ಮೋದಿ ಹೇಳಿದ ʼಜನತಾ ಕರ್ಫ್ಯೂʼ ಮತ್ತು ಪಿಣರಾಯಿ ಘೋಷಿಸಿದ ʼವಿಶೇಷ ಪ್ಯಾಕೆಜ್ʼ!‌
ರಾಷ್ಟ್ರೀಯ

ಮೋದಿ ಹೇಳಿದ ʼಜನತಾ ಕರ್ಫ್ಯೂʼ ಮತ್ತು ಪಿಣರಾಯಿ ಘೋಷಿಸಿದ ʼವಿಶೇಷ ಪ್ಯಾಕೆಜ್ʼ!‌

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ, ಸರಿಸುಮಾರು ಅದೇ ಹೊತ್ತಿಗೆ ನೆರೆಯ ಕೇರಳ ರಾಜ್ಯದಲ್ಲಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸುದ್ದಿಗೋಷ್ಟಿ ಕರೆದು ಕರೋನಾ ವಿರುದ್ಧದ ಹೋರಾಟಕ್ಕೆ 20 ಸಾವಿರ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್‌ ಘೊಷಣೆ ಮಾಡಿದ್ದಾರೆ.

ಮೊಹಮ್ಮದ್‌ ಇರ್ಷಾದ್‌

ಸದ್ಯ ಭಾರತದ ಮಂದಿ ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ತಿಳಿಯದಂತೆ ಬದುಕುತ್ತಿದ್ದಾರೆ. ಅದಕ್ಕೊಂದು ಹಿನ್ನೆಲೆಯೂ ಇದೆ, ಒಂದೋ ಆ ವ್ಯಕ್ತಿ ಆಡಳಿತ ಪಕ್ಷವು ಪ್ರಶ್ನಾತೀತವೇ ಅಲ್ಲ ಅನ್ನೋ ನಿರ್ಧಾರಕ್ಕೆ ಬಂದು ಬಿಟ್ಟರೆ, ಇನ್ನೊಂದು ಆತನ ಮೇಲಿರುವ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಪ್ರಭಾವ. ಆದರೆ ವಾಸ್ತವ ಯಾವತ್ತಿದ್ದರೂ ವಾಸ್ತವವೇ ಆಗಿರುತ್ತದೆ. ಒಂದು ಜನಸಮೂಹವನ್ನು ಹಲವು ಬಾರಿ ನಂಬಿಸಿ ಭ್ರಮೆಯಲ್ಲಿ ತೇಲುವಂತೆ ಮಾಡುವುದು ಎಷ್ಟು ಸುಲಭವೋ ವಾಸ್ತವವನ್ನು ಅರ್ಥ ಮಾಡಿಸುವುದು ಅಷ್ಟೇ ಕಷ್ಟ. ಅದಕ್ಕಾಗಿ ಭಾರತೀಯರು ಸದ್ಯ ವಾಸ್ತವ ಮತ್ತು ಭ್ರಮೆಯ ನಡುವಿನ ವ್ಯತ್ಯಾಸ ತಿಳಿಯದಂತಾಗಿದ್ದಾರೆ ಅನ್ನೋ ವಿಚಾರವನ್ನು ಉಲ್ಲೇಖಿಸಲೇಬೇಕಾಯಿತು. ಹಾಗಂತ ವಾಸ್ತವ ಸಂಗತಿ ಗೊತ್ತಿದ್ದವರ ಧ್ವನಿಗಳನ್ನು ವ್ಯವಸ್ಥಿತವಾಗಿ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಕ್ಷೀಣಿಸುವಂತೆ ನೋಡಲಾಗುತ್ತಿದೆ.

