ಕರೋನಾ ಸೋಂಕು: ನಿಜಕ್ಕೂ ನಾವು ಯಾವ ಹಂತದಲ್ಲಿದ್ದೇವೆ?
ರಾಷ್ಟ್ರೀಯ

ಕರೋನಾ ಸೋಂಕು: ನಿಜಕ್ಕೂ ನಾವು ಯಾವ ಹಂತದಲ್ಲಿದ್ದೇವೆ?

ದೇಶದಲ್ಲಿ ಸೋಂಕಿತರ ಪ್ರಮಾಣದಲ್ಲಿ ದಿಢೀರ್ ಏರಿಕೆ, ಸರ್ಕಾರದ ಬಿಗಿ ಕ್ರಮಗಳ ಹಿನ್ನೆಲೆಯಲ್ಲಿ ಕರೋನಾ ವೈರಾಣು ಸೋಂಕು ಸದ್ಯ ತಲುಪಿರುವ ಹಂತದ ಬಗ್ಗೆ ಸಾಕಷ್ಟು ಕುತೂಹಲದ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಪ್ರಮುಖ ಸೋಂಕು ರೋಗ ತಜ್ಞ ಡಾ. ರಮಣನ್ ಲಕ್ಷ್ಮೀನಾರಾಯಣನ್ ಅವರು ಹೇಳಿದ್ದೇನು? ವಿವರ ಇಲ್ಲಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ದೇಶದ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆಘಾತಕಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮೃತರು ಮತ್ತು ಗುಣಮುಖರಾದವರು ಸೇರಿದಂತೆ ಒಟ್ಟು ಈವರೆಗೆ ಸೋಂಕಿತರಾದವರ ಸಂಖ್ಯೆ 500ರ ಗಟಿ ದಾಟಿದೆ. ಕೇವಲ ಒಂಭತ್ತು ದಿನದಲ್ಲಿ ದೇಶದಲ್ಲಿ ಸೋಂಕಿತರ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಈ ನಡುವೆ, ಜಾಗತಿಕವಾಗಿ ಚೀನಾದ ಬಳಿಕ ಇಟಲಿ ಮತ್ತು ಸ್ಪೇನ್ ರೋಗದ ಹಾಟ್ ಸ್ಪಾಟ್ ಆಗಿ ಬದಲಾಗಿವೆ. ಇಟಲಿಯಲ್ಲಂತೂ ಸೋಂಕು ನಿಯಂತ್ರಣ ತಮ್ಮಿಂದ ಸಾಧ್ಯವಿಲ್ಲ ಎಂದು ಸರ್ಕಾರವೇ ಕೈಚೆಲ್ಲಿಬಿಟ್ಟಿದೆ.

ಆ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಸೋಂಕಿನ ಭೀಕರತೆಯ ಬಗ್ಗೆ ವ್ಯಾಪಕ ಚರ್ಚೆಗಳು, ಆತಂಕದ ಮಾತುಗಳು ಕೇಳಿಬರತೊಡಗಿವೆ. ಈ ನಡುವೆ ಬಹುತೇಕ ಇಡೀ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಹಲವು ನಗರ ಮತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ಕೂಡ ಹೇರಲಾಗಿದೆ. ಎಲ್ಲಾ ಬಗೆಯ ಸಾರ್ವಜನಿಕ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಗತ್ಯವಸ್ತು ಮತ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಮುಂಗಟ್ಟು, ಕಚೇರಿಗಳನ್ನು ಮುಚ್ಚಲಾಗಿದೆ. ಹಲವು ರಾಜ್ಯ ಮತ್ತು ಜಿಲ್ಲೆಗಳಲ್ಲಿ ಅಂತರ ರಾಜ್ಯ, ಅಂತರ ಜಿಲ್ಲಾ ಸಂಚಾರ ನಿರ್ಬಂಧಿಸಲಾಗಿದೆ.

