ಕರೋನಾ ವಿಚಾರದಲ್ಲೂ ತಪ್ಪದ ಶೈಲಜಾ ಟೀಚರ್‌ ʼಲೆಕ್ಕಾಚಾರʼ… !!
ರಾಷ್ಟ್ರೀಯ

ಕರೋನಾ ವಿಚಾರದಲ್ಲೂ ತಪ್ಪದ ಶೈಲಜಾ ಟೀಚರ್‌ ʼಲೆಕ್ಕಾಚಾರʼ… !!

ಒಂದೂವರೆ ತಿಂಗಳಕಾಲ ನಿಫಾ ವೈರಸ್‌ ಜೊತೆ ಸೆಣಸಿದ ಕೇರಳ ಸರಕಾರಕ್ಕೆ ಅದರ ವಿರುದ್ಧ ಗೆಲುವು ದಾಖಲಿಸುವ ಮುನ್ನ 17 ಮಂದಿ ಬಲಿಯಾಗಿ ಹೋಗಿದ್ದರು. ಆದರೆ ಕೇರಳದಲ್ಲಿಆರಂಭವಾದ ಸೋಂಕು ಬೇರೆ ರಾಜ್ಯಗಳನ್ನ ಪ್ರವೇಶಿಸಲಿಲ್ಲ. ಅಲ್ಲದೇ ಕೇರಳ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರ ಹಾಗೂ ಯೋಜನೆ ಹಿಂದೆ ಓರ್ವ ಸ್ತ್ರೀ ತನ್ನೆಲ್ಲಾ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಅವರೇ ಕೇರಳ ಸರಕಾರದ ಆರೋಗ್ಯ ಸಚಿವೆ ಕೆಕೆ ಶೈಲಜಾ ಟೀಚರ್.‌

ಮೊಹಮ್ಮದ್‌ ಇರ್ಷಾದ್‌

ಕೇರಳ ರಾಜ್ಯ ಯಾವತ್ತಿದ್ದರೂ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳೆಲ್ಲದರಲ್ಲೂ ದೇಶದಲ್ಲೇ ಭಿನ್ನವಾಗಿ ಕಾಣಿಸಿಕೊಳ್ಳುತ್ತೆ. ದೇಶದಲ್ಲೇ ಅತ್ಯಂತ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಅನ್ನೋ ಹೆಗ್ಗಳಿಕೆ ಒಂದೆಡೆಯಾದರೆ, ಇನ್ನೊಂದೆಡೆ ದೇವರ ನಾಡು ಅನ್ನೋ ಹಿರಿಮೆಯೂ ಈ ರಾಜ್ಯದ್ದು. ಇಂತಹ ರಾಜ್ಯ ಇದೀಗ ಆರೋಗ್ಯ ಸುರಕ್ಷತೆ ವಿಚಾರದಲ್ಲೂ ಮಾದರಿಯೆನಿಸಿಕೊಂಡಿದೆ. 2018 ರ ಮೇ, ಜೂನ್‌ ತಿಂಗಳಿನಲ್ಲಿ ಏಕಾಏಕಿಯಾಗಿ ಕಾಣಿಸಿಕೊಂಡ ನಿಫಾ ಅನ್ನೋ ವೈರಸ್‌ ಪೂರಿತ ಸೋಂಕು ಇಡೀ ಕೇರಳ ರಾಜ್ಯವನ್ನೇ ಕಂಗೆಡಿಸಿ ಬಿಟ್ಟಿತ್ತು. ಆಸ್ಪತ್ರೆ ದಾಖಲಾದ ಇಬ್ಬರು ರೋಗಿಗಳು ಸಾಯುವವರೆಗೂ ಇಂತಹದ್ದೊಂದು ರೋಗ ಈ ಜಗತ್ತಲ್ಲಿ ಇದೆ ಅನ್ನೋದು ಕೇರಳಿಗರು ಬಿಡಿ, ಇಡೀ ಭಾರತಕ್ಕೆ ಸರಿಯಾದ ಮಾಹಿತಿ ಇರಲಿಲ್ಲ.

