ಸಗಣಿ-ಗಂಜಲ ಉಪದೇಶಗಳ ನಡುವೆ ಮಹಾಮಾರಿ ನಿಯಂತ್ರಣದ ಸವಾಲು!
ರಾಷ್ಟ್ರೀಯ

ಸಗಣಿ-ಗಂಜಲ ಉಪದೇಶಗಳ ನಡುವೆ ಮಹಾಮಾರಿ ನಿಯಂತ್ರಣದ ಸವಾಲು!

ಇಡೀ ಜಗತ್ತೇ ಕರೋನ ಸೋಂಕಿನಿಂದ ಪಾರಾಗುವ ಬಗ್ಗೆ ಆತಂಕಕ್ಕೀಡಾಗಿರುವ ಹೊತ್ತಲ್ಲೂ, ದೇಶದಲ್ಲಿ  ವೈಜ್ಞಾನಿಕ ಜಾಗೃತಿ ಮೂಡಿಸುವ, ಜನರಿಗೆ ಸರಿಯಾದ ಮಾಹಿತಿ ತಲುಪಿಸುವ ಸರ್ಕಾರದ ಅಧಿಕೃತ ಪ್ರಯತ್ನಗಳಿಗಿಂತ, ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಮುಂತಾದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಮುಖಂಡರ ಧಾರ್ಮಿಕ ಸಲಹೆಗಳು, ಮೌಢ್ಯ ಬಿತ್ತನೆಯ ಯತ್ನಗಳೇ ಹೆಚ್ಚು ಪ್ರಚಾರದಲ್ಲಿವೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಜಾಗತಿಕ ಭೀತಿಗೆ ಕಾರಣವಾಗಿರುವ ಕೋವಿಡ್-19 ಅಥವಾ ಕರೋನಾ ವೈರಸ್ ಸೋಂಕು ಭಾರತದಲ್ಲಿ ಈಗಾಗಲೇ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸುಮಾರು 85 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ ದಿನೇದಿನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ‘ಘೋಷಿತ ವಿಪತ್ತು’ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಚೀನಾ, ಇಟಲಿ, ಇರಾನ್, ಸ್ಪೇನ್ ಮತ್ತಿತರ ರಾಷ್ಟ್ರಗಳಲ್ಲಿ ಮಾರಕ ವೈರಸ್ ದಿಢೀರ್ ಸಾವಿರಾರು ಜನರ ಜೀವ ಬಲಿತೆಗೆದುಕೊಂಡ ಹಿನ್ನೆಲೆಯಲ್ಲಿ, ಅತಿ ಹೆಚ್ಚು ಜನಸಂದಣಿಯ ದೇಶದಲ್ಲಿ ಅದರ ಅಪಾಯ ಹೆಚ್ಚು ಎಂಬ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಭಾಗಶಃ ಬಂದ್ ಘೋಷಿಸಿವೆ. ರಾಜ್ಯ ಸರ್ಕಾರ ಶುಕ್ರವಾರ ರಾಜ್ಯದಾದ್ಯಂತ ಶಾಲಾಕಾಲೇಜು, ಮಾಲ್, ಸಿನಿಮಾ, ಜಾತ್ರೆ, ಸಂತೆ, ಸಾರ್ವಜನಿಕ ಸಭೆ- ಸಮಾರಂಭಗಳನ್ನು ಬಂದ್ ಮಾಡಲು ಆದೇಶಿಸಿದೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರ, ದೆಹಲಿ, ಬಿಹಾರ್, ಒಡಿಶಾ, ಪಂಜಾಬ್, ಹರ್ಯಾಣ ರಾಜ್ಯಗಳಲ್ಲೂ ಜನಸಂದಣಿಯ ಮಾರುಕಟ್ಟೆ ಮತ್ತಿತರ ಸ್ಥಳಗಳನ್ನು ಮುಚ್ಚುವ ತೀರ್ಮಾನ ಘೋಷಿಸಲಾಗಿದೆ.

