ನಿರ್ಣಾಯಕ ಘಟ್ಟ ತಲುಪಿದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು
ರಾಷ್ಟ್ರೀಯ

ನಿರ್ಣಾಯಕ ಘಟ್ಟ ತಲುಪಿದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು

ರಾಜ್ಯಪಾಲ ಲಾಲ್ಜಿ ಟಂಡನ್ ಎದುರು ಪೆರೆಡ್ ನಡೆಸಿದ ಬಿಜೆಪಿ ಶಾಸಕರು, ಕಾಂಗ್ರೆಸ್ ಬಳಿ ಈಗ 92 ಶಾಸಕರು ಮಾತ್ರವೇ ಇದ್ದು ತಮ್ಮ ಬಳಿ 106 ಶಾಸಕರಿರುವ ಪತ್ರವನ್ನೂ ನೀಡಿದ್ದಾರೆ. ಜೊತೆಗೆ ಕೂಡಲೇ ಬಹುಮತ ಸಾಬೀತುಪಡಿಸುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ಶಾಸಕರ ಈ ಭಿನ್ನಹದ ಮೇರೆಗೆ ರಾಜ್ಯಪಾಲರು ಸಿಎಂ‌ ಕಮಲ ನಾಥ್ ಅವರಿಗೆ ನಾಳೆಯೇ ಬಹುಮತ ಸಾಬೀತು ಪಡಿಸಲು‌ ಸೂಚಿಸಿದ್ದಾರೆ. 

ಯದುನಂದನ

ಮಧ್ಯಪ್ರದೇಶದ ವಿಧಾನಾಸಭೆ ಕಲಾಪ ಮಾರ್ಚ್ 26ರವರೆಗೆ ಮುಂದೂಡಲ್ಪಟ್ಟಿದ್ದರಿಂದ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಸರ್ಕಾರ ಬೀಸುವ ದೊಣ್ಣೆಯಿಂದ ಪಾರಾಗಿತ್ತು. ಆದರೆ 'ಕಲಾಪ ಮುಂದೂಡುವ ಚಾಣಾಕ್ಷತನ' ಹೊಸ ಬಿಕ್ಕಟ್ಟಿಗೆ ಮುನ್ನುಡಿ ಬರೆದಿದ್ದು. ಈಗ ಕಮಲನಾಥ್ ನಾಳೆಯೇ ಬಹುಮತ ಸಾಬೀತು ಪಡಿಸಬೇಕಾಗಿದೆ.

ಬಿಜೆಪಿ ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಂಡರೆ ಕಾಂಗ್ರೆಸ್ ಮತ್ತೊಂದು ಸಂವಿಧಾನಿಕ ಹುದ್ದೆ ಸ್ಪೀಕರ್ ಸ್ಥಾನವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದೆ. ಹಿಂದೆ ಇಂಥ ಹತ್ತು-ಹಲವು ತಪ್ಪು ಮಾಡಿ ಸೂಕ್ತ ತಂತ್ರಗಾರಿಕೆ ಮಾಡದೆ ರಾಜಕೀಯವಾಗಿಯೂ ದುರ್ಬಲವಾಗಿರುವ ಕಾಂಗ್ರೆಸ್, ನೈತಿಕವಾಗಿ ಮತ್ತು ರಾಜಕೀಯವಾಗಿ ಬಿಜೆಪಿಯನ್ನು ಎದುರಿಸಲು ಸಾಧ್ಯವಾಗದೆ ನಿಡುಸಿರು ಬಿಡುತ್ತಿದೆ.

ತಮ್ಮ ವಿರೋಧ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರಾಜ್ಯಪಾಲರು ಎಂಥ ಆದೇಶಗಳನ್ನು ಹೊರಡಿಸಬಹುದು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಅಂದಾಜು ಮಾಡಲಾಗದ ಸಂಗತಿಯಾಗಿರಲಿಲ್ಲ.‌ ಹಾಗಿದ್ದೂ ಮೈಮರೆತಿದೆ. ಉದಾಹರಣೆಗೆ ವಿಧಾನಸಭೆಯನ್ನು ಇವತ್ತು ಕಲಾಪ ಆರಂಭವಾಗಿ ರಾಜ್ಯಪಾಲರು ತಮ್ಮ ಭಾಷಣ ಓದುವ ಸಂಪ್ರದಾಯವನ್ನು ಸಾಂಕೇತಿಕವಾಗಿ ಮಾಡಿದ ಬಳಿಕ ಮುಂದೂಡಿದ ಸದನವನ್ನು ಈ ಮೊದಲೇ ಮುಂದೂಡಬಹುದಿತ್ತು.‌ ಕರೋನಾ ಎಂಬ ಯಾರೂ ಅಲ್ಲಗೆಳೆಯಲಾಗದಿದ್ದ ಕಾರಣವೇ ಗುರಾಣಿ ಆಗಿರುತ್ತಿತ್ತು.

