ಪೇಟೆಯಲ್ಲಿ ತಾತ್ಕಾಲಿಕ ಚೇತರಿಕೆ; ಡಾಲರ್ ವಿರುದ್ಧ ನಿಲ್ಲದ ರುಪಾಯಿ ಮೌಲ್ಯ ಇಳಿಕೆ
ರಾಷ್ಟ್ರೀಯ

ಪೇಟೆಯಲ್ಲಿ ತಾತ್ಕಾಲಿಕ ಚೇತರಿಕೆ; ಡಾಲರ್ ವಿರುದ್ಧ ನಿಲ್ಲದ ರುಪಾಯಿ ಮೌಲ್ಯ ಇಳಿಕೆ

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುವುದನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ತುರ್ತು ಕ್ರಮ ಕೈಗೊಳ್ಳಬೇಕಿದೆ. ನಗದು ಹರಿವಿಗಾಗಿ ಪ್ರಕಟಿಸಿದ ಕ್ರಮಗಳಿಂದಾಗಿ ರುಪಾಯಿ ಮೌಲ್ಯ ಕುಸಿತ ತಡೆಗಟ್ಟಲು ಸಾಧ್ಯವಾಗಿಲ್ಲ. ಆರ್ಬಿಐ 480 ಬಿಲಿಯನ್ ಡಾಲರ್ ಗಳಷ್ಟು ವಿದೇಶಿ ವಿನಿಮಯ ಮೀಸಲನ್ನು ಹೊಂದಿದೆ. ಈ ಬೃಹತ್ ಪ್ರಮಾಣದ ವಿದೇಶಿ ವಿನಿಮಯ ಮೀಸಲನ್ನು ಇಂತಹ ಸಂಕಷ್ಟ ಕಾಲದಲ್ಲಿ ಬಳಸಿಕೊಳ್ಳಬೇಕು.

ರೇಣುಕಾ ಪ್ರಸಾದ್ ಹಾಡ್ಯ

‘ಕೋವಿಡ್-19’ ಹಾವಳಿಗೆ ಮೃತಪಟ್ಟವರ ಸಂಖ್ಯೆ 10,000 ದಾಟುತ್ತಿದ್ದಂತೆ ಮತ್ತು ಜಾಗತಿಕ ಆರ್ಥಿಕತೆಯು ಹಿಂಜಿರಿತದತ್ತ ವಾಲುವ ಸಾಧ್ಯತೆಯ ನಡುವೆಯೇ ಸತತ ಕುಸಿತದ ಹಾದಿಯಲ್ಲಿದ್ದ ಜಾಗತಿಕ ಷೇರುಪೇಟೆಗಳು ವಾರಾಂತ್ಯದ ವಹಿವಾಟಿನಲ್ಲಿ ಚೇತರಿಸಿಕೊಂಡಿದೆ. ದೇಶೀಯ ಷೇರುಪೇಟೆಯಲ್ಲೂ ಖರೀದಿಯ ಸಂಭ್ರಮ ತೀವ್ರಗೊಂಡಿತ್ತು. ಏಷಿಯಾ ಸೇರಿದಂತೆ ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಂಡಿದ್ದು ಒಂದು ಕಾರಣವಾದರೆ, ತೀವ್ರ ಕುಸಿತಗೊಂಡಿದ್ದ ಷೇರುಗಳ ಮೌಲ್ಯವು ಅತ್ಯಾಕರ್ಷಕವಾದ ಹಿನ್ನೆಲೆಯಲ್ಲಿ ಖರೀದಿ ಪ್ರಮಾಣ ಹಿಗ್ಗಿದ್ದು ಚೇತರಿಕೆಗೆ ಕಾರಣ. ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.5ರಷ್ಟು ಜಿಗಿದರೆ, ವಿಸ್ತೃತ ಮಾರುಕಟ್ಟೆಯ ವಿವಿಧ ಸೂಚ್ಯಂಕಗಳು ಶೇ.5ರಿಂದ ಶೇ8ರಷ್ಟು ಜಿಗಿದಿವೆ.

