ಜನರ ದುಡ್ಡನ್ನು ಜನರಿಗೆ ನೀಡುವ ಚಾಲಾಕಿತನ ಬಿಡಿ, ಇಂಥ ಕಷ್ಟಕ್ಕಾದರೂ ನಿಮ್ಮ ಜೇಬಿನಿಂದ ಹಣ ಕೊಡಿ
ರಾಷ್ಟ್ರೀಯ

ಜನರ ದುಡ್ಡನ್ನು ಜನರಿಗೆ ನೀಡುವ ಚಾಲಾಕಿತನ ಬಿಡಿ, ಇಂಥ ಕಷ್ಟಕ್ಕಾದರೂ ನಿಮ್ಮ ಜೇಬಿನಿಂದ ಹಣ ಕೊಡಿ

ಜನಪ್ರತಿನಿಧಿಗಳು ನೀಡಿದ ಈ ದುಡ್ಡು ಯಾರದು? ಎಂದು. ತಿಂಗಳ ಸಂಬಳ, ಸಂಸದರ ನಿಧಿ ಅಥವಾ ಪಿಎಸ್‌ಯೂಗಳ ಮೂಲಕ ನೀಡಲ್ಪಡುವ ದೇಣಿಗೆ; ಎಲ್ಲವೂ ಸರ್ಕಾರದ್ದು ಅಂದರೆ ಜನರ ದುಡ್ಡು ಎಂದಾದರೆ ವೈಯಕ್ತಿಕವಾಗಿ ಸಚಿವರು, ಸಂಸದರು, ಶಾಸಕರು ಕೊಟ್ಟಿದ್ದಾದರೂ ಏನು? ಸಮಾಜಸೇವೆಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಇವರು ಇಂಥ ಪರಿಸ್ಥಿತಿಯಲ್ಲೂ ತಮ್ಮ ತಿಜೋರಿಯಿಂದ ಹಣ ನೀಡುವುದಿಲ್ಲ ಎನ್ನುವುದಾದರೆ ಮತ್ತೆ ಯಾವ ರೀತಿಯ ಸೇವೆ ಮಾಡುತ್ತಾರೆ?

ಯದುನಂದನ

ಶತಮಾನದಲ್ಲೇ ಕಂಡು ಕೇಳರಿಯದ, ಇಡೀ ಜಗತ್ತನ್ನೇ ಕಾಡುತ್ತಿರುವ ಕರೋನಾವನ್ನು ಇನ್ನಿಲ್ಲವಾಗಿಸುವುದು ಸದ್ಯದ ಅತಿದೊಡ್ಡ ಸವಾಲು. ಈ ಮಹಾಪಿಡುಗಿನ ವಿರುದ್ದ ಯುದ್ಧದ ರೀತಿಯಲ್ಲೇ ಹೋರಾಟ ಮಾಡಬೇಕು. ಅದಕ್ಕಾಗಿ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಬೇಕು. ಲಾಕ್‌ಡೌನ್ ಮಾಡಲೇಬೇಕು. ವೈದ್ಯಕೀಯ ವೆಚ್ಛ ಮತ್ತು ಲಾಕ್‌ಡೌನ್‌ನಿಂದ ಆಗುವ ನಷ್ಟ ತುಂಬಿಕೊಳ್ಳಲು ಅಪಾರ ಪ್ರಮಾಣದ ದುಡ್ಡು ಬೇಕು. ಇಂಥ ವಿಷಮ ಪರಿಸ್ಥಿತಿ ನಿಭಾಯಿಸಲೆಂದೇ ರಾಜ್ಯಗಳ ಮಟ್ಟದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿಗಳ ಪರಿಹಾರ ನಿಧಿ ಇದೆ.

