ಕೈಚಪ್ಪಾಳೆ ಏನೋ ಸರಿ… ಆದರೆ ಆರೋಗ್ಯ ವಲಯ ಎಷ್ಟು ಸಜ್ಜಾಗಿದೆ?
ರಾಷ್ಟ್ರೀಯ

ಕೈಚಪ್ಪಾಳೆ ಏನೋ ಸರಿ… ಆದರೆ ಆರೋಗ್ಯ ವಲಯ ಎಷ್ಟು ಸಜ್ಜಾಗಿದೆ?

ಸಮೂಹ ತಪಾಸಣೆಗೊಳಪಡಿಸುವ ಮೂಲಕ ಮೊದಲ ಮತ್ತು ಎರಡನೇ ಹಂತದಲ್ಲಿಯೇ ಪರಿಣಾಮಕಾರಿಯಾಗಿ ಸೋಂಕು ನಿಯಂತ್ರಣಕ್ಕೆ ತಂದ ವಿಶ್ವದ ಹಲವು ರಾಷ್ಟ್ರಗಳ ಯಶಸ್ಸಿನ ಹಿನ್ನೆಲೆಯಲ್ಲಿ ನಾವು ಸುವರ್ಣ ಅವಕಾಶವನ್ನು ಕೇವಲ ಸಗಣಿ- ಗಂಜಲ, ಬಿಸಿಲು ಕಾಯಿಸುವುದು ಮುಂತಾದ ನಗೆಪಾಟಲಿಗೆ ಸಲಹೆಗಳ ಮೂಲಕ ಕೈಚೆಲ್ಲಿದ್ದೇವೆ ಎಂದು ದೇಶದ ಹಲವಾರು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕರೋನಾ ಮಹಾಮಾರಿ  ನಿಯಂತ್ರಣದ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ನಾಳೆ ಭಾನುವಾರ(ಮಾ.22)ವನ್ನು ಸ್ವಯಂ ಕರ್ಫ್ಯೂ ದಿನವನ್ನಾಗಿ ಆಚರಿಸುವಂತೆ ಮತ್ತು ಸಾಮೂಹಿಕ ಚಪ್ಪಾಳೆ ತಟ್ಟುವ ಮೂಲಕ ರೋಗ ನಿಯಂತ್ರಣ - ಜಾಗೃತಿಗೆ ಶ್ರಮಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸುವಂತೆ ಕರೆ ನೀಡಿದ್ದಾರೆ.

ಕರೋನಾ ವೈರಾಣು ಹರಡುವಿಕೆ ದೇಶದಲ್ಲಿ ಎರಡನೇ ಹಂತ ದಾಟಿ ಮೂರನೇ ಹಂತಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ; ಸೋಂಕು ಸಾಮುದಾಯಿಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿಯವರ ಈ ಸಲಹೆ ಸಾಕಷ್ಟು ಪ್ರಯೋಜನಕಾರಿ ಎಂಬುದನ್ನು ತಜ್ಞರೂ ಒಪ್ಪುತ್ತಾರೆ. ಮತ್ತು ದೇಶದ ಬಹುತೇಕ ಜನರನ್ನು ತಮ್ಮ ಮಾತಿನ ಮೂಲಕ ಸಮ್ಮೋಹನಗೊಳಿಸುವ ಶಕ್ತಿ ಹೊಂದಿರುವ ಮೋದಿಯವರ ಇಂತಹ ಕರೆಯನ್ನು ದೇಶದ ಮಾಧ್ಯಮಗಳೂ ಸೇರಿ ಜನತೆ ಕೂಡ ಶಿರಸಾವಹಿಸಿ ಪಾಲಿಸುತ್ತಾರೆ ಎಂಬುದರಲ್ಲೂ ಯಾವ ಅನುಮಾನವೂ ಇಲ್ಲ. ಆ ದೃಷ್ಟಿಯಿಂದಲೂ ರೋಗ ನಿಯಂತ್ರಣದ ದಿಕ್ಕಿನಲ್ಲಿ ಇದೊಂದು ಹೆಜ್ಜೆಯೇ.