ಸಾಮಾನ್ಯ ಜ್ವರ, ತಲೆನೋವು, ವಾಂತಿಯಾಗಿ ಮೂರ್ಛೆ ತಪ್ಪಿ ಬೀಳೋ ರೋಗಿ ಸಾವಿನ ದವಡೆಗೆ ತಳ್ಳಲ್ಪಡುತ್ತಿದ್ದ ಇಂತಹ ಸಂದರ್ಭದಲ್ಲಿ ಕೇರಳ ಸರಕಾರ ಒಂದು ಹಂತದಲ್ಲಿ ಭಯಗೊಂಡರೂ ಸೋಂಕು ಆರಂಭವಾದ ಮೂಲವನ್ನ ಪತ್ತೆ ಹಚ್ಚಲು ಆರಂಭಿಸಿತ್ತು. ಅತ್ತ ಮಣಿಪಾಲದ ವೈದ್ಯರ ತಂಡ ನಡೆಸಿದ ಪರೀಕ್ಷೆಯಲ್ಲಿ ಈ ಭಯಾನಕ ಸೋಂಕಿಗೆ ನಿಫಾ ಅನ್ನೋ ವೈರಸ್‌ ಕಾರಣ ಅಂತಾ ಪತ್ತೆ ಹಚ್ಚಿದ್ದರು. ಅದಾಗುತ್ತಲೇ ಸಮಾರೋಪಾದಿಯಲ್ಲಿ ಮುಂದುವರೆದ ಕೇರಳ ಸರಕಾರ ಮೊದಲು ಮಾಡಿದ್ದೇ ರೋಗವನ್ನು ತಡೆಗಟ್ಟುವ ಪ್ರಯತ್ನ. ಪರಿಣಾಮ ಸುಮಾರು ಒಂದೂವರೆ ತಿಂಗಳ ಕಾಲ ನಿಫಾ ವೈರಸ್‌ ಜೊತೆ ಸೆಣಸಿದ ಕೇರಳ ಸರಕಾರಕ್ಕೆ ಅದರ ವಿರುದ್ಧ ಗೆಲುವು ದಾಖಲಿಸುವ ಮುನ್ನ 17 ಮಂದಿ ಬಲಿಯಾಗಿ ಹೋಗಿದ್ದರು. ಆದರೆ ಕೇರಳದಲ್ಲಿ ಆರಂಭವಾದ ಸೋಂಕು ಬೇರೆ ರಾಜ್ಯಗಳನ್ನ ಪ್ರವೇಶಿಸಲಿಲ್ಲ. ಅಲ್ಲದೇ ಕೇರಳ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರ ಹಾಗೂ ಯೋಜನೆ ಹಿಂದೆ ಓರ್ವ ಸ್ತ್ರೀ ತನ್ನೆಲ್ಲಾ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಅವರೇ ಕೇರಳ ಸರಕಾರದ ಆರೋಗ್ಯ ಸಚಿವೆ ಕೆಕೆ ಶೈಲಜಾ ಟೀಚರ್.

