ಪತ್ರಕರ್ತ ತೋರಿದ ಬೇಜವಾಬ್ದಾರಿಗೆ ಮಧ್ಯಪ್ರದೇಶದಲ್ಲಿ ಶುರುವಾಗಿದೆ ತಲ್ಲಣ..!!
ರಾಷ್ಟ್ರೀಯ

ಪತ್ರಕರ್ತ ತೋರಿದ ಬೇಜವಾಬ್ದಾರಿಗೆ ಮಧ್ಯಪ್ರದೇಶದಲ್ಲಿ ಶುರುವಾಗಿದೆ ತಲ್ಲಣ..!!

ಫೀಲ್ಡ್‌ ನಲ್ಲಿ ಕೆಲಸ ಮಾಡುವ ಪತ್ರಕರ್ತ ಯಾರೇಇರಲಿ ಇಂತಹ ರೋಗಕ್ಕೆ ತುತ್ತಾದಾಗ ಸಮುದಾಯಕ್ಕೆ ರೋಗ ಬಾಧಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮಾತ್ರವಲ್ಲದೇ ಸದ್ಯ ಇಂತಹದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ನೂತನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮೊನ್ನೆ ಮೊನ್ನೆಯಷ್ಟೇ ಸಿಎಂ ಗಾದಿಯಿಂದ ಕೆಳಗಿಳಿದ ಕಮಲ್‌ನಾಥ್‌ ಗೂ ಕರೋನಾ ಸೋಂಕಿನ ಭೀತಿ ಆವರಿಸಿಕೊಂಡಿದೆ.

ಮೊಹಮ್ಮದ್‌ ಇರ್ಷಾದ್‌

ಕರೋನಾ ವೈರಸ್‌ ಹರಡುವ ಕುರಿತು ಮಾಧ್ಯಮಗಳು ಕೂಡಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅದರಲ್ಲೂ ಇಲೆಕ್ಟ್ರಾನಿಕ್‌ ಮೀಡಿಯಾಗಳಂತೂ ತುಸು ಜಾಸ್ತೀನೆ ಅತಿರಂಜಿತವಾಗಿ ಕರೋನಾ ವೈರಸ್‌ ಸಂಬಂಧ ವರದಿ ಬಿತ್ತರಿಸುತ್ತಿದೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವರದಿಗಾರನೊಬ್ಬ ತೋರಬೇಕಾದ ಸಮಯಪ್ರಜ್ಞೆ ಬಗ್ಗೆ ಇದೀಗ ಬಹುಮುಖ್ಯ ಚರ್ಚೆ ಆರಂಭವಾಗಿದೆ. ಕಾರಣ, ಫೀಲ್ಡ್‌ಗಿಳಿದು ಓಡಾಡುವ ಪತ್ರಕರ್ತ ಅದ್ಯಾವಾಗ ಮೈಮೇಲೆ ಅಪಾಯವನ್ನು ತಂದುಕೊಳ್ಳುತ್ತಾನೆ ಅನ್ನೋದನ್ನು ಹೇಳಲು ಅಸಾಧ್ಯ. ಕರ್ತವ್ಯದ ಒತ್ತಡ ಒಂದೊಮ್ಮೆ ಫೀಲ್ಡ್‌ನಲ್ಲಿರುವ ಪತ್ರಕರ್ತರನ್ನು ಇನ್ನಿಲ್ಲದಂತೆ ಆಟವಾಡಿಸುತ್ತದೆ. ಆವಾಗಲೆಲ್ಲ ಪತ್ರಕರ್ತನೂ ಅತೀ ಜಾಗರೂಕನಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಆಹ್ವಾನಿಸಿಕೊಂಡಂತೆ.