ಜೊತೆಗೆ ಹೊರಗಿನಿಂದ ದೇಶವನ್ನು ಪ್ರವೇಶಿಸುವವರ ತಪಾಸಣೆ, ಪ್ರತ್ಯೇಕಿಸುವಿಕೆ, ರೋಗ ಪತ್ತೆ ಮತ್ತು ಚಿಕಿತ್ಸೆ, ವಿಮಾನಯಾನ ಸೇರಿದಂತೆ ಸಾರ್ವಜನಿಕ ಸಾರಿಗೆ ನಿರ್ಬಂಧ, ಜಾತ್ರೆ, ಸಂತೆ, ಮಾಲ್- ಸಿನಿಮಾ ಬಂದ್, ಸೋಂಕು ತಡೆಯ ಜನಜಾಗೃತಿ ಮುಂತಾದ ವಿಷಯಗಳಲ್ಲಿ; ಅಂದರೆ, ಸೋಂಕಿನ ಮೊದಲ ಮತ್ತು ಎರಡನೇ ಹಂತದಲ್ಲಿ ಸೋಂಕು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಕೂಡ ದೇಶ ಪರಿಣಾಮಕಾರಿಯಾಗಿ ಕೈಗೊಂಡಿದೆ ಮತ್ತು ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಕೈಚಪ್ಪಾಳೆ ಏನೋ ಸರಿ… ಆದರೆ ಆರೋಗ್ಯ ವಲಯ ಎಷ್ಟು ಸಜ್ಜಾಗಿದೆ?

ಆದರೆ, ಈ ನಡುವೆ ಸೋಂಕಿನ ಮೂರು ಮತ್ತು ನಾಲ್ಕನೇ ಹಂತದಲ್ಲಿ ಅದನ್ನು ತಡೆಯುವ ಮತ್ತು ನಿವಾರಣೆ ಮಾಡುವ ನಿಟ್ಟಿನಲ್ಲಿ ದೇಶ ಎಷ್ಟು ಸಜ್ಜಾಗಿದೆ? ಯಾವ ತಯಾರಿಗಳನ್ನು ಮಾಡಿಕೊಂಡಿದೆ? ಎಂಬ ಪ್ರಶ್ನೆ ಎದುರಾದರೆ ಮಾತ್ರ; ಸದ್ಯಕ್ಕೆ ಭರವಸೆಯ ಆಶಾದಾಯಕ ಉತ್ತರ ಸಿಗಲಾರದು. ಏಕೆಂದರೆ ಸದ್ಯ ದೇಶದ ಆರೋಗ್ಯ ವ್ಯವಸ್ಥೆ ಕರೋನಾ ಮಹಾಮಾರಿಯನ್ನು ಎದುರಿಸಲು ಮಾಡಿಕೊಂಡಿರುವ ತಯಾರಿಗಳನ್ನು ಗಮನಿಸಿದರೆ, ಸರ್ಕಾರ ಆ ನಿಟ್ಟಿನಲ್ಲಿ ತೆಗೆದುಕೊಂಡಿರುವ ಮುಂಜಾಗ್ರತೆಯನ್ನು ನೋಡಿದರೆ; ನಿಜಕ್ಕೂ ಆತಂಕಪಡದೇ ಇರಲಾಗದು.

