ಪ್ರಧಾನಿ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಸಲಹೆಗಳೇನು?
ರಾಷ್ಟ್ರೀಯ

ಪ್ರಧಾನಿ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಸಲಹೆಗಳೇನು?

ಲಾ‌ಕ್‌ಡೌನ್‌ ಮುಂದೂಡಿಕೆ, ಆರ್ಥಿಕ ಚಟುವಟಿಕೆಗಳ ಹಾಗೂ ಕಂಟೈನ್ಮೆಂಟ್ ವಾರ್ಡುಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದು ಮುಖ್ಯಮಂತ್ರಿಗಳು ಹಲವು ಸಲಹೆಗಳನ್ನು ನೀಡಿದ್ದಾರೆ. ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ನೀಡಿದ ಈ ಸಲಹೆಗಳು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಹಕಾರಿಯಾಗಲಿವೆ.

ಪ್ರತಿಧ್ವನಿ ವರದಿ

ಕರೋನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳೊಂದಿಗಿನ 5ನೇ ವೀಡಿಯೋ ಕಾನ್ಫರೆನ್ಸ್‌ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಆರ್ಥಿಕ ಚಟುವಟಿಕೆಗಳ ಹಾಗೂ ಕಂಟೈನ್‌ಮೆಂಟ್‌ ವಾರ್ಡುಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದು ಮುಖ್ಯಮಂತ್ರಿಗಳು ಸಲಹೆಗಳನ್ನು ನೀಡಿದ್ದಾರೆ.

ಕಠಿಣ ಲಾಕ್‌ಡೌನ್ ಮುಂದುವರೆಸದೆ ಕರೋನಾ ಸೋಂಕನ್ನು ತಡೆಹಿಡಿಯಲು ಸಾಧ್ಯವಿಲ್ಲ ಹಾಗಾಗಿ ನಿಬಂಧನಗಳೊಂದಿಗೆ ಲಾಕ್‌ಡೌನನ್ನು ಮುಂದುವರೆಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೇಳಿಕೊಂಡಿದ್ದಾರೆ.

ಕರೋನಾದ ವಿರುಧ್ಧದ ಹೋರಾಟದಲ್ಲಿ ರಾಜ್ಯಗಳೊಂದಿಗೆ ಸ್ಪಂದಿಸುವಾಗ ರಾಜಕೀಯ ಮಾಡಬಾರದು. ಎಲ್ಲಾ ರಾಜ್ಯಗಳನ್ನು ಒಂದೇ ತೆರನಾಗಿ ಗಮನಿಸಬೇಕು, ಇಡೀ ದೇಶವೇ ಒಗ್ಗಟ್ಟಾಗಿ ಕರೋನಾದ ವಿರುದ್ದ ಹೋರಾಡಬೇಕು ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಾಕ್‌ಡೌನ್‌ ವಿಸ್ತರಿಸಬೇಕು ಎಂದು ಹೇಳಿದ್ದಾರೆ.

ದೇಶ ರಾಜಧಾನಿಯಲ್ಲಿ, ಕಂಟೈನ್‌ಮೆಂಟ್‌ ಝೋನ್‌ ಹೊರತು ಪಡಿಸಿ ಉಳಿದ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೇಳಿಕೊಂಡಿದ್ದಾರೆ.

ಪ್ರತಿ ರಾಜ್ಯವು ತನ್ನದೇ ರೀತಿಯಾದ ಹಲವು ಸವಾಲುಗಳನ್ನು ಎದುರಿಸುತ್ತಿದೆ, ಹಾಗಾಗಿ ಲಾಕ್‌ಡೌನ್‌ ಕುರಿತು ಇರುವ ಮಾರ್ಗಸೂಚಿಗಳಲ್ಲಿ ಮಾರ್ಪಾಡು ತರಲು ರಾಜ್ಯ ಸರ್ಕಾರಗಳಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಮೇ 31ರ ವರೆಗೆ ರೈಲು ಮತ್ತು ವಿಮಾನ ಸಂಚಾರವನ್ನು ಪುನರಾರಂಭಿಸುವುದನ್ನು ವಿರೋಧಿಸಿದ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ, ಕರೋನಾ ವಿರುದ್ಧದ ಹೋರಟಕ್ಕೆ ಇನ್ನಷ್ಟು PCR ಕಿಟ್‌ಗಳನ್ನು ನೀಡುವಂತೆ ಕೇಂದ್ರದ ಬಳಿ ಕೇಳಿಕೊಂಡಿದ್ದಾರೆ.