ಜೊತೆಗೆ, ಕರೋನಾ ಹಿನ್ನೆಲೆಯಲ್ಲಿ ಕಳೆದ ವಾರ ಜನತಾ ಕರ್ಫ್ಯೂ ಗೆ ಕರೆನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಮಂಗಳವಾರ ಮತ್ತೊಮ್ಮೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವುದಾಗಿ ಹೇಳಿದ್ದಾರೆ. ಈ ಬಾರಿ ರೋಗ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಅಥವಾ ಸಂಪೂರ್ಣ ತುರ್ತುಪರಿಸ್ಥಿತಿಯಂತಹ ಬಿಗಿ ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ದೇಶದಲ್ಲಿ ಸೋಂಕಿತರ ಪ್ರಮಾಣದಲ್ಲಿ ದಿಢೀರ್ ಏರಿಕೆ, ಸರ್ಕಾರದ ಬಿಗಿ ಕ್ರಮಗಳ ಹಿನ್ನೆಲೆಯಲ್ಲಿ ಕರೋನಾ ವೈರಾಣು ಸೋಂಕು ಸದ್ಯ ತಲುಪಿರುವ ಹಂತದ ಬಗ್ಗೆ ಸಾಕಷ್ಟು ಕುತೂಹಲದ ಪ್ರಶ್ನೆಗಳು ಕೇಳಿಬರುತ್ತಿವೆ. ಒಂದು ಕಡೆ ಸರ್ಕಾರಿ ಸ್ವಾಮ್ಯದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್) ಮತ್ತು ಭಾರತ ಸರ್ಕಾರ ಕರೋನಾ ದೇಶದಲ್ಲಿ ಮೂರನೇ ಹಂತಕ್ಕೆ ಇನ್ನೂ ತಲುಪಿಲ್ಲ. ಸದ್ಯದ ಎರಡನೇ ಹಂತದಲ್ಲೇ ಇದ್ದು, ಪರಿಣಾಮಕಾರಿ ಶಟ್ ಡೌನ್ ಮತ್ತು ಸೋಂಕಿತರ ಪ್ರತ್ಯೇಕಿಸುವಿಕೆಯ ಮೂಲಕ ರೋಗ ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ಹೇಳುತ್ತಿವೆ. ಆದರೆ ಮತ್ತೊಂದು ಕಡೆ ಐಸಿಎಂಆರ್ ಸೇರಿದಂತೆ ಸರ್ಕಾರಿ ಸಂಸ್ಥೆಗಳ ಈ ವಾದವನ್ನು ಒಪ್ಪದ ಹಲವು ಆರೋಗ್ಯ ಪರಿಣಿತರು ಮತ್ತು ಕ್ಷೇತ್ರದ ಅಂತಾರಾಷ್ಟ್ರೀಯ ತಜ್ಞರು, ಈಗಾಗಲೇ ದೇಶ ಮೂರನೇ ಹಂತದಲ್ಲಿದ್ದು, ವ್ಯಕ್ತಿಗಳ ನಡುವಿನ ನೇರ ಸಂಪರ್ಕದ ಮೂಲಕ ಸೋಂಕು ಹರಡುವ ಹಂತವನ್ನು ದಾಟಿ, ಸಾಮುದಾಯಿಕ ಸೋಂಕಾಗಿ ಹರಡುವ ಹಂತಕ್ಕೆ ಬಂದಾಗಿದೆ. ಈಗ ನಿಜವಾಗಿಯೂ ಸೋಂಕು ಹರಡುವಿಕೆ ತಡೆಯುವುದು ದೊಡ್ಡ ಸವಾಲು. ಆ ಹಿನ್ನೆಲೆಯಲ್ಲಿಯೇ ಸರ್ಕಾರ ಕರ್ಫ್ಯೂ, ಸಂಪೂರ್ಣ ಸ್ಥಗಿತದಂತಹ ಕ್ರಮಗಳನ್ನು ಜಾರಿಗೊಳಿಸಿದೆ ಎನ್ನುತ್ತಿದ್ದಾರೆ.