ಅದರಲ್ಲೂ ಸದ್ಯ ದೇಶಕ್ಕೆ ಎದುರಾಗಿರುವ ಮಹಾಮಾರಿ ಕರೋನಾ ವೈರಸ್‌ ನಿಂದಾಗಿ ದೇಶವೇ ಲಾಕ್‌ಡೌನ್‌ ಗೆ ಒಳಗಾಗಿದೆ. ಅದರಲ್ಲೂ ಈ ಕರೋನಾ ಸೋಂಕು ಸಾಂಕ್ರಾಮಿಕ ರೋಗವಾಗಿದ್ದು ಅತೀ ಸೂಕ್ಷ್ಮ ವೈರಾಣು ನಮಗರಿವಿಲ್ಲದಂತೆಯೇ ನಮ್ಮ ಜೊತೆ ಕೂಡಿಕೊಂಡು ನಮ್ಮ ಬಲಿ ಪಡೆಯಲು ಹವಣಿಸುತ್ತಿದೆ. ಇಂತಹ ರಕ್ತದಾಹಿ ವೈರಸ್‌ ಮುಂದೆ ಈಜಿ ಜಯಿಸುವ ಕೆಲಸವನ್ನು ವರದಿಗಾರ, ಫೋಟೋಗ್ರಾಫರ್ಸ್‌, ವೀಡಿಯೋ ಜರ್ನಲಿಸ್ಟ್‌ಗಳು ಮಾಡಬೇಕಿದೆ. ಅದರಲ್ಲೂ ಫೀಲ್ಡ್‌ ನಲ್ಲಿ ಕೆಲಸ ಮಾಡುವ ಪತ್ರಕರ್ತ ಯಾರೇ ಇರಲಿ ಇಂತಹ ರೋಗಕ್ಕೆ ತುತ್ತಾದಾಗ ಸಮುದಾಯಕ್ಕೆ ರೋಗ ಬಾಧಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮಾತ್ರವಲ್ಲದೇ ಸದ್ಯ ಇಂತಹದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ನೂತನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮೊನ್ನೆ ಮೊನ್ನೆಯಷ್ಟೇ ಸಿಎಂ ಗಾದಿಯಿಂದ ಕೆಳಗಿಳಿದ ಕಮಲ್‌ನಾಥ್‌ ಗೂ ಕರೋನಾ ಸೋಂಕಿನ ಭೀತಿ ಆವರಿಸಿಕೊಂಡಿದೆ. ಅಷ್ಟಕ್ಕೂ ಇಲ್ಲಿ ಪತ್ರಕರ್ತ ತೋರಿದ ನಿರ್ಲಕ್ಷ್ಯತನವೇ ಇಷ್ಟೆಲ್ಲಾ ಆತಂಕಕ್ಕೆ ಕಾರಣ ಅನ್ನೋದನ್ನು ಖುದ್ದು ಮಧ್ಯಪ್ರದೇಶದ ಪತ್ರಕರ್ತ ಸಂಘ ಕೂಡಾ ಆರೋಪಿಸಿದೆ.

ಓರ್ವ ಪತ್ರಕರ್ತನ ಎಡವಟ್ಟು, ಎಲ್ಲರಿಗೂ ತಂದಿಟ್ಟ ಆಪತ್ತು..:

ಅಂದಹಾಗೆ ಭೋಪಾಲ್‌ ನ ʼಕ್ಷಿತಿಜ್‌ʼ ಹೆಸರಿನ ಪತ್ರಿಕೆಯಲ್ಲಿ ದುಡಿಯುತ್ತಿರುವ ಹಿರಿಯ ಪತ್ರಕರ್ತನೊಬ್ಬ ಮಾಡಿದ ಎಡವಟ್ಟು ಇಂದು ರಾಜ್ಯದ ಆಡಳಿತ ಯಂತ್ರಕ್ಕೂ ಅಪಾಯದ ಮುನ್ಸೂಚನೆ ನೀಡಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ಈ ಪತ್ರಕರ್ತನ ಮಗಳು ಲಂಡನ್‌ನಲ್ಲಿ ಎಲ್‌ಎಲ್‌ಬಿ ಕಲಿಯುತ್ತಿದ್ದು, ಅತ್ತ ಕರೋನಾ ವೈರಸ್‌ ದಾಂಗುಡಿಯಿಡುತ್ತಿದ್ದಂತೆ, ಪತ್ರಕರ್ತನ ಮಗಳು ತವರಿಗೆ ವಾಪಾಸ್‌ ಆಗಿದ್ದಾಳೆ. ಮಾರ್ಚ್‌ 15 ರಂದು ದೆಹಲಿ ವಿಮಾನ ನಿಲ್ದಾಣ ತಲುಪಿದ್ದ ಈಕೆ ಮಾರ್ಚ್‌ 17 ರಂದು ತನ್ನ ಸಹೋದರನ ಜೊತೆ ಭೋಪಾಲ್‌ ನಲ್ಲಿರುವ ಆಕೆಯ ಮನೆಗೆ ಬಂದಿದ್ದಳು. ಅಲ್ಲದೇ ದೆಹಲಿಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಆಕೆಗೆ ಸ್ವಯಂ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದರೆ ಮನೆಗೆ ಬಂದವಳೇ ಕ್ವಾರೆಂಟೈನ್‌ ನಲ್ಲಿ ಇದ್ದರೂ, ಆಕೆಯ ತಂದೆ ಅರ್ಥಾತ್‌ ಇದೇ ಪತ್ರಕರ್ತ ತನ್ನ ಮಗಳು ಕ್ವಾರೆಂಟೈನ್‌ನಲ್ಲಿ ಇದ್ದಾಳೆ ಎನ್ನುವ ವಿಚಾರ ಮುಚ್ಚಿಟ್ಟು ವರದಿಗಾರಿಕೆಗೆ ತೆರಳುತ್ತಿದ್ದರು. ದುರಂತ ಅಂದ್ರೆ, ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಉದ್ದೇಶದಿಂದ ಮಾರ್ಚ್‌ 20 ರಂದು ನಡೆದ ಕಮಲ್‌ ನಾಥ್‌ ಸುದ್ದಿಗೋಷ್ಟಿಗೂ ಈ ಪತ್ರಕರ್ತ ಹಾಜರಾಗಿದ್ದ. ಅಲ್ಲದೇ ನೂರಾರು ಸಂಖ್ಯೆಯಲ್ಲಿದ್ದ ಪತ್ರಕರ್ತರು, ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಕೈ ಕುಲುಕಿದ್ದಾನೆ. ಈ ಸಂದರ್ಭ ಸಣ್ಣಗಿನ ಜ್ವರದಿಂದ ಬಳಲುತ್ತಿದ್ದ ತಂದೆ-ಮಗಳು ಇಬ್ಬರೂ ಅದೇ ದಿನ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ದಿನಗಳ ಅಂತರದಲ್ಲಿ ಇವರಿಬ್ಬರಿಗೂ ಕೋವಿಡ್-19‌ ರೋಗ ದೃಢವಾಗಿದ್ದು, ಇವರಿಬ್ಬರನ್ನೂ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೋಪಾಲ್‌ ಪತ್ರಕರ್ತರೆಲ್ಲರಿಗೂ ʼಕ್ವಾರೆಂಟೈನ್‌ʼ :

ಓರ್ವ ಪತ್ರಕರ್ತ ತೋರಿದ ಬೇಜವಾಬ್ದಾರಿತನದಿಂದಾಗಿ ಇಂದು ಭೋಪಾಲ್‌ ನಗರದಲ್ಲಿ ನೆಲೆಸಿರುವ ನೂರಾರು ಸಂಖ್ಯೆಯ ಪತ್ರಕರ್ತರು ಕುಟುಂಬದಿಂದ ಬೇರ್ಪಟ್ಟು ಪ್ರತ್ಯೇಕವಾಸ ಅನುಭವಿಸಬೇಕಾಗಿ ಬಂದಿದೆ. ಅಲ್ಲದೇ ಇದೇ ಪತ್ರಕರ್ತ ಅತ್ತ ಶಿವರಾಜ್‌ ಸಿಂಗ್‌ ಚೌಹಾಣ್‌ ಸುದ್ದಿಗೋಷ್ಟಿಯಲ್ಲಿಯೂ ಪಾಲ್ಗೊಂಡಿದ್ದರು. ಒಂದೆರಡು ಬಾರಿ ವಿಧಾನ ಸಭೆಗೂ ಭೇಟಿ ನೀಡಿದ್ದರು. ಪರಿಣಾಮ ವಿಧಾನಸಭೆಯ ಸಿಬ್ಬಂದಿಗಳಿಗೂ ʼಕ್ವಾರೆಂಟೈನ್ʼ ಅನುಭವಿಸಬೇಕಾದ ಸ್ಥಿತಿ. ಜೊತೆಗೆ ಈ ಪತ್ರಕರ್ತನ ಜೊತೆ ಮಾತಾಡಿದ, ಕೈ ಕುಲುಕಿದ ಕೈ, ಕಮಲ ನಾಯಕರಿಗೂ ಆತಂಕ ಶುರುವಾಗಿದೆ. ಪುಣ್ಯಕ್ಕೆ ಮಾರ್ಚ್‌ 20 ರಂದು ಮಧ್ಯಾಹ್ನವೇ ವಿಶ್ವಾಸ ಮತ ಯಾಚನೆ ಮಾಡದೇ ಕಮಲ್‌ನಾಥ್‌ ಅಧಿಕಾರ ತ್ಯಜಿಸಿದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೈ, ಕಮಲ ನಾಯಕರ, ಕಾರ್ಯಕರ್ತರ ಭೇಟಿ ತಪ್ಪಿದಂತಾಗಿದೆ.