ಈ ಪರಿಹಾರ ನಿಧಿಗೆ ಜನರಷ್ಟೇಯಲ್ಲದೆ ಸಂಘ-ಸಂಸ್ಥೆಗಳು, ಸರ್ಕಾರದಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಪಡೆದವರು ದೇಣಿಗೆ ನೀಡುತ್ತಾರೆ. ಜನಪ್ರತಿನಿಧಿಗಳು ಕೂಡ. ಕರೋನಾ ಕಡುಕಷ್ಟವನ್ನು ಹುಟ್ಟಡಗಿಸುವುದಕ್ಕೂ ಕೇಂದ್ರ ಸಚಿವರು, ಸಂಸದರು, ರಾಜ್ಯದ ಸಚಿವರು, ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ದೇಣಿಗೆ ನೀಡಿದ್ದಾರೆ. ಅವರ ಧಾರಾಳತೆಯ ಪರಿಯನ್ನು ಓರೆಗಚ್ಚಲೇಬೇಕಾದ ಸಮಯವಿದು. ಕೇಂದ್ರ ಸಚಿವರ ಪೈಕಿ ಬಹುತೇಕರು ತಮ್ಮ ತಿಂಗಳ ಸಂಬಳವನ್ನು ನೀಡಿದ್ದಾರೆ. ತಮ್ಮ ಇಲಾಖೆ ವ್ಯಾಪ್ತಿಯ ಪಿಎಸ್‌ಯುಗಳಿಂದ ದೇಣಿಗೆ ಕೊಡಿಸಿದ್ದಾರೆ. ಸಂಸದರು ತಮ್ಮ ಸಂಸದರ ನಿಧಿಯಿಂದ ಹಣ ನೀಡಿದ್ದಾರೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ 'ಎಲ್ಲಾ ಸಂಸದರು ತಮ್ಮ ಸಂಸದರ ನಿಧಿಯಿಂದ ಒಂದೊಂದು ಕೋಟಿ ರೂಪಾಯಿಗಳನ್ನು ಕರೋನಾ ಕಷ್ಟಕ್ಕೆ ಕೊಡಲೇಬೇಕೆಂದು' ಹುಕ್ಕುಂ ಹೊರಡಿಸಿದ್ದಾರೆ. ರಾಜ್ಯಗಳ ಮಟ್ಟದಲ್ಲೂ ಸಚಿವರು, ಶಾಸಕರು ತಿಂಗಳ ಸಂಬಳ ಬಿಟ್ಟುಕೊಟ್ಟಿದ್ದಾರೆ.