ಈ ನಡುವೆ, ವಾಷಿಂಗ್ಟನನ ಸೆಂಟರ್ ಫಾರ್ ಡಿಸೀಸಸ್ ಡೈನಾಮಿಕ್ಸ್, ಎಕಾನಮಿಕ್ಸ್ ಅಂಡ್ ಪಾಲಿಸಿಯ ನಿರ್ದೇಶಕ ಡಾ ರಮಣನ್ ಲಕ್ಷ್ಮೀನಾರಾಯಣನ್ ಅವರು, ಮತ್ತೊಂದು ಆಘಾತಕಾರಿ ಸಂಗತಿಯನ್ನು ಹೇಳಿದ್ದಾರೆ! ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ, ನಿಯಂತ್ರಣ ಕ್ರಮಗಳ ವಿಷಯದಲ್ಲಿ ಪ್ರಮಖ ತಜ್ಞರಲ್ಲಿ ಒಬ್ಬರಾಗಿರುವ ಡಾ ರಮಣನ್, ಭಾರತ ಈಗಾಗಲೇ 3-4 ವಾರಗಳ ಹಿಂದೆಯೇ ಕರೋನಾದ ಮೂರನೇ ಹಂತವನ್ನು ತಲುಪಿದೆ. ದೇಶದಲ್ಲಿ ಈಗಾಗಲೇ ಕರೋನಾ ಸೋಂಕು ಸಮುದಾಯದ ಮಟ್ಟದಲ್ಲಿ ಪ್ರಸರಣವಾಗಿದೆ ಎಂದಿದ್ದಾರೆ.

ದಿ ವೈರ್ ಸುದ್ದಿ ಜಾಲತಾಣಕ್ಕಾಗಿ ಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ನಡೆಸಿದ ವಿಶೇಷ ಸಂದರ್ಶನದಲ್ಲಿ ಡಾ ರಮಣನ್ ಈ ಆಘಾತಕಾರಿ ಸಂಗತಿಯನ್ನು ಪ್ರಸ್ತಾಪಿಸಿದ್ದು, ಭಾರತೀಯ ಐಸಿಎಂಆರ್ ಮತ್ತು ಸರ್ಕಾರ ಸೋಂಕು ಕುರಿತ ಮಾಹಿತಿ ಸಂಗ್ರಹ ಮತ್ತು ಅದರ ನಿಯಂತ್ರಣ ವಿಷಯದಲ್ಲಿ ಎಡವುತ್ತಿದೆ. ಸಮುದಾಯ ಮಟ್ಟದಲ್ಲಿ ವ್ಯಾಪಕ ಪರೀಕ್ಷೆಗಳನ್ನೇ ಮಾಡದೆ ಸೋಂಕು ಇನ್ನೂ ಸಮುದಾಯ ಸೋಂಕಾಗಿ ಬದಲಾಗಿಲ್ಲ. ಇನ್ನೂ ಸೋಂಕಿತ ದೇಶಗಳ ಪ್ರಯಾಣ ಮತ್ತು ಅಂತಹ ಪ್ರಮಾಣ ಮಾಡಿದವರೊಂದಿಗಿನ ನೇರ ಸಂಪರ್ಕಕ್ಕೆ ಬಂದವರಿಗೆ ಮಾತ್ರ ಸೋಂಕು ಹರಡುವ ರೋಗದ ಎರಡನೇ ಹಂತದಲ್ಲಿಯೇ ನಾವಿದ್ದೇವೆ ಎಂದುಕೊಳ್ಳುವುದು ಸರಿಯಲ್ಲ. ವಾಸ್ತವವಾಗಿ ಸಾಮುದಾಯಿಕ ಸೋಂಕು ಪರೀಕ್ಷೆಗಳನ್ನು ವ್ಯಾಪಕ ಪ್ರಮಾಣದಲ್ಲಿ ಮಾಡಿದರೆ ಮಾತ್ರ ರೋಗ ಸಮುದಾಯದ ನಡುವೆ ಎಷ್ಟರಮಟ್ಟಿಗೆ ಹರಡಿದೆ ಎಂಬುದು ತಿಳಿಯಲಿದೆ. ಆದರೆ, ಭಾರತದಲ್ಲಿ ಈವರೆಗೂ ನೇರ ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರು ಹಾಗೂ ರೋಗ ಲಕ್ಷಣ ಕಂಡುಬಂದವರಿಗೆ ಮಾತ್ರ ವೈರಾಣು ಪರೀಕ್ಷೆ ನಡೆಸಲಾಗುತ್ತಿದೆ. ಆ ಪರೀಕ್ಷೆಗಳ ಆಧಾರದ ಮೇಲೆ ಇನ್ನೂ ರೋಗ ಮೂರನೇ ಹಂತಕ್ಕೆ ಹೋಗಿಲ್ಲ ಎನ್ನುವುದು ನಾನು ನಿನ್ನನ್ನು ನೋಡಿಲ್ಲ ಎಂಬ ಕಾರಣಕ್ಕೆ ನೀವು ಅಲ್ಲಿ ಇರಲೇ ಇಲ್ಲ ಎಂದು ಹೇಳಿದಷ್ಟೇ ವಿಚಿತ್ರ ವಾದ ಎಂದೂ ಅವರು ವಿವರಿಸಿದ್ದಾರೆ.

