ನಿರ್ಭಯಾ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಮುಚ್ಚಿಟ್ಟ ಸತ್ಯವೇನು..?
ರಾಷ್ಟ್ರೀಯ

ನಿರ್ಭಯಾ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಮುಚ್ಚಿಟ್ಟ ಸತ್ಯವೇನು..?

ನಾವು ಸಂಕಷ್ಟದಲ್ಲಿದ್ದಾಗ ರಾಹುಲ್‌ ಗಾಂಧಿ ಮಾನವೀಯತೆಯಿಂದ ಸಹಾಯ ಮಾಡಿದ್ದಾರೆ. ನನ್ನ ಮಗ ರಾಹುಲ್‌ ಗಾಂಧಿ ಸಹಾಯದಿಂದಲೇ ಇಂದು ಪೈಲಟ್‌ ಆಗಿದ್ದು, ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೃಷ್ಣಮಣಿ

2012ರ ಡಿಸೆಂಬರ್‌ 16ರ ರಾತ್ರಿ ನಡೆದಿದ್ದ ಘನಘೋರ ದುರಂತವೊಂದು ದೆಹಲಿಯನ್ನಷ್ಟೇ ಅಲ್ಲ, ಇಡೀ ಭಾರತ ದೇಶವನ್ನೇ ಕಣ್ಣೀರ ಕೂಪಕ್ಕೆ ತಳ್ಳಿಬಿಟ್ಟಿತ್ತು. 6 ಮಂದಿ ನರ ರಾಕ್ಷಸರು ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಎರಗಿ ತಮ್ಮ ಅಟ್ಟಹಾಸ ಮೆರೆದಿದ್ದರು. ಸಾಮೂಹಿಕ ಅತ್ಯಾಚಾರದ ಬಳಿಕ ಗುಪ್ತಾಂಗಕ್ಕೆ ಕಬ್ಬಿಣದ ಸರಳು ಹಾಕಿದ್ದ ಕಾರಣ ಎಷ್ಟೇ ಪ್ರಯತ್ನ ಮಾಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂದು ಇಡೀ ದೇಶವೇ ನಿರ್ಭಯಾ ಕುಟುಂಬದ ಜೊತೆ ನಿಂತಿತ್ತು. ನಿರ್ಭಯಾ ಭಾರತದ ಮಗಳು ಎಂದು ಎದ್ದು ನಿಂತ ಭಾರತೀಯರು, ಪ್ರತಿಭಟನೆ ನಡೆಸಿದ್ದರು. ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು, ಪುರುಷತ್ವ ತೆಗೆಯಬೇಕು, ಈ ರೀತಿಯ ಹೊಸ ಕಾನೂನನ್ನೇ ಜಾರಿಗೆ ತರಬೇಕು ಎಂದು ಕೂಗು ಎದ್ದಿತ್ತು. ಅಂದಿನ ಯುಪಿಎ ಸರ್ಕಾರವೂ ನಿರ್ಭಯಾ ಪೋಷಕರ ಜೊತೆ ಕೈ ಜೋಡಿಸಿತ್ತು. ನಿರ್ಭಯಾ ಬದುಕಿಸಲು ಸಾಕಷ್ಟು ಪ್ರಯತ್ನವನ್ನೇ ಮಾಡಿತ್ತು. ಸಿಂಗಾಪುರದಲ್ಲಿ ಚಿಕಿತ್ಸೆ ಕೊಡಿಸಿದರೂ ನಿರ್ಭಯಾಳನ್ನು ಬದುಕಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮಾರ್ಚ್‌ 20ರಂದು ಆರು ಆರೋಪಿಗಳಲ್ಲಿ ಉಳಿದ ನಾಲ್ವರನ್ನು ಗಲ್ಲಿಗೇರಿಸಿದ್ದಾರೆ. ಇಷ್ಟು ಮಾತ್ರಕ್ಕೆ ನಿರ್ಭಯಾ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಂತಾಗಿದೆ. ಆದರೆ ಈ ನಡುವೆ ರಾಹುಲ್‌ ಗಾಂಧಿ ವಿಚಾರ ಬಯಲಾಗಿದೆ. ಕಳೆದ ಏಳೂವರೆ ವರ್ಷದಿಂದ ಮುಚ್ಚಿಟ್ಟಿದ್ದ ಸತ್ಯವೊಂದು ಬಯಲಾಗಿದೆ. ಆದರೆ ಅದು ಸತ್ಯವೋ ಸುಳ್ಳೋ ಎನ್ನುವ ಗೊಂದಲವೂ ನಿರ್ಮಾಣವಾಗಿದೆ.

