ಮಂಡಿಯೂರಿದ ಸಂಪಾದಕರು ಮತ್ತು ಅಸಹಾಯಕ ವರದಿಗಾರರು!
ರಾಷ್ಟ್ರೀಯ

ಮಂಡಿಯೂರಿದ ಸಂಪಾದಕರು ಮತ್ತು ಅಸಹಾಯಕ ವರದಿಗಾರರು!

ಕರೋನಾದಂತಹ ಮಹಾಮಾರಿ ಕೂಡ ಭಾರತೀಯ ಪತ್ರಿಕೋದ್ಯಮ ತಲುಪಿರುವ ಅಧೋಗತಿಯ ದರ್ಶನ ಮಾಡಿಸಿದೆ. ಈ ಹೊತ್ತಲ್ಲಿ, ಪತ್ರಕರ್ತ ಮತ್ತು ಪತ್ರಿಕಾವೃತ್ತಿ ಕುರಿತ ‘ದ ಕ್ಯಾರವಾನ್’ ಪ್ರಕಟಿಸಿರುವ ವಿನೋದ್ ಕೆ ಜೋಸ್ ಅವರ ಲೇಖನ ಸರಣಿಯ ಆಯ್ದಭಾಗದ ಕೊನೆಯ ಕಂತು ಇಲ್ಲಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಪತ್ರಕರ್ತನ ಬಲವೇ ಆತನ ಬಳಿ ಇರುವ ಮಾಹಿತಿ. ನೈಜ ಮಾಹಿತಿ ಎಂದರೆ ಅದು ಸತ್ಯ, ವಾಸ್ತವದ ಬಲ. ಪ್ರಭಾವಿ ವ್ಯಕ್ತಿಗಳು ಅಥವಾ ಅವರ ಚೇಲಾಗಳು ಅಂತಹ ಪತ್ರಕರ್ತರನ್ನು ನಿರ್ಲಕ್ಷಿಸಬಹುದು. ಅಂಥವರನ್ನು ಮೂರ್ಖರಂತೆ ಬಿಂಬಿಸಲು ಪ್ರಯತ್ನಿಸಬಹುದು. ಅಂಥವರ ವರದಿಗಳು ಮೇಲ್ನೋಟಕ್ಕೆ ಎದ್ದುಕಾಣುವಂತ ಪರಿಣಾಮ ಬೀರದೇ ಇರಬಹುದು. ಎಲ್ಲವೂ ಹಿಂದಿನಂತೆಯೇ ಮುಂದುವರಿಯಬಹುದು. ಆದರೆ, ವರದಿ ಮಾಡುವ ಮೂಲಕ ತನ್ನ ಕರ್ತವ್ಯವನ್ನು ಆತ ಮಾಡಿದ್ದಾನೆ. ತನ್ನ ಕೆಲಸದ ಮೂಲಕ ನೈತಿಕ ಸ್ಥೈರ್ಯ ತೋರಿದರೆ ಅಲ್ಲಿಗೆ ಪತ್ರಕರ್ತನ ಸಾರ್ವಜನಿಕ ಹೊಣೆಗಾರಿಕೆ ಮುಗಿಯಿತು. ಉಳಿದದ್ದು ಸಮಾಜ ಮತ್ತು ಅದರ ಆತ್ಮಸಾಕ್ಷಿಗೆ ಬಿಟ್ಟದ್ದು.

