ಕೆಂಪು ಉಗ್ರರ ರಕ್ತದಾಹಕ್ಕೆ ಇನ್ನೆಷ್ಟು ಯೋಧರು ಬಲಿಯಾಗಬೇಕಿದೆ..!?
ರಾಷ್ಟ್ರೀಯ

ಕೆಂಪು ಉಗ್ರರ ರಕ್ತದಾಹಕ್ಕೆ ಇನ್ನೆಷ್ಟು ಯೋಧರು ಬಲಿಯಾಗಬೇಕಿದೆ..!?

ಹಾಗಂತ ಭಾರತೀಯ ಯೋಧರು ಹಿಂದೆ ತಿರುಗಿ ನೋಡಿದ್ದಿಲ್ಲ. ಈ ಆಂತರಿಕ ಉಗ್ರರಿಗೆ ಅನೇಕ ಬಾರಿ ತಿರುಗೇಟು ನೀಡುತ್ತಲೇ ಬಂದಿದ್ದಾರೆ. ಪರಿಣಾಮ ಕಿಶನ್‌ ಜೀ ಅಂತಹ ಪ್ರಮುಖ ನಕ್ಸಲ್‌ ನಾಯಕರಿಗೂ ಭದ್ರತಾ ಸಿಬ್ಬಂದಿಗಳು ಒಂದು ಗತಿ ಕಾಣಿಸಿದ್ದಾರೆ. ಕಳೆದ 9 ವರುಷಗಳಲ್ಲಿ ದೇಶಾದ್ಯಂತ ಹತ್ತು ರಾಜ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಯಿಂದಾಗಿ ಇದುವರೆಗೂ 3,749 ಮಂದಿ ಮಾವೋಗಳು ಸಾವನ್ನಪ್ಪಿದ್ದಾರೆ.

ಮೊಹಮ್ಮದ್‌ ಇರ್ಷಾದ್‌

ಛತ್ತೀಸ್‌ಗಡ ರಾಜ್ಯದಲ್ಲಿ ಕೆಂಪು ಉಗ್ರರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಅದ್ಯಾವ ರಾಜ್ಯದಲ್ಲಿ ನಕ್ಸಲ್‌ ಪ್ರಭಾವ ಕ್ಷೀಣಿಸುತ್ತಿದೆ ಎಂದು ಭಾವಿಸುತ್ತಿದ್ದೆವೋ ಅದೇ ರಾಜ್ಯದಲ್ಲಿ 17 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್‌ ವಿರುದ್ಧದ ಕಾರ್ಯಾಚರಣೆ ಸಂದರ್ಭ ಮಿನ್ಪಾ ಎನ್ನುವ ಗ್ರಾಮದ ಬಳಿ ಸುತ್ತುವರಿದ ಸುಮಾರು 250 ರಷ್ಟಿದ್ದ ನಕ್ಸಲರು ಯೋಧರ ಮೇಲೆ ದಾಳಿ ನಡೆಸಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾದಾಟದ ಬಳಿಕ ನಾಲ್ಕರಿಂದ ಐದರಷ್ಟು ನಕ್ಸಲರು ಸಾವನ್ನಪ್ಪಿ, ಹದಿನೈದರಷ್ಟು ಮಂದಿ ಮಾವೋಗಳು ಗಾಯಗೊಂಡಿರುವುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಾರ್ಯಾಚರಣೆ ವೇಳೆ 15 ಮಂದಿ ಯೋಧರು ಗಾಯಗೊಂಡಿದ್ದರು. ಅಲ್ಲದೇ ೧೭ ಜನ ಯೋಧರು ನಾಪತ್ತೆಯಾಗಿದ್ದರು. ಆದರೆ ಇದೀಗ ಆ ಹದಿನೈದು ಮಂದಿಯ ಮೃತದೇಹ ಸಿಕ್ಕಿದ್ದು ಕೆಂಪು ಉಗ್ರರ ಅಟ್ಟಹಾಸಕ್ಕೆ ಸಾಕ್ಷಿ ಹೇಳುತ್ತಿದೆ. ಜಿಲ್ಲಾ ಮೀಸಲು ರಕ್ಷಣಾ ಪಡೆ, ವಿಶೇಷ ಕಾರ್ಯಪಡೆ ಹಾಗೂ ಕೋಬ್ರಾ ಕಮಾಂಡೋ ಪಡೆ ಮತ್ತು ಸಿಆರ್‌ಪಿಎಫ್‌ ಯೋಧರು ಸೇರಿಕೊಂಡು ಎಲ್ಮಗುಂಡದಲ್ಲಿ ನಕ್ಸಲರ ವಿರುದ್ಧ ಮೂರು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ಈ ಘಟನೆ ನಡೆದಿತ್ತು. ಹುತಾತ್ಮರಾದ ಯೋಧರ ಜೊತೆಗಿದ್ದ ಶಸ್ತ್ರಾಸ್ತ್ರಗಳನ್ನ ಮಾವೋವಾದಿಗಳು ದೋಚಿ ಪರಾರಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಛತ್ತೀಸ್‌ಗಡ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ನಿಧಾನಗತಿಯಾಗಿ ಕ್ಷೀಣಿಸುತ್ತಾ ಬಂದಿತ್ತು. ಆ ರಾಜ್ಯದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೇ ರಾಜ್ಯದಲ್ಲಿ ಶೇಕಡಾ 39 ರಷ್ಟು ನಕ್ಸಲ್‌ ಚಟುವಟಿಕೆ ಕಡಿಮೆಯಾಗಿರುವುದಾಗಿ ಕಳೆದ ವರ್ಷ ತಿಳಿಸಿದ್ದರು. ಇದು ಕೇವಲ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿಯೇ ಇಂದು ನಕ್ಸಲ್‌ ಚಟುವಟಿಕೆ ಇಳಿಮುಖವಾಗಿದೆ ಅನ್ನೋದನ್ನು ಸಾಬೀತುಪಡಿಸಿತ್ತು. ಸ್ವತಃ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಇದನ್ನು ಸ್ಪಷ್ಟಪಡಿಸಿದ್ದರು. ದೇಶದ 60 ಜಿಲ್ಲೆಗಳಲ್ಲಷ್ಟೇ ಪ್ರಸ್ತುತ ನಕ್ಸಲ್‌ ಪ್ರಭಾವವಿದ್ದು, ಅದರಲ್ಲೂ 10 ಜಿಲ್ಲೆಗಳಲ್ಲಷ್ಟೇ ನಕ್ಸಲರ ಕಾರ್ಯಚಟುವಟಿಕೆ ಇರುವುದಾಗಿ ಪ್ರಧಾನ ಮಂತ್ರಿಯವರು ಕಳೆದ ಜುಲೈ ತಿಂಗಳಿನಲ್ಲಿ ತಿಳಿಸಿದ್ದರು.