ಸಗಣಿ-ಗಂಜಲ ಉಪದೇಶಗಳ ನಡುವೆ ಮಹಾಮಾರಿ ನಿಯಂತ್ರಣದ ಸವಾಲು!

ಐಪಿಎಲ್ ಕ್ರಿಕೆಟ್ ಟೂರ್ನಿ, ಆರ್ ಎಸ್ ಎಸ್ ಸಮಾವೇಶ ಸೇರಿದಂತೆ ಹಲವು ಕ್ರೀಡಾ ಮತ್ತು ರಾಜಕೀಯ ಸಭೆ ಸಮಾರಂಭಗಳನ್ನು ಮುಂದೂಡಲಾಗಿದೆ. ಈ ನಡುವೆ, ಮೊದಲೇ ನೋಟು ರದ್ದತಿ, ಜಿಎಸ್ ಟಿ ಮುಂತಾದ ಸರ್ಕಾರದ ನೀತಿ-ನಿರ್ಧಾರಗಳು ಮತ್ತು ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಕುಸಿತದ ಭೀತಿಯಲ್ಲಿದ್ದ ದೇಶದ ಅರ್ಥವ್ಯವಸ್ಥೆ ಬಹುತೇಕ ಕುಸಿತದ ಅಂಚಿಗೆ ಬಂದುನಿಂತಿದೆ. ಮುಂಬೈ ಷೇರುಪೇಟೆ ಐತಿಹಾಸಿಕ ಪತನ ದಾಖಲಿಸಿದ್ದು, ಗುರುವಾರ ಮತ್ತು ಶುಕ್ರವಾರ ಹೂಡಿಕೆದಾರರ ಸುಮಾರು 15 ಲಕ್ಷ ಕೋಟಿ ರೂ. ಬಂಡವಾಳ ಕೊಚ್ಚಿಹೋಗಿದೆ.

ಪ್ರಮುಖವಾಗಿ ದೇಶದ ಆರ್ಥಿಕತೆಯ ಮೇಲೆ ಈ ಮಾರಕ ವೈರಾಣುರೋಗ ಬಲವಾದ ಪೆಟ್ಟು ನೀಡಲಿದ್ದು, ಭವಿಷ್ಯದ ಹೊಡೆತದಿಂದ ಪಾರಾಗುವ ಕ್ರಮವಾಗಿ ಕೇಂದ್ರ ಸರ್ಕಾರ ಈಗಾಗಲೇ ರಕ್ಷಣಾತ್ಮಕ ಕ್ರಮಗಳಿಗೆ ಮುಂದಾಗಿದೆ. ಅಂತಹ ಒಂದು ಹೆಜ್ಜೆಯಾಗಿ ಜಾಗತಿಕ ಕಚ್ಛಾ ತೈಲದ ಭಾರೀ ಬೆಲೆ ಕುಸಿತದ ಹೊರತಾಗಿಯೂ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಭಾರೀ ಏರಿಕೆ(ಲೀಟರಿಗೆ 3 ರೂ.)ಯನ್ನು ಘೋಷಿಸಿದೆ. ಜಾಗತಿಕವಾಗಿ ತೈಲ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ದಾಟಿಸುವ ಬದಲು, ವ್ಯತಿರಿಕ್ತವಾಗಿ ಬೆಲೆ ಏರಿಕೆಯ ಈ ಕ್ರಮ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಸುಮಾರು 39 ಸಾವಿರ ಕೋಟಿ ಹೆಚ್ಚುವರಿ ಆದಾಯ ಕ್ರೋಡೀಕರಣದ ಉದ್ದೇಶದಿಂದ ಸುಂಕ ಏರಿಕೆ ಮಾಡಿದ್ದು, ಪೆಟ್ರೋಲ್-ಡೀಸೆಲ್ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗದು. ತೈಲ ಕಂಪನಿಗಳು ತಮ್ಮ ಲಾಭಾಂಶದಲ್ಲಿ ಈ ಹೆಚ್ಚಳವನ್ನು ಭರಿಸಲಿವೆ ಎಂದು ಸರ್ಕಾರ ಹೇಳಿದೆ. ಆದರೆ, ಭಾರೀ ಬೆಲೆ ಕುಸಿತದ ಹೊರತಾಗಿಯೂ ಅದರ ಲಾಭ ಸಾರ್ವಜನಿಕರಿಗೆ ತಲುಪದು ಎಂಬುದು ವಾಸ್ತವ!