ಭಾರತ ಮಾತ್ರವಲ್ಲದೇ ಜಗತ್ತಿನ ನೂರಾರು ರಾಷ್ಟ್ರಗಳು ಕೋವಿಡ್‌-19 ಗೆ ತುತ್ತಾಗಿ ಪರದಾಡುತ್ತಿದೆ. ಅದೃಷ್ಟವಶಾತ್ ಕರೋನಾ ವೈರಸ್ ಭಾರತದಲ್ಲಿ ಚೀನಾ, ಇಟಲಿ, ಇರಾನ್ ಮಾದರಿಯಲ್ಲಿ ಸಾವು-ನೋವು ತಾರದೇ ಹೋದರೂ ಮುಂದಿನ ದಿನಗಳಲ್ಲಿ ಆ ಬಗ್ಗೆ ಅನಗತ್ಯ ನಿರ್ಲಕ್ಷ್ಯವೂ ಸಲ್ಲದು ಅನ್ನೋ ಮುನ್ಸೂಚನೆ ನೀಡಿರುವುದು ನಿಜ.. ಹಾಗಂತ ಈಗಾಗಲೇ ಹಲವು ಹಿರಿಯ ವೈದ್ಯರು ಭಾರತಕ್ಕೆ ಸೂಚನೆಯನ್ನೂ ರವಾನಿಸಿದ್ದಾರೆ. ಭಾರತದಲ್ಲಿ ಸದ್ಯ ಕೋವಿಡ್-19 ಎರಡನೇ ಹಂತದಲ್ಲಿದೆ. ಅದೇನಾದರೂ ಮೂರನೇ ಹಂತ ತಲುಪಿದರೆ ಹೆಚ್ಚಿನ ಅನಾಹುತವನ್ನು ಎದುರು ನೋಡಬೇಕಾದೀತು. ಆದರೆ ಆ ಹಂತ ತಲುಪದಂತೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಆರೋಗ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ, ಜಿಲ್ಲಾಡಳಿತಗಳ ಕಾರ್ಯ ಶ್ಲಾಘನೀಯ.

ಆದರೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಾರ್ಚ್‌ 22 ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ 14 ಗಂಟೆಗಳ ಕಾಲ ʼಜನತಾ ಕರ್ಫ್ಯೂʼ ಹೇರುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅದೇ ದಿನ ಸಂಜೆ 5 ಗಂಟೆಗೆ ಕರೋನಾ ವಿರುದ್ಧ ಹಗಲಿರುಳು ದುಡಿಯುತ್ತಿರುವ ವರ್ಗಗಳಿಗೆ ಧನ್ಯವಾದ ಕೋರುವ ನಿಟ್ಟಿನಲ್ಲಿ ಮನೆ ಬಾಗಿಲು, ಕಿಟಕಿ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಎಂದು ಕಿವಿಮಾತು ಹೇಳಿದ್ದಾರೆ. ಅದಾಗಿ ಹತ್ತು ನಿಮಿಷದಲ್ಲೇ ದೇಶಾದ್ಯಂತ ಮೋದಿ ಅನುಯಾಯಿಗಳು, ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ಅದನ್ನು ಗ್ರಾಫಿಕ್ಸ್‌ ಪೇಜ್‌ ಮೂಲಕ ಊರೆಲ್ಲಾ ಸುದ್ದಿ ಪಸರಿಸುವಂತೆ ಮಾಡಿದೆ.

