ನಿರ್ಭಯಾ ಪ್ರಕರಣದ ನಂತರವೂ ಈ ದೇಶ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎನ್ನುತ್ತಿವೆ ಅಂಕಿಅಂಶಗಳು
ರಾಷ್ಟ್ರೀಯ

ನಿರ್ಭಯಾ ಪ್ರಕರಣದ ನಂತರವೂ ಈ ದೇಶ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎನ್ನುತ್ತಿವೆ ಅಂಕಿಅಂಶಗಳು

ತೆಲಂಗಾಣದಲ್ಲಿ ಅತ್ಯಾಚಾರ ಆರೋಪಿಗಳನ್ನು ನಡುರಸ್ತೆಯಲ್ಲೇ ಗುಂಡಿಟ್ಟುಕೊಲ್ಲಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಉತ್ತರಪ್ರದೇಶದ ಉನ್ನಾವೋ ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆಯಾಗಿದೆ. ಇಷ್ಟೆಲ್ಲಾ ಆದ ನಂತರ ದೇಶದಲ್ಲಿಅತ್ಯಾಚಾರ ಪ್ರಕರಣಗಳು ತಹಬಂದಿಗೆ ಬಂದಿರಬೇಕು ಎಂದು ನೀವು ಅಂದುಕೊಂಡರೆ ನಿಮ್ಮ ಊಹೆ ಖಂಡಿತ ತಪ್ಪು.

ಶಿವಕುಮಾರ್‌ ಎ

ಕಳೆದ 8 ವರ್ಷಗಳಿಂದ ಭಾರತೀಯರು ಕಾತುರದಿಂದ ಕಾಯುತ್ತಿದ್ದ ಆ ಘಳಿಗೆ ಕೊನೆಗೂ ಸಕಾರವಾಗಿದೆ. 2012 ಡಿಸೆಂಬರ್ 16ರಂದು ದೆಹಲಿಯ ರಸ್ತೆಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪಿಗಳಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ಕೊನೆಗೂ ಈಡೇರಿಸಲಾಗಿದೆ. ಅಲ್ಲಿಗೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಂತಾಗಿದೆ.

ಕೊಲೆಗೆ ಕೊಲೆ ಪರಿಹಾರವಲ್ಲ ಎಂಬ ಮಹೋನ್ನತ ಆಶಯವನ್ನು ಹೊಂದಿರುವ ದೇಶ ಭಾರತ. ಇದೇ ಕಾರಣಕ್ಕೆ ಎಷ್ಟೋ ನಟೋರಿಯಸ್‌ ಪಾತಕಿಗಳಿಗೂ ಕ್ಷಮಾಧಾನ ನೀಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಾನೂನು ವ್ಯವಸ್ಥೆಯಲ್ಲಿದೆ. ಕೊಲ್ಲುವುದು ಈ ನೆಲದ ಸಂಪ್ರದಾಯವಲ್ಲ. ಆದರೂ, ಕೆಲವೊಂದು ವಿರಳಾತಿವಿರಳ ಪ್ರಕರಣಗಳು ಕ್ಷಮಾಧಾನಕ್ಕೆ ಅನರ್ಹವಾಗಿರುತ್ತವೆ. ಇಂತಹ ಪ್ರಕರಣಗಳಲ್ಲೊಂದು ನಿರ್ಭಯಾ ಅತ್ಯಾಚಾರ ಪ್ರಕರಣ.

ಸುಪ್ರೀಂ ಕೋರ್ಟ್‌‌ನಿಂದ, ರಾಷ್ಟ್ರಪತಿ ವರೆಗೆ ಎಲ್ಲರೂ ನಿರ್ಭಯಾ ಅತ್ಯಾಚಾರ ಆರೋಪಿಗಳ ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿ ಇವರು ಬದುಕಲು ಅರ್ಹರಲ್ಲ ಎಂದು ತೀರ್ಪು ನೀಡಿದ ಬೆನ್ನಿಗೆ ನಾಲ್ವರೂ ಆರೋಪಿಗಳನ್ನು ಇಂದು ಗಲ್ಲಿಗೆ ಏರಿಸಲಾಗಿದೆ. ಈ ನಾಲ್ವರು ನೇಣಿಗೆ ಕೊರಳೊಡ್ಡುವ ಮೂಲಕ ಕಳೆದ 27 ವರ್ಷದಲ್ಲಿ ಭಾರತದಲ್ಲಿ ಗಲ್ಲಿಗೆ ಕೊರಳೊಡ್ಡುತ್ತಿರುವ 5ನೇ ವಿರಳಾತಿ ವಿರಳ ಪ್ರರಕಣ ಎಂದು ಈ ಘಟನೆ ಭಾರತೀಯ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.