ಕೋವಿಡ್-19 ಹುಟ್ಟಿಸಿರುವ ಭೀತಿಯ ಇಂತಹ ಪರಿಣಾಮಗಳ ನಡುವೆ, ವಾಸ್ತವಿಕವಾಗಿ ದೇಶದಲ್ಲಿ ಈ ಮಹಾಮಾರಿಯನ್ನು ನಿಯಂತ್ರಿಸಲು ಮತ್ತು ತೊಲಗಿಸಲು ಅಗತ್ಯ ಪ್ರಮಾಣದಲ್ಲಿ ನಮ್ಮ ವ್ಯವಸ್ಥೆ ಸಜ್ಜಾಗಿದೆಯೇ ಎಂಬ ಗಂಭೀರ ಪ್ರಶ್ನೆಗಳೂ ಹುಟ್ಟಿವೆ.

ಏಕೆಂದರೆ, ಪ್ರಮುಖವಾಗಿ ಚೀನಾಕ್ಕಿಂತ ಹೆಚ್ಚು ಜನಸಂದಣಿಯ ಮತ್ತು ಹೆಚ್ಚು ಬಡತನದ ದೇಶ ಭಾರತ. ಹಾಗಾಗಿ ಚೀನಾದಷ್ಟೇ ತೀವ್ರಗತಿಯಲ್ಲಿ ಸೋಂಕು ಕಾಣಿಸಿಕೊಂಡಲ್ಲಿ, ಆಗಬಹುದಾದ ಅನಾಹುತ ಹತ್ತಾರುಪಟ್ಟು ಹೆಚ್ಚಾಗಲಿದೆ. ಅಂತಹ ಸಂದರ್ಭದಲ್ಲಿ ಸೋಂಕು ನಿಯಂತ್ರಣಕ್ಕೆ ಸಮರೋಪಾದಿ ಕ್ರಮಕೈಗೊಳ್ಳಲು ದೇಶದ ಆರೋಗ್ಯ ವ್ಯವಸ್ಥೆ ಸಜ್ಜಾಗಿದೆಯೇ ಎಂಬುದು ಆತಂಕದ ಸಂಗತಿ. ಅದರಲ್ಲೂ ನಮ್ಮ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಹೀನಾಯ ಸ್ಥಿತಿಯ ಹಿನ್ನೆಲೆಯಲ್ಲಿ ಈ ಆತಂಕ ದುಪ್ಪಟ್ಟು. ಕನಿಷ್ಠ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ, ಕೇಂದ್ರಗಳಿರುವ ಕಡೆ ವೈದ್ಯರೇ ಇಲ್ಲದೆ, ಕೇವಲ ಕೆಳಮಟ್ಟದ ಸಿಬ್ಬಂದಿ ಬಾಗಿಲುತೆಗೆದುಕೊಂಡು ಕೂರುವ, ಕನಿಷ್ಟ ರಕ್ತಪರೀಕ್ಷೆ, ಮೂತ್ರ ಪರೀಕ್ಷೆಯಂತಹ ವೈದ್ಯಕೀಯ ಪರೀಕ್ಷೆಗಳಿಗೂ ಸಮೀಪದ ನಗರ-ಪಟ್ಟಣಗಳಿಗೆ ಎಡತಾಕಬೇಕಾದ ಸ್ಥಿತಿ ಇದೆ. ಅಗತ್ಯ ಆಮ್ಲಜನಕವಾಗಲೀ, ಪ್ರತ್ಯೇಕವಾಗಿಡಬೇಕಾದ ಹೆಚ್ಚುವರಿ ಕೊಠಡಿ, ವೈದ್ಯಕೀಯ ಸೌಲಭ್ಯಗಳಾಗಲೀ ಇಲ್ಲದ ಸ್ಥಿತಿ ಗ್ರಾಮೀಣ ಭಾಗದ್ದು. ಇಂತಹ ಗ್ರಾಮೀಣ ಭಾಗದಲ್ಲೇ ದೇಶದ ಶೇ.70ರಷ್ಟು ಮಂದಿ ಬದುಕುತ್ತಿದ್ಧಾರೆ!