ಇದೇ ಶೈಲಜಾ ಟೀಚರ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಂತಹ ಮಹಾಮಾರಿ ನಿಫಾ ಸೋಂಕನ್ನು ಒದ್ದೋಡಿಸಿದ ಶೈಲಜಾ ಟೀಚರ್‌ ನೇತೃತ್ವದ ತಂಡವೇ ಇದೀಗ ಮತ್ತೆ ಜಗತ್ತು ಬೆಚ್ಚಿಬಿದ್ದಿರುವ ಕೋವಿಡ್-‌೧೯ ಮಾಹಾಮಾರಿ ವಿರುದ್ಧ ಸಮಾರೋಪಾದಿಯಲ್ಲಿ ಕಾರ್ಯಾಚರಣೆಗಿಳಿದಿದೆ. ಅಂದಹಾಗೆ ನಿಮಗೆಲ್ಲ ನೆನಪಿರಬಹುದು, ಚೀನಾ ದೇಶದಲ್ಲಿ ಕರೋನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದರೆ ಭಾರತ ನಿಶ್ಚಿಂತೆಯಿಂದ ಇತ್ತು. ಆದರೆ ಈ ಮಲಯಾಳಿಗರ ಜಾಲ ಅನ್ನೋದು ಕಡಿಮೆಯದ್ದಲ್ಲ. ಜಗತ್ತಿನಾದ್ಯಂತ ಶಿಕ್ಷಣ, ವ್ಯಾಪಾರ ಅಂತೆಲ್ಲಾ ಹರಡಿಕೊಂಡಿರುವ ಸಮುದಾಯವದು. ಅಂತೆಯೇ ಚೀನಾಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ವಾಪಾಸ್‌ ಬಂದವರೇ ಕೇರಳದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಹೀಗೆ ಜನವರಿ ಅಂತ್ಯದ ವೇಳೆಗೆ ಆರಂಭವಾದ ಕರೋನಾ ಕೇರಳವನ್ನು ಸಾಕಷ್ಟು ಪರೀಕ್ಷೆಗೆ ಒಡ್ಡಿದೆ. ಚೀನಾದಿಂದ ಬಂದಂತಹ ಆ ಮೂವರು ವಿದ್ಯಾರ್ಥಿಗಳಲ್ಲಿ ಸಂಪರ್ಕ ಸಾಧಿಸಿದ್ದ ಎಲ್ಲರನ್ನೂ ಪರಿಶೀಲಿಸಿ ಚಿಕಿತ್ಸೆ ಕೊಡಲಾಯಿತು. ಕೇಂದ್ರದ ಆರೋಗ್ಯ ಇಲಾಖೆಯ ಸೂಚನೆಗಿಂತಲೂ ಅಧಿಕ ಮುತುವರ್ಜಿ ವಹಿಸಿಕೊಂಡಿತು.

ಪರಿಣಾಮ ಕೋವಿಡ್‌-19 ಸೋಂಕು ಬಾಧಿತರಾಗಿದ್ದ ಆ ಮೂವರು ವಿದ್ಯಾರ್ಥಿಗಳು ಈಗ ನಿಧಾನವಾಗಿ ಚೇತರಿಕೆ ಕಾಣುವಂತಾಗಿದೆ. ಅದಲ್ಲದೇ ದೇಶದಲ್ಲೇ ಅತೀ ಹೆಚ್ಚು ಕರೋನಾ ಪೀಡತರನ್ನ ಕೇರಳ ರಾಜ್ಯ ಹೊಂದಿದೆ. ಆದರೂ ಎಲ್ಲೂ ಎದೆಗುಂದದ ಕೇರಳ ಸರಕಾರ ಇದುವರೆಗೂ ಯಾವೊಂದು ಸಾವು ಸಂಭವಿಸದಂತೆ ಜಾಗರೂಕತೆ ವಹಿಸಿಕೊಂಡಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೇರಳ ಆರೋಗ್ಯ ಇಲಾಖೆಯು 5468 ಶಂಕಿತ ಕರೋನಾ ಬಾಧಿತರ ಮೇಲೆ ನಿಗಾವಿಟ್ಟಿದೆ. 277 ರೋಗಿಗಳಿಗೆ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನೂ ಹಲವರು ಚಿಕಿತ್ಸೆ ಪಡೆದು ಮನೆಗೆ ವಾಪಾಸ್‌ ಆಗಿದ್ದಾರೆ. ಇನ್ನು ದೇಶದಲ್ಲೇ ಅತೀ ಹೆಚ್ಚು ಕರೋನಾ ಸೋಂಕು ಪತ್ತೆಯಾಗಿರುವುದು ಕೇರಳ ರಾಜ್ಯದಲ್ಲಿಯೇ. ಇದುವರೆಗೂ 19 ಜನರಿಗೆ ಕರೋನಾ ಪಾಸಿಟಿವ್‌ ಅನ್ನೋ ರಿಪೋರ್ಟ್‌ ಕೇರಳ ಆರೋಗ್ಯ ಇಲಾಖೆಯ ಕೈ ಸೇರಿದೆ.

