ಕ್ಲೈಮ್ಯಾಕ್ಸ್ ಹಂತ ತಲುಪಿದ ಮಧ್ಯಪ್ರದೇಶ  ಬಿಕ್ಕಟ್ಟು... ಇಂದು ನಡೆಯಲಿದೆ ವಿಶ್ವಾಸಮತ!      
ರಾಷ್ಟ್ರೀಯ

ಕ್ಲೈಮ್ಯಾಕ್ಸ್ ಹಂತ ತಲುಪಿದ ಮಧ್ಯಪ್ರದೇಶ  ಬಿಕ್ಕಟ್ಟು... ಇಂದು ನಡೆಯಲಿದೆ ವಿಶ್ವಾಸಮತ!     

ಬೆಳಗ್ಗಿನ ಜಾವ ನಡೆದ ವಿದ್ಯಾಮಾನದಲ್ಲಿ, ಮಧ್ಯಪ್ರದೇಶ ಸ್ಪೀಕರ್‌ ಉಳಿದ16 ಶಾಸಕರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಇದರಿಂದಾಗಿ, ಸದನದ ಒಟ್ಟು ಬಲಾಬಲ ಸಂಖ್ಯೆ 206ಕ್ಕೆಕುಸಿದಿದ್ದು, ಬಹುಮತ ಸಾಬೀತು ಪಡಿಸಲು 104 ಸ್ಥಾನಗಳ ಅವಶ್ಯಕತೆಯಿದೆ. ಆದರೆ, ಕಾಂಗ್ರೆಸ್‌ ಬಳಿ ಇರುವಶಾಸಕರ ಸಂಖ್ಯೆ 92.

ಮೊಹಮ್ಮದ್‌ ಇರ್ಷಾದ್‌

ಅಂತೂ ಇಂತೂ ಸುಪ್ರೀಂ ಅಂಗಳದಲ್ಲೂ ಮಧ್ಯಪ್ರದೇಶ ಸರಕಾರ ಬಿಕ್ಕಟ್ಟು ಬಗೆಹರಿದಿದ್ದು, ಕಮಲ್‌ನಾಥ್ ಸರಕಾರಕ್ಕೆ ಇದ್ದ ಕೊನೆಯ ಅವಕಾಶವೂ ‘ಕೈ’ ಜಾರಿದೆ. ಇಂದೇ ಮಧ್ಯಪ್ರದೇಶ ಸರಕಾರ ಬಹುಮತ ಸಾಬೀತಪಡಿಸಬೇಕಿದೆ. ಈ ನಡುವೆ ಇಂದು ಬೆಳಗ್ಗಿನ ಜಾವ ಮಧ್ಯಪ್ರದೇಶ ಸ್ಪೀಕರ್‌ ಅವರು ರಾಜಿನಾಮೆ ಸಲ್ಲಿಸಿದ್ದ ಕಾಂಗ್ರೆಸ್‌ನ ಉಳಿದ 16 ಜನ ಶಾಸಕರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ.

ಮಾರ್ಚ್ 10 ರ ನಂತರ ಮಧ್ಯಪ್ರದೇಶ ಕಾಂಗ್ರೆಸ್ ಸರಕಾರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಕೇವಲ ಹದಿನೈದು ತಿಂಗಳಲ್ಲೇ ಸರಕಾರ ಪತನಕ್ಕೆ ಮುನ್ನುಡಿ ಬರೆದಂತಿದೆ. ಕಾಂಗ್ರೆಸ್ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅದ್ಯಾವಾಗ ಕಾಂಗ್ರೆಸ್‌ಗೆ ‘ಕೈ’ ಕೊಟ್ಟರೋ ಆ ನಂತರ ಅವರನ್ನೇ ಅನುಸರಿಸಿದ 22 ಶಾಸಕರು ಸಾಮೂಹಿಕವಾಗಿ ಸಿಂಧ್ಯಾ ಪರವಹಿಸಿ ಸರಕಾರದ ವಿರುದ್ಧವೇ ಬಂಡಾಯವೆದ್ದಿದ್ದರು. ಬಿಜೆಪಿ ಸರಕಾರವಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ರೆಸಾರ್ಟ್‌ನಲ್ಲಿರುವ ಬಂಡಾಯ ಶಾಸಕರಿಗೆ ರಾಜ್ಯದ ಬಿಜೆಪಿ ನಾಯಕರು ಹಾಗೂ ಪೊಲೀಸರು ರಕ್ಷಣೆ ಕೊಡುತ್ತಿದ್ದರೆ, ಅತ್ತ ಸುಪ್ರೀಂ ಅಂಗಳದಲ್ಲಿ ಮಧ್ಯಪ್ರದೇಶ ಕಾಂಗ್ರೆಸ್‌ಗೆ ನಿರಾಸೆ ಎದುರಾಗಿದೆ. ಈಗಾಗಲೇ ಅಲ್ಪಮತಕ್ಕೆ ಕುಸಿದಿರುವ ಮಧ್ಯಪ್ರದೇಶ ಸರಕಾರ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈ ಮೂಲಕವೇನಾದ್ರೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಸಾಬೀತುಪಡಿಸಲಾಗದೆ ಪತನಗೊಂಡರೆ, ಕರ್ನಾಟಕ ನಂತರ ಮತ್ತೊಂದು ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೇರಲಿದೆ.

