ಕರೋನಾ ತಡೆಯಲು ತಮಿಳುನಾಡು ಸರ್ಕಾರದ ಉಡಾಫೆ: ಇತರೆ ರಾಜ್ಯಗಳಲ್ಲಿ ಆತಂಕ
ರಾಷ್ಟ್ರೀಯ

ಕರೋನಾ ತಡೆಯಲು ತಮಿಳುನಾಡು ಸರ್ಕಾರದ ಉಡಾಫೆ: ಇತರೆ ರಾಜ್ಯಗಳಲ್ಲಿ ಆತಂಕ

ತಮಿಳುನಾಡಿನಂತಹ ರಾಜ್ಯಗಳು ಪರಿಸ್ಥಿತಿಯ ಪರಿವೆಯೇ ಇಲ್ಲದಂತೆ ಉಡಾಫೆ ವರ್ತನೆ ತೋರುತ್ತಿವೆ. ಸದ್ಯ ಕರ್ನಾಟಕ ರಾಜ್ಯ ಚುರುಕಾಗಿದ್ದು ತಮಿಳುನಾಡು ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲೇಬೇಕಾದ ಪರಿಸ್ಥಿತಿ ಇದೆ. ಕೇವಲ ವಿದೇಶದಿಂದ ಸೋಂಕು ಹೊತ್ತು ತಂದವರನ್ನ ತಪಾಸಣೆ ಮಾಡುತ್ತಿದ್ದೇವೆ. ಆದರೆ ಸಮುದಾಯದೊಳಗೆ ರೋಗ ಪ್ರಸರಣ ತಡೆಯಲು ಯಾವುದೇ ಪ್ರಯತ್ನಗಳಾಗುತ್ತಿಲ್ಲ ಎನ್ನುವ ಆತಂಕ ಎದುರಾಗಿದೆ. 

ಉದಯ ಸಾಗರ

ಕರೋನಾ ತರಹದ ವೈರಸ್‌ ಹರಡುವುದನ್ನು ತಡೆಯಬೇಕು ಎಂದರೆ ವಿಶೇಷವಾದ ಕಾಳಜಿ ವಹಿಸುವುದು ಅಗತ್ಯ. ಆದರೆ ಕರ್ನಾಟಕ, ಕೇರಳದಂತಹ ರಾಜ್ಯಗಳು ತೋರುತ್ತಿರುವ ಕಾಳಜಿ ಬೇರೆ ರಾಜ್ಯಗಳಲ್ಲಿಲ್ಲ. ಕರೋನಾ ಕುರಿತು ಶಿಷ್ಟಾಚಾರ ಪಾಲಿಸಬೇಕಿದ್ದ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ. ಅದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ ಕರೋನಾ ರೋಗಿಗಳ ಸಂಖ್ಯೆ 33ಕ್ಕೆ ಏರಿದೆ. ಇದಕ್ಕೆ ಕಾರಣ ತಮಿಳುನಾಡನ್ನ ನೋಡಿ ತಿಳಿದುಕೊಳ್ಳಬಹುದು. ತಮಿಳುನಾಡಿನಲ್ಲಿ ಇದುವರೆಗೆ ಕೇವಲ 72 ಜನರನ್ನ ಪರೀಕ್ಷೆಗೆ ಒಳಪಡಿಸಿದ್ದಾರೆ. ಅದರಲ್ಲೂ ಒಬ್ಬನಿಗೆ ಮಾತ್ರ ರೋಗ ಇರುವಿಕೆ ದೃಢಪಟ್ಟಿದೆ. ಈ ತರಹದ ಉಡಾಫೆಯ ರಾಜ್ಯ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ಮಧ್ಯೆ ಸ್ವಸ್ಥ ಸಮಾಜ ಹೇಗೆ ಸಾಧ್ಯ.

