ಸಿಎಎ ಕಾಯ್ದೆ ಜಾರಿಯಾಗಿ ಮೂರು ತಿಂಗಳಾದರೂ ಪೌರತ್ವ ನೀಡುವ ವ್ಯವಸ್ಥಿತ ಪ್ರಕ್ರಿಯೆ ಆರಂಭವಾಗಿಲ್ಲ ಏಕೆ? 
ರಾಷ್ಟ್ರೀಯ

ಸಿಎಎ ಕಾಯ್ದೆ ಜಾರಿಯಾಗಿ ಮೂರು ತಿಂಗಳಾದರೂ ಪೌರತ್ವ ನೀಡುವ ವ್ಯವಸ್ಥಿತ ಪ್ರಕ್ರಿಯೆ ಆರಂಭವಾಗಿಲ್ಲ ಏಕೆ? 

ಮೂರು ತಿಂಗಳಾದರೂ ಸಿಎಎ ಜಾರಿ ಅನ್ವಯ ಪೌರತ್ವ ನೀಡಲು ಕೇಂದ್ರ ಸರಕಾರಕ್ಕೆ ಎದುರಾಗಿರುವಸವಾಲುಗಳು ಏನು? ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರ ಒಂದು ವೇಳೆ ದೇಶದಲ್ಲಿತಮ್ಮ ಪೌರತ್ವ ಸಾಬೀತುಪಡಿಸಲು ವಿಫಲವಾಗುವ ಈ ದೇಶದ ಮೂಲ ನಿವಾಸಿ ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿ, ಜೈನ, ಸಿಖ್ಖರನ್ನ ಹೇಗೆ ಪರಿಗಣಿಸುತ್ತದೆ?

ಮೊಹಮ್ಮದ್‌ ಇರ್ಷಾದ್‌

ರಾಷ್ಟ್ರೀಯ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊAಡು ಇಂದಿಗೆ ಮೂರು ತಿಂಗಳು ತುಂಬಿದೆ. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಹುಮತದಿಂದ ಮಸೂದೆ ಅಂಗೀಕರಿಸಲ್ಪಟ್ಟರೂ ದೇಶಾದ್ಯಂತ ಇದುವರೆಗೂ ಎಷ್ಟು ಮಂದಿಗೆ ಧಾರ್ಮಿಕವಾಗಿ ದೌರ್ಜನ್ಯಕ್ಕೊಳಗಾದ ವಿದೇಶಿ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಯಿತು ಅನ್ನೋ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಗುಪ್ತಚರ ದಳ ವರದಿ ಪ್ರಕಾರ ಸಿಎಎ ಜಾರಿಯಿಂದ ಕೇವಲ ೩೦ ಸಾವಿರ ಮಂದಿಯಷ್ಟೇ ಅದರ ಪ್ರತಿಫಲ ಪಡೆಯಲಿದ್ದಾರೆ ಅನ್ನೋದಾಗಿದೆ. ಆದರೆ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರ ಇದುವರೆಗೂ ಅಲ್ಲೊಂದು ಇಲ್ಲೊಂದು ಪೌರತ್ವ ನೀಡಿರೋದು ಬಿಟ್ಟರೆ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ದೇಶಗಳಿಂದ ಬಂದು ದೇಶದಲ್ಲಿ ನೆಲೆಸಿರುವವರ ಬಗ್ಗೆ ಅಧ್ಯಯನಗಳು ದೊಡ್ಡ ಮಟ್ಟಿಗೆ ನಡೆದಿಲ್ಲ.

