ಫಾರೂಕ್ ಅಬ್ದುಲ್ಲಾ ಬಿಡುಗಡೆ; ಕಣಿವೆ ರಾಜ್ಯದ ರಾಜಕೀಯದಲ್ಲಿ ಗರಿಗೆದರಿದ ಹೊಸ ಸಂಚಲನ..!
ರಾಷ್ಟ್ರೀಯ

ಫಾರೂಕ್ ಅಬ್ದುಲ್ಲಾ ಬಿಡುಗಡೆ; ಕಣಿವೆ ರಾಜ್ಯದ ರಾಜಕೀಯದಲ್ಲಿ ಗರಿಗೆದರಿದ ಹೊಸ ಸಂಚಲನ..!

ಗೃಹ ಸಚಿವ ಅಮಿತ್ ಶಾ, “ಅವರು ಅವರ ಇಷ್ಟ ಪ್ರಕಾರ ಮನೆಯಲ್ಲಿದ್ದಾರೆ” ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರಶ್ನೆಗೆ ಉತ್ತರಿಸಿದ್ದರು. ಆದರೆ ಇದೀಗ ಏಳು ತಿಂಗಳ ಬಳಿಕ ಫಾರೂಕ್ ಅಬ್ದುಲ್ಲಾ ಅವರ ಬಿಡುಗಡೆಯಾಗಿದೆ, ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡೋದರ ಮೂಲಕ ಮತ್ತೆ ಸಾರ್ವಜನಿಕ ಜೀವನದಲ್ಲಿ ಫಾರೂಕ್ ಅಬ್ದುಲ್ಲಾ ಕಾಣಿಸಿಕೊಳ್ಳುವಂತಾಗಿದೆ.

ಮೊಹಮ್ಮದ್‌ ಇರ್ಷಾದ್‌

ಲೋಕಸಭೆಯ ಅತ್ಯಂತ ಹಿರಿಯ ಸದಸ್ಯರಲ್ಲೊಬ್ಬರಾದ ಫಾರೂಕ್ ಅಬ್ದುಲ್ಲಾ ಅವರು ಏಳು ತಿಂಗಳ ಬಳಿಕ ಸಾರ್ವಜನಿಕರ ಎದುರು ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಗೃಹ ಬಂಧನದಿಂದ ಬಿಡುಗಡೆಗೊಂಡ ಕಣಿವೆ ರಾಜ್ಯದ ಮೊದಲ ನಾಯಕರೆನಿಸಿಕೊಂಡಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಫಾರೂಕ್ ಅಬ್ದುಲ್ಲಾ ಅವರು ಬಿಡುಗಡೆಗೊಳ್ಳುತ್ತಿದ್ದಂತೆ “ಐ ಆ್ಯಮ್ ಫ್ರೀ, ಐ ಆ್ಯಮ್ ಫ್ರೀ” ಎಂದು ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸ್ವಾತಂತ್ರ್ಯ ಇನ್ನಷ್ಟು ಅರ್ಥಪೂರ್ಣವಾಗಬೇಕಾದರೆ ಗೃಹ ಬಂಧನದಲ್ಲಿರುವ ಇನ್ನಿಬ್ಬರು ನಾಯಕರಾದ ಓಮರ್ ಅಬ್ದುಲ್ಲಾ ಹಾಗು ಮೆಹಬೂಬಾ ಮುಫ್ತಿ ಕೂಡಾ ಬಿಡುಗಡೆಗೊಳ್ಳಬೇಕು ಎಂದಿದ್ದಾರೆ.

ರಾಷ್ಟç ರಾಜಕಾರಣದ ಹಿರಿಯ ರಾಜಕಾರಣಿ ಎನಿಸಿಕೊಂಡಿರುವ ಫಾರೂಕ್ ಅಬ್ದುಲ್ಲಾ ಕಣಿವೆ ರಾಜ್ಯದಲ್ಲಿ ಯಶಸ್ವಿ ರಾಜಕಾರಣ ನಡೆಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವರಿಷ್ಠರೂ ಹೌದು. ಆದರೆ ಕಳೆದ ಏಳು ತಿಂಗಳ ಗೃಹ ಬಂಧನದಿಂದಾಗಿ ಕಾಶ್ಮೀರದಲ್ಲಿ ನಾಯಕತ್ವದ ಕೊರತೆಯೂ ಕಾಡುತ್ತಿತ್ತು. ಅಲ್ಲದೇ ಶ್ರೀನಗರ ಲೋಕಸಭಾ ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದ ಫಾರೂಕ್ ಅಬ್ದುಲ್ಲಾ ಅವರು ಕಳೆದ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿಯೇ ಅವರ ಬಿಡುಗಡೆಗಾಗಿ ವಿಪಕ್ಷ ನಾಯಕರು ಒತ್ತಾಯಿಸಿದ್ದರು. ಕಲಾಪದಲ್ಲಿ ಗಂಭೀರ ಚರ್ಚೆಗಳೂ ನಡೆದಿದ್ದವು. ಗೃಹ ಸಚಿವ ಅಮಿತ್ ಶಾ, “ಅವರು ಅವರ ಇಷ್ಟ ಪ್ರಕಾರ ಮನೆಯಲ್ಲಿದ್ದಾರೆ” ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರಶ್ನೆಗೆ ಉತ್ತರಿಸಿದ್ದರು. ಆದರೆ ಇದೀಗ ಏಳು ತಿಂಗಳ ಬಳಿಕ ಫಾರೂಕ್ ಅಬ್ದುಲ್ಲಾ ಅವರ ಬಿಡುಗಡೆಯಾಗಿದೆ, ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡುವುದರ ಮೂಲಕ ಮತ್ತೆ ಸಾರ್ವಜನಿಕ ಜೀವನದಲ್ಲಿ ಫಾರೂಕ್ ಅಬ್ದುಲ್ಲಾ ಕಾಣಿಸಿಕೊಳ್ಳುವಂತಾಗಿದೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿ ಬಂಧಿಸಲ್ಪಟ್ಟ ಜನಪ್ರತಿನಿಧಿ:

