ಕರೋನಾ ಸೋಂಕಿಲ್ಲದೆ ಕೇವಲ ಲಾಕ್ಡೌನ್ ನಿಂದ ಮಾತ್ರವೇ ಸತ್ತವರ ಸಂಖ್ಯೆ ಎಷ್ಟುಗೊತ್ತಾ?      
ರಾಷ್ಟ್ರೀಯ

ಕರೋನಾ ಸೋಂಕಿಲ್ಲದೆ ಕೇವಲ ಲಾಕ್ಡೌನ್ ನಿಂದ ಮಾತ್ರವೇ ಸತ್ತವರ ಸಂಖ್ಯೆ ಎಷ್ಟುಗೊತ್ತಾ?     

ಭಾರತದಲ್ಲಿ ಕರೋನಾ ಆರಂಭದಿಂದ ಇದುವರೆಗೂ ಸಾಕಷ್ಟು ಸಾವು-ನೋವು ಪ್ರಕರಣ ದಾಖಲಾಗಿದೆ. ಅದರಲ್ಲೂ ವಲಸೆ ಕಾರ್ಮಿಕರ ಬದುಕಂತೂ ಲಾಕ್‌ಡೌನ್‌ ನಿಂದ ದುಸ್ತರವಾಗಿಬಿಟ್ಟಿದೆ. ತಮ್ಮ ಊರುಗಳಿಗೆ ಬರೀ ಕಾಲ್ನಡಿಗೆಯಲ್ಲಿ ಹೊರಟ ಅದೆಷ್ಟೋ ಮಂದಿ ಮನೆ ಸೇರೋ ಮುಂಚೆಯೇ ಮಸಣ ಸೇರುವಂತಾಗಿದೆ. ಇಂತಹ ಬಡಪಾಯಿ ಕಾರ್ಮಿಕರ ಸಾವಿನ ಸಂಖ್ಯೆ ಸುತ್ತ ಒಂದು ಅವಲೋಕನ.

ಶಿವಕುಮಾರ್‌ ಎ

ಅದೆಲ್ಲೋ ಮಹಾರಾಷ್ಟ್ರದಿಂದ ಕಾಲ್ನಡಿಗೆಯಲ್ಲಿ ರೈಲ್ವೆ ಹಳಿಯ ಮೇಲೆ ಮನೆಗೆ ಹೊರಟಿದ್ದ ಕಾರ್ಮಿಕರು ರೈಲು ಹಳಿಗಳಿಗೆ ಬಲಿಯಾಗುತ್ತಾರೆ...ಇನ್ನೆಲ್ಲೋ ತೆಲಂಗಾಣದಿಂದ ಜಾರ್ಖಂಡ್ ಗೆ ನಡೆದೇ ತೆರಳಿದ್ದ 12 ವರ್ಷದ ಬಾಲಕಿ ನಿರ್ಜಲೀಕರಣದಿಂದಾಗಿ ಮಸಣ ಸೇರುತ್ತಾಳೆ. ಮತ್ತೆ ಅಲ್ಲಿ.. ರಾಷ್ಟ್ರ ರಾಜಧಾನಿ ದೆಹಲಿಯಿಂದ ಕಾಲ್ನಡಿಗೆಯಲ್ಲೇ ಉತ್ತರಪ್ರದೇಶಕ್ಕೆ ತೆರಳಿದ್ದವರ ಪೈಕಿ ದಾರಿ ನಡುವೆ ಮೃತಪಟ್ಟ ಮಗುವನ್ನು ಎತ್ತಿಕೊಂಡು ಅಳುತ್ತಾ ಸಹಾಯಕ್ಕಾಗಿ ಅಂಗಲಾಚಿದ ಆ ತಾಯಿಯ ಆಕ್ರಂದನವನ್ನೂ ಭಾಗಶಃ ಭಾರತದ ಮಾನವೀಯ ಸಮಾಜ ಮರೆತಿರಲಾರದು.

