ಚೀನಾ ದೇಶವನ್ನು ನೋಡಿಯಾದರೂ ಎಚ್ಚೆತ್ತುಕೊಂಡೀತೆ ಭಾರತ..!?
ರಾಷ್ಟ್ರೀಯ

ಚೀನಾ ದೇಶವನ್ನು ನೋಡಿಯಾದರೂ ಎಚ್ಚೆತ್ತುಕೊಂಡೀತೆ ಭಾರತ..!?

ಯುಗಾದಿ ಹಬ್ಬಕ್ಕೆಂದು ನಗರದ ಜನ ಹಳ್ಳಿಗಳಿಗೆ ತೆರಳಬೇಡಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರು. ಆದರೆ ಆ ಮನವಿ ಮಾಡುತ್ತಲೇ ನಗರ ಜನರು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ರಾಜ್ಯ ಸರ್ಕಾರ ಸಾರಿಗೆ ಸೌಲಭ್ಯವನ್ನು ಬಂದ್‌ ಮಾಡಿದ್ದರೂ ಜನರು ಖಾಸಗಿ ವಾಹನಗಳನ್ನು ಆಶ್ರಯಿಸಿ ನಿನ್ನೆ ಇಡೀ ರಾತ್ರಿ ಪ್ರಯಾಣ ಮಾಡಿದ್ದಾರೆ. ರಸ್ತೆಗಳು ಕಿಕ್ಕಿರಿದು ತುಂಬಿ, ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಇಡೀ ಬೆಂಗಳೂರು ಹಳ್ಳಿಗಳತ್ತ ಹೊರಟಿದೆ.

ಕೃಷ್ಣಮಣಿ

ಕೊರೊನಾ ವೈರಸ್‌ ತಡೆಯಲು ವಿಶ್ವವೇ ಹರಸಾಹಸ ಮಾಡುತ್ತಿದೆ. ಆದರೆ ಭಾರತದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಮಾತ್ರ ಇನ್ನೂ ಕಠಿಣ ಆಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ ಬಳ್ಳಿಯಂತೆ ಹಬ್ಬುತ್ತಲೇ ಇದ್ದು ಐನೂರರ ಗಡಿ ತಲುಪಿದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕೇವಲ ಲಾಕ್‌ಡೌನ್‌ ಎಂದು ಆದೇಶ ಮಾಡಿದೆ. ಆದರೆ ಹೆದ್ದಾರಿಯಲ್ಲಿ ಬೈಕ್‌, ಕಾರುಗಳಲ್ಲಿ ಜನರು ಜಮಾಯಿಸಿದ್ದಾರೆ. ಇದರಿಂದ ಅಗತ್ಯ ಸೇವೆಗಳು ಹಾಗು ಮಾಧ್ಯಮ, ಆಸ್ಪತ್ರೆ, ವೈದ್ಯರು ಸರಿಯಾದ ಸಮಯಕ್ಕೆ ತಲುಪಲಾಗದೆ ಪರದಾಡುವಂತಾಗಿದೆ. ಪೊಲೀಸರ ಜೊತೆ ಸಾರ್ವಜನಿಕರು ವಾಗ್ವಾದ ಮಾಡುತ್ತಿದ್ದಾರೆ. ಕೊರೊನಾ ವೈರಸ್‌ನ ಮೂಲ ಚೀನಾದ ವುಹಾನ್‌, ಕೊರೊನಾ ವೈರಸ್‌ನಿಂದ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದ ಹಾಗೆ ಇಡೀ ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್‌ ಮಾಡಿ ಆದೇಶ ಮಾಡಿತ್ತು. ಅಗತ್ಯ ಮೂಲ ಸೌಕರ್ಯ ಸಾಗಣೆ ವಾಹನಗಳನ್ನು ಹೊರತು ಪಡಿಸಿ ಬೇರೆ ಯಾವುದೇ ವಾಹನ ಓಡಾಟಕ್ಕೂ ಅವಕಾಶ ಮಾಡಿಕೊಡಲಿಲ್ಲ. ಸೇನೆಯನ್ನು ಬಳಸಿಕೊಂಡು 2 ತಿಂಗಳ ಕಾಲ ಗೃಹಬಂಧನ ವಿಧಿಸಿದ ಚೀನಾ ಇಂದು ಇಡೀ ಪ್ರಪಂಚದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೂ ಹೆಮ್ಮಾರಿ ವೈರಸ್‌ ಅನ್ನು ನಿಯಂತ್ರಣದಲ್ಲಿ ಇರಿಸಿದೆ.