ಈ ಮಧ್ಯೆ ದೇಶದ ಮೂಲೆಗಳಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ವಿರುದ್ಧ ಹೋರಾಟಗಳು ಮುಂದುವರೆದಿವೆ. ಹಾಗಂತ ಕೇಂದ್ರ ಸರಕಾರ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ವಿರುದ್ಧ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಎನ್ನುತ್ತಾ ಬಂದಿದೆ. ಇದಕ್ಕೆ ಪೂರಕವೆನ್ನುವಂತೆ ಬಿಜೆಪಿ ಸಂಸದರು, ಕೇಂದ್ರ ಸಚಿವರು, ಶಾಸಕರುಗಳು ಕೂಡಾ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಪರಿಣಾಮ ದೇಶಾದ್ಯಂತ ಇದುವರೆಗೂ ನಡೆದ ಸಿಎಎ ಕಿಡಿಗೆ ರಾಜ್ಯದ ಮಂಗಳೂರಿನ ಇಬ್ಬರು ಯುವಕರು ಸೇರಿದಂತೆ 80 ಜನ ಬಲಿಯಾಗಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ನಡೆದ ಗಲಭೆಯೊಂದರಲ್ಲೇ 53 ಜನ ಅಸುನೀಗಿದ್ದಾರೆ. ಇಷ್ಟೆಲ್ಲಾ ನಡೆದ ಮೇಲೂ ಮುಂದಿನ ತಿಂಗಳು ಎನ್‌ಆರ್‌ಸಿ ಗೆ ಪೂರಕವೆನ್ನುವಂತೆ ಎನ್‌ಪಿಆರ್ ಜಾರಿ ತರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಅದಕ್ಕೆ ಬೇಕಾದ ತಯಾರಿ ಕೂಡಾ ನಡೆಸಿದೆ. ಆದ್ರೆ ಈಗಾಗಲೆ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರಕಾರ ಸಫಲವಾಗಿದೆಯಾ..? ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಒಂದಿಷ್ಟು ವೈರುಧ್ಯದ ಉತ್ತರಗಳು ಕಾಣಲು ಸಾಧ್ಯವಾಗುತ್ತದೆ. ‘ಕಷ್ಟ ಸಾಧ್ಯ’ದ ಮಾತುಗಳೇ ಅಧಿಕವಾಗಿ ಬಿಡುತ್ತದೆ. ಹಾಗಿದ್ರೆ ಮೂರು ತಿಂಗಳಾದರೂ ಸಿಎಎ ಜಾರಿ ಅನ್ವಯ ಪೌರತ್ವ ನೀಡಲು ಕೇಂದ್ರ ಸರಕಾರಕ್ಕೆ ಎದುರಾಗಿರುವ ಸವಾಲುಗಳು ಏನಂತೀರಾ...?

1. ದೌರ್ಜನ್ಯ ಮಾದರಿ ತೋರ್ಪಡಿಸಲು ವಿಫಲ:

