ಆರ್ಥಿಕ ಸಮಸ್ಯೆಯಾಗಿ ಕರೋನಾ, ವಿಶ್ವ ನಾಯಕರ ಆಡಳಿತ ಕ್ರಮಗಳ ಅವಲೋಕನ
ರಾಷ್ಟ್ರೀಯ

ಆರ್ಥಿಕ ಸಮಸ್ಯೆಯಾಗಿ ಕರೋನಾ, ವಿಶ್ವ ನಾಯಕರ ಆಡಳಿತ ಕ್ರಮಗಳ ಅವಲೋಕನ

ಬಹುತೇಕ ದೇಶಗಳು ಕರೋನಾ ವೈರಸ್ ಪಿಡುಗಿನಿಂದ ಆಗುವ ಆರ್ಥಿಕ, ಸಾಮಾಜಿಕ, ಮಾನಸಿಕ, ಔದ್ಯೋಗಿಕ ಸಮಸ್ಯೆಗಳ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಂಡಿವೆ.‌ ಕರೋನಾ ವೈರಸ್ ಸೋಂಕು ನೀಡಿರುವ ಸವಾಲನ್ನು ವಿವಿಧ ದೇಶಗಳು ಹೇಗೆ ಎದುರಿಸಿವೆ ಎಂದು ಗಮನಿಸಿದರೆ ನಾವು ಕೈಗೊಂಡಿರುವ ಕ್ರಮಗಳ ವಿಶ್ಲೇಷಣೆ ನಡೆಸಿದಂತಾಗುತ್ತದೆ.

ರಮೇಶ್ ಎಸ್ ಪೆರ್ಲ

ಕೋವಿಡ್‌ 19 ಕರೋನಾ ವೈರಸ್ ಕೇವಲ ಆರೋಗ್ಯ ಸಮಸ್ಯೆಯಲ್ಲದೆ ವಿಶ್ವದಾದ್ಯಂತ ಆರ್ಥಿಕ, ಕಾರ್ಮಿಕ, ವೈದ್ಯಕೀಯ ಮತ್ತು ಮನಃಶಾಸ್ತ್ರ ಸವಾಲಾಗಿ ಪರಿಣಮಿಸಿದೆ. ವಿಶ್ವದ 150ಕ್ಕೂ ದೇಶಗಳಿಗೆ ಕರೋನಾ ವೈರಸ್ ಹಬ್ಬಿದೆ. ಹನ್ನೆರಡಕ್ಕೂ ಹೆಚ್ಚು ದೇಶಗಳಲ್ಲಿ ಕರೋನಾ ವೈರಸ್ ಸೋಂಕು ಸಾಂಕ್ರಮಿಕ ರೋಗವಾಗಿ ಹರಡಿದೆ. ಕೆಲವು ಅಭಿವೃದ್ಧಿಹೊಂದಿದೆ ದೇಶಗಳೇ ಕೇವಲ ಒಂದು ವೈರಸ್ ದಾಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ನಲುಗಿ ಹೋಗಿವೆ. ಆರೋಗ್ಯಕ್ಕಿಂತಲೂ ಹೆಚ್ಚಾಗಿ ಕರೋನಾ ವೈರಸ್ ನೀಡಿರುವ ಆರ್ಥಿಕ ಆಘಾತ ಗಂಭೀರವಾಗಿದೆ.

ಕರೋನಾ ವೈರಸ್ ಸೋಂಕು ನೀಡಿರುವ ಸವಾಲನ್ನು ವಿವಿಧ ದೇಶಗಳು ಹೇಗೆ ಎದುರಿಸಿವೆ ಎಂದು ಗಮನಿಸಿದರೆ ನಾವು ಕೈಗೊಂಡಿರುವ ಕ್ರಮಗಳ ವಿಶ್ಲೇಷಣೆ ನಡೆಸಿದಂತಾಗುತ್ತದೆ.