ವಯಸ್ಸಿಗೂ ಮೀರಿ ಕರ್ತವ್ಯಕ್ಕೆ ಆದ್ಯತೆ ನೀಡಿದ ʼಟೀಚರ್ʼ..:

ಅಂದಹಾಗೆ ನಿಫಾ ವೈರಸ್‌ ಕಲಿಸಿ ಹೋದ ಪಾಠವೇ ಭಯಾನಕ ಮಹಾಮಾರಿ ಕರೋನಾ ವೈರಸ್ನ ಸಾವಿನೇಟಿನಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದನ್ನ ಕೇರಳಕ್ಕೆ ಕಲಿಸಿ ಹೋಗಿತ್ತು. ಆ ಕಾರಣಕ್ಕಾಗಿಯೇ ಕರೋನಾ ಕಾಲಿಡುತ್ತಿದ್ದಂತೆ ಕೇರಳ ಸರಕಾರವೇ ಸಮಾರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಅದರಲ್ಲೂ 63 ರ ಹರೆಯದ ಕೆ.ಕೆ. ಶೈಲಜಾ ಅವರಂತೂ ರಾತ್ರಿಯನ್ನೂ ಹಗಲನ್ನಾಗಿಸಿ ನಾಡಿನ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ. ಊಟ, ನಿದ್ದೆ ಬಿಟ್ಟು ದಿನವಿಡೀ ಆರೋಗ್ಯಾಧಿಕಾರಿ, ವೈದ್ಯಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕರೋನಾ ಸೋಂಕು ಪೀಡಿತರ ವರದಿ ಕಲೆ ಹಾಕುತ್ತಿದ್ದಾರೆ. ದಿನದ 19 ಗಂಟೆಗಳ ಕಾಲ ಅವಿರತವಾಗಿ ಕರ್ತವ್ಯದಲ್ಲಿ ನಿರತರಾಗಿರುವ ಶೈಲಜಾ ಟೀಚರ್‌ ತನ್ನ ಹಳೇ ವೃತ್ತಿ (ಶಿಕ್ಷಕಿ)ಯನ್ನ ನೆನಪಿಸುವಂತೆ ಪ್ರತಿಬಾರಿಯೂ ವೈದ್ಯರಲ್ಲಿ ಕರೋನಾ ಸಂಬಂಧ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಿದ್ದಾರೆ.

63 ವಯಸ್ಸಾದರೂ ಎಲ್ಲೂ ಎದೆಗುಂದದ ಅವರ ಧೈರ್ಯ, ಛಲದ ಪರಿಣಾಮ ಕೇರಳ ಕರೋನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದೆ ಅಂತಾ ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ. ಬೆಳಿಗ್ಗೆ ಏಳು ಗಂಟೆಯಾಗುತ್ತಲೇ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡುವ ಆರೋಗ್ಯ ಸಚಿವೆ ದಿನದ ಮಾಹಿತಿ ಪಡೆಯುತ್ತಾರೆ. ಆ ನಂತರ ಅದ್ಯಾವ ಹೊತ್ತಿಗೆ ಅದ್ಯಾವ ವೈದ್ಯಾಧಿಕಾರಿಗೆ ಕರೆ ಬರಬಹುದು ಅನ್ನೋದು ಊಹಿಸಲೂ ಅಸಾಧ್ಯ. ಮಧ್ಯರಾತ್ರಿ 1 ಗಂಟೆವರೆಗೂ ಆರೋಗ್ಯಾಧಿಕಾರಿಗಳಿಗೆ ಕರೆ, ಮೀಟಿಂಗ್‌ ನಡೆಸುವ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಟೀಚರ್ ಕೆಲಸ ನಿರ್ವಹಿಸುತ್ತಿದ್ದಾರೆ.