ಸಿಎಎ ಅನ್ವಯ 2014 ರ ಮುಂಚಿತವಾಗಿ ದೇಶದಲ್ಲಿ ನೆಲೆಸಿರುವ ಧಾರ್ಮಿಕ ದೌರ್ಜನ್ಯ ಸಂತ್ರಸ್ತರಿಗೆ ಪೌರತ್ವ ನೀಡುವುದೇ ಪ್ರಮುಖ ಉದ್ದೇಶ ಎನ್ನಲಾಗಿದೆ. ಆದರೆ ಇಸ್ಲಾಮಿಕ್ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿರುವವರಲ್ಲಿ ಕೇವಲ 30 ಸಾವಿರ ಮಂದಿಯನ್ನಷ್ಟೇ ಗುಪ್ತಚರ ಇಲಾಖೆ ಗುರುತಿಸಿದೆ. ಹಾಗಂತ ಅವರೆಲ್ಲರೂ ಧಾರ್ಮಿಕ ದೌರ್ಜನ್ಯಕ್ಕೊಳಗಾದವರೇ, ಒಂದು ವೇಳೆ ಹಾಗಿದ್ದರೆ ಅದು ಯಾವ ಮಾದರಿ ದೌರ್ಜನ್ಯ ಅನ್ನೋದನ್ನು ತೋರ್ಪಡಿಸಲು ಕಷ್ಟಸಾಧ್ಯ. ಆದ್ದರಿಂದ ಸಿಎಎ ಜಾರಿಗೆ ಎದುರಾಗಿರುವ ಮೊದಲ ತೊಡಕೂ ಇದಾಗಿದೆ. ಅಲ್ಲದೇ ಈ ಕಾಯ್ದೆಯ ದುರ್ಬಳಕೆ ಮಾತು ಕೂಡಾ ಕೇಳಿಬರುತ್ತಿದೆ. ಅತ್ತ ಅಸ್ಸಾಂನಲ್ಲಿ ಬಾಂಗ್ಲಾದೇಶದಿAದ ಬಂದು ನೆಲೆಸಿರೋ ಹಿಂದೂಗಳಿಗೆ ಪೌರತ್ವ ನೀಡಬಾರದೆನ್ನುವ ಬಹುದೊಡ್ಡ ಕೂಗು ಅಸ್ಸಾಂನಲ್ಲಿ ವ್ಯಕ್ತವಾಗಿತ್ತು. ಆದ್ದರಿಂದ ಅವರ ಪರಿಸ್ಥಿತಿ ಏನು ಅನ್ನೋದು ಕೂಡಾ ಪ್ರಶ್ನೆಯಾಗಿಯೇ ಉಳಿದಿದೆ.

2. ಸಿಎಎ ಕಾಯ್ದೆಯಡಿ ಪೌರತ್ವ ಪಡೆಯಲು ಅರ್ಹರೇ?:

ಮೊದಲೇ ಹೇಳಿದ ಹಾಗೆ, ಸಿಎಎ ಕಾಯ್ದೆ ಪ್ರಕಾರ ಈ ದೇಶದ ಪೌರತ್ವ ಪಡೆಯಲು ಅರ್ಹರಾದ ಮೂರು ಇಸ್ಲಾಮಿಕ್ ದೇಶಗಳ ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತ , ಜೈನ , ಬೌದ್ಧ, ಪಾರ್ಸಿ ಹಾಗೂ ಸಿಖ್ ಸಮುದಾಯದ ನಿವಾಸಿಗಳು 2014 ರ ಡಿಸೆಂಬರ್ 31 ರ ಮುಂಚಿತವಾಗಿಯೇ ಬಂದು ಭಾರತದಲ್ಲಿ ನೆಲೆಸಿರಬೇಕು. ಅಂತಹವರಿಗೆ ಮಾತ್ರ ಭಾರತದ ಪೌರತ್ವವನ್ನು ಸಿಎಎ ಕಾಯ್ದೆ ಅಡಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ರೀತಿ ಬಂದು ನೆಲೆಸಿದ ಮಂದಿ 2014 ರ ಮುಂಚಿತವಾಗಿಯೇ ಬಂದು ನೆಲೆಸಿದ್ದಾರೆ ಅನ್ನೋದನ್ನ ಪತ್ತೆ ಹಚ್ಚೋದು ಸವಾಲಿನ ಕೆಲಸವಾಗಿದೆ. ಅಲ್ಲದೇ 2014 ರ ನಂತರ ಈ ಆರು ಸಮುದಾಯಗಳ ಮಂದಿ ಭಾರತಕ್ಕೆ ಬಂದಿದ್ದರೆ, ಅವರನ್ನ ಯಾವ ರೀತಿಯಾಗಿ ಕಾಣಲಾಗುತ್ತದೆ..? ಮತ್ತು ಅವರು 2014 ರ ನಂತರ ಬಂದು ನೆಲೆಸಿದ್ದಾರೆ ಅನ್ನೋದನ್ನ ಪತ್ತೆ ಹಚ್ಚೋದಾದ್ರೂ ಹೇಗೆ..? ಈ ಎಲ್ಲಾ ಪ್ರಶ್ನೆಗಳು ಕೂಡಾ ಸಿಎಎ ಜಾರಿ ಬಗ್ಗೆ ಗೊಂದಲವನ್ನೇ ಸೃಷ್ಟಿಸಿ ಹಾಕಿದೆ.

