ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ, ತೀರ್ಪು ನೀಡಬೇಕಿರುವ ಆತ್ಮಸಾಕ್ಷಿ
ರಾಷ್ಟ್ರೀಯ

ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ, ತೀರ್ಪು ನೀಡಬೇಕಿರುವ ಆತ್ಮಸಾಕ್ಷಿ

ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ಅಂತಃಸತ್ವವೇ ವಿಶ್ವಾಸಾರ್ಹತೆ. ಈಗ ಆ ವಿಶ್ವಾಸಾರ್ಹತೆಯೇ ಕಟಕಟೆಯಲ್ಲಿ ನಿಂತಿದೆ. ಪರಮಾರ್ಶಿಸಿ ತೀರ್ಪು ನೀಡಬೇಕಿರುವುದು ಆತ್ಮಸಾಕ್ಷಿ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಗಿ ನಾಲ್ಕು ತಿಂಗಳ‌ ಹಿಂದಷ್ಟೇ ನಿವೃತ್ತರಾದ ರಂಜನ್ ಗೋಗಾಯ್ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದರಿಂದ ಈ ವಿಶ್ವಾಸಾರ್ಹತೆಯ ಪ್ರಶ್ನೆ ಎದ್ದಿದೆ.

ಯದುನಂದನ

ಇದೇ 16ನೇ ತಾರೀಖು ಸಂಜೆ ರಂಜನ್ ಗೋಗಾಯ್ ರಾಜ್ಯಸಭೆಗೆ ನಾಮನಿರ್ದೇಶನದ ಅಧಿಕೃತ ಆದೇಶ ಹೊರಬಂತು.‌ ಈ ಬಗ್ಗೆ ನೂರಾರು ರೀತಿಯ ಟೀಕೆಗಳು ಬರುತ್ತಿವೆ. ಕೇಂದ್ರ ಸರ್ಕಾರ ಮತ್ತು ರಂಜನ್ ಗೋಗಯ್ ಇಬ್ಬರ ಬಗ್ಗೆಯೂ ಟೀಕೆಗಳು ಬರುತ್ತಿವೆ. ಆದರೆ ಈವರೆಗೆ ಯಾರೊಬ್ಬರೂ ಕೂಡ, ಅದರಲ್ಲೂ ನ್ಯಾಯಾಂಗ ಮೂಲದವರು ರಂಜನ್ ಗೋಗಾಯ್ ನಾಮನಿರ್ದೇಶನವನ್ನು ಸಮರ್ಥಿಸಿ ಮಾತನಾಡಿಲ್ಲ. ಜಸ್ಟೀಸ್ ರಂಗನಾಥ್ ಮಿಶ್ರಾ ಪ್ರಕರಣವನ್ನು ಬಿಜೆಪಿ ಉಲ್ಲೇಖಿಸುತ್ತಿದೆಯಾದರೂ ಅದು ತಥಾಕಥಿತ ರಾಜಕೀಯ ಪಕ್ಷವೊಂದರ 'ಸಮರ್ಥನೆಯ ಸಂಪ್ರದಾಯವೇ' ಹೊರತು. ನಿಜ ಅರ್ಥದ ಸಮರ್ಥನೆ ಎಂಬಂತೆ ಧ್ವನಿಸುತ್ತಿಲ್ಲ.

ರಂಜನ್ ಗೋಗಾಯ್ ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಕಾಂಗ್ರೆಸ್ ಕಲಾಪ ಬಹಿಷ್ಕರಿಸಿ, 'ನಿಮಗೆ ನಾಚಿಕೆಯಾಗಬೇಕು' ಎಂಬರ್ಥದ 'ಶೇಮ್' ಪದ ಬಳಸಿ ಮೂದಲಿಸಿದೆ. ಹೀಗೆ ಸಹೋದ್ಯೋಗಿ ಸಂಸದನೊಬ್ಬನ ಪ್ರಮಾಣವಚನವನ್ನು ಬಹಷ್ಕರಿಸಿದ್ದು ವಿರಳಾತಿವಿರಳ ಪ್ರಸಂಗ‌. ಇಷ್ಟು ದಿನ ಮಾತುಮಾತಿಗೂ 'ಗೌರವಾನ್ವಿತ ನ್ಯಾಯಮೂರ್ತಿಗಳೇ...' ಎಂದು ಕರೆಸಿಕೊಳ್ಳುತ್ತಿದ್ದ ರಂಜನ್ ಗೋಗಯ್ ಅವರನ್ನು ಈಗ 'ನಿಮಗೆ ನಾಚಿಕೆಯಾಗಬೇಕು...' ಎಂದು ಹೇಳಲಾಗಿದೆ.

