ಕೋವಿಡ್-19‌ ಗೆ ʼಹೈಡ್ರೋಕ್ಸಿಕ್ಲೋರೋಕ್ವಿನ್‌ʼ ಔಷಧ ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ?
ರಾಷ್ಟ್ರೀಯ

ಕೋವಿಡ್-19‌ ಗೆ ʼಹೈಡ್ರೋಕ್ಸಿಕ್ಲೋರೋಕ್ವಿನ್‌ʼ ಔಷಧ ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ?

ಮಲೇರಿಯಾ ರೋಗಕ್ಕೆ ರಾಮಬಾಣವಾದ ʼಹೈಡ್ರೋಕ್ಸಿಕ್ಲೋರೋಕ್ವಿನ್‌ʼ ಕೋವಿಡ್-19‌ಗೆ ಅದೆಷ್ಟರ ಮಟ್ಟಿಗೆ ಪರಿಣಾಮಕಾಗಿ ಅನ್ನೋದು ಈಗಲೂ ಚರ್ಚಾರ್ಹ ವಿಚಾರವಾಗಿಯೇ ಉಳಿದಿದೆ. ಮಾತ್ರವಲ್ಲದೇ ಈ ಬಗ್ಗೆ ವೈಜ್ಞಾನಿಕವಾಗಿ ಅದೆಷ್ಟು ಪರಿಣಾಮಕಾರಿ ಅನ್ನೋದು ಈವರೆಗೂ ಪತ್ತೆ ಹಚ್ಚಲಾಗಿಲ್ಲ.‌ ಆದರೂ ರೋಗಿಗಳಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಮುಂಜಾಗೃತವಾಗಿ ʼಹೈಡ್ರೋಕ್ಸಿಕ್ಲೋರೋಕ್ವಿನ್‌ʼ ನೀಡೋದು ಎಷ್ಟು ಸರಿ ಅನ್ನೋದು ಬಹುವಾಗಿ ಕಾಡತೊಡಗಿದೆ.

ಮೊಹಮ್ಮದ್‌ ಇರ್ಷಾದ್‌

ಕರೋನಾ ಸೋಂಕು ತಡೆಗಟ್ಟಲು ಸರಕಾರ ಲಾಕ್‌ಡೌನ್‌, ಸೀಲ್‌ಡೌನ್‌ ಮುಖೇನ ವಿವಿಧ ಕಸರತ್ತು ನಡೆಸುತ್ತಿದೆ. ಅಂತೆಯೇ ವೈದ್ಯಲೋಕ ಕಳೆದ ಐದಾರು ತಿಂಗಳಿನಿಂದ ಸೋಂಕಿಗೆ ರಾಮಬಾಣವಾಗಬಲ್ಲ ಔಷಧಿ ಪತ್ತೆ ಹಚ್ಚುವ ಕಾಯಕದಲ್ಲಿ ನಿರತವಾಗಿದೆ. ಸದ್ಯ ಭಾರತ ಮಾತ್ರವಲ್ಲದೇ ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳು ಕೂಡಾ ಭಾರತದಿಂದಲೇ ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನ ಆಮದು ಮಾಡಿಕೊಂಡಿದ್ದವು. ಮಲೇರಿಯಾ ಶಮನ ಮಾತ್ರೆಗಳಾದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಕರೋನಾ ಸೋಂಕಿಗೆ ಸೂಕ್ತವೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಮೇಲೆಯಂತೂ ಅದಕ್ಕೆ ಇನ್ನಷ್ಟು ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಐಸಿಎಂಅರ್‌ ಕೂಡಾ ಇದರ ಪ್ರಯೋಜನದ ಬಗ್ಗೆಯೇ ಮಾತಾಡಿದೆ.