ಜೊತೆಗೆ ಜನಸಂದಣಿ ದಟ್ಟವಾಗಿರುವ ನಗರಪ್ರದೇಶ ಮತ್ತು ಅಲ್ಲಿನ ಕೊಳಚೆಪ್ರದೇಶಗಳಲ್ಲಿ ರೋಗದ ಸೋಂಕು ವ್ಯಾಪಿಸಿದರೆ ಆಗಬಹುದಾದ ಅವಾಂತರ ಕಲ್ಪನೆಗೂ ಮೀರಿದ್ಧಾಗಿರಲಿದೆ. ಚೀನಾದಲ್ಲಿ ಪ್ರತಿ ಕಿ.ಮೀ.ಗೆ 148 ಜನರಿದ್ದರೆ, ಭಾರತದಲ್ಲಿ ಆ ಪ್ರಮಾಣ ಬರೋಬ್ಬರಿ 420! ಇಷ್ಟು ಅಜಗಜಾಂತರ ವ್ಯತ್ಯಾಸದ ಹಿನ್ನೆಲೆಯಲ್ಲಿ ಸೋಂಕಿನ ವ್ಯಾಪಕತೆ ಕಲ್ಪಿಸಿಕೊಂಡರೆ ಭಯವಾಗದೇ ಇರದು. ಜೊತೆಗೆ ದೇಶದ ಸುಮಾರು 70 ಮಿಲಿಯನ್ ಜನ ಈಗಲೂ ಕನಿಷ್ಠ ಆರೋಗ್ಯ, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿಯಿಂದ ವಂಚಿತರಾಗಿ ಕಡುಬಡತನದಲ್ಲಿದ್ದಾರೆ.

ಜೊತೆಗೆ ನಮ್ಮ ದೇಶದಲ್ಲಿರುವ ವೈರಾಣು ರೋಗ ತಪಾಸಣಾ ಪ್ರಯೋಗಾಲಯಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಇನ್ನೂ ಭಯಾನಕ ಭವಿಷ್ಯ ಕಣ್ಣಮುಂದೆ ಬರಲಿದೆ. ಬರೋಬ್ಬರಿ 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸದ್ಯ ಕರೋನಾ ವೈರಾಣು ಪರೀಕ್ಷೆ ನಡೆಸುವ ಕೇಂದ್ರಗಳ ಸಂಖ್ಯೆ ಕೇವಲ 52! ಆ ಪೈಕಿ ಕರ್ನಾಟಕದಲ್ಲಿ ಐದು ಕೇಂದ್ರಗಳಿದ್ದರೆ, ಉತ್ತರಪ್ರದೇಶದಂತಹ ಅತಿ ಹೆಚ್ಚು ಜನಸಂಖ್ಯೆಯ, ಅತಿದೊಡ್ಡ ರಾಜ್ಯದಲ್ಲಿ ಕೇವಲ ಮೂರು ಕೇಂದ್ರಗಳಿವೆ. ಜೊತೆಗೆ ಇಷ್ಟು ಕನಿಷ್ಠ ಸೋಂಕುಪತ್ತೆ ಕೇಂದ್ರಗಳ ಮೂಲಕ ಭಾರತ ಈವರೆಗೆ ನಡೆಸಿರುವ ಒಟ್ಟು ಕರೋನಾ ಪರೀಕ್ಷೆಗಳ ಪ್ರಮಾಣ ಕೇವಲ 5000! ಅದೇ ದಕ್ಷಿಣ ಕೊರಿಯಾ ಈವರೆಗೆ ಬರೋಬ್ಬರಿ 2.20 ಲಕ್ಷ ಮಾದರಿಗಳನ್ನು ಪರೀಕ್ಷೆ ನಡೆಸಿದೆ!