ರಂಜನ್ ಗೋಗಾಯ್ 2018ರ ಅಕ್ಟೋಬರ್ 3ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿ ಅಧಿಕಾರವಹಿಸಿಕೊಂಡ ವೇಳೆ 'ಸ್ವತಂತ್ರ ನ್ಯಾಯಮೂರ್ತಿಗಳು ಮತ್ತು ಸದ್ದು ಮಾಡುವ ಪತ್ರಕರ್ತರಷ್ಟೇಯಲ್ಲ, ಸದ್ದು ಮಾಡುವ ನ್ಯಾಯಮೂರ್ತಿಗಳು ಮತ್ತು ಸ್ವತಂತ್ರ ಪತ್ರಕರ್ತರು ಕೂಡ ಇರಬೇಕು' ಎಂದಿದ್ದರು. ಈ ಮಾತಿಗೆ ಪೂರಕವಾಗಿ ಮುಖ್ಯ ನ್ಯಾಯಮೂರ್ತಿ ಆಗುವ ಕೆಲ ದಿನಗಳ ಹಿಂದೆ ತನ್ನ ಇತರೆ ಮೂವರು ಸಹುದ್ಯೋಗಿ ನ್ಯಾಯಮೂರ್ತಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ 'ಸದ್ದು ಮಾಡುವ' ನ್ಯಾಯಮೂರ್ತಿ ಆಗಿದ್ದರು. ಆಗ ಆ ರೀತಿ ಸದ್ದು ಮಾಡಲು ಸಹಕರಿಸಿದವರು ಸ್ವತಂತ್ರ ಪತ್ರಕರ್ತರು ಎಂಬುದು ದೆಹಲಿ ಪತ್ರಿಕೋದ್ಯಮದ ಪಡಸಾಲೆಯಲ್ಲಿ ಎಲ್ಲರಿಗೂ ಗೊತ್ತಿರುವ ಸತ್ಯವೇ. ಆಗ ಸದ್ದು ಮಾಡುವ ನ್ಯಾಯಮೂರ್ತಿ ಆಗಿದ್ದ ಅವರು, 'ಸ್ವತಂತ್ರ್ಯ ನ್ಯಾಯಮೂರ್ತಿ ಯಾವಾಗ ಆಗಿದ್ದರು?' ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಈಗ ಅವರು ಕೊಟ್ಟಿರುವ ತೀರ್ಪುಗಳ ಮೇಲೂ ಅದರಲ್ಲೂ ಮುಖ್ಯ ನ್ಯಾಯಮೂರ್ತಿಯಾಗಿ ಕೊಟ್ಟಿರುವ ತೀರ್ಪುಗಳ ಮೆಲೆ ಅಪನಂಬಿಕೆಯ ಕರಿನೆರಳು ಕಾಣಿಸುತ್ತಿದೆ.

'ಸದ್ದು ಮಾಡುವ' ನ್ಯಾಯಮೂರ್ತಿಯಾಗಿದ್ದ, ಸ್ವತಂತ್ರ ನ್ಯಾಯಮೂರ್ತಿ ಆಗಲು ಸಾಧ್ಯವಾಗದ ರಂಜನ್ ಗೋಗಯ್ ಮುಂದೆ ಸ್ವತಂತ್ರವಾಗಿ ರಾಜ್ಯಸಭೆಯಲ್ಲಿ ಸದ್ದು ಮಾಡಲು ಸಾಧ್ಯವೇ? ದೇಶದ ಅತಿ ಎತ್ತರದ ನ್ಯಾಯಾಲಯದಿಂದ ಬಂದು ಪ್ರಜಾಪ್ರಭುತ್ವದ ಇನ್ನೊಂದು ಪವಿತ್ರ ಸ್ಥಾನದಲ್ಲಿ ತುಟಿ ಕಚ್ಚಿಕೊಂಡು ಯಾವ 'ಕೊಡುಗೆ' ನೀಡಬಲ್ಲರು? ಸಾಧ್ಯವಿಲ್ಲ ಎನ್ನುವುದಾದರೆ ನಿವೃತ್ತಿಯ ಬಳಿಕ ನಿರರ್ಥಕವಲ್ಲದೆ ಮತ್ತೆನೂ ಅಲ್ಲ.

