‘ಕೋವಿಡ್-19’ ಮತ್ತು ನೈತಿಕತೆ ಮರೆತ ಬಿಜೆಪಿಯ ‘ಅಧಿಕಾರ ರಾಜಕಾರಣ’ದ ಅಪಾಯಗಳು!
ರಾಷ್ಟ್ರೀಯ

‘ಕೋವಿಡ್-19’ ಮತ್ತು ನೈತಿಕತೆ ಮರೆತ ಬಿಜೆಪಿಯ ‘ಅಧಿಕಾರ ರಾಜಕಾರಣ’ದ ಅಪಾಯಗಳು!

ದೇಶವೇ ಕರೋನಾ ಸಂಕಷ್ಟದಲ್ಲಿ ಪರಿತಪಿಸುತ್ತಿರುವ ಹೊತ್ತಿಗೆ ಬಿಜೆಪಿ ಮಧ್ಯಪ್ರದೇಶದಲ್ಲಿ ವಾಮಮಾರ್ಗದ ಮೂಲಕ ಅಧಿಕಾರದ ಗದ್ದುಗೆ ಏರಿ ಅಧಿಕಾರೋದನ್ಮಾದದಿಂದ ಹೂಂಕರಿಸುತ್ತದೆ. 24 ರಂದು ಪ್ರಧಾನಿ ಮೋದಿ ಪ್ರೈಮ್ ಟೈಮ್ ನಲ್ಲಿ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿ, 21 ದಿನಗಳ ಲಾಕ್ ಡೌನ್ ಷೋಷಿಸುತ್ತಾರೆ.

ರೇಣುಕಾ ಪ್ರಸಾದ್ ಹಾಡ್ಯ

ದೇಶವ್ಯಾಪಿ ಮಾರಾಣಾಂತಿಕ ಕರೋನಾ ವೈರಸ್ ಬಗ್ಗೆ ಇದ್ದ ಆತಂಕವನ್ನು ಮತ್ತಷ್ಟು ಉದ್ದೀಪಿಸಿದ ಪ್ರಧಾನಿ ನರೇಂದ್ರ ಮೋದಿ ಮಾರ್ಚ 19 ರಂದು ಎಂದಿನಂತೆ ರಾತ್ರಿ ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ನಾಲ್ಕು ದಿನಗಳ ನಂತರ ಒಂದು ದಿನ ಅಂದರೆ 22ರ ಭಾನುವಾರ ರಾಷ್ಟ್ರವ್ಯಾಪಿ ‘ಜನತಾ ಕರ್ಫ್ಯೂ’ ಆಚರಿಸಬೇಕು ಎಂದು ಕರೆ ನೀಡುತ್ತಾರೆ. ಈ ನಡುವೆ ಕರೋನಾ ವೈರಸ್ ವಿರುದ್ಧ ಹೋರಾಡಲು ಹಲವು ಕ್ರಮಗಳನ್ನು ಪ್ರಕಟಿಸುತ್ತಾರೆ.

ವಾರಕ್ಕೂ ಮುಂಚಿನಿಂದಲೂ ವಿಶ್ವ ಆರೋಗ್ಯ ಸಂಸ್ಥೆಯಿಂದಿಡಿದು, ಪ್ರಧಾನಿ ಮೋದಿ ಅವರ ಸಲಹೆಗಾರರು, ಮೋದಿಯ ಸಲಹೆಗಾರರಲ್ಲದ ತಜ್ಞರು ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಿಸುವಂತೆ ಸಲಹೆ ಮಾಡುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಒಪ್ಪುವುದಿಲ್ಲ. 19 ರಂದು ಪ್ರೈಮ್ ಟೈಮ್ ನಲ್ಲಿ ಭಾಷಣ ಮಾಡಿಯೇ, 22ರಂದು ‘ಜನತಾ ಕರ್ಫ್ಯೂ’ಗೆ ಕರೆ ನೀಡುತ್ತಾರೆ. ಜತೆಗೆ 5 ಗಂಟೆಗೆ ಚಪ್ಪಾಳೆ ಹೊಡೆಯುವಂತೆ ಸಲಹೆ ನೀಡುತ್ತಾರೆ. ಅಂದು ಭಾನುವಾರ ಇಡೀ ದೇಶವೇ 5 ಗಂಟೆಗೆ ಚಪ್ಪಾಳೆ ಹೊಡೆಯುವ ಹೊತ್ತಿಗೆ ಮಧ್ಯಪ್ರದೇಶದಲ್ಲಿ ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರ ಗದ್ದುಗೆ ಏರಲು ವೇದಿಕೆ ಸಿದ್ಧವಾಗುತ್ತದೆ.

