‘ಕೈ’ಬಿಟ್ಟ ಸಿಂಧಿಯಾ: ಆಪರೇಷನ್ ಯಂಗ್ ಬ್ಲಡ್ ಹಠಾವೋಗೆ ಎರಡನೇ ಬಲಿ?
ರಾಷ್ಟ್ರೀಯ

‘ಕೈ’ಬಿಟ್ಟ ಸಿಂಧಿಯಾ: ಆಪರೇಷನ್ ಯಂಗ್ ಬ್ಲಡ್ ಹಠಾವೋಗೆ ಎರಡನೇ ಬಲಿ?

ಮೋದಿಯವರು ಪ್ರಧಾನಿಯಾಗಿ ಮೊದಲ ಅವಧಿಯ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮತ್ತು ಅದನ್ನು ನಿಜ ಮಾಡಲು ಬಿಜೆಪಿಯ ಪ್ರಯತ್ನಗಳಿಗೂ, ಎರಡನೇ ಅವಧಿಯಲ್ಲಿ ಅಂತಹ ಘೋಷಣೆಯ ಭರಾಟೆಯ ಗೈರಿನ ಹೊರತಾಗಿಯೂ ಕಾಂಗ್ರೆಸ್ ಮುಕ್ತ ಭಾರತದ ಕನಸು ನಿಜವಾಗುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಮಂಗಳವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಜೋತಿರಾಧಿತ್ಯ ಸಿಂಧಿಯಾ ಪಕ್ಷಕ್ಕೆ ರಾಜೀನಾಮೆ ನೀಡಿ, ಪ್ರಧಾನಿ ಮೋದಿ ಮತ್ತು ಬಿಜೆಪಿ ಹೈಕಮಾಂಡ್ ನೊಂದಿಗೆ ಮಾತುಕತೆ ನಡೆಸಿದ್ದಾರೆ. ಅದರ ಬೆನ್ನಲ್ಲೇ ಅವರ ಬೆಂಬಲಿಗರಾದ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕರ್ನಾಟಕದ ಬಳಿಕ ಮತ್ತೊಂದು ರಾಜ್ಯದಲ್ಲಿ ಯಶಸ್ವಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.

ಬೆಳಗ್ಗೆ ನವದೆಹಲಿಯ ತಮ್ಮ ಮನೆಯಿಂದ ಹೊರಬಿದ್ದ ಗ್ವಾಲಿಯರ್ ರಾಜಮನೆತನದ ಹಿನ್ನೆಲೆಯ ಸಿಂಧಿಯಾ, ನೇರ ಅಮಿತ್ ಶಾ ಅವರನ್ನು ಭೇಟಿಯಾಗಿ ಬಳಿಕ ಅವರೊಂದಿಗೇ ಪ್ರಧಾನಮಂತ್ರಿಗಳ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿ, ಹೊರ ಬಂದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದ ತಮ್ಮ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದ್ದರು. ಪ್ರಮುಖವಾಗಿ, ಪತ್ರದಲ್ಲಿ, ‘ಕಳೆದ ಒಂದು ವರ್ಷದಿಂದ ಈ ದಾರಿ ತನ್ನಷ್ಟಕ್ಕೆ ತಾನೇ ನಿರ್ಮಾಣವಾಗುತ್ತಿತ್ತು’ ಎನ್ನುವ ಮೂಲಕ ತಮ್ಮ ಈ ನಿರ್ಧಾರದ ದಿಢೀರ್ ಏನಲ್ಲ ಮತ್ತು ಅದಕ್ಕೆ ತಾವು ಹೊಣೆಯಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಅವರ ರಾಜೀನಾಮೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಅವರನ್ನು ಪಕ್ಷ ಪ್ರಧಾನ ಕಾರ್ಯದರ್ಶಿ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದೆ. ಈ ನಡುವೆ ಸಿಂಧಿಯಾ ನಿಷ್ಠ ಆರು ಮಂದಿ ಸಚಿವರೂ ಸೇರಿ 20ಕ್ಕೂ ಹೆಚ್ಚು ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನ ರೆಸಾರ್ಟ್ ವಾಸಿಗಳಾಗಿದ್ದಾರೆ. ಹಾಗಾಗಿ ಹಿರಿಯ ನಾಯಕ ಕಮಲ್ ನಾಥ್ ಅವರ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಒಟ್ಟು 230 ಸ್ಥಾನಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ 120 ಸ್ಥಾನ ಹೊಂದಿದ್ದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಬಲ 100ಕ್ಕಿಂತ ಕಡಿಮೆಯಾಗಿದೆ. 107 ಸ್ಥಾನ ಪಡೆದಿದ್ದ ಬಿಜೆಪಿ ಅಧಿಕಾರ ಹಿಡಿಯುವುದು ಶತಸಿದ್ದವಾಗಿದೆ.

