ಸುಪ್ರೀಂಕೋರ್ಟ್‌ ಮುಂದೆ ಬಡವಾದ ಮಾಹಿತಿ ಹಕ್ಕು ಕಾಯ್ದೆ..!
ರಾಷ್ಟ್ರೀಯ

ಸುಪ್ರೀಂಕೋರ್ಟ್‌ ಮುಂದೆ ಬಡವಾದ ಮಾಹಿತಿ ಹಕ್ಕು ಕಾಯ್ದೆ..!

ಮಾಹಿತಿ ಹಕ್ಕು ಕಾಯ್ದೆ ದೇಶದಲ್ಲಿ ಉಂಟು ಮಾಡಿದ ಸಂಚಲನ ಅಷ್ಟಿಷ್ಟಲ್ಲ, ನೂರಕ್ಕೆ ತೊಂಭತ್ತರಷ್ಟು ಭಾಗ ಭ್ರಷ್ಟಾಚಾರದ ವಿರುದ್ಧವೂ ದನಿಯೆತ್ತಲು ಅನುಕೂಲವಾಗಿದೆ, ಉಳಿದಂತೆ ಕೊಲೆ, ಬೆದರಿಕೆ, ದ್ವೇಷಗಳಿಗೂ ಎಡೆ ಮಾಡಿಕೊಟ್ಟಿದೆ. ಇಂತಹ ಕಾಯ್ದೆ ನ್ಯಾಯಾಲಯದ ಮುಂದೆ ಬಡವಾಗಿದ್ದು ಸರ್ಕಾರಿ ಇಲಾಖೆಗಳು ಈ ಆದೇಶವನ್ನ ಯಾವ ತರಹ ದುರ್ಬಳಕೆ ಮಾಡಿಕೊಳ್ಳಬಹುದೆಂಬ ಆತಂಕ ಮೂಡಿದೆ.

ಉದಯ ಸಾಗರ

ಕಳೆದ ಬುಧವಾರ ಸುಪ್ರೀಂಕೋರ್ಟ್‌ಲ್ಲಿ ಮಹತ್ವದ ಪ್ರಕರಣವೊಂದು ಚರ್ಚೆಗೆ ಬಂತು. ಕೇಂದ್ರ ಹಾಗೂ ಗುಜರಾತ್‌ ಮಾಹಿತಿ ಹಕ್ಕು ಆಯೋಗ ವರ್ಸಸ್‌ ಗುಜರಾತ್ ಹೈಕೋರ್ಟ್‌ಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯ ವಿಚಾರಣೆ ನಡೆಸಲಾಯ್ತು. ಕೋರ್ಟ್‌ಗಳಲ್ಲಿನ ದಾಖಲೆಗಳು, ವಿಚಾರಣೆಗೆ ಸಂಬಂಧಿಸಿದ ವಿಷಯಗಳನ್ನ ಸಂಬಂಧವಿಲ್ಲದ ಮೂರನೇ ವ್ಯಕ್ತಿ ಪಡೆದುಕೊಳ್ಳಬೇಕಾದರೆ ಆತ ಮಾಹಿತಿ ಕಾಯ್ದೆಯಡಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್‌ ನಿಯಮಗಳಿಗನುಗುಣವಾಗಿ ವಕೀಲರ ಮೂಲಕ ಬಾಂಡ್‌ ಪೇಪರ್‌ ಜೊತೆ ಪ್ರಮಾಣ ಪತ್ರವನ್ನ ಸಲ್ಲಿಸಬೇಕು, ಹಾಗೂ ಯಾವ ಕಾರಣಕ್ಕೆ ದಾಖಲೆಗಳನ್ನ ಪಡೆದುಕೊಳ್ಳುತ್ತೇವೆಂಬುದನ್ನ ಸ್ಪಷ್ಟವಾಗಿ ನಮೂದಿಸಬೇಕು ಎಂದು ಗುಜರಾತ್‌ ಹೈಕೋರ್ಟ್‌ ಸೂಚಿಸಿತ್ತು. ಮಾಹಿತಿ ಹಕ್ಕು ಆಯೋಗ ಸುಪ್ರೀಂಕೋರ್ಟ್‌ನಲ್ಲಿ ಈ ಕುರಿತು ಪ್ರಶ್ನಿಸಿತ್ತು. ಜಸ್ಟೀಸ್‌ ಭಾನುಮತಿ, ಎಎಸ್‌ ಬೋಪಣ್ಣ ಹಾಗೂ ಋಷಿಕೇಶ್‌ ರಾಯ್‌ ಒಳಗೊಂಡ ಪೀಠ ಈ ಪ್ರಕರಣವನ್ನ ವಿಚಾರಣೆ ನಡೆಸಿ ಕಾನೂನು ವ್ಯಾಜ್ಯೆಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಪ್ರತಿದೂರುದಾರಲ್ಲದ ಮೂರನೇ ವ್ಯಕ್ತಿ ಮಾಹಿತಿ ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಹಾಗೇನಾದರೂ ಮಾಹಿತಿ ಅವಶ್ಯಕತೆ ಇದ್ದರೆ ಆತ ಕೆಲವು ನಿಯಮಗಳನ್ನ ಪಾಲಿಸಬೇಕು...!

