ಪೆಟ್ರೋಲ್, ಡೀಸೆಲ್ ದರ ಇಳಿಸದೇ ಮೋದಿ ಸರ್ಕಾರ ನಿಮ್ಮ ಜೇಬಿಗೆ ಎಷ್ಟು ಕತ್ತರಿ ಹಾಕಿದೆ ಗೊತ್ತೇ!?
ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ದರ ಇಳಿಸದೇ ಮೋದಿ ಸರ್ಕಾರ ನಿಮ್ಮ ಜೇಬಿಗೆ ಎಷ್ಟು ಕತ್ತರಿ ಹಾಕಿದೆ ಗೊತ್ತೇ!?

ಮಾರ್ಚ್ 17ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 71.91 ರುಪಾಯಿ ಇದೆ. 16 ರುಪಾಯಿ ಕಡಿತ ಮಾಡಿದರೆ 55.91 ರುಪಾಯಿಗೆ ಇಳಿಯುತ್ತದೆ. ಹಾಗೆಯೇ ಡಿಸೇಲ್ ದರವು 64.41 ರುಪಾಯಿ ಇದ್ದು, 13.50 ರುಪಾಯಿ ತಗ್ಗಿಸಿದರೆ  49.91 ರುಪಾಯಿಗೆ ಇಳಿಯುತ್ತದೆ. 

ರೇಣುಕಾ ಪ್ರಸಾದ್ ಹಾಡ್ಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಭಾರಿ ಪ್ರಮಾಣದಲ್ಲಿ ಇಳಿಸಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಕೊರ್ಯಾಪ್ ವರದಿ ಹೇಳಿದೆ. ಇತ್ತೀಚಿನ ಎಸ್‌ಬಿಐ ಎಕೊರ್ಯಾಪ್ ವರದಿ ಪ್ರಕಾರ, ಪ್ರತಿ ಲೀಟರ್ ಗೆ ಪೆಟ್ರೋಲ್ 12 ರೂಪಾಯಿ ಮತ್ತು ಡಿಸೇಲ್ 10 ರೂಪಾಯಿ ಇಳಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳಿಂದೀಚೇಗೆ ತ್ವರಿತವಾಗಿ ಕುಸಿದಿರುವ ಕಚ್ಚಾ ತೈಲದರದ ಆಧಾರದ ಮೇಲೆ ಈ ಲೆಕ್ಕಾಚಾರ ಹಾಕಲಾಗಿದೆ.

ಈಗಾಗಲೇ ಕಚ್ಚಾ ತೈಲದರವು ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ. ಪ್ರತಿ ಬ್ಯಾರೆಲ್ ಗೆ ಡಬ್ಲ್ಯುಟಿಐ ಕ್ರೂಡ್‌ ಮಾರ್ಚ್ 17ರಂದು 2.8 ಡಾಲರ್ ಗಳಷ್ಟು ಅಂದರೆ ಶೇ.9.05ರಷ್ಟು ಕುಸಿದು 28.86 ಡಾಲರ್ ಗಳಲ್ಲಿ ವಹಿವಾಟಾಗುತ್ತಿದೆ. ಬ್ರೆಂಟ್ ಕ್ರೂಡ್ 4.3 ಡಾಲರ್ ಗಳಷ್ಟು ಅಂದರೆ ಶೇ.11.37ರಷ್ಟು ದಾಖಲೆ ಪ್ರಮಾಣದ ಕುಸಿತ ದಾಖಲಿಸಿ 31.41 ಡಾಲರ್ ಗಳಲ್ಲಿ ವಹಿವಾಟಾಗುತ್ತಿದೆ.

ಮಾರ್ಚ್ 17ರಂದು ಸರಾಸರಿ ಶೇ.10ರಷ್ಟು ಕಚ್ಚಾ ತೈಲ ಕುಸಿದಿರುವುದನ್ನು ಎಸ್‌ಬಿಐ ಎಕೊರ್ಯಾಪ್ ಪರಿಗಣಿಸಿಲ್ಲ. ವಾರಾಂತ್ಯದ ದರಗಳನ್ನು ಆಧರಿಸಿ ಪೆಟ್ರೋಲ್ 12 ಮತ್ತು ಡಿಸೇಲ್ 10 ರೂಪಾಯಿ ಇಳಿಯಬಹುದೆಂದು ಅಂದಾಜಿಸಿದೆ. ಮಾರ್ಚ್ 17ರ ಕುಸಿತವನ್ನೂ ಲೆಕ್ಕಕ್ಕೆ ತೆಗೆದುಕೊಂಡರೇ ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು 16 ರೂಪಾಯಿಗೂ ಮತ್ತು ಡಿಸೇಲ್ ದರವನ್ನು 13.50 ರುಪಾಯಿಗೂ ತಗ್ಗಿಸಬಹುದಾಗಿದೆ.