ಕೆಂಪು ಉಗ್ರರ ರಕ್ತದಾಹಕ್ಕೆ ಇನ್ನೆಷ್ಟು ಯೋಧರು ಬಲಿಯಾಗಬೇಕಿದೆ..!?

ಇದಕ್ಕೂ ಜಾಸ್ತಿಯಾಗಿ ಛತ್ತೀಸ್‌ಗಡದ ನಕ್ಸಲ್‌ ಚಟುವಟಿಕೆ ಕೊನೆಗಾಣುತ್ತೆ ಅನ್ನೋ ದೊಡ್ಡ ಭರವಸೆ ಮೂಡಿಸಿದ್ದು ನಕ್ಸಲ್‌ ನಾಯಕ, ಕಿರಾತಕ ರಾಮಣ್ಣ ಅಲಿಯಾಸ್‌ ನರೇಂದ್ರ ಅಲಿಯಾಸ್‌ ರಾವುಲ್ಲ ಶ್ರೀನಿವಾಸ್ ನ ಅನಿರೀಕ್ಷಿತ ಸಾವು..‌ ಸುಮಾರು ನಾಲ್ಕು ದಶಕಗಳಿಂದ ನಕ್ಸಲ್‌ ಚಟುವಟಿಕೆಯಲ್ಲಿ ಈತ ನಡೆಸಿದ ಹಿಂಸಾಕೃತ್ಯ ಲೆಕ್ಕವಿಲ್ಲದಷ್ಟು. ಛತ್ತೀಸ್‌ಗಡ, ಮಧ್ಯಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಈತನ ಮೇಲೆ 32 ಎಫ್‌ಐಆರ್‌ ದಾಖಲಾಗಿದ್ದವು. ಈ ನಾಲ್ಕೂ ರಾಜ್ಯಗಳೂ ಈತನೊಬ್ಬನ ತಲೆದಂಡಕ್ಕೆ 1.37 ಕೋಟಿ ರೂಪಾಯಿ ಘೋಷಿಸಿತ್ತು. ಆದರೆ ಅತ್ಯಂತ ಚಾಣಕ್ಷನಾಗಿದ್ದ ಈತ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ನಕ್ಸಲ್‌ ಸಂಘಟನೆ ಕಟ್ಟುವಲ್ಲಿ ಯಶಸ್ವಿಯಾಗಿದ್ದ. ಆದರೆ ಕಳೆದ ವರುಷ ಡಿಸೆಂಬರ್‌ ಮೊದಲ ವಾರಕ್ಕೆ ಈತ ಹೃದಯಾಘಾತದಿಂದ ಮೃತಪಟ್ಟಿದ್ದ. ಅಲ್ಲಿವರೆಗೂ ಛತ್ತೀಸ್‌ಗಡ ರಾಜ್ಯದಲ್ಲಿಯೇ ಅತ್ಯಂತ ಕ್ಷಿಪ್ರ ಗತಿಯಲ್ಲಿ ನಕ್ಸಲ್‌ ಸಂಘಟನೆ ಕಟ್ಟಿ ದೇಶದ ವಿರುದ್ಧ ಕೃತ್ಯ ಎಸಗಲು ಈತ ನೀಡುತ್ತಿದ್ದ ದುರ್ಬೋಧನೆಗಳೇ ಅಲ್ಲಿದ್ದ ಯುವಕರಿಗೆ ಸಾಕಾಗುತ್ತಿತ್ತು. ಆದರೆ ಈತನ ಸಾವಿನಿಂದ ನಿರೀಕ್ಷಿಸಿದ್ದ ಬದಲಾವಣೆ ಇದೀಗ ಸುಳ್ಳಾಗುತ್ತಿದೆಯೋ ಏನೋ ಅನ್ನುವ ಅನುಮಾನ ಶುರು ಮಾಡಿದೆ. ಅಷ್ಟಕ್ಕೂ ಈತನ ನಂತರ ಮುಗಿದೇ ಹೋಯ್ತು ಅಂತಿದ್ದ ನಕ್ಸಲ್‌ ಚಟುವಟಿಕೆ ಅದ್ಯಾರ ನಾಯಕತ್ವದಲ್ಲಿ ಮತ್ತೆ ತನ್ನ ಕ್ರೌರ್ಯ ಆರಂಭಿಸಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

2010 ರಿಂದ ಇತ್ತೀಚೆಗಿನವರೆಗೆ ಛತ್ತೀಸ್‌ಗಡ ರಾಜ್ಯದಲ್ಲಿ ನಡೆದ ಪ್ರಮುಖ ದಾಳಿಗಳು :

2010 ಏಪ್ರಿಲ್‌ 6 : ದಾಂತೇವಾಡದಲ್ಲಿ ದಾಳಿ ನಡೆಸಿದ್ದ ಕೆಂಪು ಉಗ್ರರು 75 ಮಂದಿ ಅರೆ ಸೇನಾಪಡೆ ಯೋಧರು ಹಾಗೂ ಓರ್ವ ರಾಜ್ಯ ಪೊಲೀಸ್‌ ಸಿಬ್ಬಂದಿ ಸೇರಿ 76 ಮಂದಿಯನ್ನು ಬಲಿಪಡೆದಿದ್ದರು.

17 ಮೇ 2010 : ಮತ್ತೆ ಅದೇ ದಾಂತೇವಾಡದ 50 ಕಿಲೋ ಮೀಟರ್‌ ದೂರದಲ್ಲಿ ದಾಳಿ ನಡೆಸಿದ್ದ ನಕ್ಸಲರು ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಗಳು ತೆರಳುತ್ತಿದ್ದ ಸಾರ್ವಜನಿಕ ಬಸ್‌ ಮೇಲೆ ಬಾಂಬ್‌ ದಾಳಿ ನಡೆಸಿದ್ದರು. ಪರಿಣಾಮ ಸ್ಥಳೀಯ ನಾಗರಿಕರು ಸೇರಿದಂತೆ 44 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಅಲ್ಲದೇ 15 ಮಂದಿ ಗಂಭೀರ ಗಾಯಗೊಂಡಿದ್ದರು.

ಜೂನ್‌ 29, 2010 : ಛತ್ತೀಸ್‌ಗಡ ರಾಜ್ಯದ ನಾರಾಯಣಪುರದಲ್ಲಿ ನಡೆದ ಭೀಕರ ದಾಳಿಯಲ್ಲಿ 26 ಮಂದಿ ಸಿಆರ್‌ಪಿಎಫ್‌ ಯೋಧರು ಪ್ರಾಣ ತೆತ್ತಿದ್ದರು.