ಆತ್ಮಸ್ಥೈರ್ಯದ ಬಳಿಕ ಪತ್ರಕರ್ತ ಗಮನಿಸಬೇಕಾದ ಮತ್ತೊಂದು ಸಂಗತಿ ವಿಷಯದ ಕುರಿತ ತನ್ನ ತಿಳಿವಳಿಕೆಯನ್ನು ಸದಾ ನವೀಕರಿಸಿಕೊಳ್ಳುತ್ತಲೇ ಇರಬೇಕಾದ ವೃತ್ತಿಪರತೆ. ಪತ್ರಕರ್ತ ತನ್ನ ತಿಳಿವನ್ನು, ವಿಷಯವಾರು ಅರಿವನ್ನು ಸದಾ ಅಪ್ ಡೇಟ್ ಮಾಡಿಕೊಳ್ಳುತ್ತಲೇ ಇರಬೇಕಾಗುತ್ತದೆ. ಪತ್ರಕರ್ತನೆಂದರೆ ಎಲ್ಲದೂ ಗೊತ್ತಿರುವ, ಆದರೆ ಕೆಲವು ವಿಷಯದಲ್ಲಿ ಮಾತ್ರ ಪರಿಣತನಾಗಿರುವವ ಎಂಬ ಮಾತಿದೆ. ಆದರೆ, ಅಂತಹ ಮಾತುಗಳಿಗೆ ಜೋತುಬೀಳದೆ ನಿರಂತರವಾಗಿ ನಿತ್ಯವೂ ತನ್ನ ಜ್ಞಾನವನ್ನು, ಹೊಸ ಹೊಸ ವಿಷಯ ಮತ್ತು ರಂಗಗಳ ಕುರಿತ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳುವುದು ಪತ್ರಕರ್ತನಾದವನಿಗೆ ಅಗತ್ಯ. ಅದು ಆತನ ಪೂರ್ವಗ್ರಹಗಳನ್ನು ಮೀರಲು ಕೂಡ ನೆರವಾಗುತ್ತದೆ. ಆತನ ಅರಿವಿನ ವ್ಯಾಪ್ತಿ ನಾವು ಸೃಷ್ಟಿಸಿಕೊಂಡಿರುವ, ಇತಿಹಾಸ, ಭೂಗೋಳ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕಾನೂನುಶಾಸ್ತ್ರ ಮುಂತಾದ ಜ್ಞಾನಶಿಸ್ತುಗಳ ಸಾಂಪ್ರದಾಯಿಕ ವಿಭಾಗೀಕರಣವನ್ನೂ ಮೀರಿದ್ದಾಗಿರಬೇಕು.

ಅದರಲ್ಲೂ ಮುಖ್ಯವಾಗಿ ಸಮಾಜಶಾಸ್ತ್ರ ಮತ್ತು ಇತಿಹಾಸ ವಿಷಯಗಳನ್ನು ಪತ್ರಕರ್ತನಾದವನು ಹೆಚ್ಚು ಸಮಗ್ರವಾಗಿ ತಿಳಿಯುವ ಅಗತ್ಯವಿದೆ. ಪತ್ರಕರ್ತರ ಎಲ್ಲಾ ಯೋಚನೆ ಮತ್ತು ಬರಹ ಸಮಾಜವನ್ನೇ ಕುರಿತದ್ದು. ಸಮಾಜದ ಭೂತ ಮತ್ತು ಭವಿಷ್ಯವನ್ನೇ ಕುರಿತದ್ದು. ಹಾಗಾಗಿ ಮಾನವ ಸಮಾಜದ ವರ್ತನೆ, ವಿಕಾಸಗಳ ಕುರಿತ ಅಧ್ಯಯನ ಪತ್ರಕರ್ತನ ವೃತ್ತಿಪರ ಸೂಕ್ಷ್ಮತೆ ಮತ್ತು ಬರಹದ ನಿಖರತೆಗೆ ಸಾಕಷ್ಟು ಕೊಡುಗೆ ನೀಡುತ್ತದೆ. ಸಮಾಜದ ಕುರಿತ ಆಸಕ್ತಿ ಮತ್ತು ತಿಳಿವು ಇಲ್ಲದೇ ಹೋದರೆ ಪತ್ರಕರ್ತನ ವೃತ್ತಿ ಕ್ಲಿಷ್ಟಕರ ಮತ್ತು ಒಂದು ರೀತಿಯಲ್ಲಿ ದಿಕ್ಕುದೆಸೆಯಿಲ್ಲದೆ ಪಯಣದಂತೆ. ಅಷ್ಟೇ ಅಲ್ಲ, ಪತ್ರಿಕಾರಂಗ ಕೂಡ ಸಮಾಜದ ಅರಿವಿಲ್ಲದೆ ಮುಂದೆ ಸಾಗದು.

