ಪಾತಾಳದಿಂದ ಜಿಗಿದ ಷೇರುಪೇಟೆ; 5000 ಅಂಶಗಳಷ್ಟು ಏರಿಕೆ ದಾಖಲಿಸಿದ ಸೆನ್ಸೆಕ್ಸ್
ರಾಷ್ಟ್ರೀಯ

ಪಾತಾಳದಿಂದ ಜಿಗಿದ ಷೇರುಪೇಟೆ; 5000 ಅಂಶಗಳಷ್ಟು ಏರಿಕೆ ದಾಖಲಿಸಿದ ಸೆನ್ಸೆಕ್ಸ್

ನೋಡುನೋಡುತ್ತಿದ್ದಂತೆ ಶೇ.20ರಷ್ಟು ಕುಸಿತ ಕಂಡಿದ್ದ ಷೇರುಗಳು ಚೇತರಿಸಿಕೊಂಡು ಏರುಹಾದಿಯತ್ತ ಪುಟಿಯತೊಡಗಿದವು. ಸೂಚ್ಯಂಕಗಳು ಗರಿಷ್ಠ ಮಟ್ಟದಿಂದ ಶೇ.22ರಷ್ಟು ಕುಸಿದಿದ್ದರಿಂದ ಖರೀದಿಗೆ ಉತ್ತಮ ಅವಕಾಶ ಎಂಬುದನ್ನು ಅರಿತ ಸಾಂಸ್ಥಿಕ ಹೂಡಿಕೆದಾರರು ದೊಡ್ಡಮಟ್ಟದಲ್ಲಿ ಖರೀದಿ ಮಾಡತೊಡಗಿದ್ದರಿಂದ ತೀವ್ರಗತಿಯಲ್ಲಿ ಮಾರುಕಟ್ಟೆ ಚೇತರಿಸಿಕೊಂಡಿತು. 

ರೇಣುಕಾ ಪ್ರಸಾದ್ ಹಾಡ್ಯ

ಶುಕ್ರವಾರ ಜಾಗತಿಕ ಷೇರುಪೇಟೆಗಳು ತೀವ್ರ ಕುಸಿತದಿಂದ ತಲ್ಲಣಗೊಂಡಿದ್ದರೆ, ಭಾರತೀಯ ಷೇರುಪೇಟೆಯಲ್ಲಿ ನಾಟಕೀಯ ರೀತಿಯಲ್ಲಿ ಸೂಚ್ಯಂಕಗಳು ಮಿಂಚಿನಂತೆ ಚೇತರಿಸಿಕೊಂಡು ದಾಖಲೆ ಬರೆದವು. ಸೆನ್ಸೆಕ್ಸ್ ಒಂದೇ ದಿನದಲ್ಲಿ 5380 ಅಂಶಗಳಷ್ಟು ಚೇತರಿಕೆ ಕಂಡು ಐತಿಹಾಸ ಸೃಷ್ಟಿಸಿತು. ನಿಫ್ಟಿ ಸಹ 1600 ಅಂಶಗಳಷ್ಟು ಚೇತರಿಕೆಯನ್ನು ದಾಖಲಿಸಿತು.

ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 1,325 ಅಂಶ ಏರಿಕೆಯೊಂದಿಗೆ 34103ಕ್ಕೆ ಸ್ಥಿರಗೊಂಡರೆ, ನಿಫ್ಟಿ 365 ಅಂಶಗಳ ಏರಿಕೆಯೊಂದಿಗೆ 9955 ಅಂಶಗಳಿಗೆ ಸ್ಥಿರಗೊಂಡಿತು. ಸೆನ್ಸೆಕ್ಸ್ ತನ್ನ ಪ್ರಬಲ ಸುಭದ್ರತಾ ಮಟ್ಟವಾದ 34,000 ಅಂಶಗಳನ್ನು ಕಾಯ್ದುಕೊಂಡಿತು. ನಿಫ್ಟಿ 10,000 ಅಂಶಗಳ ಮಟ್ಟವನ್ನು ಕಾಯ್ದುಕೊಳ್ಳಲಾಗಲಿಲ್ಲ. ದಿನದ ಅಂತ್ಯಕ್ಕೆ ನಿಫ್ಟಿ ಮಿಡಿಯಾ ಸೂಚ್ಯಂಕ ಹೊರತಾಗಿ ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗಿ ಶೇ.2ರಿಂದ 6ರಷ್ಟು ಏರಿಕೆ ದಾಖಲಿಸಿದವು.

