆ ಎಂದು ʼಪಿಟಿಐʼ ವರದಿ ಉಲ್ಲೇಖಿಸಿ ‘ದಿ ವೈರ್‌ʼ ವರದಿ ಮಾಡಿದೆ. ಇಬ್ಬರು ಮಕ್ಕಳನ್ನ ಹೊಂದಿರುವ ಪಾಂಡೆ ಕುಟುಂಬದ H-1B ವೀಸಾ ಅವಧಿ ಈಗಾಗಲೇ ಮುಗಿದಿದೆ. ಅಲ್ಲದೇ ಇಬ್ಬರು ಮಕ್ಕಳು ಅಮೆರಿಕಾ ಪೌರತ್ವ ಹೊಂದಿದವರಾಗಿದ್ದು, ಅವರನ್ನ ಎರಡೆರಡು ಸಂಕಷ್ಟಕ್ಕೆ ತಳ್ಳಿದೆ.

ಅಲ್ಲದೇ ಇದೇ ಕುಟುಂಬವು ಕಳೆದ ಸೋಮವಾರ ನೆವಾರ್ಕ್‌ ವಿಮಾನ ನಿಲ್ದಾಣ ತಲುಪಿತ್ತಾದರೂ, ಏರ್‌ ಇಂಡಿಯಾವು ಅಮೆರಿಕ ಪೌರತ್ವ ಹೊಂದಿರುವ ಪಾಂಡೆ ಕುಟುಂಬದ ಇಬ್ಬರು ಮಕ್ಕಳಿಗೆ ಟಿಕೆಟ್‌ ನೀಡಲು ನಿರಾಕರಿಸಿದೆ. ಇದರಿಂದಾಗಿ ಭಾರತಕ್ಕೆ ಬರುವ ಕನಸು ಕಂಡಿದ್ದ ಆ ದಂಪತಿ ಅಲ್ಲಿಂದಲೇ ಪುನಃ ವಾಪಾಸ್‌ ತೆರಳಬೇಕಾಯಿತು. ಕಾರಣ, ಆ ಮಕ್ಕಳಿಬ್ಬರು ಭಾರತದ ವೀಸಾ ಹೊಂದಿರಲಿಲ್ಲ. ಈ ಹಿಂದೆ ಭಾರತ ಸರಕಾರವೇ ನೀಡಿದ್ದ ಹೇಳಿಕೆಗೆ ಏರ್‌ ಇಂಡಿಯಾವು ವಿರುದ್ಧವಾಗಿ ನಡೆದಂತಾಗಿದೆ. ಈ ವಿಚಾರವನ್ನ ಏರ್‌ ಇಂಡಿಯಾದ ಅಧಿಕಾರಿ ವರ್ಗಕ್ಕೆ ಪಾಂಡೆ ದಂಪತಿ ಗಮನಹರಿಸಿದೆ. ಆದರೆ ನೆವಾರ್ಕ್‌ ನಲ್ಲಿರುವ ಏರ್‌ ಇಂಡಿಯಾ ಅಧಿಕಾರಿಗಳು ಅಸಹಾಯಕತೆಯನ್ನ ವ್ಯಕ್ತಪಡಿಸಿದ್ದಾರೆ.