ಯುಗಾದಿ ಹಬ್ಬಕ್ಕೆಂದು ನಗರದ ಜನ ಹಳ್ಳಿಗಳಿಗೆ ತೆರಳಬೇಡಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರು. ಆದರೆ ಆ ಮನವಿ ಮಾಡುತ್ತಲೇ ನಗರ ಜನರು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ರಾಜ್ಯ ಸರ್ಕಾರ ಸಾರಿಗೆ ಸೌಲಭ್ಯವನ್ನು ಬಂದ್‌ ಮಾಡಿದ್ದರೂ ಜನರು ಖಾಸಗಿ ವಾಹನಗಳನ್ನು ಆಶ್ರಯಿಸಿ ನಿನ್ನೆ ಇಡೀ ರಾತ್ರಿ ಪ್ರಯಾಣ ಮಾಡಿದ್ದಾರೆ. ರಸ್ತೆಗಳು ಕಿಕ್ಕಿರಿದು ತುಂಬಿ, ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಇಡೀ ಬೆಂಗಳೂರು ಹಳ್ಳಿಗಳತ್ತ ಹೊರಟಿದೆ. ನಗರದ ಜನರು ಹಳ್ಳಿಗಳಲ್ಲಿ ಹೋಗಿ ಕೊರೊನಾ ಸೋಂಕು ಹಬ್ಬಿಸುವ ಸಾಧ್ಯತೆಯಿದೆ ಎಂದಿದ್ದ ಸಿಎಂ ಯಡಿಯೂರಪ್ಪ ಹಳ್ಳಿಗಳಿಗೆ ತೆರಳುವ ಜನರನ್ನು ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಸ್ವತಃ ಸುಪ್ರೀಂಕೋರ್ಟ್‌ ಕೂಡ ಸಂಪೂರ್ಣ ಬಂದ್‌ ಆಗುತ್ತಿದ್ದು, ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ಕಲಾಪ ನಡೆಸಲು ನಿರ್ಧಾರ ಮಾಡಲಾಗಿದೆ. ಆದರೆ ಹಳ್ಳಿಗಳಿಗೆ ತೆರಳಿ ಕೊರೊನಾ ಹರಡಬೇಡಿ ಎಂದಿದ್ದ ಸಿಎಂ ಯಡಿಯೂರಪ್ಪ, ಹಳ್ಳಿಗಳಿಗೆ ತೆರಳುವ ಲಕ್ಷಾಂತರ ಜನರನ್ನು ತಡೆಯುವ ಕೆಲಸ ಮಾಡಲಿಲ್ಲ ಎನ್ನುವುದೇ ದುರಂತ.

ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ಪಂಜಾಬ್ ಸರ್ಕಾರ ಕೂಡ ನಮ್ಮ ರಾಜ್ಯದಂತೆಯೇ ಲಾಕ್‌ಡೌನ್ ಆದೇಶ ಕೊಟ್ಟಿತ್ತು. ಆದ್ರೆ ಜನ ಸರ್ಕಾರದ ಆದೇಶಕ್ಕೆ ಕಿಂಚಿತ್ತು ಬೆಲೆ ಕೊಡಲಿಲ್ಲ. ಇದ್ರಿಂದ ಕೆಂಗಣ್ಣು ಬೀರಿದ ರಾಜ್ಯ ಸರ್ಕಾರ ಇದೀಗ ಕರ್ಫ್ಯೂ ಜಾರಿ ಮಾಡಿ ನಿಯಂತ್ರಣಕ್ಕೆ ತರುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕರ್ಫ್ಯೂ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ. ಆದರೆ ನಮ್ಮ ರಾಜ್ಯದಲ್ಲಿ ನಿಧಾನವಾಗಿಯಾದರೂ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೆ ಇನ್ನೂ ಕೆಲವು ಮಾರುಕಟ್ಟೆಯಲ್ಲಿ ಜನರು ಜಾತ್ರೆ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ವಾಹನ ಓಡಾಡುತ್ತಲೇ ಇವೆ. ಪಂಜಾಬ್‌ನಲ್ಲಿ ಇದುವರೆಗೂ 21 ಕೊರೊನಾ ವೈರಸ್ ಸೋಂಕುಗಳು ಪತ್ತೆಯಾಗಿದ್ದು, ಕರ್ನಾಟಕದಂತೆ ಪಂಜಾಬ್‌ನಲ್ಲೂ ಓರ್ವ ಸಾವನ್ನಪ್ಪಿದ್ದಾನೆ. ಆದರೂ ಪಂಜಾಬ್‌ ಸರ್ಕಾರ ಕಟ್ಟು ನಿಟ್ಟಿನ ಆದೇಶ ಮಾಡಿದೆ. ಆದರೆ ನಮ್ಮ ಕರ್ನಾಟಕ ಮಾತ್ರ ಇನ್ನೂ ಕೂಡ ಅಷ್ಟೊಂದು ಕಟ್ಟು ನಿಟ್ಟಿನ ಕ್ರಮ ಆಗಿಲ್ಲ ಎನಿಸುತ್ತಿದೆ.

