ಡಾಲರ್ ವಿರುದ್ಧ ಸರ್ವಕಾಲಿಕ ಕೆಳಮಟ್ಟ 75ಕ್ಕೆ ಇಳಿದ ರುಪಾಯಿ ಮೌಲ್ಯ
ರಾಷ್ಟ್ರೀಯ

ಡಾಲರ್ ವಿರುದ್ಧ ಸರ್ವಕಾಲಿಕ ಕೆಳಮಟ್ಟ 75ಕ್ಕೆ ಇಳಿದ ರುಪಾಯಿ ಮೌಲ್ಯ

ಕಳೆದೊಂದು ವರ್ಷದಲ್ಲಿ ರುಪಾಯಿ ಮೌಲ್ಯವು ಶೇ.10ರಷ್ಟು ಕುಸಿತ ದಾಖಲಿಸಿದೆ. 2019 ಜುಲೈ ತಿಂಗಳಲ್ಲಿ ವರ್ಷದ ಗರಿಷ್ಠಮಟ್ಟ 68.40 ಇತ್ತು. ನಂತರ ತ್ವರಿತಗತಿಯಲ್ಲಿ ರುಪಾಯಿ ಮೌಲ್ಯ ಸುಮಾರು 6.59ರಷ್ಟು ಕುಸಿದಿದ್ದು ಮಾರ್ಚ್ 19 ರಂದು ಐತಿಹಾಸಿಕ ಮಟ್ಟವಾದ 75ಕ್ಕೆ ಕುಸಿದಿದೆ.

ರೇಣುಕಾ ಪ್ರಸಾದ್ ಹಾಡ್ಯ

ಚಿನ್ನ- ಬೆಳ್ಳಿಯ ಹೊಳಪು ಕಳೆದಿರುವ ‘ಕೋವಿಡ್-19’ ರುಪಾಯಿಯ ಮೌಲ್ಯವನ್ನು ಭಾರಿ ಪ್ರಮಾಣದಲ್ಲಿ ಕುಗ್ಗಿಸಿದೆ. ಮಾರ್ಚ್ 19ರಂದು ದಿನದ ವಹಿವಾಟಿನಲ್ಲಿ ರುಪಾಯಿ ಮೌಲ್ಯವು ಮತ್ತೊಂದು ಸರ್ವಕಾಲಿಕ ಕನಿಷ್ಠಮಟ್ಟವನ್ನು ಮುಟ್ಟಿತು. ದಿನದ ವಹಿವಾಟು ಆರಂಭವಾದಾಗ ಐತಿಹಾಸಿಕ ಮಟ್ಟವಾದ 75ಕ್ಕೆ ಇಳಿಯಲು ಕೇವಲ .05 ಪೈಸೆ (ಸರಳವಾಗಿ ಹೇಳಬೇಕೆಂದರೆ ಅರ್ಧ ಪೈಸೆ) ಬಾಕಿ ಇತ್ತು. ಅಂದರೆ, ದಿನದ ಆರಂಭದಲ್ಲಿ ವಹಿವಾಟಿನಲ್ಲಿ ಸರ್ವಕಾಲಿಕ ಕನಿಷ್ಠಮಟ್ಟವಾದ 74.9950ಕ್ಕೆ ಇಳಿಯಿತು. ಈ ಹಂತದಲ್ಲಿ ಕೊಂಚ ಚೇತರಿಸಿಕೊಂಡು ರುಪಾಯಿ 74.95ರ ಆಜುಬಾಬಿಜನಲ್ಲಿ ವಹಿವಾಟಾಗಿ ಕೆಲವೇ ಹೊತ್ತಿನಲ್ಲಿ 75ರ ಐತಿಹಾಸಿಕ ಮಟ್ಟಕ್ಕೆ ಕುಸಿಯಿತು. ನಂತರ 74.95- 75ರ ನಡುವೆ ಜೀಕುತ್ತಾ ವಹಿವಾಟು ನಡೆಸಿದೆ. ಮಾರ್ಚ್ 18ರಂದು 74.23ಕ್ಕೆ ವಹಿವಾಟು ಮುಗಿಸಿದ್ದ ರುಪಾಯಿ ದಿನದ ವಹಿವಾಟು ಆರಂಭವಾಗುತ್ತಲೇ 74.96ಕ್ಕೆ ಕುಸಿದು ವಹಿವಾಟು ಪ್ರಾರಂಭಿಸಿತು. ‘ಕೋವಿಡ್-19’ ಹಾವಳಿಯಲ್ಲಿ ರುಪಾಯಿ ಮೌಲ್ಯವು ಮತ್ತಷ್ಟು ಕೆಳಕ್ಕೆ ಇಳಿಯುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ತಳ್ಳಿಹಾಕಿಲ್ಲ. ಬರುವ ದಿನಗಳಲ್ಲಿ ಪ್ರತಿ ಡಾಲರ್ ಗೆ 76 ರುಪಾಯಿಗೆ ಕುಸಿಯುವ ಸಾಧ್ಯತೆ ಇದೆ.