ಸರಿಸುಮಾರು ಅದೇ ಹೊತ್ತಿಗೆ ನೆರೆಯ ಕೇರಳ ರಾಜ್ಯದಲ್ಲಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸುದ್ದಿಗೋಷ್ಟಿ ಕರೆದು ಕರೋನಾ ವಿರುದ್ಧದ ಹೋರಾಟಕ್ಕೆ 20 ಸಾವಿರ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್‌ ಘೊಷಣೆ ಮಾಡುತ್ತಾರೆ. ಅಲ್ಲದೇ ತೆರಿಗೆ ವಿನಾಯಿತಿ, ವಿದ್ಯುತ್‌, ನೀರಿನ ಬಿಲ್‌ ಪಾವತಿಗೆ ಹೆಚ್ಚುವರಿ ಸಮಯ ನೀಡುವ ಭರವಸೆ ನೀಡುತ್ತಾರೆ. ಆರೋಗ್ಯ ಕ್ಷೇತ್ರಕ್ಕಾಗಿ 500 ಕೋಟಿ ರೂಪಾಯಿ ಇಡೋದರ ಜೊತೆಗೆ ಮುಂಚಿತವಾಗಿಯೇ ವಿಧವಾ ವೇತನ, ವೃದ್ಧಾಪ್ಯ ವೇತನ ಬಿಡುಗಡೆ, ಬಡ ಕುಟುಂಬಗಳಿಗೆ ಸಾಲ ಯೋಜನೆ, ವೈರಸ್‌ ಹಾವಳಿ ಕಡಿಮೆಯಾಗುವವರೆಗೆ 10 ಕೆಜಿ ಅಕ್ಕಿ ವಿತರಣೆ ಈ ರೀತಿಯ ಹತ್ತು ಹಲವು ಕಾರ್ಯಕ್ರಮಗಳನ್ನು ಘೋಷಿಸುತ್ತಾರೆ.

ಇತ್ತ ದೇಶದ ಪ್ರಧಾನ ಮಂತ್ರಿ ಅವರ ಮಾತಲ್ಲಿ ಅಂತಹ ಯಾವ ಅಂಶಗಳು ಕಂಡು ಬಾರದಿದ್ದರೂ ಕೊನೆಯದಾಗಿ ದೇಶದಲ್ಲಿ ಕರೋನಾ ವಿರುದ್ಧ ಹೋರಾಡಲು ಬೇಕಾದ ಹಣಕಾಸಿನ ಕೊರತೆಯಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಅವರ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲಾಗಿದೆ ಅಂತಷ್ಟೇ ಹೇಳಿದರು. ಆದರೆ ವಾಸ್ತವ ಸಮಸ್ಯೆಗಳ ಬಗ್ಗೆ ಯಾವುದೇ ಮಾತು ಮೋದಿಯಿಂದ ಬರಲಿಲ್ಲ. ಹಾಗಂತ ʼಜನತಾ ಕರ್ಫ್ಯೂʼ ಅನ್ನೋ ಒಂದೇ ಒಂದು ಶಬ್ದದಿಂದ ಜನ ಅದಾಗಲೇ ಭ್ರಮಾಲೋಕಕ್ಕೆ ತೆರಳಿದ್ದೂ ಆಗಿದೆ.