25 ಮೇ 2013 : ಛತ್ತೀಸ್‌ಗಡ ರಾಜ್ಯದ ಕಾಂಗ್ರೆಸ್‌ ನಾಯಕತ್ವದ ಬೆನ್ನುಮೂಳೆಯನ್ನೇ ಹೊಸಕಿ ಹಾಕುವ ರೀತಿಯಲ್ಲಿ ದರ್ಬಾ ಕಣಿವೆಯಲ್ಲಿ ಭೀಕರ ದಾಳಿ ನಡೆದಿತ್ತು. ಕಾಂಗ್ರೆಸ್‌ ನಾಯಕರು ಸೇರಿದಂತೆ ಒಟ್ಟು 25 ಮಂದಿ ಸಾವನ್ನಪ್ಪಿದ್ದರು. ಕೇಂದ್ರ ಸಚಿವ ವಿದ್ಯಾಚರಣ್‌ ಶುಕ್ಲಾ, ಕಾಂಗ್ರೆಸ್‌ ನಾಯಕ ನಂದಕುಮಾರ್‌ ಸಾವನ್ನಪ್ಪಿದ್ದರು. ಇನ್ನೋರ್ವ ವರಿಷ್ಠ ಮಹೇಂದ್ರ ಕರ್ಮನನ್ನು ೭೬ ಬಾರಿ ಇರಿದು ಕೊಲೆಗೈದಿದ್ದರು. ಅಂದು ʼಪರಿವರ್ತನ್‌ ಯಾತ್ರೆʼ ಮುಗಿಸಿ ಬರುತ್ತಿದ್ದವರ ಮೇಲೆ ನೂರಾರು ಸಂಖ್ಯೆಯಲ್ಲಿದ್ದ ನಕ್ಸಲರು ದರ್ಬಾ ಕಣಿವೆ ಬಳಿ ಅಡಗಿ ಕುಳಿತು ಅಮೋನಿಯಂ ನೈಟ್ರೇಟ್‌ ಬಳಸಿ ಸುಧಾರಿತ ನೆಲ ಬಾಂಬ್‌ ಸ್ಫೋಟಿಸಿ ಬಳಿಕ ದಾಳಿ ನಡೆಸಿದ್ದರು. ಇದರ ಹಿಂದೆ ನಕ್ಸಲ್‌ ನಾಯಕ ರಾಮಣ್ಣ ಪ್ರಮುಖ ಪಾತ್ರವಹಿಸಿದ್ದ. ಕಳೆದ ವರುಷ ಈ ವಿಚಾರ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ವಿರುದ್ಧದ ರಾಜಕೀಯ ಆರೋಪಕ್ಕೂ ಕಾರಣವಾಗಿತ್ತು.

ಮಾರ್ಚ್‌ 11, 2014 : ಸುಕ್ಮಾ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಮಾವೋ ಗುಂಪು 11 ಜನ ಭದ್ರತಾ ಸಿಬ್ಬಂದಿಗಳ ಬಲಿ ಪಡೆದಿತ್ತು.

24 ಏಪ್ರಿಲ್‌ 2017 : ಸುಕ್ಮಾದಲ್ಲಿ ನಡೆದ ನಕ್ಸಲರ ಭೀಕರ ದಾಳಿಯಲ್ಲಿ 25 ಮಂದಿ ಸಿಆರ್‌ಪಿಎಫ್‌ ಯೋಧರು ವೀರ ಮರಣವನ್ನಪ್ಪಿದ್ದರು. ಈ ಘಟನೆಯಲ್ಲಿ 7 ಮಂದಿ ಗಂಭೀರ ಗಾಯಗೊಂಡಿದ್ದರು.

ಮಾರ್ಚ್‌ 13, 2018 : ಸುಧಾರಿತ ಸ್ಫೋಟಕ (ಐಇಡಿ) ಬಳಸಿ ನಡೆಸಿದ ದಾಳಿಯಲ್ಲಿ ಸುಕ್ಮಾದಲ್ಲಿ 9 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು.

31 ಅಕ್ಟೋಬರ್‌ 2018 : ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಡಿಡಿ ವಾಹಿನಿ ವೀಡಿಯೋ ಜರ್ನಲಿಸ್ಟ್‌ ಹಾಗೂ ಇಬ್ಬರು ಪೊಲೀಸ್‌ ಸಿಬ್ಬಂದಿಗಳು ಸಾವನ್ನಪ್ಪಿದ್ದರು.