ಈ ನಡುವೆ, ರಾಷ್ಟ್ರೀಯ ವೈರಾಣು ರೋಗ ಸಂಶೋಧನೆ ಮತ್ತು ನಿಯಂತ್ರಣ ವಿಶೇಷ ಯೋಜನೆಯಡಿ 2013-14ರಲ್ಲೇ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ದೇಶಾದ್ಯಂತ ಸುಮಾರು 120 ವೈರಾಣು ಪತ್ತೆ ವಿಶೇಷ ಪ್ರಯೋಗಾಲಯಗಳನ್ನು ತೆರೆಯಲು ಸುಮಾರು 200 ಕೋಟಿ ರೂ. ಅನುದಾನ ಘೋಷಿಸಿತ್ತು. ಆದರೆ, ಈವರೆಗೆ ಕೆಲವೇ ಕೆಲವು ಪ್ರಯೋಗಾಯಗಳು ಆ ಯೋಜನೆಯಡಿ(ವಿಆರ್ ಡಿಎಲ್ಎನ್- ವೈರಾಣು ಸಂಶೋಧನೆ ಮತ್ತು ರೋಗ ಪತ್ತೆ ಪ್ರಯೋಗಾಲಯ ಜಾಲ) ತಲೆ ಎತ್ತಿದ್ದನ್ನು ಹೊರತುಪಡಿಸಿ ಉಳಿದವುಗಳು ಕಡತದಲ್ಲೇ ಮುಗಿದುಹೋಗಿವೆ. ಕರ್ನಾಟಕದ ಶಿವಮೊಗ್ಗ, ಹಾಸನ, ಬೆಂಗಳೂರು, ಕಲಬುರಗಿ ಮತ್ತಿತರ ಐದು ಜಿಲ್ಲಾ ಕೇಂದ್ರಗಳು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಈ ಹೈಟೆಕ್ ಪ್ರಯೋಗಾಲಯ ಆರಂಭಿಸುವ ಮೂಲಕ ಯಾವುದೇ ವೈರಾಣು ರೋಗ ಪತ್ತೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವುದೇ ಆ ಮಹತ್ವಾಕಾಂಕ್ಷಿ ಯೋಜನೆಯ ಗುರಿಯಾಗಿತ್ತು!

ಆದರೆ, ಆ ಬಜೆಟ್ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರಬಹುದಾಗಿದ್ದ ಅಂತಹ ಪ್ರಯೋಗಾಲಯ ಜಾಲವನ್ನು ಅನುಷ್ಠಾನಕ್ಕೆ ತರುವ ಬದಲು, ಸಗಣಿ- ಗಂಜಲ- ಯೋಗದ ಮೂಲಕ ಮಾರಕ ಮಹಾಮಾರಿ ಸೋಂಕುಗಳನ್ನು ತಡೆಯುವ ಮಂತ್ರ ಪಠಿಸುವುದರಲ್ಲೇ ಹೆಚ್ಚು ಆಸಕ್ತಿ ವಹಿಸಿದೆ.