ಇದಿಷ್ಟು ತತಕ್ಷಣಕ್ಕೆ ಮಂಗಳವಾರ ಸಾರ್ವಜನಿಕವಾಗಿ ತೆರೆದುಕೊಂಡು ಬೆಳವಣಿಗೆಗಳು. ಮಧ್ಯಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದಿದ್ದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಧ್ಯಾಯ ಬಹುತೇಕ ಮುಗಿದಿದೆ ಮತ್ತು ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಯ ಬಿಜೆಪಿಯ ಆಪರೇಷನ್ ಕಮಲದ ದಿಗ್ವಿಜಯಕ್ಕೆ ಮತ್ತೊಂದು ರಾಜ್ಯ ಸರ್ಕಾರ ಬಲಿಯಾಗಿದೆ. ನೈತಿಕ- ಅನೈತಿಕ ರಾಜಕಾರಣದ ಪ್ರಶ್ನೆಗಳ ಚರ್ಚೆ ಬದಿಗಿಟ್ಟು ನೋಡುವುದಾದರೆ, ಇದು ಬಿಜೆಪಿಯ ಜಯ ಎನ್ನುವುದಕ್ಕಿಂತ ಕಾಂಗ್ರೆಸ್ಸಿನ ಸೋಲು ಎಂಬುದೇ ಹೆಚ್ಚು ಸೂಕ್ತ.

ಏಕೆಂದರೆ; ಕಳೆದ ವಿಧಾನಸಭಾ ಚುಣಾವಣೆಗೆ ಮುಂಚೆಯಿಂದಲೂ ಸಿಎಂ ಸ್ಥಾನಕ್ಕಾಗಿ ಜ್ಯೋತಿರಾಧಿತ್ಯ ಮತ್ತು ಕಮಲ್ ನಾಥ್ ನಡುವೆ ಪೈಪೋಟಿ ಇತ್ತು. ಅಂದಿನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ತಮಗೆ ಸಿಎಂ ಸ್ಥಾನದ ಭರವಸೆ ನೀಡಿದ್ಧಾರೆ ಎಂಬುದನ್ನು ಬಹಿರಂಗವಾಗಿಯೇ ಸಿಂಧಿಯಾ ಹೇಳಿಕೊಂಡಿದ್ದರು. ಆದರೆ, ಫಲಿತಾಂಶ ಹೊರಬಿದ್ದು ಪಕ್ಷ ಬಹುಮತ ಪಡೆಯುತ್ತಲೇ ಕಾಂಗ್ರೆಸ್ಸಿನ ಹಿರಿಯ ತಲೆಗಳ ಕೈ ಮೇಲಾಯಿತು. ಸಿಂಧಿಯಾ ಬದಲಿಗೆ ಕಮಲ್ ನಾಥ್ ಸಿಎಂ ಹುದ್ದೆಗೇರಿದರು. ಬಳಿಕ ಕನಿಷ್ಠ ಪಕ್ಷದ ಅಧ್ಯಕ್ಷ ಸ್ಥಾನವನ್ನಾದರೂ ಕೊಡಿ, ಪಕ್ಷ ಕಟ್ಟುವೆ ಎಂಬ ಪ್ರಸ್ತಾಪವನ್ನು ಸಿಂಧಿಯಾ ಮುಂದಿಟ್ಟಿದ್ದರು. ಆದರೆ ಬರೋಬ್ಬರಿ 15 ತಿಂಗಳು ಕಳೆದರೂ ಸಿಎಂ ಕಮಲ್ ನಾಥ್ ರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದರೆ ವಿನಃ ಸಿಂಧಿಯಾಗೆ ಅಧಿಕಾರ ಸಿಗಲಿಲ್ಲ. ಆ ಅವಮಾನವನ್ನೂ ಸಹಿಸಿಕೊಂಡ ಸಿಂಧಿಯಾ, ಕನಿಷ್ಠ ಪಕ್ಷದಿಂದ ರಾಜ್ಯಸಭೆ ಪ್ರವೇಶದ ಅವಕಾಶವಾದರೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾದಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳು ಆ ನಿರೀಕ್ಷೆ ಕೂಡ ಕೈಗೂಡದು. ತಮ್ಮ ವಿರುದ್ಧ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪ್ರಬಲ ತಂತ್ರ ಹೂಡಿದ್ದಾರೆ ಎಂಬುದು ಅರಿವಾಗುತ್ತಲೇ ಕಳೆದ ಎರಡು ತಿಂಗಳಿಂದ ಬಿಜೆಪಿಯ ಕದ ತಟ್ಟುವ ದಿಕ್ಕಿನಲ್ಲಿ ಯೋಚನೆ ಮಾಡಿದ್ದರು ಎಂಬುದು ಪಕ್ಷದ ದೆಹಲಿ ಮೂಲಗಳ ಮಾಹಿತಿ.