ಭಾರತದಲ್ಲಿ ಕರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎರಡನೇ ವಾರಕ್ಕೆ ಒಟ್ಟು 114 ಜನರಲ್ಲಿ ರೋಗ ದೃಢಪಟ್ಟಿದೆ. 13 ಜನರು ರೋಗದಿಂದ ಗುಣಮುಖರಾಗಿದ್ದಾರೆ. ಹಾಗೂ ಇಬ್ಬರು ಮೃತಪಟ್ಟಿದ್ದಾರೆ. ಪ್ರತಿದಿನ ನೂರಾರು ಭಾರತೀಯರು ವೈರಸ್‌ ಪೀಡಿತ ರಾಷ್ಟ್ರಗಳಿಂದ ಸ್ವದೇಶಕ್ಕೆ ಆಗಮಿಸುತ್ತಿದ್ದಾರೆ. ಯುದ್ಧಪರಿಸ್ಥಿತಿಯಲ್ಲಿ ಸಂತ್ರಸ್ತರ ರಕ್ಷಣೆ ಮಾಡುವ ರೀತಿ ಕೇಂದ್ರ ಸರ್ಕಾರ ಅವರನ್ನೆಲ್ಲಾ ಕರೆತಂದು ಹದಿನಾಲ್ಕು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿರಿಸಲು ಏರ್ಪಾಡು ಮಾಡಿದೆ. ಮೂರನೇ ವಾರಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)‌ ವೈರಸ್‌ ತಪಾಸಣೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುತ್ತಿದೆ. ವಿದೇಶದಿಂದ ಮರಳಿದವರನ್ನಷ್ಟೇ ತಪಾಸಣೆ ಮಾಡುವುದಲ್ಲ, ಕರೋನ ವೈರಸ್‌ ಸಮುದಾಯದೊಳಗೆ ಪ್ರಸರಣವಾಗುತ್ತಿದ್ದರೆ ಅದರ ಮೇಲೂ ನಿಗಾ ಇಡಲು ಮುಂದಾಗಿದೆ. ಕರೋನಾ ದಾಳಿಗೆ ತುತ್ತಾದ ದೇಶಗಳೆಲ್ಲಾ ರೋಗ ಲಕ್ಷಣಗಳು ಕಂಡು ಬರುವ ಎಲ್ಲರನ್ನ ತಪಾಸಣೆ ಮಾಡುತ್ತಿವೆ.

ನಮ್ಮ ದೇಶದಲ್ಲಿ ಮಾರ್ಚ್‌ 15ರಿಂದ ಸಮುದಾಯಲ್ಲಿ ವೈರಸ್‌ಪ್ರಸರಣ ತಡೆಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಕೆಲಸ ಆರಂಭವಾಗಿದೆ. ಭಾರತದಲ್ಲಿ 60ರಿಂದ 70 ತಪಾಸಣಾ ಕೇಂದ್ರಗಳಲ್ಲಿ ಕರೋನಾ ರೋಗ ಚರ್ಯೆಯನ್ನ ಪರೀಕ್ಷೆ ಮಾಡಲಾಗುತ್ತಿದೆ. ಪ್ರತೀ ಪ್ರಯೋಗಾಲಯದಲ್ಲಿ ದಿನಕ್ಕೆ ಸುಮಾರು ತೊಂಭತ್ತು ಮಾದರಿಗಳನ್ನ ಪರೀಕ್ಷೆ ಮಾಡಬಹುದು ಆದರೆ ಎಲ್ಲಾ ಪ್ರಯೋಗಾಲಗಳಿಂದ ಕೇವಲ ಐವತ್ತೊಂದು ಮಾದರಿಗಳನ್ನಷ್ಟೇ ಪರೀಕ್ಷೆ ನಡೆಸಲಾಗಿದೆ. ಅಂದರೆ ವಿದೇಶದಿಂದ ಬಂದವರದ್ದೆಲ್ಲಾ ಗಂಟಲ ದ್ರವ ಹಾಗೂ ರಕ್ತ ಮಾದರಿಯನ್ನ ಪರೀಕ್ಷೆ ಮಾಡಲಾಗಿಲ್ಲ ಎಂದರ್ಥ..!