ಇನ್ನು ಇತಿಹಾಸದ ವಿಷಯಕ್ಕೆ ಬಂದರೆ, ಅದರೊಂದಿಗೆ ಪತ್ರಕರ್ತನೊಬ್ಬನ ನಂಟು ಬಹಳ ಸಂಕೀರ್ಣವಾದುದು. ಇತಿಹಾಸದ ವಾಸ್ತವಾಂಶಗಳು, ಇತಿಹಾಸದ ಘಟನಾವಳಿಗಳ ಅರಿವಿರುವುದು ಪತ್ರಕರ್ತನಿಗೆ ವಿಶೇಷ ಶಕ್ತಿ ಕೊಡುತ್ತದೆ ಮತ್ತು ತನ್ನದೇ ವರದಿಗಳ ಸತ್ಯಾಸತ್ಯತೆ ಮತ್ತು ನಿಖರತೆಯನ್ನು ಪರೀಕ್ಷಿಸಲು ಕೂಡ ಇತಿಹಾಸದ ಮಾನದಂಡಗಳು ನೆರವಿಗೆ ಬರುತ್ತವೆ. ಹಾಗೇ ತನ್ನ ವರದಿಗಳು ಕೂಡ ವರ್ತಮಾನದ ಇತಿಹಾಸ ಮತ್ತು ನಾಳೆಯ ಇತಿಹಾಸಕಾರರು ಆ ವರದಿಗಳನ್ನು ಕೂಡ ಇತಿಹಾಸದ ಮೂಲ ಆಕರಗಳಾಗಿ ಪರಿಗಣಿಸಬಹುದು ಎಂಬ ಅರಿವು, ವರದಿಗಳ ವಿಷಯದಲ್ಲಿ ಎಚ್ಚರಿಕೆ ಮತ್ತು ಸೂಕ್ಷ್ಮ ಗ್ರಹಿಕೆಗೆ ದಾರಿಮಾಡಿಕೊಡುತ್ತದೆ.

ವಿಕ್ಟೋರಿಯನ್ ಯುಗದ ಇತಿಹಾಸಕಾರ ಜಾನ್ ಸೀಲೆಯ ಖ್ಯಾತ ನುಡಿಯಂತೆ, “ಇತಿಹಾಸ ಎಂಬುದು ಆಗಿಹೋದ ರಾಜಕಾರಣ ಮತ್ತು ರಾಜಕಾರಣ ಎಂಬುದು ವರ್ತಮಾನದ ಇತಿಹಾಸ”. ಈ ಮಾತು ನಿಜವೇ ಆಗಿದ್ದರೆ, ಪತ್ರಕರ್ತನೊಬ್ಬನ ವರದಿಗಳು ನಾಳೆಯ ಜನರಿಗಾಗಿ ಬರೆದ ಇತಿಹಾಸ, ವರ್ತಮಾನದ ರಾಜಕಾರಣಕ್ಕೆ ಬರೆದ ನಿತ್ಯದ ಕಾರ್ಯಸೂಚಿ. ಹಾಗಾಗಿ ಪತ್ರಕರ್ತನೊಬ್ಬ ಸೃಷ್ಟಿಸುವ ಈ ವರ್ತಮಾನದ ಇತಿಹಾಸ ಎಷ್ಟು ಕರಾರುವಾಕ್ಕಾಗಿದೆ? ಎಷ್ಟು ನಿಖರವಾಗಿದೆ ಎಂಬುದು ಬಹಳ ಮುಖ್ಯವಾದ ಪ್ರಶ್ನೆ. ಪತ್ರಕರ್ತ ತನ್ನ ಕಣ್ಣೆದುರಿನ ವಾಸ್ತವವನ್ನು ಅದರ ನೈಜ ಬಣ್ಣದಲ್ಲಿ ಚಿತ್ರಿಸುತ್ತಿದ್ದಾನೆಯೇ? ಅಥವಾ ಕೇವಲ ಸಾರ್ವಜನಿಕ ಸಂಪರ್ಕ ಹೇಳಿಕೆಗಳನ್ನು ದೈನಂದಿನ ರಾಜಕಾರಣದ ಕಾರ್ಯಸೂಚಿಯಾಗಿ ದಾಖಲಿಸುತ್ತಿದ್ದಾನೆಯೇ ಎಂಬುದು ಕೂಡ ಮುಖ್ಯ. ಹಾಗೇ ಈ ಸೋಸಿದ ಸಂಗತಿಗಳು ಭವಿಷ್ಯದಲ್ಲಿ ಇತಿಹಾಸವೆಂದು ಎಷ್ಟರಮಟ್ಟಿಗೆ ಪರಿಗಣಿತವಾಗುತ್ತವೆ ಎಂಬುದು ಕೂಡ!