3. ಬಂಗಾಳಿ ಹಿಂದೂಗಳಿಗೆ ಎದುರಾದ ಅಸ್ತಿತ್ವದ ಪ್ರಶ್ನೆ:

2016 ರಲ್ಲಿ ಮೊದಲ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ಜಾರಿ ಬಂದಿದ್ದ ರಾಷ್ಟ್ರೀ ಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಸ್ಸಾಂನಲ್ಲಿ ನೆಲೆಸಿರುವ ಲಕ್ಷಾಂತರ ಅಕ್ರಮ ವಲಸಿಗರನ್ನ ಗುರುತಿಸಿತ್ತು. ದುರಂತ ಅಂದ್ರೆ ಅದುವರೆಗೂ ಬಿಜೆಪಿ ಪಾಲಿಗೆ ವರವಾಗಿದ್ದ, ಹಿಂದೂ ಬಂಗಾಳಿಗಳೇ ಅಧಿಕವಾಗಿ ಅಲ್ಲಿ ಕಾಣಸಿಕ್ಕಿದ್ದರು. ಅಕ್ರಮ ಮುಸ್ಲಿಮ್ ವಲಸಿಗರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದ ಬಂಗಾಳಿ ಹಿಂದೂಗಳು ಇದ್ದ ಪರಿಣಾಮ ಅಂತಹವರಿಗೆ ಸಿಎಎ ಕಾಯ್ದೆ ಅನ್ವಯ ಪೌರತ್ವ ನೀಡುವ ಭರವಸೆ ಬಿಜೆಪಿ ಒದಗಿಸಿತ್ತು. ಆದರೆ ಇದೀಗ ಮತ್ತೆ ಅಕ್ರಮ ವಲಸಿಗ ಬಂಗಾಳಿ ಹಿಂದೂಗಳು ತಮ್ಮ ಅಸ್ತಿತ್ವವನ್ನ ಸಾಬೀತುಪಡಿಸಬೇಕಿದೆ. ಎನ್‌ಆರ್‌ಸಿಯಿಂದ ಹೊರಬಿದ್ದಿದ್ದ ಈ ಅಕ್ರಮ ನಿವಾಸಿಗಳನ್ನ ಯಾವ ಮಾನದಂಡದಡಿ ಭಾರತೀಯರು ಅನ್ನೋದಾಗಿ ಒಪ್ಪಿಕೊಳ್ಳಲಾಗುತ್ತೆ ಅನ್ನೋ ಪ್ರಶ್ನೆಯೂ ಎದುರಾಗಿದೆ.

4. ಅಕ್ರಮ ವಲಸಿಗರು ಆದರೆ, ಭಾರತೀಯ ಮತದಾರರು?!:

ಇನ್ನು ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರೆಂದು ಗುರುತಿಸಿಕೊಂಡ ಬಂಗಾಳಿ ಹಿಂದೂಗಳಲ್ಲಿ ಬಹುತೇಕ ಮಂದಿ ಈಗಾಗಲೇ ದೇಶದ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಅಲ್ಲದೇ ವೋಟರ್ ಐಡಿ ಮಾತ್ರವಲ್ಲದೇ ಪಾಸ್‌ಪೋರ್ಟ್, ರೇಷನ್ ಕಾರ್ಡ್ಗಳನ್ನೂ ಹೊಂದಿದ್ದಾರೆ ಅನ್ನೋದನ್ನು ಗುಪ್ತಚರ ದಳ ಗುರುತಿಸಿದೆ. ಹಾಗಿದ್ದ ಮೇಲೂ ಇವರೆಲ್ಲರೂ ಮತ್ತೆ ಮತ್ತೆ ತಾವು ಭಾರತೀಯರು ಅನ್ನೋ ಪರಿಸ್ಥಿತಿ ಯಾಕಾಗಿ ಸೃಷ್ಟಿಯಾಗುತ್ತಿದೆ..? ದೇಶದ ಪೌರರೆನಿಸಿಕೊಳ್ಳಲು ಅವರು ನೀಡುವ ದಾಖಲೆಗಳು ಈಗಾಗಲೇ ಅವರ ಬಳಿಯೂ ಇದ್ದು, ಮತ್ತೊಂದು ಬಾರಿ ಸರತಿ ಸಾಲಿನಲ್ಲಿ ನಿಂತು ತಮ್ಮ ಅಸ್ತಿತ್ವವನ್ನ ಖಾತ್ರಿಪಡಿಸಬೇಕಿದೆ. ಇಷ್ಟೆಲ್ಲಾ ದಾಖಲೆ ಹೊಂದಿರಬೇಕಾದರೆ ಅವರ್ಯಾರೂ ಭಾರತೀಯರು ಅಲ್ಲ ಎನ್ನಲು ಕಾರಣಗಳೇನು ಅನ್ನೋದು ಕೂಡಾ ಗೊಂದಲದ ಮೂಲವಾಗಿದೆ.

ಇದು ಮಾತ್ರವಲ್ಲದೇ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರ ಒಂದು ವೇಳೆ ದೇಶದಲ್ಲಿ ತಮ್ಮ ಪೌರತ್ವ ಸಾಬೀತುಪಡಿಸಲು ವಿಫಲವಾಗುವ ಈ ದೇಶದ ಮೂಲ ನಿವಾಸಿ ಹಿಂದೂ, ಕ್ರೈಸ್ತ , ಬೌದ್ಧ, ಪಾರ್ಸಿ, ಜೈನ, ಸಿಖ್ಖರನ್ನ ಅದೇನು ಮಾಡ್ತವೆ ಅನ್ನೋದು ಕೂಡಾ ಕುತೂಹಲ. ಏಕೆಂದರೆ ಪೌರತ್ವ ಸಾಬೀತುಪಡಿಸಲು ಇಲ್ಲಿನ ಮುಸ್ಲಿಮರು ವಿಫಲರಾದರೆ ಅವರನ್ನ ‘ಡಿಟೆನ್ಶನ್ ಸೆಂಟರ್’ನಲಿ ಬಂಧಿಯಾಳಾಗಿ ಇಡಬಹುದು. ಆದರೆ ಇತರೆ ಧರ್ಮೀಯರ ಪ್ರಶ್ನೆ ಏನು..? ಬಹುಶಃ ಈ ಎಲ್ಲಾ ಗೊಂದಲಗಳೇ ಇಂದು ದೇಶದ ಪ್ರಮುಖ ಬೀದಿಗಳಲ್ಲಿ ವ್ಯಕ್ತವಾಗುತ್ತಿರುವುದು. ಅಲ್ಲದೇ ಗುಪ್ತಚರ ದಳವೇ ಗುರುತಿಸಿರುವ ಒಂದಿಷ್ಟು ವೈಫಲ್ಯತೆಗಳು ಪೌರತ್ವ ತಿದ್ದುಪಡಿ ಮಸೂದೆ ರಾಷ್ಟ್ರಪತಿ ಅಂಕಿತಕ್ಕೊಳಗಾಗಿ ಮೂರು ತಿಂಗಳಾದರೂ ಕಾಯ್ದೆ ಜಾರಿಯಲ್ಲಿ ಕೇಂದ್ರ ಸರಕಾರ ಹಿಂದೆ ಬಿದ್ದಿದೆ ಅನ್ನೋದು ಸ್ಪಷ್ಟಪಡಿಸಿದೆ.

Click here Support Free Press and Independent Journalism

Pratidhvani
www.pratidhvani.com