ಎಟಿಎಂ ವಿಥ್‌ ಡ್ರಾ ಶುಲ್ಕ ತಾತ್ಕಾಲಿಕ ರದ್ದು, ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯವಲ್ಲ
ರಾಷ್ಟ್ರೀಯ

ಎಟಿಎಂ ವಿಥ್‌ ಡ್ರಾ ಶುಲ್ಕ ತಾತ್ಕಾಲಿಕ ರದ್ದು, ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯವಲ್ಲ

ಬ್ಯಾಂಕ್ ಖಾತೆಗಳಲ್ಲಿ ಗ್ರಾಹಕರು ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ (ಕನಿಷ್ಠ ಬಾಕಿ) ಉಳಿಸಲೇಬೇಕೆಂಬ ಕಡ್ಡಾಯವಿದೆ. ತಮ್ಮ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳದ ಗ್ರಾಹಕರಿಗೆ ಬ್ಯಾಂಕುಗಳು 100 ರಿಂದ ಸುಮಾರು 250 ರುಪಾಯಿಗಳವರೆಗೂ ದಂಡ ಶುಲ್ಕವನ್ನು ವಿಧಿಸುತ್ತಿವೆ. ವಿಶೇಷವಾಗಿ ಖಾಸಗಿ ಬ್ಯಾಂಕುಗಳು ಹೆಚ್ಚಿನ ದಂಡ ಶುಲ್ಕ ವಿಧಿಸುತ್ತಿವೆ. ಈ ದಂಡ ಶುಲ್ಕವನ್ನು ಸಹ ರದ್ದು ಮಾಡಲಾಗಿದೆ.

ರೇಣುಕಾ ಪ್ರಸಾದ್ ಹಾಡ್ಯ

ವ್ಯಾಪಕವಾಗಿ ಹಬ್ಬುತ್ತಿರುವ ‘ಕೋವಿಡ್-19’ ಹಾವಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಯಾವುದೇ ಪರಿಣಾಮಕಾರಿ ಪರಿಹಾರಗಳನ್ನು ಘೋಷಿಸಿಲ್ಲ ಎಂಬ ಆರೋಪಗಳ ನಡುವೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ಘೋಷಣೆಗಳನ್ನು ಮಾಡಿದ್ದಾರೆ. ಘೋಷಣೆ ಮಾಡಿದ ಬಹುತೇಕ ಎಲ್ಲವೂ ಅವಧಿ ವಿಸ್ತರಣೆ ಮತ್ತು ಕೆಲವು ಶುಲ್ಕ ವಿನಾಯಿತಿಗಷ್ಟೇ ಸೀಮಿತಗೊಂಡಿದೆ.

ಕುಸಿದಿರುವ ಆರ್ಥಿಕತೆ ಚೇತರಿಕೆಗೆ ಕ್ರಮಗಳನ್ನು ರೂಪಿಸಲಾಗುತ್ತಿದೆ. ಅವುಗಳನ್ನು ಆದಷ್ಟು ಬೇಗ ಘೋಷಿಸಲಾಗುತ್ತದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಚೇತರಿಕೆ ಕ್ರಮಗಳ ಘೋಷಣೆಗೆ ಅವರು ಕಾಲಮಿತಿ ನಿಗದಿ ಮಾಡಿಲ್ಲ. ಶೀಘ್ರ ಎಂದಷ್ಟೇ ಹೇಳಿದ್ದಾರೆ.

ಘೋಷಿತ ಕ್ರಮಗಳೇನು?

ನಾಗರಿಕರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಕೆಲವು ನಿಯಮಗಳ ಸಡಿಲ ಮತ್ತು ಮಾರ್ಪಾಡು ಮಾಡಿದೆ. ದೇಶವ್ಯಾಪಿ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಜನರ ಓಡಾಟವನ್ನು ತಗ್ಗಿಸುವ ಸಲುವಾಗಿ ಯಾವುದೇ ಬ್ಯಾಂಕಿನ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಬಳಸಿ ಯಾವುದೇ ಬ್ಯಾಂಕಿನ ಎಟಿಎಂನಲ್ಲಿ ಶುಲ್ಕವಿಲ್ಲದೇ ಹಣ ಪಡೆಯಬಹುದು. ಈ ಉಚಿತ ಸೌಲಭ್ಯವು ಜೂನ್ 30ರವರೆಗೆ ಲಭ್ಯವಿದೆ. ಇದುವರೆಗೆ ಬೇರೆ ಬ್ಯಾಂಕಿನ ಎಟಿಎಂಗಳಲ್ಲಿ ಹಣ ವಿತ್ಡ್ರಾ ಮಾಡಿದಾಗ ಪ್ರತಿಯೊಂದು ವಹಿವಾಟಿಗೂ 20 ರಿಂದ 40 ರುಪಾಯಿ ಶುಲ್ಕ ವಿಧಿಸಲಾಗುತ್ತಿತ್ತು.

ಬ್ಯಾಂಕ್ ಖಾತೆಗಳಲ್ಲಿ ಗ್ರಾಹಕರು ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ (ಕನಿಷ್ಠ ಬಾಕಿ) ಉಳಿಸಲೇಬೇಕೆಂಬ ಕಡ್ಡಾಯವಿದೆ. ತಮ್ಮ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳದ ಗ್ರಾಹಕರಿಗೆ ಬ್ಯಾಂಕುಗಳು 100 ರಿಂದ ಸುಮಾರು 250 ರುಪಾಯಿಗಳವರೆಗೂ ದಂಡ ಶುಲ್ಕವನ್ನು ವಿಧಿಸುತ್ತಿವೆ. ವಿಶೇಷವಾಗಿ ಖಾಸಗಿ ಬ್ಯಾಂಕುಗಳು ಹೆಚ್ಚಿನ ದಂಡ ಶುಲ್ಕ ವಿಧಿಸುತ್ತಿವೆ. ಈ ದಂಡ ಶುಲ್ಕವನ್ನು ಸಹ ರದ್ದು ಮಾಡಲಾಗಿದೆ. ಅಂದರೆ ಗ್ರಾಹಕರು ತಮ್ಮ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸುವುದು ಕಡ್ಡಾಯವೇನಲ್ಲ. ಈ ಸೌಲಭ್ಯವೂ ಜೂನ್ 30ವರೆಗೆ ಲಭ್ಯವಿದೆ. ಅಗತ್ಯ ಬಿದ್ದರೆ ಈ ಎರಡೂ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಗ್ರಾಹಕರು ಆನ್ಲೈನ್ ಮತ್ತು  ಡಿಜಿಟಲ್ ವಹಿವಾಟು ನಡೆಸಿದಾಗ ಈಗ ಇರುವ ಶುಲ್ಕಗಳನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲಾಗಿದೆ.

2018-19ನೇ ಸಾಲಿನ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇದ್ದ ಅಂತಿಮ ದಿನವನ್ನು  2020 ಮಾರ್ಚ್ 31ರಿಂದ 2020 ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ವಿಳಂಬವಾಗಿ ಆದಾಯ ತೆರಿಗೆ ವಿವರ ಸಲ್ಲಿಸಿದಾಗ ಪಾವತಿಸಬೇಕಾದ ಬಡ್ಡಿ ಪ್ರಮಾಣವನ್ನು ಶೇ.12ರಿಂದ ಶೇ.9ಕ್ಕೆ ತಗ್ಗಿಸಲಾಗಿದೆ. ಜತೆಗೆ ಡಿಟಿಎಸ್ ಠೇವಣಿ ಪಾವತಿಯವನ್ನು ಸಕಾಲದಲ್ಲಿ ಮಾಡದೇ ಇದ್ದಾಗ ವಿಧಿಸುತ್ತಿದ್ದ ಬಡ್ಡಿದರವನ್ನು ಶೇ.18ರಿಂದ ಶೇ.9ಕ್ಕೆ ತಗ್ಗಿಸಲಾಗಿದೆ.