ಇನ್ನು ಕೇಂದ್ರ ಸರ್ಕಾರ ಜೀವ ರಕ್ಷಕ ಸಾಧನಗಳಾದ ವೆಂಟಿಲೇಟರ್ ಮತ್ತು ಸರ್ಜಿಕಲ್ ಮಾಸ್ಕ್ ರಫ್ತು ನಿಷೇಧಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಮಾಸ್ಕ್ ತಯಾರಿಸಲು ಬಳಸಬಹುದಾದ ವಸ್ತುಗಳು, ವೆಂಟಿಲೇಟರ್‌ಗಳು, ಶಸ್ತ್ರಚಿಕಿತ್ಸಾ ಮಾಸ್ಕ್‌ಗಳು ಹಾಗೂ ಜವಳಿ ಕಚ್ಚಾ ವಸ್ತುಗಳ ರಫ್ತನ್ನು ಮಾರ್ಚ್ 19 ರಂದು ನಿಷೇಧಿಸಿತ್ತು. ಈ ನಿರ್ಧಾರ ಇದಕ್ಕೂ ಮೊದಲೇ ಕೈಗೊಳ್ಳಬೇಕಿತ್ತು. ಆದ್ರೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು WHO ಸಲಹೆ ಕೊಟ್ಟರೂ ಮಾರ್ಚ್ 19ರ ತನಕ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿದ್ದು ಕ್ರಿಮಿನಲ್ ಪಿತೂರಿಯಲ್ಲವೆ..? ಎಂದು ಟ್ವೀಟರ್‌ನಲ್ಲಿ ಟೀಕಿಸಿದ್ದಾರೆ. ಇನ್ನು ಕೊರೊನಾ ವೈರಸ್‌ ತಡೆಗೆ ನಮ್ಮ ಪಕ್ಕದ ಕೇರಳ ಸರ್ಕಾರ 20 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್‌ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ಮರ್ಜಿಗಾಗಿ ಕಾಯದೆ ತನ್ನದೇ ಖಜಾನೆಯಿಂದ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಕರ್ನಾಟಕ ಸರ್ಕಾರ ಯಾವುದೇ ಪ್ಯಾಕೇಜ್‌ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರವೂ ಯಾವುದೇ ರಾಜ್ಯಕ್ಕೆ ನಯಾಪೈಸೆ ಕೊಟ್ಟಿಲ್ಲ. ಎನ್‌ಡಿಆರ್‌ಎಫ್‌ ಫಂಡ್‌ನ ಶೇಕಡ 10 ರಷ್ಟು ಬಳಸುವಂತೆ ಸೂಚನೆ ಕೊಟ್ಟಿದೆ. ಅದೇ ಹಣದಲ್ಲಿ ಕೊರೊನಾ ಸಮಸ್ಯೆಗೆ ಮದ್ದು ಹುಡುಕಬೇಕಿದೆ. ಒಟ್ಟಾರೆ, ಇದನ್ನೆಲ್ಲಾ ನೋಡಿದರೆ ಕೊರೊನಾ ಸೋಂಕಿತರ ಸಂಖ್ಯೆ ಶಿಖರದಂತೆ ಏರುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆಯಾ ಎನ್ನುವ ಅನುಮಾನ ದಟ್ಟವಾಗುವಂತೆ ಮಾಡಿದೆ.

ಚೀನಾ ದೇಶವನ್ನು ನೋಡಿಯಾದರೂ ಎಚ್ಚೆತ್ತುಕೊಂಡೀತೆ ಭಾರತ..!?