ದೇಶದ ಸಾಮಾಜಿಕ ಜಾಲತಾಣಗಳ ಮೂಲಕ ಕೋಮುವಾದ, ಮತೀಯ ದ್ವೇಷವನ್ನು ಹರಡಿದಷ್ಟೇ ಸುಲಭವಾಗಿ ಕರೋನಾ ವೈರಾಣುವನ್ನೂ ನಿಯಂತ್ರಿಸಿಬಿಡಬಹುದು ಎಂಬುದು ಆಳುವ ಮಂದಿಯ ಲೆಕ್ಕಾಚಾರವಾದಂತಿದೆ. ಜೊತೆಗೆ ಜಿಡಿಪಿ ದರ, ಗ್ರಾಹಕರ ಕೊಳ್ಳುವ ಶಕ್ತಿ ಮುಂತಾದ ವಿಷಯದಲ್ಲಿ ಮಾಡಿದಂತೆ ಅಂಕಿಅಂಶಗಳನ್ನು, ವಾಸ್ತವಾಂಶಗಳನ್ನು ಮರೆಮಾಚಿ ಸೋಂಕನ್ನು ಬಗ್ಗುಬಡಿಯಬಹುದು ಎಂಬ ತಂತ್ರಗಾರಿಕೆಯೂ ಇರಬಹುದು! ಆದರೆ, ಇದು ಜಾಗತಿಕ ಮಹಾಮಾರಿ. ಗೋ ಕರೋನಾ ಗೋ, ಕರೋನಾ ಗೋ.. ಎಂಬಂತಹ ಮಂತ್ರಗಳಿಂದಾಗಲೀ, ಸೆಗಣಿ, ಗಂಜಲ ಸೇವನೆಯಂತಹ ನಗೆಪಾಟಲಿನ ಮಧ್ಯಯುಗೀನ ಮನೆಮದ್ದುಗಳಿಂದಾಗಲೀ, ಅಥವಾ ಸ್ವತಃ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರು ಹೇಳಿದಂತೆ ಬಿಸಿಲಿನಲ್ಲಿ ನಿಲ್ಲುವುದರಿಂದಾಗಲೀ ವೈರಾಣುವನ್ನು ನಾಶ ಮಾಡಲಾಗದು.

ರೋಗ ನಿಯಂತ್ರಣದ ದಿಕ್ಕಿನಲ್ಲಿ ಭಾರತದಂತಹ ಜನದಟ್ಟಣೆಯ ಸಮಾಜದಲ್ಲಿ ಮೊದಲ ಮತ್ತು ಎರಡನೇ ಹಂತದ ಕ್ರಮಗಳೇ ನಿರ್ಣಾಯಕವಾಗಿದ್ದವು. ಅದರಲ್ಲೂ ಸಮೂಹ ತಪಾಸಣೆಗೊಳಪಡಿಸುವ ಮೂಲಕ ಮೊದಲ ಮತ್ತು ಎರಡನೇ ಹಂತದಲ್ಲಿಯೇ ಪರಿಣಾಮಕಾರಿಯಾಗಿ ಸೋಂಕು ನಿಯಂತ್ರಣಕ್ಕೆ ತಂದ ವಿಶ್ವದ ಹಲವು ರಾಷ್ಟ್ರಗಳ ಯಶಸ್ಸಿನ ಹಿನ್ನೆಲೆಯಲ್ಲಿ ನಾವು ಸುವರ್ಣ ಅವಕಾಶವನ್ನು ಕೇವಲ ಸಗಣಿ- ಗಂಜಲ, ಬಿಸಿಲು ಕಾಯಿಸುವುದು ಮುಂತಾದ ನಗೆಪಾಟಲಿಗೆ ಸಲಹೆಗಳ ಮೂಲಕ ಕೈಚೆಲ್ಲಿದ್ದೇವೆ ಎಂದು ದೇಶದ ಹಲವಾರು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಕೊರಿಯಾ, ತೈವಾನ್, ಟರ್ಕಿ, ಜಪಾನ್, ಹಾಂಗ್ ಕಾಂಗ್, ಸಿಂಗಪೂರ್ ಗಳಲ್ಲಿ ಕೈಗೊಂಡಂತೆ ಸಮೂಹ ತಪಾಸಣೆಯ ಪ್ರಯತ್ನಗಳನ್ನು, ಕನಿಷ್ಠ ರೋಗ ವಲಯಕ್ಕೆ ತೆರೆದುಕೊಂಡ ವ್ಯಕ್ತಿಗಳು ಇರುವ ಮತ್ತು ಭೇಟಿ ನೀಡಿರುವ ಪ್ರದೇಶಗಳಲ್ಲಾದರೂ ಮಾಡುವಲ್ಲಿ ನಾವು ಎಡವಿದ್ದೇವೆ. ಹಾಗಾಗಿ ಈಗಿರುವ ಸೋಂಕು ತಗಲಿರುವವರ ಸಂಖ್ಯೆ ವಾಸ್ತವದಲ್ಲಿ ಸೋಂಕಿತರಿಗೆ ಹೋಲಿಸಿದರೆ ತೀರಾ ಚಿಕ್ಕದು ಇರಬಹುದು ಎಂದು ಹಲವು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೈಚಪ್ಪಾಳೆ ಏನೋ ಸರಿ… ಆದರೆ ಆರೋಗ್ಯ ವಲಯ ಎಷ್ಟು ಸಜ್ಜಾಗಿದೆ?