ಸಮುದಾಯದೊಳಗೆ ರೋಗ ಪ್ರಸರಣದ ಆತಂಕಕ್ಕೊಳಗಾಗಿರುವ ಭಾರತ ತನ್ನ ತಪಾಸಣಾ ಸಾಮರ್ಥ್ಯವನ್ನ ಹೆಚ್ಚು ಮಾಡಿಕೊಂಡಿದೆ. ಶೈವಾವಸ್ಥೆಯಲ್ಲಿದ್ದ ರೋಗವನ್ನ ಗುರುತಿಸಲಾಗದೇ ಅಥವಾ ಬೇಜವಾಬ್ದಾರಿತನದಿಂದ ಜನನಿಬಿಡ ಪ್ರದೇಶದಲ್ಲಿ ರೋಗಿ ಓಡಾಡಿದರೆ ತಡೆಗಟ್ಟುವುದು ಹೇಗೆ. ಐಸೋಲೇಷನ್‌ ವಾರ್ಡ್‌ನಿಂದಲೇ ಇಬ್ಬರು ತಪ್ಪಿಸಿಕೊಂಡು ಹೋದ ಘಟನೆಗಳೂ ನಮ್ಮ ಕಣ್ಣಮುಂದೆ ಇದೆ. ಇಂತಹ ಸಮಯದಲ್ಲಿ ಎಲ್ಲರೂ ಜಾಗೃತರಾಗಿರಬೇಕು. ಆದರೆ ತಮಿಳುನಾಡಿನ ಮನಸ್ಥಿತಿ ಮಾತ್ರ ವ್ಯತಿರಿಕ್ತವಾಗಿದೆ. ವಿದೇಶದಿಂದ ಬಂದಿರುವ ಹಾಗೂ ರೋಗ ಲಕ್ಷಣಗಳಿರುವವರನ್ನ ಪರೀಕ್ಷೆ ಮಾಡದೇ ಮನೆಗೆ ಕಳಿಸುತ್ತಿದ್ದಾರೆ. ಈ ಕುರಿತು ಗಾಯತ್ರಿ ಎಂಬ ಮಹಿಳೆ ಆಕ್ರೋಶಭರಿತವಾಗಿ ಟ್ವೀಟ್‌ ಮಾಡಿದ್ದಾಳೆ. ರೋಗ ಲಕ್ಷಣಗಳಿವೆ ಎಂದು ಸರ್ಕಾರಿ ಆಸ್ಪತ್ರೆಗೆ ಹೋದರೂ ಸಹ ಯಾವುದೇ ಪರೀಕ್ಷೆ ನಡೆಸದೇ ರಕ್ತದ ಮಾದರಿ ಸಂಗ್ರಹಿಸಿಲ್ಲ, ಬದಲಿಗೆ ರೋಗ ಉಲ್ಭಣಗೊಂಡರೆ ಮಾತ್ರ ಬನ್ನಿ ಎಂದು ಹೇಳಿ ಕಳಿಸಿದ್ದಾರಂತೆ..! ಇದು ಒಬ್ಬ ಮಹಿಳೆಯ ದೂರಲ್ಲ, ಕೇವಲ ಎಪ್ಪತ್ತೆರಡು ಜನರನ್ನ ಪರೀಕ್ಷೆ ಮಾಡಿ ಒಬ್ಬರಿಗೆ ಕರೋನಾ ಸೋಂಕಿದೆ ಎಂದು ಸರ್ಕಾರವೇ ಅಧಿಕೃತವಾಗಿ ಹೇಳಿಕೊಂಡಿದೆ. ತಮಿಳುನಾಡು ಸರ್ಕಾರವೇ ಈ ತರಹ ನಿರ್ಲಕ್ಷ ತೋರಿದರೆ ಉಳಿದ ರಾಜ್ಯಗಳ ಕಥೆ ಏನು..?