ಒಬ್ಬ ವ್ಯಕ್ತಿ ಯಾವುದೇ ವಿದೇಶ ಪ್ರವಾಸವನ್ನು ಕೈಗೊಳ್ಳದೇ ಇದ್ದರೂ, ಪ್ರವಾಸ ಕೈಗೊಂಡ ವ್ಯಕ್ತಿಗಳ ಸಂಪರ್ಕಕ್ಕೆ ಬರದೇ ಇದ್ದರೂ ಆತನಿಗೆ ಸೋಂಕು ತಗಲುವುದು ಮೂರನೇ ಹಂತ. ಅಂದರೆ ರೋಗ ವ್ಯಕ್ತಿಗಳ ಮಟ್ಟದಿಂದ ಇಡೀ ಜನಸಮುದಾಯದ ಮಟ್ಟಕ್ಕೆ ಹರಡಿದೆ ಎಂದರ್ಥ. ಭಾರತದಂತಹ ಅಧಿಕ ಜನಸಂಖ್ಯೆಯ, ಜನದಟ್ಟಣೆಯ ಸಮಾಜದಲ್ಲಿ ಈ ಹಂತದಲ್ಲಿ ಒಂದು ಸಾಂಕ್ರಾಮಿಕವನ್ನು ನಿಯಂತ್ರಿಸುವುದು ದುಸ್ತರ. ಹಾಗಾಗಿ ಇಂದು ನೂರು ಇದ್ದ ಸೋಂಕಿತರ ಪ್ರಮಾಣ ದಿಢೀರನೇ 500, ಬಳಿಕ ಸಾವಿರ ಹೀಗೆ ಏಕಕಾಲಕ್ಕೆ ಹತ್ತಾರು ಪಟ್ಟು ಹೆಚ್ಚುತ್ತಾ ಹೋಗುತ್ತದೆ. ಅದಕ್ಕೆ ಪೂರಕವಾಗಿ ಸಾವಿನ ಸಂಖ್ಯೆ ಕೂಡ ಏರತೊಡಗುತ್ತದೆ. ಆಗ ಒಂದು ಕಡೆ ಸೋಂಕು ಹರಡುವಿಕೆ ತಡೆಯ ಸವಾಲು ಮತ್ತೊಂದು ಕಡೆ ಸೋಂಕಿತರಿಗೆ ವೈದ್ಯಕೀಯ ಚಿಕಿತ್ಸೆ, ಪ್ರತ್ಯೇಕಗೊಳಿಸುವುದು ಮುಂತಾದ ಮಹಾ ಸವಾಲುಗಳೂ ಎದುರಾಗುತ್ತವೆ.