ಕರೋನಾ ತಡೆ ಹಿಡಿಯಲು ಕೇರಳ ಮಾಸ್ಟರ್‌ ಫ್ಲ್ಯಾನ್‌ :

ಕೇರಳ ಸರಕಾರ ಆರಂಭದಲ್ಲೇ ಕರೋನಾ ಬಗ್ಗೆ ಜಾಗೃತವಾಗಿತ್ತು. ಪರಿಣಾಮ ಕೇರಳದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಸೋಂಕು ಶಂಕೆ ವ್ಯಕ್ತವಾಗುತ್ತಲೇ ಅವರು ಓಡಾಡಿದ್ದ ರೂಟ್‌ ಮ್ಯಾಪ್ ನ್ನ ತಯಾರಿಸಿ ಅಲ್ಲಿದ್ದವರೆಲ್ಲರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇನ್ನು ಹಲವರು ಸರಕಾರ ತಯಾರಿಸಿದ ಚಾರ್ಟ್‌ನ್ನು ಗಮನಿಸಿ ಆಸ್ಪತ್ರೆಗೆ ಸ್ವಯಂ ಪ್ರೇರಿತವಾಗಿ ದಾಖಲಾಗಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣ ಮೂಲಕ ಆಗಮಿಸಿದ ವಿದೇಶಿ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿದ್ದಾರೆ.

ನಿಫಾ ವೈರಸ್‌ ವಿರುದ್ಧ ಹೋರಾಡಿದ್ದ ಮತ್ತದೇ ತಂಡವನ್ನ ಕರೋನಾ ಅನ್ನೋ ಭೀಕರ ರೋಗದ ವಿರುದ್ಧ ಹೋರಾಡಲು ಕಣಕ್ಕೆ ಇಳಿಸಿದ್ದಾರೆ. ಈ ಬಾರಿ ವೈದ್ಯರೂ ತಮ್ಮ ತಮ್ಮ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡಿದ್ದಾರೆ. ಈ ಹಿಂದೆ 2018 ರಲ್ಲಿ ನಿಫಾ ವೈರಸ್‌ ಸೋಂಕಿತ ರೋಗಿಗಳ ಆರೈಕೆ ಸಂದರ್ಭ ಲಿನಿ ಎಂಬ ನರ್ಸ್‌ ತಾನೂ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದು ಗಮನಾರ್ಹ ಸಂಗತಿ. ಅದರಿಂದ ಈ ಬಾರಿ ಕೇರಳ ಆರೋಗ್ಯ ಇಲಾಖೆ ವೈದ್ಯರ ಆರೋಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಿದೆ.