ಅದರಲ್ಲೂ ದೇಶದ ಸದ್ಯ ಲಭ್ಯವಿರುವ ಕೋವಿಡ್-19 ವೈರಾಣು ಪರೀಕ್ಷಾ ಕೇಂದ್ರಗಳ ಸಂಖ್ಯೆ, ಅವುಗಳಲ್ಲಿ ಲಭ್ಯವಿರುವ ಪರೀಕ್ಷಾ ಕಿಟ್ ಪ್ರಮಾಣ, ಸಿಬ್ಬಂದಿ ಮತ್ತು ಇತರೆ ಸೌಕರ್ಯಗಳ ಸಾಮರ್ಥ್ಯ ಮುಂತಾದ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ನೋಡಿದರೆ; ಒಂದು ವೇಳೆ ಈ ವಾರ ಅಥವಾ ಮುಂದಿನ ವಾರದ ಹೊತ್ತಿಗೆ ಮೂರನೇ ಹಂತ ದಾಟಿ, ಸಮೂಹ ಸಾಂಕ್ರಾಮಿಕದ ನಾಲ್ಕನೇ ಹಂತಕ್ಕೆ ರೋಗ ತಲುಪುವ ಹೊತ್ತಿಗೆ ಸ್ಫೋಟಕ ಪ್ರಮಾಣದಲ್ಲಿ ರೋಗ ಉಲ್ಬಣಗೊಂಡರೆ ಅದನ್ನು ನಿಯಂತ್ರಿಸುವ ಶಕ್ತಿ ದೇಶದ ಆರೋಗ್ಯ ಕ್ಷೇತ್ರಕ್ಕೆ ಇದೆಯೇ ಎಂಬುದು ಆತಂಕಕಾರಿ ಸಂಗತಿ.

ಸದ್ಯ ದೇಶಾದ್ಯಂತ 52 ಪ್ರಯೋಗಾಲಯಗಳಲ್ಲಿ ಮಾತ್ರ ವೈರಾಣು ಪತ್ತೆ ಕಾರ್ಯ ನಡೆಯುತ್ತಿದೆ. ಮತ್ತು ದಿನಕ್ಕೆ ಹತ್ತು ಸಾವಿರ ಮಂದಿಯ ರಕ್ತದ ಮಾದರಿ ಪರೀಕ್ಷೆಯ ಸಾಮರ್ಥ್ಯವಿದ್ದರೂ ಕೇವಲ 90-100 ಪರೀಕ್ಷೆಗಳನ್ನು ಮಾತ್ರ ಮಾಡಲಾಗುತ್ತಿದೆ. ಹಾಗಾಗಿ ಸೋಂಕು ಕಾಣಿಸಿಕೊಂಡಾಗಿನಿಂದ ಈವರೆಗ ದೇಶದಲ್ಲಿ ಸುಮಾರು 15 ಸಾವಿರ ಪರೀಕ್ಷೆಗಳನ್ನು ಮಾತ್ರ ಮಾಡಲಾಗಿದೆ. ಅಷ್ಟರಮಟ್ಟಿಗೆ ನಮ್ಮ ಆರೋಗ್ಯ ಇಲಾಖೆ ರೋಗ ತಪಾಸಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ! ಜೊತೆಗೆ, ಪರೀಕ್ಷೆಗೆ ಅಗತ್ಯ ಡೇಟಾ ಕಿಟ್ ಗಳ ಕೊರತೆ ಕೂಡ ಕಾಡುತ್ತಿದೆ ಎನ್ನಲಾಗುತ್ತಿದ್ದು, ಅಗತ್ಯ ಪ್ರಮಾಣದ ಕಿಟ್ ತರಿಸಿಕೊಳ್ಳಲು ಈ ವಾರವಷ್ಟೇ ಕೇಂದ್ರ ಸರ್ಕಾರ ಜರ್ಮನಿಗೆ ಕೋರಿಕೆ ಸಲ್ಲಿಸಿದೆ. ಆದರೆ, ವಾಸ್ತವವಾಗಿ ಈ ಕಾರ್ಯ ಕನಿಷ್ಠ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲೇ ಆಗಬೇಕಿತ್ತು. ಆದರೆ, ಅಂತಹ ಮುಂಜಾಗ್ರತೆ ತೆಗೆದುಕೊಳ್ಳಬೇಕಿದ್ದ ಕೇಂದ್ರ ಆರೋಗ್ಯ ಸಚಿವರೇ ಸಗಣಿ ಸ್ನಾನ, ಸೂರ್ಯಪಾನದಂತಹ ಆದಿಮಾನವ ವಿವೇಕದಲ್ಲಿ ಮುಳುಗಿದ್ದರು.