ಹಲವು ರಾಜಕೀಯ ಬೆಳವಣಿಗೆಗಳ ನಡುವೆ ನೈತಿಕತೆಗೆ ಕಟ್ಟುಬಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಮಾರ್ಚ್ 20 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಆಪರೇಷನ್ ಕಮಲ ಯಶಸ್ಸಿನಿಂದ ಬೀಗಿದ ಬಿಜೆಪಿ ಮಾರ್ಚ್ 23ರಂದು ತರಾತುರಿಯಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಮುಖ್ಯಮಂತ್ರಿ ಹುದ್ದೇಗೇರಿಸುತ್ತದೆ. ಅಂದೇ ಪ್ರಧಾನಿ ಮೋದಿ ಅವರು ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಅಭಿನಂದಿಸಿ ಟ್ವೀಟ್ ಮಾಡುತ್ತಾರೆ.

ಇಡೀ ದೇಶವೇ ಕರೋನಾ ಸಂಕಷ್ಟದಲ್ಲಿ ಪರಿತಪಿಸುತ್ತಿರುವ ಹೊತ್ತಿಗೆ ಬಿಜೆಪಿ ಮಧ್ಯಪ್ರದೇಶದಲ್ಲಿ ವಾಮಮಾರ್ಗದ ಮೂಲಕ ಅಧಿಕಾರದ ಗದ್ದುಗೆ ಏರಿ ಅಧಿಕಾರೋದನ್ಮಾದದಿಂದ ಹೂಂಕರಿಸುತ್ತದೆ. 24 ರಂದು ಪ್ರಧಾನಿ ಮೋದಿ ಪ್ರೈಮ್ ಟೈಮ್ ನಲ್ಲಿ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿ, 21 ದಿನಗಳ ಲಾಕ್ ಡೌನ್ ಷೋಷಿಸುತ್ತಾರೆ. ಜನತಾ ಕರ್ಫ್ಯೂ ಮತ್ತು ಚಪ್ಪಾಳೆ ತಟ್ಟಲು ನಾಲ್ಕು ದಿನಗಳ ಸಿದ್ದತೆಗೆ ಅವಕಾಶ ನೀಡಿದ್ದ ಪ್ರಧಾನಿ ಏಕಾಏಕಿ 21 ದಿನಗಳ ಲಾಕ್ ಡೌನ್ ಘೋಷಿಸುತ್ತಾರೆ. ಈ ನಡುವೆ ರಾಜ್ಯಗಳ ಮುಖ್ಯಮಂತ್ರಿಗಳ ಅಥವಾ ಮುಖ್ಯಕಾರ್ಯದರ್ಶಿಗಳ ಸಭೆಯನ್ನು ನೇರವಾಗಲೀ, ವಿಡಿಯೋಕಾನ್ಫರೆನ್ಸ್ ಮೂಲಕವಾಗಲೀ ನಡೆಸುವುದಿಲ್ಲ. ನಗರದಲ್ಲಿ ನೆಲೆಸಿರುವ ವಲಸಿಗರ ಪಾಡೇನು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಲಾಕ್ ಡೌನ್ ಆದ ಮೇಲೆ ದಿಕ್ಕೆಟ್ಟ ಜನರ ಊಟ ವಸತಿಯ ಬಗ್ಗೆ ವ್ಯವಸ್ಥೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಲಾಕ್ ಡೌನ್ ಘೋಷಿಸಿ ಬಿಡುತ್ತಾರೆ.

