ಜಾಲತಾಣದ ನಕಲಿ ಸುದ್ದಿ, ಪ್ರಚೋದನಾತ್ಮಕ ಸಂದೇಶಗಳಿಗೆ ಕಡಿವಾಣ ಹಾಕಲು ‘ಕೇಂದ್ರ’ ನಿರಾಸಕ್ತಿ!
ರಾಷ್ಟ್ರೀಯ

ಜಾಲತಾಣದ ನಕಲಿ ಸುದ್ದಿ, ಪ್ರಚೋದನಾತ್ಮಕ ಸಂದೇಶಗಳಿಗೆ ಕಡಿವಾಣ ಹಾಕಲು ‘ಕೇಂದ್ರ’ ನಿರಾಸಕ್ತಿ!

ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಸಂಜಯ್ ಧೋತ್ರಿ ನೀಡಿದ ಲಿಖಿತ ಉತ್ತರದಲ್ಲಿಯೇ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್‌ಗಳಲ್ಲಿ ಪ್ರಸಾರವಾಗುವ ನಕಲಿ ಸುದ್ದಿ, ಪ್ರಚೋದನಾತ್ಮ ಸುದ್ದಿ ಹಬ್ಬಿದವರ ವಿರುದ್ದ ಇದುವರೆಗೂ ತನಿಖೆಗೆ ಆದೇಶಿಸಿಲ್ಲ ಅಂದಿರೋದು ನಿಜಕ್ಕೂ ಆಘಾತಕಾರಿ ಮತ್ತು ಅಚ್ಚರಿ ವಿಚಾರ.

ಮೊಹಮ್ಮದ್‌ ಇರ್ಷಾದ್‌

ಸಾಮಾಜಿಕ ಮಾಧ್ಯಮ ಅನ್ನೋದು ಅತ್ಯಂತ ಕ್ಷಿಪ್ರ ಗತಿಯಲ್ಲಿ ಬೆಳೆದು ನಿಂತಿರುವ ಮಾಧ್ಯಮ. ಸಾಮಾಜಿಕ ಬದ್ಧತೆ ಕಡಿಮೆ ಇದ್ದರೂ ಅದನ್ನೇ ನಂಬಿ ಬಿಡುವಷ್ಟು ಜನ ಮರುಳಾಗಿದ್ದಾರೆ. ಲೋಕಸಭೆ, ರಾಜ್ಯಸಭೆಗಳಲ್ಲೂ ಇದರ ಬಗ್ಗೆ ಈ ಹಿಂದೆಯೂ ಹಲವು ಗಂಭೀರ ಚರ್ಚೆಗಳು ನಡೆದಿದ್ದಾವೆ. ಅದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ನಕಲಿ ಸುದ್ದಿಗಳನ್ನ ತಡೆಗಟ್ಟುವುದು ಹೇಗೆ ಅನ್ನುವುದನ್ನು ತಿಳಿಯದೇ ಇಂಟರ್‌ನೆಟ್ ಬಂದ್ ಮಾಡುವ ಅನಿವಾರ್ಯತೆಗೂ ಸರ್ಕಾರ ಬಂದು ನಿಂತಿದೆ. ದೇಶ ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ನಕಲಿ ಹಾಗೂ ಪ್ರಚೋದನಾತ್ಮಕ ಸುದ್ದಿಗಳನ್ನ, ವೀಡಿಯೋಗಳನ್ನ ತಡೆಗಟ್ಟಲು ಸಾಧ್ಯವಾಗಿಲ್ಲ ಅನ್ನೋದು ಸಾಬೀತಾಗುತ್ತಲೇ ಬಂದಿದೆ. ಪರಿಣಾಮ ದೆಹಲಿ ಗಲಭೆಯ ಹಿಂದೆ ಕೆಲಸ ಮಾಡಿದ್ದ ಇದೇ ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಅನಿವಾರ್ಯವಾಗಿ ಮೊಬೈಲ್ ಇಂಟರ್‌ನೆಟ್ ಸ್ಥಗಿತಗೊಳಿಸುವ ಮೂಲಕ ಸರ್ಕಾರ ಜಾಲತಾಣದ ಪ್ರಸಾರವಾಗುವ ಪ್ರಚೋದನಾತ್ಮಕ ಸಂದೇಶ ಹಾಗೂ ನಕಲಿ ಸುದ್ದಿಗಳ ಮೇಲೆ ಕಡಿವಾಣ ಹಾಕಲು ಮುಂದಾಗುತ್ತಿದೆ.

ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಸುಮಾರು ಆರು ತಿಂಗಳ ಕಾಲ ಆ ಪ್ರದೇಶದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಸಿಎಎ ವಿರೋದಿ ಪ್ರತಿಭಟನೆ ಸಂದರ್ಭ ಅಸ್ಸಾಂ, ಮೇಘಾಲಯ, ದೆಹಲಿ, ಕರ್ನಾಟಕ ಮುಂತಾದ ಕಡೆಗಳಲ್ಲೂ ಮೊಬೈಲ್ ಇಂಟರ್‌ನೆಟ್ ಮೇಲೆ ಕತ್ತರಿ ಬಿದ್ದಿತ್ತು. ಆದರೆ ಕೇಂದ್ರ ಸರಕಾರಕ್ಕೆ ಇದುವರೆಗೂ ಸಾಮಾಜಿಕ ಜಾಲತಾಣದಿಂದಾಗುವ ಹಾನಿಯ ಬಗ್ಗೆ ತಡೆಗಟ್ಟಲು ಸಾಧ್ಯವಾಗಿಲ್ಲ ಅನ್ನುವುದನ್ನು ಒಪ್ಪಿಕೊಳ್ಳಬೇಕಾದ ವಿಚಾರ.

ಕಳೆದ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಕುರಿತು ಈಗಾಗಲೆ ಸಂಸತ್ ಜಂಟಿ ಅಧಿವೇಶನದಲ್ಲಿ ಸಾಕಷ್ಟು ಚರ್ಚೆ ನಡೆದಿವೆ. ಅದರಲ್ಲೂ ಜಾಲತಾಣ ನಿಯಂತ್ರಣದ ಬಗ್ಗೆಯೂ ಹತ್ತು ಹಲವು ಚರ್ಚೆಗಳು ನಡೆದವು. ಜಾಲತಾಣದಲ್ಲಿ ಪ್ರಸಾರವಾದ ನಕಲಿ ಸುದ್ದಿಗಳ ಬಗ್ಗೆಯೂ ಗಂಭೀರ ವಾದಗಳು ನಡೆದವು. ಅಂತೆಯೆ ರಾಜ್ಯಸಭೆ ಸದಸ್ಯ ದಿಗ್ವಜಯ್ ಸಿಂಗ್ ಜಾಲತಾಣದಲ್ಲಿ ಪ್ರಸಾರವಾದ ನಕಲಿ ಸುದ್ದಿ ಹಾಗೂ ಪ್ರಚೋದನಾತ್ಮಕ ಸಂದೇಶಗಳ ಬಗ್ಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ್ದಾರೆ.

ಆದರೆ ಈ ರೀತಿಯಾಗಿ ಪ್ರಚೋದನಾತ್ಮಕ ಸಂದೇಶವಿರಲಿ ಇಲ್ಲವೇ ನಕಲಿ ಸುದ್ದಿಗಳಿರಲಿ ಅದನ್ನ ಪ್ರಸಾರ ಮಾಡುವ ಖಾತೆಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ಇದುವರೆಗೂ ಯಾವುದೇ ಆದೇಶ ನೀಡಲಾಗಿಲ್ಲ ಅನ್ನೋದನ್ನ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಸಂಜಯ್ ಧೋತ್ರಿ ಲಿಖಿತ ರೂಪದಲ್ಲಿಯೇ ಮಾಹಿತಿ ನಿಡಿದ್ದಾರೆ. ಅಲ್ಲದೇ ಸೈಬರ್ ಅಪರಾಧ ಅನ್ನೋದು ಜಾಗತಿಕ ವಿಚಾರ ಅನ್ನೋದನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಈ ಹಿಂದೆ ಜಾಲತಾಣದಿಂದಾದ ಗುಂಪು ಥಳಿತಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಐಟಿ ಕಾಯ್ದೆ ಉಲ್ಲೇಖಿಸಿ ಅದರಂತೆ ಸು-ಮೋಟೋ ಕೇಸು ದಾಖಲಿಸುವ ಅವಕಾಶದ ಬಗ್ಗೆ ತಿಳಿಸಿದ್ದಾರೆ.

ಜಾಲತಾಣದ ನಕಲಿ ಸುದ್ದಿ, ಪ್ರಚೋದನಾತ್ಮಕ ಸಂದೇಶಗಳಿಗೆ ಕಡಿವಾಣ ಹಾಕಲು ‘ಕೇಂದ್ರ’ ನಿರಾಸಕ್ತಿ!