ಆಧಾರ್ ಜತೆಗೆ ಪಾನ್ ನಂಬರ್ ಜೋಡಣೆಗೆ ವಿಧಿಸಲಾಗಿದ್ದ ಅಂತಿಮ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಜಿಎಸ್ಟಿ ವಿವರ ಸಲ್ಲಿಕೆಗೆ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ತೆರಿಗೆ ತಗಾದೆಗಳ ಇತ್ಯರ್ಥಕ್ಕಾಗಿ ಘೋಷಿಸಿರುವ ‘ಸಬ್ ಕ ವಿಶ್ವಾಸ್’ಯೋಜನೆಯಡಿ ತೆರಿಗೆ ಪಾವತಿಸಲು ಇರುವ ವಿಧಿಯನ್ನೂ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಜೂನ್ 30ರೊಳಗೆ ತೆರಿಗೆ ಪಾವತಿ ಮಾಡಿದವರೆಗೆ ಬಡ್ಡಿ ವಿಧಿಸುವುದಿಲ್ಲ. ಕಂಪನಿಗಳ ಜಿಎಸ್ಟಿ ವಿವರ ಸಲ್ಲಿಕೆಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

5 ಕೋಟಿ ರುಪಾಯಿಗಿಂತ ಕಡಿಮೆ ವಹಿವಾಟು ನಡೆಸುವ ಕಂಪನಿಗಳು ಜೂನ್ 30ರ ಒಳಗೆ ಜಿಎಸ್ಟಿ ವಿವರ ಸಲ್ಲಿಸಿದರೆ ಅಂತಹ ಕಂಪನಿಗಳಿಗೆ ವಿಳಂಬ ಶುಲ್ಕ ಮತ್ತು ಬಡ್ಡಿಯನ್ನು ವಿಧಿಸುವುದಿಲ್ಲ. 5 ಕೋಟಿ ರುಪಾಯಿ ಮೀರಿದ ಕಂಪನಿಗಳಿಗೆ ವಿಳಂಬ ಶುಲ್ಕ ವಿಧಿಸುವುದಿಲ್ಲ. ಆದರೆ, ಬಡ್ಡಿಯನ್ನು ಶೇ.18ರಿಂದ ಶೇ.9ಕ್ಕೆ ತಗ್ಗಿಸಿ ವಿಧಿಸಲಾಗುತ್ತದೆ. ‘ಕಂಪೋಷಿಯನ್ ಸ್ಕೀಮ್’ಆಯ್ಕೆ ಮಾಡಿಕೊಳ್ಳಲು ಇದ್ದ ಕಾಲಮಿತಿಯನ್ನು ಮಾರ್ಚ್ 31ರಿಂದ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ವಿಭಾಗವು ಲಾಕ್ ಡೌನ್ ಅವಧಿಯಲ್ಲೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಕಂಪನಿ ಕಾಯ್ದೆಯಡಿ ಕೆಲವು ಸಡಿಲಿಕೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.  ಕಂಪನಿಗಳು ತೆರಿಗೆ ವಿವರ ಸಲ್ಲಿಕೆ ವಿಳಂಬವಾದರೆ ಹೆಚ್ಚುವರಿ ವಿಳಂಬ ಶುಲ್ಕ ವಿಧಿಸುವುದಿಲ್ಲ. ಕಡ್ಡಾಯವಾಗಿ ಆಡಳಿತ ಮಂಡಳಿ ಸಭೆ ನಡೆಸಲೇಬೆಕೆಂಬ ನಿಯಮವನ್ನು ಮುಂದಿನ ಎರಡು ತ್ರೈಮಾಸಿಕಗಳಿಗೆ 60 ದಿನಗಳ ವರೆಗೆ ವಿಸ್ತರಿಸಲಾಗಿದೆ.

2019-20ನೇ ಸಾಲಿನಲ್ಲಿ ಕಂಪನಿಯ ಸ್ವತಂತ್ರ ನಿರ್ದೇಶಕರು ಆಡಳಿತ ಮಂಡಳಿ ಒಂದೇ ಒಂದು ಸಭೆಯಲ್ಲಿ ಪಾಲ್ಗೊಳ್ಳದಿದ್ದರೂ ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸದಿರಲು ನಿರ್ಧರಿಸಲಾಗಿದೆ. ನೂತನವಾಗಿ ಅಸ್ಥಿತ್ವಕ್ಕೆ ಬಂದ ಕಂಪನಿಗಳು ಆರು ತಿಂಗಳ ಅವಧಿಯೊಳಗೆ ತಮ್ಮ ವಹಿವಾಟು ಆರಂಭವಾಗಿದ್ದನ್ನು ಘೋಷಣೆ ಮಾಡಬೇಕೆಂಬ ನಿಯಮವನ್ನು ಸಡಿಲಿಸಿ ಈ ಅವಧಿಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸಲಾಗಿದೆ.

ಇದುವರೆಗೆ ಕಂಪನಿಯ ನಿರ್ದೇಶಕರು ದೇಶದಲ್ಲಿ 182 ದಿನಗಳ ದೇಶದಲ್ಲಿ ವಾಸ ಇರದೇ ಇದ್ದರೆ ಅದು ನಿಯಮಗಳ ಉಲ್ಲಂಘನೆಯಾಗುತ್ತಿತ್ತು. ಆ ನಿಯಮ ಸಡಿಲಿಸಲಾಗಿದ್ದು 182 ದಿನ ದೇಶದಲ್ಲಿ  ವಾಸ ಇಲ್ಲದಿದ್ದರೂ ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸದಿರಲು ನಿರ್ಧರಿಸಿಲಾಗಿದೆ.

ದಿವಾಳಿ ಸಂಹಿತೆಯಡಿಯಲ್ಲಿ ಹಾಲಿ ಇರುವ ಥ್ರೇಶೋಲ್ಡ್ ಮೊತ್ತವನ್ನು 1ಲಕ್ಷದಿಂದ 1 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ. ಒಂದು ವೇಳೆ ಲಾಕ್ ಡೌನ್ ಅವಧಿಯನ್ನು ಮಾರ್ಚ್ 30ರ ನಂತರವೂ ವಿಸ್ತರಿಸಿದರೆ ಐಬಿಸಿ ಕಾಯ್ದೆಯ ಸೆಕ್ಷನ್ 7, 9, ಮತ್ತು 10ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ನಿರ್ಧರಿಸಲಾಗಿದೆ.

ಎಟಿಎಂ ವಿಥ್‌ ಡ್ರಾ ಶುಲ್ಕ ತಾತ್ಕಾಲಿಕ ರದ್ದು, ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯವಲ್ಲ

ಷೇರುಮಾರುಕಟ್ಟೆ ವಹಿವಾಟುಗಳ ತೀವ್ರ ಕುಸಿತ ಮತ್ತು ತೀವ್ರ ಏರಿಳಿತ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ಸಚಿವಾಲಯ, ಸೆಬಿ ಮತ್ತಿತರ ನಿಯಂತ್ರಣ ಪ್ರಾಧಿಕಾರಗಳು ಒಗ್ಗೂಡಿ ನಿಗಾ ವಹಿಸಿವೆ. ತ್ವರಿತ ಏರಿಳಿತ ತಗ್ಗಿಸುವ ಸಲುವಾಗಿ ಸೆಬಿ ಕೆಲವು ಮಾರ್ಗಸೂಚಿಗಳನ್ನು ರೂಪಿಸಲಿದೆ. ನಿತ್ಯವೂ ಮೂರು ಬಾರಿ ಷೇರುಪೇಟೆ ವಹಿವಾಟುಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದೂ ನಿರ್ಮಲಾ ಸೀತಾರಾಮನ್ ವಿವರಿಸಿದರು.

ಇಡೀ ಹಣಕಾಸು ಮಾರುಕಟ್ಟೆ ಕೇಂದ್ರ ಸರ್ಕಾರ ಪ್ರಕಟಿಸಲಿರುವ ಹಣಕಾಸು ಪರಿಹಾರ ಕ್ರಮಗಳತ್ತ ಬಹಳ ನಿರೀಕ್ಷೆಯಿಂದ ನೋಡುತ್ತಿದೆ. ಬಹುತೇಕ ದೇಶಗಳು ಈಗಾಗಲೇ ಹಣಕಾಸು ಪರಿಹಾರ ಕ್ರಮಗಳನ್ನು ಘೋಷಿಸಿವೆ. ಭಾರತವಿನ್ನೂ ಮೀನಾಮೇಷ ಎಣಿಸುತ್ತಿದೆ.

Click here Support Free Press and Independent Journalism

Pratidhvani
www.pratidhvani.com