ಮಧ್ಯಪ್ರದೇಶದಲ್ಲಿ ಅಧಿಕಾರ ಗ್ರಹಿಸುವ ಸಲುವಾಗಿ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಘೋಷಣೆಯನ್ನು ಮುಂದಕ್ಕೆ ಹಾಕುವ ಪ್ರಧಾನಿ ನರೇಂದ್ರ ಮೋದಿ ಮತ್ತವರ ಪಕ್ಷವು ನೈತಿಕ ರಾಜಕಾರಣವನ್ನು ಮಾಡಿದ್ದೇ ಆಗಿದ್ದರೆ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು? ಖಂಡಿತವಾಗಿ ಕರೋನಾ ಪೀಡಿತರ ಸಂಖ್ಯೆಯನ್ನು ತಗ್ಗಿಸಬಹುದಿತ್ತು. ಜನತಾ ಕರ್ಫ್ಯೂ ಹೇರಿದ್ದ ದಿನದಿಂದಲೇ 21 ದಿನಗಳ ಲಾಕ್ ಡೌನ್ ಘೋಷಿಸಿದ್ದರೆ ಈ ವೇಳೆಗಾಗಲೇ ಕರೋನಾ ವೈರಸ್ ಹರಡುವುದನ್ನು ವ್ಯವಸ್ಥಿತವಾಗಿ ತಡೆಯಲು ಸಾಧ್ಯವಾಗುತ್ತಿತ್ತು. ನಾಲ್ಕು ದಿನಗಳಲ್ಲಿ ದೇಶಕ್ಕೆ ಬಂದ ವಿದೇಶಿಯರಲ್ಲೇ ಬಹುತೇಕ ಕರೋನಾ ವೈರಸ್ ಪತ್ತೆಯಾಗಿದೆ. ದೇಶದ ಆಂತರಿಕ ಭಧ್ರತೆಯ ಹೊಣೆ ಹೊತ್ತಿರುವ ಗೃಹ ಮಂತ್ರಿ ಅಮಿತ್ ಷಾ ಅವರು ಮಧ್ಯಪ್ರದೇಶದಲ್ಲಿ ಆಪರೇಷನ್ ಬಿಜೆಪಿ ಕಾರ್ಯಾಚಾರಣೆಯಲ್ಲಿ ತೊಡಗುವ ಬದಲು, ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶದಿಂದ ಬರುವ ಎಲ್ಲಾ ವಿಮಾನ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಪರಿಶೀಲನೆಗೆ ಒಳಪಡಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದರೆ ಸೋಂಕು ಹರಡುವುದನ್ನು ತಗ್ಗಿಸಬಹುದಿತ್ತು. ಬಿಜೆಪಿ ನೈತಿಕ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದರೆ ಮತ್ತು ನೈತಿಕ ರಾಜಕಾರಣವನ್ನು ಮಾತ್ರ ಮಾಡಿದ್ದರೆ, ಇದೆಲ್ಲವೂ ಸಾಧ್ಯವಾಗುತ್ತಿತ್ತು. ಬಿಜೆಪಿ ನೈತಿಕ ರಾಜಕಾರಣವು ವಾಜಪೇಯಿ ಮತ್ತು ಲಾಲ ಕೃಷ್ಣ ಅಡ್ವಾಣಿ ತಲೆಮಾರಿಗೆ ಕೊನೆಯಾದಂತಿದೆ.