ವಾರದ ಮೊದಲ ನಾಲ್ಕು ದಿನಗಳ ಕಾಲ ಸತತ ಕುಸಿತ ದಾಖಲಿಸಿದ್ದರಿಂದಾಗಿ ವಾರಾಂತ್ಯದದ ಜಿಗಿತದ ನಡುವೆಯು ಇಡೀ ವಾರದಲ್ಲಿ ಸೂಚ್ಯಂಕಗಳು ಶೇ.12 ರಷ್ಟು ಕುಸಿತ ದಾಖಲಿಸಿವೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1628 ಅಂಶ ಏರಿಕೆ ಕಂಡು 29916ಕ್ಕೆ ಸ್ಥಿರಗೊಂಡರೆ ನಿಫ್ಟಿ 486 ಅಂಶ ಜಿಗಿದು 8750 ಕ್ಕೆ ಸ್ಥಿರಗೊಂಡಿದೆ. ನಿಫ್ಟಿ ಸೂಚ್ಯಂಕ ತನ್ನ ಗರಿಷ್ಠ ಮಟ್ಟದಿಂದ ಶೇ.33ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಕೂಡಾ ಅದೇ ಹಾದಿಯಲ್ಲಿದೆ. ವಾರಾಂತ್ಯದ ಚೇತರಿಕೆಯು ಮತ್ತಷ್ಟು ಹಾನಿಯಾಗುವುದನ್ನು ತೆಡೆದಿದೆ. ಒಎನ್ಜಿಸಿ, ಭಾರ್ತಿ ಏರ್ಟೆಲ್, ಗೇಲ್, ಅಲ್ಟ್ರಾಟೆಕ್ ಸೀಮೆಂಟ್, ಹಿಂದೂಸ್ತಾನ್ ಯೂನಿಲಿವರ್ ಶೇ.8ರಿಂದ 22ರಷ್ಟು ಏರಿಕೆ ದಾಖಲಿಸಿದವು. ಕೊರೊನಾ ವೈರಸ್ ಗೆ ಸಂಭವನೀಯ ಔಷಧಿ ಪತ್ತೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಫಾರ್ಮ ಕಂಪನಿಗಳ ಷೇರುಗಳು ಜಿಗಿದಿವೆ.

‘ಕೋವಿಡ್-19’ ಹಾವಳಿ ಪರಿಣಾಮ ಷೇರುಪೇಟೆಗಳಲ್ಲಾದ ಸತತ ಮಾರಣಹೋಮದಿಂದಾಗಿ ಜಾಗತಿಕ ಆರ್ಥಿಕತೆ ಹಿಂಜರಿತದತ್ತ ಹೊರಳುವುದನ್ನು ತಡೆಯುವ ಸಲುವಾಗಿ ಆಯಾ ದೇಶಗಳು ತುರ್ತುಕ್ರಮಗಳನ್ನು ಪ್ರಕಟಿಸಿವೆ. ಈ ಹಿನ್ನೆಲೆಯಲ್ಲಿ ಏಷಿಯಾ, ಯೂರೋಪ್ ಸೇರಿದಂತೆ ಜಾಗತಿಕ ಷೇರುಪೇಟೆಗಳು ಚೇತರಿಕೆ ಕಂಡವು. ‘ಕೋವಿಡ್-19’ ಚೀನಾದ ಹೊರಗೆ ಹರಡುತ್ತಿದ್ದಂತೆ ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿದೆ. ಶುಕ್ರವಾದ ಚೇತರಿಕೆಯು ಸ್ಥಿರವಾಗುತ್ತದೆಯೇ ಎಂಬುದು ಟ್ರಿಲಿಯನ್ ಡಾಲರ್ ಪ್ರಶ್ನೆ.