ಮಾರ್ಚ್‌ 20ರ ಮುಂಜಾನೆ 5 ಗಂಟೆ 30 ನಿಮಿಷಕ್ಕೆ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್‌ಗಳು ಹರಿದಾಡಿದ್ದವು. ನಿರ್ಭಯಾ ಸಹೋದರನಿಗೆ ರಾಹುಲ್‌ ಗಾಂಧಿ ಸಹಾಯ ಮಾಡಿದ್ದಾರೆ ಎಂದು ಪೋಸ್ಟ್‌ ಹರಿದಾಡಿತ್ತು. ರಾಹುಲ್‌ ಗಾಂಧಿ ಸಹಾಯವನ್ನು ನಿರ್ಭಯಾ ತಂದೆ ಸ್ಮರಿಸಿದ್ದಾರೆ ಎನ್ನುವ ವರದಿಗಳ ಬಗ್ಗೆಯೂ ಪೋಸ್ಟ್‌ ಬಂದಿದ್ದವು. ನನ್ನ ಮಗ ಪೈಲಟ್‌ ಆಗುವುದಕ್ಕೆ ರಾಹುಲ್‌ ಗಾಂಧಿಯೇ ಕಾರಣ ಎಂದಿದ್ದರು. ನಿರ್ಭಯಾ ತಾಯಿ ಕೂಡ ನಾವು ರಾಹುಲ್‌ ಗಾಂಧಿಗೆ ಜೀವನ ಪೂರ್ತಿ ಚಿರಋಣಿ ಎಂದಿದ್ದಾರೆ ಎನ್ನುವ ಪೋಸ್ಟ್‌ನಲ್ಲಿತ್ತು. ಆದರೆ ವಾಟ್ಸಪ್‌ನಲ್ಲಿ ಬರುವ ಸುದ್ದಿಗಳನ್ನು ನಂಬುವುದು ಕಷ್ಟ. ಇದೆಲ್ಲಾ ಸುಳ್ಳು ಎನ್ನುವ ಬಗ್ಗೆ ಸಾಕಷ್ಟು ಮಂದಿ ಟ್ವೀಟ್‌ ಕೂಡ ಮಾಡಿದ್ದರು. ಅದರಲ್ಲಿ ಪ್ರಶಾಂತ್‌ ಪ್ರಭಾಸ್‌ ಎಂಬುವರು ಟ್ವೀಟ್‌ ಮಾಡಿ ನಿರ್ಭಯಾ ಸಹೋದರ ಪೈಲಟ್‌ ಅಲ್ಲ. ಸುಖಾ ಸುಮ್ಮನೆ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ ಎಂದಿದ್ದರು. ಈ ಬಗ್ಗೆ ಸಾಕಷ್ಟು ಜನರು ಪರ ವಿರೋಧ ಚರ್ಚೆ ನಡೆಸಿದ್ದರು.

ನಿರ್ಭಯಾ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಮುಚ್ಚಿಟ್ಟ ಸತ್ಯವೇನು..?

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಿಯೋ ಇಂಟರ್‌ನೆಟ್‌ ಸೇವೆ ಅಗ್ಗದ ದರದಲ್ಲಿ ಸಿಗುವಂತಾಯ್ತು. ಆ ಬಳಿಕ ವಾಟ್ಸಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ನರೇಂದ್ರ ಮೋದಿ ಪರವಾಗಿ ಇಲ್ಲದೆ ಇರುವ ಸುದ್ದಿಗಳನ್ನು ಹೌದು ಎನ್ನುವಂತೆ ಹರಿಯಬಿಡುವ ಸಾಕಷ್ಟು ಕಂಪನಿಗಳು ಹುಟ್ಟಿಕೊಂಡವು. ಜನರನ್ನು ನಂಬಿಸುವ ಕೆಲಸ ಮಾಡುವುದು ಅಷ್ಟೇ ಅವರ ಕಾಯಕವಾಗಿತ್ತು. ಆ ಬಳಿಕ ಅದೇ ದಾರಿ ಹಿಡಿದ ಹಲವು ರಾಜಕೀಯ ಪಕ್ಷಗಳು ತಮ್ಮ ತಮ್ಮ ನಾಯಕರ ಪರ ಪ್ರಚಾರದ ಗೀಳು ಹುಟ್ಟಿಸುವ ಪೋಸ್ಟ್‌ಗಳು ವೈರಲ್‌ ಆಗುವಂತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಪೋಸ್ಟ್‌ ಕೂಡ ಅದೇ ರೀತಿಯ ಒಂದು ಪೋಸ್ಟ್‌ ಎಂದು ಸಾಕಷ್ಟು ಜನರು ಇದನ್ನು ಪರಿಶೀಲಿಸಲು ಮುಂದಾಗಿದ್ದರು. ಆದರೆ, ಇದೀಗ ಪೋಷಕರು ಹೇಳಿರುವ ಮಾತು ಮಾನವೀಯ ಗುಣವನ್ನು ಹೊರಗೆ ಹಾಕುವಂತೆ ಮಾಡಿದೆ.

