ಶಾಹಿನ್‌ ಬಾಗ್‌ CAA ಪ್ರತಿಭಟನಾ ಸ್ಥಳದಲ್ಲಿ ಪೆಟ್ರೋಲ್‌ ಬಾಂಬ್‌ ದಾಳಿ 
ರಾಷ್ಟ್ರೀಯ

ಶಾಹಿನ್‌ ಬಾಗ್‌ CAA ಪ್ರತಿಭಟನಾ ಸ್ಥಳದಲ್ಲಿ ಪೆಟ್ರೋಲ್‌ ಬಾಂಬ್‌ ದಾಳಿ 

ಕರೋನಾ ವೈರಸ್‌ ಹರಡುವ ಭೀತಿಯಲ್ಲಿ ಹೋರಾಟಗಾರರು ಮಧ್ಯಂತರವಾಗಿ ಹೋರಾಟ ಸ್ಥಗಿತ ಮಾಡಿದ್ದು, ಮಾರ್ಚ್‌ 31ರ ತನಕ ತಮ್ಮ ಮನೆಗಳಿಗೆ ವಾಪಸ್‌ ಆಗಿದ್ದರು. ಆದರೆ ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹೊರಗೆ ದುಷ್ಕರ್ಮಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ, ಪೆಟ್ರೋಲ್‌ ಬಾಂಬ್‌ ದಾಳಿ ಮಾಡಿದ್ದಾನೆ.

ಕೃಷ್ಣಮಣಿ

ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) ವಿರೋಧಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಆ ಬಳಿಕ ದೇಶದಲ್ಲಿ‌ ಮಹಾಮಾರಿ ಕರೋನಾ ಅಟ್ಟಹಾಸ ಶುರು ಮಾಡಿದ ಬಳಿಕ ಪೌರತ್ವ ತಿದ್ದುಪಡಿ ವಿರುದ್ದದ ಹೋರಾಟ ನಿಧಾನವಾಗಿ ಕಡಿಮೆಯಾಗಿತ್ತು. ಆದರೆ ದೆಹಲಿಯ ಶಾಹಿನ್‌ ಭಾಗ್‌ನಲ್ಲಿ ನಡೆಯುತ್ತಿದ್ದ ನಿರಂತರ ಹೋರಾಟ ಮಾತ್ರ ಅಂತ್ಯವಾಗಿರಲಿಲ್ಲ. ನರೇಂದ್ರ ಮೋದಿ ಭಾರತದಲ್ಲಿ ಜನತಾ ಕರ್ಫ್ಯೂ ಆಚರಣೆ ಮಾಡಲು ಕರೆ ಕೊಟ್ಟಿದ್ದರಿಂದ ಭಾನುವಾರ ಶಾಹಿನ್‌ಭಾಗ್‌ನ ಹೋರಾಟಗಾರರು ಮಾರ್ಚ್‌ 31ರ ತನಕ ಹೋರಾಟಕ್ಕೆ ಮಧ್ಯಂತರ ಬ್ರೇಕ್‌ ಕೊಟ್ಟು ಮತ್ತೆ ಮಾರ್ಚ್‌ 31ರ ಬಳಿಕ ಹೋರಾಟ ಮಾಡೋಣ ಎಂದು ನಿರ್ಧಾರ ಮಾಡಿದ್ದರು. ಈ ನಿರ್ಧಾರದ ಬಳಿಕ ನಡೆದ ಘಟನೆ ದೆಹಲಿಯ ಕಾನೂನು ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ.

ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಭಿಕರವಾದ ಹಿಂಸಾಚಾರ ನಡೆದಿತ್ತು. ಹೆಚ್ಚು ಕಡಿಮೆ ಒಂದು ತಿಂಗಳ ಹಿಂದೆ ನಡೆದ ಹಿಂಸಾಚಾರದಲ್ಲಿ 45ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸ ಕೈಗೊಂಡಿದ್ದ ಮರುದಿನವೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ, ಗುಪ್ತಚರ ಇಲಾಖೆ ಅಧಿಕಾರಿ ಹತ್ಯೆ, ಪೆಟ್ರೋಲ್‌ ಬಾಂಬ್‌ ಎಸೆತ ಸೇರಿದಂತೆ ಸಾಕಷ್ಟು ಘಟನೆಗಳು ನಡೆದಿದ್ದವು. ಆ ಬಳಿಕ ಘರ್ಷಣೆಯನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಕಿಡಿಗೇಡಿಗಳು ಬಂದೂಕಿನಿಂದ ಗುಂಡು ಹಾರಿಸಿದ್ದ ಘಟನೆಯೂ ನಡೆದಿತ್ತು. ಇಷ್ಟೆಲ್ಲಾ ಘಟನೆ ಬಳಿಕ ಇಡೀ ದೇಶವೇ ಆಕ್ರೋಶಕ್ಕೆ ಒಳಗಾಗಿತ್ತು. ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಮತ್ತೊಮ್ಮೆ ಅದೇ ರೀತಿಯ ಘಟನೆಗಳು ನಡೆದಿವೆ.