ಆದರೆ, ಈ ಸಾವುಗಳು ಅನಿರೀಕ್ಷಿತವೇನಲ್ಲ. ಮಾರ್ಚ್ 24 ರ ರಾತ್ರಿ 9 ಗಂಟೆಗೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡು ದಿಢೀರನೆ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆಯೇ ಈ ದೇಶದ ಬಡ ಮತ್ತು ಕೂಲಿಕಾರ್ಮಿಕರ ಸಾವಿಗೆ ಷರಾ ಬರೆಯಲಾಗಿತ್ತೇನೋ?. ಸಾಯುತ್ತಿರುವವರ ಸಂಖ್ಯೆ ಹೀಗೆ ಸಾಲು ಸಾಲಾಗಿ ಮುಂದುವರೆಯುತ್ತಲೇ ಇದೆ ಮತ್ತು ಹೀಗೆ ಸತ್ತವರೆಲ್ಲಾ ಬಡವರು- ವಲಸೆ ಕೂಲಿ ಕಾರ್ಮಿಕರು ಎಂಬುದು ಉಲ್ಲೇಖಾರ್ಹ.

ಭಾರತದ ಮಟ್ಟಿಗೆ ಕಾರ್ಮಿಕರ ವಲಸೆ ಎಂಬುದು ತೀರಾ ಸಾಮಾನ್ಯ ಸಂಗತಿ. ಬೆಂಗಳೂರಿನ ಕಟ್ಟಡ ಕಾರ್ಮಿಕರ ಪೈಕಿ ಶೇ.90 ರಷ್ಟು ಜನ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಇಲ್ಲಿಗೆ ಆಗಮಿಸಿದವರೇ ಆಗಿದ್ದಾರೆ. ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಸ್ಥಳೀಯವಾಗಿ ಕಟ್ಟಡ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಇಲ್ಲಿನ ನಿರ್ಮಾಣ ಯಂತ್ರ ಸಾಂಗತ್ಯವಾಗಿ ಸಾಗಲು ವಲಸೆ ಕಾರ್ಮಿಕರು ಅವಶ್ಯಕ. ಹೀಗಾಗಿ ಎಲ್ಲಾ ರಾಜ್ಯದಲ್ಲೂ ಲಕ್ಷಾಂತರ ವಲಸೆ ಕಾರ್ಮಿಕರು ಇರುವುದು ಸಹಜ.

ಇಂತಹ ದೇಶದಲ್ಲಿ ಯಾವುದೇ ಪೂರ್ವ ಸಿದ್ದತೆ ಇಲ್ಲದೆ, ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡುವ ಕನಿಷ್ಟ ಜವಾಬ್ದಾರಿಯೂ ವಹಿಸದೆ ಏಕಾಏಕಿ ರಾತ್ರೋರಾತ್ರಿ ಲಾಕ್ಡೌನ್ ಘೋಷಿಸಲಾಗಿತ್ತು. ಮರು ದಿನದಿಂದ ಈ ಕಾರ್ಮಿಕ ವರ್ಗದ ಜನರಿಗೆ ಕೆಲಸ ಇಲ್ಲ, ಕೂಲಿ ಇಲ್ಲ, ಅತ್ತ ಊಟವೂ ಇಲ್ಲ. ಹೀಗೆ ಇಲ್ಲಗಳ ನಡುವೆಯೇ ಕಳೆದು ಹೋಯ್ತು ಬರೋಬ್ಬರಿ 45 ದಿನ.