ಈ ಆದೇಶ ಮಾಹಿತಿ ಹಕ್ಕಿಗಷ್ಟೇ ಧಕ್ಕೆ ನೀಡಲ್ಲ, ಸಂವಿಧಾನದ ಮೂಲಭೂತ ಹಕ್ಕುಗಳನ್ನೂ ಪ್ರಶ್ನೆ ಮಾಡಿದೆ ಎಂಬುದು ತಜ್ಞರ ಅಭಿಪ್ರಾಯ. ಮಾಹಿತ ಹಕ್ಕು ಕಾಯ್ದೆ ಆರ್ಟಿಕಲ್‌ ೧೯(೧)(ಎ) ಅಂಶಗಳನ್ನ ಪರಿಗಣಿಸುತ್ತೆ. ವಾಕ್‌ ಸ್ವಾತಂತ್ರ್ಯ, ಮಾಹಿತಿ ಪಡೆಯುವ ಸ್ವಾತಂತ್ರ್ಯ ಹಾಗೂ ಪ್ರಕಟಿಸುವ ಸ್ವಾತಂತ್ರ್ಯವನ್ನ ಸಂವಿಧಾನದ ಈ ಅನುಸೂಚಿ ಒಳಗೊಂಡಿದೆ. ಆರ್ಟಿಕಲ್‌ ೧೯(೨)ರಲ್ಲಿ ಕೆಲವು ನಿಬಂಧನೆಗಳನ್ನ ಹಾಕಲಾಗಿದೆ. ಈ ನಿಬಂಧನೆಗಳು ಮಾಹಿತಿ ಹಕ್ಕು ಕಾಯ್ದೆಯ ಎಂಟನೇ ವಿಭಾಗದಲ್ಲಿ ಸೂಚಿಸಲಾಗಿದೆ. ಆದರೆ ಎಲ್ಲಾ ವಿಷಯಗಳಿಗೂ ನಿಬಂಧನೆಗಳನ್ನ ಹೇರಿಲ್ಲ ಹಾಗೂ ಕೋರ್ಟ್‌ಗೆ ಸಂಬಂಧಿಸಿದ ಮಾಹಿತಿಗಳನ್ನ ಪಡೆಯಲು ಯಾವುದೇ ಉಲ್ಲೇಖ ಇಲ್ಲ. ಆರ್‌ಟಿಐ ಅಡಿ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನ ಮಾಹಿತಿ ಹಕ್ಕು ಕಾಯ್ದೆಯಲ್ಲಿನ ನಿಬಂಧನೆಗಳಿಗೆ ಅನುಗುಣವಾಗಿಯೇ ಪುರಸ್ಕರಿಸಬೇಕು ಅಥವಾ ತಿರಸ್ಕರಿಸಬೇಕು. ಆದರೆ ಸುಪ್ರೀಂಕೋರ್ಟ್‌ ಆದೇಶವೇ ಗೊಂದಲವಾಗಿದ್ದು ಕೋರ್ಟ್‌ ದಾಖಲೆಗಳು ಮಾಹಿತಿ ಹಕ್ಕಿನಡಿ ಬರುವುದಿಲ್ಲ ಎಂಬುದನ್ನ ಪುನರ್‌‌ ಪರಿಶೀಲನೆ ಮಾಡಬೇಕಿದೆ ಎಂಬುದು ಕಾನೂನು ತಜ್ಞರ ಅಭಿಮತ.

ಹಾಗಾದರೆ ಮಾಹಿತಿ ಹಕ್ಕು ಕಾಯ್ದೆ ಹಾಗೂ ನಿಬಂಧನೆಗಳೇನು..?