'ಬಹಳ ಬದ್ಧತೆಯಿಂದಲೇ ಇಲ್ಲಿಗೆ ಬಂದಿದ್ದೇನೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂಬ ಎರಡೇ ಎರಡು ಮಾತನಾಡಿ ಪಲಾಯನ ಮಾಡಿದ್ದ ರಂಜನ್ ಗೋಗಯ್ ಈಗ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಪ್ರಶ್ನೆಗಳಿಗೆ ಉತ್ತರಿಸಿಲ್ಲ. 'ರಾಜ್ಯಸಭೆಯಲ್ಲಿ ಪ್ರತಿಭಟಿಸಿದವರ ವಿರುದ್ಧ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ, ತಮ್ಮ ನಡೆ ಬಗ್ಗೆ ಯಾರ ವಿರೋಧವೂ ಇಲ್ಲ, ಎಲ್ಲರೂ ಸ್ವಾಗತಿಸಲಿದ್ದಾರೆ' ಎಂಬ ಮತ್ತೆರಡು ಮಾತನಾಡಿ ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣವೇ ತಾನು ಸದ್ದು ಮಾಡುವ ಅಥವಾ ಸ್ವತಂತ್ರ ನ್ಯಾಯಮೂರ್ತಿಯಲ್ಲ, ಕೇಂದ್ರ ಸರ್ಕಾರ ಕರುಣಿಸಿರುವ ರಾಜ್ಯಸಭಾ ಸದಸ್ಯತ್ವ ಪಡೆದಿರುವ ಪಲಾನುಭವಿ ಎಂಬುದನ್ನು ಸಾಬೀತು ಪಡಿಸಿದ್ದಾರೆ‌; ಅಕ್ಷರಶಃ ರಾಜಕಾರಣಿಗಳ ರೀತಿ. ಬಹುಶಃ ಇದಕ್ಕೆ ಇರಬೇಕು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು, ರಂಜನ್ ಗೋಗಯ್ ಬಗ್ಗೆ ಅವಹೇಳನಕಾರಿ ಪದ ಬಳಸಿರುವುದು.

ವಿಶ್ವಾಸಾರ್ಹತೆ ಹೇಗಿರಬೇಕು ಎಂಬುದಕ್ಕೆ ಇದೇ ರಂಜನ್ ಗೋಗಯ್ ಅವರ ಸಹೋದ್ಯೋಗಿಯಾಗಿದ್ದ ಮತ್ತು ಇವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದ ಜಸ್ಟಿಸ್ ಚಲಮೇಶ್ವರ್ ಉದಾಹರಣೆ. ‌ನಿವೃತ್ತಿ ಆದ ತಕ್ಷಣ ಸುಪ್ರೀಂ ಕೋರ್ಟಿನ ಬಾರ್ ಅಸೋಸಿಯೇಷನ್ ‌ನೀಡುವ ಬಿಳ್ಕೋಡುಗೆ ಸಮಾರಂಭದಲ್ಲೂ ಭಾಗವಹಿಸದೆ ಮಾರನೇ ದಿನವೇ ತಮ್ಮ ಸರ್ಕಾರಿ ನಿವಾಸವನ್ನು ತ್ಯಜಿಸಿ ಹುಟ್ಟಿದ ಊರಿಗೆ ಮರಳಿದವರು ಜಸ್ಟೀಸ್ ಚಲಮೇಶ್ವರ್. ಅಂದು ಸದ್ದು ಮಾಡಿದ್ದ ಅವರೀಗ ನಿಜ ಅರ್ಥದ ಸ್ವತಂತ್ರ ನ್ಯಾಯಮೂರ್ತಿಗಳು.