ಹಾಗಾಗಿ ಮಧ್ಯಪ್ರದೇಶ ಸರ್ಕಾರವನ್ನು ಬಲಿತೆಗೆದುಕೊಂಡು ಸಿಂಧಿಯಾ ನಡೆಯ ಹಿಂದೆ ಬಿಜೆಪಿಯ ಆಪರೇಷನ್ ಕಮಲದ ತಂತ್ರಗಾರಿಕೆಗಿಂತ, ಕಾಂಗ್ರೆಸ್ಸಿನ ‘ಆಪರೇಷನ್ ಯಂಗ್ ಬ್ಲಡ್ ಹಠಾವೋ’ ಹೆಚ್ಚು ಕೆಲಸ ಮಾಡಿರುವಂತಿದೆ. ಅದರಲ್ಲೂ ದೆಹಲಿಯ ಹೈಕಮಾಂಡ್ ಕಚೇರಿಯಲ್ಲಿ ರಾಹುಲ್ ಹೊರನಡೆದು, ಸೋನಿಯಾ ಗಾಂಧಿ ಬಂದ ಬಳಿಕ ದೊಡ್ಡ ಮಟ್ಟದಲ್ಲಿ ಹಳೆಯ ಮುದಿ ಹುಲಿಗಳು ಮೈಕೊಡವಿ ನಿಂತಿದ್ದು, ಸಿಂಧಿಯಾ ಸೇರಿದಂತೆ ರಾಹುಲ್ ಗಾಂಧಿಯೊಂದಿಗೆ ಗುರುತಿಸಿಕೊಂಡಿದ್ದ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಭವಿಷ್ಯದ ಭರವಸೆಗಳಾಗಿದ್ದ ಹಲವು ನಾಯಕರನ್ನು ವ್ಯವಸ್ಥಿತವಾಗಿ ಬದಿಗೆ ಸರಿಸುವ ‘ಆಪರೇಷನ್ ಯಂಗ್ ಬ್ಲಡ್ ಹಠಾವೋ’ ಜಾರಿಗೆ ಬಂದಿದೆ.

‘ಕೈ’ಬಿಟ್ಟ ಸಿಂಧಿಯಾ: ಆಪರೇಷನ್ ಯಂಗ್ ಬ್ಲಡ್ ಹಠಾವೋಗೆ ಎರಡನೇ ಬಲಿ?