ಆಗಸ್ಟ್ 5, 2019 ರಂದು ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದು ಮಾಡಲಾಯಿತು. ಅದಕ್ಕೂ ಮುನ್ನವೇ ಕಣಿವೆ ರಾಜ್ಯದ ಜನತೆಗೆ ನಾಯಕತ್ವ ನೀಡಬಹುದಾದ ನಾಯಕರನ್ನ ಆಯ್ಕೆ ಮಾಡಿ ಗೃಹ ಬಂಧನದಲ್ಲಿ ಇಡಲಾಯಿತು. ಪ್ರತ್ಯೇಕವಾದಿಗಳನ್ನ ಮಾತ್ರವಲ್ಲದೇ ಜನಪ್ರತಿನಿಧಿಗಳನ್ನ, ಮಾಜಿ ಮುಖ್ಯಮಂತ್ರಿಗಳನ್ನೂ ಗೃಹಬಂಧನಕ್ಕೆ ತಳ್ಳಲಾಯಿತು. ಪರಿಣಾಮ ಜಮ್ಮು ಕಾಶ್ಮೀರ ಆಳಿದ್ದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಓಮರ್ ಅಬ್ದುಲ್ಲಾ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಗೃಹ ಬಂಧನ ಅನುಭವಿಸಬೇಕಾಯಿತು. ಇವರೆಲ್ಲರನ್ನು ದೇಶದ ಸುರಕ್ಷತೆ ದೃಷ್ಟಿಯಿಂದ ಬಂಧಿಸಲಾಗಿತ್ತು ಎಂದು ಕೇಂದ್ರ ಸರ್ಕಾರ ವಿವರಣೆ ನೀಡಿತ್ತು ಎನ್ನುವುದು ಗಮನಾರ್ಹ. ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಉಗ್ರರು, ಪ್ರತ್ಯೇಕವಾದಿಗಳು, ಕಲ್ಲು ತೂರುವವರನ್ನ ಬಂಧಿಸಲಾಗುತ್ತೊ ಅದೇ ಕಾಯ್ದೆ ಅಡಿ ಗೃಹ ಬಂಧನದಲ್ಲಿ ಜನಪ್ರತಿನಿಧಿಗಳನ್ನು ಕೂಡಿಡಲಾಗಿತ್ತು. ಫಾರೂಕ್ ಅಬ್ದುಲ್ಲಾ ಅವರನ್ನಂತೂ ಅವರ ಗುಪ್ಕರ್ ನಿವಾಸದಲ್ಲೆ ಸಬ್ ಜೈಲಾಗಿ ಪರಿವರ್ತಿಸಿ ಬಂಧಿಸಲಾಗಿತ್ತು. ಇದರಿಂದಾಗಿ ವಿಶೇಷ ಸ್ಥಾನಮಾನ ರದ್ದತಿ ಸಂದರ್ಭ ಕಣಿವೆ ರಾಜ್ಯದಲ್ಲಿ ನಡೆಯಬಹುದಾಗಿದ್ದ ಅಶಾಂತಿಯನ್ನ ಇಲ್ಲದಾಗಿಸಿದ್ದೀವಿ ಅನ್ನೋದು ಕೇಂದ್ರ ಸರಕಾರದ ವಾದ. ಆದರೆ ಇದೀಗ ಬಿಡುಗಡೆಗೊಂಡ ಫಾರೂಕ್ ಅಬ್ದುಲ್ಲಾ ಅವರು, ಯಾವುದೇ ರಾಜಕೀಯ ವಿಚಾರದ ಬಗ್ಗೆ ಮಾತಾಡದೇ ತನ್ನ ಬಿಡುಗಡೆಗಾಗಿ ಶ್ರಮಿಸಿದವರಿಗೆ ಕೃತಜ್ಞತೆಯಷ್ಟೇ ಸಲ್ಲಿಸಿದ್ದಾರೆ.