13 ದಿನಗಳ ಕಾಲ ಸಾವು ಬದುಕಿನ ಜೊತೆ ಹೋರಾಟ ನಡೆಸಿದ್ದ ನಿರ್ಭಯಾ ಸಾವನ್ನಪ್ಪಿದ ಬಳಿಕ ನಿರ್ಭಯಾ ಕುಟುಂಬ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿತ್ತು. ಆ ವೇಳೆ ನಿರ್ಭಯಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದ ರಾಹುಲ್‌ ಗಾಂಧಿ, ಪಿಯುಸಿ ಮುಗಿಸಿದ್ದ ನಿರ್ಭಯಾ ಸಹೋದರ ಇಂದಿರಾ ಗಾಂಧಿ ರಾಷ್ಟ್ರೀಯ ಉರ್ರಾನ್‌ ಅಕಾಡೆಮಿಗೆ ಸೇರಲು ಹಣದ ಸಹಾಯ ಮಾಡಿದ್ದರು. ರಾಯ್‌ ಬರೇಲಿಯ ಈ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಕಾಲೇಜಿನ ಫೀಸ್‌ ಕಟ್ಟಿದ್ದರು. ಈ ವಿಚಾರ ಅಂದಿನಿಂದ ಇಂದಿನವರೆಗೂ ತುಂಬಾ ಸೀಕ್ರೆಟ್‌ ಆಗಿತ್ತು. ಅಂದು ಸಹಾಯ ಮಾಡಿದ್ದ ರಾಹುಲ್‌ ಗಾಂಧಿ, ಈ ಸಹಾಯವನ್ನು ನಾನು ರಾಜಕೀಯ ಕಾರಣದಿಂದ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಕೇವಲ ಮಾನವೀಯತೆಗಾಗಿ ಸಹಾಯ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಹೊರಗಡೆ ಯಾರಿಗೂ ಹೇಳಬೇಡಿ ಎಂದು ಮನವಿ ಮಾಡಿದ್ದರು. ಹಾಗಾಗಿ ಅವರಿಗೆ ನಾವು ಧನ್ಯವಾದ ಹೇಳಲು ಸಾಧ್ಯವಾಗಲಿಲ್ಲ ಎಂದು ಇಂಡೋ ಏಷ್ಯನ್‌ ನ್ಯೂಸ್‌ ಸರ್ವೀಸ್‌ ಜೊತೆ ಮಾತನಾಡುತ್ತಿದ್ದಾಗ ನಿರ್ಭಯಾ ತಂದೆ ಬದ್ರಿನಾಥ್‌ ಸಿಂಗ್‌ ಹೇಳಿಕೊಂಡಿದ್ದಾರೆ.

ನಿರ್ಭಯಾ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಮುಚ್ಚಿಟ್ಟ ಸತ್ಯವೇನು..?

ಈ ಬಗ್ಗೆ ಇದೀಗ ಮಾತನಾಡಿರುವ ನಿರ್ಭಯಾ ತಂದೆ ಬದ್ರಿನಾಥ್‌, ನಾನು ಯಾವುದೇ ರಾಜಕೀಯ ಪಕ್ಷದಲ್ಲೂ ಕೆಲಸ ಮಾಡಿಲ್ಲ. ನನಗೆ ರಾಜಕೀಯ ಇಷ್ಟವೂ ಇಲ್ಲ. ಆದರೆ ಅಂದು ನಾವು ಸಂಕಷ್ಟದಲ್ಲಿದ್ದಾಗ ರಾಹುಲ್‌ ಗಾಂಧಿ ಮಾನವೀಯತೆಯಿಂದ ಸಹಾಯ ಮಾಡಿದ್ದಾರೆ. ನನ್ನ ಮಗ ರಾಹುಲ್‌ ಗಾಂಧಿ ಸಹಾಯದಿಂದಲೇ ಇಂದು ಪೈಲಟ್‌ ಆಗಿದ್ದು, ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿರ್ಭಯಾ ತಾಯಿ ಮಾತನಾಡಿದ್ದು ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಸಹ ಸಾಕಷ್ಟು ಬಾರಿ ಫೋನ್‌ನಲ್ಲಿ ನನ್ನ ಜೊತೆ ಮಾತನಾಡಿದ್ದು, ಇಡೀ ಕುಟುಂಬದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದರು. ಅವರು ನಮ್ಮ ಬದುಕಿಗೆ ದೇವರಾಗಿ ಬಂದಿದ್ದಾರೆ. ನಾವು ಜೀವನ ಪೂರ್ತಿ ಚಿರಋಣಿ ಆಗಿರುತ್ತೇವೆ ಎಂದಿದ್ದಾರೆ. ಈ ಸುದ್ದಿ ಸಾಕಷ್ಟು ಪ್ರಚಾರ ಪಡೆಯದೆ ಇರಬಹುದು. ಆದರೆ ರಾಹುಲ್‌ ಗಾಂಧಿ ಸಹಾಯ ಮಾಡಿರುವುದು ದೊಡ್ಡ ವಿಚಾರವೂ ಅಲ್ಲದಿರಬಹುದು. ಆದರೆ, ಹುಟ್ಟುವಾಗಲೇ ಚಿನ್ನದ ಸ್ಪೂನ್‌ ಬಾಯಲ್ಲಿಟ್ಟು ಹುಟ್ಟಿದ ರಾಹುಲ್‌ ಗಾಂಧಿಗೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮಾನವೀಯ ಗುಣ ಇದೆ ಎನ್ನುವುದು ಮಾತ್ರ ಸಾಬೀತಾಗುತ್ತದೆ.

Click here Support Free Press and Independent Journalism

Pratidhvani
www.pratidhvani.com