ಆ ಹಿನ್ನೆಲೆಯಲ್ಲಿಯೇ ಮೂರು ಮತ್ತು ನಾಲ್ಕನೇ ಹಂತಗಳು ಬಹಳ ಅಪಾಯಕಾರಿ ಎನ್ನಲಾಗುತ್ತಿದೆ. ಈ ಹಂತದಲ್ಲಿಸೋಂಕು ಹರಡುವಿಕೆಯನ್ನು ಗುರುತಿಸುವುದು ಕೂಡ ಸಾಧ್ಯವಿಲ್ಲ. ಸೋಂಕು ತಗಲಿ ಸುಮಾರು 14 ದಿನಗಳ ಕಾಲ ರೋಗದ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದೇ ಹೋದರೂ ಸೋಂಕಿತ ವ್ಯಕ್ತಿ ಸೋಂಕು ಹರಡುತ್ತಲೇ ಇರುತ್ತಾನೆ. ಹಾಗಾಗಿ ಸ್ವತಃ ಸೋಂಕಿತರಿಗೇ ಅರಿವಿಲ್ಲದಂತೆ ಆತ ರೋಗವಾಹಕನಾಗಿ ಆತನ ಸುತ್ತಮುತ್ತಲಿನವರಿಗೆ, ಆತನ ಹೋಗಿಬಂದ ಕಡೆಯೆಲ್ಲೆಲ್ಲಾ ಸೋಂಕು ಹರಡುತ್ತಿರುತ್ತಾನೆ. ಆ ಹಂತದಲ್ಲಿ ವೈರಾಣು ಪರೀಕ್ಷೆ ಹೊರತು ಸೋಂಕು ಖಚಿತಪಡಿಸಿಕೊಳ್ಳುವ ಅನ್ಯ ಮಾರ್ಗವಿಲ್ಲ. ಆ ಹಿನ್ನೆಲೆಯಲ್ಲಿಯೇ ಸಾಮುದಾಯಿಕವಾಗಿ ರೋಗ ಪರೀಕ್ಷೆ ನಡೆಸದೇ ರೋಗ ಯಾವ ಹಂತದಲ್ಲಿದೆ, ವಾಸ್ತವವಾಗಿ ಎಷ್ಟು ಜನ ಸೋಂಕಿತರು ಎಂಬ ಮಾಹಿತಿಗಳನ್ನು ಕೂಡ ನಂಬಲಾಗದು ಎನ್ನುವುದು ರಮಣನ್ ಗ್ರಹಿಕೆ.

ಭಾರತದಂತಹ ಜನದಟ್ಟಣೆಯ ದೇಶದಲ್ಲಿ ಈ ಹಂತದಲ್ಲಿ ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವುದು, ಪ್ರತ್ಯೇಕವಾಗಿರುವುದು ಕೂಡ ಪ್ರಾಯೋಗಿಕವಾಗಿ ಕಷ್ಟಕರ. ಚೀನಾದ ಯುವಾನ್ ಪ್ರಾಂತ್ಯದಲ್ಲಿ ಮಾಡಿದಂತೆ ಇಡಿಯಾಗಿ ಸಂಪೂರ್ಣ ಪ್ರದೇಶವನ್ನೇ ಲಾಕ್ ಡೌನ್ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಇಟಲಿ- ಸ್ಪೇನ್ ರೀತಿಯ ಪರಿಸ್ಥಿತಿ ಭಾರತದಲ್ಲಿ ತಲೆದೋರಿದರೂ ಅಚ್ಚರಿ ಇಲ್ಲ. ಆರಂಭದಲ್ಲಿಯೇ ಸೋಂಕಿತ ರಾಷ್ಟ್ರಗಳಿಂದ ದೇಶದೊಳಗೆ ಬರುವವರ ಸ್ಕ್ರೀನಿಂಗ್, ವೀಸಾ ನಿರ್ಬಂಧದಂತಹ ಅಗತ್ಯ ಮಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಭಾರತದಲ್ಲಿ ವೈರಾಣು ಪರೀಕ್ಷೆಯ ವಿಷಯದಲ್ಲಿ ಸಾಕಷ್ಟು ಲೋಪಗಳಾಗಿವೆ. ಕೇವಲ ಸೋಂಕು ಲಕ್ಷಣ ಕಂಡುಬಂದವರನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗಿದೆ.