ಮಾಹಿತಿ ಎಂದರೆ, ಯಾವುದಾದರೂ ರೂಪದ್ದಾಗಿರಬಹುದು, ಉದಾಹರಣೆಗೆ ಇಮೇಲ್‌, ಸುತ್ತೋಲೆ, ಆದೇಶ ಪ್ರತಿಗಳು, ಅಭಿಪ್ರಾಯಗಳು, ಪತ್ರಿಕಾಪ್ರಕಟಣೆಗಳು, ಜ್ಞಾಪನಾಪತ್ರಗಳು, ದಾಖಲಾತಿ ಪುಸ್ತಕಗಳ ನಕಲು, ಎಲೆಕ್ಟ್ರಾನಿಕ್‌ ಉಪಕರಣಗಳ ದತ್ತಾಂಶಗಳು, ಮೈಕ್ರೋಚಿಪ್‌ ಅಥವಾ ಟೇಪ್‌ಗಳೂ ಸೇರಿಕೊಂಡಿವೆ. ಮಾಹಿತಿಯನ್ನೂ ಸಹ ಪೇಪರ್‌ ಅಥವಾ ಎಲೆಕ್ಟ್ರಾನಿಕ್‌ ಉಪಕರಣಗಳಾದ ಡಿಸ್ಕ್‌ ಅಥವಾ ಮೈಕ್ರೋ ಚಿಪ್‌ ಮೂಲಕ ಪಡೆಯಬದುದು. ಸಾಂವಿಧಾನಿಕವಾಗಿ ಅಥವಾ ಶಾಸನಗಳ ಮೂಲಕ ಸ್ಥಾಪಿಸಲ್ಪಟ್ಟ ಯಾವುದೇ ಸಂಸ್ಥೆಯೂ ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತೆ. ಈ ಕಾಯ್ದೆಯಡಿ ಹತ್ತು ನಿಬಂಧನೆಗಳನ್ನೂ ಹಾಕಲಾಗಿದೆ. ನಾವು ಕೇಳುವ ಮಾಹಿತಿ ನಮ್ಮ ದೇಶದ ಸಾರ್ವಭೌಮತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಬಾರದು, ಕೋರ್ಟ್‌ಗಳು ಕೆಲವು ವಿಷಯಗಳನ್ನ ಪ್ರಕಟಿಸಬಾರದು ಎಂದು ಆದೇಶ ನೀಡಿರುತ್ತೆ ಅಂತಹ ವಿಷಯಗಳನ್ನ ಕೆದುಕುವಂತಿಲ್ಲ ಅದು ಕಾನೂನು ಉಲ್ಲಂಘನೆಯಾಗುತ್ತೆ. ಶಾಸನ ಸಭೆಗೆ ಧಕ್ಕೆ ತರುವಂತಹ ಮಾಹಿತಿ ಕೋರಿಕೆಯನ್ನ ಪುನರ್‌ಪರಿಶೀಲಿಸಬಹುದು. ವ್ಯಾಪಾರಿ ಒಡಂಬಡಿಕೆಗಳು, ವಾಣಿಜ್ಯ ಒಪ್ಪಂದಗಳು ಖಾಸಗಿ ಹಕ್ಕುಸ್ವಾಮ್ಯಕ್ಕೆ ಒಳಪಟ್ಟ ವಿಷಯಗಳನ್ನ ಅರ್ಜಿ ಸಲ್ಲಿಸಿ ಪಡೆಯುವಂತಿಲ್ಲ. ಖಾಸಗಿ ವ್ಯಕ್ತಿಯ ಜೊತೆಗಿನ ಸಂಬಂಧಗಳ ಕುರಿತು ಸಂಸ್ಥೆಗಳಿಂದ ಮಾಹಿತಿ ಕೋರುವಲ್ಲಿ ಕೆಲವು ನಿಯಮಗಳನ್ನ ಪಾಲಿಸಬೇಕು. ಅಂತರಾಷ್ಟ್ರೀಯ ಸಂಬಂಧಗಳ ಕುರಿತಾದ ಮಾಹಿತಿ ಪಡೆಯುವಲ್ಲಿ, ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಗತಿಯ ಬಗ್ಗೆ ಕೆಲವು ನಿಬಂಧನೆಗಳಿವೆ.

ಆದರೆ ಕೋರ್ಟ್‌ಗಳು ಈ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ, ಪ್ರತ್ಯೇಕ ಕಾನೂನುಗಳು ಅನ್ವಯವಾಗುತ್ತವೆ ಎಂಬುದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ನ್ಯಾಯಾಲಗಳು ಮಾಹಿತಿ ಹಕ್ಕು ಕಾಯ್ದೆಯನ್ನ ಸಡಿಲಗೊಳಿಸಿದರೆ ಸರ್ಕಾರಿ ಸಂಸ್ಥೆಗಳೂ ಸಹ ತಮ್ಮದೇ ಕಾನೂನನ್ನ ತಂದು ತೊಡಕುಂಟು ಮಾಡಬಹುದು ಹಾಗೂ ಕಾಯ್ದೆ ಅಪ್ರಸ್ತುತ ಎಂದು ಪರಿಗಣಿಸಬಹುದು. ಸುಪ್ರೀಂಕೋರ್ಟ್‌ ಕಾನೂನುಗಳನ್ನ ಪರಿಪಾಲನೆ ಮಾಡುವುದರ ಮುಖಾಂತರ ರೋಲ್‌ ಮಾಡೆಲ್‌ ಆಗಬೇಕಿರುವ ಸಂದರ್ಭದಲ್ಲಿ ಈ ಆದೇಶ ಆಘಾತವನ್ನುಂಟು ಮಾಡಿದೆ ಎಂಬುದು ಮಾಹಿತಿ ಅರ್ಜಿದಾರರ ಅಭಿಪ್ರಾಯ.

Click here Support Free Press and Independent Journalism

Pratidhvani
www.pratidhvani.com