ದೇಶಕ್ಕಾಗಿ ಕರೋನಾ ವಿರುದ್ಧ ಹೋರಾಡಲು ಯಾವುದೇ ವಿಶೇಷ ಪ್ಯಾಕೇಜ್‌ ಘೋಷಿಸದ ಹೊರತು, ಕರೋನಾ ಎರಡನೇ ಹಂತದಲ್ಲಿ ಇರಬೇಕಾದರೆ ರಜಾದಿನವಾದ ಭಾನುವಾರದಂದು ಎಲ್ಲರೂ ಮನೆಯಲ್ಲಿಯೇ ಇರಿ ಅಂತಾ ಕರೆ ನೀಡಿದ್ದಾರೆ. ಚಪ್ಪಾಳೆ ತಟ್ಟೋದಕ್ಕೆ ಭಾರತದಲ್ಲಿ ಕರೋನಾ ಇನ್ನೂ ಎರಡನೇ ಹಂತದಲ್ಲಷ್ಟೇ ಇದೆ. ಅದು ಮಾತ್ರವಲ್ಲದೇ ಭಾರತದಲ್ಲಿ ಇನ್ನೂ ಕರೋನಾ ಪತ್ತೆಗೆ ಸೂಕ್ತವಾದ ಸೌಲಭ್ಯಗಳು ದೇಶಾದ್ಯಂತ ಇಲ್ಲ. ಈ ವಾಸ್ತವ ಸಂಗತಿಯನ್ನು ಎರಡು ದಿನಗಳ ಹಿಂದೆಯಷ್ಟೇ ʼಪ್ರತಿಧ್ವನಿʼ ಪ್ರಯಾಣಿಕರೊಬ್ಬರು ದೆಹಲಿಯಲ್ಲಿ ಅನುಭವಿಸಿದ ನರಕ ಯಾತನೆಯ ನೈಜ ಸ್ಥಿತಿಯನ್ನು ವೀಡಿಯೋ ಸಮೇತ ನೀಡಿದ್ದನ್ನು ಯಥಾವತ್ತಾಗಿ ಪ್ರಕಟಿಸಿತ್ತು. ಅಷ್ಟೊಂದು ಹೀನಾಯ ಸ್ಥಿತಿಯಲ್ಲಿ ಭಾರತದ ಕ್ವಾರಂಟೈನ್‌ ಸೆಂಟರ್‌ಗಳು ಇರಬೇಕಾದರೆ ಅದ್ಯಾವುದರ ಬಗ್ಗೆಯೂ ಮಾತಾಡದ ಮೋದಿ ಇನ್ನೂ ಆವರಿಸಿಕೊಳ್ಳುತ್ತಲೇ ಇರುವ ಕರೋನಾ ವೈರಸ್‌ ವಿರುದ್ಧ ಕೆಲಸ ಮಾಡುತ್ತಿರುವವರಿಗೆ ಚಪ್ಪಾಳೆ ತಟ್ಟಿ ಎನ್ನುತ್ತಿದ್ದಾರೆ. ಕರೋನಾ ತಡೆಗಟ್ಟಲು ಹಗಲು ರಾತ್ರಿ ಕಷ್ಟ ಪಡುವವರ ಕುರಿತು ನಮಗೂ ಹೆಮ್ಮೆಯಿದೆ ಆದರೆ ಭ್ರಮಾಲೋಕದಲ್ಲಿ ತೇಲಿಬಿಟ್ಟು ಚಪ್ಪಾಳೆ ತಟ್ಟಿದ್ದ ಮಾತ್ರಕ್ಕೆ ಕರೋನಾ ಓಡಿಹೋಗದು, ಬದಲಾಗಿ ಆಳುವ ಸರ್ಕಾರ ತುಸು ಗಂಭೀರವಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಿದೆ.

ಮೋದಿ ಹೇಳಿದ ʼಜನತಾ ಕರ್ಫ್ಯೂʼ ಮತ್ತು ಪಿಣರಾಯಿ ಘೋಷಿಸಿದ ʼವಿಶೇಷ ಪ್ಯಾಕೆಜ್ʼ!‌

ಅದು ಮಾತ್ರವಲ್ಲದೇ ಎರಡನೇ ಹಂತದಲ್ಲಿರುವ ಕರೋನಾ ಮೂರನೇ ಹಂತಕ್ಕೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ. ಅದನ್ನು ತಡೆಗಟ್ಟೋದಕ್ಕೆ ಮಾಡಬಹುದಾದ ಕೆಲಸ ಕಾರ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಅತ್ತ ಕೇರಳ ರಾಜ್ಯದಲ್ಲಿ ಜನವರಿ ಅಂತ್ಯದ ವೇಳೆಗೆ ಇಡೀ ದೇಶದಲ್ಲಿಯೇ ಮೊದಲ ಕರೋನಾ ಸೋಂಕು ಪತ್ತೆಯಾದರೂ ಅಲ್ಲಿನ ಸರ್ಕಾರ ತೆಗೆದುಕೊಂಡ ತತ್‌ಕ್ಷಣದ ಕಾರ್ಯ ಯೋಜನೆಯಿಂದಾಗಿ ಹೊಸದಾಗಿ ಕರೋನಾ ಪೀಡಿತರ ಸಂಖ್ಯೆ ಶೂನ್ಯದತ್ತ ಮುಖ ಮಾಡಿದೆ. ಇದು ಅಲ್ಲಿನ ಸರಕಾರ ತೆಗೆದುಕೊಂಡಿರುವ ನಿರ್ಧಾರದ ಒಂದು ಫಲವೂ ಇರಬಹುದು.