ಆದರೆ, ಸಂಖ್ಯಾಬಲ ಕೂಡಿಬಂದರೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆಗೇ ಬಿಡಲಿ, ಈ ಅನಿಶ್ಚಿತತೆಯಿಂದ ಪಾರಾಗಿಬಿಡಬಹುದು ಎಂಬ ಲೆಕ್ಕಾಚಾರ ಹಾಕಿ ವಿಧಾನಸಭೆಯ ಕಲಾಪ ಶುರುಮಾಡಿ ಸಂಖ್ಯಾಬಲ ತಮ್ಮ ಪರ ಇಲ್ಲದ ಕಾರಣಕ್ಕೆ ಕಲಾಪ ಮುಂದೂಡಿದ್ದರಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಕಮಲನಾಥ್ ಈಗ ಮೊದಲಿಗಿಂತ ಜಾಸ್ತಿ ಒತ್ತಡಕ್ಕೆ ಸಿಲುಕಿದ್ದಾರೆ. ಈಗಾಗಲೇ ಒಮ್ಮೆ ರಾಜ್ಯಪಾಲರು ವಿಶ್ವಾಸ ಮತಯಾಚಿಸುವಂತೆ ನೀಡಿದ ನಿರ್ದೇಶನವನ್ನು ಉಲ್ಲಂಘಿಸಿರುವ ಕಮಲನಾಥ್ ನಾಳೆ ಯಾವ ಸಾಬೂನನ್ನು ಹೇಳಲು‌ ಸಾಧ್ಯವಿಲ್ಲ. ಇದಲ್ಲದೆ ಬಿಜೆಪಿ ಬಾಗಿಲ ಬಳಿ ಕಾಯುತ್ತಾ ಇರುವ ತಮ್ಮ ಪಕ್ಷದ ಶಾಸಕರನ್ನು ರಾತ್ರಿ ಬೆಳಗಾಗುವುದರೊಳಗೆ ಮನವೊಲಿಸಿ ವಾಪಸ್ ಕರೆತರುವುದು ಮತ್ತೊಂದು ಸವಾಲಾಗಿ ಪರಿಣಮಿಸಿದೆ.

ಕಲಾಪ ಮುಂದೂಡುತ್ತಿದ್ದಂತೆ ರಾಜ್ಯಪಾಲ ಲಾಲ್ಜಿ ಟಂಡನ್ ಎದುರು ಪೆರೆಡ್ ನಡೆಸಿದ ಬಿಜೆಪಿ ಶಾಸಕರು, ಕಾಂಗ್ರೆಸ್ ಬಳಿ ಈಗ 92 ಶಾಸಕರು ಮಾತ್ರವೇ ಇದ್ದು ತಮ್ಮ ಬಳಿ 106 ಶಾಸಕರಿರುವ ಪತ್ರವನ್ನೂ ನೀಡಿದ್ದಾರೆ. ಜೊತೆಗೆ ಕೂಡಲೇ ಬಹುಮತ ಸಾಬೀತುಪಡಿಸುವಂತೆ ಆಗ್ರಹಿಸಿದ್ದಾರೆ. ಬಿಜೆಪಿ ಶಾಸಕರ ಈ ಭಿನ್ನಹದ ಮೇರೆಗೆ ರಾಜ್ಯಪಾಲರು ಸಿಎಂ‌ ಕಮಲನಾಥ್ ಅವರಿಗೆ ನಾಳೆಯೇ ಬಹುಮತ ಸಾಬೀತು ಪಡಿಸಲು‌ ಸೂಚಿಸಿದ್ದಾರೆ.

ಬಿಜೆಪಿ ಈ ಬಿಕ್ಕಟ್ಟನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್ ಕದ ಬಡಿದಿದೆ. ನಾಳೆ ಅದರ ವಿಚಾರಣೆಯೂ ನಡೆಯಲಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಅಂದಾಜು ಮಾಡಲು ಸಾಧ್ಯವಿಲ್ಲ.‌ ಇತ್ತೀಚೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶೇಷವಾಗಿ ವಿಶ್ವಾಸಮತಯಾಚನೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೇಗಿದ್ದವು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಕಮಲನಾಥ್ ಅವರಿಗೆ ಸುಪ್ರೀಂ ಕೋರ್ಟಿನಿಂದ ಸಿಹಿ ಸುದ್ದಿ ಸಿಗುವ ಸಾಧ್ಯತೆಗಳು‌ ಬಹಳ ಕಡಿಮೆ.