ಆ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ರಂಜನ್ ಗೋಗಯ್ 'ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಆತಂಕ ವ್ಯಕ್ತಪಡಿಸಿದ್ದರು‌. ಅಂದಿನ ಮುಖ್ಯ ನ್ಯಾಯಮೂರ್ತಿಗಳು ಕೇಸುಗಳ ಹಂಚಿಕೆಯಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದರು. ಇದರ ಮೂಲಕ ಆಳುವ ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಕಂಟಕ ಬಂದೊದಗಿದೆ ಎಂದು ಹಳಹಳಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ತಮ್ಮ ವಿರುದ್ಧವೇ ಬಂದಿದ್ದ ಆರೋಪವನ್ನು ತಾವೇ ವಿಚಾರಣೆ ನಡೆಸಿ ರಂಜನ್ ಗೋಗಯ್ ಈಗ ಅದೇ ಆಳುವ ಸರ್ಕಾರದೊಂದಿಗೆ ಸೇರಿಕೊಳ್ಳುವ ಮೂಲಕ‌ ಪ್ರಜಾಪ್ರಭುತ್ವದ ಮೌಲ್ಯವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯಬಯಸಿದ್ದಾರೆ.

ರಂಜನ್ ಗೋಗಯ್ ಅವರ ಪ್ರಹಸನದ ಪ್ರತಿ ಘಟ್ಟವೂ ವಿಶ್ವಾಸಾರ್ಹತೆ ಬಗೆಗೆ ಮೂಡಿರುವ ಅನುಮಾನಗಳೆಡೆಗೇ ಹೊರಳುತ್ತವೆ. ನ್ಯಾಯಮೂರ್ತಿಗಳಾದವರು ನಿವೃತ್ತರಾದ ಬಳಿಕ ರಾಜ್ಯಪಾಲ, ರಾಜ್ಯಸಭಾ ಸದಸ್ಯ, ಸಿಎಜಿ, ಯೂಪಿಎಸ್ ಸಿ, ಲೋಕಪಾಲ್ ಮತ್ತಿತರ ಹುದ್ದೆಗಳನ್ನು ಅಲಂಕರಿಸುವ ಬಗೆಗಿನ ಚರ್ಚೆ ಬಹಳ ಹಿಂದಿನದು. ನಿವೃತ್ತಿಯಾದ ಬಳಿಕ ಕನಿಷ್ಠ ಪಕ್ಷ 2 ವರ್ಷವಾದರೂ ಅಂತರ ಇರಬೇಕೆಂಬ ಮತ್ತೊಂದು ವಾದವಿದೆ. 2012ರಲ್ಲಿ ಬಿಜೆಪಿ ನಾಯಕ ಅರುಣ್ ಜೈಟ್ಲಿ 'ಎರಡು ರೀತಿಯ ನ್ಯಾಯಾಧೀಶರಿರುತ್ತಾರೆ. ಒಂದು ಕಾನೂನನ್ನು ಚೆನ್ನಾಗಿ ಬಲ್ಲವರು, ಇನ್ನೊಂದು ಕಾನೂನು ಮಂತ್ರಿಯನ್ನು ಚೆನ್ನಾಗಿ ಬಲ್ಲವರು' ಎಂದು ಹೇಳಿದ್ದರು. ಜೈಟ್ಲಿ ವಕೀಲರಾಗಿದ್ದರು ಮತ್ತು ಕಾನೂನು ಸಚಿವರಾಗಿದ್ದರು. ಇದೇ ರೀತಿ ಕೇಂದ್ರ ಸಚಿವ ನಿತಿನ್ ಗಡ್ಕರಿ 'ನ್ಯಾಯಾಲಯದ ತೀರ್ಪುಗಳ ಮೇಲೆ ಸರ್ಕಾರದ ಪ್ರಭಾವ ಇರುತ್ತೆ' ಎಂದು ಹೇಳಿದ್ದರು. ಇಬ್ಬರು ನ್ಯಾಯಾಧೀಶರ ಬಗೆಗೆ ಆಡಿರುವ ಮಾತುಗಳು ಉಪೇಕ್ಷೆ ಮಾಡುವಂಥದ್ದಲ್ಲ. ವಿಶ್ವಾಸಾರ್ಹತೆ. ವಿಶ್ವಾಸಾರ್ಹತೆ ಕರಗಿರುವ ಹೊತ್ತಿನಲ್ಲಿ ಆತ್ಮಸಾಕ್ಷಿಯೊಂದರಿಂದ ಮಾತ್ರ ನ್ಯಾಯ ನಿರೀಕ್ಷೆ ಮಾಡಬಹುದು.

Click here Support Free Press and Independent Journalism

Pratidhvani
www.pratidhvani.com