ಮೊದಲಿಗೆ ಕರೋನಾ ವೈರಸ್ ಕಾಣಿಸಿಕೊಂಡ ಚೀನಾ ದೇಶದ ವೂಹಾನ್ ಪ್ರಾಂತ್ಯವನ್ನು ಗಮನಿಸಿದಾಗ ಈಗಾಗಲೇ ಕಳೆದ ಹತ್ತು ದಿನಗಳಲ್ಲಿ ಈ ವಿಶ್ವದ ಅತೀ ದೊಡ್ಡ ಮಾರುಕಟ್ಟೆ ಮತ್ತೆ ಯಾಥಾಸ್ಥಿತಿಗೆ ಮರಳವತ್ತ ಹೆಜ್ಜೆ ಇರಿಸಿದೆ. ಚೀನಾದಲ್ಲಿ ಹೊಸ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿಲ್ಲ. ಆರಂಭದಲ್ಲಿ ಚೀನಾ ಸ್ವಲ್ಪ ಮಟ್ಟಿಗೆ ಎಡವಿದರು ಕೂಡ ಅನಂತರ ದಿನಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕಮ್ಯೂನಿಸ್ಟ್ ಆಡಳಿತದ ಚೀನಾ ಅತ್ಯಂತ ದಿಟ್ಟತನದ ನಿರ್ಧಾರಗಳನ್ನು ಕೈಗೊಂಡಿತು. ಅದುವೇ ರೋಗಾಣು ಹರಡದಂತೆ ತಡೆಗಟ್ಟಿರುವುದು.

ಚೀನಾ ವೂಹಾನ್ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಡಿಸೆಂಬರ್ ತಿಂಗಳಲ್ಲೇ ಕರೋನಾ ವೈರಸ್ ಕಾಣಿಸಿಕೊಂಡಿತು. ಚೀನಾದಲ್ಲಿ ಹೆಚ್ಚು ಕಡಿಮೆ ಒಂದು ಲಕ್ಷ ಮಂದಿಗೆ ಸೋಂಕು ತಗುಲಿ 3,200 ಮಂದಿ ಸಾವನ್ನಪ್ಪಿದ್ದಾರೆ. ಜನವರಿ ತಿಂಗಳ 23ರಲ್ಲಿ ಚೀನಾ ಸಾರ್ವಜನಿಕ ಪ್ರದೇಶಗಳ ಬಂದ್ ಪ್ರಕ್ರಿಯೆ ಆರಂಭಿಸಿತು. ಶಾಲಾ ಕಾಲೇಜು, ಸಾಮೂಹಿಕ ಸಮಾರಂಭ, ಮದುವೆ ಇತ್ಯಾದಿಗಳಿಗೆ ನಿಷೇಧ ಹೇರಲಾಯಿತು. ಅನಂತರ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ನಿಯಂತ್ರಣ ಹೇರಲಾಯಿತು. ಇದರಿಂದಾಗಿ ಒಂದು ತಿಂಗಳಲ್ಲಿ ಸೋಂಕು ಹತೋಟಿಗೆ ಬಂತು. ಮಾರ್ಚ್ ಮೊದಲ ವಾರ ಹೆಚ್ಚು ಕಡಿಮೆ ನಿಯಂತ್ರಣಕ್ಕೆ ಬಂದಿತ್ತು. ಆ ವೇಳೆ ವಿಶ್ವದ ಇತರ ದೇಶಗಳಿಗೆ ಕರೋನಾ ವೈರಸ್ ರವಾನೆ ಆಗಿತ್ತು. ಚೀನಾ ವಿಶ್ವದ ಅತೀ ದೊಡ್ಡ ವಾಣಿಜ್ಯ ಮಾರುಕಟ್ಟೆಯಾದ ಕಾರಣ ಸಹಜವಾಗಿ ರೋಗಾಣು ಪ್ರಸರಣವಾಯ್ತು.

ಆರ್ಥಿಕ ಸಮಸ್ಯೆಯಾಗಿ ಕರೋನಾ, ವಿಶ್ವ ನಾಯಕರ ಆಡಳಿತ ಕ್ರಮಗಳ ಅವಲೋಕನ

ಇದೇ ವೇಳೆಗೆ ಚೀನಾ ದೇಶದ ಸನಿಹದ ಸಿಂಗಾಪುರ, ಥೈವಾನ್, ಹಾಂಕಾಂಗ್ ನಂತಹ ಚಿಕ್ಕ ದೇಶಗಳು ಕ್ಷಿಪ್ರವಾಗಿ ಇದೇ ಮಾದರಿಯ ಕ್ರಮಗಳನ್ನು ಕೈಗೊಂಡರು. ಆದರೆ, ಇರಾನ್, ಪಾಕಿಸ್ತಾನದಂತಹ ದೇಶಗಳಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲಿಲ್ಲ. ಮಾತ್ರವಲ್ಲದೆ, ಯುರೋಪಿನ ದೊಡ್ಡ ರಾಷ್ಟ್ರಗಳಲ್ಲಿ ಕೂಡ ಇದೇ ಮಾದರಿಯ ಬಂದ್ ಅನುಷ್ಠಾನ ನಡೆಸಲು ಸಾಧ್ಯವಾಗಲಿಲ್ಲ.