<a href="http://truthprofoundationindia.com/">http://truthprofoundationindia.com/</a>

ತೀವ್ರ ಕುಸಿತ ದಾಖಲಿಸಿದ್ದ ಕಚ್ಚಾ ತೈಲ ದರವು ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ ಮೇಲೇರಿದ್ದು ಬರುವ ದಿನಗಳಲ್ಲಿ ಮತ್ತಷ್ಟು ಚೇತರಿಕೆಯನ್ನು ನಿರೀಕ್ಷಿಸಲಾಗಿದೆ. ಗುರುವಾರದ ವಹಿವಾಟಿನಲ್ಲಿ ಜಿಗಿದಿದ್ದ ಡಬ್ಲ್ಯೂಟಿಐ ಕ್ರೂಡ್ ಮತ್ತು ಬ್ರೆಂಟ್ ಕ್ರೂಡ್ ಶುಕ್ರವಾರ ದಿನದ ವಹಿವಾಟಿನಲ್ಲಿ ಶೇ.6ರಷ್ಟು ಏರಿವೆ. ಬ್ರೆಂಟ್ ಕ್ರೂಡ್ 30ಡಾಲರ್ ಮತ್ತು ಡಬ್ಲ್ಯೂಟಿಐ ಕ್ರೂಡ್ 27 ಡಾಲರ್ ಆಜುಬಾಜಿನಲ್ಲಿ ವಹಿವಾಟು ನಡೆಸುತ್ತಿವೆ.

ಅಚ್ಚರಿಯ ಬೆಳವಣಿಗೆಯಲ್ಲಿ ಸತತ ಕುಸಿತ ದಾಖಲಿಸಿದ್ದ ಚಿನ್ನವು ಒಂದೇ ದಿನದ ವಹಿವಾಟಿನಲ್ಲಿ 1,050 ರುಪಾಯಿ ಏರಿಕೆ ದಾಖಲಿಸಿ, 40,854 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗಿದೆ. ಸಾರ್ವತ್ರಿಕ ಗರಿಷ್ಠ ಮಟ್ಟ45,000 ರುಪಾಯಿ ಮುಟ್ಟಿದ್ದ ಚಿನ್ನ ನಂತರ ತೀವ್ರಗತಿಯಲ್ಲಿ ಕುಸಿದು 39,000 ರುಪಾಯಿಗೆ ಇಳಿದಿತ್ತು. ‘ಕೋವಿಡ್-19’ ಹಾವಳಿ ತಡೆಗೆ ಜಾಗತಿಕ ಮಟ್ಟದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಷೇರುಪೇಟೆ, ಕಚ್ಚಾ ತೈಲ ಏರಿಕೆಯೊಂದಿಗೆ ಚಿನ್ನದ ಬೆಲೆಯೂ ಏರಿದೆ.

ಆದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನಿವಾರ ಪೇಟೆಯನ್ನು ಈ ಮಾಸಾಂತ್ಯದವರೆಗೆ ಮುಚ್ಚಲು ನಿರ್ಧರಿಸಲಾಗಿದೆ. ಹೀಗಾಗಿ ಸೋಮವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈಗಾಗಲೇ ಮದುವೆ ಮತ್ತಿತರ ಸಮಾರಂಭಗಳನ್ನು ಮುಂದೂಡಿರುವುದರಿಂದ ಚಿನ್ನ ಖರೀದಿ ಪ್ರಮಾಣ ಗಣನೀಯವಾಗಿ ತಗ್ಗಿದೆ.

ಮತ್ತಷ್ಟು ನಿರೀಕ್ಷೆಯಲ್ಲಿರುವ ಪೇಟೆ:

ಡಾಲರ್ ವಿರುದ್ಧ ರುಪಾಯಿ ಕುಸಿತ ಮುಂದುವರೆದೇ ಇದೆ. ಗುರುವಾರದ ವಹಿವಾಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದ ನಡುವೆಯೂ ರುಪಾಯಿ ಡಾಲರ್ ವಿರುದ್ಧ 75ರ ಗಡಿದಾಟಿತ್ತು. ದಿನದ ಅಂತ್ಯದಲ್ಲಿ 75ರ ಮಟ್ಟದಲ್ಲೇ ಸ್ಥಿರವಾಗಿತ್ತು. ಶುಕ್ರವಾರದ ವಹಿವಾಟಿನಲ್ಲೇ ಮತ್ತೆ ಕುಸಿತದ ಹಾದಿಯಲ್ಲಿ ಸಾಗಿ 75.1450 ಮಟ್ಟಕ್ಕೆ ಏರಿ ವಹಿವಾಟಾಗಿದೆ. ಶುಕ್ರವಾರದ ವಹಿವಾಟಿನಲ್ಲಿ ಷೇರುಪೇಟೆ ಚೇತರಿಸಿಕೊಂಡಿದ್ದರೂ ಅದು ಬರುವ ದಿಗಗಳಲ್ಲಿ ಸ್ಥಿರವಾಗುತ್ತದೆ ಎಂಬ ನಂಬಿಕೆ ಇಲ್ಲ. ಈ ಹೊತ್ತಿನಲ್ಲಿ ಷೇರುಪೇಟೆ ಮತ್ತು ಹಣಕಾಸು ಮಾರುಕಟ್ಟೆ ಸ್ಥಿರತೆ ಕಾಯ್ದುಕೊಳ್ಳಬೇಕಾದರೆ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಆರ್ಥಿಕ ಚೇತರಿಕೆಗೆ ಪೂರಕವಾದ ತುರ್ತು ಕ್ರಮಗಳನ್ನು ಪ್ರಕಟಿಸಬೇಕಿದೆ.