ದೇಶದಲ್ಲಿ ಆರಂಭಿಕ ಹಂತದ ಏರಿಕೆ ಸಂದರ್ಭ ಮುಂಬೈಯ ಆಸ್ಪತ್ರೆಗಳಲ್ಲಿ ಸಮರ್ಪಕವಾದ ಔಷಧಿಗಳಾಗಲೀ, ಕೋವಿಡ್-19‌ ಐಸೋಲೇಶನ್‌ ವಾರ್ಡ್‌ಗಳಲ್ಲಿ ದುಡಿಯುವ ವೈದ್ಯರಿಗೆ N-95 ಮಾಸ್ಕ್‌ಗಳಾಗಲೀ ಪೂರಕ ಸಂಖ್ಯೆಗಳಲ್ಲಿರಲಿಲ್ಲ ಎಂದು ಮುಂಬೈ ಆಸ್ಪತ್ರೆಯೊಂದರ ಹಿರಿಯ ಶುಶ್ರೂಷಕರಾದ ಶ್ರೀನಿವಾಸ್‌ ತಿಳಿಸುತ್ತಾರೆ. ಇದರಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ವೈದ್ಯರು ಹಾಗೂ ನರ್ಸ್‌ಗಳು ಸಾಕಷ್ಟು ಒತ್ತಡವನ್ನ ಎದುರಿಸಿದ್ದರು. ಅಲ್ಲದೇ ಹೈಡ್ರೋಕ್ಲೋರೋಕ್ವಿನ್‌ ಅಭಾವವೂ ಎದುರಾದಾಗ, ಕೆಲವು ನರ್ಸ್‌ ಸಿಬ್ಬಂದಿಗಳು ಸ್ಥಳೀಯ ಮೆಡಿಲಲ್‌ ಸ್ಟೋರ್ ಮೊರೆ ಹೋಗಿದ್ದೂ ಇದೆ. ಆದರೆ ಕೊನೆಗೂ ಆಸ್ಪತ್ರೆಗಳು ಹೈಡ್ರೋಕ್ಸಿಕ್ಲೋರೋಕ್ವಿನ್‌ ತರಿಸುವಲ್ಲಿ ಯಶಸ್ವಿಯಾದರು. ಆದರೆ ಯಾವೊಂದು ಆಸ್ಪತ್ರೆಯ ಆಡಳಿತ ವರ್ಗವು ಔಷಧಿ ತಯಾರಿಕೆಯ ಪ್ರಯೋಗಕ್ಕೆ ಇಳಿಯಲಿಲ್ಲ. ಅಲ್ಲದೇ ಈ ಔಷಧಿಯಿಂದಾಗುವ ಅಡ್ಡ ಪರಿಣಾಮದ ಬಗ್ಗೆಯೂ ಮಾತಾಡಲಿಲ್ಲ ಎಂದು ಶ್ರೀನಿವಾಸ್‌ ತಿಳಿಸುತ್ತಾರೆ.

ಹೈಡ್ರೋಕ್ಸಿಕ್ಲೋರೋಕ್ವಿನ್‌ ಇನ್ನಿತರ ಔಷಧಿಗಳಾದ Insulin, Azithromycin and Cimetidine ಜೊತೆಗೂ ಬಳಕೆಯಾಗುವಂತದ್ದು. ಆದರೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಕಣ್ಣು, ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿದ್ದಾಗ ಬಳಸುವ ಸಂದರ್ಭದಲ್ಲಿ ಅತಿಯಾದ ಕಾಳಜಿ ವಹಿಸಬೇಕಿದೆ. ಆದರೆ ಆಸ್ಪತ್ರೆಗಳು ಈ ಬಗೆಯ ಯಾವುದೇ ರೀತಿಯ ಕಾಳಜಿ ವಹಿಸಿದ್ದಾಗಲೀ, ಇಲ್ಲವೇ ಭಾರತೀಯ ಸಂಶೋಧನಾ ವೈದ್ಯಕೀಯ ಮಂಡಳಿ (ICMR) ಕೂಡಾ ತನ್ನ ಮಾರ್ಗದರ್ಶಿಯಲ್ಲಿ ತಿಳಿಸಿಲ್ಲ.

