ಕರೋನಾ ಕತ್ತಲಲ್ಲಿ ಗದ್ದುಗೆ ಏರಿದ ಶಿವರಾಜ್‌ ಸಿಂಗ್‌ ಚೌಹಾಣ್‌
ರಾಷ್ಟ್ರೀಯ

ಕರೋನಾ ಕತ್ತಲಲ್ಲಿ ಗದ್ದುಗೆ ಏರಿದ ಶಿವರಾಜ್‌ ಸಿಂಗ್‌ ಚೌಹಾಣ್‌

ರಾಹುಲ್‌ ಗಾಂಧಿ ಆಪ್ತನಾಗಿದ್ದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಕಟ್ಟಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ ಸಲ್ಲಿಸಿದ್ದರು. ಅಷ್ಟರಲ್ಲಿ ಕರೋನಾ ಆತಂಕ ಹೆಮ್ಮರವಾಗಿತ್ತು. ಸುದ್ದಿವಾಹಿನಿಗಳೆಲ್ಲಾ ಕರೋನಾ ಅಂತ ನಿರಂತರವಾಗಿ ಸುದ್ದಿ ಮಾಡಲಾರಂಭಿಸಿದವು. ಶಾಸಕರ ರಾಜೀನಾಮೆ ಸಂದರ್ಭದಲ್ಲಿ ದೇಶಾದ್ಯಂತ 50 ಪ್ರಕರಣಗಳು ಕಂಡುಬಂದರೆ ಬಹುಮತ ಸಾಬೀತು ಮಾಡಿ ಚೌಹಾಣ್‌ ಸಿಎಂ ಆದಾಗ ಇದರ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿತ್ತು.

ಉದಯ ಸಾಗರ

ಉದಯ ಸಾಗರ

ಇಡೀ ವಿಶ್ವವೇ ಕರೋನಾದ ಕಪಿಮುಷ್ಟಿಯಲ್ಲಿ ಬಂಧಿಯಗಿದೆ, ಭಾರತಕ್ಕೆ ಕರೋನ ಛಾಯೆ ಆವರಿಸಿದೆ. ಆದರೆ ಬಿಜೆಪಿ ಮಾತ್ರ ಮಧ್ಯ ಪ್ರದೇಶದಲ್ಲಿ ಆಪರೇಷನ್‌ ಕಮಲವನ್ನ ಸದ್ದಿಲ್ಲದೇ ಮುಗಿಸಿ ಗದ್ದುಗೆ ಏರಿತು. ಪ್ರಧಾನಿ ಸೆಂಟ್ರಲ್‌ ದೆಹಲಿಯ ಪುನರ್‌ನಿರ್ಮಾಣಕ್ಕೆ ಆದೇಶ ಹೊರಡಿಸಿದರು. ಶಾಹೀನ್‌ ಭಾಗ್‌ನಲ್ಲಿನ ಎನ್‌ಆರ್‌ಸಿ, ಸಿಎಎ ಹೋರಾಟದ ಟೆಂಟ್‌ ದಿಕ್ಕಾಪಾಲಾಯ್ತು. ಇಪ್ಪತ್ತೊಂದು ದಿನಗಳು ಮನೆಬಿಟ್ಟು ಹೊರಬರಬೇಡಿ ಎಂದು ಪ್ರಧಾನಿ ಜನರಲ್ಲಿ ಮನವಿಗೆ ಮುಂದಾದರೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ರಾಮನ ಮಂದಿರ ನಿರ್ಮಾಣಕ್ಕೆ ಪೂರಕವಾಗಿ ಹವನ ಹೋಮ ಮಾಡಿ ಅದ್ಧೂರಿ ಪೂಜೆ ನಡೆಸಿದರು. ಸಾಲದು ಎಂಬಂತೆ ಕರೋನಾಕ್ಕೆ ಸೆಟೆದು ನಿಲ್ಲುವಂತೆ ಫೋಟೋಗಳನ್ನ ಟ್ವೀಟ್‌ ಮಾಡಿದರು.