‘ಕೋವಿಡ್-19’ ಹಾವಳಿಯು ಎರಡಲಗಿನ ಕತ್ತಿಯಂತೆ ಕಾಡುತ್ತಿದೆ. ಒಂದು ಕಡೆ ತೀವ್ರವಾಗಿ ಪ್ರಸರಿಸುವ ಅಪಾಯ ಇದ್ದರೆ, ಇದು ಪ್ರಸರಿಸುವುದನ್ನು ತಡೆಯಲು ಕೈಗೊಳ್ಳುವ ಕ್ರಮಗಳೆಲ್ಲವೂ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡುತ್ತಿವೆ. ಈಗಾಗಲೇ ‘ಕೋವಿಡ್-19’ನಿಂದಾಗಿ ಪ್ರವಾಸೋದ್ಯಮ, ಆತಿಥ್ಯೋದ್ಯಮ, ಸೇರಿದಂತೆ ಬಹುತೇಕ ವಲಯಗಳಲ್ಲಿ ಹಿನ್ನೆಡೆಯಾಗಿದೆ. ಇಡೀ ಆರ್ಥಿಕತೆಯೇ ಸ್ತಬ್ಧಗೊಂಡಂತ ತುರ್ತು ಪರಿಸ್ಥಿತಿಯನ್ನು ಇಡೀ ಜಗತ್ತೇ ಎದುರಿಸುತ್ತಿದೆ. ಹೀಗಾಗಿ ಸರ್ಕಾರ ಸೋಂಕು ಹರಡುವುದನ್ನು ತಡೆಯಲು ಮತ್ತು ಸೋಂಕುಪೀಡಿತರನ್ನು ರಕ್ಷಿಸಲು ಬೇಕಾದ ತುರ್ತು ಕ್ರಮಗಳನ್ನು ಕೈಗೊಳ್ಳುವ ಜತೆಜತೆಗೆ ಆರ್ಥಿಕತೆಗೆ ಚೇತರಿಕೆ ನೀಡುವ ಕ್ರಮಗಳನ್ನು ಪ್ರಕಟಿಸಬೇಕಿದೆ.

ಆರ್ಬಿಐ ಮೊದಲು ಬಡ್ಡಿದರ ಕಡಿತ ಮಾಡಬೇಕಿದೆ. ಮಾರುಕಟ್ಟೆ ಈಗಾಗಲೇ ಬಡ್ಡಿದರ ಕಡಿತವನ್ನು ನಿರೀಕ್ಷಿಸಿತ್ತು. ಆದರೆ, ಆರ್ಬಿಐ ಗವರ್ನರ್ ನಗದು ಹರಿವಿಗೆ ಪರ್ಯಾಯ ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದು ಅಷ್ಟು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಬಡ್ಡಿದರ ಕಡಿತ ಮಾಡಿ ಮಾರುಕಟ್ಟೆಯಲ್ಲಿ ಸುಲಭ ಬಡ್ಡಿದರ ದಲ್ಲಿ ಸಾಲ ದೊರೆಯುವಂತಾಗಬೇಕು.