“ನಾನು ಗೂಗಲ್‌ ಮಾಡಿ ನೋಡಿದಾಗ ಈ ವಿಚಾರಗಳನ್ನ ತಿಳಿದುಕೊಂಡೆ. ಆದರೆ ನನ್ನ ಸಹೋದ್ಯೋಗಿಗಳಿಗೆ ಬಹುತೇಕ ಮಂದಿಗೆ ಈ ವಿಚಾರ ತಿಳಿದಿಲ್ಲ. ಆದ್ದರಿಂದ ಅವರೆಲ್ಲ ಈ ವಿಚಾರದಲ್ಲಿ ನಿರಾಸಕ್ತರಾಗಿದ್ದಾರೆ. ಅಲ್ಲದೇ ಕೇವಲ ಔಷಧಿ ವಿಚಾರವಷ್ಟೇ ಮಾತನಾಡುತ್ತಾರೆ” ಎಂದು ಶ್ರೀನಿವಾಸ್‌ ತಿಳಿಸುತ್ತಾರೆ.

ಇದು ಕೇವಲ ಮುಂಬೈ ಆಸ್ಪತ್ರೆಯೊಂದರ ಕಥೆ ಮಾತ್ರವಲ್ಲದೇ ಇಡೀ ದೇಶದಲ್ಲೇ ಇಂತಹ ಪರಿಸ್ಥಿತಿ ಇದೆ. ಹೈಡ್ರೋಕ್ಸಿಕ್ಲೋರೋಕ್ವಿನ್‌ ಅಗತ್ಯವಿದೆಯೋ, ಇಲ್ಲವೋ ಆದರೆ ವೈದ್ಯರು ಮಾತ್ರ ಅದೇ ಔಷಧಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಕಾರಣವೂ ಸ್ಪಷ್ಟ, ICMR ಕೂಡಾ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನ ನೀಡಿದ್ದು, ಅದನ್ನೇ ವೈದ್ಯರು ಯಾವುದೇ ಹೆಚ್ಚುವರಿ ಚರ್ಚೆ ಮಾಡದೇ ಆದ್ಯತೆ ನೀಡುತ್ತಿದ್ದಾರೆ.

ಕೋವಿಡ್-19‌ ಸೋಂಕು ವಿಚಾರದಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್‌ ಸೂಕ್ತವಾದ ಔಷಧಿ ಎಂದು ಯಾವ ಔಷಧ ನಿಯಂತ್ರಕವೂ ತಿಳಿಸಿಲ್ಲ. ಅಲ್ಲದೇ ಕರೋನಾ ಸೋಂಕು ಸಂಬಂಧ ಹೈಡ್ರೋಕ್ಸಿಕ್ಲೋರೋಕ್ವಿನ್‌ ಬಳಕೆಗೆ ತಾತ್ಕಾಲಿಕ ಅನುಮತಿಯನ್ನ ಮಾತ್ರ ದೇಶದಲ್ಲಿ ನೀಡಲಾಗಿದೆ. ಆದರೆ ಈ ತಾತ್ಕಾಲಿಕ ಅನುಮತಿಯೇ ಇದೀಗ ಪೂರ್ಣ ಅನುಮತಿ ಪ್ರಕಾರ ಬಳಕೆಯಾಗುತ್ತಿರುವುದು ಆತಂಕಕಾರಿ.

ಮುಂಬೈಯ ಕೆಲವು ಆಸ್ಪತ್ರೆಗಳಲ್ಲಿ ಶಂಕಿತ ಕರೋನಾ ಸೋಂಕಿತರ. ಇನ್ನು ಇಂದೋರ್‌ ನಲ್ಲಿ ಕೋವಿಡ್‌-19 ದೃಢಪಟ್ಟವರು ಹಾಗೂ 3 ಸಾವಿರ ಆರೋಗ್ಯ ಸಿಬ್ಬಂದಿಗಳು ಇದೇ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನು ರೋಗ ನಿರೋಧಕದಂತೆ ಬಳಸಿದ್ದರು. ಆದರೆ ಇದೆಲ್ಲವೂ ಕೇವಲ ಪ್ರಯೋಗಾತ್ಮಕವಾಗಿ ಇತ್ತು, ಆದರೆ ಕೆಲಸ ಮಾಡದೇ ಇರಬಹುದು ಎಂದು ವೈದ್ಯಕೀಯ ಸಿಬ್ಬಂದಿಗಳು ತಿಳಿಸಿದ್ದರು. ಹಲವಾರು ರೋಗಿಗಳಿಗೆ ಇದನ್ನ ನೀಡಲಾಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಅನ್ನೋದನ್ನ ಹೇಳಲು ಸಾಧ್ಯವಾಗದು ಎಂದು ಮುಂಬೈಯ ಯುನೈಟೆಡ್‌ ನರ್ಸಿಂಗ್‌ ಎಸೋಸಿಯೇಶನ್‌ ಅಧ್ಯಕ್ಷ ಜಿಬಿನ್‌ ಟಿಸಿ ತಿಳಿಸಿದ್ದಾರೆ.