ಆದರೆ ಕೇರಳ ಹೊರತಾಗಿ ದೇಶದ ಬೇರೆ ಯಾವ ರಾಜ್ಯವೂ ಈ ಮಟ್ಟಿಗೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿದಂತೆ ಕಾಣುತ್ತಿಲ್ಲ. ಅಲ್ಲದೇ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿಪಕ್ಷ ನಾಯಕರ ಜೊತೆಗೂಡಿ ಸಭೆ ನಡೆಸುವ ಮೂಲಕ ಕರೋನಾ ವಿರುದ್ಧ ಪಕ್ಷ ಭೇದ ರಹಿತ ಹೋರಾಟ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಆದರೆ ನರೇಂದ್ರ ಮೋದಿ ಅವರು ವಿಪಕ್ಷಗಳ ಜೊತೆ ಸಭೆಯೂ ನಡೆಸದೇ ಪ್ರಮುಖವಾಗಿ ಬಿಜೆಪಿ ಸಂಸದರಲ್ಲಿಯೇ ಅಧಿವೇಶನ ಮುಗಿದ ಬಳಿಕ ಕರೋನಾ ವೈರಸ್‌ ಕುರಿತು ಜಾಗೃತಿ ಮೂಡಿಸುವಂತೆ ಕರೆ ನೀಡಿದ್ದಾರೆ. ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಅಧಿವೇಶನ ಮುಗಿಯಲಿದ್ದು ಆ ಬಳಿಕ ಸಂಸದರು ಅದ್ಯಾವ ಮಟ್ಟಿಗಿನ ಜಾಗೃತಿ ಮೂಡಿಸುತ್ತಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಇನ್ನು ದೇಶದಲ್ಲಿರುವ ಅದೆಷ್ಟೋ ಮನೆಗಳಿಗೆ ಬಾಗಿಲುಗಳಿಲ್ಲ, ಬಾಲ್ಕನಿ ಕಿಟಕಿಗಳಂತೂ ಇಲ್ಲವೇ ಇಲ್ಲ. ಅಂತವರು ಎಲ್ಲಿಗೆ ಹೋಗಿ ಚಪ್ಪಾಳೆ ತಟ್ಟಲಿ ಅನ್ನೋ ಪ್ರಶ್ನೆ ಸಹಜವಾದುದು. ನೆರೆ ಪ್ರವಾಹಕ್ಕೆ ಮನೆ ಕಳೆದುಕೊಂಡವರು ಇನ್ನೂ ಅದೆಷ್ಟೋ ಸಂತ್ರಸ್ತರ ಕೇಂದ್ರದಲ್ಲಿದ್ದರೆ, ಮನೆಯೇ ಇಲ್ಲದೇ ಜೋಪಡಿಗಳಲ್ಲಿ ಬದುಕುವವರಿಗೆಲ್ಲ ಅದ್ಯಾವ ಕರ್ಫ್ಯೂ, ಅದ್ಯಾವ ಚಪ್ಪಾಳೆ ಅನ್ನೋ ಹಾಗಾಗಿದೆ. ದೇಶದ ಚಿತ್ರಣದಲ್ಲಿ ಮೋದಿ ಕಣ್ಮುಂದೆ ಇವರ್ಯಾರೂ ಯಾವತ್ತೂ ಸ್ಥಾನ ಪಡೆಯದಿರುವುದು ಗಮನಾರ್ಹ ಸಂಗತಿ.