ದೇಶ ಕರೋನಾಕ್ಕೆ ತುತ್ತಾಯ್ತು ಎಂಬ ಮೆಘಾ ಸುದ್ದಿಸ್ಫೋಟಗಳಿಗಿಂತಾ ಮೊದಲು ರಾಷ್ಟ್ರೀಯ ಚಾನೆಲ್‌ಗಳು ಮಧ್ಯಪ್ರದೇಶದ ರಾಜಕೀಯ ಪ್ರಹಸನಗಳ ಕಡೆ ವಾಲಿಕೊಂಡಿದ್ದವು. ಮೊದಲ ವಾರ ನಾಲ್ಕು ಕಾಂಗ್ರೆಸ್‌ ಶಾಸಕರನ್ನ ಕರ್ನಾಟಕದಲ್ಲಿ ತಂದಿಡಲಾಗಿದೆ. ಬಿಜೆಪಿ ಸರ್ಕಾರದ ಒಂದಿಬ್ಬರು ಮಂತ್ರಿಗಳ ಸುಪರ್ದಿಯಲ್ಲಿ ಇವರೆಲ್ಲಾ ಇದ್ದಾರೆ ಎಂದು ಸುದ್ದಿಯಾಗುತ್ತಿತ್ತು. ಇದ್ದಕ್ಕಿದ್ದಂತೆ ೨೨ ಜನ ಶಾಸಕರು ಭೋಪಾಲ್‌ನಿಂದ ಕಾಣೆಯಾಗಿಬಿಟ್ಟಿದ್ದರು. ಅದರ ಬೆನ್ನಲ್ಲೇ ದಶಕದ ಕಾಲ ರಾಹುಲ್‌ ಗಾಂಧಿ ಆಪ್ತನಾಗಿದ್ದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಕಟ್ಟಿದ್ದ ಅರಸೊತ್ತಿಗೆಯ ಜ್ಯೋತಿರಾಧಿತ್ಯ ಸಿಂಧಿಯಾ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾರನ್ನ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ನಂತರ ಹೈಡ್ರಾಮ ಶುರುವಾಯ್ತು. ಅಷ್ಟರಲ್ಲಿ ಕರೋನಾ ಆತಂಕ ಹೆಮ್ಮರವಾಗಿತ್ತು. ಸುದ್ದಿವಾಹಿನಿಗಳೆಲ್ಲಾ ಕರೋನಾ ಕರೋನಾ ಅಂತ ನಿರಂತರವಾಗಿ ಬ್ರೇಕಿಂಗ್‌ ನ್ಯೂಸ್‌ ಪ್ರಸಾರ ಮಾಡಲಾರಂಭಿಸಿದವು.

ಶಾಸಕರ ರಾಜೀನಾಮೆ ಸಂದರ್ಭದಲ್ಲಿ ದೇಶಾದ್ಯಂತ 50 ಪ್ರಕರಣಗಳು ಕಂಡುಬಂದರೆ ಬಹುಮತ ಸಾಬೀತು ಮಾಡಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸಿಎಂ ಆದಾಗ ಇದರ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿತ್ತು. ಇಡೀ ದೇಶವನ್ನೇ ಲಾಕ್‌ ಮಾಡಿದ್ದರಿಂದ ಕೆಲವರಿಗೆ ಲಾಭವಾಯ್ತು. ಎನ್‌ಆರ್‌ಸಿ, ಎನ್‌ಸಿಆರ್‌, ಸಿಎಎ ವಿರೋಧಿಸಿ ಡಿಸೆಂಬರ್‌ 11ರಿಂದ ನಡೆಯುತ್ತಿದ್ದ ಶಾಹೀನ್‌ಭಾಗ್‌ ಸತ್ಯಾಗ್ರಹ ಕರೋನಾ ಹಿನ್ನೆಲೆಯಲ್ಲಿ ಬಂದ್‌ ಆಗಿದೆ. ಇಷ್ಟು ದೀರ್ಘ ಕಾಲ ಸತತವಾಗಿ ಗಟ್ಟಿ ಕೂತಿದ್ದವರು ಬೆರಳೆಣಿಕೆಯಷ್ಟು. ಆಗಲೇ ಸಾಕಷ್ಟು ಪೆಟ್ಟು ತಿಂದಿದ್ದ ಹೋರಾಟ ವಿಧಿಯಿಲ್ಲದೇ ಸಂಪೂರ್ಣ ತೆರವಾಯ್ತು. ಶಾಹೀನ್‌ ಭಾಗ್‌ ಹಾಗೂ ಜಾಮೀಯಾ ವಿಶ್ವವಿದ್ಯಾಲಯದ ಗೋಡೆಗಳ ಮೇಲಿನ ಹೋರಾಟದ ಬರಹಗಳ ಮೇಲೆ ಬಿಳಿ ಪೇಂಟ್‌ ಬಳಿಯಲಾತ್ತು. ಬಿಜೆಪಿ ಸಾಮಾಜಿಕ ಜಾಲತಾಣಗಳ ನಿರ್ವಾಹಕ ಅಮಿತ್‌ ಮಾಳವೀಯ ಎಷ್ಟು ಖುಷಿಯಾಗಿದ್ದರು ಎಂದರೆ. ಟ್ವೀಟ್‌ ಮಾಡಿ ಬುದ್ದಿಜೀವಿಗಳು, ಕೆಲವು ಮಾಧ್ಯಮಗಳ ಬೆಂಬಲದಿಂದ ಅರಾಜಕತೆ ಹಾಗೂ ಅಶಾಂತಿ ಸೃಷ್ಟಿಯಾಗಿತ್ತು. ಕೊನೆಗೂ ಮುಸ್ಲಿಂ ವಿರೋಧ ಅಂತ್ಯವಾಯ್ತು ಎಂದು ಬರೆದುಕೊಂಡರು.