ಆ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 40-80 ಲಕ್ಷ ಮಂದಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ. ಆದರೆ, ಪರೀಕ್ಷೆಗೊಳಪಡಿಸದೇ ಇರುವುದರಿಂದ ಅದು ಪತ್ತೆಯಾಗಿಲ್ಲ. ಜೊತೆಗೆ ಅಷ್ಟು ಸಂಖ್ಯೆಯ ಪೈಕಿ ಕೇವಲ ಶೇ.10ರಷ್ಟು ಮಂದಿಗೆ ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ಸಂದರ್ಭ ಬಂದರೂ ಭಾರತದ ಆರೋಗ್ಯ ವಲಯ ಹೊಂದಿರುವ ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಅದು ಸಾಧ್ಯವೇ ಆಗಲಾರದು. ಪರಿಸ್ಥಿತಿ ಹೀಗೆ ಮುಂದುವರಿದರೆ; ಜನರು ತಾವಾಗಿಯೇ ನಿರ್ಬಂಧ ಹೇರಿಕೊಂಡು, ಸರ್ಕಾರದ ಸಲಹೆ ಮತ್ತು ಕ್ರಮಗಳನ್ನು ಗೌರವಿಸಿ ಮನೆಯಲ್ಲಿಯೇ ಉಳಿಯದೇ ಹೋದರೆ, ಸೋಂಕಿತರ ಪ್ರಮಾಣ 7-8 ಕೋಟಿಗೆ ತಲುಪಬಹುದು. ಆಗ ದೇಶದ ಸ್ಥಿತಿ ಊಹಿಸಲೂ ಆಗದು. ಒಂದು ಕಡೆ ಸೋಂಕು ಹರಡುವಿಕೆ, ಮತ್ತೊಂದು ಕಡೆ ಚಿಕಿತ್ಸೆ ನೀಡಲಾಗದೆ ಆಸ್ಪತ್ರೆಗಳ ಸ್ಥಿತಿಗತಿ ಊಹೆಗೂ ನಿಲುಕದ್ದು. ಆ ಹಿನ್ನೆಲೆಯಲ್ಲಿ ಜನ ಕನಿಷ್ಠ ಈಗಲಾದರೂ ಕಟ್ಟುನಿಟ್ಟಾಗಿ ಮನೆಯಲ್ಲೇ ಉಳಿಯಬೇಕಿದೆ ಎಂಬ ಸಲಹೆ ಕೂಡ ನೀಡಿದ್ಧಾರೆ.

ಕರೋನಾ ಮೂರನೇ ಹಂತದಲ್ಲಿ ನೀವೇನು ಮಾಡಬೇಕು

  • ಸೋಂಕಿತರು ಇವರೇ ಎಂದು ಈ ಹಂತದಲ್ಲಿ ನಿಖರವಾಗಿ ಗುರುತಿಸಲಾಗದು.
  • ಪರೀಕ್ಷೆಯಾಗದೇ, ರೋಗ ಲಕ್ಷಣ ಬಾಹ್ಯವಾಗಿ ಕಾಣುವವರೆಗೆ (14 ದಿನ) ನಿಮ್ಮ ಪಕ್ಕದಲ್ಲೇ ಇರುವವರಿಗೆ ಸೋಂಕಿದ್ದರೂ ಗೊತ್ತಾಗದು
  • ದಿನಕ್ಕೆ ಕನಿಷ್ಠ ನಾಲ್ಕೈದು ಬಾರಿ ಕೈ ತೊಳೆಯುತ್ತಿರಿ. ಮನೆಯಿಂದ ಹೊರಹೋದರೆ, ಪೇಪರು, ಹಾಲಿನ ಪ್ಯಾಕ್ ಮುಂತಾದವನ್ನು ಮುಟ್ಟಿದರೆ ಕೈತೊಳೆದುಕೊಂಡು ಇತರ ಕೆಲಸ ಮಾಡಿ.
  • ಎಷ್ಟೇ ಆಪ್ತರಿರಲಿ ಎದುರಿಗೆ ಸಿಕ್ಕವರು, ಮನೆಗೆ ಬಂದವರನ್ನು ಕನಿಷ್ಠ ಐದಾರು ಅಡಿ ಅಂತರದಲ್ಲೇ ಮಾತನಾಡಿಸಿ
  • ಹಾಗಾಗಿ ನೀವು ಎಂತಹದ್ದೇ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಮನೆಯಲ್ಲೇ ಇರಿ
  • ಒಂದು ವೇಳೆ ಯಾರಾದರೂ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಅವರಿಗೆ ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ಕೊಡಿಸಿ.
  • ನೀವು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಸ್ಯೂ ಪೇಪರ್ ಅಡ್ಡ ಹಿಡಿದು ಕೆಮ್ಮು-ಸೀನಿನ ಎಂಜಲು ಹನಿಗಳು ಎದುರಿನವರು ಅಥವಾ ವಸ್ತುಗಳ ಮೇಲೆ ಸಿಡಿಯದಂತೆ ಎಚ್ಚರ ವಹಿಸಿ
  • ಆ ಮೂಲಕ ನಿಮ್ಮನ್ನು ಕಾಪಾಡಿಕೊಳ್ಳಿ, ದೇಶವನ್ನೂ ಕಾಪಾಡಿ

Click here Support Free Press and Independent Journalism

Pratidhvani
www.pratidhvani.com