ಡಾಲರ್ ವಿರುದ್ಧ ರುಪಾಯಿ ಮೌಲ್ಯವು ಕುಸಿದರೆ ಅನುಕೂಲ ಮತ್ತು ಅನನಕೂಲ ಎರಡೂ ಇದೆ. ಆದರೆ, ದೇಶದ ಪ್ರಸಕ್ತ ಸ್ಥಿತಿಯಲ್ಲಿ ರುಪಾಯಿ ಮೌಲ್ಯ ಕುಸಿತವು ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮ ದೇಶದ ಆಮದು ಪ್ರಮಾಣವು ರಫ್ತು ಪ್ರಮಾಣಕ್ಕಿಂತ ಹೆಚ್ಚಿದೆ. ಹೀಗಾಗಿ ಆಮದು ಮತ್ತು ರಫ್ತು ವಹಿವಾಟು ಡಾಲರ್ ನಲ್ಲಿ ನಡೆಯುವುದರಿಂದ ರುಪಾಯಿ ಮೌಲ್ಯ ಕುಸಿತವು ನಮ್ಮ ಆಮದು ಬಿಲ್ಲಿನ ಭಾರವನ್ನು ಹೆಚ್ಚಿಸುತ್ತದೆ. ಅಂದರೆ, ನಾವು ಹೆಚ್ಚಿನ ರುಪಾಯಿ ವಿನಿಯೋಗಿಸಿ, ಡಾಲರ್ ಖರೀದಿಸಿ ಪಾವತಿ ಮಾಡುವುದರಿಂದ ನಾವು ಆಮದು ಮಾಡಿಕೊಳ್ಳುವ ವಸ್ತುವಿನ ಬೆಲೆಯು ವಾಸ್ತವಿಕ ಬೆಲೆಗಿಂತ ಹೆಚ್ಚಾಗುತ್ತದೆ. ಕಚ್ಚಾ ತೈಲ ದರವು 25 ಡಾಲರ್ ಗೆ ಕುಸಿದಿದ್ದರೂ, ನಮ್ಮ ರುಪಾಯಿಯ ಡಾಲರ್ ಖರೀದಿಸುವ ಶಕ್ತಿ ಕುಂದಿರುವುದರಿಂದ ವಾಸ್ತವಿಕವಾಗಿ ನಾವು ಕಚ್ಚಾ ತೈಲಕ್ಕೆ ಪಾವತಿಸುವ ದರವು ಹೆಚ್ಚಿರುತ್ತದೆ.