ಪತ್ರಕರ್ತ ತೋರಿದ ಬೇಜವಾಬ್ದಾರಿಗೆ ಮಧ್ಯಪ್ರದೇಶದಲ್ಲಿ ಶುರುವಾಗಿದೆ ತಲ್ಲಣ..!!

ಇನ್ನು ಕರ್ನಾಟಕದ ಗುಲ್ಬರ್ಗಾದಲ್ಲಿ ಇಂತಹದ್ದೇ ಪರಿಸ್ಥಿತಿಯಲ್ಲಿ ಹೋಮ್‌ ಕ್ವಾರೆಂಟೈನ್‌ ನಲ್ಲಿ ಮೂವರು ಪತ್ರಕರ್ತರಿದ್ದಾರೆ. ದೇಶದಲ್ಲೇ ಮೊದಲ ಬಲಿಯಾದ ಕಲಬುರಗಿಯ ವೃದ್ಧನ ಮಗನನ್ನು ಮೂವರು ಪತ್ರಕರ್ತರು ಸಂದರ್ಶನ ನಡೆಸಿದ್ದರು. ಆದರೆ ಆ ನಂತರವಷ್ಟೇ ಆತನಿಗೂ ವೈರಸ್‌ ಅಟ್ಯಾಕ್‌ ಆಗಿರುವ ವಿಚಾರ ಗೊತ್ತಾಗಿದೆ. ಪರಿಣಾಮ ಸಂದರ್ಶನ ಮಾಡಿದ್ದ ಮೂವರು ಪತ್ರಕರ್ತರನ್ನು ಜಿಲ್ಲಾಧಿಕಾರಿಗಳು ಪ್ರತ್ಯೇಕವಾಸದಲ್ಲಿ ಇರುವಂತೆ ಸೂಚಿಸಿದ್ದರು. ಇದೀಗ ಮಧ್ಯಪ್ರದೇಶದಲ್ಲೂ ಪತ್ರಕರ್ತ ತೋರಿದ ಬೇಜವಾಬ್ದಾರಿತನ ಅನ್ನೋದು ಇಡೀ ಭೋಪಾಲ್‌ ಪತ್ರಕರ್ತರ ಕೆಲಸದ ಮೇಲೆ ಅಡ್ಡ ಪರಿಣಾಮ ಬಿದ್ದಿದೆ.

ಸದ್ಯ ಮಧ್ಯಪ್ರದೇಶದಲ್ಲಿ 16 ಮಂದಿ ಕೋವಿಡ್-19‌ ರೋಗಕ್ಕೆ ತುತ್ತಾಗಿದ್ದಾರೆ. ದೇಶದಲ್ಲಿ ಕೋವಿಡ್-19‌ ಒಳಗಾದವರ ಸಂಖ್ಯೆ ಸಪ್ತ ಶತಕಗಳತ್ತ ಮುಖಮಾಡಿ ನಿಂತಿದೆ. ಇಂತಹ ಸ್ಥಿತಿಯಲ್ಲಿ ಫೀಲ್ಡ್‌ನಲ್ಲಿರುವ ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕಿದೆ. ಸಾಧ್ಯವಾದರೆ ವೈದ್ಯರು ಪಾಲಿಸುವ PPE (PERSONAL PROTECTIVE EQUIPMENT) ಸುರಕ್ಷತಾ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ. ತನ್ನಿಂದಾಗಿ ಇಡೀ ಪತ್ರಕರ್ತ ಸಮುದಾಯ ಮಾತ್ರವಲ್ಲದೇ ಆಡಳಿತ ವರ್ಗಕ್ಕೂ ಸಾಂಕ್ರಾಮಿಕ ರೋಗದ ಬಿಸಿ ತಟ್ಟಬಹುದು ಎನ್ನುವ ಸಾಮಾನ್ಯ ಜ್ಞಾನದ ಬಗ್ಗೆಯೂ ಎಚ್ಚರಗೊಳ್ಳಬೇಕಿದೆ.

Click here Support Free Press and Independent Journalism

Pratidhvani
www.pratidhvani.com