ಕರೋನಾ ಭೀತಿ: ಉನ್ಮಾದತೆಯ ಮನಸ್ಥಿತಿ ಹುಟ್ಟುಹಾಕಿದ ಚಪ್ಪಾಳೆ ಕರೆ!
ರಾಷ್ಟ್ರೀಯ

ಕರೋನಾ ಭೀತಿ: ಉನ್ಮಾದತೆಯ ಮನಸ್ಥಿತಿ ಹುಟ್ಟುಹಾಕಿದ ಚಪ್ಪಾಳೆ ಕರೆ!

ಕರೋನಾ ಹರಡುವಿಕೆಯ ವೇಗ ತಗ್ಗಿಸಲು ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಹಾಗಾಗಿ ಜನತಾ ಕರ್ಫ್ಯೂ ಹಾಗೂ ಬಳಿಕ ಚಪ್ಪಾಳೆ ಹೊಡೆದು ಅಗತ್ಯ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಿ ಎನ್ನುವ ಮೋದಿ ಮಾತನ್ನು ಒಪ್ಪಿಕೊಳ್ಳಬಹುದು. ಹೇಳಿದ್ದು ಚಪ್ಪಾಳೆ ಮಾತ್ರ. ಆದರೆ ಸಂಘ ಪರಿವಾರದ ಕಾಲಾಳುಗಳು ಶಂಖ-ಜಾಗಟೆ ಶಬ್ದಕ್ಕೆ ವೈಜ್ಞಾನಿಕ ಶಕ್ತಿ ಇದೆ ಎಂಬ ಸುದ್ದಿ ಹರಡಿದರು. ಪರಿಣಾಮ ಚಪ್ಪಾಳೆಯ ಬದಲಿಗೆ ಕೇಳಿ ಬಂದದ್ದು ಗಂಟೆ-ಜಾಗಟೆ ಶಬ್ದ.

ಶ್ರೀವಿಭಾವನ

ಒಂದು ಕಾಲದಲ್ಲಿ ಮಂಡ್ಯ, ಮೈಸೂರು, ಕೊಡಗು, ಹಾಸನ, ಶಿವಮೊಗ್ಗಗಳೆಂದರೆ, ವೈಜ್ಞಾನಿಕ ಮನೋಭಾವಕ್ಕೆ ಹೆಸರಾದ ಜಿಲ್ಲೆಗಳಾಗಿದ್ದವು. ಆದಿವಾಸಿ ಕುಟುಂಬಗಳಿಂದಲೇ ತುಂಬಿರುವ ಚಾಮರಾಜನಗರದಲ್ಲಿ ಸಂಘ ಪರಿವಾರದ ಆಟಾಟೋಪ ಅಷ್ಟಿರಲಿಲ್ಲ. ಆದರೆ ಭಾನುವಾರ ಈ ಜಿಲ್ಲೆಗಳಾದ್ಯಂತ ನಡೆದ ಕರೋನಾ ಸಂಭ್ರಮಾಚರಣೆಗಳತ್ತ ನಾವು ಕಣ್ಣು ಹಾಯಿಸಿದರೆ, ಈ ಜಿಲ್ಲೆಗಳ ಜನರ ಮೇಲೂ ಮೋದಿ ಮಾಡಿರುವ ಮೋಡಿಯ ಅರಿವಾಗಬಹುದು. ಸಮಸ್ಯೆ ಇರುವುದು ಚಪ್ಪಾಳೆಯಲ್ಲಲ್ಲ. ಬದಲಿಗೆ ಈ ಚಪ್ಪಾಳೆ ಕರೆಯನ್ನು ಸಂಘ ಪರಿವಾರ ಎಲ್ಲಾ ಕುಟುಂಬಗಳಿಗೂ ಪಸರಿಸಿದ ರೀತಿಯಲ್ಲಿ.

ಭಾನುವಾರ ಸಂಜೆ 5ಕ್ಕೆ, ಜನತಾ ಕರ್ಫ್ಯೂ ಬಳಿಕ ಪ್ರಧಾನಿ ಮೋದಿ ಹೇಳಿದ್ದು ಚಪ್ಪಾಳೆ ತಟ್ಟಲು. ಕರೋನಾ ಹರಡುವಿಕೆಯ ವೇಗ ತಗ್ಗಿಸಲು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಹಾಗೂ ಬಳಿಕ ಚಪ್ಪಾಳೆ ಹೊಡೆದು ನಮ್ಮ ನಡುವಣ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಿ ಎನ್ನುವ ಮೋದಿ ಕರೆಯನ್ನು ಒಪ್ಪಿಕೊಳ್ಳಬಹುದು. ದೇಶ ವ್ಯಾಪ್ತಿ ವಾಸ್ತವವಾಗಿ ಕುಸಿಯುತ್ತಿರುವ ಆರೋಗ್ಯ ವ್ಯವಸ್ಥೆ ಬಗ್ಗೆ ಕಳೆದ ಆರು ವರ್ಷಗಳಿಂದ ಮೌನಿಯಾಗಿರುವ ಪ್ರಧಾನ ಮಂತ್ರಿ ಮೋದಿ ಅವರನ್ನು ಟೀಕಿಸುತ್ತಲೆ, ಕನಿಷ್ಠ ಜನತಾ ಕರ್ಫ್ಯೂವನ್ನು ರೋಗ ನಿಯಂತ್ರಣದತ್ತ ಒಂದು ಗಂಭೀರ ಹೆಜ್ಜೆಯಾಗಿ ಒಪ್ಪಿಕೊಳ್ಳಬಹುದು.