ಜನಜೀವನ ದುಸ್ತರವಾಗದಂತೆ ಮತ್ತು ಜೀವನೋಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳಿಗೆ ಇನ್ನಷ್ಟು ಹೆಚ್ಚಿನ ಆರ್ಥಿಕ ಬಲ ನೀಡಿ ಲಾಕ್‌ಡೌನ್‌ ಮುಂದುವರೆಸಬೇಕೆಂದು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಸಲಹೆ ನೀಡಿದ್ದಾರೆ.

ಜನರು ಕೆಂಪು ವಲಯದಿಂದ ಹಸಿರು ವಲಯಕ್ಕೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಷೇದಿಸಬೇಕೆಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ತಮ್ಮ ರಾಜ್ಯವು ಗೋಧಿ ಬೆಳೆಯ ಉತ್ತಮ ಇಳುವರಿಯೊಂದಿಗೆ ಉತ್ತಮ ಜಿಡಿಪಿಯನ್ನು ದೇಶಕ್ಕೆ ನೀಡುತ್ತಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ನೆನಪಿಸಿದ್ದಾರೆ.

ಲಾಕ್‌ಡೌನ್‌ ಮುಂದುವರೆಸಲು ಕೇಳದ ಒಡಿಸ್ಸಾ ಮುಖ್ಯಮಂತ್ರಿ ನವೀನ್‌ ಪಾಟ್ನಾಯಿಕ್‌ ಲಾಕ್‌ಡೌನ್‌ ನಿಯಮಗಳಲ್ಲಿ ವಿಶಾಲತೆ ಬೇಕು ಎಂದಿದ್ದಾರೆ. ವಿಕೇಂದ್ರಿಕೃತ ರೀತಿಯಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರಗಳೊಂದಿಗೆ ಅವಲೋಕಿಸಿದ ಬಳಿಕ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಲಹೆ ನೀಡಿದ್ದಾರೆ.

ಸೋಂಕು ಪತ್ತೆಯಾಗದ ಸುರಕ್ಷಿತ ವಲಯದಲ್ಲಿ ಮೆಟ್ರೊ ಮರು ಪ್ರಾರಂಬಿಸಬಹುದೆಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅಭಿಪ್ರಾಯಿಸಿದ್ದಾರೆ.

ರೈಲು ಸಂಚಾರವನ್ನು ಪ್ರಾರಂಭಿಸುವ ಕುರಿತು ವಿರೋಧ ವ್ಯಕ್ತ ಪಡಿಸಿದ ತೆಲಂಗಾಣ ಸಿಎಮ್‌ ಕೆ ಚಂದ್ರಶೇಖರ್‌ ರಾವ್‌ ರೈಲು ಸಂಚಾರ ಆರಂಭಿಸಿದರೆ ಜನರನ್ನು ಪರೀಕ್ಷಿಸಲು ಹಾಗೂ ಕ್ವಾರಂಟೈನ್‌ನಲ್ಲಿರಿಸಲು ಕಷ್ಟವಾಗಬಹುದೆಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ವ್ಯಾಪ್ತಿಯಡಿಯಲ್ಲಿ ಬರುವ ಪ್ರದೇಶಗಳನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ವಿಂಗಡಿಸುವುದನ್ನು ರಾಜ್ಯ ಸರ್ಕಾರಗಳಿಗೆ ವಹಿಸಬೇಕು ಎಂದು ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಹೇಳಿದ್ದಾರೆ.

Click here Support Free Press and Independent Journalism

Pratidhvani
www.pratidhvani.com