ಅಹ್ಮದ್ ಪಟೇಲ್, ಆಸ್ಕರ್ ಫರ್ನಾಂಡೀಸ್ ಮತ್ತು ಸ್ವತಃ ಸೋನಿಯಾ ಗಾಂಧಿ ಅವರುಗಳಿಗೆ ರಾಹುಲ್ ಪಡೆಯ ಬಗ್ಗೆ ವಿಶ್ವಾಸವಿಲ್ಲ ಮತ್ತು ಯುವ ನಾಯಕರಿಗೆ ಪಕ್ಷ ಮತ್ತು ರಾಜ್ಯ ಸರ್ಕಾರಗಳಲ್ಲಿ ಪ್ರಮುಖ ಸ್ಥಾನಗಳನ್ನು ಬಿಟ್ಟುಕೊಟ್ಟರೆ ಅದು ಸ್ವತಃ ರಾಹುಲ್ ಭವಿಷ್ಯಕ್ಕೆ ಪೆಟ್ಟು ಮತ್ತು ಅಂತಿಮವಾಗಿ ಪಕ್ಷದ ಮೇಲೆ ಗಾಂಧಿ ಕುಟುಂಬದ ಹಿಡಿತ ತಪ್ಪಿಹೋಗುವ ಭಯ ಕೂಡ ಕಾಡುತ್ತಿದೆ. ಆ ಹಿನ್ನೆಲೆಯಲ್ಲಿಯೇ ಸಿಂಧಿಯಾ ಅವರಷ್ಟೇ ಅಲ್ಲದೆ, ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರಿಗೂ ಸಿಎಂ ಹುದ್ದೆ ತಪ್ಪಿಸಲಾಗಿದೆ. ಹಾಗೇ ಮಿಲಿಂದ್ ದಿಯೋರಾ, ಜಿತಿನ್ ಪ್ರಸಾದ್ ಸೇರಿದಂತೆ ಹಲವು ಭರವಸೆಯ ಯುವ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ.

ಕಾಂಗ್ರೆಸ್ಸಿನ ಸದ್ಯದ ಸ್ಥಿತಿಯಲ್ಲಿ ‘ಕೇಂದ್ರ ಏನನ್ನೂ ಹಿಡಿದಿಟ್ಟುಕೊಳ್ಳದ ಸ್ಥಿತಿ’ಯಲ್ಲಿದೆ ಎಂಬ ಮಾತು ಕೇಳಿಬರುತ್ತಿವೆ. ಸೋನಿಯಾ ಗಾಂಧಿಯವರಿಗೆ ವೈಯಕ್ತಿಕ ಆರೋಗ್ಯ ಮತ್ತಿತರ ಕಾರಣಗಳಿಂದ ಪಕ್ಷದ ಆಗುಹೋಗುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಕಷ್ಟಸಾಧ್ಯವಾಗಿದೆ. ಜೊತೆಗೆ ಅವರ ನಿಷ್ಠರಾದ ಆಸ್ಕರ್ ಮತ್ತು ಅಹ್ಮದ್ ಪಟೇಲ್ ಕೂಡ ಕೆಲವು ವೈಯಕ್ತಿಕ ಸಮಸ್ಯೆಗಳ ನಡುವೆ ವ್ಯಸ್ತರಾಗಿದ್ದಾರೆ. ಹಾಗಾಗಿ ಸದ್ಯಕ್ಕೆ ಹೈಕಮಾಂಡ್ ದುರ್ಬಲ ಸ್ಥಿತಿಯಲ್ಲಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಷಯದಲ್ಲಿ ಸುಮಾರು ಮೂರು ತಿಂಗಳಿಂದ ಒಂದು ದೃಢ ನಿರ್ಧಾರಕ್ಕೆ ಬರಲಾಗದೆ ಇರುವುದು ಕೂಡ ಇದೇ ಕಾರಣದಿಂದ. ಹಾಗಾಗಿ ಇಂತಹ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವ ದಿಗ್ವಿಜಯ ಸಿಂಗ್, ಕಮಲ್ ನಾಥ್, ಅಶೋಕ್ ಗೆಲ್ಹೋಟ್ ಮತ್ತಿತರರು ತಮ್ಮ ವೈಯಕ್ತಿಕ ಲಾಭನಷ್ಟದ ಮೇಲೆ ಪಕ್ಷದ ಯುವ ನಾಯಕರನ್ನು ಸದೆಬಡಿಯ ತೊಡಗಿದ್ಧಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿವೆ.