ಇಂದು ಸಂಜೆ 5 ಗಂಟೆಯೊಳಗಾಗಿ ಮಧ್ಯಪ್ರದೇಶ ಸರಕಾರ ತನ್ನ ಬಹುಮತ ಸಾಬೀತಪಡಿಸಬೇಕಿದೆ. ಒಂದು ಹಂತದಲ್ಲಿ ಸ್ಪೀಕರ್ ಹಾಗೂ ರಾಜ್ಯಪಾಲರನ್ನು ಬಳಸಿಕೊಂಡು ಮಾರ್ಚ್ 26 ಕ್ಕೆ ಮುಂದೂಡಿದ್ದ ಅಧಿವೇಶನ ನಾಳೆಯಿಂದ ಮತ್ತೆ ಆರಂಭವಾಗಲಿದೆ. ಅಲ್ಲದೇ ಸರಕಾರದ ಬಜೆಟ್ ಅಧಿವೇಶನವೂ ಆಗಿದ್ದು, ಆಡಳಿತ ಪಕ್ಷ ಕಡ್ಡಾಯವಾಗಿ ಬಹುಮತ ಸಾಬೀತುಪಡಿಸಲೇಬೇಕಿದೆ. ಸಿಂಧ್ಯಾ ಬೆಂಬಲಿಗ 22 ಶಾಸಕರ ರಾಜೀನಾಮೆಯಿಂದ ಸದ್ಯ ಕಾಂಗ್ರೆಸ್ 92 ಸ್ಥಾನಗಳಿಗೆ ಕುಸಿದಿದೆ. ಒಟ್ಟು 230 ವಿಧಾನಸಭಾ ಬಲಾಬಲ ಹೊಂದಿರುವ ಮಧ್ಯಪ್ರದೇಶದಲ್ಲಿ ಈಗಾಗಲೇ 22 ಸ್ಥಾನ ತೆರವುಕೊಂಡಿರುವ ಪರಿಣಾಮ ಸದ್ಯ ಬಲಾಬಲ 206 ಇದ್ದು, ಅದರಲ್ಲಿ ರಾಜೀನಾಮೆ ನೀಡಿದ 22 ಮಂದಿಯನ್ನು ಸಿಎಂ ಆದೇಶದಂತೆ ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಇದರಿಂದಾಗಿ 206 ವಿಧಾನಸಭಾ ಸ್ಥಾನಕ್ಕೆ ಇಳಿದಿರುವ ಸ್ಥಾನಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು 104 ಮ್ಯಾಜಿಕ್ ನಂಬರ್ ತಲುಪಲೇಬೇಕಿದೆ. ಆದರೆ ಸದ್ಯ ಕಾಂಗ್ರೆಸ್ ಬತ್ತಳಿಕೆಯಲ್ಲಿರುವುದು ಕೇವಲ 92 ಸ್ಥಾನಗಳಷ್ಟೇ. ಅದ್ಯಾವ ಸರ್ಕಸ್ ಮಾಡಿದರೂ ಸರಕಾರ ಉಳಿಸುವ ಕಮಲ್‌ನಾಥ್ ಪ್ರಯತ್ನ ಕೈಗೂಡುವ ಸಾಧ್ಯತೆ ಕಡಿಮೆ.

<a href="http://truthprofoundationindia.com/">http://truthprofoundationindia.com/</a>

ಬಿಜೆಪಿಗೆ ಲಾಭ ತಂದುಕೊಡಲಿದೆ ರಾಜಿನಾಮೆ ಅಂಗೀಕಾರ!