ಆದರೆ, ಬಹುತೇಕ ದೇಶಗಳು ಕರೋನಾ ವೈರಸ್ ಪಿಡುಗಿನಿಂದ ಆಗುವ ಆರ್ಥಿಕ, ಸಾಮಾಜಿಕ, ಮಾನಸಿಕ, ಔದ್ಯೋಗಿಕ ಸಮಸ್ಯೆಗಳ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಂಡಿವೆ. ಮೊದಲಿಗೆ ಕೆನಡಾ ದೇಶ ದೇಶದ ವಿವಿದ ಸ್ತರಗಳ ಕಾರ್ಮಿಕರು, ಮಧ್ಯಮವರ್ಗದವರು, ಸಣ್ಣ ವ್ಯಾಪಾರಿಗಳು, ಸಾಮಾಜಿಕ ಕ್ಷೇಮ ಕಾರ್ಯಕ್ರಮಗಳಿಂದ ಹೊರಗುಳಿದವರು, ಆರೋಗ್ಯ ವಿಮೆ ಹೊಂದಿಲ್ಲದವರು, ನಿರುದ್ಯೋಗಿಗಳಿಗೆ ಪ್ರತ್ಯೇಕವಾದ ಜೀವಾನಾಧರ ಕಾರ್ಯಕ್ರಮಗಳ ಘೋಷಣೆ ಮಾಡಿದೆ. ಈಗಿರುವ ಆರೋಗ್ಯ ವಿಮೆ ಮತ್ತು ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳಿಂದ ಹೊರಗಿರುವ ಮಂದಿಗೆ ಹೊಸ ಆರ್ಥಿಕ ಕಾರ್ಯಕ್ರಮ ಪ್ರಕಟಿಸಿದೆ. ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ತಮ್ಮ ಕಾರ್ಮಿಕರಿಗೆ ಮಾಸಿಕ ವೇತನ ನೀಡಲು ಆರ್ಥಿಕ ಬೆಂಬಲ ನೀಡಿದೆ.

ಅಮೆರಿಕ, ಆಸ್ಟ್ರೇಲಿಯ, ಪೋಲೆಂಡ್, ಇಂಗ್ಲೆಂಡ್, ನ್ಯೂಜಿಲೆಂಡ್ ಮುಂತಾದ ದೇಶಗಳಲ್ಲಿ ಜನರ ಹಿತರಕ್ಷಣೆಯ ದೃಷ್ಟಿಯಿಂದ ದೇಶದ ಆರ್ಥಿಕತೆಗೆ ಬಹುದೊಡ್ಡ ಪ್ರಮಾಣದ ಬಂಡವಾಳ, ಅನುದಾನ ಅಥವ ಸಾಲ ಸ್ವರೂಪದ ಆರ್ಥಿಕ ಸಹಾಯವನ್ನು ಘೋಷಣೆ ಮಾಡಲಾಗಿದೆ.

ಕರೋನಾ ವೈರಸ್ ಪಿಡುಗಿನಿಂದ ಬಹುಸಂಖ್ಯಾತ ಕಾರ್ಮಿಕ ವರ್ಗ ಮತ್ತು ಸಣ್ಣ ವಾಣಿಜ್ಯದ್ಯೋಮಿಗಳು ಆದಾಯ ರಹಿತರಾಗುವುದರಿಂದ ಇಂತಹ ದೇಶಗಳು ಆರ್ಥಿಕ ಪುನಶ್ಚೇತನದ ಕಾರ್ಯಕ್ರಮಗಳನ್ನು ಕ್ಲಪ್ತ ಕಾಲದಲ್ಲಿ ಘೋಷಣೆ ಮಾಡಿವೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿರುವ ಅಮೆರಿಕಾ ದೇಶದಲ್ಲೇ ಒಂದು ಟ್ರಿಲಿಯಲ್ ಅಮೆರಿಕನ್ ಡಾಲರ್ ಆರ್ಥಿಕ ಪುನಶ್ಚೇತನ ಘೋಷಣೆ ಮಾಡಲಾಗಿದೆ.