ರಾಜ್ಯಪಾಲರ ಆದೇಶ ಪಾಲನೆ ಮಾಡದ ಕಮಲನಾಥ್ ಪರ ವಕೀಲರು ಯಾವ ಆಧಾರದ ಮೇಲೆ ತಮ್ಮ ಕಕ್ಷಿದಾರನನ್ನು ಸಮರ್ಥಿಸಿಕೊಳ್ಳಬಲ್ಲರು ಎಂಬುದು ಕೂಡ ಕುತೂಹಲಕಾರಿ ಸಂಗತಿಯಾಗಿದೆ. ಮಾರ್ಚ್ 16ರಂದು ಬಹುಮತ ಸಾಬೀತುಪಡಿಸಬೇಕೆಂದು ಮೊನ್ನೆಯೇ ಸೂಚನೆ ನೀಡಿದ್ದ ರಾಜ್ಯಪಾಲರಿಗೆ ಇಂದು ಬೆಳಿಗ್ಗೆ ಪತ್ರ ಬರೆದಿರುವ ಕಮಲನಾಥ್, 'ಸ್ಪೀಕರ್ ಕಾರ್ಯಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವಂತಿಲ್ಲ' ಎಂದು ಹೇಳಿದ್ದಾರೆ. ಜೊತೆಗೆ ವಿಶ್ವಾಸಮತಯಾಚನೆ ಬಟನ್‌ ಒತ್ತುವುದರ ಮೂಲಕವೇ ನಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ‌. ಹೊರಗೆ ರಾಜಕಾರಣದ ತಂತ್ರವಾಗಿ ಅಥವಾ 'ಮೀಡಿಯಾ ಕಂಸಂಪ್ಷನ್'ಗಾಗಿ ಅವರು ಏನೇ ಮಾಡಿದರೂ ಅಂತಿಮವಾಗಿ ನಾಳೆ ಸುಪ್ರೀಂ ಕೋರ್ಟ್ ಮುಂದೆ ಅವರು ತಮ್ಮ ಕ್ರಮವನ್ನು ನಿಯಮಾವಳಿಗಳ ಅನುಸಾರವಾಗಿ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದರ ಮೇಲೆಯೇ ತೀರ್ಪು ಬರುವುದು.

ಇನ್ನೊಂದೆಡೆ ಸ್ಪೀಕರ್ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರ ಆದೇಶ ಇದ್ದಾಗಲೂ ಸದನ ಮುಂದೂಡಿದ್ದನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಈ 'ನಿರ್ದಿಷ್ಟ ಅಂಶಕ್ಕೆ' ಕರೋನಾ ಮಹಾಮಾರಿಯ ಬೆಂಬಲ ಸಾಧ್ಯತೆಯೂ ಇಲ್ಲ. ಒಟ್ಟಾರೆಯಾಗಿ ಸುಪ್ರೀಂ ಕೋರ್ಟಿನಲ್ಲಿ ಸಿಎಂ ಕಮಲನಾಥ್ ಮತ್ತು ಸ್ಪೀಕರ್ ಇಬ್ಬರೂ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಹೀಗೆ ಸದನ ಮತ್ತು ಸುಪ್ರೀಂ ಕೋರ್ಟ್ ಎರಡೂ ಕಡೆಯೂ ಕಮಲನಾಥ್ ಅವರಿಗೆ ಪೂರಕ ವಾತಾವರಣ ಇಲ್ಲ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ 2 ಸ್ಥಾನ ತೆರವಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ ಬಣದವರೆಂದು ಗುರುತಿಸಿಕೊಂಡು 22 ಶಾಸಕರು ರಾಜೀನಾಮೆ ನೀಡಿದ್ದರು. ಆ ಪೈಕಿ ಆರು ಮಂದಿಯನ್ನು ಉಚ್ಛಾಟಿಸಲಾಗಿದೆ‌. ವಿಧಾನಸಭೆಯ ಸದ್ಯದ ಸಂಖ್ಯಾಬಲ 222ಕ್ಕೆ ಇಳಿದಿದ್ದು ಮ್ಯಾಜಿಕ್ ನಂಬರ್ 112 ಆಗಿದೆ. ಬಿಜೆಪಿ ತಮ್ಮ ಪಕ್ಷದ ಕೆಲ ಶಾಸಕರನ್ನು ಹೈಜಾಕ್ ಮಾಡಿ ಇಟ್ಟುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಒಂದೊಮ್ಮೆ ಈ ಆರೋಪ ನಿಜವೇ ಆಗಿದ್ದರೆ ನಾಳೆಯಾದರೂ ಅವರ ಪೈಕಿ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಮರಳಬಹುದು. ಅದು ಸಾಬೀತಾಗುವುದಕ್ಕೂ ವಿಶ್ವಾಸಮತಯಾಚನೆ ಆಗಲೇಬೇಕು. ಒಟ್ಟಿನಲ್ಲಿ ಮಧ್ಯಪ್ರದೇಶದ ರಾಜಕೀಯ ನಿರ್ಣಾಯಕ ಘಟ್ಟ ತಲುಪಿದೆ‌.

Click here Support Free Press and Independent Journalism

Pratidhvani
www.pratidhvani.com