ಕರೋನಾ ವೈರಸ್ ಉಪಟಳಕ್ಕೆ  ಚಿನ್ನ-ಬೆಳ್ಳಿ ಕೂಡಾ ಕಂಗಾಲು!
ರಾಷ್ಟ್ರೀಯ

ಕರೋನಾ ವೈರಸ್ ಉಪಟಳಕ್ಕೆ ಚಿನ್ನ-ಬೆಳ್ಳಿ ಕೂಡಾ ಕಂಗಾಲು!

ಚಿನ್ನ ಮತ್ತು ಬೆಳ್ಳಿದರ ತ್ವರಿತ ಏರಿಳಿತವು ಹೂಡಿಕೆದಾರರಲ್ಲಿ ಆತಂಕವನ್ನುಂಟು ಮಾಡಿದೆ. ಸಾಮಾನ್ಯವಾಗಿ ಪೇಟೆಗಳಲ್ಲಿ ಅಸ್ಥಿರತೆ ಇದ್ದಾಗ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನದ ಮೇಲಿನ ಹೂಡಿಕೆಯಿಂದ ಬರುವ ಲಾಭದ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇರುವುದಿಲ್ಲ ಹಾಗೆಯೇ, ನಷ್ಟದ ಪ್ರಮಾಣವು ಅತ್ಯಲ್ಪ ಪ್ರಮಾಣದಲ್ಲಿರುತ್ತದೆ.

ರೇಣುಕಾ ಪ್ರಸಾದ್ ಹಾಡ್ಯ

ಷೇರುಪೇಟೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ತೀವ್ರ ಅಸ್ಥಿರತೆ ಇದ್ದಾಗ ಬಹುತೇಕ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನ ಅತ್ಯಂತ ಸುರಕ್ಷಿತವಾದ ಹೂಡಿಕೆ ವಿಧಾನ. ಅಂದರೆ, ಷೇರುಪೇಟೆ ಮತ್ತು ಹಣಕಾಸು ಪೇಟೆಯಲ್ಲಿ ಆಗುವಷ್ಟು ಏರಿಳಿತಗಳು ಚಿನ್ನದ ದರದಲ್ಲಿ ಆಗುವುದಿಲ್ಲ. ನಿಜಾ. ಅದು ಇದುವರೆಗೆ ಇದ್ದ ನಂಬಿಕೆ. ಆದರೆ, ಕರೋನಾ ವೈರಸ್ ಹಾವಳಿ ಎಷ್ಟು ತೀವ್ರವಾಗಿದೆ ಎಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ತೀವ್ರ ಏರಿಳಿಕೆ ಕಂಡಿವೆ. ದೇಶೀಯ ಮಾರುಕಟ್ಟೆಯಲ್ಲಿ ಒಂದೇ ವಾರದಲ್ಲಿ ಚಿನ್ನದ ದರವು 10 ಗ್ರಾಮ್ ಗ 5000 ರುಪಾಯಿಗಳಷ್ಟು ಕುಸಿತ ಕಂಡಿದೆ. ಬೆಳ್ಳಿಯಂತೂ ಒಂದೇ ದಿನದ ವಹಿವಾಟಿನಲ್ಲಿ ಶೇ.10ರಷ್ಟು ಕುಸಿತ ದಾಖಲಿಸಿದ್ದಲ್ಲದೇ 11 ವರ್ಷಗಳ ಕನಿಷ್ಠ ಮಟ್ಟ ಮುಟ್ಟಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹಿಂದಿನ ಐದುದಿನಗಳ ವಹಿವಾಟುಗಳಿಂದ ಪ್ರತಿ 10 ಚಿನ್ನ ಒಟ್ಟು 5000 ರುಪಾಯಿ ಕುಸಿತ ಕಂಡಿದೆ. ಎಂಸಿಎಕ್ಸ್ ಏಪ್ರಿಲ್ ಫ್ಯೂಚರ್ ಸರಣಿಯಲ್ಲಿ ಮಾರ್ಚ್ 17ರಂದು 480 ರುಪಾಯಿ ಇಳಿಕೆಯಾಗಿದೆ. ಗರಿಷ್ಠ ದರ 44,500 ರುಪಾಯಿಗೆ ತಲುಪಿದ್ದ ಚಿನ್ನವು ಈಗ 40,000ದ ಗಡಿಯಿಂದ ಕೆಳಕ್ಕಿಳಿದು 39,000 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಎಂಸಿಎಕ್ಸ್ ನಲ್ಲಿ ಒಂದೇ ದಿನ ಬೆಳ್ಳಿ ದರವು ಪ್ರತಿ ಕೆಜಿಗೆ 4,200 ರುಪಾಯಿ ಕುಸಿತ ದಾಖಲಿಸಿದ್ದು 35,593ಕ್ಕೆ ಇಳಿದಿದೆ.