ಕರೋನಾ ವೈರಸ್‌ ಹರಡುವ ಭೀತಿಯಲ್ಲಿ ಹೋರಾಟಗಾರರು ಮಧ್ಯಂತರವಾಗಿ ಹೋರಾಟ ಸ್ಥಗಿತ ಮಾಡಿದ್ದು, ಮಾರ್ಚ್‌ 31ರ ತನಕ ತಮ್ಮ ಮನೆಗಳಿಗೆ ವಾಪಸ್‌ ಆಗಿದ್ದರು. ಆದರೆ ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹೊರಗೆ ದುಷ್ಕರ್ಮಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ, ಪೆಟ್ರೋಲ್‌ ಬಾಂಬ್‌ ದಾಳಿ ಮಾಡಿದ್ದಾನೆ. ಆತನ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಡೆಲಿವೆರಿ ಬಾಯ್‌ ರೂಪದಲ್ಲಿ ಬಂದಿದ್ದ ಆಗಂತುಕ ಗೇಟ್‌ ನಂಬರ್‌ 7ರ ಬಳಿ ಪೆಟ್ರೋಲ್‌ ಬಾಂಬ್‌ ಎಸೆದಿದ್ದಾನೆ. ಗಾಡಿಯಲ್ಲಿ ಮೂರು ಬ್ಯಾಗ್‌ ನೇತು ಹಾಕಿದ್ರಿಂದ ಆ ವಾಹನದ ನಂಬರ್‌ ಪ್ಲೇಟ್‌ ಬೇರೆ ಕಾಣಿಸಿಲ್ಲ. ಪೊಲೀಸರು ಗುಂಡು ಹಾಗು ಐದಾರು ಬಾಟೆಲ್‌ಗಳನ್ನು ವಶಕ್ಕೆ ಪಡೆದಿದ್ದು, ಆರೋಪಿ ಪತ್ತೆಗಾಗಿ ಜಾಡು ಹಿಡಿದಿದ್ದಾರೆ.

ಪೊಲೀಸರು ದೆಹಲಿಯಲ್ಲಿ ಹಿಂಸಾಚಾರ ನಡೆಯುವಾಗಲೂ ಸೂಕ್ತ ಕ್ರಮಕೈಗೊಂಡಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಅದಕ್ಕೂ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ವೇಳೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸುತ್ತಿದ್ದ. ಪಕ್ಕದಲ್ಲೇ ಮೂಕ ಪ್ರೇಕ್ಷರಂತೆ ನಿಂತಿದ್ದ ಪೊಲೀಸರು ಸಾಥ್‌ ಕೊಡ್ತಿದ್ದಾರಾ ಎನ್ನುವಂತೆ ಭಾಸವಾಗುವಂತಿತ್ತು. ದೆಹಲಿ ಗಲಭೆ ಬಳಿಕ ನೂರಾರು ಎಫ್‌ಐಆರ್‌ ಹಾಕಿದ್ದ ಪೊಲೀಸರು ಸಾವಿರಾರು ಜನರನ್ನು ಬಂಧಿಸಿದ್ದರು. ಆ ಬಳಿಕವೂ ಪೊಲೀಸರು ದುಷ್ಕರ್ಮಿಗಳನ್ನು ಮಟ್ಟಹಾಕುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗ್ತಿದೆ. ಪೊಲೀಸ್‌ ಇಲಾಖೆ ದೆಹಲಿ ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲದೆ ಇರುವುದು ಇಷ್ಟೆಲ್ಲಾ ರಂಪಾಟಕ್ಕೆ ಕಾರಣ. ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿ ಗುಪ್ತಚರ ಇಲಾಖೆ ಸೇರಿದಂತೆ ಸಾಕಷ್ಟು ಇಲಾಖೆಗಳಿದ್ದು, ದೆಹಲಿಯ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಲ್ಲಿ ವಿಫಲವಾಗ್ತಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಪ್ರತಿಭಟನಾಕಾರರು ಜಾಗ ಖಾಲಿ ಮಾಡಿದ್ದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಒಂದು ವೇಳೆ ನೂರಾರು ಮಹಿಳೆಯರು ಪ್ರತಿಭಟನೆ ನಡೆಸುವ ಸಮಯದಲ್ಲಿ ಈ ಘಟನೆ ನಡೆದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಆದರೆ, ಇದೀಗ ನಡೆದಿರುವ ಘಟನೆ ಮಾರ್ಚ್‌ 31ರ ಬಳಿಕ ಮತ್ತೊಮ್ಮೆ ಪ್ರತಿಭಟನೆ ನಡೆಸಬಾರದು ಎನ್ನುವ ಕಾರಣಕ್ಕೆ ಬೆದರಿಸುವ ತಂತ್ರ ಮಾಡಿದ್ದಾರೆ ಎನ್ನಲಾಗ್ತಿದೆ. ಪೊಲೀಸರು ಈಗಲಾದ್ರೂ ಕಠಿಣ ಕ್ರಮ ಕೈಗೊಳ್ತಾರಾ ಎನ್ನುವುದನ್ನು ಕಾದು ನೋಡ್ಬೇಕು.

Click here Support Free Press and Independent Journalism

Pratidhvani
www.pratidhvani.com