ಹೇಗಾದರೂ ಸೇರಿಯೇ ಅಧಿಕಾರ ಗ್ರಹಿಸಬೇಕೆಂಬ ಉನ್ಮಾದದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯಿಂದಾಗಿ ಇಂದು ದೇಶ ಆರ್ಥಿಕ ಸಂಕಷ್ಟದ ಜತೆಗೆ ಕರೋನಾ ವೈರಸ್ ಸಂಕಷ್ಟವನ್ನೂ ಎದುರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಗೆ ಪ್ರೈಮ್ ಟೈಮ್ ನಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡುವಾಗ ಇರುವ ಉತ್ಸಾಹವು ದೇಶದ ಸಮಸ್ಯೆಯನ್ನು ನಿವಾರಿಸುವಾಗ ಬರುವುದಿಲ್ಲ ಎಂಬುದೇ ಈ ದೇಶದ ಮುಂದಿರುವ ದೊಡ್ಡ ಸಮಸ್ಯೆ! ನೈತಿಕ ರಾಜಕಾರಣ ಮಾಡುವವರು ಮುಂಬರುವ ಆಪತ್ತುಗಳನ್ನು ನಿರೀಕ್ಷಿಸಿ, ಅದಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅಧಿಕಾರ ರಾಜಕಾರಣ ಮಾಡುವವರು, ಮುಂಬರುವ ಆಪತ್ತುಗಳನ್ನು ನಿರೀಕ್ಷಿಸದೇ ಅಧಿಕಾರ ಗ್ರಹಿಸುವಲ್ಲೇ ತಮ್ಮ ಗಮನ ಕೇಂದ್ರೀಕರಿಸುತ್ತಾರೆ. ಹೀಗಾಗಿ ಇಡೀ ದೇಶವೇ ಕರೋನಾ ಸಂಕಷ್ಟದಿಂದ ತತ್ತರಿಸುತ್ತಿರುವ ಹೊತ್ತಿನಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಗ್ರಹಿಸುತ್ತದೆ- ‘ಅಧಿಕಾರಾತುರಾಣಂ ನ ಭಯಾ, ನ ಲಜ್ಜಾ....’!!

ಮಧ್ಯಪ್ರದೇಶ ಗದ್ದುಗೆ ಏರುವ ಬಿಜೆಪಿ ಉಮೇದು ಅದರ ಅಧಿಕಾರದಾಹಕ್ಕೆ ಪ್ರತ್ಯಕ್ಷ ಸಾಕ್ಷಿಯಾದರೆ, ಬಿಜೆಪಿ ನಾಯಕರು ಎಷ್ಟು ಸಂವೇದನಾ ರಹಿತರು ಎಂಬುದಕ್ಕೆ ಇರುವ ನೂರಾರು ಪ್ರಸಹನಗಳ ಪೈಕಿ ಇಲ್ಲಿ ಒಂದೆರಡನ್ನು ಮಾತ್ರ ಉದಾಹರಣೆಯಾಗಿ ಪ್ರಸ್ತಾಪಿಸಬಹುದು.

ಅತ್ಯಂತ ಸಂವೇದನಾಶೀಲ ವ್ಯಕ್ತಿ ಎಂದೇ ಹೆಸರಾಗಿದ್ದ ಪ್ರಕಾಶ್ ಜಾವಡೇಕರ್ ಮೂರು ಪ್ರಮುಖ ಖಾತೆಗಳನ್ನು- (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಮಾಹಿತಿ ಮತ್ತು ಪ್ರಸಾರ, ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು) ಹೊಂದಿದ್ದಾರೆ. ಈ ಹೊತ್ತಿನಲ್ಲಿ ಅವರು ಹೆಚ್ಚು ಕ್ರಿಯಾಶೀಲರಾಗಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಬೇಕು. ಆದರೆ, ಮೂರು ದಶಕಗಳ ಹಿಂದಿನ ‘ರಾಮಾಯಣ’ ಮತ್ತು ‘ಮಹಾಭಾರತ’ವನ್ನು ಮರುಪ್ರಸಾರ ಮಾಡುವ ನಿರ್ಧಾರ ಕೈಗೊಂಡಿದ್ದೇ ದೊಡ್ಡ ಪರಿಹಾರ ಕ್ರಮವೆಂಬಂತೆ ಪ್ರಚಾರ ಮಾಡುತ್ತಿದ್ದಾರೆ.