ಇದೆಲ್ಲಾ ಆಗುವ ಮುನ್ನ ಬೆಳಿಗ್ಗೆ ವಹಿವಾಟು ನಡೆದಾಗ ಆತಂಕಕಾರಿ ಬೆಳೆವಣಿಗೆಗಳಾದವು. ‘ಕೋವಿಡ್-19’ ವಿಷವೃತ್ತದಲ್ಲಿ ಸಿಲುಕಿ ನಲುಗುತ್ತಿರುವ ಜಾಗತಿಕ ಷೇರುಪೇಟೆಗಳು ಶುಕ್ರವಾರವೂ ಕುಸಿದವು. ನಿಲ್ಲದ ರಕ್ತದೋಕುಳಿಗೆ ದೇಶೀಯ ಷೇರು ಪೇಟೆ ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ ಸೂಚ್ಯಂಕ ‘ನಿಫ್ಟಿ’ ಲೋಯರ್ ಸರ್ಕ್ಯೂಟ್ ಮುಟ್ಟಿದ ಪರಿಣಾಮ ತಾಲ್ಕಾಲಿಕವಾಗಿ ಒಂದು ಗಂಟೆ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ತೀವ್ರ ಮಾರಾಟದ ಒತ್ತಡದ ಕಾರಣ ವಹಿವಾಟು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಷೇರುಪೇಟೆ ಶೇ.10ರಷ್ಟು ಕುಸಿಯಿತು. ಭಾರಿ ಪ್ರಮಾಣದಲ್ಲಿ ಕುಸಿತವಾಗುವುದನ್ನು ತಡೆಗಟ್ಟುವ ಸಲುವಾಗಿ ಶೇ.10ರ ಲೋಯರ ಸರ್ಕ್ಯೂಟ್ ಹೇರಿ ಮಾರಾಟ ತೀವ್ರತೆಯಿಂದ ರಕ್ಷಿಸಲಾಯಿತು. ತ್ವರಿತವಾಗಿ ಶೇ.10ರಷ್ಟು ಕುಸಿತ ದಾಖಲಿಸಿದಾಗ ಭಾರಿ ನಷ್ಟವಾಗುವುದನ್ನು ತಪ್ಪಿಸಲು ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ವಿಶೇಷ ಮತ್ತು ವಿರಳಾತಿವಿರಳ ಸಂದರ್ಭಗಳಲ್ಲಿ ಈ ಕ್ರಮ ಕೈಗೊಳ್ಳಳಾಗುತ್ತದೆ. ಒಂದು ಗಂಟೆಯ ನಂತರ ವಹಿವಾಟು ಪುನಾರಂಭಗೊಂಡು ಕುಸಿತವು ಶೇ.15ರಷ್ಟಾದರೆ ಮತ್ತೆ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಲಾಗುತ್ತದೆ. ಹೂಡಿಕೆದಾರರ ಸಂಪತ್ತು ತ್ವರಿತವಾಗಿ ನಾಶವಾಗುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ವೇಳೆ ತೀವ್ರ ಕುಸಿತ ತಡೆಯಲು ತಾತ್ಕಾಲಿಕವಾಗಿ ಒಂದು ಬಾರಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು.