ಚಿನ್ನ ಮತ್ತು ಬೆಳ್ಳಿದರ ತ್ವರಿತ ಏರಿಳಿತವು ಹೂಡಿಕೆದಾರರಲ್ಲಿ ಆತಂಕವನ್ನುಂಟು ಮಾಡಿದೆ. ಸಾಮಾನ್ಯವಾಗಿ ಪೇಟೆಗಳಲ್ಲಿ ಅಸ್ಥಿರತೆ ಇದ್ದಾಗ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನದ ಮೇಲಿನ ಹೂಡಿಕೆಯಿಂದ ಬರುವ ಲಾಭದ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇರುವುದಿಲ್ಲ ಹಾಗೆಯೇ, ನಷ್ಟದ ಪ್ರಮಾಣವು ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಚಿನ್ನವು ಸಂಕಷ್ಟಗಳ ಕಾಲದಲ್ಲಿ ಸುರಕ್ಷಿತ ಹೂಡಿಕೆಯ ಮಾರ್ಗ. ದೀರ್ಘ ಕಾಲದಲ್ಲಿ ಹೂಡಿಕೆ ಮಾಡಿದ ಬಂಡವಾಳದ ಮೌಲ್ಯವು ಏರುತ್ತಲೇ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ಬಂಡವಾಳ ಕುಸಿಯಬಹುದು, ನಶಿಸಲೂ ಬಹುದು. ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆಯಲ್ಲೂ ನಷ್ಟವಾಗಬಹುದು ಮತ್ತು ಹೂಡಿಕೆಯನ್ನು ತ್ವರಿತವಾಗಿ ನಗದೀಕರಿಸಲು ಸಾಧ್ಯವಾಗದೇ ಇರಬಹುದು. ಆದರೆ, ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವಷ್ಟೇ ಅಲ್ಲದೇ ತ್ವರಿತ ನಗದೀಕರಣಕ್ಕೂ ಅವಕಾಶ ಇರುತ್ತದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಏರಿಳಿತ ಇದ್ದಾಗ ಹೂಡಿಕೆದಾರರು ಚಿನ್ನದ ಮೊರೆ ಹೋಗುತ್ತಾರೆ.

ಕರೋನಾ ವೈರಸ್ ಪತ್ತೆಯಾದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ತ್ವರಿತವಾಗಿ ಏರಿಕೆ ಕಂಡಿತ್ತು. ಪ್ರತಿ 10 ಗ್ರಾಮ್ ಚಿನ್ನಕ್ಕೆ 38,000 ರುಪಾಯಿ ಇದ್ದದ್ದು ಸರ್ವಕಾಲಿಕ ಗರಿಷ್ಠ ಮಟ್ಟವಾದ 45,000 ರುಪಾಯಿ ತಲುಪಿತ್ತು. ಆದರೆ, ಕಳೆದವಾರದಿಂದೀಚೆಗೆ ಚಿನ್ನದ ದರವು ತ್ವರಿತವಾಗಿ ಕುಸಿಯುತ್ತಿದೆ. ಐದು ವಹಿವಾಟು ದಿನಗಳಲ್ಲಿ 5,000 ರುಪಾಯಿಗಷ್ಟು ಅಂದರೆ, ಶೇ.10ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕುಸಿದಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು.

ಚಿನ್ನದ ಕುಸಿತಕ್ಕೆ ಕಾರಣವೇನು?