ಆದರೆ, ಇದರ ಜತೆಗೆ ನಡೆದ ಅನಾಹುತ ಮಾತ್ರ ಭೀಕರ. ಮೋದಿ ಹೇಳಿದ್ದು ಚಪ್ಪಾಳೆ ಮಾತ್ರ. ಆದರೆ ಸಂಘ ಪರಿವಾರದ ಕಾಲಾಳುಗಳು ಶಂಖ-ಜಾಗಟೆ ಶಬ್ದಕ್ಕೆ ವೈಜ್ಞಾನಿಕ ಶಕ್ತಿ ಇದೆ ಎಂಬ ಸುದ್ದಿ ಹರಡಿದರು. ಪರಿಣಾಮ ಚಪ್ಪಾಳೆಯ ಬದಲಿಗೆ ಎಲ್ಲಾ ಕಡೆ ಕೇಳಿ ಬಂದದ್ದು ಗಂಟೆ-ಜಾಗಟೆ ಶಬ್ದ. ವಾಟ್ಸಾಪ್ ವಿಶ್ವವಿದ್ಯಾನಿಲಯ ಹಾಗೂ ಕನ್ನಡದ ಕೆಲ ದೃಶ್ಯ ಮಾಧ್ಯಮಗಳು ಸಂಘ ಪರಿವಾರದ ಕಾರ್ಯ ಸೂಚಿಗೆ ಪೂರಕವಾಗೇ ಕೆಲಸ ಮಾಡಿದವು. ಪರಿಣಾಮ ಎಲ್ಲೆಡೆ ಒಂದು ರೀತಿಯ ಉನ್ಮಾದತೆ ಸೃಷ್ಟಿಯಾಯಿತು.
ಕಾಸ್ಮೋಪಾಲಿಟನ್ ಸಂಸ್ಕೃತಿಯ ಬೆಂಗಳೂರಿನಲ್ಲಿ ಇಂತಹ ಅಪದ್ಧಗಳು ನಡೆದರೆ, ಅದನ್ನು ಅರಗಿಸಿಕೊಳ್ಳಬಹುದು. ಆದರೆ, ದುರಂತವೆಂದರೆ, ಈ ಉನ್ಮಾದತೆ ಬೆಂಗಳೂರಿಗಿಂತ ಹೆಚ್ಚು ಹರಡಿದ್ದು, ಈವರೆಗೆ ವೈಜ್ಞಾನಿಕ, ಪುರೋಹಿತಶಾಹಿ ವಿರೋಧಿ ಮನಸ್ಥಿಯ ಜನರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಇತರ ಜಿಲ್ಲೆಗಳಲ್ಲಿ.

ಕರೋನಾ ಭೀತಿ: ಉನ್ಮಾದತೆಯ ಮನಸ್ಥಿತಿ ಹುಟ್ಟುಹಾಕಿದ ಚಪ್ಪಾಳೆ ಕರೆ!

ಚಾಮರಾಜನಗರದಂತಹ ಜಿಲ್ಲೆಯಲ್ಲಿ ಕೂಡಾ, ಹಳ್ಳಿಹಳ್ಳಿಗಳಲ್ಲಿ ಗಂಟೆ-ಜಾಗಟೆ, ಶಂಖದ ಶಬ್ದ ಅನುರಣಿಸಿತು. ಹಿಂದುಳಿದ ವರ್ಗಗಳ ಮನಸ್ಸಿನೊಳಗೆ ಹೊಸ ವಿಷ ಬೀಜವವನ್ನು ಸಂಘ ಪರಿವಾರದ ಕಾಲಾಳುಗಳು ಪರಿಣಾಮಕಾರಿಯಾಗಿಯೇ ಬಿತ್ತಿದರು. ಅದು ಇನ್ನು ಮೊಳಕೆಯೊಡೆಯುವುದೊಂದೇ ಬಾಕಿ. ಅದು ಮೊಳಕೆ ಒಡೆದರೆ ಇನ್ನೊಮ್ಮೆ ಮೋದಿ ಚುನಾಯಿತರಾಗುವುದರಲ್ಲಿ ಸಂಶಯವಿಲ್ಲ.