ಹೈಡ್ರೋಕ್ಸಿಕ್ಲೋರೋಕ್ವಿನ್‌ ಬಳಸಬೇಕಾದ ರೀತಿಯ ಮಾರ್ಗಸೂಚಿಗಳನ್ನ ದೇಶದಲ್ಲಿ ಅನುಸರಿಸುತ್ತಿಲ್ಲ. ಬದಲಾಗಿ ಇದೆಲ್ಲವೂ ದೇಶದಲ್ಲಿ ರಾಜಕೀಯ ಉದ್ದೇಶವಾಗಿಯೂ ಬದಲಾಗಿದ್ದು, ವೈಜ್ಞಾನಿಕವಾಗಿ ಯಾವುದೇ ದಾಖಲೆ ಇಲ್ಲದಿದ್ದರೂ ಇದನ್ನೇ ಬಳಸಲಾಗುತ್ತಿದೆ. ಮೊದಲ ಬಾರಿಗೆ ಫ್ರಾನ್ಸ್‌ ಮಲೇರಿಯಾ ರೋಗಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್‌ ಕೋವಿಡ್-19‌ ವಿರುದ್ಧ ಕಾರ್ಯನಿರ್ವಹಿಸಬಹುದು ಅಂತಾ ಅಂದಾಜಿಸಿದ್ದರು. ಆನಂತರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯಾವಾಗ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನು ʼಗೇಮ್‌ ಚೇಂಜರ್‌ʼ ಎಂದು ಕರೆದರೋ, ಅದಾಗಲೇ ಪ್ರತಿಯೊಂದು ದೇಶಕ್ಕೂ ಹೈಡ್ರೋಕ್ಸಿಕ್ಲೋರೋಕ್ವಿನ್‌ ಒಳ್ಳೆಯ ಔಷಧ ಆಗಬಹುದು ಅನ್ನೋದಕ್ಕೆ ಉತ್ತೇಜನ ನೀಡಿದಂತಾಯಿತು.

ಅಮೆರಿಕಾದ US Biomedical Advanced Research and Development Agency ಮಾಜಿ ಮುಖ್ಯಸ್ಥ ರಿಕ್‌ ಬ್ರೈಟ್‌ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ಆರೋಪವೊಂದನ್ನ ಹೊರಿಸಿದ್ದಾರೆ. ಅದೇನೆಂದರೆ ಟ್ರಂಪ್‌ ಹಾಗೂ ಅವರ ಸಹವರ್ತಿಗಳು ತಮ್ಮ ವ್ಯವಹಾರದ ಲಾಭದ ಉದ್ದೇಶದಿಂದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನ ಬಳಸಲು ಉತ್ತೇಜನ ನೀಡುವ ಮೂಲಕ ಇನ್ನಿತರ ಔಷಧಿಗಳ ಬಗ್ಗೆ ನಿರಾಸಕ್ತಿ ವಹಿಸಿದ್ದಾರೆ. ಅಲ್ಲದೇ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನು ಶಿಷ್ಟಾಚಾರ ಪ್ರಕಾರ ತುರ್ತು ಅವಶ್ಯಕಗಳಿದ್ದಾಗ ಮಾತ್ರ ಬಳಸುವಂತದ್ದು ಎಂದಿದ್ದಾರೆ.