ಮಾರ್ಚ್ 17ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 71.91 ರೂಪಾಯಿ ಇದೆ. 16 ರೂಪಾಯಿ ಕಡಿತ ಮಾಡಿದರೆ 55.91 ರೂಪಾಯಿಗೆ ಇಳಿಯುತ್ತದೆ. ಹಾಗೆಯೇ ಡಿಸೇಲ್ ದರವು 64.41 ರೂಪಾಯಿ ಇದ್ದು, 13.50 ರೂಪಾಯಿ ತಗ್ಗಿಸಿದರೆ  49.91 ರೂಪಾಯಿಗೆ ಇಳಿಯುತ್ತದೆ. ಅಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೇರುತ್ತಿರುವ ತೆರಿಗೆಗಳ ಹೊರತುಪಡಿಸಿಯೂ ಪೆಟ್ರೋಲ್ ಮತ್ತು ಡಿಸೇಲ್ ದರಗಳು ದೇಶೀಯ ಮಾರುಕಟ್ಟೆಯಲ್ಲಿರುವ ಹಾಲಿ ದರದಲ್ಲಿ ಶೇ.20ಕ್ಕಿಂತಲೂ ಹೆಚ್ಚು ಕಡಿತವಾಗಬೇಕಿದೆ.

ಆದರೆ, ಮೋದಿ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರೂಪಾಯಿ ತೆರಿಗೆ ಹೇರಿಬಿಟ್ಟಿದೆ. ಕಚ್ಚಾ ತೈಲ ಮತ್ತಷ್ಟು ಕುಸಿದರೆ ಮತ್ತಷ್ಟು ತೆರಿಗೆ ಹೇರಿ ದೇಶಿಯ ಮಾರುಕಟ್ಟೆಯಲ್ಲಿ ಹಾಲಿ ದರವನ್ನು ಕಾಯ್ದುಕೊಳ್ಳುವುದು ಮೋದಿ ಸರ್ಕಾರದ ಲೆಕ್ಕಾಚಾರವಾಗಿದೆ.

ಹೊಸದಾಗಿ ಹೇರಿದ 3 ರೂಪಾಯಿ ಈ ತೆರಿಗೆಯ ಹೊರತಾಗಿಯೂ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಕ್ರಮವಾಗಿ 13 ಮತ್ತು 10.50 ರೂಪಾಯಿಗಳಷ್ಟು ಇಳಿಸಬಹುದಾಗಿದೆ. ಭಾರತೀಯ ಗ್ರಾಹಕರ ದುರಾದೃಷ್ಟ ಏನೆಂದರೆ ನರೇಂದ್ರ ಮೋದಿ ಸರ್ಕಾರ ಎಂದೂ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ದರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಇಳಿತಕ್ಕೆ ಅನುಗುಣವಾಗಿ ಇಳಿಸಿ ಗ್ರಾಹಕರಿಗೆ ದರ ಇಳಿಕೆಯ ಲಾಭವನ್ನು ವರ್ಗಾಯಿಸಲಿಲ್ಲ.

ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಗೆ 105 ರಿಂದ 120 ಡಾಲರ್ ಗಳಷ್ಟು ಇತ್ತು. ಆಗಲೂ ಪೆಟ್ರೋಲ್ ದರವು 75 ರೂಪಾಯಿ ಆಜುಬಾಜಿನಲ್ಲಿ ಇತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂದರೆ, 2014 ಜೂನ್ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ತೀವ್ರವಾಗಿ ಕುಸಿಯುತ್ತಾ ಬಂತು. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್ ಗೆ 20 ಡಾಲರ್ ಗೆ ಕುಸಿದು ನಂತರ ಬಹಳ ಕಾಲದವರೆಗೆ 30-35 ಡಾಲರ್ ಗಳ ಆಜುಬಾಜಿನಲ್ಲಿ ವಹಿವಾಟಾಗಿತ್ತು. ಆ ಹಂತದಲ್ಲಿ ಕೂಡಾ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರವು ಕಚ್ಚಾ ತೈಲ ದರ ಕುಸಿತಕ್ಕೆ ಅನುಗುಣವಾಗಿ ಇಳಿಯಲಿಲ್ಲ.