ಇನ್ನು ಸೈಬರ್ ಅಪರಾಧ ತಡಗಟ್ಟುವುದಕ್ಕೆ ಮಾಹಿತಿ ತಂತ್ರಜ್ಞಾನ ಇಲಾಖೆ ಜೊತೆ ಕೇಂದ್ರ ಗೃಹ ಸಚಿವಾಲಯವೂ ಕೈ ಜೋಡಿಸುತ್ತಿದೆ. ಆದರೂ ಇದುವರೆಗೂ ಕ್ಷಣಮಾತ್ರದಲ್ಲಿ ಪ್ರಸಾರವಾಗುವ ನಕಲಿ ಸುದ್ದಿಗಳನ್ನು, ವಿಶೇಷವಾಗಿ ಪ್ರಚೋದನಾತ್ಮಕ ಬರಹಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಅಲ್ಲದೇ ಒಂದೊಮ್ಮೆ ಸರಕಾರದ ಪ್ರತಿನಿಧಿಗಳೇ ಇದನ್ನ ನಂಬಿ ಭಾಷಣ ಬಿಗಿಯುವ ಪರಿಸ್ಥಿತಿಯೂ ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗಿದೆ. ಜನ ಎಷ್ಟೇ ಮುಂದುವರಿದರೂ, ಈ ಜಾಲತಾಣಗಳಲ್ಲಿ ಬರೋ ಸುದ್ದಿಗೆ ಸಿಲುಕಿ ಸತ್ಯ ಯಾವುದು? ಸುಳ್ಳು ಯಾವುದು? ಅನ್ನೋ ಗೊಂದಲಕ್ಕೊಳಗಾಗುತ್ತಾರೆ. ಆದ್ದರಿಂದ ಜಾಲತಾಣದ ಮೇಲಿನ ನಿಯಂತ್ರಣಕ್ಕೆ ಕೇಂದ್ರ ಸೆರಕಾರ ಮುಂದಾಗಬೇಕಿದೆ. ಜಾಲತಾಣಗಳಲ್ಲಿ ಗಲಭೆ ಪ್ರಚೋದಿಸುವವರಿಗೆ ತಕ್ಕ ಶಾಸ್ತಿ ಆಗಿರೋದು ಇದುವರೆಗೂ ಕಡಿಮೆ. ಪರಿಣಾಮ ಜಾಲತಾಣದ ದುರ್ಬಳಕೆ ಮಾಡೋರಿಗೆ ಸರಕಾರದ ಕ್ರಮ ಬಗ್ಗೆಯೂ ಭಯ ಇಲ್ಲದಂತಾಗಿದೆ.

ಜಾಲತಾಣದ ನಕಲಿ ಸುದ್ದಿ, ಪ್ರಚೋದನಾತ್ಮಕ ಸಂದೇಶಗಳಿಗೆ ಕಡಿವಾಣ ಹಾಕಲು ‘ಕೇಂದ್ರ’ ನಿರಾಸಕ್ತಿ!

ಈ ಮಧ್ಯೆ ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಸಂಜಯ್ ಧೋತ್ರಿ ನೀಡಿದ ಲಿಖಿತ ಉತ್ತರದಲ್ಲಿಯೇ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್‌ಗಳಲ್ಲಿ ಪ್ರಸಾರವಾಗುವ ನಕಲಿ ಸುದ್ದಿ, ಪ್ರಚೋದನಾತ್ಮ ಸುದ್ದಿ ಹಬ್ಬಿದವರ ವಿರುದ್ದ ಇದುವರೆಗೂ ತನಿಖೆಗೆ ಆದೇಶಿಸಿಲ್ಲ ಅಂದಿರೋದು ನಿಜಕ್ಕೂ ಆಘಾತಕಾರಿ ಮತ್ತು ಅಚ್ಚರಿ ವಿಚಾರ. ಇತ್ತೀಚೆಗೆ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ಹಿಂದೆಯೂ ಜಾಲತಾಣಗಳಲ್ಲಿ ಸಂಘಟಿತ ಸಂಚು ನಡೆದಿತ್ತು ಅನ್ನೋದು ಜಗಜ್ಜಾಹೀರಾಗಿರುವ ವಿಚಾರ. ಆದರೂ ಕೇಂದ್ರ ಸರಕಾರ ಇನ್ನೂ ಈ ಕುರಿತು ಎಚ್ಚೆತ್ತುಕೊಂಡಿಲ್ಲ ಅನ್ನೋದು ಸರಕಾರದ ನಡೆಯನ್ನೂ ಸಂಶಯಿಸುವಂತೆ ಮಾಡಿದೆ.

Click here Support Free Press and Independent Journalism

Pratidhvani
www.pratidhvani.com