ಆ ಹಿನ್ನೆಲೆಯಲ್ಲಿ; ಸುಮಾರು 18 ವರ್ಷಗಳ ಕಾಲ ಪಕ್ಷ ಸಂಘಟನೆಗಾಗಿ ದುಡಿದ, ಅನುಭವಿ ಮತ್ತು ವರ್ಚಸ್ವಿ ನಾಯಕ ಸಿಂಧಿಯಾ ಅವರ ನಿರ್ಗಮನ ಕೇವಲ ಅವರೊಬ್ಬರ ಅಥವಾ ಮಧ್ಯಪ್ರದೇಶದ ರಾಜಕಾರಣಕ್ಕೆ ಸೀಮಿತ ಬೆಳವಣಿಗೆಯಾಗಿ ಮುಗಿದುಹೋಗಲಾರದು. ಅದು ಮುಂದೆ ರಾಜಸ್ತಾನಕ್ಕೂ, ಬಳಿಕ ಮುಂಬೈಗೂ, ನಂತರ ಇತರ ಹಲವು ರಾಜ್ಯಗಳಿಗೂ ವಿಸ್ತರಿಸಿದರೆ ಅದರಲ್ಲಿ ಅಚ್ಚರಿಯೇನೂ ಇರಲಾರದು ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ. ಅದರಲ್ಲೂ ಅಮಿತ್ ಶಾ ಭೇಟಿಗೆ ಮುನ್ನ ಜ್ಯೋತಿರಾಧಿತ್ಯ ಸಿಂಧಿಯಾ ಅವರು ತಮ್ಮ ಮಿತ್ರ ಹಾಗೂ ರಾಜಸ್ತಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಹಿನ್ನೆಲೆಯಲ್ಲಿ ಇಂತಹ ಚರ್ಚೆಗಳು ಇನ್ನಷ್ಟು ರಂಗೇರಿವೆ.

ಒಟ್ಟಾರೆ, ಮೋದಿಯವರು ಪ್ರಧಾನಿಯಾಗಿ ಮೊದಲ ಅವಧಿಯ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮತ್ತು ಅದನ್ನು ನಿಜ ಮಾಡಲು ಬಿಜೆಪಿಯ ಪ್ರಯತ್ನಗಳಿಗೂ, ಎರಡನೇ ಅವಧಿಯಲ್ಲಿ ಅಂತಹ ಘೋಷಣೆಯ ಭರಾಟೆಯ ಗೈರಿನ ಹೊರತಾಗಿಯೂ ಕಾಂಗ್ರೆಸ್ ಮುಕ್ತ ಭಾರತದ ಕನಸು ನಿಜವಾಗುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆ ಅರ್ಥದಲ್ಲಿ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸು ಮಾಡುವಲ್ಲಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಳಿಕ ಮಧ್ಯಪ್ರದೇಶ ಸರ್ಕಾರವನ್ನ ಬಲಿಕೊಡುವಲ್ಲಿ ಆಪರೇಷನ್ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿರುವುದು ದಿಟ. ಆದರೆ, ಎರಡೂ ಪ್ರಕರಣಗಳಲ್ಲಿ ಬಿಜೆಪಿಯ ಶ್ರಮ ಮತ್ತು ಚಾಣಾಕ್ಷತನಕ್ಕಿಂತ ಹೆಚ್ಚಾಗಿ ಸ್ವತಃ ಕಾಂಗ್ರೆಸ್ ನಾಯಕರ ಕೊಡುಗೆಯೇ ಹೆಚ್ಚಿದೆ ಎಂಬುದು ನಿರ್ವಿವಾದ.

Click here Support Free Press and Independent Journalism

Pratidhvani
www.pratidhvani.com