ಅದೇನೆ ಇರಲಿ, ಅತ್ತ ದೆಹಲಿಯಿಂದ ಲಕ್ಷಾಂತರ ಜನರು ಊಟ ವಸತಿ ಇಲ್ಲದೇ ಉತ್ತರ ಪ್ರದೇಶದತ್ತ ಬರಿಗಾಲಲ್ಲಿ ಪುಟ್ಟಮಕ್ಕಳನ್ನು ಹೆಗಲಿಗೇರಿಸಿಕೊಂಡು ಬಿಸಿಲಿನಲ್ಲಿ ಬಸವಳಿಯುತ್ತಾ ಹೆಜ್ಜೆ ಹಾಕುತ್ತಿರುವ ಚಿತ್ರ- ಸುದ್ದಿಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದರೆ, ಸಂವೇದನಾ ಶೀಲ ಪ್ರಕಾಶ್ ಜಾವಡೆಕರ್, ತಮ್ಮ ಐಷಾರಾಮಿ ಬಂಗಲೆಯಲ್ಲಿ ಐವತ್ತಿಂಚು ಟೀವಿ ಮುಂದೆ ಕುಳಿತಿರುವ ಫೋಟೋವನ್ನನು, ‘ನಾನು ರಾಮಾಯಣ ನೋಡುತ್ತಿದ್ದೇನೆ ನೀವು…..?’ ಎಂಬ ಅಡಿಬರಹ ಹಾಕಿ ಟ್ವೀಟ್ ಮಾಡುತ್ತಾರೆ!

‘ಎಲೆಕ್ಟೊರೊಲ್ ಬಾಂಡ್’ ಮೂಲಕ ದೇಣಿಗೆ ಎತ್ತಿ ಜಗತ್ತಿನ ಅತಿ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹತ್ತು ಊಟದ ಪ್ಯಾಕೆಟ್ ಗಳನ್ನು ಜನರಿಗೆ ವಿತರಿಸುವಂತೆ ಪೋಲಿಸರಿಗೆ ನೀಡಿದ್ದಾಗಿ ಟ್ವೀಟ್ ಮಾಡುತ್ತಾರೆ.

ಇವೆರಡು ಉದಾಹರಣೆಗಳು ಮಾತ್ರ. ಸಂವೇದನೆ ಕಳೆದುಕೊಂಡ ವ್ಯಕ್ತಿ ನಿಧಾನವಾಗಿ ಮಾನವೀಯತೆಯನ್ನು ಕಳೆದುಕೊಳ್ಳುತ್ತಾನೆ. ಮಾನವೀಯ ನೆಲೆಯಲ್ಲಿ ಚಿಂತಿಸುವ ಶಕ್ತಿಯನ್ನು ಉದ್ದೇಶಪೂರ್ವಕವಾಗಿಯೇ ತ್ಯಾಗಮಾಡುತ್ತಾನೆ. ಅಧಿಕಾರ ಮೀರಿ ಏನನ್ನೂ ಚಿಂತಿಸುವ ಗೋಜಿಗೆ ಹೋಗುವುದಿಲ್ಲ.

ಇದು ದೆಹಲಿ ಕತೆಯಾದರೆ, ಅತ್ತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ರಾಮನವಮಿಯನ್ನು ಸಂಭ್ರಮಿಸುತ್ತಾರೆ. ಇತ್ತ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕರೋನಾ ವೈರಸ್ ಪೀಡಿತರ ನೆರವಿಗೆ ದೇಣಿಗೆ ಕೇಳುತ್ತಾರೆ.

ರಾಜಕಾರಣಿಗಳು ನೈತಿಕತೆ ಮರೆತು ಅಧಿಕಾರ ರಾಜಕಾರಣ ಮಾಡ ಹೊರಟರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಈಗ ನಮ್ಮೆದುರಿಗೆ ಇರುವುದು ಅನಾಹುತಗಳ ಆರಂಭದ ಮುನ್ಸೂಚನೆಗಳಷ್ಟೇ!

Click here Support Free Press and Independent Journalism

Pratidhvani
www.pratidhvani.com