ಭಾರತದದಲ್ಲಿ ಆರಂಭದಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್‌ ನೀಡಿ ಪ್ರಾಯೋಗಿಕವಾಗಿ ಯಶಸು ಕಂಡ ಬಳಿಕ ಇದನ್ನೇ ಬಳಸಲು ದೇಶದ ಆಸ್ಪತ್ರೆಗಳು ಮುಂದಾದವು. ಆದರೆ ಕೆಲವು ದೇಶಗಳು Antiviral drug ನೀಡುವ ಮೂಲಕ ಕರೋನಾ ವಿರುದ್ಧ ಸೆಣಸಾಡಿದ್ದವು. ಅಲ್ಲದೇ ಪ್ಲಾಸ್ಮಾ ಥೆರಪಿ ಮೂಲಕನೂ ಕರೋನಾ ಸೋಂಕಿತನ ರೋಗ ನಿರೋಧಕತೆ ಹೆಚ್ಚಿಸುವ ಮೂಲಕ ಹೆಚ್ಚಿನ ಆಘಾತ ತಪ್ಪಿಸಿಕೊಂಡಿದ್ದರು. ಅಲ್ಲದೇ ದೆಹಲಿಯಲ್ಲೂ ಹಲವು ಪ್ರಕರಣಗಳಲ್ಲಿ ಇದೇ ಪ್ರಯೋಗ ಯಶಸ್ವಿಯಾಗುವಂತೆ ನೋಡಿಕೊಂಡಿದ್ದರು. ಅದರಲ್ಲೂ ಎಪ್ರಿಲ್‌ ತಿಂಗಳಿನಲ್ಲಿ ನಡೆದ ಯಶಸ್ವಿ ಪ್ಲಾಸ್ಮಾ ಥೆರಪಿಯಿಂದ ಪ್ಲಾಸ್ಮಾ ಸಂಗ್ರಹಕ್ಕೂ‌ ದೆಹಲಿಯ ಕೋವಿಡ್ ಆಸ್ಪತ್ರೆಗಳೂ ಮುಂದಾಗಿದ್ದವು. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕೆ ಸಂಪೂರ್ಣ ಅನುಮತಿ ನೀಡಿರಲಿಲ್ಲ.

ಕಾನೂನು ಪ್ರಕಾರವಾಗಿ, ಯಾವುದೇ ಔಷಧಿಗಳ ಸಂಶೋಧನೆ ಸಂದರ್ಭ New Drugs and Clinical Trials Rules 2019 ಇದರಲ್ಲಿ ಸೂಚಿಸಲಾದ ಮಾರ್ಗಸೂಚಿಗಳನ್ನ ಪಾಲಿಸಲೇಬೇಕಾಗುತ್ತದೆ. ಇದನ್ನ ಐಸಿಎಂಆರ್‌ ಕೂಡಾ ಪಾಲನೆ ಮಾಡುತ್ತದೆ. ಆದರೆ ಐಸಿಎಂಆರ್‌ ಯಾವುದಾದರೂ ಸಂಶೋದಧನೆಯನ್ನ ಆರಂಭಿಸಲು ಮುಂದಾದರೆ ಅದನ್ನ ತಿಳಿಸಬೇಕಾದ ಅಥವಾ ವಿವಿರಿಸಬೇಕಾದ ಅನಿವಾರ್ಯತೆ ಇರದು.

2014ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಉಂಟಾದ ಎಬೋಲಾ ರೋಗದಿಂದ ಜನರು ಮೆದುಳಿನ ಒಳಗಿನ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದರು. ಶೇಕಡಾ 50ರಷ್ಟು ಜನ ಸಮರ್ಪಕ ಔಷಧಿ ಇಲ್ಲದೆಯೇ ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಅವರಿಗೆ ನೀಡಲಾದ ZMapp ನಂತಹ ಕೆಲವೊಂದು ಔಷಧಗಳು ಅಡ್ಡಪರಿಣಾಮ ಬೀರಿದ್ದವು. ಇದರಿಂದಾಗಿ ವಿದೇಶಿ ಔಷಧಿಗಳನ್ನ ಪಡೆಯಲು ಆಫ್ರಿಕಾ ಖಂಡದ ಲೈಬೀರಿಯಾದಂತಹ ದೇಶಗಳು ಹಿಂದೆ ಸರಿದಿದ್ದವು. ಕಾರಣ, ಅದೆಲ್ಲವೂ ಪರೀಕ್ಷೆಗೊಳಪಡದ ಔಷಧಿಗಳಾಗಿತ್ತು ಅನ್ನೋ ವದಂತಿಯಿಂದಾಗಿತ್ತು ಅನ್ನೋದಾಗಿ ʼಡಾಕ್ಟರ್ಸ್‌ ವಿತೌಟ್‌ ಬಾರ್ಡರ್ಸ್‌ʼ ಸಂಸ್ಥೆಯು ತಿಳಿಸಿತ್ತು. ಆದರೆ ಆ ನಂತರ ಇಬ್ಬರು ಅಮೆರಿಕನ್‌ ನಿವಾಸಿಗಳೆ ಗುಣಮುಖರಾದ ಬಳಿಕ ಲೈಬೀರಿಯಾದ ಮಂದಿಯಲ್ಲಿ ZMapp ಔಷಧಿ ಸೇವನೆ ಬಗ್ಗೆ ಧೈರ್ಯ ಬಂದಿದ್ದವು. ಆದರೆ ವಾಸ್ತವದಲ್ಲಿ ZMapp ಅನ್ನೋದು ಅತ್ಯಂತ ಅಪಾಯಕಾರಿ ಔಷಧಿಯಾಗಿತ್ತು. ಆದರೆ ಯಾವತ್ತೂ ಅದು ಎಬೋಲಾ ವಿಚಾರದಲ್ಲಿ ಮಾತ್ರ ಅತ್ಯಂತ ಉತ್ತಮ ರೋಗನಾಶಕ ಔಷಧಿ ಅನ್ನೋದರಲ್ಲಿ ಸಂಶಯವಿರಲಿಲ್ಲ.