ಕಳೆದ ಆರೇಳು ವರ್ಷಗಳಲ್ಲಿ ಭಾರತದ ಎಲ್ಲಾ ಮುಂಚೂಣಿ ಪ್ರಜಾಸತ್ತಾತ್ಮಕ ಸಾಂಸ್ಥಿಕ ರಚನೆಗಳು ಮೋದಿ ಎಂಬ ರೋಡ್ ರೋಲರ್ ಅಡಿ ಸಿಕ್ಕು ಪುಡಿಗಟ್ಟುತ್ತಿರುವಾಗ ತನ್ನ ಸಮಕಾಲೀನ ಕಾಲದ ಕುರಿತ ಪತ್ರಕರ್ತರ ದಾಖಲಾತಿ ಅತ್ಯಂತ ಕಳಪೆಯಾಗಿದೆ. ತಮ್ಮ ರಾಜಕೀಯ ನಾಯಕರು ಅತೃಪ್ತಿ ವ್ಯಕ್ತಪಡಿಸಿದಾಗೆಲ್ಲಾ ಮಾಧ್ಯಮಗಳ ಮಾಲೀಕರು ವಿನೀತರಾಗಿ ಅವರ ಸಂತೃಪ್ತಿಗೆ ಮಂಡಿಯೂರಿದ್ದಾರೆ. ಕನಿಷ್ಟ ಸ್ವಾಭಿಮಾನ ಕೂಡ ಇರದ ಸಂಪಾದಕರುಗಳು ಮಾಲೀಕರ ಆಗ್ರಹವನ್ನು ಧಿಕ್ಕರಿಸುವುದಿರಲಿ, ಕನಿಷ್ಟ ಪ್ರಶ್ನಿಸುವ ಎದೆಗಾರಿಕೆಯನ್ನೂ ತೋರದೆ ವರದಿಗಾರರ ಹಲವು ಮಹತ್ವದ ಸುದ್ದಿಗಳನ್ನು ಕಸದಬುಟ್ಟಿಗೆ ಎಸೆದಿದ್ದಾರೆ. ಅದರರ್ಥ ಇಂದು ಸಂಪಾದಕರು ಮಹತ್ವದ ವರದಿಗಳನ್ನು ಏಕಾಏಕಿ ಕಸದಬುಟ್ಟಿಗೆ ಎಸೆದುಬಿಡುತ್ತಾರೆ ಎಂದೇನಲ್ಲ. ಅದರ ಬದಲಾಗಿ ಆ ವರದಿಯ ಪ್ರಕಟಣೆ ವಿಳಂಬ ಮಾಡುವುದು, ತನ್ನ ಆ ನಿರ್ಧಾರವನ್ನು ಪ್ರಶ್ನಿಸುವ ಅವಕಾಶ ನೀಡದೇ ಇರುವುದು ಮುಂತಾದ ಚಾಣಾಕ್ಷ ನಡೆಗಳ ಮೂಲಕ ಸುದ್ದಿಯನ್ನು ಕೊಲ್ಲಲಾಗುತ್ತಿದೆ. ಹಾಗಾಗಿ ದಿಟ್ಟ ವರದಿಗಾರರ ಕಂಪ್ಯೂಟರಿನಲ್ಲಿ ಅಪ್ರಕಟಿತ ವರದಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಹಾಗಾಗಿ ಬಹಳಷ್ಟು ವರದಿಗಾರರು ತಮ್ಮ ಅತ್ಯುತ್ತಮ ಕೆಲಸದ ಸಾಮರ್ಥ್ಯ ತೋರುವ ಮುನ್ನವೇ ಜಡ್ಡುಗಟ್ಟುವ ಸ್ಥಿತಿ ಇದೆ. ಅವರನ್ನು ಇಡೀ ವ್ಯವಸ್ಥೆ ಹಾಗೆ ತೀರಾ ಆರಕ್ಕೇರದ, ಮೂರಕ್ಕಿಳಿಯದ ದರ್ಜೆಯ ವರದಿಗಳನ್ನು ಮಾಡಿಕೊಂಡು ಜೀವನ ತಳ್ಳುವಂತೆ ಮಾಡಿದೆ. ಅವರು ಗಾಣದ ಎತ್ತಿನಂತೆ ಸುಮ್ಮನೆ ಯಾಂತ್ರಿಕವಾಗಿ ಸುತ್ತುತ್ತಿರುತ್ತಾರೆ ಅಷ್ಟೇ. ಈ ನಡುವೆ ಕೆಲವು ಜಾಣರು, ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಸಾಮಾಜಿಕವಾಗಿ ಬಹಳ ದಿಟ್ಟ ವರದಿಗಳಂತೆ ಕಾಣುವ, ಆದರೆ ವಾಸ್ತವವಾಗಿ ಆಳುವ ವ್ಯವಸ್ಥೆ ಮತ್ತು ರಾಜಕೀಯ ಪ್ರಭಾವಿಗಳಿಗೆ ಯಾವುದೇ ರೀತಿಯಲ್ಲಿ ನೇರ ಹಾನಿ ಮಾಡದಂತಹ ವಿಷಯಗಳನ್ನು ಎತ್ತಿಕೊಂಡು ವರದಿ ಮಾಡುತ್ತಾರೆ. ಗೋ ರಕ್ಷಕರ ದಾಳಿ, ಪಬ್ ದಾಳಿ, ರಾಜಕೀಯ ನಾಯಕರ ವಿಪರೀತದ ಹೇಳಿಕೆಗಳ ಕುರಿತ ವರದಿಗಳು ಇಂತಹ ಜಾಣ ನಡೆಯ ಪ್ರತಿಫಲಗಳಾಗಿರುತ್ತವೆ.