ಕನಿಷ್ಠ ಮಾರ್ಚ್ ಮೊದಲ ವಾರದಿಂದಲೇ ಸಾಮೂಹಿಕ ತಪಾಸಣೆ ಮತ್ತು ಪರೀಕ್ಷೆಗೆ ಚಾಲನೆ ನೀಡಿದ್ದರೆ ಬಹುಶಃ ಇಷ್ಟರಲ್ಲಾಗಲೀ ಸೋಂಕು ಸಾಂಕ್ರಾಮಿಕದ ಹಂತಕ್ಕೆ ತಲುಪದಂತೆ ತಡೆಯುವುದು ಸಾಧ್ಯವಿತ್ತು. ಆದರೆ, ಕೇಂದ್ರ ಸರ್ಕಾರ ಹೊರಗಿನಿಂದ ವೈರಾಣು ಪ್ರವೇಶಿಸದಂತೆ ತಡೆಯುವ ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚು ಗಮನ ನೀಡಿತೇ ವಿನಃ ಈಗಾಗಲೇ ಪ್ರವೇಶಿಸಿರುವ ವೈರಾಣು ಹರಡದಂತೆ ತಡೆಯುವ ನಿಟ್ಟಿನಲ್ಲಿ ಮುಖ್ಯವಾಗಿ ವೈರಾಣು ಪತ್ತೆ, ಸೋಂಕಿತರ ಪ್ರತ್ಯೇಕಿಸುವುದು, ಸೋಂಕಿತರ ಸಂಪರ್ಕಕ್ಕೆ ಬಂದವರ ತಪಾಸಣೆ ಮತ್ತು ನಿಗಾದಂತಹ ವಿಷಯದಲ್ಲಿ ಅಗತ್ಯ ಪ್ರಮಾಣದ ಎಚ್ಚರಿಕೆ ವಹಿಸಲಿಲ್ಲ ಎನ್ನಲಾಗುತ್ತಿದೆ.

ಅಮೆರಿಕ, ಇಟಲಿ, ಸ್ಪೇನ್, ಇರಾನ್ ಗಳಲ್ಲಿ ಹೀಗೆ ಮೊದಲ ಎರಡು ಹಂತದಲ್ಲಿ ಪರಿಣಾಮಕಾರಿಯಾಗಿ ನಿಗ್ರಹ ಕ್ರಮಕೈಗೊಳ್ಳುವಲ್ಲಿ ಎಡವಿದ ಪರಿಣಾಮವೇ ಆ ದೇಶಗಳಲ್ಲಿ ಈಗ ರೋಗ ನಾಲ್ಕನೇ ಹಂತದಲ್ಲಿ ಸ್ಫೋಟಕ ಪ್ರಮಾಣದಲ್ಲಿ ಕೈಮೀರಿ ಹೋಗಿದೆ. ಆದರೆ, ಇರಾನ್ ನೊಂದಿಗೆ ಗಡಿ ಹಂಚಿಕೊಂಡಿರುವ ಟರ್ಕಿ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣಾ ಕೊರಿಯಾದಂತಹ ದೇಶಗಳಲ್ಲಿ ಸೂಕ್ತ ಸಮಯದಲ್ಲಿ ವ್ಯಾಪಕ ಸಾಮೂಹಿಕ ತಪಾಸಣೆ ಮತ್ತು ಪರೀಕ್ಷೆಗಳ ಮೂಲಕ ರೋಗ ನಿಯಂತ್ರಣದಲ್ಲಿ ಯಶಸ್ಸು ಕಂಡಿವೆ.

ಜೊತೆಗೆ ನಮ್ಮ ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಸೋಂಕು ತಡೆ ಮತ್ತು ರೋಗ ನಿವಾರಣೆಯ ದಿಸೆಯಲ್ಲಿ ನಮ್ಮ ವೈದ್ಯಕೀಯ ವ್ಯವಸ್ಥೆಯನ್ನು ಸಜ್ಜುಗೊಳಿಸುವ ವಿಷಯದಲ್ಲಿಯೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸಜ್ಜಾಗಿಲ್ಲ ಎನ್ನತ್ತವೆ ಹಲವು ಮೂಲಗಳು. ಒಂದು ಅಂದಾಜಿನ ಪ್ರಕಾರ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಇರುವ ಹಾಸಿಗೆ ಸಾಮರ್ಥ್ಯ ರೋಗ ಸಾಂಕ್ರಾಮಿಕವಾದಲ್ಲಿ ಅದನ್ನು ನಿಭಾಯಿಸಲು ಶೇ.10ರಷ್ಟೂ ಸಾಲದಾಗುತ್ತದೆ. ಜೊತೆಗೆ ಪ್ರತ್ಯೇಕ ವಾರ್ಡ್, ಅಗತ್ಯ ವೆಂಟಿಲೇಟರ್, ಆಮ್ಲಜನಕ ಮಾಸ್ಕ್ ಗಳ ವಿಷಯದಲ್ಲಿಯೂ ನಮ್ಮಲ್ಲಿ ಇರುವ ಪ್ರಮಾಣ ತೀರಾ ನಗಣ್ಯ. ಸರ್ಕಾರ ಮುಂದೆ ಎದುರಾಗಬಹುದಾದ ಪರಿಸ್ಥಿತಿಯನ್ನು ಊಹಿಸಿ, ರೋಗ ಚಿಕಿತ್ಸೆ ಮತ್ತು ಹತೋಟಿಯ ದೃಷ್ಟಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೂಡ ಕನಿಷ್ಠ ಎರಡು ಮೂರು ವಾರಗಳ ಹಿಂದೆಯೇ ಆರಂಭಿಸಬೇಕಿತ್ತು. ಆದರೆ, ಇದೀಗ ಮಾ.22ರಂದು ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು ಚಿಕಿತ್ಸೆ ನಡೆಸುವ ಮೂಲಕ ಆಸ್ಪತ್ರೆಗಳು ರೋಗ ಎದುರಿಸಲು ಎಷ್ಟು ಸಜ್ಜಾಗಿವೆ ಎಂಬುದನ್ನು ಕಂಡುಕೊಳ್ಳುವಂತೆ ಸೂಚನೆ ನೀಡಲಾಗಿದೆ!