ವಾರವಿಡೀ ಕುಸಿತದ ಹಾದಿಯಲ್ಲಿ ಸಾಗಿದ್ದ ಷೇರುಪೇಟೆ ಶುಕ್ರವಾರ ವಹಿವಾಟು ಆರಂಭಿಸಿದ ತಕ್ಷಣವೇ ತೀವ್ರ ಕುಸಿತ ದಾಖಲಿಸಿತು. ಅದಕ್ಕೂ ಮುನ್ನ ಜಾಗತಿಕ ಮಾರುಕಟ್ಟೆಗಳು ತೀವ್ರ ಕುಸಿತದಾಖಲಿಸಿದ್ದರಿಂದ ದೇಶೀಯ ಪೇಟೆಯ ಕುಸಿತವನ್ನು ನಿರೀಕ್ಷಿತವಾಗಿತ್ತು. ಆದರೆ, ತ್ವರಿತವಾಗಿ ಶೇ.10ರಷ್ಟು ಕುಸಿತ ದಾಖಲಿಸುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಭಾರತೀಯ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಒಂದೇ ದಿನದಲ್ಲಿ ಅತಿ ಗರಿಷ್ಠ ಪ್ರಮಾಣದ ಐತಿಹಾಸಿಕ ಮಹಾಪತನವನ್ನು ಗುರುವಾರ ದಾಖಲಿಸಿದ್ದವು. ಶುಕ್ರವಾರ ಶೇ.10ರಷ್ಟು ಕುಸಿತವಾಗಿ ಮತ್ತೊಂದು ಐತಿಹಾಸಿಕ ಕುಸಿತ ದಾಖಲಾದಂತಾಗಿದೆ. ಇದು. ನಿಫ್ಟಿ 966 ಅಂಶಗಳಷ್ಟು ಕುಸಿದು 8624ಕ್ಕೆ ಇಳಿದಾಗ ಲೋಯರ್ ಸರ್ಕ್ಯೂಟ್ ಹೇರಿ ನಂತರ ವಹಿವಾಟು ಸ್ಥಗಿತಗೊಳಿಸಲಾಯಿತು. ಒಂದು ಗಂಟೆ ತಾತ್ಕಾಲಿಕ ಸ್ಥಗಿತದ ನಂತರ ವಹಿವಾಟು ಆರಂಭವಾದಾಗಲೂ ಕುಸಿತದ ಹಾದಿಯಲ್ಲೇ ಸಾಗಿದ್ದ ಸೂಚ್ಯಂಕಗಳು ಮತ್ತೆ ಚೇತರಿಕೆಯತ್ತ ಸಾಗಿದವು.

ಹಾಗೆಯೇ  ನೋಡುನೋಡುತ್ತಿದ್ದಂತೆ ಶೇ.20ರಷ್ಟು ಕುಸಿತ ಕಂಡಿದ್ದ ಷೇರುಗಳು ಚೇತರಿಸಿಕೊಂಡು ಏರುಹಾದಿಯತ್ತ ಪುಟಿಯತೊಡಗಿದವು. ಸೂಚ್ಯಂಕಗಳು ಗರಿಷ್ಠ ಮಟ್ಟದಿಂದ ಶೇ.22ರಷ್ಟು ಕುಸಿದಿದ್ದರಿಂದ ಖರೀದಿಗೆ ಉತ್ತಮ ಅವಕಾಶ ಎಂಬುದನ್ನು ಅರಿತ ಸಾಂಸ್ಥಿಕ ಹೂಡಿಕೆದಾರರು ದೊಡ್ಡಮಟ್ಟದಲ್ಲಿ ಖರೀದಿ ಮಾಡತೊಡಗಿದ್ದರಿಂದ ತೀವ್ರಗತಿಯಲ್ಲಿ ಮಾರುಕಟ್ಟೆ ಚೇತರಿಸಿಕೊಂಡಿತು. ಒಂದೇ ಗಂಟೆಯಲ್ಲಿ ಅವಧಿಯಲ್ಲಿ ಸೆನ್ಸೆಕ್ಸ್ ತನ್ನ ತೀವ್ರ ಕುಸಿತದ ಮಟ್ಟದಿಂದ 5300 ಅಂಶಗಳಷ್ಟು ಮತ್ತು ನಿಫ್ಟಿ 1600 ಅಂಶಗಳಷ್ಟು ಏರಿಕೆ ಕಂಡವು.