ಕಳೆದ 45 ದಿನಗಳಲ್ಲಿ ದೇಶದ ನಾನಾಮೂಲೆಯಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು ತಿನ್ನಲು ಅನ್ನವೂ ಇಲ್ಲದ ಸಂಕಷ್ಟದ ನಡುವೆ ದಿನದೂಡಿದ್ದಾರೆ. ಹಲವಾರು ಕಾರ್ಮಿಕರು ಬಸ್ಸು ರೈಲು ವ್ಯವಸ್ಥೆ ಇಲ್ಲದೆ ತಮ್ಮ ಊರಿಗೆ ನೂರಾರು ಕಿಮೀ ನಡೆದೇ ತೆರಳಲು ಮುಂದಾಗಿದ್ದಾರೆ. ಭಾರತದ ವಲಸೆ ಕಾರ್ಮಿಕರ ಇಂತಹ ಮಹಾ ನಡಿಗೆಗಳು ಹತ್ತಾರು ಸಾವಿಗೂಕಾರಣವಾಗಿದೆ. ಭಾರತದ ಇತಿಹಾಸದಲ್ಲಿ ಮರೆಯಲಾಗದ ಅಂತಹ ಒಂದು ಮಹಾ ಕರಾಳ ಘಟನೆಯೇ ಔರಂಗಾಬಾದ್ ರೈಲು ಅಪಘಾತ.

ಇಡೀ ಭಾರತವನ್ನು ಕದಡಿಹಾಕಿತ್ತು ಅದೊಂದು ಘಟನೆ:

ಅದು ಮೇ 08ರ ಮುಂಜಾವು. ಜನ ಇನ್ನೂ ನಿದ್ದೆಯಿಂದ ಏಳುವ ಮುನ್ನವೇ ಭಾರೀ ಆಘಾತವೊಂದು ಕಾದಿತ್ತು. ಏನಿಲ್ಲವೆಂದರೂ ಅಂದು ಬರೋಬ್ಬರಿ 16 ಜನ ಅಮಾಯಕ ವಲಸೆ ಕಾರ್ಮಿಕರು ರೈಲು ಹಳಿಗಳಿಗೆ ಬಲಿಯಾಗಿದ್ದರು.

ಲಾಕ್ಡೌನ್ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಮಧ್ಯಪ್ರದೇಶದ ಕಾರ್ಮಿಕರು ರೈಲ್ವೆ ಹಳಿಯನ್ನು ಅನುಸರಿಸಿ ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಇನ್ನೂ 45 ಕಿಮೀ ನಡೆದಿದ್ದರೆ ಅವರ ಊರು ಬರುತ್ತಿತ್ತು. ಆದರೆ, ಈ ವೇಳೆ ಸುಸ್ತಾದ ಕಾರ್ಮಿಕರು ವಿಶ್ರಾಂತಿಗೆಂದು ರಾತ್ರಿ ಹಳಿಯ ಮೇಲೆ ಮಲಗಿದ್ದಾರೆ.

ಆದರೆ, ಮರುದಿನ ಬೆಳಗ್ಗೆ ಜಾಲ್ನಾದಿಂದ ಔರಂಗಾಬಾದ್ನತ್ತ ತೆರಳುತ್ತಿದ್ದ ಗೂಡ್ಸ್ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ 16 ಜನ ಅಮಾಯಕ ವಲಸೆ ಕಾರ್ಮಿಕರು ಮೃತಪಟ್ಟಿದ್ದರು. ಅಲ್ಲದೆ, ಐವರ ಸ್ಥಿತಿ ಗಂಭೀರವಾಗಿತ್ತು. ಈ ಘಟನೆಯ ನಂತರ ಇದು ಸಾವಲ್ಲ ವ್ಯವಸ್ಥೆಯಿಂದಾದ ಕೊಲೆ ಎಂದು ಸರ್ಕಾರದ ಮೇಲೆ ತೀವ್ರ ಅಸಮಧಾನ ವ್ಯಕ್ತವಾಗುತ್ತಿದೆ.

ಲಾರಿ ಪಲ್ಟಿಯಾಗಿ ಸತ್ತರಲ್ಲ 5 ಜನ ಕಾಮಿಕರು:

ಶನಿವಾರ ರಾತ್ರಿ ನಡೆದ ಮತ್ತೊಂದು ಘಟನೆಯಲ್ಲಿ, ತೆಲಂಗಾಣದ ಹೈದರಾಬಾದ್ ನಗರದಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ಮಾವಿನಕಾಯಿ ಸಾಗಿಸುತ್ತಿದ್ದ ಟ್ರಕ್ ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಪಾಥಾ ಗ್ರಾಮದಲ್ಲಿ ಪಲ್ಟಿ ಹೊಡೆದು ಅಫಘಾತಕ್ಕೀಡಾಯಿತು. ಪರಿಣಾಮ ಆ ಟ್ರಕ್ನಲ್ಲಿದ್ದ 18 ಕಾರ್ಮಿಕರಲ್ಲಿ ಕನಿಷ್ಠ ಐದು ವಲಸೆ ಕಾರ್ಮಿಕರು ಸಾವನ್ನಪ್ಪಿದರು ಮತ್ತು 13 ಮಂದಿ ಗಾಯಗೊಂಡಿದ್ದರು.