ಇನ್ನೂ ಕೆಲವು ಅಪರೂಪದ ಸಂದರ್ಭಗಳಲ್ಲಿ ಸರ್ಕಾರದ ಅವಕೃಪೆಗೆ ಪಾತ್ರವಾದ ಯಾವುದೋ ಪ್ರಭಾವಿ ಕಂಪನಿ ಅಥವಾ ಬ್ಯಾಂಕರ್ ವಿರುದ್ಧವೂ ಇಂತಹ ವರದಿಗಳು ಬರಬಹುದು. ಆದರೆ, ಅದರ ಹಿಂದೆ ನಿಜವಾದ ಜನಪರ ಕಾಳಜಿ ಇರದೆ, ಆಳುವ ಮಂದಿಯ ಸೇಡಿಗೆ ಪೂರಕವಾಗಿ ಒಬ್ಬರನ್ನು ಗುರಿಯಾಗಿಸಿ ನಡೆಸುವ ದಾಳಿಯ ಸಂಚಿನ ಭಾಗವಾಗಿರುತ್ತವೆ. ಹಾಗೆ ನೋಡಿದರೆ, ಬಹಳ ಉನ್ನತ ಮಟ್ಟದಲ್ಲಿ ನಡೆಯುವ ವ್ಯವಸ್ಥಿತ ಮತ್ತು ಸಂಘಟಿತ ಲೂಟಿ ಮತ್ತು ಅಪರಾಧಗಳ ವಿಷಯದಲ್ಲಿ ಬಹುತೇಕ ವೇಳೆ ಪತ್ರಕರ್ತರು ಸತ್ಯದ ಸಮೀಪಕ್ಕೆ ಹೋಗದಂತೆ ತಡೆಯಲಾಗುತ್ತದೆ.