ಮುಖ್ಯ ವಿಷಯ ಏನೆಂದರೆ ನಮ್ಮ ಜನಪ್ರತಿನಿಧಿಗಳು ನೀಡಿದ ಈ ದುಡ್ಡು ಯಾರದು? ಎಂದು. ತಿಂಗಳ ಸಂಬಳ, ಸಂಸದರ ನಿಧಿ ಅಥವಾ ಪಿಎಸ್‌ಯೂಗಳ ಮೂಲಕ ನೀಡಲ್ಪಡುವ ದೇಣಿಗೆ; ಎಲ್ಲವೂ ಸರ್ಕಾರದ್ದು ಅತಾರ್ಥ್ ಜನರ ದುಡ್ಡು ಎಂದಾದರೆ ವೈಯಕ್ತಿಕವಾಗಿ ಸಚಿವರು, ಸಂಸದರು, ಶಾಸಕರು ಕೊಟ್ಟಿದ್ದಾದರೂ ಏನು? ಸಮಾಜಸೇವೆಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಇವರು ಇಂಥ ದೈನೇಸಿ ಪರಿಸ್ಥಿತಿಯಲ್ಲೂ ತಮ್ಮ ತಿಜೋರಿಯಿಂದ ಹಣ ನೀಡುವುದಿಲ್ಲ ಎನ್ನುವುದಾದರೆ ಮತ್ತೆ ಯಾವ ರೀತಿಯ ಸೇವೆ ಮಾಡುತ್ತಾರೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಜನಪ್ರತಿನಿಧಿಗಳು ತಮ್ಮ ಸಂಬಳವನ್ನು ಕೊಟ್ಟ ಬಗ್ಗೆ, ತಮ್ಮ ಕ್ಷೇತ್ರಾಭಿವೃದ್ಧಿ ಹಣವನ್ನು ಎತ್ತಿಕೊಟ್ಟ ಬಗ್ಗೆ, ಕೇಂದ್ರ ಸಚಿವರು ತಮ್ಮ ಇಲಾಖೆಯ ಪಿಎಸ್‌ಯುಗಳಿಂದ ದೇಣಿಗೆ ಕೊಡಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಿ ಪ್ರಚಾರವನ್ನೂ ಪಡೆಯುತ್ತಿದ್ದಾರೆ. ಈ ಪೈಕಿ ತಮಗೆ ನಿಗದಿಯಾಗಿರುವ ಸಂಬಳವನ್ನು ಬಳಸಿಕೊಳ್ಳುವುದು ಅವರ ವಿವೇಚನೆಗೆ ಬಿಟ್ಟಿದ್ದು. ಕ್ಷೇತ್ರದ ಅಭಿವೃದ್ಧಿಗೆಂದು ನೀಡಲಾಗಿರುವ ಹಣವನ್ನು ಬಳಸಲು ಮಾತ್ರ ನಿಯಮಾವಳಿಗಳಿರುತ್ತವೆ. ಹೆಸರೇ ಹೇಳುವಂತೆ ಅದು ಕ್ಷೇತ್ರದ ಅಭಿವೃದ್ಧಿಗೆ ಮೀಸಲಾಗಿರಬೇಕು. ಆದರೆ ತಮ್ಮ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ನೆಪ ಇಟ್ಟುಕೊಂಡು, ಬಂಡೆದ್ದು ಸರ್ಕಾರವನ್ನೇ ಉರುಳಿಸುವ ಶಾಸಕರು ಮತ್ತು ಸಂಸದರು ತಮ್ಮ ತಿಜೋರಿಯಿಂದ ಹಣ ಕೊಡಬೇಕಾದಂತಹ ಪರಿಸ್ಥಿತಿಯಲ್ಲಿ ಅದೇ ಹಣವನ್ನು ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ.

ಲೋಕಸಭಾ ಕ್ಷೇತ್ರವೊಂದಕ್ಕೆ ವರ್ಷಕ್ಕೆ 5 ಕೋಟಿ ರೂಪಾಯಿ ಏನೇನೂ ಸಾಲದು ಎಂಬುದು ಈಗಲೂ ಚರ್ಚಾವಿಷಯವೇ. ಆದರೂ ಅದರ ಶೇಕಡ 20ರಷ್ಟು ಹಣವನ್ನು, ಅಂದರೆ 1 ಕೋಟಿ ರೂಪಾಯಿಯನ್ನು ಒಂದೇ ಏಟಿಗೆ ಸಂಸದರು ಎತ್ತಿಕೊಡುತ್ತಿದ್ದಾರೆ. ಹೀಗೆ ಪ್ರತಿಯೊಬ್ಬರು ಒಂದೊಂದು ಕೋಟಿ ರೂಪಾಯಿ ಕೊಡಲೇಬೇಕು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸಂಸದರಿಗೆ ಸೂಚಿಸಿದ್ದಾರೆ. ಲೋಕಸಭಾ ಸ್ಪೀಕರ್ ಈ ರೀತಿ ಸಂಸತ್ ಸದಸ್ಯರಿಗೆ ಅವರ ಸಂಸದರ ನಿಧಿ ಬಳಕೆ ಬಗ್ಗೆ ತಾಕೀತು ಮಾಡಿದ್ದು ಅಪರೂಪದ ಪ್ರಕರಣ.

