ಡೊನಾಲ್ಡ್ ಟ್ರಂಪ್‌ ವಿರುದ್ಧ ʼಕಾನ್ಫರೆನ್ಸ್‌ ಕಾಲ್‌ʼನಲ್ಲಿ‌ ಕಾರ್ಯತಂತ್ರ ರೂಪಿಸಿದ ಬರಾಕ್‌ ಒಬಾಮಾ 
ರಾಷ್ಟ್ರೀಯ

ಡೊನಾಲ್ಡ್ ಟ್ರಂಪ್‌ ವಿರುದ್ಧ ʼಕಾನ್ಫರೆನ್ಸ್‌ ಕಾಲ್‌ʼನಲ್ಲಿ‌ ಕಾರ್ಯತಂತ್ರ ರೂಪಿಸಿದ ಬರಾಕ್‌ ಒಬಾಮಾ 

ಕರೋನಾ ಸಂಧಿಗ್ಧತೆಯನ್ನ ಎದುರಿಸುವಲ್ಲಿ ಟ್ರಂಪ್‌ ನೇತೃತ್ವದ ಅಮೆರಿಕಾ ವಿಫಲವಾಗಿದೆ ಅನ್ನೋ ಮಾತು ಜಗತ್ತಿನಾದ್ಯಂತ ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಅಲ್ಲಿ ನಡೆಯುತ್ತಿರುವ ಸಾವು-ನೋವುಗಳು ಸಾಕ್ಷಿ ಹೇಳುತ್ತಿವೆ. ಈ ಮಧ್ಯೆ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆ ಮುಂದಿರಿಸಿ ʼರಾಜಕೀಯʼ ಚರ್ಚೆಗಳೂ ನಡೆಯುತ್ತಿವೆ. ಈ ಮಧ್ಯೆ ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ ನಡೆಸಿದ ಚರ್ಚೆಯೊಂದು ಲೀಕ್‌ ಆಗಿದೆ. 

ಪ್ರತಿಧ್ವನಿ ವರದಿ

ಅಮೆರಿಕಾದಲ್ಲಿ ತಲೆದೋರಿರುವ ಕರೋನಾ ಬಿಕ್ಕಟ್ಟನ್ನ ಸರಿದೂಗಿಸಲು ಪರದಾಡುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ತಿರುಗಿ ಬಿದ್ದಿದ್ದಾರೆ. ಸೋಂಕು ತಡೆಗಟ್ಟುವಲ್ಲಿ ಟ್ರಂಪ್‌ ವಿಫಲರಾಗಿದ್ದು “ಇದೊಂದು ಸಂಪೂರ್ಣ ಅರಾಜಕತೆಯ ವಿಪತ್ತು” ಎಂದಿದ್ದಾರೆ. ಈ ಮೂಲಕ ಡೆಮಾಕ್ರಟಿಕ್‌ ಆಡಳಿತ ಸಮಯದಲ್ಲಿ ʼಆರೋಗ್ಯ ಕ್ಷೇತ್ರಕ್ಕಾಗಿ ದುಡಿದಿಲ್ಲʼ ಎಂದು ಒಬಾಮಾ ಕುರಿತು ಪರೋಕ್ಷವಾಗಿ ಹೇಳಿಕೆ ನೀಡಿದ್ದ ಟ್ರಂಪ್‌ ಗೆ ಒಬಾಮಾ ತಿರುಗೇಟು ನೀಡಿದ್ದಾರೆ.

ಶುಕ್ರವಾರ ತನ್ನ ಆಡಳಿತ ಅವಧಿಯಲ್ಲಿದ್ದ 3 ಸಾವಿರ ಮಂದಿ ಸಹವರ್ತಿಗಳ ಜೊತೆ ಕಾನ್ಫರೆನ್ಸ್‌ ಕಾಲ್‌ನಲ್ಲಿ ಮಾತನಾಡಿದ್ದ ಬರಾಕ್‌ ಒಬಾಮಾ ಈ ವಿಚಾರವಾಗಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಹರಿಹಾಯ್ದಿದ್ದು, ಕರೆಯ ಆಡೀಯೋವೊಂದು ಲೀಕ್‌ ಆಗಿದ್ದು ಅದರಲ್ಲಿ ಒಬಾಮಾ ತನ್ನ ಸಹವರ್ತಿಗಳ ಜೊತೆ ತನ್ನ ಪಕ್ಷದ (ಡೆಮಾಕ್ರಟಿಕ್)‌ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ ಅವರನ್ನ ಬೆಂಬಲಿಸುವಂತೆಯೂ ಕೇಳಿಕೊಂಡಿದ್ದಾರೆ. ಅಲ್ಲದೇ ಈ ಮೂಲಕ ಟ್ರಂಪ್‌ ಪದಚ್ಯುತಿಗೆ ಒಬಾಮಾ ತನ್ನ ಆಡಳಿತ ಅವಧಿಯ ಸಹವರ್ತಿಗಳ ಜೊತೆ ತಿಳಿಸಿದ್ದಾರೆ.