ಅಂದಹಾಗೆ ದೇಶದಲ್ಲಿ ಅತ್ಯಾಚಾರ ಪ್ರಕರಣದ ವಿರುದ್ಧ ಕಾನೂನುಗಳು ಇತ್ತೀಚೆಗೆ ಕಠಿnವಾಗುತ್ತಿದೆ. 2012ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗಿದೆ. ಇತ್ತೀಚೆಗೆ ತೆಲಂಗಾಣದಲ್ಲಿ ಅತ್ಯಾಚಾರ ಆರೋಪಿಗಳನ್ನು ನಡುರಸ್ತೆಯಲ್ಲೇ ಗುಂಡಿಟ್ಟು ಕೊಲ್ಲಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಉತ್ತರಪ್ರದೇಶದ ಉನ್ನಾವೋ ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್‍ಗೆ ಜೀವಾವಧಿ ಶಿಕ್ಷೆಯಾಗಿದೆ. ಇಷ್ಟೆಲ್ಲಾ ಆದ ನಂತರ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ತಹಬಂದಿಗೆ ಬಂದಿರಬೇಕು ಎಂದು ನೀವು ಅಂದುಕೊಂಡರೆ ನಿಮ್ಮ ಊಹೆ ಖಂಡಿತ ತಪ್ಪು.

ದೇಶದಲ್ಲಿ ಅತ್ಯಾಚಾರ ಪ್ರಮಾಣ ಎಷ್ಟು ಗೊತ್ತಾ?

ಈ ದೇಶದಲ್ಲಿ ಅನೇಕ ಮೂಢ ನಂಬಿಕೆಗಳು ಇವೆ. ಈ ಪೈಕಿ ಮಹಿಳೆಯರಿಗೆ ದೈವತ್ವ ಕಲ್ಪಿಸಿರುವ ಈ ನಾಡಿನಲ್ಲಿ ಹೆಣ್ಣನ್ನು ದೇವರಂತೆ ಕಾಣಲಾಗುತ್ತದೆ ಎಂಬುದು ಸಹ ಒಂದು. ಆದರೆ, ವಾಸ್ತವದಲ್ಲಿ ಮಹಿಳೆಯರನ್ನು ದೇವರಂತೆ ಕಾಣುವುದು ಇರಲಿ, ಸಹ ಮನುಷ್ಯರಂತೆಯೂ ಇಲ್ಲಿ ಕಾಣಲಾಗುತ್ತಿಲ್ಲ ಎಂಬುದೇ ವಾಸ್ತವ ಸತ್ಯ.

2012ರಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಅಸಲಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವೇಳೆ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಮತ್ತು ಪೊಲೀಸ್ ಇಲಾಖೆಯ ಗಮನಾರ್ಹ ಕಾರ್ಯಾಚರಣೆಗಳಿಂದಾಗಿ ದೇಶದಲ್ಲಿ ಮಹೆಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿದೆ ಎಂದೇ ಊಹಿಸಲಾಗಿತ್ತು.

ಆದರೆ, ಕಳೆದ 8 ವರ್ಷದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಗಣನೀಯವಾಗಿ ಏರಿಕೆಯಾಗಿದೆಯೇ ಹೊರತು ಇಳಿದಿಲ್ಲ. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ ನೀಡುವ ಅಂಕಿಅಂಶದ ಪ್ರಕಾರ 2015ರಲ್ಲಿ ಮಾತ್ರ ದೇಶದಲ್ಲಿ ಸುಮಾರು 3.27ಲಕ್ಷ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2011ಕ್ಕೆ ಹೋಲಿಕೆ ಮಾಡಿದರೆ 2015ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ಶೇ.43ರಷ್ಟು ಏರಿಕೆಯಾಗಿದೆ.