ಇನ್ನು ಕೇಂದ್ರ ಕರೋನಾ ಸೋಂಕಿನ ವಿರುದ್ಧ ಹೋರಾಡಲು ವಿಶೇಷ ಪ್ಯಾಕೆಜ್‌ ನೀಡುವಂತೆ ಕೆಲ ದಿನಗಳ ಹಿಂದಷ್ಟೇ ರಾಜ್ಯದ ಅಧಿವೇಶನದಲ್ಲೂ ವಿಪಕ್ಷ ನಾಯಕರೂ ಒತ್ತಾಯಿಸಿದ್ದರು. ಆದರೆ ರಾಜ್ಯಕ್ಕೆ ನೆರೆ ಪರಿಹಾರ ರೂಪದಲ್ಲಿ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ಹಣವೇ ಇನ್ನೂ ಬಂದಿಲ್ಲ. 38 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದ ರಾಜ್ಯಕ್ಕೆ ಇದುವರೆಗೂ ಕೇಂದ್ರ ಸರಕಾರ ಎರಡು ಹಂತಗಳಲ್ಲಿ ನೀಡಿದ್ದು ಬರೇ 1869 ಕೋಟಿ ರೂಪಾಯಿಗಳಷ್ಟೇ. ಆದ್ದರಿಂದ ರಾಜ್ಯ ಬಿಜೆಪಿ ಸರಕಾರವು ಕೇಂದ್ರ ಸರಕಾರದಿಂದ ಇನ್ನೂ ಹೆಚ್ಚಿನ ಯಾವುದೇ ನಿರೀಕ್ಷೆ ಇಟ್ಟುಕೊಂಡಂತಿಲ್ಲ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಬಹಳ ಪ್ರಮಾಣದಲ್ಲಿ ಬರಬೇಕಾಗಿದ್ದ ಕೇಂದ್ರದ ಪರಿಹಾರ ಹಣ ಇನ್ನೂ ಬಂದಿಲ್ಲ ಎನ್ನುವ ವಿಚಾರವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದ್ದರಿಂದ ಕೇಂದ್ರ ಸರಕಾರ ಕರ್ನಾಟಕವಾಗಲೀ ಇನ್ನಿತರ ರಾಜ್ಯಕ್ಕಾಗಲೀ ಯಾವುದೇ ವಿಶೇಷ ಪ್ಯಾಕೇಜ್‌ ನೀಡುತ್ತೆ ಎಂದು ಆಪೇಕ್ಷಿಸುವುದು ಮೂರ್ಖತನವಾದೀತು.

ಬದಲಾಗಿ ಸಾಲ ಪಾವತಿಗೆ ಒಂದಿಷ್ಟು ಸಮಯ ಸಿಗಬಹುದು, ಸಾಲ ಮನ್ನಾ ಆಗಬಹುದು, ಬಡ್ಡಿ ದರ ಇಳಿಕೆಯಾಗಬಹುದು, ಕರೋನಾ ವಿರುದ್ಧ ಜನತಾ ಔಷಧಿ, ಜನತಾ ಲ್ಯಾಬ್‌, ಜನತಾ ಐಸೋಲೇಷನ್‌ ಸಂಖ್ಯೆ ಜಾಸ್ತಿಯಾಗಬಹುದು ಅಂದುಕೊಂಡಿದ್ದ ದೇಶದ ಪ್ರಜ್ಞಾವಂತ ನಾಗರಿಕರ ಮೇಲೆ ʼಜನತಾ ಕರ್ಫ್ಯೂʼ ಅನ್ನೋ ಭ್ರಮೆಯನ್ನ ತೇಲಿ ಬಿಡಲಾಗಿದೆ. ಅದೇ ಭ್ರಮಾಲೋಕದಲ್ಲಿ ದೇಶದ ಹಲವು ಮಂದಿ ತೇಲಾಡುತ್ತಿರುವುದು ಸತ್ಯ. ವಾಸ್ತವ ಮತ್ತು ಭ್ರಮೆಗೆ ವ್ಯತ್ಯಾಸ ಗೊತ್ತಾಗದಂತೆ ಜಾಲತಾಣಗಳು, ಮಾಧ್ಯಮಗಳು ʼಜನತಾ ಕರ್ಫ್ಯೂʼ ಅನ್ನು ಆಚರಣೆಗೆ ಸಿದ್ಧ ಮಾಡಿಕೊಂಡಿದ್ದಾವೆ. ಇಂತಹ ಮಾಧ್ಯಮಗಳಿಗೆ ಕೇರಳ ಸಿಎಂ ಘೋಷಿಸಿದ ವಿಶೇಷ ಪ್ಯಾಕೇಜ್‌ ಜುಜುಬಿಯಾಗಿ ಕಂಡಿರೋದರಲ್ಲಿ ಅಚ್ಚರಿಯಿಲ್ಲ.