ಕಳೆದೊಂದು ವರ್ಷದಲ್ಲಿ ರುಪಾಯಿ ಮೌಲ್ಯವು ಶೇ.10ರಷ್ಟು ಕುಸಿತ ದಾಖಲಿಸಿದೆ. 2019 ಜುಲೈ ತಿಂಗಳಲ್ಲಿ ವರ್ಷದ ಗರಿಷ್ಠಮಟ್ಟ 68.40 ಇತ್ತು. ನಂತರ ತ್ವರಿತಗತಿಯಲ್ಲಿ ರುಪಾಯಿ ಮೌಲ್ಯ ಸುಮಾರು 6.59ರಷ್ಟು ಕುಸಿದಿದ್ದು ಮಾರ್ಚ್ 19 ರಂದು ಐತಿಹಾಸಿಕ ಮಟ್ಟವಾದ 75ಕ್ಕೆ ಕುಸಿದಿದೆ. ‘ಕೋವಿಡ್-19’ರ ಹಾವಳಯಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತದ ಹೆಬ್ಬಾಗಿಲು ತೆಗೆದುಕೊಳ್ಳುತ್ತಿರುವ ಈ ಹಂತದಲ್ಲಿ ಚಿನ್ನ ಬೆಳ್ಳಿ, ಕಚ್ಚಾ ತೈಲ ಎಲ್ಲವೂ ಕುಸಿತದ ಹಾದಿಯಲ್ಲಿದ್ದರೂ ಡಾಲರ್ ಮೇಲಿನ ಬೇಡಿಕೆ ಹೆಚ್ಚಿದೆ. ಹೀಗಾಗಿ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಏರುತ್ತಿದೆ. ಉಳಿದ ಉಳಿದ ಕರೆನ್ಸಿಗಳ ಮೌಲ್ಯ ಇಳಿಜಾರಿನಲ್ಲಿದೆ.

ಈ ನಡುವೆ ದಿನದ ಷೇರುಪೇಟೆಯಲ್ಲಿನ ರಕ್ತದೋಕುಳಿ ಮುಂದುವರೆದಿದ್ದು, ನಿಫ್ಟಿ ಮತ್ತು ಸೆನ್ಸೆಕ್ಸ್ ತ್ವರಿತವಾಗಿ ಕುಸಿತ ದಾಖಲಿಸಿವೆ. ಪ್ರಬಲ ಸುಭದ್ರದ ಮಟ್ಟವನ್ನು ನಿಫ್ಟಿ ಮತ್ತು ಸೆನ್ಸೆಕ್ಸ್ ದಾಟಿ ಕುಸಿತ ದಾಖಲಿಸಿವೆ. ನಿಫ್ಟಿ 8000 ಮಟ್ಟದಿಂದ ಕೆಳಕ್ಕೆ ಇಳಿದರೆ, ಸೆನ್ಸೆಕ್ಸ್ 28,000ರ ಮಟ್ಟದಿಂದ ಕುಸಿದಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕವು 20,000 ಮಟ್ಟದಿಂದ ಕೆಳಕ್ಕಿಳಿದಿದೆ.

ಗುರುವಾರದ ವಹಿವಾಟಿನಲ್ಲಿ ಆಯ್ದ ಕೆಲವೇ ಕೆಲವು ಷೇರುಗಳು ಚೇತರಿಕೆ ಕಂಡಿದ್ದರೂ, ಬ್ಯಾಂಕು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆ ಷೇರುಗಳ ತ್ವರಿತಗತಿಯ ಕುಸಿತ ಮುಂದುವರೆದಿದೆ. ಈ ನಡುವೆ, ಪೇಟೆಯಲ್ಲಿ ಬಹುತೇಕ ಷೇರುಗಳ ಮೌಲ್ಯವು ಅತ್ಯಂತ ಆಕರ್ಷಕ ಮಟ್ಟಕ್ಕೆ ತಲುಪಿರುವುದರಿಂದ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಖರೀದಿಗೆ ಇಳಿದ ಪರಿಣಾಮ ಕೊಂಚ ಚೇತರಿಕೆ ಕಾಣಸಿದ್ದರೂ, ಮಾರಾಟದ ಒತ್ತಡದ ನಡುವೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಸಾಧ್ಯವಾಗಿಲ್ಲ. ದಿನದ ವಹಿವಾಟು ಅಂತ್ಯದ ವೇಳೆಗೆ ‘ಶಾರ್ಟ್ ಕವರಿಂಗ್’ ಮತ್ತು ಸಾಂಸ್ಥಿಕ ಹೂಡಿಕೆದಾರರ ಖರೀದಿಯಿಂದಾಗಿ ಮಾರುಕಟ್ಟೆ ಬಹುತೇಕ ತಾತ್ಕಾಲಿಕವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಮಾರುಕಟ್ಟೆ ತಜ್ಞರದಾಗಿದೆ.