ಕರೋನಾ ಸೊಂಕು ಚೀನಾ ದೇಶ ದಾಟಿ ಜಗತ್ತಿನಾದ್ಯಂತ ಹರಡುತ್ತಿದ್ದಂತೆ ಷೇರುಪೇಟೆ ಮತ್ತು ಹಣಕಾಸು ಪೇಟೆಗಳಲ್ಲಿ ತಲ್ಲಣವುಂಟಾಯಿತು. ಈ ಹಂತದಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಮುಗಿಬಿದ್ದರು. 39000 ದಿಂದ 45000 ರುಪಾಯಿಗೆ ತ್ವರಿತವಾಗಿ ಜಿಗಿಯಿತು. ಆದರೆ, ಕರೋನಾ ವೈರಸ್ ಹಾವಳಿ ಮತ್ತಷ್ಟು ತ್ವರಿತವಾಗಿ ಹರಡಿ, ಜಾಗತಿಕ ಆರ್ಥಿಕ ಹಿಂಜರಿತ ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಚಿನ್ನದ ಮಾರುಕಟ್ಟೆಯಲ್ಲೂ ತಲ್ಲಣ ಮೂಡಿತು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಹೂಡಿಕೆಯೂ ಸುರಕ್ಷಿತವಲ್ಲ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡಿದೆ. ಕರೋನಾ ವೈರಸ್ ಮತ್ತಷ್ಟು ವ್ಯಾಪಿಸುವ ಭೀತಿಯಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರೆಲ್ಲರೂ ಗರಿಷ್ಠ ಮಟ್ಟ ಮುಟ್ಟಿದ್ದರಿಂದ ನಗದೀಕರಣಕ್ಕೆ ಮುಂದಾದ ಕಾರಣ ತ್ವರಿತವಾಗಿ ಕುಸಿದಿದೆ. ಈ ಹಂತದಲ್ಲಿ, ಕಾಸು (ನಗದು) ಇದ್ದೋನೆ ಬಾಸು (“ಕ್ಯಾಶ್ ಇಸ್ ಕಿಂಗ್”) ಎಂಬ ತತ್ವವನ್ನು ಹೂಡಿಕೆದಾರರು ಅಳವಡಿಸಿಕೊಳ್ಳುತ್ತಾರೆ. ತಮ್ಮೆಲ್ಲಾ ಹೂಡಿಕೆಗಳನ್ನೂ ನಗದೀಕರಿಸಿಕೊಂಡು ಮಾರುಕಟ್ಟೆ ಮತ್ತಷ್ಟು ಕುಸಿಯುವವರೆಗೂ ಕಾಯುತ್ತಾರೆ. ತೀವ್ರ ಕುಸಿತವಾದಾಗ ಮಾರುಕಟ್ಟೆ ಪ್ರವೇಶಿಸುತ್ತಾರೆ. ಚಿನ್ನ ಮತ್ತು ಬೆಳ್ಳಿ ಬೆಲೆಯ ಕುಸಿತಕ್ಕೂ ಇದೆ ಕಾರಣವಾಗಿದೆ.

ಆದರೆ, ದೀರ್ಘಕಾಲದಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಷೇರು, ಕರೆನ್ಸಿ ಮತ್ತು ರಿಯಲ್ ಎಸ್ಟೇಟ್ ಗಳ ಮೇಲಿನ ಹೂಡಿಕೆಗಿಂತ ಚಿನ್ನದ ಮೇಲಿನ ಹೂಡಿಕೆಯೇ ಹೆಚ್ಚು ಸುರಕ್ಷಿತವಾಗಿರುತ್ತದೆ. ಪ್ರಸ್ತುತ ಚಿನ್ನದ ದರ ತ್ವರಿತವಾಗಿ ಕುಸಿದಿದ್ದಕ್ಕೆ ನಗದೀಕರಣ ಹೆಚ್ಚಳವಾಗಿದ್ದೇ ಕಾರಣವಾದ್ದರಿಂದ ಬರುವ ದಿನಗಳಲ್ಲಿ ಚಿನ್ನದ ದರವು ಏರುಹಾದಿಯಲ್ಲೇ ಸಾಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಸದ್ಯಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಪರಿಷ್ಕರಿಸಿ ಶೂನ್ಯಕ್ಕೆ ಇಳಿಸಿದೆ. ಸಂಭವನೀಯ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಅಮೆರಿಕದ ಮುನ್ನೆಚ್ಚರಿಕೆ ಕ್ರಮ ಇದಾಗಿದೆ. ಕರೋನಾ ವೈರಸ್ ಹಾವಳಿ ತೀವ್ರವಾಗುತ್ತಿರುವುದರಿಂದ ಷೇರುಪೇಟೆಯಾಗಲೀ, ಹಣಕಾಸು ಪೇಟೆಯಾಗಲೀ ಸುರಕ್ಷಿತವಾಗಿಲ್ಲ. ವೈರಸ್ ಪೀಡಿತ ದೇಶಗಳ ಕರೆನ್ಸಿ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆದಾರರು ದೀರ್ಘಕಾಲದವರೆಗೆ ನಗದು ಇಟ್ಟುಕೊಂಡಿರಲೂ ಸಾಧ್ಯವಿಲ್ಲ. ಚಿನ್ನ, ಬೆಳ್ಳಿ, ಪ್ಲಾಟಿನಂ ನಂತರ ಲೋಹಗಳ ಮೇಲೆ ಹೂಡಿಕೆ ಮಾಡುತ್ತಾರೆ. ಹೀಗಾಗಿ ಚಿನ್ನದ ದರ ಸದ್ಯಕ್ಕೆ ಕುಸಿದರೂ ದೀರ್ಘಕಾಲದಲ್ಲಿ ಏರುದಾರಿಯಲ್ಲೇ ಸಾಗಬಹುದು. ನಗದು ಇದ್ದವರು ಮತ್ತಷ್ಟು ಕುಸಿತದ ನಂತರ ದೀರ್ಘಕಾಲದ ಹೂಡಿಕೆಯಾಗಿ ಚಿನ್ನ ಖರೀದಿಸಬಹುದಾಗಿದೆ.

Click here Support Free Press and Independent Journalism

Pratidhvani
www.pratidhvani.com