“ಭಾರತ ಸರಕಾರವು ಮಾನವೀಯ ದೃಷ್ಟಿಯಿಂದ ಅವರ ಮನವಿಯನ್ನ ಆಲಿಸಿ, ಅವರಿಗೆ ತವರಿಗೆ ತೆರಳಲು ಅವಕಾಶ ನೀಡಬೇಕು” ಎಂದು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರೊಬ್ಬರು ಅವರ ಪರವಾಗಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದೀಗ ಆ ದಂಪತಿಯು ಭಾರತ ಸರಕಾರದ ನೆರವು ಸಿಗುವುದು ತಡವಾಗಬಹುದು ಅನ್ನೋ ದೃಷ್ಟಿಯಿಂದ ಮತ್ತೆ ಅಮೆರಿಕನ್‌ ಸರಕಾರದ ಕಡೆಗೆ ತಮ್ಮ ಒಲವು ತೋರಿದೆ. ತಮ್ಮ ವೀಸಾ ಅವಧಿಯನ್ನ ವಿಸ್ತರಣೆ ಮಾಡುವಂತೆ ಸರಕಾರವನ್ನ ಒತ್ತಾಯಿಸಲು ಮುಂದಾಗಿದೆ. ಈ ಹಿಂದೆ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಕೂಡಾ ಅಮೆರಿಕಾ ಅಧ್ಯಕ್ಷರಲ್ಲಿ ವೀಸಾ ಮುಕ್ತಾಯದ ಅವಧಿಯನ್ನ 60 ರಿಂದ 180 ದಿವಸಗಳಿಗೆ ವಿಸ್ತರಿಸುವಂತೆ ಮನವಿ ಮಾಡಿತ್ತು. ಆದರೆ ಶ್ವೇತ ಭವನದಿಂದ ಅದಕ್ಕೆ ಇದುವರೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ.

ಒಂದು ಮಾಹಿತಿ ಪ್ರಕಾರ, ಕೆಲಸದ ನಿಮಿತ್ತ ಪಡೆದ H-1B ವೀಸಾ ಅವಧಿ ಮುಗಿದಿರುವ ಭಾರತೀಯರ ಅಂಕಿಅಂಶ ಇದುವರೆಗೂ ಶ್ವೇತ ಭವನದ ಅಧಿಕಾರಿಗಳಲ್ಲಿ ಇಲ್ಲದಾಗಿದ್ದು, ಅಲ್ಲದೇ ಈ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಅಮೆರಿಕಾದಲ್ಲಿ ಕರೋನಾ ಸಂದಿಗ್ಧತೆಯಿಂದ ಕಳೆದ 2 ತಿಂಗಳಲ್ಲಿ ಸುಮಾರು 3 ಕೋಟಿಗೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಅದರಲ್ಲಿ ಬಹುತೇಕ ಭಾರತೀಯರೇ ಇದ್ದಾರೆ ಎನ್ನಲಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿರುವ NRI ಗಳು ಈಗ ವಾಪಾಸ್‌ ಬರಲೂ ಆಗದೇ, ಅಮೆರಿಕಾದಲ್ಲಿಯೇ ವೀಸಾ ಅವಧಿ ಮುಗಿದ ಬಳಿಕವೂ ಅಲ್ಲೇ ಉಳಿಯುವಂತಾಗಿದೆ.

ಇನ್ನೊಂದು ಘಟನೆಯಲ್ಲಿ 3 ತಿಂಗಳ ಮಗುವನ್ನ ಹೊಂದಿರುವ ತಾಯಿಯೊಬ್ಬಳು ತನ್ನ ಮಗುವಿಗೆ ಟಿಕೆಟ್‌ ಪಡೆಯಲು ಅಸಾಧ್ಯವಾಗಿ ನೆವಾರ್ಕ್‌ ಏರ್‌ಪೋರ್ಟ್‌ ನಲ್ಲಿಯೇ ಉಳಿಯಬೇಕಾಯಿತು. ಅಹ್ಮದಾಬಾದ್‌ ಮೂಲದ ಆ ಮಹಿಳೆ ಅನಿವಾರ್ಯವಾಗಿ ವಿಮಾನವನ್ನ ತಪ್ಪಿಸಿಕೊಳ್ಳಬೇಕಾಯಿತು. “ನಾನು ಅಮೆರಿಕಾದಲ್ಲಿ ಇರಲು ಇಚ್ಛಿಸುತ್ತಿಲ್ಲ. ಹಾಗಾಗಿ ತವರಿಗೆ ವಾಪಾಸ್‌ ಆಗಲು ಭಾರತ ಸರಕಾರ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸುವುದಾಗಿ” ಪಿಟಿಐ ಗೆ ತಿಳಿಸಿದ್ದಾರೆ. ಅಲ್ಲದೇ “ ಇಲ್ಲಿ ಮಗು ಜೊತೆ ನಾನೊಬ್ಬಳೇ ಇದ್ದು, ನನ್ನ ಸಂಬಂಧಿಕರೂ ಇಲ್ಲಿ ಯಾರೂ ಇಲ್ಲ” ಎಂದು ಹೇಳಿದ್ದಾರೆ.