20025 ರಿಂದ 2015 ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಅಡಿಯಲ್ಲಿ ದಾಖಲಾದ ಪ್ರಕರಣಗಳ ಪ್ರಮಾಣ ಶೇ.110.5 ರಷ್ಟು ಏರಿಕೆಯಾಗಿದೆ. 2015ರಲ್ಲಿ ದೆಹಲಿಯಲ್ಲಿ ದಾಖಲಾದ ಒಟ್ಟು ಅಪರಾಧ ಪ್ರಕರಣಗಳಲ್ಲಿ ಶೇ.53.9ರಷ್ಟು ಮಹಿಳೆಯರ ವಿರುದ್ಧದ ಪ್ರಕರಣಗಳಾಗಿವೆ. ಮಹಿಳೆಯರ ಮೇಲಿನ ಅಪರಾಧದಲ್ಲಿ ದೆಹಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಇವು ಲೈಂಗಿಕ ದೌರ್ಜನ್ಯದ ಪ್ರಕರಣಗಳ ಲೆಕ್ಕಾಚಾರವಾದರೆ, ಅತ್ಯಾಚಾರದ ಪ್ರಕರಣವೂ ಕಡಿಮೆ ಏನಿಲ್ಲ. ನಿರ್ಭಯಾ ಪ್ರಕರಣ ದಾಖಲಾದ 2012ರಲ್ಲಿ ದೇಶದಲ್ಲಿ ಒಟ್ಟು 24,923 ಅತ್ಯಾಚಾರ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿತ್ತು. ಇನ್ನೂ 2013ರಲ್ಲಿ 33,707; 2014ರಲ್ಲಿ 36735; 2015ರಲ್ಲಿ 34,651; 2016ರಲ್ಲಿ 38,947 ಹಾಗೂ 2017ರಲ್ಲಿ 33,658 ಅತ್ಯಾಚಾರ ಪ್ರಕರಣಗಳು ಈ ದೇಶದಲ್ಲಿ ದಾಖಲಾಗಿವೆ.

ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳು ಅಧಿಕವಾಗಿರುವುದನ್ನು ನಾವಿಲ್ಲಿ ಗಮನಿಸಬಹುದು. ಪ್ರತಿ 15 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದು, ಹಳ್ಳಿ ಭಾಗದಲ್ಲಿ ಮಾನ ಮರ್ಯಾದೆಗೆ ಅಂಜಿ ದಾಖಲಾಗದೆ ಉಳಿಯುವ ಪ್ರಕರಣಗಳ ಸಂಖ್ಯೆ ಇದರ ಎರಡರಷ್ಟಿದೆ ಎನ್ನಲಾಗುತ್ತಿದೆ.

ನಿರ್ಭಯಾ ದೆಸೆಯಿಂದ ಕಾನೂನಿನಲ್ಲಾದ ಬದಲಾವಣೆ;

ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಅತ್ಯಾಚಾರದ ವಿರುದ್ದ ದೊಡ್ಡ ಕೂಗು ಎದ್ದಿತ್ತು. ಪರಿಣಾಮ ಕೇಂದ್ರ ಸರ್ಕಾರ ಕ್ರಮಿನಲ್ ಲಾ ಕಾಯ್ದೆ-2018ರ ಅಡಿಯಲ್ಲಿ ಅತ್ಯಾಚಾರಿಗಳಿಗೆ 7 ವರ್ಷದಿಂದ ಜೀವಾವಧಿ ಶಿಕ್ಷೆಗೆ ಏರಿಸಿತು.

ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಮೂಲಕ 12 ವರ್ಷಕ್ಕಿಂತ ಕೆಳಗಿರುವ ಮಕ್ಕಳ ಮೇಲೆ ಅತ್ಯಾಚಾರ ಎಸಗಿದರೆ ಗಲ್ಲುಶಿಕ್ಷೆ ವಿಧಿಸುವ ಅವಕಾಶವನ್ನೂ ಒದಗಿಸಲಾಗಿದೆ. ಇದಲ್ಲದೆ, ಅತ್ಯಾಚಾರದ ಸಂದರ್ಭದಲ್ಲಿ ಎಸಗಲಾಗುವ ಕೌರ್ಯದ ಆಧಾರದ ಮೇಲೆ ಅಪರಾಧಿಗೆ ಗಲ್ಲುಶಿಕ್ಷೆಯನ್ನೂ ನೀಡಲು ಕೇಂದ್ರ ಸರ್ಕಾರ ಹೊಸ ಕಾಯ್ದೆ ರೂಪಿಸಿ 2018ರಿಂದಲೇ ಜಾರಿಗೆ ತಂದಿದೆ.