ಸಚಿವ ಸ್ಥಾನ ಅರಸಿ ಬಂದಾಗ ಹಿಂದೆ ಮುಂದೆ ನೋಡಿದ್ದ ಟೀಚರ್‌ : ‌

ಎಡಪಂಥೀಯ ಹೋರಾಟಗಳಿಂದಲೇ ರಾಜಕೀಯ ಪ್ರವೇಶಿಸಿದ್ದ ಕೆ.ಕೆ. ಶೈಲಜಾ ಆರಂಭದಲ್ಲಿ ಹೈಸ್ಕೂಲ್‌ ಶಿಕ್ಷಕಿ ಹುದ್ದೆ ಅಲಂಕರಿಸಿದ್ರೂ 2004 ರ ನಂತರ ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಸದಸ್ಯೆಯಾಗಿ ಪೂರ್ಣಪ್ರಮಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದವರು. ಆ ನಂತರ ಸೋಲು-ಗೆಲುವುಗಳನ್ನ ಕಂಡಿರುವ ಅವರಿಗೆ 2016 ರಲ್ಲಿ ಪಿಣರಾಯಿ ವಿಜಯನ್‌ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನ ಹುಡುಕಿಕೊಂಡು ಬಂತು. ಆರಂಭದಲ್ಲಿ ಇಷ್ಟು ದೊಡ್ಡ ಜವಾಬ್ದಾರಿ ವಹಿಸಿಕೊಳ್ಳಲು ಕೊಂಚ ಅಂಜಿಕೆ ತೋರಿದ್ದ ಶೈಲಜಾ ಟೀಚರ್‌ಗೆ ಅಂದು ಸಿಎಂ ಪಿಣರಾಯಿ ವಿಜಯನ್‌ ಅವರೇ ಧೈರ್ಯ ತುಂಬಿದ್ದರು. ಆ ನಂತರ ಹಿಂದಿರುಗಿ ನೋಡದ ಟೀಚರ್‌ ನಿಫಾ, ಕರೋನಾದಂತಹ ಮಹಾಮಾರಿ ರೋಗಗಳು ಬಂದಾಗಲೂ ಕೊಂಚವೂ ಧೃತಿಗೆಡದೇ ಕೇರಳ ರಾಜ್ಯವನ್ನ ಮುನ್ನಡೆಸುವ ಮೂಲಕ ಮಾದರಿ ಸಚಿವೆಯಾಗಿ ದೇಶದ ಗಮನಸೆಳೆಯುತ್ತಿದ್ದಾರೆ.

ಶೈಲಜಾ ಟೀಚರ್‌ ಮುಂದಿದೆ ಇನ್ನಷ್ಟು ಸವಾಲು..!?:

ಹಾಗಂತ ಶೈಲಜಾ ಟೀಚರ್‌ ಮುಂದೆ ಇನ್ನೂ ಸವಾಲುಗಳಿದ್ದಾವೆ. ಅದಾಗಲೇ ಕರೋನಾದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಲೇ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ರುದ್ರನರ್ತನ ಶುರು ಮಾಡಿದೆ. ಕರೋನಾ ಜೊತೆ ಜೊತೆಗೆ ಕೇರಳದ ಆರೋಗ್ಯದ ಇಲಾಖೆ ಕೋಳಿ ಹಾಗೂ ಮೊಟ್ಟೆಗಳನ್ನ ನಾಶಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಆದ್ದರಿಂದ ಟೀಚರ್‌ ಮುಂದೆ ಸದ್ಯ ಎರಡೆರಡು ಕಠಿಣ ಸವಾಲುಗಳಿರುವುದು ನಿಜ. ಈ ಪರೀಕ್ಷೆಯಲ್ಲೂ ಆರೋಗ್ಯ ಸಚಿವೆ ಕೆಕೆ ಶೈಲಜಾ ಪಾಲಿಸುವ ಸೂತ್ರಗಳು ಯಶಸ್ಸನ್ನು ನೀಡಬಹುದು ಅನ್ನೋದು ಅಲ್ಲಿನ ವೈದ್ಯಾಧಿಕಾರಿಗಳ ಅಭಿಪ್ರಾಯ. ಕಳೆದ ವರುಷ ಬಿಡುಗಡೆಗೊಂಡಿದ್ದ ನಿಫಾ ವೈರಸ್‌ ಕುರಿತಾದ ಆಶಿಕ್‌ ಅಬು ನಿರ್ದೇಶನದ ಮಲಯಾಳಂ ಸಿನೆಮಾ ʼವೈರಸ್‌ʼ ಕೂಡಾ ಆರೋಗ್ಯ ಸಚಿವೆಯ ಕಾರ್ಯದಕ್ಷತೆ ಬಗ್ಗೆ ಚಿತ್ರದ ಮೂಲಕ ಸಮಾಜದ ಮುಂದಿಟ್ಟಿರುವುದು ಗಮನಾರ್ಹ ಸಂಗತಿ.

Click here Support Free Press and Independent Journalism

Pratidhvani
www.pratidhvani.com