ಇದೇ ರೀತಿ ಹೈಡ್ರೋಕ್ಸಿಕ್ಲೋರೋಕ್ವಿನ್‌ ಬಳಕೆಯ ಬಗ್ಗೆಯೂ ವಾದ-ಪ್ರತಿವಾದಗಳು ವೈದ್ಯಲೋಕದ ಮಧ್ಯೆ ಇವೆ. ಕೆಲವು ವಿಜ್ಞಾನಿಗಳಂತೂ ಕೋವಿಡ್-19‌ ಗೆ ಇದನ್ನ ನೀಡೋದರಿಂದ ಅಪಾಯವೂ ಇದೆ ಅನ್ನೋದನ್ನ ತಿಳಿಸಿದ್ದಾರೆ. ಅದಕ್ಕೊಂದು ಕಾರಣವೂ ಇದೆ, ಕೆಲವೊಂದು ಬೇರೆ ರೋಗಕ್ಕೆ ಸಂಬಂಧಪಟ್ಟ ಔಷಧಿಗಳು ಇನ್ನೊಂದು ರೋಗಕ್ಕೆ ನೀಡಿದಾಗ ಅದರಿಂದ ಮತ್ಯಾವುದೋ ರೋಗಕ್ಕೆ ಕಾರಣವಾಗಬಹುದು ಅಂತಾ ವಿಜ್ಞಾನಿಗಳು ತಿಳಿಸುತ್ತಾರೆ. ಈಗಾದಾಗ ಜನರು ಇರೋ ಔಷಧಿಗಳ ಬಗ್ಗೆಯೂ ನಂಬಿಕೆ ಕಳೆದುಕೊಳ್ಳುತ್ತಾರೆ ಅನ್ನೋದು ವೈದ್ಯಲೋಕದ ಮಾತು.

ಇನ್ನು ಐಸಿಎಂಆರ್‌ ಕೂಡಾ ದೇಶ ಹಾಗೂ ಜಾಗತಿಕ ಮಟ್ಟದ ಯಾವುದೇ ಸೂಚನೆಗಳನ್ನೂ ಪಾಲಿಸುತ್ತಿಲ್ಲ ಅನ್ನೋ ವಾದವೂ ಇದೆ. ರೋಗಶಾಸ್ತ್ರದ ಮುಖ್ಯಸ್ಥ ರಮಣ್‌ ಗಂಗಾಕೇಡ್ಕರ್‌ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದರು. ಅಲ್ಲದೇ ಎಪ್ರಿಲ್‌ ತಿಂಗಳಿನಲ್ಲಿ 480 ಆರೋಗ್ಯ ಸಿಬ್ಬಂದಿಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಔಷಧ ನೀಡಲಾಗಿದ್ದು, ಅದರ ಪರಿಣಾಮವೇನು ಅನ್ನೋದರ ಬಗ್ಗೆ ಎಲ್ಲೂ ಬಹಿರಂಗಪಡಿಸಲಾಗಿಲ್ಲ.