ದೇಶದಲ್ಲಿ ಕರೋನಾದಿಂದ ಈವರೆಗೆ 850 ಜನ ಮೃತಪಟ್ಟಿದ್ದರೆ, ಕೊರೊನಾ ಲಾಕ್ಡೌನ್ನಿಂದಾಗಿ ದೇಶದಾದ್ಯಂತ ರಸ್ತೆ ಮತ್ತು ರೈಲು ಅಪಘಾತಗಳಿಂದ ಹಿಡಿದು ಹಸಿವು, ವೈದ್ಯಕೀಯ ಚಿಕಿತ್ಸೆ ನಿರಾಕರಣೆ, ಪೊಲೀಸ್ ದೌರ್ಜನ್ಯ, ಬಳಲಿಕೆ ಮತ್ತು ಆತ್ಮಹತ್ಯೆ ಸೇರಿದಂತೆ ಒಟ್ಟು 383 ಜನರು ಸಾವನ್ನಪ್ಪಿದ್ದಾರೆ “ದಿ ವೈರ್” ವರದಿ ಮಾಡಿದೆ.

ಲಾಕ್ಡೌನ್ನಿಂದ ಉಂಟಾದ ಸಾವುಗಳು (ಮೇ 10 2020 ರವರೆಗೆ)

ಸಾವಿಗೆ ಕಾರಣಗಳು ಮತ್ತು ಸಾವಿನ ಸಂಖ್ಯೆ

#ಹಸಿವು ಮತ್ತು ಆರ್ಥಿಕ ತೊಂದರೆ – 47

#ಬಳಲಿಕೆ (ನಡೆದು ಪ್ರಯಾಣ, ಸರತಿ ಸಾಲಿನಲ್ಲಿ ನಿಂತು ಮೃತಪಟ್ಟವರು)- 26

#ಪೊಲೀಸ್ ದೌರ್ಜನ್ಯ ಅಥವಾ ಸರ್ಕಾರದ ಹಿಂಸೆಯಿಂದ ಮೃತಪಟ್ಟವರು -12

#ವೈದ್ಯಕೀಯ ಆರೈಕೆಯ ಕೊರತೆಯಿಂದ ಮೃತಪಟ್ಟವರು (ವೃದ್ಧರು ಅಥವಾ ರೋಗಿಗಳು) – 40

#ಸೋಂಕಿನ ಭಯ, ಒಂಟಿತನ ಮತ್ತು ನಡೆದಾಡುವ ಸ್ವಾತಂತ್ರ್ಯದ ಕೊರತೆಯಿಂದಾದ ಆತ್ಮಹತ್ಯೆಗಳು – 83•

#ಮದ್ಯ ನಿಷೇಧ (ಸಂಬಂಧಿತ ಸಾವುಗಳು ಮತ್ತು ಆತ್ಮಹತ್ಯೆಗಳು) – 46

#ನಡೆದು ಪ್ರಯಾಣ / ವಲಸೆಯ ಕಾರಣದಿಂದಾಗಿ ರಸ್ತೆ ಅಥವಾ ರೈಲು ಅಪಘಾತಗಳಿಂದಾದ ಸಾವುಗಳು – 74

#ಲಾಕ್ಡೌನ್‌ ಗೆ ಸಂಬಂಧಿಸಿದ ಅಪರಾಧಗಳಿಂದ ಸಾವು-55

Click here Support Free Press and Independent Journalism

Pratidhvani
www.pratidhvani.com