ನಮ್ಮ ನಡುವಣ ಹಲವಾರು ತಜ್ಞರು, ಈ ಗಂಟೆ-ಜಾಗಟೆ- ಶಂಖವನ್ನು ಪ್ರಬಲವಾಗಿ ಖಂಡಿಸಿದರು. ಆದರೆ, ಜನ ಸಮುದಾಯ ಯಾವ ಭ್ರಮೆಯಲ್ಲಿದೆ ಎಂದರೆ, ಸತ್ಯ ಯಾರಿಗೂ ಬೇಕಿಲ್ಲ. ಉನ್ಮಾದತೆಯಲ್ಲೇ ಏನೋ ಒಂದು ಸಂತಸ ಕಂಡುಕೊಂಡಂತಿದೆ.
ಈ ಹಿನ್ನೆಲೆಯಲ್ಲಿ ನಾವು ನಮ್ಮ ನಡುವಣ ವೈಜ್ಞಾನಿಕ ಮನೋಭಾವ ಮೂಡಿಸಲು ಪ್ರಯತ್ನಿಸುತ್ತಿರುವವರ ನಿರಾಸೆಯನ್ನು ಗಮನಿಸಬಹುದು.

ಕರೋನಾ ಭೀತಿ: ಉನ್ಮಾದತೆಯ ಮನಸ್ಥಿತಿ ಹುಟ್ಟುಹಾಕಿದ ಚಪ್ಪಾಳೆ ಕರೆ!

ಖ್ಯಾತ ವಿಚಾರವಾದಿ ಹಾಸನದ ಮಮತಾ ಅರಸೀಕರೆ ಅವರ ಫೇಸ್‌ಬುಕ್ ಪೋಸ್ಟ್ ನಮ್ಮ ಆತ್ಮಸಾಕ್ಷಿಯನ್ನು ಕಲಕುತ್ತದೆ. "ತೀರಾ ಕನಿಷ್ಠಕ್ಕಿಳಿಯಿತು ದೇಶ. ಈ ಪರಿ ಮೂಢತನ, ಈ ಉಡಾಫೆ, ಈ ಭಜನೆಯ ಪರಮಾವದಿ, ಈ ಕೇಕೆ, ಅಟ್ಟಹಾಸ, ಇಷ್ಟೊಂದು ಮೂರ್ಖತನ ಯಾವತ್ತೂ ಕಾಣಲಿಲ್ಲವೇನೊ.. ಈ ದೇಶವನ್ನ ವೈಚಾರಿಕವಾಗಿ ಕಟ್ಟಲು ಯಾರೆಲ್ಲ ಎಷ್ಟೊಂದು ಪ್ರಯತ್ನ ಪಟ್ಟರು. ಎಷ್ಟೊಂದು ದುಡಿದರು. ಕುಟುಂಬವನ್ನ ತ್ಯಾಗ ಮಾಡಿ ಬೀದಿಗಿಳಿದರು. ತಮ್ಮ ಆಯುಷ್ಯ ಸವೆಸಿದರು. ಆರೋಗ್ಯ ಹಾಳು ಮಾಡಿಕೊಂಡು ಶ್ರಮಪಟ್ಟರು. ವೈಯಕ್ತಿಕ ಹಿತಾಸಕ್ತಿ ತ್ಯಜಿಸಿದರು. ಈಗಲೂ ಬಹಳಷ್ಟು ದುಡಿಯುತ್ತಿದ್ದಾರೆ. ನೊ ಯಾವುದೇ ಪ್ರಯೋಜನ ಇಲ್ಲ. ಇದನ್ನ ರಿಪೇರಿ ಮಾಡಲಸಾಧ್ಯ. ಈಗ ಆಗಿರುವ ಡ್ಯಾಮೇಜ್ ಸರಿಪಡಿಸಲು ಶತಮಾನಗಳ ಸತತ ಪ್ರಯತ್ನ ಬೇಕು. ಸಾಮಾಜಿಕ ಕಾಳಜಿಯೆನ್ನುವುದು ಈಗ ಅಪಹಾಸ್ಯದ ಮಾತಾಗಿಹೋಯಿತು. ಬದಲಾವಣೆ ಅಲ್ಲ ಸುಧಾರಣೆಯೂ ಸಾಧ್ಯವಿಲ್ಲವೇನೊ," ಎನ್ನುವ ಅವರ ಮಾತಿನಲ್ಲಿ ನೋವು ನೆಲೆಗೊಂಡಿದೆ.

Click here Support Free Press and Independent Journalism

Pratidhvani
www.pratidhvani.com