ಇನ್ನು ಐವತ್ತು ವರ್ಷಗಳ ಬಳಿಕ ನೀವು ಹಿಂತಿರುಗಿ, ಇವತ್ತಿನ ಪತ್ರಿಕೋದ್ಯಮ ಕಟ್ಟಿಕೊಟ್ಟಿರುವ ಕಥನವನ್ನು ಗಮನಿಸಿದರೆ ಸೋಸಿ ತೆಗೆದ ಭಾರತವಷ್ಟೇ ನಿಮಗೆ ಕಾಣಿಸುವುದು. ದೇಶದ ಪ್ರಭಾವಿಗಳ ಹಿತಾಸಕ್ತಿಯ ಆಧಾರ ಸ್ತಂಭಗಳಾಗಿರುವ- ಸಪ್ತ ಸ್ತಂಭ ಎಂದು ನಾನು ಕರೆಯುವ- ಅಧಿಕಾರ ಕೇಂದ್ರಗಳು ಮತ್ತು ಆ ಸ್ಥಾನದಲ್ಲಿ ಇದ್ದ ವ್ಯಕ್ತಿಗಳ ಬಗ್ಗೆ ಪತ್ರಿಕೋದ್ಯಮದ ಮನನ ಮಾಡಲೇಬೇಕಾದ ಏನನ್ನೂ ನೀಡಿರುವುದಿಲ್ಲ. ಅಂತಹ ಸಪ್ತಸ್ಥಂಭಗಳ ಪೈಕಿ ಮೊದಲ ನಾಲ್ಕು, ಪ್ರಧಾನಿ ಕಚೇರಿ, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಹಣಕಾಸು ಸಚಿವರು ಮತ್ತು ಆಡಳಿತ ಪಕ್ಷದ ಅಧ್ಯಕ್ಷರು. ಆ ಬಳಿಕ ರಿಲೆಯನ್ಸ್ ಮತ್ತು ಅದಾನಿ ಸಮೂಹ-ಈ ಕಾಲದಲ್ಲಿ ಭಾರೀ ಪ್ರಗತಿ ಕಂಡಿರುವ ಎರಡು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು- ಆ ಸಾಲಿನಲ್ಲಿ ಬರುತ್ತವೆ. ಬಳಿಕ ಭಾರತದ ಪ್ರತಿ ವರ್ಷ ದೇಶದ ಮೂರು ಲಕ್ಷ ಕೋಟಿ ಹಣ ನುಂಗುವ ಭಾರತದ ರಕ್ಷಣಾ ವಲಯ ಬರುತ್ತದೆ. ಭಾರೀ ಹಣಕಾಸಿನ ಕಾರಣಕ್ಕಾಗಿ ಈ ವಲಯ ಭಾರತ ಉಪಖಂಡದಲ್ಲಿ ಸದಾ ಸಂಘರ್ಷದ ವಾತಾವರಣ ಇರುವಂತೆ ಬಯಸುತ್ತದೆ ಮತ್ತು ಆ ಮೂಲಕ ದೇಶದ ರಕ್ಷಣಾ ವೆಚ್ಚವನ್ನು ಜಗತ್ತಿನ ಅತ್ಯಧಿಕ ರಕ್ಷಣಾ ಬಜೆಟ್ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಈ ಏಳು ಹಿತಾಸಕ್ತ ವಲಯಗಳ ಬಗ್ಗೆ ಬಹುತೇಕ ಮೌನ ವಹಿಸಿರುವುದು ಅಥವಾ ಯಾವುದೇ ನಿಷ್ಪಕ್ಷಪಾತ ತನಿಖಾ ವರದಿಗಳನ್ನು ಮಾಡದೇ ಇರುವುದು ಪತ್ರಿಕಾವೃತ್ತಿಯ ಮೂಲ ತತ್ವಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ; ಪತ್ರಿಕಾರಂಗ ಪ್ರತಿನಿಧಿಸುವ ಎಲ್ಲಕ್ಕೂ ತದ್ವಿರುದ್ಧ ಕೂಡ. ಹಾಗೆ ನೋಡಿದರೆ ಇವತ್ತಿನ ಪತ್ರಿಕೋದ್ಯಮ ಜಾಣ ಮೌನ ವಹಿಸಿರುವ ಇಂತಹ ಪ್ರಭಾವಿ ಹಿತಾಸಕ್ತಿ ಗುಂಪಿನ ಪಟ್ಟಿಗೆ ನೀವು ಇನ್ನಷ್ಟು ಸೇರಿಸಬಹುದು. ರಾಷ್ಟ್ರೀಯ ಮಟ್ಟದ ಈ ಹಿತಾಸಕ್ತಿಗಳ ರಾಜ್ಯವಾರು ಆವೃತ್ತಿಗಳು, ಪ್ರಾದೇಶಿಕ ಹಿತಾಸಕ್ತಿಗಳೂ ಈ ಪಟ್ಟಿಗೆ ಸೇರುತ್ತವೆ. ಆದರೆ, ನಾನು ಹೇಳುವುದೇನೆಂದರೆ; ಒಂದು ವೇಳೆ ಪತ್ರಕರ್ತನ ಕೆಲಸ ಸಮಕಾಲೀನ ರಾಜಕಾರಣ, ನೀತಿನಿರೂಪಣೆಗಳು, ಪ್ರಮುಖ ತೀರ್ಮಾನಗಳ ಕುರಿತು ಬರೆಯುವುದಾದರೆ; ಈ ಹೊತ್ತಿನ ಪತ್ರಕರ್ತರು ಆ ನಿಟ್ಟಿನಲ್ಲಿ ಬಹುತೇಕ ಏನನ್ನೂ ಮಾಡುತ್ತಿಲ್ಲ. ತಮ್ಮ ವೃತ್ತಿಯ ಧ್ಯೇಯವನ್ನೇ ಗಾಳಿಗೆ ತೂರಿದ್ದಾರೆ. ಆ ಅರ್ಥದಲ್ಲಿ ದೊಡ್ಡ ದೊಡ್ಡ ದಿನಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ನೇಮಕಮಾಡಿಕೊಂಡಿರುವ ಸಾವಿರಾರು ಪತ್ರಕರ್ತರನ್ನು ಅವರು ಮಾಡಬೇಕಾದ ಕೆಲಸ ಮಾಡಲು ಬಿಡುತ್ತಿಲ್ಲ. ಪತ್ರಿಕಾವೃತ್ತಿ ಮಾಡಲು ಅವಕಾಶ ನಿರಾಕರಿಸಲಾಗುತ್ತಿದೆ. ಹಾಗಾಗಿ ಅಂತಹ ಪತ್ರಕರ್ತರ ಕೆಲಸಕ್ಕೆ ತಲೆಮಾರುಗಳಿಗೆ ದಾಟುವ ಆರ್ಕೈವ್ ಮೌಲ್ಯವೇ ಇಲ್ಲದಾಗಿದೆ.