ಅಕ್ಕಪಕ್ಕದ ರಾಜ್ಯಗಳೆಲ್ಲಾ ನೂರಾರು ಮಾದರಿಯನ್ನ ಪರೀಕ್ಷೆ ಮಾಡಿದ್ದು ಕರ್ನಾಟಕದಲ್ಲಿ ಏಳು ಜನ ಹಾಗೂ ಕೇರಳದಲ್ಲಿ 24 ಜನರು ಸೋಂಕಿತರಾಗಿದ್ದಾರೆ. ತಮಿಳುನಾಡಿನಲ್ಲಿ ಮಾತ್ರ ಒಬ್ಬರೇ ಸೋಂಕಿತರಾಗಿರೋದಕ್ಕೆ ಹೇಗೆ ಸಾಧ್ಯ. ತಮಿಳುನಾಡಿನ ಆರೋಗ್ಯ ಇಲಾಖೆ ಆಯುಕ್ತ ಕೆ.ಕೊಲಾಂಡಸ್ವಾಮಿ ಪ್ರಕಾರ ಅಕ್ಕಪಕ್ಕದ ರಾಜ್ಯಗಳ ಜನರು ಕರೋನಾ ಸೋಂಕಿತ ರಾಜ್ಯಗಳಿಂದ ಬಂದಿದ್ದಾರಂತೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಹೆಚ್ಚೆಚ್ಚು ಜನರನ್ನ ತಪಾಸಣೆ ಮಾಡಿದ್ದಕ್ಕಾಗಿ ಹೆಚ್ಚು ಸೋಂಕಿತರನ್ನ ಗುರುತಿಸಿಕೊಂಡಿದ್ದಾರೆ ಆದರೆ ತಮಿಳುನಾಡು ಕೇವಲ ಎಪ್ಪತ್ತೆರಡೇ ಜನರಿಗೆ ಸೀಮಿತವಾಯ್ತಲ್ಲ ಅಂದರೆ ಅದಕ್ಕೆ ಉತ್ತರವಿಲ್ಲ. ತಮಿಳುನಾಡಿನಲ್ಲಿ ನಾಲ್ಕು ವೈರಾಣು ಪ್ರಯೋಗಾಲಯಗಳಿವೆ ಆದರೂ ಅಲ್ಲಿನ ಸರ್ಕಾರ ತಪಾಸಣೆ ನಡೆಸುವ ಗೋಜಿಗೆ ಹೋಗಿಲ್ಲ ಆದರೂ ಶಿಷ್ಟಾಚಾರ ಪರಿಪಾಲನೆ ಆಗುತ್ತೆ ಎಂದು ಕೊಲಾಂಡಸ್ವಾಮಿ ಸಮಜಾಯಿಷಿ ಕೊಡ್ತಾರೆ. ಕೆಮ್ಮು ಕಫ ಬಂದವರೆಲ್ಲಾ ಪರೀಕ್ಷೆ ಮಾಡಿ ಅಂತ ಹೇಳಿದರೆ ಕಷ್ಟ ಎನ್ನುವುದು ಅವರ ಅಭಿಪ್ರಾಯ.

ಈಗಾಗಲೇ ಮಹಾರಾಷ್ಟ್ರ ಹೊಣೆಗೇಡಿತನಕ್ಕೆ ಮೂವತ್ತೆರಡು ಜನ ಸೋಂಕಿತರನ್ನ ಪಡೆದುಕೊಂಡಿದೆ. ಇತ್ತ ತಮಿಳುನಾಡಿನಂತಹ ರಾಜ್ಯಗಳು ಇದರ ಪರಿವೆಯೇ ಇಲ್ಲದಂತೆ ಉಡಾಫೆ ವರ್ತನೆ ತೋರುತ್ತಿವೆ. ಸದ್ಯ ಕರ್ನಾಟಕ ರಾಜ್ಯ ಚುರುಕಾಗಿದ್ದು ತಮಿಳುನಾಡು ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲೇಬೇಕಾದ ಪರಿಸ್ಥಿತಿ ಇದೆ. ಸಾಧ್ಯವಾದರೆ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಗಡಿಯಲ್ಲಿ ತಾತ್ಕಾಲಿಕ ನಿಷೇಧ ಹೇರುವುದೇ ಒಳಿತು. ಕೇವಲ ವಿದೇಶದಿಂದ ಸೋಂಕು ಹೊತ್ತು ತಂದವರನ್ನ ತಪಾಸಣೆ ಮಾಡುತ್ತಿದ್ದೇವೆ. ಆದರೆ ಸಮುದಾಯದೊಳಗೆ ರೋಗ ಪ್ರಸರಣ ತಡೆಯಲು ಯಾವುದೇ ಪ್ರಯತ್ನಗಳಾಗುತ್ತಿಲ್ಲ ಎನ್ನುವ ಆತಂಕ ಎದುರಾಗಿದೆ.

Click here Support Free Press and Independent Journalism

Pratidhvani
www.pratidhvani.com