ಮೋದಿ ಸರ್ಕಾರವು ಆರಂಭದಿಂದಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಎಕ್ಸೈಜ್ ಸುಂಕ ಹೇರಲಾರಂಭಿಸಿತು. ಕೇರ್ ರೇಟಿಂಗ್ ಏಜೆನ್ಸಿ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಕೇಂದ್ರ ಸರ್ಕಾರ ಎಕ್ಸೈಜ್ ಸುಂಕ ಏರಿಕೆ ಮಾಡಿದ್ದರಿಂದಾಗಿ ಒಟ್ಟಾರೆ ಕೇಂದ್ರ ಮತ್ತು ರಾಜ್ಯದ ತೆರಿಗೆಗಳು ಸೇರಿ ಪೆಟ್ರೋಲ್ ಮೇಲೆ ಶೇ.107ಕ್ಕೆ ಮತ್ತು ಡಿಸೇಲ್ ಮೇಲೆ ಶೇ.69ರಷ್ಟು ತೆರಿಗೆ ಹೇರಿದಂತಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಡಿಸೇಲ್ ಮೇಲಿನ ಎಕ್ಸೈಜ್ ಸುಂಕವನ್ನು ಶೇ.429ರಷ್ಟು ಮತ್ತು ಪೆಟ್ರೋಲ್ ಮೇಲಿನ ಎಕ್ಸೈಜ್ ಸುಂಕವನ್ನು ಶೇ.142ರಷ್ಟು ಏರಿಕೆ ಮಾಡಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಪೆಟ್ರೋಲ್ ಮೇಲಿನ ಎಕ್ಸೈಜ್ ಸುಂಕವು 9.48 ರೂಪಾಯಿ ಮತ್ತು ಡಿಸೇಲ್ ಮೇಲಿನ ಎಕ್ಸೈಜ್ ಸುಂಕವು 3.56 ರೂಪಾಯಿ ಇತ್ತು. ಈಗ ಅದು ಕ್ರಮವಾಗಿ 22.98 ರೂಪಾಯಿ ಮತ್ತು 18.83 ರುಪಾಯಿಗೆ ಏರಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಎಕ್ಸೈಜ್ ಸುಂಕವನ್ನು 12 ಬಾರಿ ಏರಿಕೆ ಮಾಡಲಾಗಿದೆ. ಎರಡೇ ಎರಡು ಬಾರಿ ಇಳಿಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ತೈಲ ದರ ಇಳಿಕೆಯಾಗದೇ ಇದ್ದಾಗ ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚಿನ ದರ ತೆರುವುದರಿಂದ ಅದು ಪರೋಕ್ಷವಾಗಿ ದೇಶೀಯ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜನರ ಖರೀದಿಸುವ ಶಕ್ತಿಯನ್ನು ತಗ್ಗಿಸುತ್ತದೆ. ಗ್ರಾಹಕರು ದಿನ ನಿತ್ಯ ಇಂಧನದ ಮೇಲೆ ವಿನಿಯೋಗಿಸುವ ವೆಚ್ಚವು ಭಾರಿ ಪ್ರಮಾಣದಲ್ಲಿದ್ದರೆ, ಉಳಿದ ದೈನಂದಿನ ಅಗತ್ಯಗಳ ಮೇಲೆ ಮಾಡುವ ವೆಚ್ಚವು ತಗ್ಗುತ್ತದೆ. ಅಲ್ಲದೇ ಇಂಧನಾಧಾರಿತ ಸರಕು ಮತ್ತು ಸೇವೆಗಳ ದರವು ಏರಿಕೆಯಾಗುವುದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಣದುಬ್ಬರವೂ ಏರಿಕೆಯಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಗೆ ಪೂರಕವಾಗಿ ದೇಶೀಯ ಮಾರುಕಟ್ಟೆಯಲ್ಲೂ ದರ ಇಳಿಕೆ ಮಾಡಿದರೆ ಈಗಾಗಲೇ ಕುಸಿದಿರುವ ಆರ್ಥಿಕತೆಗೆ ಚೇತರಿಕೆ ಬರುತ್ತದೆ. ದೀರ್ಘಕಾಲದಲ್ಲಿ ಇದು ಜಿಡಿಪಿ ಹೆಚ್ಚಳಕ್ಕೂ ಕಾರಣವಾಗುತ್ತದೆ.

Click here Support Free Press and Independent Journalism

Pratidhvani
www.pratidhvani.com