ಈ ನಡುವೆ, ವೈರಾಣು ಪತ್ತೆಗಾಗಿ ನಡೆಸುವ ಪರೀಕ್ಷೆಗಳನ್ನು ನಡೆಸಲು ಖಾಸಗಿ ಪ್ರಯೋಗಾಲಯಗಳೂ ಕೋರಿಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್) ಆ ಬಗ್ಗೆ ಪರಿಶೀಲಿಸಿ ಮುಂದಿನ ಒಂದೆರಡು ದಿನದಲ್ಲಿ ಒಪ್ಪಿಗೆ ಕೊಡಲಿದೆ ಎನ್ನಲಾಗಿದೆ. ಆದರೆ, ಒಂದು ಪರೀಕ್ಷೆಗೆ ಗರಿಷ್ಠ 5 ಸಾವಿರ ಶುಲ್ಕ ನಿಗದಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸುಳಿವು ನೀಡಿದೆ. ದೇಶದಲ್ಲಿ ಸೋಂಕು ಹರಡುವ ಸಾಧ್ಯತೆ ಮತ್ತು ಜನರ ಬಡತನದ ಮಟ್ಟದ ಹಿನ್ನೆಲೆಯಲ್ಲಿ ಇದು ದುಬಾರಿಯೇ. ಹಾಗಾಗಿ ಕೇಂದ್ರ ಸರ್ಕಾರ, ಈಗಾಗಲೇ ಉದ್ಯಮ- ವ್ಯವಹಾರ ನಿರ್ಬಂಧ, ಸ್ವಯಂಪ್ರೇರಿತ ಬಂದ್ ಗಳ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಕನಿಷ್ಠ ಪರೀಕ್ಷಾ ವೆಚ್ಚವನ್ನಾದರೂ ಭರಿಸುವ ಕ್ರಮಕೈಗೊಳ್ಳಬೇಕು ಎಂಬ ಮಾತುಗಳೂ ಕೇಳಿಬರುತ್ತಿವೆ.

ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮವಾದ ಸಾಮೂಹಿಕ ತಪಾಸಣೆ ಮತ್ತು ವೈರಾಣು ಪರೀಕ್ಷೆ, ಆಸ್ಪತ್ರೆ ಮತ್ತು ಪ್ರಯೋಗಾಲಯಗಳಿಗೆ ಅಗತ್ಯ ವೈದ್ಯಕೀಯ ಮತ್ತು ಚಿಕಿತ್ಸಾ ಸೌಲಭ್ಯ- ಸಲಕರಣೆ ಹಾಗೂ ಸಿಬ್ಬಂದಿ ಒದಗಿಸುವುದು, ವೈರಾಣು ಪತ್ತೆಯ ಪರೀಕ್ಷೆಗಳನ್ನು ವ್ಯಾಪಕಗೊಳಿಸಲು ಖಾಸಗೀ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಸಮರೋಪಾದಿ ಕ್ರಮ ಸೇರಿದಂತೆ ತೆಗೆದುಕೊಳ್ಳಲೇಬೇಕಾದ ಮುಂಜಾಗ್ರತೆ ಮತ್ತು ಎಚ್ಚರಿಕೆಯಲ್ಲಿ ಈಗಾಗಲೇ ಭಾರತ ಎಡವಿದೆ ಎಂಬುದನ್ನು ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ವಲಯದ ತಜ್ಞರು ಹೇಳತೊಡಗಿದ್ದಾರೆ. ಬರಲಿರುವ ಭಯಾನಕ ದಿನಗಳ ಭವಿಷ್ಯ ನುಡಿಯತೊಡಗಿದ್ದಾರೆ. ಕನಿಷ್ಠ ಈಗಲಾದರೂ ಸರ್ಕಾರ, ಕೈ ಚಪ್ಪಾಳೆ ತಟ್ಟುವ ಸಾಂಕೇತಿಕ ಕ್ರಮಗಳನ್ನು ಮೀರಿ, ರಚನಾತ್ಮಕವಾಗಿ ವಾಸ್ತವಿಕ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ. ಏಕೆಂದರೆ, ಇದು ಜಿಡಿಪಿ ಬೆಳವಣಿಗೆ ದರದಂತೆ ಮಾಹಿತಿ ತಿರುಚಿ ಮುಚ್ಚಿಡಲಾಗದ ಸತ್ಯ. ಸಾವು ಕಡು ವಾಸ್ತವ. ಸುಳ್ಳುಗಳಲ್ಲಿ, ಕಟ್ಟುಕತೆಯ ವಾಸ್ತವಾಂಶಗಳಲ್ಲಿ ಮುಚ್ಚಿಡಲಾಗದ ಸತ್ಯ.

Click here Support Free Press and Independent Journalism

Pratidhvani
www.pratidhvani.com