“ಮುಂದಿನ ಚುನಾವಣೆ ಅನ್ನೋದು ಪ್ರತಿ ಹಂತದಲ್ಲೂ ಮುಖ್ಯವಾಗಿದೆ. ಯಾಕೆಂದರೆ ನಾವು ಒಬ್ಬ ವ್ಯಕ್ತಿಯನ್ನೋ ಅಥವಾ ಒಂದು ಪಕ್ಷವನ್ನ ಎದುರಿಸುತ್ತಿಲ್ಲ. ಹಲವು ವರುಷಗಳಿಂದ ಅಮೆರಿಕಾದಲ್ಲಿ ನೆಲೆಯೂರಿರುವ ಸ್ವಾರ್ಥಪರ, ಒಡೆದು ಆಳುವ, ವಿವೇಚನಾರಹಿತ ಹಾಗೂ ದ್ವೇಷ ಹುಟ್ಟುಹಾಕುವವರ ವಿರುದ್ಧ ನಾವು ಪ್ರಬಲವಾದ ಹೋರಾಟ ನಡೆಸಬೇಕಿದೆ. ಆ ಮೂಲಕ ನಾವು ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಜಗತ್ತಿನ ಮುಂದುವರಿದ ರಾಷ್ಟ್ರಗಳು ಕೂಡಾ ಸೋಂಕು ತಡೆಗಟ್ಟಲು ಭಾರೀ ಪ್ರಯಾಸಪಡುತ್ತಿದೆ. ಆದರೆ ಅಮೆರಿಕಾದಲ್ಲಿ ಇದು ಅಪಾಯದ ಹಂತ ಮೀರಿದೆ. ಇದೆಲ್ಲಕ್ಕೂ ದೇಶದ ಆಡಳಿತ ಚುಕ್ಕಾಣಿ ಹಿಡಿದವರ ಮನೋಸ್ಥಿತಿಯೇ ಕಾರಣವಾಗಿದೆ. “ಬೇರೆಯವರಿಗೆ ಏನಾದರೆ ನನಗೇನು?” ಅನ್ನೋ ಮನೋಸ್ಥಿತಿಯೇ ಹೊಂದಿದವರಾಗಿದ್ದಾರೆ ಆಡಳಿತ ನಡೆಸುತ್ತಿರುವವರು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಪರೋಕ್ಷವಾಗಿ ಒಬಾಮಾ ತಿರುಗೇಟು ನೀಡಿದ್ದಾರೆ.

“ಆದ್ದರಿಂದ, ನಾನು ಸಾಧ್ಯವಾದಷ್ಟರ ಮಟ್ಟಿಗೆ ಜೋ ಬಿಡೆನ್‌ ಪರ ಪ್ರಚಾರ ನಡೆಸಲು ಹೆಚ್ಚು ಸಮಯ ವ್ಯಯಿಸಲಿದ್ದೇನೆ” ಎಂದಿದ್ದಾರೆ. ಇನ್ನು ಫೆಬ್ರವರಿಯಲ್ಲಿ ಸೋಂಕು ಹರಡಲು ಶುರುವಾದಾಗ ಟ್ರಂಪ್‌ ಸರಕಾರವು ಪರೀಕ್ಷಾ ಕಿಟ್‌ ಹಾಗೂ ಇತರೆ ವೈದ್ಯಕೀಯ ಉಪಕರಣಗಳನ್ನ ಅಭಿವೃದ್ಧಿಪಡಿಸುವ ಮತ್ತು ಸಂಗ್ರಹಿಸುವುದರಲ್ಲೇ ನಿರತವಾಗಿತ್ತು ಅಂತಾ ವಿಮರ್ಶರ್ಕರು ತಿಳಿಸಿದ್ದಾರೆ. ಮಾತ್ರವಲ್ಲದೇ ಮುಂದಿನ ಚುನಾವಣೆ ದೃಷ್ಟಿಯಿಂದ ರಾಜಕೀಯ ಹಿತಾಸಕ್ತಿ ಮೇಲೆಯೇ ಟ್ರಂಪ್‌ ಕಾರ್ಯನಿರ್ವಹಿಸುತ್ತಿದ್ದು, ಸುರಕ್ಷತಾ ಕ್ರಮಗಳ ಯಾವುದೇ ನೀಲನಕ್ಷೆಯನ್ನ ಅವರು ಹೊಂದಿಲ್ಲ ಅನ್ನೋ ಮಾತು ಅಮೆರಿಕದಾದ್ಯಂತ ಕೇಳಿಬರುತ್ತಿದೆ.