ಅಮೆರಿಕಾ ಸರಕಾರ ತನ್ನ ಪ್ರಜೆಗಳಿಗೆ ಬ್ಲಾಂಕ್ ಚೆಕ್ ನೀಡಲು ಕೂಡ ಸಿದ್ಧವಾಗಿದೆ ಎನ್ನುತ್ತದೆ ಮಾಧ್ಯಮ ವರದಿಗಳು. ಅರ್ಥಾತ್ ಕಾರ್ಮಿಕ ವರ್ಗದವರು ಮತ್ತು ಸಣ್ಣ ವ್ಯಾಪಾರಿಗಳಿಗೆ ತಕ್ಷಣ ಆರ್ಥಿಕ ನೆರವು ದೊರಕಿಸುವುದು ಅಮೆರಿಕ ಸರಕಾರದ ಉದ್ದೇಶವಾಗಿದೆ. ಮಾತ್ರವಲ್ಲದೆ ಇವೆಲ್ಲ ದೇಶಗಳು ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಎಲ್ಲ ಸಿಬ್ಬಂದಿಗೆ ಹೆಚ್ಚಿನ ಬೋನಸ್ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಆರ್ಥಿಕ ಸಮಸ್ಯೆಯಾಗಿ ಕರೋನಾ, ವಿಶ್ವ ನಾಯಕರ ಆಡಳಿತ ಕ್ರಮಗಳ ಅವಲೋಕನ

ನಿರುದ್ಯೋಗವನ್ನು ನಿಭಾಯಿಸುವುದು ಬಹುತೇಕ ಇಂತಹ ಪ್ರಗತಿಪರ ದೇಶಗಳ ಉದ್ದೇಶವಾಗಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಉಂಟಾಗ ಬಹುದಾದ ಬಹುದೊಡ್ಡ ಆರ್ಥಿಕ ಸಂಕಷ್ಟವನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಲು ಸಾಧ್ಯ ಆಗಲಿದೆ.

ಯುರೋಪಿಯನ್ ದೇಶಗಳು 120 ಬಿಲಿಯನ್ ಯುರೋ ಮೊತ್ತವನ್ನು ಕರೋನಾ ವೈರಸ್ ಪಿಡುಗಿನಿಂದ ಆಗಬಹುದಾದ ಅನಾಹುತಗಳನ್ನು ನಿಭಾಯಿಸಲು ಕ್ರೋಢೀಕರಿಸಲಿವೆ. ಕರೋನಾ ವೈರಸ್ ಯುರೋಪ್ ದೇಶಗಳ ಶೇರು ಮಾರುಕಟ್ಟೆ, ವೈದ್ಯಕೀಯ ಸೇವೆ, ವಾಣಿಜ್ಯ ಚಟುವಟಿಕೆಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರಿದೆ.

ಕರೋನಾ ವೈರಸ್ ವಿಶ್ವದಾದ್ಯಂತ ಕ್ರೀಡೆ, ಕ್ರಿಕೆಟ್, ವಾಣಿಜ್ಯ, ಪ್ರವಾಸೋದ್ಯಮ, ಸಾರಿಗೆ ಕ್ಷೇತ್ರಗಳ ಮೇಲೆ ದೂರಗಾಮಿ ಪರಿಣಾಮ ಬೀರಿದೆ. ಬಹಳಷ್ಟು ದೇಶಗಳು ಪ್ರವಾಸಿಗರನ್ನು ಅವಲಂಬಿಸಿದ್ದು, ಕರೋನಾ ವೈರಸ್ ಇವೆಲ್ಲದರ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ರಾಷ್ಟ್ರಗಳ ಸರಕಾರಗಳು ತಮ್ಮ ಆರ್ಥಿಕತೆ ಮತ್ತು ಜನರ ಹಿತರಕ್ಷಣೆಗಾಗಿ ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಇದೇ ಮಾದರಿಯಲ್ಲಿ ಕೇರಳ ರಾಜ್ಯ ಕೂಡ ಕೆಲವೊಂದು ಪ್ರಶಂಸನಾರ್ಹ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನಾವಿಲ್ಲಿ ಉಲ್ಲೇಖಿಸಲೇ ಬೇಕಾಗಿದೆ.

Click here Support Free Press and Independent Journalism

Pratidhvani
www.pratidhvani.com