ಈ ಮೊದಲು ಮಧ್ಯಪ್ರದೇಶ, ರಾಜಸ್ತಾನದಂತಹ ರಾಜ್ಯಗಳಲ್ಲಿ ಮಾತ್ರ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲಾಗುತ್ತಿತ್ತು. ಆದರೆ, 2018ರ ನಂತರ ರಾಷ್ಟ್ರವ್ಯಾಪಿ ಎಲ್ಲೇ ಅತ್ಯಾಚಾರ ಎಸಗಿದರೂ ಅಪರಾಧಿಗೆ ಗಲ್ಲು ಖಚಿತ ಎಂಬ ಖಡಕ್ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ. ಈ ಕಾನೂನು ರೂಪ ತಲೆಯುವ ಹಿಂದೆ ನಿರ್ಭಯಾ ಬಲಿದಾನ ಪ್ರಮುಖ ಪಾತ್ರ ವಹಿಸಿರುವುದು ಸುಳ್ಳಲ್ಲ.

ಇದಲ್ಲದೆ, ನಿರ್ಭಯಾ ಪ್ರಕರಣದ ನಂತರ ಅತ್ಯಾಚಾರ ಪ್ರಕರಣಗಳ ನ್ಯಾಯ ವಿತರಣೆಯನ್ನು ವೇಗಗೊಳಿಸುವ ಸಲುವಾಗಿ ಶೀಘ್ರ ವಿಚಾರಣಾ ನ್ಯಾಯಾಲಯಗಳ ಸ್ಥಾಪನೆಗೆ ಅನುಮೋದನೆ ದೊರೆಯಿತು. 2015-2020 ಅವಧಿಯಲ್ಲಿ ಸುಮಾರು 1800 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇಷ್ಟೆಲ್ಲಾ ಆದರೂ ಸಹ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ತಹಬಂದಿಗೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ ಎಂಬುದೇ ವಿಷಾಧನೀಯ ಸಂಗತಿ.

ಅಂಕಿಅಂಶಗಳ ಪ್ರಕಾರ ಭಾತದಲ್ಲಿ ಪ್ರತಿ 15 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಅಧಿಕವಾಗುತ್ತಲೇ ಇದೆ. ಪ್ರಕರಣಗಳೂ ದಾಖಲಾಗುತ್ತಿವೆ. ಆದರೆ, ಶಿಕ್ಷೆಯಾಗುತ್ತಿರುವುದು ಮಾತ್ರ ಕೇವಲ ಶೇ.32 ರಷ್ಟು ಜನರಿಗೆ ಮಾತ್ರ ಎಂಬುದು ನಮ್ಮ ನ್ಯಾಯ ವ್ಯವಸ್ಥೆಯಲ್ಲಿನ ಹುಳುಕನ್ನು ಎತ್ತಿ ತೋರುತ್ತಿದೆ. ಈ ನಡುವೆ ಯಾವುದೇ ಕಾನೂನುಕಟ್ಟುಪಾಡುಗಳೂ ಸಹ ಮಹಿಳೆಯರ ಘನತೆಯನ್ನು ಉಳಿಸುವಲ್ಲಿ ಸಫಲವಾಗಿಲ್ಲ ಎಂಬುದೂ ವೇದ್ಯವಾಗುತ್ತಿದೆ.

ಹೀಗಾಗಿ ಯಾವುದೇ ಕಾನೂನುಗಳಿಂದ ಮಹಿಳೆಯರನ್ನು ಉಳಿಸುವುದು, ಅತ್ಯಾಚಾರ ಪ್ರಕರಣಗಳ ಸಂಖ್ಯೆಯನ್ನು ಇಳಿಸುವುದು ಸಾಧ್ಯವಿಲ್ಲ. ಬದಲಾಗಿ ಜನರಲ್ಲಿ ಅರಿವು ಮೂಡಿಸಬೇಕು. ಎಲ್ಲರನ್ನೂ ಸುಶಿಕ್ಷಿತರನ್ನಾಗಿ ಶಾಲಾ ಮಟ್ಟದಿಂದಲೇ ಮಕ್ಕಳಿಗೆ ಮಹಿಳೆಯರ ಘನತೆಯ ಕುರಿತು ಮನವರಿಕೆ ಮಾಡದ ಹೊರತಾಗಿ ಅತ್ಯಾಚಾರ ಪ್ರಕರಣವನ್ನು ತಡೆಯುವುದು ಸಾಧ್ಯವಿಲ್ಲ ಎನ್ನುತ್ತಾರೆ ದೇಶದ ಖ್ಯಾತ ಮನಶಾಸ್ತ್ರಜ್ಞರು.

Click here Support Free Press and Independent Journalism

Pratidhvani
www.pratidhvani.com