ಇನ್ನೊಂದೆಡೆ ಅಮೆರಿಕಾ US National Institutes of Health ಕೋವಿಡ್-19‌ ಗೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಹಾಗೂ azithromycin ಬಳಸುವುದಕ್ಕೆ ವಿರೋಧಿಸಿದೆ. ಮಾತ್ರವಲ್ಲದೇ ʼFood and Drug Administration’ (FDA) ಕೂಡಾ ಕ್ಲೋರೋಕ್ವಿನ್‌ ಹಾಗೂ ಹೈಡ್ರೋಕ್ಸಿಕ್ಲೋರೋಕ್ವಿನ್‌ ಬಳಕೆ ವಿರೋಧ ವ್ಯಕ್ತಡಿಸಿದೆ.

ಆದರೆ ಭಾರತದಲ್ಲಿ ರೋಗ ನಿರೋಧಕವಾಗಿಯೂ ಹಾಗೂ ರೋಗಿಗಳ ಔಷಧಿಯಾಗಿಯೂ ಈ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನೇ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನೇ ತಿಳಿಸಿರುವ ಗಂಗಾ ಕೇದ್ಕರ್‌, ಮುನ್ನೆಚ್ಚರಿಕಾ ಕ್ರಮವಾಗಿ ರೋಗ ನಿರೋಧಕದಂತೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಔಷಧ ಪಡೆದವರು ಔಷಧಿಯ ಅಡ್ಡ ಪರಿಣಾಮಕ್ಕೆ ತುತ್ತಾದವರು. ಆದರೆ ಈ ಮಾಹಿತಿಯನ್ನ ಎಲ್ಲೂ ಬಿಟ್ಟುಕೊಡಲಾಗಿಲ್ಲ.

ಆದರೆ ಈಗ ಕೆಲವು ಆಸ್ಪತ್ರೆಗಳು ಎಚ್ಚೆತ್ತುಕೊಂಡಿದ್ದು ತಮ್ಮ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕಾವಾಗಿ ನೀಡುತ್ತಿದ್ದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಔಷಧಿಯನ್ನ ಸೇವಿಸದಂತೆ ತಿಳಿಸಿದೆ. ಉದಾಹರಣೆಗೆ ದಕ್ಷಿಣ ಮುಂಬೈಯ ವೋಕ್‌ಹಾರ್ಡ್ಟ್‌ ಆಸ್ಪತ್ರೆಯು ಆರಂಭದಲ್ಲಿ ತಮ್ಮ ವೈದ್ಯಕೀಯ ಸಿಬ್ಬಂದಿಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಔಷಧಿಯನ್ನ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಆದರೆ ಆ ನಂತರ ಆಸ್ಪತ್ರೆಯ ತಜ್ಞ ಕೇದರ್‌ ತೊರಾಸ್ಕರ್‌, ಹೈಡ್ರೋಕ್ಸಿಕ್ಲೋರೋಕ್ವಿನ್‌ ಪ್ರಾಯೋಗಿಕ ಹಂತದಲ್ಲಷ್ಟೇ ಇದೆ. ಆದ್ದರಿಂದ ಅದರಿಂದಾಗಿ ಹೆಚ್ಚಿನ ಪರಿಣಾಮಕಾರಿ ಅಂಶವಿಲ್ಲ ಎಂದಿದ್ದರು.

ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಈ ವಿಚಾರದಲ್ಲಿ ಈವರೆಗೂ ಒಂದು ನಿಲುವು ಪ್ರದರ್ಶಿಸಲು ವಿಫಲವಾಗಿದೆ. ಕಳೆದ ಎಪ್ರಿಲ್‌ 28 ರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಕೇಂದ್ರ ಆರೋಗ್ಯ ಸಚಿವಾಲಯದ ಜೊತೆ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ಯಾರಿಗಾದರೂ ಕರೋನಾ ಸೋಂಕಿನ ಸಣ್ಣಗಿನ ಲಕ್ಷಣಗಳು ಕಂಡುಬಂದರೆ ಅಂಥವರು ಮನೆಯಲ್ಲಿದ್ದುಕೊಂಡೇ ಮುಂಜಾಗೃತಾ ಕ್ರಮವಾಗಿ ರೋಗ ನಿರೋಧಕವಾಗಿ ಹೈಡ್ರೋಕ್ಸಿಕ್ಲೋರೋಕ್ವಿನ್‌ ಬಳಸಬಹುದು ಎಂದಿದ್ದಾರೆ.