ಇನ್ನೊಂದೆಡೆ ಬಿಜೆಪಿ ಬಳಿ ೧೦೭ ಸ್ಥಾನವಿದ್ದು ತಾವೇ ಕೂಡಿಟ್ಟ ‘ಕೈ’ ಶಾಸಕರ ರಾಜಿನಾಮೆ ತಡರಾತ್ರಿ ಅಂಗೀಕಾರವಾಗಿದ್ದು ಇವರಿಗೆ ಲಾಭ ತಂದುಕೊಡಲಿದೆ. ವಿಶ್ವಾಸ ಮತ ನಿರ್ಣಯಕ್ಕೆ ಅಂಗೀಕಾರವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಹಾಜರಿರುವ ಸಂಖ್ಯೆ ಮೇಲೆ ಮೇಲೆ ಕೈ ಎತ್ತುವ ಮೂಲಕ ಮತದಾನ ನಡೆಯುತ್ತೆ. ಮೊದಲೇ ಕೈ ಕೊಟ್ಟ 22 ಶಾಸಕರು ದೂರ ನಿಂತರೆ ಸಾಕು ತನ್ನಿಂತಾನಾಗಿಯೇ ಕಮಲ್‌ನಾಥ್ ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಮೊದಲೇ 107 ಸ್ಥಾನ ಹೊಂದಿರುವ ಬಿಜೆಪಿಗೆ ಸರಕಾರ ರಚಿಸಲು ಮಾರ್ಗ ಸುಲಭವಾಗಲಿದೆ. ಆ ಮೂಲಕ ಕಳೆದ 2019 ರ ಜುಲೈ ತಿಂಗಳಿನಲ್ಲಿ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸರಕಾರ ಪತನಗೊಂಡ ಮಾದರಿಯಲ್ಲೇ, ಮಧ್ಯಪ್ರದೇಶ ಸರಕಾರ ಹದಿನೈದು ತಿಂಗಳಲ್ಲೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆಯೇ?

<a href="http://truthprofoundationindia.com/">http://truthprofoundationindia.com/</a>

ಇನ್ನು ಇಂದು ನಡೆಯಲಿರುವ ವಿಶ್ವಾಸ ಮತಯಾಚನೆ ಸಂದರ್ಭ ಹಲವು ಸೂಚನೆಗಳನ್ನು ಪಾಲಿಸುವಂತೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಇಂದು ಸಂಜೆಯೊಳಗಾಗಿ ಮಧ್ಯಪ್ರದೇಶ ಸರಕಾರದ ಚಿತ್ರಣ ಬದಲಾಗಲಿದೆ. ಮಾರ್ಚ್ 16 ರಂದು ವಿಶ್ವಾಸ ಮತಯಾಚನೆ ಬಗ್ಗೆ ಸಾಕಷ್ಟು ಕುತೂಹಲವಿತ್ತಾದರೂ ವಿಧಾನಸಭೆಯಲ್ಲಿ ರಾಜ್ಯಪಾಲ ಲಾಲ್ ಜಿ ಟಂಡನ್ ಹಾಗೂ ಸ್ಪೀಕರ್ ಪ್ರಜಾಪತಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾರ್ಚ್ 26 ಕ್ಕೆ ಕರೊನಾ ಭೀತಿ ಹಿನ್ನೆಲೆ ಅಧಿವೇಶನ ಮುಂದೂಡಿದ್ದರು. ಆ ಮೂಲಕವಾದರೂ ಸರಕಾರ ಉಳಿಸುವ ಕನಸು ಕಂಡಿದ್ದ ಕಮಲ್‌ನಾಥ್ ಸರಕಾರಕ್ಕೆ ಸುಪ್ರೀಂ ಆದೇಶ ಹಿನ್ನಡೆ ತಂದಿಟ್ಟಿದೆ.

ಒಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಸರಕಾರ ಆಡಳಿತ ಕಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ ದೋಸ್ತಿ ಸರಕಾರ ಉಳಿಸಲು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಪ್ರಯತ್ನ ನಡೆಸಿದ್ರೆ, ಮಧ್ಯಪ್ರದೇಶದಲ್ಲಿ ಸ್ಪೀಕರ್ ಎನ್‌ಪಿ ಪ್ರಜಾಪತಿ ಹಾಗೂ ಸಿಎಂ ಕಮಲ್‌ನಾಥ್ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com