ಇನ್ನು ಕಳೆದ ಸೋಮವಾರವಷ್ಟೇ ಗೃಹ ಬಂಧನದಲ್ಲಿರುವ ನಾಯಕರ ಬಿಡುಗಡೆಗಾಗಿ ವಿಪಕ್ಷಗಳಾದ ಎನ್‌ಸಿಪಿ, ಟಿಎಂಸಿ, ಜೆಡಿಎಸ್, ಸಿಪಿಐಎಂ, ಸಿಪಿಐ ಹಾಗೂ ಆರ್‌ಜೆಡಿ ಪಕ್ಷಗಳು ಆಗ್ರಹಿಸಿತ್ತು. ಇದಕ್ಕೂ ಮುನ್ನ ಇದೇ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿದ್ದ ಇಂಟರ್‌ನೆಟ್ ನಿಷೇಧವನ್ನ ತಿಂಗಳ ಹಿಂದಷ್ಟೇ ತೆಗೆದು ಹಾಕಲಾಗಿತ್ತು. ಅದರಿಂದಾಗಿ ಸಹಜ ಸ್ಥಿತಿಯತ್ತ ಬರುತ್ತಿರೋ ಕಾಶ್ಮೀರದಲ್ಲಿ ನಾಯಕರ ಬಿಡುಗಡೆ ಮತ್ತಷ್ಟು ಸಂಚಲನ ಮೂಡಿಸಿದೆ. ಕಳೆದ ಭಾನುವಾರವಷ್ಟೇ ಇದೇ ಕಣಿವೆ ರಾಜ್ಯದಲ್ಲಿ ಪಿಡಿಪಿ ಮಾಜಿ ನಾಯಕ ಅಲ್ತಾಫ್ ಬುಖಾರಿ ‘ಅಪ್ನೀ ಪಾರ್ಟಿ’ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದ್ದರು.

ಅದಾಗಿ ವಾರದೊಳಗಾಗಿ ಫಾರೂಕ್ ಅಬ್ದುಲ್ಲಾ ಅವರ ಬಿಡುಗಡೆಯಾಗಿದೆ. ಮುಂದೆ ಹಂತ ಹಂತವಾಗಿ ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಇನ್ನಿತರ ನಾಯಕರ ಬಿಡುಗಡೆ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈ ರೀತಿ ಗೃಹ ಬಂಧನಕ್ಕೊಳಗಾದವರ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗಳು ಇನ್ನು ವಿಚಾರಣಾ ಹಂತದಲ್ಲಿದೆ. ಅದರಲ್ಲೂ ಇದೇ ಫಾರೂಕ್ ಅಬ್ದುಲ್ಲಾ ಪರ ರಾಜ್ಯಸಭಾ ಸದಸ್ಯ ವೈಕೊ ಅವರು ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಕೂಡಾ ಸಲ್ಲಿಸಿದ್ದರು. ಇದೆಲ್ಲದರ ಮಧ್ಯೆ ಫಾರೂಕ್ ಅಬ್ದುಲ್ಲಾರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಗಿದೆ.

ಆದರೆ, ಇದು ಎಷ್ಟು ದಿನಗಳ ಕಾಲ ಅನ್ನೋ ಪ್ರಶ್ನೆಯೂ ಜೊತೆಗಿದೆ. ಕಾರಣ, ಈ ನಾಯಕರುಗಳೇನಾದ್ರೂ 370ನೇ ವಿಧಿ ರದ್ದತಿ ಕುರಿತು ವಿರೋಧ ಮಾತಾಡಿದರೆ ಮತ್ತೆ ಗೃಹ ಬಂಧನ ಶಾಶ್ವತವಾಗಬಹುದು. ಅದೇ ಕಾರಣಕ್ಕಾಗಿ ಬಿಡುಗಡೆ ಭಾಗ್ಯ ಕಂಡ ಫಾರುಕ್ ಅಬ್ದುಲ್ಲಾ ಅವರು ಯಾವುದೇ ರಾಜಕೀಯ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಆದರೆ ಫಾರೂಕ್ ಅಬ್ದುಲ್ಲಾ ಅವರ ಬಿಡುಗಡೆ ಕಣಿವೆ ರಾಜ್ಯದ ರಾಜಕೀಯದಲ್ಲಿ ಸಣ್ಣ ಮಟ್ಟಿನ ಸಂಚಲನ ಮೂಡಿಸಿರುವುದು ನಿಜ. ಆದ್ದರಿಂದ ಫಾರೂಕ್ ಅಬ್ದುಲ್ಲಾ ಬಿಡುಗಡೆಯಿಂದ ನೂತನ ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಚಟುವಟಿಕೆಯೂ ಗರಿಗೆದರುವುದರಲ್ಲಿ ಸಂಶಯವಿಲ್ಲ.

Click here Support Free Press and Independent Journalism

Pratidhvani
www.pratidhvani.com