ಆದರೆ ಇನ್ನೊಂದೆಡೆ ಅತೀ ಹೆಚ್ಚು ಸೋಂಕು ಬಾಧಿತ ಅದೇ ಮಹಾರಾಷ್ಟ್ರದ ವಾರ್ದಾ ಜಿಲ್ಲೆಯಲ್ಲಿ ಕರೋನಾ ಸೋಂಕು ಇನ್ನಷ್ಟು ಅತಿರೇಕಕ್ಕೆ ಹೋದರೆ ಮುಂಜಾಗೃತವಾಗಿ ಎಲ್ಲಾ ಪೊಲೀಸ್‌ ಸಿಬ್ಬಂದಿಗಳು ಹೈಡ್ರೋಕ್ಸಿಕ್ಲೋರೋಕ್ವಿನ್‌ ಪಡೆಯುವಂತೆ ಪೊಲೀಸ್‌ ಇನ್ಸ್‌ಪೆಕ್ಟರ್ ನಿಲೇಶ್‌ ಎಂ. ಬ್ರಮ್ಹನೆ ತಿಳಿಸಿದ್ದಾರೆ. ಅಲ್ಲದೇ ಇದಕ್ಕಾಗಿ ಜಿಲ್ಲಾ ಸರ್ಜನ್‌ ಜೊತೆಗೂ ಔಷಧಿ ನೀಡುವ ಪ್ರಮಾಣದ ಬಗ್ಗೆಯೂ ಅವರ ಜೊತೆ ಚರ್ಚಿಸಿದ್ದೇನೆ. ಐಸಿಎಂಆರ್‌ ಗೈಡ್‌ಲೈನ್‌ ನಂತೆಯೇ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಅಲ್ಲದೇ, “ಶೀಘ್ರದಲ್ಲಿಯೇ ಮಾತ್ರೆಗಳು ತಲುಪುವುದಾಗಿ ಭಾವಿಸಿದ್ದೇನೆ” ಎನ್ನುತ್ತಾರೆ.

ಒಟ್ಟಿನಲ್ಲಿ ಮಲೇರಿಯಾ ರೋಗಕ್ಕೆ ರಾಮಬಾಣವಾದ ಭಾರತೀಯರೇ ಪೇಟೆಂಟ್‌ ಹೊಂದಿರೋ ಹೈಡ್ರೋಕ್ಸಿಕ್ಲೋರೋಕ್ವಿನ್‌ ಕೋವಿಡ್-19‌ಗೆ ಅದೆಷ್ಟರ ಮಟ್ಟಿಗೆ ಪರಿಣಾಮಕಾಗಿ ಅನ್ನೋದು ಈಗಲೂ ಚರ್ಚಾರ್ಹ ವಿಚಾರವಾಗಿಯೇ ಉಳಿದಿದೆ. ಮಾತ್ರವಲ್ಲದೇ ಈ ಬಗ್ಗೆ ವೈಜ್ಞಾನಿಕವಾಗಿ ಅದೆಷ್ಟು ಪರಿಣಾಮಕಾರಿ ಅನ್ನೋದು ಈವರೆಗೂ ಪತ್ತೆ ಹಚ್ಚಲಾಗಿಲ್ಲ. ಆದ್ದರಿಂದ ಅನಗತ್ಯವಾಗಿ ಈ ಔಷಧ ನೀಡುವಿಕೆಯಿಂದ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆಯೇ ಅನ್ನೋ ಆತಂಕವೂ ಕಾಡುತ್ತಿದೆ. ಇದೆಲ್ಲಕ್ಕೂ ICMR ಉತ್ತರಿಸಬೇಕಿದೆ.

ಕೃಪೆ: ದಿ ವೈರ್

Click here Support Free Press and Independent Journalism

Pratidhvani
www.pratidhvani.com