ಇನ್ನೊಂದು ವಿಚಾರ ಎಂದರೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಸೋಂಕಿತರಿಗೆ ಉಚಿತ ಹಾಗೂ ಉತ್ತಮ ಚಿಕಿತ್ಸೆ ನೀಡಲು ಶ್ರಮಿಸಬಹುದು. ಸೋಂಕು ಹರಡುವ ಮುನ್ನ ಜಾಗೃತಿ ಮೂಡಿಸುವ ಕೆಲಸ ಮಾಡಬಹುದು. ಆದರೆ ನಿಮ್ಮ ಮನೆಗೆ ಬಂದು ಕಾಯಿಲೆ ತಂದುಕೊಳ್ಳಬೇಡಿ ಎಂದು ಕಾಡಿ ಬೇಡಲು ಸಾಧ್ಯವಿಲ್ಲ. ಸುಮಾರು 15 ರಿಂದ 20 ದಿನಗಳ ಕಾಲ ಹಣ್ಣು, ತರಕಾರಿ ತಿನ್ನದಿದ್ದರೂ ಪರವಾಗಿಲ್ಲ ಎಂದು ಮನೆಯಲ್ಲಿ ಉಳಿದುಕೊಳ್ಳುವುದು ಲೇಸು. ಪ್ರಧಾನಿ ನರೇಂದ್ರ ಮೋದಿಯೇ ಮನೆಯಲ್ಲಿ ಲಾಕ್ಡೌನ್ ಆಗಿ ನಿಮ್ಮ ಪ್ರಾಣ ನೀವು ಉಳಿಸಿಕೊಳ್ಳಿ, ನಿಮ್ಮವರನ್ನೂ ಉಳಿಸಿ ಎಂದರೂ ಜನ ಕೇಳ್ತಿಲ್ಲ. ಮಾರ್ಕೆಟ್‌ಗಳಲ್ಲಿ ಜನ ಮುಗಿ ಬೀಳ್ತಿದ್ದಾರೆ. ಯುಗಾದಿ ಹಬ್ಬ ಅದ್ಧೂರಿ ಆಚರಣೆ ಮಾಡಲು ಮುಂದಾಗ್ತಿದ್ದಾರೆ. ಕೊರೊನಾ ಸೋಂಕು ರಾಜ್ಯ ಹಾಗೂ ದೇಶದಲ್ಲಿ ಗಹಗಹಿಸಿ ನಗುತ್ತಿದ್ದರೂ ಜನರಿಗೆ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿರುವುದನ್ನು ನಾವು ಗಮನಿಸಬಹುದು. ಜನ ಒಂದು ಮಾತು ಅರ್ಥ ಮಾಡಿಕೊಳ್ಳಲೇಬೇಕು ಅದೇನೆಂದರೆ, ಯಾವುದೇ ಸರ್ಕಾರ ಜನ ಜಾಗೃತಿ ಮಾಡಬಹುದು ಅಷ್ಟೇ..! ಬದುಕಿಸಲು ಸಾಧ್ಯವಿಲ್ಲ..!.

ರಾಜ್ಯ ಸರ್ಕಾರ ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ಚಿಕಿತ್ಸೆಗೆಂದು ಮೀಸಲಿಟ್ಟಿದೆರ. ಇದೀಗ ಪ್ರತಿಯೊಂದು ಜಿಲ್ಲೆಯಲ್ಲೂ ಪತ್ಯೇಕ ಕೊರೊನಾ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಕಾಯ್ದಿರಿಸಲು ಸೂಚನೆ ಕೊಡಲಾಗಿದೆ. ಹೊಸದಾಗಿ 1,000 ಸಾವಿರ ವೆಂಟಿಲೇಟರ್ ಖರೀದಿಗೂ ನಿರ್ಧಾರ ಮಾಡಲಾಗಿದೆ. ಕೊರೊನಾ ವೈರಸ್‌ ನಿರೋಧ ಎನಿಸಿಕೊಂಡಿರುವ N - 95 10 ಲಕ್ಷ ಮಾಸ್ಕ್ ಖರೀದಿಗೂ ಆರ್ಡರ್ ಕೊಡಲಾಗಿದೆ. 15 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್ ಖರೀದಿಗೂ ಸರ್ಕಾರ ಮುಂದಾಗಿದೆ. ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಖರೀದಿಗೂ ಒಪ್ಪಿಗೆ ಸಿಕ್ಕಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟಗಳನ್ನು ಮನಗಂಡು ಇಷ್ಟೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದರೂ ಜನರು ಇನ್ನೂ ಉದಾಸೀನತೆ ಮಾಡುತ್ತಿದ್ದಾರೆ ಎನಿಸುತ್ತದೆ. ಸದ್ಯ ಕೆಲಸದ ಬಗ್ಗೆ ಚಿಂತೆ ಮಾಡದೆ ಮನೆಯಲ್ಲೇ ಉಳಿದುಕೊಂಡು ಜೀವ ಉಳಿಸಿಕೊಳ್ಳುವುದನ್ನು ನೋಡಬೇಕಿದೆ. ತಿಂಗಳ ವೇತನ ಬಾರದಿದ್ದರೂ ಪರವಾಗಿಲ್ಲ, ಅನ್ನವನ್ನಾದರೂ ತಿಂದು ಜೀವ ಉಳಿಸಿಕೊಳ್ಳುವ ನಿರ್ಧಾರವನ್ನು ಜನರು ಮಾಡಬೇಕಿದೆ.

Click here Support Free Press and Independent Journalism

Pratidhvani
www.pratidhvani.com