ಹಾಗಾಗಿ ರಾಜಕೀಯ, ಅರ್ಥಶಾಸ್ತ್ರ, ವಿಜ್ಞಾನ, ಕಾನೂನು- ಹೀಗೆ ಯಾವುದೇ ರಂಗವನ್ನು ತೆಗೆದುಕೊಂಡರೂ ಪತ್ರಕರ್ತ ಕಲಿಯಲು ಮತ್ತು ಶೋಧಿಸಲು ಬೆಟ್ಟದಷ್ಟಿದೆ. ಹಾಗೆ ಬೆಟ್ಟ ಬಗೆಯುವ ಕಿಂಚಿತ್ತಾದರೂ ಕೆಲಸ ಮಾಡಿದರೆ ಪತ್ರಿಕಾವೃತ್ತಿಯ ಮರ್ಯಾದೆ ಕಾಯಬಹುದು.

ಹೀಗೆ ಜ್ಞಾನದ ಅಥವಾ ತಿಳಿವಿನ ಹಂಬಲದ ಮೂಲಕ ಮಾಹಿತಿ ಮತ್ತು ಅರಿವಿನ ವಿಸ್ತಾರ ಹೆಚ್ಚಿಸಿಕೊಳ್ಳುವ ನಿರಂತರತೆ ಪತ್ರಿಕಾವೃತ್ತಿಯ ನಾಲ್ಕನೇ ಪ್ರಮುಖ ಅಂಶ. ನಂತರದ್ದು; ವೃತ್ತಿ ಕೌಶಲ್ಯ. ಅದರಲ್ಲೂ ಮುಖ್ಯವಾಗಿ ಭಾಷೆ ಮತ್ತು ಶೈಲಿಯ ಕುರಿತಂತೆ ನೇರವಾಗಿ ವರದಿಗಾರಿಕೆಗೆ ಸಂಬಂಧಿಸಿದ್ದು. ಬಹುತೇಕ ಪತ್ರಕರ್ತರು ಕೌಶಲ್ಯ ಎಂದರೆ ಭಾಷೆಗೆ ಸೀಮಿತ ಎಂದು ಭಾವಿಸುವುದೇ ಹೆಚ್ಚು. ಆದರೆ, ಇಂದಿನ ಬಹುಮಾಧ್ಯಮ ಕಾಲದಲ್ಲಿ ಪತ್ರಿಕೋದ್ಯಮ ಕೂಡ ಹಲವು ರೂಪಗಳಲ್ಲಿ ಅವತರಿಸಿದೆ. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳಿಗೆ ತಕ್ಕಂತೆ ಪ್ರತ್ಯೇಕವಾಗಿ ಕೌಶಲಗಳು ಬೇಕಾಗುತ್ತವೆ, ಭಾಷೆ, ಗ್ರಾಫಿಕ್ಸ್, ದನಿ, ಚಿತ್ರ, ಫೋಟೋ, ವೀಡಿಯೋ ಸೇರಿದಂತೆ ಹಲವು ಅಂಶಗಳು ವರದಿಗಾರಿಕೆಯ ಕೌಶಲದ ಭಾಗವಾಗಿವೆ.

ಒಟ್ಟಾರೆ ಪತ್ರಿಕಾರಂಗದ ಈ ಪ್ರಮುಖ ಐದು ಅಂಶಗಳು ಯಾವುದೇ ಪತ್ರಕರ್ತರನಿಗೆ ಈ ರಂಗದಲ್ಲಿ ಛಾಪು ಮೂಡಿಸಲು ಬೇಕಾದ ಕನಿಷ್ಠ ಪೂರ್ವತಯಾರಿಯ ಭಾಗ. ಜೊತೆಗೆ ಪುಲಿಟ್ಜರ್ ಕಾಲದ ಪತ್ರಿಕಾರಂಗಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ಕೂಡ ಮರೆಯುವಂತಿಲ್ಲ. ಇವತ್ತಿನ ಪತ್ರಿಕೋದ್ಯಮ ಲಾಭನಷ್ಟದ ಮೇಲೆ ಕಣ್ಣಿಟ್ಟಿರುವ ಖಾಸಗೀ ಹಿತಾಸಕ್ತಿಗಳ ಕೈಗೊಂಬೆಯಾಗಿದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ವೃತ್ತಿಯ ಸಾಮಾಜಿಕ ಹೊಣೆಗಾರಿಕೆ ಮತ್ತು ಬದ್ಧತೆ ಅಪಾಯಕ್ಕೆ ಸಿಲುಕಿದೆ ಮತ್ತು ಮಾಧ್ಯಮ ಮಾಲೀಕರ ಮರ್ಜಿಗೆ ಬಿದ್ದಿದೆ. ಹಾಗಾಗಿ ಪತ್ರಿಕಾರಂಗ ಇಂದು ಕೊಚ್ಚೆಯ ಕೊಳವಾಗಿದೆ. ಈ ಕೊಚ್ಚೆ ಕೊಳದಲ್ಲಿ ಇದ್ದುಕೊಂಡೇ ಕೊಚ್ಚೆಯನ್ನು ಅಂಟಿಸಿಕೊಳ್ಳದೆ ಜಾಣ್ಮೆಯಿಂದ ಅದನ್ನು ಇಷ್ಟಿಷ್ಟೇ ಶುದ್ಧೀಕರಿಸುವ ಕೆಲಸ ಯುವ ತಲೆಮಾರಿನ ಪತ್ರಕರ್ತರಿಂದಲೇ ಆಗಬೇಕಾಗಿದೆ. ಹಾಗೆ ಜಾಣ್ಮೆಯ ಕೆಲಸ ಮಾಡಲು ನಿಮಗೆ ಪತ್ರಿಕಾರಂಗದ ಪ್ರಮುಖ ಐದು ಅಂಶಗಳ ಅರಿವಿನ ಹತಾರ ಬೇಕಿದೆ.

(ಮುಗಿಯಿತು- ಕೃಪೆ: ಕ್ಯಾರವಾನ್)

Click here Support Free Press and Independent Journalism

Pratidhvani
www.pratidhvani.com