ʼವಂದೇ ಭಾರತ್‌ʼ ಮಿಷನ್‌ ಅನ್ನೋದು ಮಾನವೀಯ ಮಿಷನ್‌ ಆಗಬೇಕಿತ್ತು. ಆದರೆ ದುರಾದೃಷ್ಟವಶಾತ್‌ ಇದು ಅಮಾನವೀಯ ಮಿಷನ್‌ ಆಗಿ ಬದಲಾಗಿದ್ದಾಗಿ ಅಮೆರಿಕಾದ ವಾಷಿಂಗ್ಟನ್‌ ನಲ್ಲಿ ನೆಲೆಸಿರುವ ರಾಕೇಶ್‌ ಗುಪ್ತಾ (ಹೆಸರು ಬದಲಾಯಿಸಲಾಗಿದೆ) ತಿಳಿಸಿದ್ದಾರೆ. H-1B ವೀಸಾದಡಿ ಅಮೆರಿಕಾ ತೆರಳಿ ಉದ್ಯೋಗ ಪಡೆದುಕೊಂಡಿದ್ದ ರಾಕೇಶ್‌ ಗುಪ್ತಾ ಕರೋನಾ ಸಂದಿಗ್ಧತೆ ನಂತರ ಉದ್ಯೋಗ ಕಳೆದುಕೊಂಡಿದ್ದು, ವಾಪಾಸ್‌ ತವರಿಗೆ ಬರಲು ಕಾತುರರಾಗಿದ್ದಾರೆ. ಅವರ ಪತ್ನಿಯೂ ಅಲ್ಲೇ ಇದ್ದು, ಏರ್‌ ಇಂಡಿಯಾದಲ್ಲಿ ಟಿಕೆಟ್‌ನ್ನೂ ಕಾಯ್ದಿರಿಸಿದ್ದರು. ಆದರೆ ಅವರ 2.5 ವರುಷದ ಅಮೆರಿಕಾ ಪೌರತ್ವ ಹೊಂದಿದ ಮಗುವಿನಿಂದಾಗಿ ತವರಿಗೆ ಬರುವ ಅವರ ಕನಸಿಗೆ ತಣ್ಣೀರೆರಚಿದಂತಾಗಿದೆ.

ಈ ರೀತಿ ಅಮೆರಿಕಾ ಪೌರತ್ವ ಹೊಂದಿರುವ ಮಕ್ಕಳನ್ನ ಹೊಂದಿದ ಕಾರಣಕ್ಕಾಗಿ ಪಯಣ ಮೊಟಕುಗೊಳಿಸಿರುವ ದಂಪತಿಗಳಲ್ಲಿ ಕೆಲವರು ಈಗಾಗಲೇ ಟಿಕೆಟ್‌ ಹಣ ಪಾವತಿ ಮಾಡಿದ್ದರೆ, ಇನ್ನು ಕೆಲವರು ಪಾವತಿಸಿಲ್ಲ ಎನ್ನಲಾಗಿದೆ. ಆದ್ದರಿಂದ ಸದ್ಯ ಏರ್‌ ಪೋರ್ಟ್‌ ಹಾಗೂ ಅಮೆರಿಕಾದ ಹಲವೆಡೆ ಉದ್ಯೋಗ ಕಳೆದುಕೊಂಡು ಊರಿಗೆ ವಾಪಾಸ್‌ ಆಗಲು ತಯಾರಾಗಿರುವ ಮಂದಿ ಹಾಲಿ ಇರುವ ನಿಯಮಗಳಲ್ಲಿ ಸಡಿಲಿಕೆ ಮಾಡಿ ತವರಿಗೆ ವಾಪಾಸ್‌ ಆಗಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

Click here Support Free Press and Independent Journalism

Pratidhvani
www.pratidhvani.com