ಈ ನಡುವೆ ತ್ವರಿತಗತಿಯಲ್ಲಿ ಏರಿದ್ದ ಚಿನ್ನವು ಅಷ್ಟೇ ತ್ವರಿತವಾಗಿ ಕುಸಿಯುತ್ತಿದೆ. ಗುರುವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಮ್ ಗೆ 700 ರುಪಾಯಿ ಕುಸಿತ ದಾಖಲಿಸಿದೆ. ಹಿಂದಿನ ದಿನ 39750 ರುಪಾಯಿಗೆ ಸ್ಥಿರವಾಗಿದ್ದ ಚಿನ್ನವು ಗುರುವಾರದ ವಹಿವಾಟಿನಲ್ಲಿ 39050 ರುಪಾಯಿಗೆ ಕುಸಿದು ನಂತರ ಕೊಂಚ ಚೇತರಿಸಿ 39300 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗಿದೆ. ‘ಕೋವಿಡ್-19’ ಹಾವಳಿಯಿಂದಾಗಿ ಮದುವೆ ಮತ್ತಿತರ ಸಮಾರಂಭಗಳನ್ನು ಮುಂದೂಡುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಚಿನ್ನದ ಆಭರಣ ಖರೀದಿಯ ಪ್ರಮಾಣವು ಗಣನೀಯವಾಗಿ ತಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಮತ್ತು ದೇಶೀಯ ಮಾರುಕಟ್ಟೆ ಬೇಡಿಕೆ ಕುಸಿತದಿಂದಾಗಿ ಚಿನ್ನದ ಹೊಳಪು ತಗ್ಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ವಿನಿಮಯ ಯೋಜನೆ ಘೋಷಣೆ ಮಾಡಿದ್ದರೂ ಸಹ ರುಪಾಯಿ ಕುಸಿತ ಮುಂದುವರೆದಿದೆ. ಗುರುವಾರ ರಾತ್ರಿ ಪ್ರಧಾನಿ ನರೇಂದ್ರಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆ ಹೊತ್ತಿಗೆ ‘ಕೋವಿಡ್-19’ ಹಾವಳಿ ತಡೆಗೆ ಮತ್ತು ದೇಶದ ಆರ್ಥಿಕತೆಯ ಉತ್ತೇಜನಕ್ಕೆ ಏನಾದರೂ ಸಕಾರಾತ್ಮಕ ಯೋಜನೆ ಘೋಷಿಸುವ ನಿರೀಕ್ಷೆಯಲ್ಲಿ ಮಾರುಕಟ್ಟೆತಜ್ಞರಿದ್ದಾರೆ. ಅದಾದ ನಂತರ ಆರ್ಬಿಐ ಸಹ ವಾರಾಂತ್ಯದಲ್ಲಿ ಬಡ್ಡಿದರ ಕಡಿತ ಸೇರಿದಂತೆ ನಗದು ಹರಿವಿಗೆ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಈ ಎರಡೂ ಕ್ರಮಗಳಿಂದಾಗಿ ಈಗಾಗಲೇ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಷೇರುಪೇಟೆ ಚೇತರಿಸಿಕೊಳ್ಳಬಹುದು. ಹಾಗೆಯೇ ಐತಿಹಾಸಿಕ ಕನಿಷ್ಠ ಮಟ್ಟಕ್ಕಿಳಿದಿರುವ ರುಪಾಯಿ ಮೌಲ್ಯವು ಏರುಹಾದಿಗೆ ಬರಬಹುದು. ಆದರೆ, ಬರುವ ಎರಡು- ಮೂರು ವಾರಗಳಲ್ಲಿ ‘ಕೋವಿಡ್-19’ ದೇಶದೊಳಗೆ ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ ಎಂಬುದರ ಮೇಲೆ ಪೇಟೆಯ ಚೇತರಿಕೆ ನಿಂತಿದೆ. ಸೋಂಕು ಪೀಡಿತರ ಸಂಖ್ಯೆ ಮತ್ತು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾದಷ್ಟೂ ಅದು ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

Click here Support Free Press and Independent Journalism

Pratidhvani
www.pratidhvani.com