ಆದರೆ ಈ ಎಲ್ಲಾ ಆರೋಪಗಳನ್ನ ಶ್ವೇತಭವನದ ವಕ್ತಾರೆ ಕೇಯ್ಲೀ ಮೆಕ್‌ಎನಾನಿ ನಿರಾಕರಿಸಿದ್ದು, “ಕರೋನಾ ಸೋಂಕು ಸಂಬಂಧ ಟ್ರಂಪ್‌ ಅವರು ತೆಗೆದುಕೊಂಡ ನಿರ್ಧಾರಗಳಿಂದಾಗಿಯೇ ಅದೆಷ್ಟೋ ಅಮೆರಿಕನ್ನರ ಜೀವ ಉಳಿದಿದೆ” ಎಂದಿದ್ದಾರೆ.

ಇದು ಮಾತ್ರವಲ್ಲದೇ ಕಾನೂನಿನ ನಿಯಮಗಳು ಅಮೆರಿಕಾದಲ್ಲಿ ಅಪಾಯದಲ್ಲಿರುವುದಾಗಿ ಒಬಾಮಾ ಎಚ್ಚರಿಸಿದ್ದಾರೆ. ಈ ಮೂಲಕ ಡೊನಾಲ್ಡ್‌ ಟ್ರಂಪ್‌ ರಾಜಕೀಯವಾಗಿ ಹಣಿಯಲು ಒಬಾಮಾ ಕಾರ್ಯನಿರತರಾಗಿದ್ದಾರೆ. ಮಾತ್ರವಲ್ಲದೇ ಕೆಲವು ವರುಷಗಳಿಂದ ರಾಜಕೀಯದಿಂದ ಸಮಾನ ಅಂತರ ಕಾಯ್ದುಕೊಂಡಿದ್ದ ಬರಾಕ್‌ ಒಬಾಮಾ ಈ ರೀತಿಯಾಗಿ ಕಾನ್ಫರೆನ್ಸ್‌ ಕಾಲ್‌ ಮೂಲಕ ತನ್ನ ಸಹವರ್ತಿಗಳ ಜೊತೆ ಮಾತನಾಡಿದ್ದು ಹೆಚ್ಚು ಕುತೂಹಲ ಕೆರಳಿಸಿದೆ. ಸದ್ಯ ಅಮೆರಿಕಾದಲ್ಲಿ 13.47 ಲಕ್ಷ ಮಂದಿಯಲ್ಲಿ ರೋಗ ಕಾಣಿಸಿಕೊಂಡಿದ್ದು, ಅದರಲ್ಲಿ 80 ಸಾವಿರದಷ್ಟು ಜನ ಸಾವನ್ನಪ್ಪಿದ್ದಾರೆ. ಈ ವರ್ಷಾಂತ್ಯಕ್ಕೆ ವಿಶ್ವದ ʼದೊಡ್ಡಣ್ಣʼ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ರಿಪಬ್ಲಿಕನ್‌ ಪಕ್ಷದಿಂದ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮಾಕ್ರಟಿಕ್‌ ಪಕ್ಷದಿಂದ ಜೋ ಬಿಡೆನ್‌ ನಡುವೆ ನೇರ ಹಣಾಹಣಿ ಏರ್ಪಡಲಿದೆ ಅನ್ನೋದಾಗಿ ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಅಮೆರಿಕದಾದ್ಯಂತ ಆರಂಭವಾಗಿದೆ.

Click here Support Free Press and Independent Journalism

Pratidhvani
www.pratidhvani.com