2019 ರ ಏಪ್ರಿಲ್‌ : ಬಸ್ತಾರ್‌ ಭಾಗದ ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು ನಾಲ್ವರು ಪೊಲೀಸರು ಬಸ್ತಾರ್‌ ಸಮೀಪ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದರು. ಇದು ಕಳೆದ ಲೋಕಸಭಾ ಚುನಾವಣೆ ನಡೆಯುವ ೪೮ ಗಂಟೆಗಳ ಮುನ್ನ ನಡೆದ ಘಟನೆಯಾಗಿತ್ತು. ಚುನಾವಣಾ ಪ್ರಚಾರ ಮುಗಿಸಿ ಬರುವ ಸಂದರ್ಭ ಈ ಘಟನೆ ನಡೆದಿತ್ತು.

ಹಾಗಂತ ಭಾರತೀಯ ಯೋಧರು ಹಿಂದೆ ತಿರುಗಿ ನೋಡಿದ್ದಿಲ್ಲ. ಈ ಆಂತರಿಕ ಉಗ್ರರಿಗೆ ಅನೇಕ ಬಾರಿ ತಿರುಗೇಟು ನೀಡುತ್ತಲೇ ಬಂದಿದ್ದಾರೆ. ಪರಿಣಾಮ ಕಿಶನ್‌ ಜೀ ಅಂತಹ ಪ್ರಮುಖ ನಕ್ಸಲ್‌ ನಾಯಕರಿಗೂ ಭದ್ರತಾ ಸಿಬ್ಬಂದಿಗಳು ಒಂದು ಗತಿ ಕಾಣಿಸಿದ್ದಾರೆ. ಕಳೆದ 9 ವರುಷಗಳಲ್ಲಿ ದೇಶಾದ್ಯಂತ ಹತ್ತು ರಾಜ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಯಿಂದಾಗಿ ಇದುವರೆಗೂ 3,749 ಮಂದಿ ಮಾವೋಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ಪ್ರಮುಖವಾಗಿ 2017 ರ ತನಕ 6 ಸಾವಿರದಷ್ಟಿದ್ದ ಶಸ್ತ್ರ ಸಜ್ಜಿತ ನಕ್ಸಲರ ಸಂಖ್ಯೆ ಸದ್ಯ 3500 ಕ್ಕೆ ಇಳಿದಿರುವುದಾಗಿ ಅಂದಾಜಿಸಲಾಗಿದೆ. ಆದರೂ ತಮ್ಮ ಅಸ್ತಿತ್ವ ತೋರಿಸಿಕೊಳ್ಳುವ ಇರಾದೆ ಹಾಗೂ ಗೊತ್ತು ಗುರಿಯಿಲ್ಲದ ನಕ್ಸಲರ ಹಿಂಸಾ ಹೋರಾಟಕ್ಕೆ ಸಹಜವಾಗಿಯೇ ಛತ್ತೀಸ್‌ಗಡ, ಜಾರ್ಖಂಡ್‌ ನಂತಹ ಪ್ರಖರ ನಕ್ಸಲ್‌ ಪ್ರದೇಶಗಳಲ್ಲೂ ಬೆಂಬಲ ಸಿಗದಾಗಿದೆ. ಅದಕ್ಕೂ ಜಾಸ್ತಿ ಬೆದರಿಸುವ ತಂತ್ರ ಮುಂದಿರಿಸಿ ಹಫ್ತಾ ವಸೂಲಿ ಮಾಡುವ ಮೂಲಕ ನಕ್ಸಲರು ಹೋರಾಟದ ಹೆಸರಲ್ಲಿ ನಡೆಸುತ್ತಿರುವ ಅನಾಚಾರಗಳೂ ಅವರನ್ನು ಈ ರಾಜ್ಯಗಳಲ್ಲಿ ಜನ ದೂರವಿಡುವಂತಾಗಿದೆ.

ಕೆಂಪು ಉಗ್ರರ ರಕ್ತದಾಹಕ್ಕೆ ಇನ್ನೆಷ್ಟು ಯೋಧರು ಬಲಿಯಾಗಬೇಕಿದೆ..!?