ನೋಟ್‌ ಬ್ಯಾನ್‌, ಜಿಎಸ್‌ಟಿಯಂತಹ ಕಾಯ್ದೆ ಜಾರಿ ಮಾಡಬೇಕಾದರೂ ಇಂತಹದ್ದೇ ಭ್ರಮೆಯನ್ನು ಬಿತ್ತಲಾಗಿತ್ತು. ಆದರೆ ಕೊನೆಯದಾಗಿ ಅದರಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದೇ ವಿನಃ ಎಲ್ಲೂ ಆರ್ಥಿಕ ಸುಧಾರಣೆ ಕಾಣಲು ಸಾಧ್ಯವಾಗಿಲ್ಲ. ವಿಶೇಷವಾಗಿ ಕರ್ನಾಟಕದಂತಹ ರಾಜ್ಯಗಳು ಇನ್ನೂ ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಮೊತ್ತಕ್ಕೂ ಅಂಗಲಾಚಿಕೊಂಡು ಕೂರಬೇಕಾದ ಪರಿಸ್ಥಿತಿ ಇದೆ. ಈ ಎಲ್ಲಾ ವಾಸ್ತವಗಳ ನಡುವೆಯೇ ಜನರನ್ನು ಭ್ರಮಾಲೋಕದಲ್ಲಿರಿಸಿ ಕರೋನಾ ತಡೆಗಟ್ಟುತ್ತೀವಿ ಅನ್ನೋದು ಎಷ್ಟು ಸರಿ..? ಎಲ್ಲಾದರೂ ಮಂತ್ರಕ್ಕೆ ಮಾವಿನ ಕಾಯಿ ಉದುರಿದ ಉದಾಹರಣೆ ಕೊಡಲು ಸಾಧ್ಯವೇ..? ಅಂತಹದ್ದರಲ್ಲಿ ಈ ರೀತಿಯ ಪ್ರಯತ್ನ ಸರಿಯಲ್ಲ. ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗಳಲ್ಲಿ, ಕ್ವಾರೆಂಟೈನ್‌ ಸೆಂಟರ್‌ಗಳಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವ ಜನರ ಆರೋಗ್ಯಕ್ಕಾಗಿ ಕೇಂದ್ರ ಸರಕಾರ ತಾನು ಏನು ಮಾಡುತ್ತೆ ಅನ್ನೋದನ್ನ ಹೇಳಲೇಬೇಕಿದೆ. ಅದು ಬಿಟ್ಟು ʼಜನತಾ ಕರ್ಫ್ಯೂʼ ಅನ್ನೋ ಲಾಜಿಕ್‌ ಶಬ್ದಗಳನ್ನು ಹಿಡಿದುಕೊಂಡು ಜನರ ಮನಸ್ಸು ಗೆಲ್ಲಬಹುದು, ಆದರೆ ರೋಗವನ್ನಲ್ಲ. ಆದ್ದರಿಂದ ದೇಶದ ಜನತೆಯೂ ಕರೋನಾ ವೈರಸ್‌ ಬಗ್ಗೆ ಎಷ್ಟು ಜಾಗೃತವಾಗಿದೆಯೋ, ಅಷ್ಟೇ ಜಾಗೃತ ಇಂತಹ ʼಶಬ್ದʼಗಳ ಬಗ್ಗೆಯೂ ಇದ್ದಾಗ ಮಾತ್ರ ಪ್ರಧಾನ ಮಂತ್ರಿಯವರು ಹೇಳಿದಂತೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯವಾಗಬಹುದು.

Click here Support Free Press and Independent Journalism

Pratidhvani
www.pratidhvani.com