ರಾಮಮಂದಿರ ನಿರ್ಮಾಣ ಹಾಗೂ ಎನ್‌ಆರ್‌ಸಿ ಬಿಜೆಪಿಯ ಎರಡು ಪ್ರಬಲ ಚುನಾವಣಾ ಅಸ್ತ್ರಗಳು. ಅವುಗಳನ್ನ ಪ್ರಚುರಪಡಿಸದೇ ಇದ್ದರೆ ಆಗುತ್ತದೆಯೇ..? ಖಂಡಿತಾ ಇಲ್ಲ. ಆದರೆ ಇದರ ಮಧ್ಯೆ ಕರೋನಾ ಬಂದಿದೆ. ಪ್ರಧಾನಿ ಮೋದಿ ಜನರನ್ನುದ್ದೇಶಿಸಿ ಮಾತನಾಡಿ ಇಪ್ಪತ್ತೊಂದು ದಿನ ಮನೆಯಲ್ಲಿದ್ದು ಬಿಡಿ ಎಂದು ಮನವಿ ಮಾಡಿದರು. ಮರು ದಿನ ಅಂದರೆ ಇಂದು ಉತ್ತರ ಪ್ರದೇಶದ ಸಿಎಂ ಟ್ವಿಟ್ಟರ್‌ ಖಾತೆಯಲ್ಲಿ ಸಾಮೂಹಿಕ ಪೂಜೆಯ ಫೋಟೋಗಳು ರಾರಾಜಿಸುತ್ತಿವೆ. ಸಿಎಂ ಆದಿತ್ಯಾನಾಥ್‌ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂರ್ವಭಾವಿ ಪೂಜಾಕೈಂಕರ್ಯ ಮುಗಿಸಿದ್ದಾರೆ. ಆ ಫೋಟೊಗಳನ್ನ ಶೇರ್‌ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವೇ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ನಿಷೇಧ ಹೇರಿದೆ. ಆದರೆ ಆದಿತ್ಯಾನಾಥ್‌ ಸರ್ಕಾರಕ್ಕೆ ಇದ್ಯಾವುದರ ಪರಿವೆಯೇ ಇಲ್ಲ ಆದರೂ ನಾವು ಜನರಿಂದ ಕರೋನಾ ನಿರ್ಲಕ್ಷ್ಯ ಎಂದು ಓಡಾಡುತ್ತೇವೆ. ರಾಮಮಂದಿರ ನಿರ್ಮಾಣ ಕಾರ್ಯದ ವೈಭವವನ್ನ ಕರೋನಾ ಮರೆಯಲ್ಲಿ ಕೇಂದ್ರ ಸರ್ಕಾರ ಮರೆಮಾಚುವುದಿಲ್ಲ. ಆದರೂ ಸಿಎಂ ಆದಿತ್ಯಾನಾಥ್‌ಗೆ ಯಾಕಿಷ್ಟು ಆತುರವೋ ಗೊತ್ತಿಲ್ಲ.

ಇವೆಲ್ಲದರ ಮಧ್ಯೆ ದೆಹಲಿ ಪುನರ್‌ನಿರ್ಮಾಣ ಕೆಲಸಕ್ಕೆ ಪ್ರಧಾನಿ ಮೋದಿ ಪಣತೊಟ್ಟಿದ್ದಾರೆ. ಸುಮಾರು ಇಪ್ಪತ್ತು ಸಾವಿರ ಕೋಟಿ ವೆಚ್ಚದಲ್ಲಿ ಕೇಂದ್ರ ಮಂತ್ರಿಗಳು ಹಾಗೂ ಸಂಸದರು ವಾಸವಿರುವ ಸೆಂಟ್ರಲ್‌ ದೆಹಲಿಯ ಅಭಿವೃದ್ಧಿಗೆ ಗೆಜೆಟ್‌ ನೋಟಿಫಿಕೇಷನ್‌ ಆಗಿದೆ. ಲಾಕ್‌ಡೌನ್‌ ಹಾಗೂ ಆರ್ಥಿಕ ಹಿಂಜರಿತದಿಂದ ಆಗುವ ಪರಿಣಾಮಗಳ ಅರಿವಿದ್ದರೂ ಇಂತಹದೊಂದು ನಿರ್ಧಾರ ಟೀಕೆಗಳಿಗೆ ಗುರಿಯಾಗಿದೆ. ಇಪ್ಪತ್ತೊಂದು ದಿನಗಳ ಬಂಧನದಲ್ಲಿ ಜನರಿಗಾಗುವ ಸಮಸ್ಯೆಗಳನ್ನ ಹಾಗೂ ಅವುಗಳಿಗೆ ಬೇಕಿರುವ ಧನವಿನಿಯೋಗದ ಬಗ್ಗೆ ಪ್ರಧಾನಿಗಳು ಚಿಂತಿಸಬೇಕಿದೆ. ಈ ಬಂಧನದ ದಿನಗಳ ನಡುವೆ ಜನರ ಜೀವನ ಕಟ್ಟಿಕೊಡುವ ಘೋಷಣೆಗಳೇನಾದರೂ ಮಾಡುತ್ತಾರಾ ನೋಡಬೇಕಿದೆ.

Click here Support Free Press and Independent Journalism

Pratidhvani
www.pratidhvani.com