2000 ದಿಂದ 2010 ರವರೆಗೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಲ್ಲೂ ನೆಲೆಯೂರಿದ್ದ ನಕ್ಸಲರು ಒಂದು ಹಂತದವರೆಗೂ ಹಿಡಿತ ಸಾಧಿಸಿದ್ದರು. ಪ್ರಮುಖವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿದ್ದವರ ಒಕ್ಕೆಲೆಬ್ಬಿಸುವಿಕೆ ವಿರುದ್ಧ ನಡೆದಿದ್ದ ಹೋರಾಟದ ರೂಪುರೇಷೆಯೇ ನಕ್ಸಲರ ಬೆಂಬಲ ಪಡೆದಿತ್ತು. 2003 ರಲ್ಲಿ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಡದ ಪಾರ್ವತಿ ಹಾಗೂ ಹಾಜಿಮಾ ಎಂಬಿಬ್ಬರ ಎನ್‌ಕೌಂಟರ್‌ ಪ್ರಕರಣ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಕರ್ನಾಟಕ ರಾಜ್ಯದಲ್ಲಿ ಇದುವರೆಗೂ 17 ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ.

ಆದರೆ ದೇಶದ ಬಹುತೇಕ ರಾಜ್ಯಗಳಲ್ಲಿ ನಕ್ಸಲ್‌ ಚಟುವಟಿಕೆ ಅನ್ನೋದು ಹೆಸರಿಗಷ್ಟೇ ಇದೆ. ಅದರಲ್ಲಿ ಕರ್ನಾಟಕವೂ ಒಂದು. ಇತ್ತೀಚಿನ ಒಂದು ದಶಕದಲ್ಲಿ ಅಂತಹ ಯಾವುದೇ ನಕ್ಸಲ್‌ ದಾಳಿಗಳೂ ನಡೆದಿಲ್ಲ. ಬದಲಾಗಿ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಳ್ಳುವ ನಕ್ಸಲರಿಗೂ ರಾಜ್ಯದ ಬುಡಕಟ್ಟು ನಿವಾಸಿಗಳು ಬೆಂಬಲ ನೀಡಿಲ್ಲ. ಅಲ್ಲದೇ ಸರಕಾರ ನೀಡಿದ್ದ ಪ್ಯಾಕೇಜ್‌ ಹಾಗೂ ತಮಗೂ ಮುಖ್ಯವಾಹಿನಿಯಲ್ಲಿದ್ದು ಹೋರಾಟ ಸಂಘಟಿಸಬೇಕು ಅನ್ನೋ ಅವರ ಆಸಕ್ತಿಯೂ ಕೆಲವು ನಕ್ಸಲರನ್ನು ಶರಣಾಗತಿ ಆಗುವಂತೆ ಮಾಡಿತ್ತು. ಅಲ್ಲದೇ ಛತ್ತೀಸ್‌ಗಡ ಸರಕಾರವೂ ಇತ್ತೀಚೆಗೆ ನಕ್ಸಲ್‌ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒಲವು ನೀಡಿತ್ತು. ಮಹಾರಾಷ್ಟ್ರದಲ್ಲೂ ನಕ್ಸಲರ ಶರಣಾಗತಿ ನಡೆದಿದ್ದವು.

ಅದ್ಯಾವುದೋ ಕಾಲದಲ್ಲಾದ ಅನ್ಯಾಯವನ್ನೇ ಮುಂದಿಟ್ಟುಕೊಂಡು ಆರಂಭವಾದ ಹಿಂಸಾ ಹೋರಾಟವನ್ನೇ ಮುಂದುವರೆಸಿರುವ ನಕ್ಸಲ್‌ ಹೋರಾಟ ಇಂದು ದೇಶದ ವಿರುದ್ಧದ ಚಟುವಟಿಕೆಯಲ್ಲಿ ತೊಡಗಿದೆ. ಅದಕ್ಕೂ ಜಾಸ್ತಿಯಾಗಿ ಛತ್ತೀಸ್‌ಗಡದಂತಹ ರಾಜ್ಯದಲ್ಲಿ ಜನರನ್ನೇ ಲೂಟಿಗೈಯುತ್ತಿದೆ. ಅಲ್ಲದೇ ದೇಶದ ಗಡಿ ಕಾಯಬೇಕಿದ್ದ ಯೋಧರು ಆಂತರಿಕ ಉಗ್ರರಿಂದಾಗಿ ಸಾವು-ನೋವು ಎದುರಿಸುವಂತಾಗಿರುವುದು ಖೇದಕರ. ಆದ್ದರಿಂದ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕ್ಷೀಣಿಸುತ್ತಿರುವ ನಕ್ಸಲ್‌ ಚಟುವಟಿಕೆಗೆ ಮಹತ್ವದ ವಿರಾಮ ಹಾಕಬೇಕಿದೆ.

Click here Support Free Press and Independent Journalism

Pratidhvani
www.pratidhvani.com