ಇದು ಕಷ್ಟದ ಸಮಯವಾದುದರಿಂದ ಸಹಜವಾಗಿ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಇದಕ್ಕೆ ಪೂರಕವಾಗಿ ರಿಲೆಯೆನ್ಸ್, ವಿಪ್ರೋ, ಟಾಟಾದಂತಹ ದೈತ್ಯ ಸಂಸ್ಥೆಗಳು ಅಪಾರ ಪ್ರಮಾಣದ ದೇಣಿಗೆ ನೀಡಿವೆ. ಸೆಲಬ್ರಿಟಿಗಳೂ ಕೋಟಿಗಟ್ಟಲೆ ಹಣ ಕೊಟ್ಟಿದ್ದಾರೆ. ಪ್ರಖ್ಯಾತ ನಟ ಸಲ್ಮಾನ್ ಖಾನ್ 25 ಸಾವಿರ ಚಲನಚಿತ್ರ ಕಾರ್ಮಿಕರಿಗೆ ನೆರವಾಗುವ ಭರವಸೆ ನೀಡಿದ್ದಾರೆ. ತೆಲುಗು ಚಿತ್ರರಂಗದ ನಟರು ಕೋಟಿಗಟ್ಟಲೆ ನೆರವು ನೀಡಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ದೇಣಿಗೆ ನೀಡಿದ್ದಾರೆ. ಆದರೆ ಎಷ್ಟು ಕೊಟ್ಟಿದ್ದೇವೆ ಎಂಬುದನ್ನು ಹೇಳದೆ ದೊಡ್ಡತನ ತೋರಿದ್ದಾರೆ. ಆದರೆ 'ಕ್ರಿಕೆಟ್ ದೇವರು' ಎಂದು ಕರೆಸಿಕೊಳ್ಳುವ ಸಚಿನ್ ತೆಂಡೋಲ್ಕರ್ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳಿಗೆ ತಲಾ 25 ಲಕ್ಷ ರೂಪಾಯಿ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ನಿಜ, ಸಚಿನ್ ತೆಂಡೋಲ್ಕರ್ ಇಷ್ಟೇ ಮೊತ್ತದ ಹಣವನ್ನು ಕೊಡಲಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆದರೆ ಒಂದೇ ಒಂದು ಜಾಹೀರಾತಿನಿಂದ ಕೋಟಿ ಕೋಟಿ ಪಡೆಯುವ, ಕೋಟ್ಯಂತರ ರೂಪಾಯಿ ತೆರಿಗೆ ವಿನಾಯಿತಿ ಪಡೆಯುವ, ರಾಜ್ಯಸಭಾ ಸದಸ್ಯರೂ ಆಗಿದ್ದ ಸಚಿನ್ ತೆಂಡೋಲ್ಕರ್ ದೇಶ ಕಡುಕಷ್ಟದಲ್ಲಿರುವಾಗ ಇನ್ನಷ್ಟು ದೇಣಿಗೆ ನೀಡಬಹುದಿತ್ತು ಎಂದು ನಿರೀಕ್ಷಿಸುವುದು ತಪ್ಪೂ ಅಲ್ಲ.

ಈ ಮಾತು ಜನ ಪ್ರತಿನಿಧಿಗಳಿಗೂ ಅನ್ವಯವಾಗುತ್ತದೆ. ಅವರು ತಮ್ಮ ಕ್ಷೇತ್ರಾಭಿವೃದ್ದಿಯ ದುಡ್ಡನ್ನು ದುರ್ದಿನದ ದರ್ದಿಗೆ ಬಳಸುವುದು ದುಷ್ಟತನವಲ್ಲ. ಅವರಿಗೆ ನಿಜಕ್ಕೂ ಕೊಡಬೇಕು ಎನ್ನುವ ಮನಸ್ಸಿದ್ದರೆ ಸ್ವಂತ ದುಡ್ಡನ್ನು ಕೊಡಲಿ, ಜನರ ದುಡ್ಡನ್ನು ಜನರಿಗೆ ನೀಡಿ ದೊಡ್ಡವರಾಗುವ 'ಚಾಲಾಕಿತನ'ವನ್ನು ಇಂಥ ಕಷ್ಟಕಾಲದಲ್ಲಾದರೂ ತೋರದಿರಲಿ ಎಂದು ಜನ ನಿರೀಕ್ಷಿಸಿದರೆ ಅದು ಕೂಡ ತಪ್ಪಲ್ಲ.