ಈಗಲೂ ಕೂಡ, ಇಡೀ ಜಗತ್ತೇ ಕರೋನ ಸೋಂಕಿನಿಂದ ಪಾರಾಗುವ ಬಗ್ಗೆ ಆತಂಕಕ್ಕೀಡಾಗಿರುವ ಹೊತ್ತಲ್ಲೂ, ದೇಶದಲ್ಲಿ ಆ ವೈಜ್ಞಾನಿಕ ಜಾಗೃತಿ ಮೂಡಿಸುವ, ಜನರಿಗೆ ಸರಿಯಾದ ಮಾಹಿತಿ ತಲುಪಿಸುವ ಸರ್ಕಾರದ ಅಧಿಕೃತ ಪ್ರಯತ್ನಗಳಿಗಿಂತ, ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಮುಂತಾದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಮುಖಂಡರ ಧಾರ್ಮಿಕ ಸಲಹೆಗಳು, ಮೌಢ್ಯ ಬಿತ್ತನೆಯ ಯತ್ನಗಳೇ ಹೆಚ್ಚು ಪ್ರಚಾರದಲ್ಲಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಆ ನಾಯಕರು ಮತ್ತು ಅವರ ಬೆಂಬಲಿಗರು ಹರಿಯಬಿಡುತ್ತಿರುವ ಸೋಂಕು ನಿಯಂತ್ರಣದ ನಗೆಪಾಟಲಿನ ಸಲಹೆಗಳು ಜನರಲ್ಲಿ ಗೊಂದಲ ಮತ್ತು ಆತಂಕ ಹೆಚ್ಚಿಸುತ್ತಿವೆ.

ಒಂದು ಕಡೆ ಸರ್ಕಾರ ಮೊಬೈಲ್ ಕರೆಗಳ ಜೊತೆ ಸೋಂಕು ನಿಯಂತ್ರಣದ ಕ್ರಮಗಳ ಸಲಹೆ ಪ್ರಚಾರ ನಡೆಸುತ್ತಿದ್ದರೆ, ಕೇಂದ್ರ ಸರ್ಕಾರದ ಸಚಿವರೊಬ್ಬರು ಹೋಮ-ಹವನ ಮಾಡುವ, ಮಂತ್ರ ಪಠಿಸುವ ಮೂಲಕ ಕರೋನಾ ತೊಗಲಿಸುವ ಪ್ರಯತ್ನ ಮಾಡುತ್ತಿದ್ಧಾರೆ. ಉತ್ತರಪ್ರದೇಶದ ಸಿಎಂ ಯೋಗದ ಮೂಲಕ ರೋಗ ನಿಯಂತ್ರಣ ಮಾಡಿ ಎಂದಿದ್ದಾರೆ. ಮತ್ತೊಬ್ಬರು ಬಿಜೆಪಿ ನಾಯಕರು ಹಿಂದೂಗಳಿಗೆ ಈ ಸೋಂಕು ತಗಲುವುದಿಲ್ಲ ಎಂದಿದ್ದರೆ, ಇನ್ನೊಬ್ಬರು ಸಗಣಿ ಮತ್ತು ಗೋಮೂತ್ರ ಬಳಕೆಯಿಂದ ಸೋಂಕಿನಿಂದ ಪಾರಾಗಬಹುದು ಎಂಬ ಸಲಹೆ ನೀಡಿದ್ಧಾರೆ. ಹಾಗಾಗಿ ಬಡತನ ಮತ್ತು ಅನಕ್ಷರಸ್ಥ ಜನರು ಸರ್ಕಾರದ ಅಧಿಕೃತ ಸಲಹೆ ಪಾಲಿಸಬೇಕೆ ಅಥವಾ ಅದೇ ಸರ್ಕಾರದ ಸಚಿವರು, ಸಿಎಂಗಳ ಸಲಹೆ ಪಾಲಿಸಬೇಕೆ ಎಂಬ ಗೊಂದಲದಲ್ಲಿದ್ಧಾರೆ!

ಹಾಗಾಗಿ, ದೇಶದ ಅಗಾಧ ಜನಸಂಖ್ಯೆ, ಅವರ ಮೌಢ್ಯಗಳು, ಅನಕ್ಷರತೆ, ಬಡತನಗಳ ಹಿನ್ನೆಲೆಯಲ್ಲಿ ಕರೋನವನ್ನು ಎದುರಿಸುವ ನಿಟ್ಟನಲ್ಲಿ ಜಗತ್ತಿನ ಇತರ ದೇಶಗಳಿಗಿಂತ ಅತಿದೊಡ್ಡ ಸವಾಲು ನಮ್ಮ ಮುಂದೆ ಇದೆ.

Click here Support Free Press and Independent Journalism

Pratidhvani
www.pratidhvani.com