₹184 ಕ್ಕೆ ಕುಸಿದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರು ತೀವ್ರ ಚೇತರಿಕೆ ಕಂಡು ₹248ಕ್ಕೆ ಜಿಗಿಯಿತು. ಶೇ.14ರಷ್ಟು ಏರಿಕೆ ದಾಖಲಿಸಿ ಸೆನ್ಸೆಕ್ಸ್ ಮತ್ತು ನಿಫ್ಟಿಯನ್ನು ಮೇಲೆತ್ತಲು ಪ್ರಮುಖ ಪಾತ್ರ ವಹಿಸಿತು. ಸೆನ್ಸೆಕ್ಸ್ ಸೂಚ್ಯಂಕದ 30 ಷೇರುಗಳ ಪೈಕಿ 25 ಷೇರುಗಳು ಏರುಹಾದಿಯಲ್ಲಿ ಸಾಗಿದವು ಶೇ.1 ರಿಂದ 14ರಷ್ಟು ಏರಿಕೆ ದಾಖಲಿಸಿದವು. ಎಚ್ಸಿಎಲ್ ಟೆಕ್, ಹಿರೋ ಮೊಟೋಕಾರ್ಪ್, ಹಿಂದೂಸ್ತಾನ್ ಯೂನಿಲಿವರ್, ಏಷಿಯನ್ ಪೇಂಟ್ಸ್ ಮತ್ತು ನೆಸ್ಲೆ ತೀವ್ರ ಕುಸಿತದಿಂದ ಚೇತರಿಸಿಕೊಂಡರೂ ನಿನ್ನೆ ವಹಿವಾಟಿನ ಮಟ್ಟಕ್ಕಿಂತ ಮೇಲೇರಲಿಲ್ಲ. ನಿಫ್ಟಿ 50 ಷೇರುಗಳ ಪೈಕಿ 40 ಷೇರುಗಳು ಶೇ.1ರಿಂದ 14ರಷ್ಟು ಏರಿಕೆ ದಾಖಲಿಸಿವೆ. ಉಳಿದ ಹತ್ತು ಷೇರುಗಳು ಬೆಳಗಿನ ವಹಿವಾಟಿನ ಕುಸಿತದಿಂದ ಚೇತರಿಸಿಕೊಂಡರೂ ನಿನ್ನೆ ವಹಿವಾಟಿನ ಮಟ್ಟಮುಟ್ಟಲಾಗಿಲ್ಲ.

ನಿಫ್ಟಿ ಮತ್ತು ಸೆನ್ಸೆಕ್ಸ್ ಈ ವಾರದಲ್ಲಿ ಶೇ.14ರಷ್ಟು ಮತ್ತು ಒಂದು ತಿಂಗಳಲ್ಲಿ ಶೇ.21ರಷ್ಟು ಕುಸಿದಿವೆ. ಇದು ತೀವ್ರವಾದ ಕುಸಿತವಾಗಿದೆ. ಶುಕ್ರವಾರದ ತ್ವರಿತ ಏರಿಕೆಯಿಂದ ಮಾರುಕಟ್ಟೆ ಕುಸಿತಕ್ಕೆ ತಡೆ ಬಿದ್ದಿದೆಯಾದರೂ ಸ್ಥಿರತೆ ಬಂದಿಲ್ಲ. ‘ಕೋವಿಡ್-19’ ರ ಕಪಿಮುಷ್ಟಿಯಿಂದ ಜಗತ್ತು ಮುಕ್ತವಾಗುವವರೆಗೂ ಜಾಗತಿಕ ಷೇರುಪೇಟೆಗಳಲ್ಲಿ ಅಸ್ಥಿರತೆ ಮುಂದುವರೆಯುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಢರು.

ಶುಕ್ರವಾರದ ಚೇತರಿಕೆ ಹೂಡಿಕೆದಾರರಲ್ಲಿ ಕೊಂಚ ನೆಮ್ಮದಿ ತಂದಿದೆ. ಶುಕ್ರವಾದ ಕುಸಿತವು ಹಾಗೆ ಮುಂದುವರೆದಿದ್ದರೆ 12 ಲಕ್ಷ ಕೋಟಿ ಸಂಪತ್ತು ನಾಶವಾಗಿ ಬಿಡುತ್ತಿತ್ತು. ಚೇತರಿಕೆಯಿಂದಾಗಿ ಅಂತಹ ಅಪಾಯದಿಂದ ಹೂಡಿಕೆದಾರರು ಪಾರಾಗಿದ್ದಾರೆ. ಮುಂದಿನವಾರದ ವಹಿವಾಟು ಬಹುತೇಕ ಜಾಗತಿಕ ಷೇರುಪೇಟೆಗಳ ಹಾದಿಯಲ್ಲೇ ಸಾಗಲಿದೆ. ಕೋವಿಡ್-19 ಚೀನಾದ ಹೊರಗೆ ತ್ವರಿತವಾಗಿ ಹರಡುತ್ತಿರುವುದರಿಂದ ಮುಂದಿನವಾರ ಜಾಗತಿಕ ಷೇರುಪೇಟೆಗಳಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ತೈಲಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆಗಳಲ್ಲೂ ಅಸ್ಥಿರತೆ ನಿಚ್ಛಳವಾಗಿರಲಿದೆ.

Click here Support Free Press and Independent Journalism

Pratidhvani
www.pratidhvani.com