ಕೇಂದ್ರ ಸರ್ಕಾರವು ತ್ವರಿತವಾಗಿ ತೆರಿಗೆಗಳನ್ನು ತಗ್ಗಿಸಬೇಕು, ಗ್ರಾಹಕರ ಕೈಯಲ್ಲಿ ಹೆಚ್ಚಿನ ನಗದು ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಬೇಡಿಕೆ ಕುಸಿಯುವ ಅಪಾಯ ಎದುರಾಗುತ್ತದೆ. ಕುಸಿದ ಬೇಡಿಕೆ ಚೇತರಿಸಿಕೊಳ್ಳಲು ಈ ಹಂತದಲ್ಲಿ ದೀರ್ಘಕಾಲವೇ ಬೇಕಾಗಬಹುದು. ದೇಶದಲ್ಲಿ ಈಗಾಗಲೇ ಆರ್ಥಿಕತೆ ಮಂದಗತಿಯಲ್ಲಿ ಇರುವುದರಿಂದ ತ್ವರಿತ ಕ್ರಮಗಳಿಂದ ಮಾತ್ರವೇ ದೇಶದ ಆರ್ಥಿಕತೆ ಹಿಂಜರಿತದತ್ತ ವಾಲುವುದನ್ನು ತಡೆಗಟ್ಟಲು ಸಾಧ್ಯ.

ರುಪಾಯಿ ಚೇತರಿಕೆಗೆ ಮತ್ತಷ್ಟು ಕ್ರಮ ಅಗತ್ಯ:

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುವುದನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ತುರ್ತು ಕ್ರಮ ಕೈಗೊಳ್ಳಬೇಕಿದೆ. ನಗದು ಹರಿವಿಗಾಗಿ ಪ್ರಕಟಿಸಿದ ಕ್ರಮಗಳಿಂದಾಗಿ ರುಪಾಯಿ ಮೌಲ್ಯ ಕುಸಿತ ತಡೆಗಟ್ಟಲು ಸಾಧ್ಯವಾಗಿಲ್ಲ. ಆರ್ಬಿಐ 480 ಬಿಲಿಯನ್ ಡಾಲರ್ ಗಳಷ್ಟು ವಿದೇಶಿ ವಿನಿಮಯ ಮೀಸಲನ್ನು ಹೊಂದಿದೆ. ಈ ಬೃಹತ್ ಪ್ರಮಾಣದ ವಿದೇಶಿ ವಿನಿಮಯ ಮೀಸಲನ್ನು ಇಂತಹ ಸಂಕಷ್ಟ ಕಾಲದಲ್ಲಿ ಬಳಸಿಕೊಳ್ಳಬೇಕು. ರುಪಾಯಿ ಕುಸಿಯುತ್ತಿರುವ ಹೊತ್ತಿನಲ್ಲಿ ಆರ್ಬಿಐ ಕೇವಲ ಪ್ರೇಕ್ಷಕನಾಗಿ ನಿಂತರೆ ಸಾಲದು. ಅದು ತನ್ನಲ್ಲಿರುವ ಭಾರಿ ಪ್ರಮಾಣದ ಡಾಲರ್ ಗಳನ್ನು ಮಾರುಕಟ್ಟೆಗೆ ಬಿಡಬೇಕು. ಆಗ ಡಾಲರ್ ಬೇಡಿಕೆ ಕುಸಿಯುವುದರಿಂದ ರುಪಾಯಿ ಮೌಲ್ಯ ತಗ್ಗುವುದು ನಿಲ್ಲುತ್ತದೆ. ದೇಶದ ಆರ್ಥಿಕ ಸುಭದ್ರತೆ ಕಾಯ್ದುಕೊಳ್ಳಲು ಬೃಹತ್ ಪ್ರಮಾಣದ ವಿದೇಶಿ ಮೀಸಲು ಅತ್ಯಗತ್ಯ. ಆದರೆ, ವಿದೇಶಿ ಮೀಸಲು ದೇಶ ಸಂಕಷ್ಟದಲ್ಲಿ ಇದ್ದಾಗ ಬಳಕೆ ಆಗದೇ ಇದ್ದರೆ ಏನು ಪ್ರಯೋಜನಾ?

Click here to follow us on Facebook , Twitter, YouTube, Telegram

Pratidhvani
www.pratidhvani.com