ರಾಜಕಾರಣಿಗಳು ಅಧಿಕಾರ ಇದ್ದಾಗಷ್ಟೇ ಜನರ ದುಡ್ಡಿಗೆ ಧಣಿಗಳು. ಆದರೆ ಸರ್ಕಾರಿ ನೌಕರರು ನಿರಂತರ ಫಲಾನುಭವಿಗಳು. ಕಡಿಮೆ ಕೆಲಸಕ್ಕೆ ಹೆಚ್ಚು ಸಂಬಳ, ಉದ್ಯೋಗ ಭದ್ರತೆ, ನಿವೃತ್ತಿಯ ವೇತನಗಳೆಲ್ಲವನ್ನೂ 'ಉಳ್ಳವರು' ಅವರು. ಅವರು ಇಂಥ ಹೊತ್ತಿನಲ್ಲಾದರೂ ಕೈ ಬಿಚ್ಚಿ ಕೊಡಲಿ. ಸಾಮಾನ್ಯವಾಗಿ ಸರ್ಕಾರಿ ನೌಕರರದ್ದು ಒಂದು ದಿನದ ಸಂಬಳ ಕೊಟ್ಟು 'ಸಾಂಕೇತಿಕ'ವಾಗಿ ಸಹಾಯ ಮಾಡುವ ಮನೋಭಾವ. ತೆಲಂಗಾಣ ಸರ್ಕಾರ ಜನಪ್ರತಿನಿಧಿಗಳ ಶೇಕಡ 75ರಷ್ಟು ವೇತನವನ್ನು ಕಡಿತ ಮಾಡಿದೆ. ಸರ್ಕಾರಿ ನೌಕರರ ಪೈಕಿ 'ಬಿಳಿಆನೆ'ಗಳೆಂದೇ ಕರೆಯಲ್ಪಡುವ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಶೇಕಡ 60ರಷ್ಟು, ಉಳಿದ ನೌಕರ ಶೇಕಡ 50ರಷ್ಟು ವೇತನವನ್ನು ಕಡಿತ ಮಾಡಲು ತೀರ್ಮಾನಿಸಿದೆ. ಡಿ ಗ್ರೂಪ್ ನೌಕರರ ಜೇಬಿಗೆ ಕೈಹಾಕಿಲ್ಲ. ಇದೇ ಮಾದರಿಯಲ್ಲಿ ಕರ್ನಾಟಕದ ಸರ್ಕಾರಿ ನೌಕರರಿಂದಲೂ ನೆರವು ಪಡೆಯಬಹುದು.

ಡೆಹರಾಡೂನಿನ 15 ವರ್ಷದ ಅಭಿನವ್ ಕುಮಾರ್ ಎಂಬ ಯುವಕ ಪ್ರಧಾನ ಮಂತ್ರಿಗೆ ಪತ್ರ ಬರೆದು ದೇಶದ ಎಲ್ಲಾ ದೇವಾಲಯಗಳಲ್ಲಿರುವ ಶೇಕಡ ೮೦ರಷ್ಟು 'ದೇವರ ಸಂಪತ್ತ'ನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಿ. ಆ ಹಣವನ್ನು ಕರೋನಾ ಕಷ್ಟ ನೀಗಿಸಲು ಬಳಸಿಕೊಳ್ಳಿ ಎಂಬ ಸಲಹೆ ನೀಡಿದ್ದಾನೆ. ಕಷ್ಟಕ್ಕಾಗದ ದೇವರ ಸಂಪತ್ತಿನ ಸಿರಿ ಏನು? ಇದು ಕೂಡ ಚರ್ಚಿಸಬೇಕಾದ ವಿಷಯವೇ.

Click here Support Free Press and Independent Journalism

Pratidhvani
www.pratidhvani.com